ಉಪರಾಷ್ಟ್ರಪತಿ ಚುನಾವಣೆ ಸಾಂವಿಧಾನಿಕ ಘನತೆಗಿಂತ ಸೈದ್ಧಾಂತಿಕ ಪ್ರಾಬಲ್ಯದ ಪ್ರದರ್ಶನವಾಗಿದೆಯೇ?

ನ್ಯಾ. ಬಿ. ಸುದರ್ಶನ್ ರೆಡ್ಡಿ ಮತ್ತು ಸಿ.ಪಿ. ರಾಧಾಕೃಷ್ಣನ್
ಸಂಸತ್ತಿನಲ್ಲಿನ ಬಲಾಬಲ ಎನ್ಡಿಎಗೆ ಹೆಚ್ಚು ಅನುಕೂಲಕರವಾಗಿದ್ದರೂ, ಅದು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿ ಮತ್ತು ವಿರೋಧ ಪಕ್ಷದ ಅಭ್ಯರ್ಥಿ, ಇವರಿಬ್ಬರ ಹಿನ್ನೆಲೆಯೇ ಈಗಿನ ದೊಡ್ಡ ವಿಷಯ.
ಒಂದೆಡೆ ಸಂಘದ ವ್ಯಕ್ತಿ ಇರುವಾಗ, ವಿಪಕ್ಷದ ಅಭ್ಯರ್ಥಿ ಸಾಂವಿಧಾನಿಕ ಹುದ್ದೆಗೆ ಹೆಚ್ಚು ಸೂಕ್ತವಾದವರು ಎನ್ನಿಸುವಂತಿರುವುದು ಮಹತ್ವದ್ದಾಗಿದೆ.
ಹಾಗಾಗಿ, ಈ ಪೈಪೋಟಿಯಲ್ಲಿ ಸಂಖ್ಯಾ ದೃಷ್ಟಿಯ ಬಲಾಬಲವನ್ನೂ ಮೀರಿ, ಸಾಂವಿಧಾನಿಕ ಮತ್ತು ಸೈದ್ಧಾಂತಿಕ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಇಬ್ಬರು ಅಭ್ಯರ್ಥಿಗಳ ನಡುವಿನ ಈ ತೀವ್ರ ವೈರುಧ್ಯವೇ ಈ ಚುನಾವಣೆಯ ಹೃದಯಭಾಗದಲ್ಲಿದೆ.
ಉಪರಾಷ್ಟ್ರಪತಿ ಚುನಾವಣೆಗೆ ವೇದಿಕೆ ಸಜ್ಜಾಗಿದೆ.
ಇದು ಕೇವಲ ಸಾಂವಿಧಾನಿಕ ಪ್ರಕ್ರಿಯೆಯಾಗಿ ಉಳಿದಿಲ್ಲ, ಬದಲಿಗೆ ಪ್ರಬಲ ರಾಜಕೀಯ ಮತ್ತು ಸೈದ್ಧಾಂತಿಕ ಸ್ಪರ್ಧೆಯಾಗಿ ಇದರ ಸ್ವರೂಪ ಕಾಣಿಸುತ್ತಿದೆ.
ಸೆಪ್ಟಂಬರ್ 9ರಂದು ನಡೆಯಲಿರುವ ಈ ಚುನಾವಣೆಯಲ್ಲಿ ರೂಪುಗೊಂಡಿರುವ ಪೈಪೋಟಿಯೇ ಗಮನ ಸೆಳೆಯುವಂತಿದೆ.
ಆಡಳಿತಾರೂಢ ಎನ್ಡಿಎ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಿದೆ.
ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಆರೆಸ್ಸೆಸ್ ಜೊತೆ ನಿಕಟ ಸಂಬಂಧ ಹೊಂದಿರುವ ಅನುಭವಿ ರಾಜಕಾರಣಿ ಹಾಗೂ ಆರೆಸ್ಸೆಸ್ನ ನಿಷ್ಠಾವಂತ ಸ್ವಯಂಸೇವಕ.
ಇನ್ನು, ‘ಇಂಡಿಯಾ’ ಮೈತ್ರಿಕೂಟ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಜೀವನದುದ್ದಕ್ಕೂ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದ ನ್ಯಾ. ಬಿ. ಸುದರ್ಶನ್ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಜುಲೈ 21ರಂದು ಜಗದೀಪ್ ಧನ್ಕರ್ ಅವರು ದಿಢೀರ್ ರಾಜೀನಾಮೆ ನೀಡಿದ್ದರಿಂದಾಗಿ ಈ ಚುನಾವಣೆ ತಲೆದೋರಿದೆ.
ಸಂಸತ್ತಿನಲ್ಲಿನ ಬಲಾಬಲ ಎನ್ಡಿಎಗೆ ಹೆಚ್ಚು ಅನುಕೂಲಕರ ವಾಗಿದ್ದರೂ, ಅದು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿ ಮತ್ತು ವಿರೋಧ ಪಕ್ಷದ ಅಭ್ಯರ್ಥಿ, ಇವರಿಬ್ಬರ ಹಿನ್ನೆಲೆಯೇ ಈಗಿನ ದೊಡ್ಡ ವಿಷಯ.
ಒಂದೆಡೆ ಸಂಘದ ವ್ಯಕ್ತಿ ಇರುವಾಗ, ವಿಪಕ್ಷದ ಅಭ್ಯರ್ಥಿ ಸಾಂವಿಧಾನಿಕ ಹುದ್ದೆಗೆ ಹೆಚ್ಚು ಸೂಕ್ತವಾದವರು ಎನ್ನಿಸುವಂತಿ ರುವುದು ಮಹತ್ವದ್ದಾಗಿದೆ.
ಹಾಗಾಗಿ, ಈ ಪೈಪೋಟಿಯಲ್ಲಿ ಸಂಖ್ಯಾ ದೃಷ್ಟಿಯ ಬಲಾಬಲವನ್ನೂ ಮೀರಿ, ಸಾಂವಿಧಾನಿಕ ಮತ್ತು ಸೈದ್ಧಾಂತಿಕ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಇಬ್ಬರು ಅಭ್ಯರ್ಥಿಗಳ ನಡುವಿನ ಈ ತೀವ್ರ ವೈರುಧ್ಯವೇ ಈ ಚುನಾವಣೆಯ ಹೃದಯಭಾಗದಲ್ಲಿದೆ.
ಅವರು ಭಾರತೀಯ ಗಣರಾಜ್ಯದ ಎರಡು ವಿಭಿನ್ನ ಸ್ತಂಭಗಳಾದ ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಪ್ರತಿನಿಧಿಸುತ್ತಾರೆ. ಅವರ ನಾಮನಿರ್ದೇಶನಗಳು ಆಯಾ ಒಕ್ಕೂಟದ ಪ್ರಮುಖ ಸಂದೇಶವನ್ನು ಪ್ರತಿಬಿಂಬಿಸುತ್ತವೆ.
ಸಿ.ಪಿ. ರಾಧಾಕೃಷ್ಣನ್ ಅವರು ಬಿಜೆಪಿ ನಾಯಕ. ಅವರು ರಾಜಕೀಯ ಶುರು ಮಾಡಿರುವುದು ಆರೆಸ್ಸೆಸ್ ಮತ್ತು ಅದರ ಹಿಂದಿನ ರಾಜಕೀಯ ಅಂಗವಾದ ಜನಸಂಘದಿಂದ. ಹಾಗಾಗಿ ಅವರ ರಾಜಕೀಯ ಹಾದಿ ಸಂಘ ಪರಿವಾರದೊಂದಿಗೆ ಸಂಪೂರ್ಣವಾಗಿ ಬೆಸೆದುಕೊಂಡಿದೆ.
ಅವರ ಅಚಲ ನಿಷ್ಠೆ ಜಗದೀಪ್ ಧನ್ಕರ್ಗಿಂತ ಭಿನ್ನವಾಗಿದೆ.
ಧನ್ಕರ್ ರಾಜಕೀಯ ವೃತ್ತಿಜೀವನ ಬಿಜೆಪಿಯೊಂದಿಗಿನ ಸಂಬಂಧಕ್ಕಿಂತ ಮೊದಲು ಇತರ ಪಕ್ಷಗಳ ಜೊತೆಯೂ ಇತ್ತು.ಅದು, ಪ್ರಸ್ತುತ ಬಿಜೆಪಿ ನಾಯಕತ್ವಕ್ಕೆ ಬೇಕಿರದ ಘರ್ಷಣೆ ಮತ್ತು ಪ್ರತಿಭಟನೆಯ ನಡೆಗಳಿಗೆ ಕಾರಣವಾಯಿತು ಎಂದೇ ಹೇಳಲಾಗುತ್ತದೆ.
ರಾಧಾಕೃಷ್ಣನ್ ಅವರ ಅರ್ಹತೆ ದಶಕಗಳ ರಾಜಕೀಯದ ಮೇಲೆ ನಿರ್ಮಿತವಾಗಿದೆ.
ವಾಜಪೇಯಿ ಕಾಲದಲ್ಲಿ ಅವರು ತಮಿಳುನಾಡಿನ ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭಾ ಸಂಸದರಾಗಿದ್ದರು. ಅವರು ತಮ್ಮ ತಳಮಟ್ಟದ ಜನ ಸಂಪರ್ಕಕ್ಕೆ ಹೆಸರುವಾಸಿಯಾದ ಅನುಭವಿ ನಾಯಕರಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆರೆಸ್ಸೆಸ್ನ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ.
ಜಾರ್ಖಂಡ್ ಮತ್ತು ನಂತರ ಮಹಾರಾಷ್ಟ್ರದ ರಾಜ್ಯಪಾಲರಾಗಿ ಅವರ ಅನುಭವ, ಬಿಜೆಪಿ ನೇತೃತ್ವದ ಸರಕಾರಕ್ಕೆ ಬೇಕಿರುವಂತೆ ಅವರನ್ನು ಈಗಾಗಲೇ ರೂಪಿಸಿರಬಹುದು.
ಎನ್ಡಿಎಗೆ, ರಾಧಾಕೃಷ್ಣನ್ ಅವರು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸೈದ್ಧಾಂತಿಕವಾಗಿ ಹೊಂದಿಕೆಯಾಗುವ ಅಭ್ಯರ್ಥಿಯಾಗಿದ್ದಾರೆ. ಅವರು ಶಾಸಕಾಂಗ ಪ್ರಕ್ರಿಯೆಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಇದು ಅವರು ನಿರ್ವಹಿಸಬೇಕಿರುವ ರಾಜ್ಯಸಭಾ ಸಭಾಪತಿ ಸ್ಥಾನಕ್ಕೆ ಬೇಕಿರುವ ಅಗತ್ಯವಾಗಿದೆ.
ಇನ್ನು ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿ ನ್ಯಾ. ಬಿ. ಸುದರ್ಶನ್ ರೆಡ್ಡಿ.
ಅವರನ್ನು ವಿಪಕ್ಷ ಒಕ್ಕೂಟ ನಾಮನಿರ್ದೇಶನ ಮಾಡಿರುವುದು ಉದ್ದೇಶಪೂರ್ವಕ ಪ್ರತಿ-ನಿರೂಪಣೆಯಾಗಿದೆ.
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಆಯ್ಕೆ ಮಾಡಿರುವುದು, ಈ ಚುನಾವಣೆಯನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾತಂತ್ರ್ಯವನ್ನು ರಕ್ಷಿಸುವ ಹೋರಾಟವಾಗಿ ರೂಪಿಸುವ ಸ್ಪಷ್ಟ ಉದ್ದೇಶದ್ದಾಗಿದೆ.
2007ರಿಂದ 2011ರವರೆಗೆ ಸುಪ್ರೀಂ ಕೋರ್ಟ್ನಲ್ಲಿ ಸೇವೆ ಸಲ್ಲಿಸಿದ್ದ ನ್ಯಾ. ರೆಡ್ಡಿ, ಮಾನವ ಹಕ್ಕುಗಳು, ಕ್ರಿಮಿನಲ್ ನ್ಯಾಯಶಾಸ್ತ್ರ ಮತ್ತು ಸೇವಾ ಕಾನೂನಿನ ಕುರಿತು ಮಹತ್ವದ ತೀರ್ಪುಗಳನ್ನು ನೀಡಿದವರು.
ಪ್ರಗತಿಪರ ನ್ಯಾಯಶಾಸ್ತ್ರಜ್ಞ ಎಂಬ ಖ್ಯಾತಿಯನ್ನು ಹೊಂದಿದ್ದಾರೆ. ಬಡವರ ಪರವಾದ ಅವರ ನಿಲುವು ಮತ್ತು ಮೂಲಭೂತ ಹಕ್ಕುಗಳ ಬಗೆಗಿನ ಅವರ ಬದ್ಧತೆಯನ್ನು ವಿಪಕ್ಷ ಒಕ್ಕೂಟ ಎತ್ತಿ ತೋರಿಸುತ್ತದೆ.
ಅವರು ಅವಿಭಜಿತ ಆಂಧ್ರಪ್ರದೇಶದ ಹಳ್ಳಿಯಲ್ಲಿ ಜನಿಸಿದವರು. ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಸುಪ್ರೀಂ ಕೋರ್ಟ್ ವರೆಗಿನ ಅವರ ಪ್ರಯಾಣ ಒಂದು ಅರ್ಹತೆಯ ಮಾದರಿಯಂತಿದೆ.
ಅವರು ಗುವಾಹಟಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದರು ಮತ್ತು ಗೋವಾದ ಮೊದಲ ಲೋಕಾಯುಕ್ತರಾಗಿದ್ದರು.
ರಾಜಕೀಯೇತರ ವ್ಯಕ್ತಿಯನ್ನು ಕಣಕ್ಕಿಳಿಸುವ ಮೂಲಕ ವಿರೋಧ ಪಕ್ಷ, ಎನ್ಡಿಎಯ ಬಹುಸಂಖ್ಯಾತ ರಾಜಕೀಯಕ್ಕೆ ವಿರುದ್ಧವಾಗಿ ನ್ಯಾಯ, ತಟಸ್ಥ ನಿಲುವು ಮತ್ತು ಸಾಂವಿಧಾನಿಕ ನೈತಿಕತೆಯ ದೃಷ್ಟಿಕೋನವನ್ನು ಪ್ರದರ್ಶಿಸುತ್ತಿದೆ.
ವಿರೋಧ ಪಕ್ಷಗಳು ಈ ಸ್ಪರ್ಧೆಯನ್ನು ಸೈದ್ಧಾಂತಿಕ ಕದನ ಎಂದೇ ಸ್ಪಷ್ಟವಾಗಿ ಕರೆದಿವೆ.
ನ್ಯಾ. ರೆಡ್ಡಿ ದೇಶದ ಸ್ವಾತಂತ್ರ್ಯ ಚಳವಳಿಯನ್ನು ರೂಪಿಸಿದ ಮೌಲ್ಯಗಳು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಪ್ರತಿಬಿಂಬವಾಗಿದ್ದಾರೆ ಎಂದು ವಿಪಕ್ಷಗಳು ಜಂಟಿ ಹೇಳಿಕೆಯಲ್ಲಿ ಘೋಷಿಸಿವೆ.
ಇದಕ್ಕೆ ವಿರುದ್ಧವಾಗಿ, ರಾಧಾಕೃಷ್ಣನ್ ಅವರನ್ನು ಎನ್ಡಿಎ ಆಯ್ಕೆ ಮಾಡಿರುವುದು ಅದರದೇ ಆದ ಸಿದ್ಧಾಂತದ ಲೆಕ್ಕಾಚಾರದ ನಡೆಯಾಗಿದೆ. ಅವರ ಆರೆಸ್ಸೆಸ್ ಹಿನ್ನೆಲೆಯೇ ಅವರ ಪ್ರಾಥಮಿಕ ಅರ್ಹತೆಯಾಗಿದೆ. ಅವರ ನಾಮನಿರ್ದೇಶನ ಬಿಜೆಪಿಗೆ ಹೊಂದುವಂತಿದೆ ಮತ್ತು ಆರೆಸ್ಸೆಸ್ಗೆ ಬಿಜೆಪಿ ಸರಕಾರ ತೋರಿಸುವ ಬದ್ಧತೆಯನ್ನು ಸೂಚಿಸುತ್ತದೆ. ಅವೆರಡೂ ಬೇರೆಬೇರೆಯಲ್ಲ ಎಂಬುದನ್ನೂ ಇದು ಸ್ಪಷ್ಟವಾಗಿ ತೋರಿಸುತ್ತದೆ.
ರಾಧಾಕೃಷ್ಣನ್ ಅವರನ್ನು ಈಗ ಈ ಹುದ್ದೆಗಾಗಿ ಆರಿಸಿರುವುದು ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ, ಬಿಜೆಪಿ ನೆಲೆಯನ್ನು ಬಲಪಡಿಸುವ ದೀರ್ಘಾವಧಿಯ ಅಜೆಂಡಾದ ಭಾಗವಾಗಿದೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮಿಳುನಾಡಿನೊಳಗೆ ಬಿಜೆಪಿ ಹೆಚ್ಚಿನ ಪ್ರಭಾವ ಬೀರುವಂತಾಗಲು ಈ ಆಯ್ಕೆಯನ್ನು ಬಳಸಿಕೊಳ್ಳಲಾಗುತ್ತದೆ. ಇದರೊಂದಿಗೆ ಈ ಪ್ರದೇಶದ ಹಿಂದೂ ಭಾವನೆಗಳಿಗೆ ಬಲವಾದ ಧ್ವನಿಯಾಗಿ ಅವರನ್ನು ಬಿಂಬಿಸುವ ಉದ್ದೇಶವೂ ಇದೆ.
ಲೋಕಸಭೆಯ ಮತ್ತು ರಾಜ್ಯಸಭೆಯ ಸದಸ್ಯರನ್ನು ಸೇರಿಸಿ ಒಟ್ಟು 786 ಸಂಸದರಿದ್ದು, ಗೆಲ್ಲಲು ಬೇಕಿರುವುದು 394 ಮತಗಳು.
ಎನ್ಡಿಎ ದೃಷ್ಟಿಯಿಂದ ಇದು ಅನುಕೂಲಕರ ಸಂಖ್ಯೆ.
11 ಸಂಸದರನ್ನು ಹೊಂದಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬೆಂಬಲವೂ ಇರುವುದರಿಂದ ಎನ್ಡಿಎ ಸುಮಾರು 438 ಸಂಸದರ ಬಲ ಹೊಂದಿದೆ.
ಮತ್ತೊಂದೆಡೆ, ‘ಇಂಡಿಯಾ’ ಒಕ್ಕೂಟ ಸುಮಾರು 323 ಸಂಸದರನ್ನು ಹೊಂದಿದೆ.
ಈ 100ಕ್ಕೂ ಹೆಚ್ಚು ಮತಗಳ ಅಂತರವು ಎನ್ಡಿಎ ಗೆಲುವು ಸುಲಭ ಸಾಧ್ಯ ಎಂದು ಸೂಚಿಸುತ್ತದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಧಾಕೃಷ್ಣನ್ ಅವರಿಗೆ ಒಮ್ಮತದ ಬೆಂಬಲ ಪಡೆಯಲು ಎಲ್ಲಾ ಪಕ್ಷಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಲಾಗಿದೆ.
ಹೀಗಿರುವಾಗ, ಸ್ಪರ್ಧಿಸಲು ಪ್ರತಿಪಕ್ಷಗಳು ನಿರ್ಧರಿಸಿರುವುದು, ಫಲಿತಾಂಶ ಏನೇ ಇರಲಿ, ಹೋರಾಟದ ಮೌಲ್ಯವೇ ಮುಖ್ಯ ಎಂಬ ಅವುಗಳ ನಿಲುವನ್ನು ತೋರಿಸುತ್ತದೆ.
ವಿರೋಧ ಪಕ್ಷದ ಮಾಸ್ಟರ್ಸ್ಟ್ರೋಕ್, ತೆಲುಗು ಮಣ್ಣಿನ ಪುತ್ರ ನ್ಯಾ. ರೆಡ್ಡಿ ಅವರನ್ನು ಆಯ್ಕೆ ಮಾಡಿರುವುದರಲ್ಲಿದೆ.
ಆಂಧ್ರಪ್ರದೇಶದ ಎರಡು ಪ್ರಮುಖ ಪಕ್ಷಗಳಾದ ಆಡಳಿತಾರೂಢ ಟಿಡಿಪಿ ಮತ್ತು ವೈಎಸ್ಆರ್ಸಿಪಿಗೆ ರಾಜಕೀಯ ಸಂದಿಗ್ಧತೆ ಸೃಷ್ಟಿಸುವ ಈ ನಡೆ ಮಹತ್ವದ್ದಾಗಿದೆ.
ಸಿಎಂ ನಾಯ್ಡು ಅವರ ಟಿಡಿಪಿ ಪಕ್ಷ ಈಗಾಗಲೇ ಎನ್ಡಿಎ ಮೈತ್ರಿಕೂಟದಲ್ಲಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಈಗಾಗಲೇ ಎನ್ಡಿಎ ಅಭ್ಯರ್ಥಿಗೆ ತನ್ನ ಬೆಂಬಲ ಘೋಷಿಸಿದೆ.
ಆದರೆ, ಹಾಗೆ ಮಾಡುವುದರಿಂದ ತನ್ನದೇ ನೆಲದ ಗಣ್ಯ ನ್ಯಾಯಶಾಸ್ತ್ರಜ್ಞರ ವಿರುದ್ಧ ತೆಲುಗುಯೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದಕ್ಕಾಗಿ ಅದು ಸ್ಥಳೀಯವಾಗಿ ಟೀಕೆಗೆ ಗುರಿಯಾಗುತ್ತದೆ.
ಟಿಡಿಪಿಗೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ.
18 ಸಂಸದರನ್ನು ಹೊಂದಿರುವ ಎನ್ಡಿಎಯ ಪ್ರಮುಖ ಮಿತ್ರ ಪಕ್ಷವಾಗಿ ಅದರ ಬೆಂಬಲ ನಿರೀಕ್ಷಿತ. ಆದರೂ, ನ್ಯಾ. ರೆಡ್ಡಿ ವಿರುದ್ಧ ಮತ ಚಲಾಯಿಸುವುದು ಟಿಡಿಪಿಗೆ ಇಕ್ಕಟ್ಟಿನ ಸ್ಥಿತಿಯಾಗಿರುತ್ತದೆ.
ಪ್ರಮುಖ ತೆಲುಗು ವ್ಯಕ್ತಿಯನ್ನು ಗೌರವಿಸುವುದಕ್ಕಿಂತ ಬಿಜೆಪಿಯೊಂದಿಗಿನ ಮೈತ್ರಿಗೆ ಅದು ಆದ್ಯತೆ ನೀಡುತ್ತದೆ ಎಂಬ ಅರ್ಥ ಬರುವಂತಾಗುತ್ತದೆ. ಇದು ರಾಷ್ಟ್ರೀಯ ಒಕ್ಕೂಟದ ಚೌಕಟ್ಟು ಮತ್ತು ಪ್ರಾದೇಶಿಕ ಭಾವನೆಗಳ ನಡುವೆ ಆಯ್ಕೆಯ ಅನಿವಾರ್ಯತೆಗೆ ಎಡೆ ಮಾಡಿಕೊಡುತ್ತದೆ.
ಬಲಾಬಲವನ್ನು ನೋಡಿದರೆ, ನ್ಯಾ. ರೆಡ್ಡಿ ಗೆಲುವು ಬಹುತೇಕ ಅಸಾಧ್ಯ. ಹಾಗಿದ್ದರೂ, ಈ ಚುನಾವಣೆಯಲ್ಲಿನ ಕುತೂಹಲ, ಅದರ ಅಂತಿಮ ಫಲಿತಾಂಶಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ, ಅದು ರವಾನಿಸುವ ರಾಜಕೀಯ ಸಂಕೇತಗಳಲ್ಲಿದೆ.
ಇದು ಅಡ್ಡ ಮತದಾನಕ್ಕೆ ಕಾರಣವಾಗಬಹುದೇ ಎಂಬ ಪ್ರಶ್ನೆಯೂ ಇದೆ.
ಟಿಡಿಪಿ ಅಥವಾ ವೈಎಸ್ಆರ್ಸಿಪಿಯ ಕೆಲವು ಸಂಸದರು ತಮ್ಮ ಪಕ್ಷದ ವಿಪ್ಗಳನ್ನು ಧಿಕ್ಕರಿಸಿ ‘ಆತ್ಮಸಾಕ್ಷಿ’ಯ ಮತವಾಗಿ ನ್ಯಾ. ರೆಡ್ಡಿಯವರಿಗೆ ಮತ ಚಲಾಯಿಸಬಹುದು. ಇದು ಫಲಿತಾಂಶವನ್ನು ಬದಲಾಯಿಸದಿದ್ದರೂ, ವಿರೋಧ ಪಕ್ಷಗಳ ಪಾಲಿನ ಸಾಂಕೇತಿಕ ಆದರೆ ಮಹತ್ವದ ನೈತಿಕ ಗೆಲುವಾಗುತ್ತದೆ. ಮತ್ತು ಎನ್ಡಿಎ ಮಿತ್ರ ಪಕ್ಷಗಳ ನಾಯಕತ್ವಕ್ಕೆ ಮುಜುಗರ ತರುತ್ತದೆ.
ಮತದಾನದಿಂದ ದೂರವಿರುವುದು ಮತ್ತೊಂದು ಸಾಧ್ಯತೆ.
ತೆಲುಗು ಅಭ್ಯರ್ಥಿ ವಿರುದ್ಧ ಮತದಾನ ಮಾಡುವುದರಿಂದ ಉಂಟಾಗುವ ರಾಜಕೀಯ ಪರಿಣಾಮ ತಪ್ಪಿಸಲು ಟಿಡಿಪಿ ಮತದಾನದಿಂದ ದೂರವಿರಲೂಬಹುದು. ಅದು ಎನ್ಡಿಎ ಮೈತ್ರಿಕೂಟದೊಳಗಿನ ಸೂಕ್ಷ್ಮ ಬಿರುಕನ್ನು ಬಹಿರಂಗಪಡಿಸಲಿದೆ.
ವಿರೋಧ ಪಕ್ಷಗಳು ತಮ್ಮ ಮತಗಳನ್ನು ಕ್ರೋಡೀಕರಿಸುವಲ್ಲಿ ಯಶಸ್ವಿಯಾದರೆ, ಅದು ಎನ್ಡಿಎಯ ಗೆಲುವಿನ ಅಂತರವನ್ನು ಕಡಿಮೆ ಮಾಡಬಹುದು. ಹಾಗಾದಾಗ, ಎನ್ಡಿಎಯ ಸಂಪೂರ್ಣ ಪ್ರಾಬಲ್ಯದ ನಿರೂಪಣೆಗೆ ಹೊಡೆತ ಬೀಳಬಹುದು.
ಈ ಎಲ್ಲಾ ಹಿನ್ನೆಲೆಯಲ್ಲಿ, ಉಪರಾಷ್ಟ್ರಪತಿ ಚುನಾವಣೆ ಪೂರ್ವನಿರ್ಧರಿತ ತೀರ್ಮಾನಕ್ಕಿಂತ ಹೆಚ್ಚಿನದಾಗಿದೆ.
ಇದು ಭಾರತದ ರಾಜಕೀಯ ಆತ್ಮಕ್ಕಾಗಿ ನಡೆಯುತ್ತಿರುವ ದೊಡ್ಡ ಹೋರಾಟದ ಸೂಕ್ಷ್ಮರೂಪವಾಗಿದೆ.
ಇಡೀ ಚುನಾವಣೆ ಸಮ್ಮಿಶ್ರ ನಿಷ್ಠೆಯ ನಿರ್ಣಾಯಕ ಪರೀಕ್ಷೆಯಾಗಿ, ಸ್ಪರ್ಧಾತ್ಮಕ ರಾಷ್ಟ್ರೀಯ ದೃಷ್ಟಿಕೋನಗಳ ವೇದಿಕೆಯಾಗಿ ರಾಜಕೀಯ ಚದುರಂಗವನ್ನು ಏರ್ಪಡಿಸಲಿದೆ ಎಂಬುದು ನಿಜ.