ದೇಶದ ಪ್ರಜಾಸತ್ತೆಯ ಶುದ್ಧತೆ ಮತ್ತು ಸುಧಾರಣೆಗೆ ಹೋರಾಡಿದ ಜಗದೀಪ್ ಛೋಕರ್

ಚುನಾವಣೆಗಳಿಗೆ ಅಂಟಿಕೊಂಡ ಕಳಂಕವನ್ನು ತೊಳೆಯುವ ಹೋರಾಟದಲ್ಲಿ ಜಗದೀಪ್ ಛೋಕರ್ ಸುಪ್ರೀಂ ಕೋರ್ಟ್‌ಗೆ ಹೋದರು. ಕ್ರಿಮಿನಲ್ ಅಭ್ಯರ್ಥಿಗಳ ಡೇಟಾ ತಯಾರಿಸಿ ಪ್ರಕಟಿಸಿದರು ಮತ್ತು ಚುನಾವಣಾ ದೇಣಿಗೆಗಳ ಪ್ರಶ್ನೆಯನ್ನು ದೊಡ್ಡ ವಿಷಯವನ್ನಾಗಿಸಿದರು. ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಂದು ಹೋರಾಟದಲ್ಲಿ ಅವರಿದ್ದರು. ಒಬ್ಬ ಪ್ರಾಧ್ಯಾಪಕರಂತೆ ಅವರು ತಾವು ಹೇಳಬೇಕಿರುವುದನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸುತ್ತಲೇ ಇದ್ದರು.
ಚುನಾವಣೆ ಮತ್ತು ರಾಜಕೀಯ ಸುಧಾರಣೆಗಳಿಗಾಗಿ ತೊಡಗಿಸಿಕೊಂಡಿದ್ದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಹಸಂಸ್ಥಾಪಕ ಜಗದೀಪ್ ಛೋಕರ್ ಹೋರಾಟ ಮುಗಿಸಿದ್ದಾರೆ. ಅವರು ಸೆಪ್ಟಂಬರ್ 12ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಪ್ರಜಾಪ್ರಭುತ್ವಕ್ಕಾಗಿ ದೀರ್ಘ ಕಾಲದ ಏಕಾಂಗಿ ಹೋರಾಟ ಅಷ್ಟು ಸುಲಭವಲ್ಲ. ಅಂಥ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಛೋಕರ್, ಪ್ರಜಾಪ್ರಭುತ್ವದ ಯೋಧನಂತಿದ್ದರು. ದೇಶದಲ್ಲಿ ಪ್ರಜಾಪ್ರಭುತ್ವದ ಮೇಲಿನ ದಾಳಿಗಳು ಹೆಚ್ಚಾದ ಸಮಯದಲ್ಲಿ, ಚುನಾವಣಾ ಆಯೋಗ ಮತ್ತು ಸರಕಾರಗಳನ್ನು ಹೊಣೆಯಾಗಿಸುವಲ್ಲಿ ಅವರ ಪಾತ್ರ ದೊಡ್ಡದಿತ್ತು.
ಛೋಕರ್ ಮತ್ತು ಅವರ ಸಂಸ್ಥೆ ಎಡಿಆರ್ ಕಳೆದ ಇಪ್ಪತ್ತೈದು ವರ್ಷಗಳಿಂದ ಪ್ರಜಾಪ್ರಭುತ್ವ ಸುಧಾರಣೆಗಳಿಗಾಗಿ ಮಾಡಿದ ಕೆಲಸ ಇಂದು ಈ ದೇಶದ ಪ್ರಜಾಸತ್ತೆಯನ್ನು ಬಲಪಡಿಸಿದೆ.
ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಮತ್ತು ಸುಧಾರಣೆಗಾಗಿ ರಾಜಕೀಯ ಪಕ್ಷಗಳ ಮೇಲೆ ನಿರಂತರವಾಗಿ ಒತ್ತಡ ಹೇರಿದ ಜಗದೀಪ್ ಛೋಕರ್ ಅವರನ್ನು ಭಾರತದ ಜನರ ಮುಖ್ಯ ಚುನಾವಣಾ ಆಯುಕ್ತ ಎನ್ನಬಹುದು.
ಇಂದು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಅತ್ಯಂತ ಕೆಳಮಟ್ಟದಲ್ಲಿರುವಾಗ, ಅದನ್ನು ಮತ್ತೆ ಅತ್ಯುನ್ನತ ಮಟ್ಟಕ್ಕೆ ತರಲು ಛೋಕರ್ ಪ್ರಯತ್ನಿಸುತ್ತಿದ್ದರು.
ಅವರ ಫೇಸ್‌ಬುಕ್ ಪುಟದಲ್ಲಿ ಮೊದಲು ಕಾಣಿಸುವುದು, ‘ನಾನು ಗೌರಿ ಲಂಕೇಶ್ ಮತ್ತು ಡಾ.ಜಿ.ಡಿ. ಅಗರ್ವಾಲ್ ಅವರನ್ನು ಎಂದಿಗೂ ಮರೆಯುವುದಿಲ್ಲ’ ಎಂಬ ಬರಹವಿರುವ ಡಿಪಿ.
ಶಿಕ್ಷಕ ಮತ್ತು ಪರಿಸರವಾದಿ ಡಾ. ಜಿ.ಡಿ. ಅಗರ್ವಾಲ್ ಗಂಗಾ ನದಿ ಉಳಿಸಲು ಜೀವನದುದ್ದಕ್ಕೂ ಹೋರಾಡಿದರು ಮತ್ತು ತಮ್ಮ ಪ್ರಾಣ ತ್ಯಾಗ ಮಾಡಿದರು. ನಂತರ, ಗಂಗಾ ನದಿಯ ಹೆಸರಲ್ಲಿ ರಾಜಕೀಯ ಮಾಡಿದವರು ಅವರನ್ನು ಮರೆತರು. ಅವರೆಲ್ಲ ಅಗರ್ವಾಲ್ ಅವರನ್ನು ಬಳಸಿಕೊಂಡರು.
ಆದರೆ ಅವರನ್ನು ಛೋಕರ್ ನಿತ್ಯವೂ ನೆನಪಿಸಿಕೊಳ್ಳುತ್ತಿದ್ದರು. ಛೋಕರ್ ಐಐಎಂ ಅಹ್ಮದಾಬಾದ್‌ನಲ್ಲಿ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾದ ನಂತರ, ಅವರು ಭಾರತದ ಪ್ರಜಾಪ್ರಭುತ್ವದಲ್ಲಿ ಸುಧಾರಣೆಗಾಗಿ ಕಟಿಬದ್ಧರಾಗಿ ನಿಂತರು.
21ನೇ ಶತಮಾನದೊಂದಿಗೆ, ಪ್ರಪಂಚದಾದ್ಯಂತ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸನ್ನಿವೇಶ ಕೂಡ ಶುರುವಾಗಿತ್ತು.ಒಬ್ಬರ ನಂತರ ಒಬ್ಬರು ವಂಚಕರು ಮತ್ತು ಸರ್ವಾಧಿಕಾರಿಗಳು ಬರತೊಡಗಿದ್ದರು. ಅಂಥ ಸಮಯದಲ್ಲಿ ಜಗದೀಪ್ ಛೋಕರ್ ಭಾರತೀಯ ಪ್ರಜಾಪ್ರಭುತ್ವದ ಬೇರುಗಳಿಗೆ ನೀರುಣಿಸಲು ಪ್ರಾರಂಭಿಸಿದರು.
1999ರಲ್ಲಿ ಎಡಿಆರ್ ಅನ್ನು ಸ್ಥಾಪಿಸಲಾಯಿತು. ಚುನಾವಣೆಗಳಿಗೆ ಅಂಟಿಕೊಂಡ ಕಳಂಕವನ್ನು ತೊಳೆಯುವ ಹೋರಾಟದಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ಹೋದರು. ಕ್ರಿಮಿನಲ್ ಅಭ್ಯರ್ಥಿಗಳ ಡೇಟಾ ತಯಾರಿಸಿ ಪ್ರಕಟಿಸಿದರು ಮತ್ತು ಚುನಾವಣಾ ದೇಣಿಗೆಗಳ ಪ್ರಶ್ನೆಯನ್ನು ದೊಡ್ಡ ವಿಷಯವನ್ನಾಗಿಸಿದರು. ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಂದು ಹೋರಾಟದಲ್ಲಿ ಅವರಿದ್ದರು. ಒಬ್ಬ ಪ್ರಾಧ್ಯಾಪಕರಂತೆ ಅವರು ತಾವು ಹೇಳಬೇಕಿರುವುದನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸುತ್ತಲೇ ಇದ್ದರು.
ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗವೇ ಸಂವಿಧಾನದ ಅಡಿಯಲ್ಲಿನ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದರೆ, ಅದಕ್ಕೆ ಪರಿಹಾರವೇನು?
ಇಲ್ಲಿಯವರೆಗೆ, ಯಾವುದೇ ಚುನಾವಣಾ ಆಯೋಗ ಅದನ್ನು ಸರಿಪಡಿಸುವ ಬಗ್ಗೆ ಮಾತನಾಡಿಲ್ಲ. ಇದುವರೆಗೆ ಅದನ್ನು ಏಕೆ ಮಾಡಲಾಗಿದೆ ಎಂದು ಹೇಳಲಾಗಿಲ್ಲ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಬಗ್ಗೆ ಮತದಾರರು ಅಥವಾ ನಾಗರಿಕರಿಗೆ ಮಾಹಿತಿ ನೀಡುವುದನ್ನೂ ನಿಲ್ಲಿಸಲಾಗಿತ್ತು.
ಆದರೆ, ಅಂಥ ತಂತ್ರಗಳ ಮೂಲಕ ದೇಶದ ಚುನಾವಣಾ ವ್ಯವಸ್ಥೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು.
ಜಗದೀಪ್ ಛೋಕರ್ ಈ ಹೋರಾಟವನ್ನು ಸ್ವತಃ ಆರಿಸಿಕೊಂಡರು. ಚುನಾವಣಾ ಪ್ರಕ್ರಿಯೆಯನ್ನು ಸ್ವಚ್ಛ ಗೊಳಿಸಲು ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗದ ಎದುರು ಹೋರಾಡಿದರು.
ಮೇಜರ್ ಜನರಲ್ ಅನಿಲ್ ವರ್ಮಾ, ಐಐಎಂ ಬೆಂಗಳೂರಿನ ಪ್ರೊಫೆಸರ್ ತ್ರಿಲೋಚನ್ ಶಾಸ್ತ್ರಿ ಮತ್ತು ಜಗದೀಪ್ ಛೋಕರ್ ಇವರೆಲ್ಲ ಸೇರಿ ಎಡಿಆರ್ ಅನ್ನು ಸ್ಥಾಪಿಸಿದರು. ಭಾರತದ ಚುನಾವಣಾ ಪ್ರಕ್ರಿಯೆಗಳನ್ನು ಸುಧಾರಿಸುವಲ್ಲಿ ಅದು ಬಹಳ ದೊಡ್ಡ ಕೆಲಸ ಮಾಡಿದೆ.
ಈ ದೇಶದ ಸಂವಿಧಾನ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಎಂದು ಭಾವಿಸಲಾಗುತ್ತದೆ. ಅದರ ಬಗ್ಗೆ ಕನಸು ಕಾಣುವ ಅನೇಕ ಜನರಿಂದಾಗಿ ಅದು ಜೀವಂತವಾಗಿದೆ. ಅದನ್ನು ಹಾಳು ಮಾಡುವವರನ್ನು ಅವರು ವಿರೋಧಿಸುತ್ತಾರೆ ಮತ್ತು ಅದರ ಸುಧಾರಣೆ ಮತ್ತು ಪುನಃಸ್ಥಾಪನೆಗಾಗಿ ನಿರಂತರವಾಗಿ ಹೋರಾಡುತ್ತಾರೆ.
ಜಗದೀಪ್ ಛೋಕರ್ ಈ ಪ್ರಜಾಪ್ರಭುತ್ವದ ಘನತೆ ಉಳಿಸಲು ಮತ್ತೆ ಮತ್ತೆ ಹೋರಾಡುತ್ತಲೇ ಇದ್ದರು.
ಅದು 1990ರ ದಶಕ. ರಾಜಕಾರಣಿಗಳ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಪ್ರೊ. ತ್ರಿಲೋಚನ್ ಶಾಸ್ತ್ರಿ ಯೋಚಿಸತೊಡಗಿದ್ದರು. 1999ರ ಲೋಕಸಭಾ ಚುನಾವಣೆಗೆ ಮೊದಲು, ಅಹ್ಮದಾಬಾದ್ ಸ್ಥಾನದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ವಿವರಗಳನ್ನು ತಿಳಿದುಕೊಳ್ಳಲು ಅವರು ಬಯಸಿದ್ದರು. ಅವರು ಜಗದೀಪ್ ಛೋಕರ್ ಸೇರಿದಂತೆ 11 ಸಹೋದ್ಯೋಗಿಗಳಿಗೆ ಅಭ್ಯರ್ಥಿಯ ನಾಮಪತ್ರ ತೋರಿಸಿದರು.
ಅದರಲ್ಲಿ ಅಭ್ಯರ್ಥಿಯ ಹೆಸರು, ವಿಳಾಸ, ಮತದಾರರ ಗುರುತಿನ ಚೀಟಿ, ತಂದೆ ಅಥವಾ ಗಂಡನ ಹೆಸರನ್ನು ಮಾತ್ರ ಕೇಳಲಾಗುವುದನ್ನು ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು. ಮತದಾರರಿಗೆ ತಮ್ಮ ಅಭ್ಯರ್ಥಿಯ ಬಗ್ಗೆ ಇದಕ್ಕಿಂತ ಹೆಚ್ಚಿನ ಮಾಹಿತಿ ಸಿಗುವುದಿಲ್ಲ ಎಂಬುದು ಯೋಚಿಸಬೇಕಾದ ವಿಷಯವಾಗಿತ್ತು.
ಇದಾದ ನಂತರ, ಪ್ರೊ. ಶಾಸ್ತ್ರಿ ಮತ್ತವರ ಸಹೋದ್ಯೋಗಿಗಳು ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಆಗ ವಕೀಲೆ ಕಾಮಿನಿ ಜೈಸ್ವಾಲ್, ಒಂದು ಸಂಘಟನೆಯನ್ನು ಸ್ಥಾಪಿಸಲು ಸೂಚಿಸಿದರು.
ಆಗ ಸೇರಿದ 11 ಜನರಲ್ಲಿ ಹೆಚ್ಚಿನವರು ಐಐಎಂ ಅಹ್ಮದಾಬಾದ್ ಪ್ರಾಧ್ಯಾಪಕರುಗಳಾಗಿದ್ದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಿಸಲು ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಅವರೆಲ್ಲ ಒಟ್ಟಾಗಿ ಎಡಿಆರ್ ಅನ್ನು ಸ್ಥಾಪಿಸಿದರು.
ನವೆಂಬರ್ 2000ರಲ್ಲಿ ದಿಲ್ಲಿ ಹೈಕೋರ್ಟ್ ಲೋಕಸಭೆ ಮತ್ತು ವಿಧಾನಸಭೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ಅಫಿಡವಿಟ್ ನೀಡಬೇಕು ಎಂದು ಆದೇಶ ಹೊರಡಿಸಿತು.
ಇದು ಅವರ ಶಿಕ್ಷಣ, ಆದಾಯ, ಆಸ್ತಿಗಳು, ಸಾಲ, ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಎಡಿಆರ್ ಪ್ರಕರಣದ ಕಾರಣದಿಂದಾಗಿ, ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಕ್ರಿಮಿನಲ್ ಪೂರ್ವಾಪರ, ಹಣದ ದಾಖಲೆಗಳು ಮತ್ತು ಶಿಕ್ಷಣ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಆದೇಶಿಸಲಾಯಿತು.
ಅಷ್ಟೇ ಅಲ್ಲ, ಆ ಅಫಿಡವಿಟ್‌ಗಳು ಬರಲು ಪ್ರಾರಂಭಿಸಿದಾಗ, ಎಡಿಆರ್ ಆ ಅಫಿಡವಿಟ್‌ಗಳನ್ನು ರಾತ್ರೋರಾತ್ರಿ ಸಾರ್ವಜನಿಕಗೊಳಿಸುವ ಮತ್ತು ಪಕ್ಷಗಳ ಅಸಲಿ ರೂಪವನ್ನು ಪರಿಶೀಲಿಸುವ ಕೆಲಸ ಕೈಗೆತ್ತಿಕೊಂಡಿತು.
ಅಂಥ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯ ಯಾರಿಗೂ ಪ್ರಚಾರದ ಬಯಕೆ ಇಲ್ಲ. ಮುಖ ತೋರಿಸಿಕೊಳ್ಳಬೇಕೆಂಬ ಉದ್ದೇಶವಿಲ್ಲ. ಅವರಲ್ಲಿರುವುದು ದೇಶಕ್ಕಾಗಿ ಏನಾದರೂ ಕೆಲಸ ಮಾಡಬೇಕು ಎಂಬ ಉತ್ಸಾಹ ಮಾತ್ರ.
ನಿವೃತ್ತಿಯ ನಂತರ ಬೇರೆ ಯಾವುದೇ ಹುದ್ದೆ ಬಯಸದೆ, ಯಾವುದೇ ಲಾಭವಿಲ್ಲದೆ ಅವರೆಲ್ಲ ದುಡಿದರು. ಈ ಪ್ರಜಾಪ್ರಭುತ್ವಕ್ಕಾಗಿ ಛೋಕರ್ ತಮ್ಮ ಹಣ, ಸಮಯ, ಎಲ್ಲವನ್ನೂ ತೊಡಗಿಸಿ, ತುಂಬಾ ತೀವ್ರವಾಗಿ ಕೆಲಸ ಮಾಡಿದರು. 2024ರಲ್ಲಿ ಫಾರ್ಮ್ 17 ಬರದಿದ್ದಾಗ, ಅವರು ಮಾತನಾಡಿದರು.
ಈ ಬಾರಿ ಬಿಹಾರದಲ್ಲಿ ಎಸ್‌ಐಆರ್ ಆದೇಶ ಬಂದಾಗ, ಅದರ ವಿರುದ್ಧ ಮೊದಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಎಡಿಆರ್. ಮತ್ತು ಅದರ ಹಿಂದಿನ ಸ್ಫೂರ್ತಿ ಜಗದೀಪ್ ಛೋಕರ್. ಪ್ರಜಾಪ್ರಭುತ್ವವನ್ನು ಸುಧಾರಿಸುವ ಈ ಕೆಲಸದಿಂದ ಅವರೆಂದಿಗೂ ನಿವೃತ್ತರಾಗಲಿಲ್ಲ.
ಇತ್ತೀಚಿನವರೆಗೂ ಅವರು ಬಿಹಾರದಲ್ಲಿನ ಎಸ್‌ಐಆರ್ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡುತ್ತಿದ್ದರು. ಅವರು ನಿಯಮಗಳು ಮತ್ತು ಕಾನೂನುಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಆ ಆಧಾರದ ಮೇಲೆ ಎತ್ತಲಾದ ಪ್ರಶ್ನೆಗಳಿಂದ ಸರಕಾರಗಳು ಕಿರಿಕಿರಿಗೊಂಡಿದ್ದವು.
ಎಸ್‌ಐಆರ್ ವಿಷಯದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನಲ್ಲಿ ಸರಕಾರದ ಪರವಾಗಿ ಹಾಜರಾದ ವಕೀಲರು, ಯಾವುದೇ ರಾಜಕೀಯ ಪಕ್ಷ ಅಥವಾ ಮತದಾರರು ನ್ಯಾಯಾಲಯದ ಮುಂದೆ ಬಂದಿಲ್ಲ, ದಿಲ್ಲಿಯಲ್ಲಿ ಕುಳಿತುಕೊಂಡಿರುವ ಎಡಿಆರ್ ಬಂದಿದೆ ಎಂದಿದ್ದರು.
ಯಾರೂ ಬರದಿದ್ದಾಗಲೂ ಎಡಿಆರ್ ಇರುತ್ತದೆ ಎಂಬುದು ಖಂಡಿತವಾಗಿಯೂ ಅದರ ಹೆಚ್ಚುಗಾರಿಕೆ. ಬೇರೆ ಯಾರೂ ನ್ಯಾಯಾಲಯಕ್ಕೆ ಹೋಗದ ವಿಷಯದ ಕುರಿತು ಜಗದೀಪ್ ಛೋಕರ್ ಅರ್ಜಿ ಸಲ್ಲಿಸುತ್ತಿದ್ದರು.
ಎಡಿಆರ್‌ನ ಪ್ರಯತ್ನದ ನಂತರ, ಆಧಾರ್ ಕಾರ್ಡ್ ಅನ್ನು 12ನೇ ದಾಖಲೆಯಾಗಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ಆದೇಶಿಸಿತು ಮತ್ತು ಚುನಾವಣಾ ಆಯೋಗ ಒಪ್ಪಿಕೊಳ್ಳಬೇಕಾಯಿತು. ಏಕೆಂದರೆ ಜಗದೀಪ್ ಛೋಕರ್ ಅವರಂಥವರು ಪ್ರತಿಯೊಬ್ಬ ಮತದಾರರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು.
ಮತದಾರನಿಗೆ ತನ್ನ ಹಕ್ಕುಗಳಿಗಾಗಿ ಹೋರಾಡುವುದರ ಬಗ್ಗೆ ಅರಿವಿಲ್ಲದೇ ಇರಬಹುದು. ಆದರೆ ಮತದಾರನಿಗಾಗಿ ಹೋರಾಡಲು ದಿಲ್ಲಿಯಲ್ಲಿ ಎಡಿಆರ್ ಇತ್ತು.
ಪ್ರತೀ ಚುನಾವಣೆಯ ಸಮಯದಲ್ಲಿ, ಯಾವ ಪಕ್ಷದ ಅಭ್ಯರ್ಥಿಗಳ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿವೆ ಎಂಬುದರ ಕುರಿತು ಸುದ್ದಿಗಳು ಪ್ರಕಟವಾಗುತ್ತಿದ್ದವು.
ಅದಕ್ಕೆ ಆಧಾರವಾಗಿ ಇರುತ್ತಿದ್ದದ್ದು ಎಡಿಆರ್ ಸಂಶೋಧನೆಯಾಗಿತ್ತು. ಈಗ ಚುನಾವಣೆಗಳನ್ನು ಶುದ್ಧವಾಗಿಸಲು, ಚುನಾವಣಾ ಸುಧಾರಣೆಗಳ ಬಗ್ಗೆ ಯಾರು ಮಾತನಾಡುತ್ತಾರೆ?
ರಾಜಕೀಯ ಪಕ್ಷಗಳು ಕ್ರಿಮಿನಲ್ ಅಭ್ಯರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದನ್ನು ಗಮನಿಸಿದ್ದ ಜಗದೀಪ್ ಛೋಕರ್, ತಮ್ಮ ಹೋರಾಟದ ವ್ಯಾಪ್ತಿಯನ್ನು ವಿಸ್ತರಿಸಿದ್ದರು.
ಅವರು ದೇಣಿಗೆಗಳ ಬಗ್ಗೆ ಪರಿಶೀಲಿಸಲು ಪ್ರಾರಂಭಿಸಿದರು ಮತ್ತು ಆಂತರಿಕ ಪ್ರಜಾಪ್ರಭುತ್ವದ ಮೇಲೆ ಒತ್ತು ನೀಡಲು ಪ್ರಾರಂಭಿಸಿದರು. ಯಾವ ರಾಜಕೀಯ ಪಕ್ಷವೂ ಪರಿಪೂರ್ಣವಲ್ಲ ಎಂದು ಅವರು ಹೇಳಿದ್ದರು.
ಎಡಿಆರ್ ಒಮ್ಮೆ ಸುಮಾರು 6,500 ಅಭ್ಯರ್ಥಿಗಳ ಸಮೀಕ್ಷೆ ನಡೆಸಿ, ಯಾವ ಅಭ್ಯರ್ಥಿ ನಿಗದಿತ ಮಿತಿಗಿಂತ ಹೆಚ್ಚು ಖರ್ಚು ಮಾಡಿದ್ದಾರೆ ಎಂಬುದನ್ನು ಕಂಡುಕೊಂಡಿತು. ಆ ಸಮೀಕ್ಷೆಯಲ್ಲಿ, ಮೂವರು ಅಭ್ಯರ್ಥಿಗಳು ನಿಗದಿತ ಮಿತಿಗಿಂತ ಹೆಚ್ಚು ಖರ್ಚು ಮಾಡಿದ್ದನ್ನು ಒಪ್ಪಿಕೊಂಡರು ಮತ್ತು ಮೂವರೂ ಚುನಾವಣೆಯಲ್ಲಿ ಸೋತರು ಎನ್ನಲಾಗಿದೆ.
ಅರ್ಧಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಿಗದಿತ ಮಿತಿಯ ಶೇ.50ರಷ್ಟು ಸಹ ಖರ್ಚು ಮಾಡಿಲ್ಲ ಎಂದು ಹೇಳಿದಾಗ, ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಛೋಕರ್ ಗ್ರಹಿಸಿದ್ದರು.
ಜಗದೀಪ್ ಛೋಕರ್ ಮತ್ತು ಅವರ ಸಂಸ್ಥೆ ಎಡಿಆರ್ ಮನಸ್ಸು ಮಾಡದೇ ಇದ್ದಿದ್ದರೆ, ಭಾರತದ ಇತಿಹಾಸದಲ್ಲಿ ಅತಿದೊಡ್ಡ ಚುನಾವಣಾ ವಂಚನೆ ಬೆಳಕಿಗೆ ಬರುತ್ತಿರಲಿಲ್ಲ.
ಚುನಾವಣಾ ಬಾಂಡ್‌ಗಳ ವಿರುದ್ಧ ಅರ್ಜಿದಾರರಲ್ಲಿ ಎಡಿಆರ್ ಕೂಡ ಸೇರಿತ್ತು. ಇದು ವರ್ಷಗಳನ್ನು ತೆಗೆದುಕೊಂಡಿತು. ಆದರೆ ಅವರು ಪ್ರಯತ್ನಿಸುತ್ತಲೇ ಇದ್ದರು. ಅಂತಿಮವಾಗಿ, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳನ್ನು ಅಸಂವಿಧಾನಿಕ ಎಂದು ಘೋಷಿಸಿತು.
ಚುನಾವಣಾ ನಿಧಿಯನ್ನು ರಹಸ್ಯವಾಗಿಡಲು ಮತ್ತು ಸಾರ್ವಜನಿಕರ ದೃಷ್ಟಿಯಿಂದ ದೂರವಿಡಲು ಮೋದಿ ಸರಕಾರ ತಂದಿದ್ದ ಸಂವಿಧಾನ ವಿರೋಧಿ ಕಾನೂನು ರದ್ದಾಯಿತು. ಛೋಕರ್ ಮತ್ತವರ ಜೊತೆಯವರಿಲ್ಲದೆ ಇಷ್ಟು ದೊಡ್ಡ ಹಗರಣ ಬಯಲಿಗೆ ಬರುವುದು ಸಾಧ್ಯವಿರಲಿಲ್ಲ.
ವಿಭಿನ್ನ ಪ್ರಶ್ನೆಗಳನ್ನು ಎತ್ತುವ ಮೂಲಕ, ಅವರು ಸಂಸತ್ತಿನ ರಚನೆ ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರ ತಿಳುವಳಿಕೆಯನ್ನು ಬದಲಾಯಿಸಿದರು.
ಎಷ್ಟು ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ?, ಯಾರ ಬಳಿ ಎಷ್ಟು ಆಸ್ತಿ ಇದೆ?, ಮಹಿಳಾ ಸಂಸದರು ಮತ್ತು ಶಾಸಕರ ಪ್ರೊಫೈಲ್ ಏನು?, ದೇಶದ ಎಷ್ಟು ಶಾಸಕರು ಮತ್ತು ಸಂಸದರ ವಿರುದ್ಧ ದ್ವೇಷ ಭಾಷಣ ಪ್ರಕರಣಗಳಿವೆ? ಇವೆಲ್ಲವನ್ನೂ ಜನರ ಮುಂದೆ ತಂದದ್ದು ಎಡಿಆರ್.
ಅದರ ವೆಬ್‌ಸೈಟ್‌ನಲ್ಲಿ ಓಔಖಿಂ ಮತಗಳ ವಿಶ್ಲೇಷಣೆಯನ್ನು ಕಾಣಬಹುದು. ಭಾರತ ಈಗಿರುವಂತಹ ಚುನಾವಣಾ ಆಯೋಗ ಇರುವುದಕ್ಕಾಗಿ ನಾಚಿಕೆ ಪಟ್ಟುಕೊಳ್ಳುವಾಗಲೇ ನಮ್ಮ ನಡುವೆ ಎಡಿಆರ್ ಹಾಗೂ ಜಗದೀಪ್ ಛೋಕರ್ ಅವರೂ ಇದ್ದಾರೆ ಎಂದು ಹೆಮ್ಮೆ ಪಟ್ಟುಕೊಳ್ಳುವಂತಹ ಕೆಲಸವನ್ನು ಅವರು ಮಾಡಿದರು.
ಪಾರದರ್ಶಕತೆ ಹಾಗೂ ನಿಷ್ಪಕ್ಷ ನಿಲುವು ಇಟ್ಟುಕೊಂಡು, ಎಲ್ಲರಿಗೂ ಸಮಾನ ಅವಕಾಶ ಒದಗಿಸಿ, ಭ್ರಷ್ಟಾಚಾರ ಹಾಗೂ ಅಕ್ರಮಗಳಿಲ್ಲದ ಚುನಾವಣೆ ನಡೆಸುವ ಹೊಣೆಗಾರಿಕೆ ಹೊತ್ತಿರುವ ನಮ್ಮ ದೇಶದ ಚುನಾವಣಾ ಆಯೋಗ ಈಗ ಹೇಗೆ ನಡೆದುಕೊಳ್ಳುತ್ತಿದೆ ಎಂಬುದು ಇಡೀ ದೇಶದೆದುರು ಬಯಲಾಗಿದೆ.
ಈ ದೇಶದ ವಿಪಕ್ಷ ನಾಯಕ ಚುನಾವಣಾ ಆಯೋಗವೇ ಆಡಳಿತ ಪಕ್ಷದ ಜೊತೆ ಸೇರಿ ಮತಗಳ್ಳತನ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಅದಕ್ಕೆ ಎಲ್ಲ ದಾಖಲೆ ಸಹಿತ ಉತ್ತರ ನೀಡಿ ಮತದಾರರಲ್ಲಿ ವಿಶ್ವಾಸ ಮೂಡಿಸಬೇಕಿದ್ದ ಚುನಾವಣಾ ಆಯೋಗ ಯಾವುದೊ ಪ್ರಶ್ನೆಗೆ ಏನೇನೋ ಉತ್ತರ ನೀಡಿ ಇನ್ನಷ್ಟು ಗೊಂದಲ, ಅನುಮಾನ ಮೂಡಿಸುತ್ತಿದೆ.
ರಾಜಕೀಯ ಪಕ್ಷಗಳು, ರಾಜಕಾರಣಿಗಳು ಸುಳ್ಳು ಹೇಳುವುದು, ಮಾಹಿತಿ ಮುಚ್ಚಿಡುವುದು ಸಾಮಾನ್ಯ. ಆದರೆ ಚುನಾವಣಾ ಆಯೋಗವೂ ಎಲ್ಲ ಮಾಹಿತಿ ಹಾಗೂ ದಾಖಲೆಗಳನ್ನು ಮುಂದಿಟ್ಟು, ಇಲ್ಲಿ ಪ್ರತಿಯೊಂದೂ ನಿಯಮದ ಪ್ರಕಾರವೇ ನಡೆದಿದೆ ಎಂದು ಧೈರ್ಯವಾಗಿ ಹೇಳುವ ವಾತಾವರಣ ಇಲ್ಲಿ ಇಲ್ಲವಾಗಿದೆ.
ಈ ದೇಶದ ಮುಖ್ಯ ಚುನಾವಣಾ ಆಯುಕ್ತರು ನೀಡುವ ಉತ್ತರಗಳಿಂದ ಅನುಮಾನ ಬಗೆಹರಿಯುವ ಬದಲು ಇನ್ನಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲೇ ನಮ್ಮ ನಡುವೆ ಎಡಿಆರ್ ನಂತಹ ಸಂಸ್ಥೆಯೊಂದು ಇದೆಯಲ್ಲ ಎಂಬ ಸಮಾಧಾನ ನಮಗೆ ಸಿಗುತ್ತದೆ.
ಅದಕ್ಕಾಗಿ, ಭಾರತದ ಪ್ರಜಾಪ್ರಭುತ್ವ ಜಗದೀಪ್ ಛೋಕರ್ ಅವರಿಗೆ ಖಂಡಿತ ಋಣಿಯಾಗಿರುತ್ತದೆ. ಅವರು ಎಂದಿಗೂ ಭರವಸೆಯನ್ನು ಕಳೆದುಕೊಳ್ಳಲಿಲ್ಲ ಮತ್ತು ತಮ್ಮ ಹೋರಾಟವನ್ನು ಎಂದಿಗೂ ನಿಲ್ಲಿಸಲಿಲ್ಲ. ಹೋರಾಡುತ್ತಲೇ ಬದುಕು ಮುಗಿಸಿದ್ದಾರೆ. ಅವರ ಹೋರಾಟದ ಫಲಿತಗಳು ಈ ದೇಶದ ಪ್ರಜಾಸತ್ತೆಯನ್ನು ಕಾಯಲು ಮುಂದೆಯೂ ಇರುತ್ತವೆ.