ಕಲಬುರಗಿ | ಶಂಕುಸ್ಥಾಪನೆ ಆಗಿರುವ ಯಡ್ರಾಮಿ ಜಾಗದಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹ
ಮಠದ ಜಾಗವನ್ನು ಕುಟುಂಬದ ಹೆಸರಲ್ಲಿ ಶಾಸಕ ಅಜಯಸಿಂಗ್ ಖರೀದಿ : ಆರೋಪ

ಕಲಬುರಗಿ : ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ತನ್ನ ತಾಯಿಯ ಹೆಸರಿಗೆ ವಿರಕ್ತ ಮಠದ ಜಮೀನನ್ನು ಖರೀದಿಸಿರುವುದಕ್ಕೆ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಜಮೀನನ್ನು ಮಠಕ್ಕೆ ಮರುಳಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ನೀಡಿದ್ದಾರೆ.
2017 ಡಿಸೆಂಬರ್‌ನಲ್ಲಿ ಕಂದಾಯ ಇಲಾಖೆಯ ಸರ್ವೇ ನಂಬರ್ 442ರಲ್ಲಿ ಕಲಬುರಗಿ ಜಿಲ್ಲೆಯ ಯಡ್ರಾಮಿ ಮಿನಿ ವಿಧಾನ ಸಭಾ ಕಟ್ಟಡ ನಿರ್ಮಾಣಕ್ಕೆ 5 ಎಕರೆ ಜಾಗ ಮಂಜೂರು ಆಗಿ, 2018ರಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಶಂಕುಸ್ಥಾಪನೆ ಮಾಡಿದ್ದರು. ಆದರೆ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರು ಜೂ.4ರಂದು ತನ್ನ ತಾಯಿ ಪ್ರಭಾವತಿ ಧರ್ಮಸಿಂಗ್ ಅವರ ಹೆಸರಲ್ಲಿ ಯಡ್ರಾಮಿ ಪಟ್ಟಣದ ಇಜೇರಿ ರಸ್ತೆಯಲ್ಲಿರುವ ವಿರಕ್ತ ಮಠದ 5 ಎಕರೆ ಜಾಗವನ್ನು ಖರೀದಿಸಿ ನೋಂದಣಿ ಮಾಡಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಯಡ್ರಾಮಿ ತಾಲೂಕಿನಲ್ಲಿ ಸಾಕಷ್ಟು ಸರಕಾರಿ ಜಮೀನು ಇದ್ದರು, ಖರ್ಗೆ ಅವರಿಂದ ಶಂಕುಸ್ಥಾಪನೆ ಆಗಿರುವ ಜಾಗವನ್ನು ಬಿಟ್ಟು ಮಠದ ಜಾಗವನ್ನೇ ಕುಟುಂಬದ ಹೆಸರಲ್ಲಿ ಖರೀದಿಸಿ ಅಲ್ಲಿ ನೂತನ ಪ್ರಜಾಸೌಧವನ್ನು ನಿರ್ಮಾಣ ಮಾಡಿ ಇವರ ತಂದೆ ದಿವಂಗತ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರು ಇಡಲು ಶಾಸಕ ಅಜಯಸಿಂಗ್ ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಮಠದ ಜಮೀನಿನ ಮೇಲೆ ಭಕ್ತರ ಅಪಾರವಾದ ಭಾವನೆಗಳು ಹೊಂದಿದ್ದಾರೆ. ಮಠದ ಜಮೀನು ಹೆಚ್ಚಿಸಬೇಕು ವಿನಃ ಅದನ್ನು ಮಾರಾಟ ಮಾಡಬಾರದು. ಮಠಕ್ಕೆ ಎನಾದರೂ ಹಣದ ಕೊರತೆ ಇದ್ದರೆ ಎಲ್ಲರೂ ಸೇರಿ ಅದರ ಜವಾಬ್ದಾರಿಯನ್ನು ತೆಗೆದುಕೊಂಡ ಕೆಲಸ ಮಾಡೋಣ, ಮಾರಾಟ ಮಾಡಿರುವ ಜಮೀನು ವಾಪಸ್ ಪಡೆಯಬೇಕು ಮತ್ತು ಶಾಸಕರ ಒತ್ತಡಕ್ಕೆ ಮಣಿಯ ಬಾರದೆಂದು ಗ್ರಾಮಸ್ಥರು ವಿರಕ್ತ ಮಠದ ಸ್ವಾಮೀಜಿಯೊಂದಿಗೆ ಸಭೆ ನಡೆಸಿ ಮನವಿ ಮಾಡಿದ್ದಾರೆ. ಮಠದ ಮೇಲಿನ ಗೌರವಕ್ಕೆ ಮತ್ತು ಶಾಸಕರ ಪ್ರಭಾವಕ್ಕೆ ಹೆದರಿ ಜನರು ದ್ವನಿ ಎತ್ತಲು ಹಿಂಜರಿಯುತ್ತಿದ್ದಾರೆ. ಶಾಸಕರ ಕುಟಂಬದ ಸದಸ್ಯರ ಹೆಸರಲ್ಲಿ ಜಮೀನು ನೋಂದಣಿಯಾದ ಬೆನ್ನಲ್ಲೇ ಸ್ಥಳೀಯರು ಜಾಗೃತರಾಗಿ ಮಠದ ಜಮೀನು ವಾಪಸ್ ನೀಡಬೇಕು ಮತ್ತು ಶಂಕುಸ್ಥಾಪನೆ ಆಗಿರುವ ಜಾಗದಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂದು ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಅವರ ಡಿಸಿ, ಸಿಇಒಗಳ ಸಮ್ಮೇಳನದಲ್ಲಿ ಕಲಬುರಗಿ ಜಿಲ್ಲೆಯ ಕಾಳಗಿ, ಯಡ್ರಾಮಿ, ಕಮಲಾಪುರ, ಶಹಾಬಾದ ತಾಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತಾತ್ಮಕ ಮಂಜೂರಾತಿ ಪತ್ರವನ್ನು ನೀಡಿ ಪ್ರತಿ ಪ್ರಜಾಸೌಧ ನಿರ್ಮಾಣಕ್ಕೆ ತಲಾ 8.60 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ಯಡ್ರಾಮಿ ಪಟ್ಟಣದ ಸಮೀಪ ಸಾಕಷ್ಟು ಸರಕಾರಿ ಮತ್ತು ಗೈರಾಣಿ ಜಮೀನು ಇದೆ. ಆದರೆ ಶಾಸಕ ಡಾ. ಅಜಯಸಿಂಗ್ ಅವರು ಬೆಲೆ ಬಾಳುವ ಮಠದ 5 ಎಕರೆ ಜಮೀನು 1 ಕೋಟಿ ರೂ.ಗೆ ಖರೀದಿಸಿದ್ದಾರೆ. ಮಂಜೂರಾಗಿರುವ ಜಮೀನು ಬಿಟ್ಟು ಖರೀದಿ ಯಾಕೆ ಮಾಡಿದ್ದಾರೆ? ಮಠದ ಜಮೀನು ಭಕ್ತರಿಗೆ ಸಂಬಂಧಪಟ್ಟಿದ್ದು, ಈ ಜಮೀನು ಮರಳಿಸಬೇಕು. ಇಲ್ಲ ಎಂದರೆ ಯಡ್ರಾಮಿ ಬಂದ್ ಸೇರಿದಂತೆ ಹಂತ ಹಂತದ ಹೋರಾಟಕ್ಕೆ ಮುಂದಾಗುತ್ತೇವೆ.
-ಮಹೆಂದ್ರ ಎಸ್.ಬಾಲರು, ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಯಡ್ರಾಮಿ