7,000 ಕೋಟಿ ವೆಚ್ಚದ ಮಹಾ ಕುಂಭದ ವೈಭವ ಉಳಿಸಿಕೊಳ್ಳಲು ಆದಿತ್ಯನಾಥ್ ಸರಕಾರ ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆಯೇ?

ಈ ವರ್ಷದ ಜನವರಿ 29ರಂದು ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದ ಸಮಯದಲ್ಲಿ ಉತ್ತರ ಪ್ರದೇಶ ಸರಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಬಗ್ಗೆ ಈಗಾಗಲೇ ತಿಳಿದಿದೆ. ಆದರೆ, ‘ಬಿಬಿಸಿ ಹಿಂದಿ’ ನಡೆಸಿದ ತನಿಖೆ ಬೇರೆಯದೇ ಸತ್ಯವನ್ನು ಬಹಿರಂಗಪಡಿಸಿದೆ.
ಉತ್ತರ ಪ್ರದೇಶ ಸರಕಾರ ಹೇಳಿದ್ದ ಅಂಕಿಅಂಶಗಳಿಗೆ ಹೋಲಿಸಿದರೆ, ಬಿಬಿಸಿ ಹೇಳುತ್ತಿರುವ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಿದೆ. ಕುಂಭ ಕಾಲ್ತುಳಿತದಲ್ಲಿ ಕನಿಷ್ಠ 82 ಜನರು ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ತನಿಖೆ ಖಚಿತಪಡಿಸಿದೆ.
ಜೂನ್ 10ರಂದು ಪ್ರಕಟವಾದ ಬಿಬಿಸಿ ಹಿಂದಿ ವರದಿ ಪ್ರಕಾರ, ಅದರ ವರದಿಗಾರರು 11 ರಾಜ್ಯಗಳು ಮತ್ತು 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಕುಟುಂಬಗಳ ಜೊತೆ ಮಾತನಾಡಿದ್ದಾರೆ. ಅವೆಲ್ಲ ಕುಂಭಮೇಳದಲ್ಲಿ ತಮ್ಮವರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿರುವ ಕುಟುಂಬಗಳಾಗಿವೆ.
ಈ 82 ಸಾವುಗಳಿಗೆ ಸಂಬಂಧಿಸಿ ಖಚಿತ ಪುರಾವೆಗಳಿರುವುದಾಗಿಯೂ, ಗಣನೆಗೆ ತೆಗೆದುಕೊಳ್ಳಲು ಅರ್ಹ ಪುರಾವೆಗಳನ್ನು ಮಾತ್ರವೇ ಆಧರಿಸಿ ಈ ಸಂಖ್ಯೆಯನ್ನು ನಿರ್ಧರಿಸಿರುವುದಾಗಿಯೂ ಬಿಬಿಸಿ ಹೇಳಿದೆ.
ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಉತ್ತರ ಪ್ರದೇಶ ಸರಕಾರ ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿತ್ತು.
ಫೆಬ್ರವರಿ 19ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಮಾಹಿತಿ ನೀಡುತ್ತ, ಸಂಗಮ್ ನೋಸ್ ಬಳಿ 66 ಭಕ್ತರು ತೊಂದರೆಗೆ ಸಿಲುಕಿದ್ದರು. 30 ಸಾವುಗಳು ದೃಢಪಟ್ಟಿವೆ. ಇತರ ಸ್ಥಳಗಳಲ್ಲಿ ಇನ್ನೂ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.
ಅಂದರೆ, ಅವರು ಹೇಳಿದಂತೆ ಅಧಿಕೃತ ಸಾವಿನ ಸಂಖ್ಯೆ 37 ಆಗಿತ್ತು. ಆದರೆ, ಬಿಬಿಸಿಯ ತನಿಖೆ ಬೇರೆಯದೇ ಸತ್ಯವನ್ನು ಬಯಲು ಮಾಡಿದೆ.
ಅದರ ಪ್ರಕಾರ, 36 ಕುಟುಂಬಗಳು ಅಧಿಕೃತವಾಗಿ 25 ಲಕ್ಷ ರೂ. ಪರಿಹಾರ ಪಡೆದಿವೆ.
ಅಲ್ಲದೆ, 26 ಕುಟುಂಬಗಳಿಗೆ ಉತ್ತರ ಪ್ರದೇಶ ಸರಕಾರ ತಲಾ 5 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ನೀಡಿದೆ. ಆದರೆ ಈ 26 ಕುಟುಂಬಗಳನ್ನು ಅಧಿಕೃತ ಸಾವಿನ ಸಂಖ್ಯೆಯಲ್ಲಿ ಸೇರಿಸಲಾಗಿಲ್ಲ ಎನ್ನಲಾಗಿದೆ.
ಪೊಲೀಸರು ಈ ಕುಟುಂಬಗಳಿಗೆ 500ರ ನೋಟುಗಳ ಬಂಡಲ್‌ಗಳನ್ನು ಹಸ್ತಾಂತರಿಸುತ್ತಿರುವ ವೀಡಿಯೊಗಳು ಮತ್ತು ಫೋಟೊಗಳು ತನ್ನ ಬಳಿ ಇರುವುದಾಗಿ ಬಿಬಿಸಿ ಹೇಳಿಕೊಂಡಿದೆ.
ಸಾವು ಕಾಲ್ತುಳಿತದಿಂದ ಸಂಭವಿಸಿಲ್ಲ, ಬದಲಿಗೆ ಹಠಾತ್ ಅನಾರೋಗ್ಯದಿಂದ ಸಂಭವಿಸಿದೆ ಎಂದು ಹೇಳುವ ದಾಖಲೆಗಳಿಗೆ ಸಹಿ ಹಾಕುವಂತೆ ಹಲವಾರು ಕುಟುಂಬಗಳ ಮೇಲೆ ಒತ್ತಡ ಹೇರಲಾಗಿತ್ತು ಎಂದು ವರದಿಯಾಗಿದೆ.
1.30 ಕೋಟಿ ರೂ. ನಗದು ವಿತರಣೆಗೆ ಹಣದ ಮೂಲ ಯಾವುದೆಂದು ಸ್ಪಷ್ಟವಾಗಿಲ್ಲ. ಆದರೆ ಈ ಎಲ್ಲಾ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಪೊಲೀಸರ ಪಾತ್ರ ಇರುವುದನ್ನು ಕುಟುಂಬಗಳು ದೃಢಪಡಿಸಿವೆ.
ಇದಲ್ಲದೆ, ಪರಿಹಾರವನ್ನೇ ಪಡೆಯದ ಸಂತ್ರಸ್ತ ಕುಟುಂಬಗಳ ಬಗ್ಗೆಯೂ ಬಿಬಿಸಿ ವರದಿ ಹೇಳುತ್ತಿದೆ.
ತಮ್ಮ ಸಂಬಂಧಿಕರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ, ಆದರೆ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಹೇಳಿಕೊಂಡ 19 ಕುಟುಂಬಗಳನ್ನು ಬಿಬಿಸಿ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ.
ಈ ಕುಟುಂಬಗಳು ತಮ್ಮವರು ದುರಂತದಲ್ಲಿ ಸಾವನ್ನಪ್ಪಿರುವುದರ ಬಗ್ಗೆ ಮರಣೋತ್ತರ ಪರೀಕ್ಷೆ ವರದಿಗಳು, ಆಸ್ಪತ್ರೆಯ ಶವಾಗಾರ ಚೀಟಿಗಳು ಮತ್ತು ಮರಣ ಪ್ರಮಾಣಪತ್ರಗಳಂಥ ಪುರಾವೆಗಳನ್ನು ಒದಗಿಸಿವೆ.
ಕೆಲವರು ಜನವರಿ 29ರಂದು ಕಾಲ್ತುಳಿತದ ಸ್ಥಳಗಳಲ್ಲಿ ತೆಗೆದ ಫೋಟೊಗಳು ಮತ್ತು ವೀಡಿಯೊಗಳನ್ನು ಸಹ ತೋರಿಸಿದ್ದಾರೆ. ಅವು ಅವರ ಸಂಬಂಧಿಕರ ಶವಗಳನ್ನು ತೋರಿಸುತ್ತವೆ.
ತಾನು ಖಚಿತಪಡಿಸಿರುವ 82 ಸಾವುಗಳನ್ನು ಬಿಬಿಸಿ ಮೂರು ಗುಂಪುಗಳಾಗಿ ವರ್ಗೀಕರಿಸಿದೆ.
ಮೊದಲನೆಯದಾಗಿ, 25 ಲಕ್ಷ ರೂ. ಪರಿಹಾರ ಪಡೆದ ಕುಟುಂಬಗಳು, ಎರಡನೆಯದಾಗಿ, 5 ಲಕ್ಷ ರೂ. ನಗದು ಪಡೆದ ಕುಟುಂಬಗಳು, ಮೂರನೆಯದಾಗಿ, ಯಾವುದೇ ಪರಿಹಾರ ಪಡೆಯದ ಕುಟುಂಬಗಳು.
ಇದಲ್ಲದೆ, ಬಿಬಿಸಿ ವರದಿ ಹಲವಾರು ಭಯಾನಕ ಸತ್ಯಗಳನ್ನು ಬಯಲು ಮಾಡಿದೆ.
ಸಂಗಮ್ ನೋಸ್‌ನಲ್ಲಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಂಕನ್ ಕಾಲ್ತುಳಿತದಲ್ಲಿ ಸಾವನ್ನಪ್ಪಿದರು.
ಉದ್ರಿಕ್ತ ಜನರು ತನ್ನ ಕಣ್ಣೆದುರೇ ನಂಕನ್ ಅವರನ್ನು ತುಳಿದುಹಾಕಿದ ಭಯಂಕರ ಸನ್ನಿವೇಶವನ್ನು ಅವರ ಸಹೋದರ ಮಸ್ರು ವಿವರಿಸಿದ್ದರು.
ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಸಿಕ್ಕಿದೆ.
ಅದೇ ರೀತಿ, ಕರ್ನಾಟಕದ ಬೆಳಗಾವಿಯ ಕಾಂಚನ್ ತಮ್ಮ ಪತಿ ಅರುಣ್ ನಾರಾಯಣ್ ಕೋಪರ್ಡೆ ಅವರನ್ನು ಸಂಗಮ್ ನೋಸ್ ಕಾಲ್ತುಳಿತದಲ್ಲಿ ಕಳೆದುಕೊಂಡರು. ಜನರು ಹೇಗೆ ಇತರರನ್ನು ತುಳಿದಾಡುತ್ತಿದ್ದರು ಎಂಬುದನ್ನು ಅವರು ಕೂಡ ವಿವರಿಸಿದ್ದರು.
ಸಾವನ್ನಪ್ಪಿದ ಕರ್ನಾಟಕದ ಅರುಣ್ ಮತ್ತು ಇತರ ಮೂವರ ಮೃತದೇಹಗಳನ್ನು ತಲಾ 25 ಲಕ್ಷ ರೂ. ಪರಿಹಾರದೊಂದಿಗೆ ಮನೆಗೆ ಕಳಿಸಲಾಯಿತು.
ಕಾಲ್ತುಳಿತ ನಡೆದದ್ದು ಸಂಗಮ್ ನೋಸ್‌ನಲ್ಲಿ ಮಾತ್ರವಲ್ಲ ಎಂಬುದನ್ನು ಕೂಡ ವರದಿ ಎತ್ತಿ ತೋರಿಸಿದೆ.
ಕಲ್ಪವೃಕ್ಷ ದ್ವಾರದ ಮುಕ್ತಿ ಮಾರ್ಗ ಚೌರಾಹಾ ಬಳಿ ಬೆಳಗ್ಗೆ ಕೂಡ ಕಾಲ್ತುಳಿತ ಸಂಭವಿಸಿದ್ದರ ಬಗ್ಗೆ ಬಿಬಿಸಿಗೆ ಪುರಾವೆಗಳು ಸಿಕ್ಕಿವೆ. ಅಲ್ಲಿ ಐದು ಜನರು ಸಾವನ್ನಪ್ಪಿದ್ದರು.
ಅವರಲ್ಲಿ ಗೋರಖ್‌ಪುರದ ಪನ್ನೆಲಾಲ್ ಸಾಹ್ನಿ ಮತ್ತು ನಗೀನಾ ದೇವಿ, ಸುಲ್ತಾನ್‌ಪುರದ ಮೀನಾ ಪಾಂಡೆ, ಹರ್ಯಾಣದ ಜಿಂದ್‌ನ ಕೃಷ್ಣಾ ದೇವಿ ಮತ್ತು ಬಿಹಾರದ ಔರಂಗಾಬಾದ್‌ನ ಸೋನಮ್ ಕುಮಾರಿ ಸೇರಿದ್ದಾರೆ.
ಈ ಕುಟುಂಬಗಳಲ್ಲಿ ಕೇವಲ ಮೂರು ಕುಟುಂಬಗಳಿಗೆ ಮಾತ್ರ ರೂ. 5 ಲಕ್ಷ ನಗದು ಸಿಕ್ಕಿದೆ.ಆದರೆ ಮೀನಾ ಪಾಂಡೆ ಮತ್ತು ಕೃಷ್ಣಾ ದೇವಿ ಅವರ ಕುಟುಂಬಗಳಿಗೆ ಯಾವುದೇ ಪರಿಹಾರ ಸಿಗಲಿಲ್ಲ.
ಮೀನಾ ಪಾಂಡೆ ಜೊತೆಗಿದ್ದ ಅರ್ಚನಾ ಸಿಂಗ್ ಅವರಂತಹ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಕೂಡ ಅಲ್ಲಿನ ಸನ್ನಿವೇಶದ ಭೀಕರತೆಯನ್ನು ಹೇಳುತ್ತವೆ.
ಅಧಿಕಾರಿಗಳಿಂದ ಯಾವುದೇ ತಕ್ಷಣದ ಸಹಾಯ ಸಿಕ್ಕಿರಲಿಲ್ಲ. ಕಾಲ್ತುಳಿತ ಸ್ಥಳದಲ್ಲಿ ಗಂಟೆಗಟ್ಟಲೆ ಸಮಯದವರೆಗೆ ಶವಗಳು ಬಿದ್ದಿದ್ದವು.
ಪನ್ನೆ ಲಾಲ್ ಸಾಹ್ನಿ ಅವರ ಪತ್ನಿ ಕುಸುಮ್ ದೇವಿ ಕೂಡ ಅಲ್ಲಿನ ಭೀಕರ ದೃಶ್ಯ ಮತ್ತು ಸಹಾಯ ಸಿಗದೇ ಹೋದದ್ದರ ಬಗ್ಗೆ ಹೇಳಿದ್ದರು.
ಅವರು ಸಂಜೆ 4 ಗಂಟೆಯವರೆಗೆ ತಮ್ಮ ಪತಿ ಮತ್ತು ನಗೀನಾ ದೇವಿ ಅವರ ಶವಗಳೊಂದಿಗೆ ಬಿಸಿಲಿನಲ್ಲಿ ಕುಳಿತಿದ್ದರು ಎಂಬ ಭೀಕರ ಸತ್ಯ ಬಯಲಾಗಿದೆ.
ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎನ್. ಗೋವಿಂದಾಚಾರ್ಯ ಅವರ ಕಿರಿಯ ಸಹೋದರ ಕೆ.ಎನ್. ವಾಸುದೇವಾಚಾರ್ಯ ಅವರು ದುರಂತದಲ್ಲಿ ಸಾವನ್ನಪ್ಪಿದ್ದರೂ, ಅವರ ಸಾವನ್ನು ಆರಂಭದಲ್ಲಿ ಯಾರೂ ಇಲ್ಲದವರು ಎಂದು ಗುರುತಿಸಲಾಗಿತ್ತು. ಇದು ಅವರ ಸಾವನ್ನು ಅಧಿಕೃತ ಪಟ್ಟಿಯಿಂದ ಹೊರಗಿಡಲು ಮತ್ತು ಕುಟುಂಬಕ್ಕೆ ಪರಿಹಾರ ನೀಡದಿರಲು ಮಾಡಿದ ಸ್ಪಷ್ಟ ಪ್ರಯತ್ನದಂತೆ ಕಾಣುತ್ತದೆ.
ಬಿಬಿಸಿಯ ತನಿಖೆಯಿಂದ ಅವರ ಗುರುತು ಬಹಿರಂಗಗೊಂಡಿದ್ದು, ಸಾವಿನ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿ ತೋರಿಸಲಾಗಿದೆ ಎಂಬ ಅನುಮಾನಗಳನ್ನು ಬಲಪಡಿಸುತ್ತದೆ. ಬಿಜೆಪಿಯ ಮಾಜಿ ಪ್ರಭಾವೀ ನಾಯಕರ ಸಂಬಂಧಿಕರ ಸಾವನ್ನೂ ಹೀಗೆ ಮರೆಮಾಚಲು ಪ್ರಯತ್ನಿಸಿದ್ದರೆ, ಸಾಮಾನ್ಯ ಜನರ ಸಾವಿನ ಕುರಿತು ಸರಕಾರ ಎಷ್ಟು ನಿರ್ಲಕ್ಷ್ಯ ವಹಿಸಿರಬಹುದು ಎಂಬ ಪ್ರಶ್ನೆ ಮೂಡುತ್ತದೆ.
ಬಿಬಿಸಿಯ ಈ ತನಿಖಾ ವರದಿ, ಸರಕಾರದ ಅಧಿಕೃತ ಸಾವಿನ ಸಂಖ್ಯೆಯ ನಿಖರತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪರಿಹಾರ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆಯೂ ಇದರೊಂದಿಗೆ ಪ್ರಶ್ನೆಗಳು ಏಳುವಂತಾಗಿದೆ.
ಸರಕಾರ ಸಿಸಿಟಿವಿ ಕ್ಯಾಮರಾಗಳು, ಸಾವಿರಾರು ಸಿಬ್ಬಂದಿ ಮತ್ತು ಆಂಬುಲೆನ್ಸ್‌ಗಳು ಸೇರಿದಂತೆ ಭಾರೀ ಭದ್ರತಾ ವ್ಯವಸ್ಥೆಗಳ ಬಗ್ಗೆ ದೊಡ್ಡದಾಗಿ ಹೇಳಿಕೊಂಡಿತ್ತು.
ಹಾಗಿದ್ದಾಗಲೂ, ಬಲಿಯಾದವರ ಸಂಖ್ಯೆ ಗೊತ್ತಾಗಲು ಅದಕ್ಕಿದ್ದ ಅಡೆತಡೆ ಏನು? ಬಲಿಪಶುಗಳ ಕುಟುಂಬಗಳಿಗೆ ನೆರವು ವಿತರಣೆಯಲ್ಲಿ ಏಕೆ ಇಂಥ ಅಸಂಬದ್ಧತೆ? ಸಾವಿನ ಸಂಖ್ಯೆ ಬಗ್ಗೆ ಖಚಿತತೆ ಏಕಿಲ್ಲ?
ಸಾವಿನ ಸಂಖ್ಯೆ 37 ಎಂದು ಹೇಳಿದ್ದರೂ, ಉತ್ತರ ಪ್ರದೇಶ ಸರಕಾರ ಆ ಅಂಕಿಅಂಶವನ್ನು ಎಂದೂ ದೃಢಪಡಿಸಲೇ ಇಲ್ಲ. ಸರಕಾರ ಕುಂಭದಲ್ಲಿ ಸಾವನ್ನಪ್ಪಿದ ಜನರ ಒಟ್ಟು ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ನೀಡಿಲ್ಲ.
45 ದಿನಗಳ ಕುಂಭ ಮೇಳದಲ್ಲಿ 66 ಕೋಟಿ ಜನರು ಭಾಗವಹಿಸಿದ್ದರು ಎಂದು ಸರಕಾರ ಹೇಳಿತ್ತು.
ಕೇಂದ್ರ ಸರಕಾರ ಮತ್ತು ಆದಿತ್ಯನಾಥ್ ಸರಕಾರ ಅದನ್ನು ದೊಡ್ಡ ಯಶಸ್ಸೆಂದು ಹೇಳಿಕೊಂಡಿದ್ದವು. ಈ ಕಾರ್ಯಕ್ರಮಕ್ಕಾಗಿ 7,000 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.
25 ಲಕ್ಷ ರೂ. ಪರಿಹಾರವನ್ನು 37 ಕುಟುಂಬಗಳಿಗೆ ನೇರ ವರ್ಗಾವಣೆ ಅಥವಾ ಚೆಕ್ ಮೂಲಕ ನೀಡಲಾಗಿದೆ. ಆದರೆ ಸರಕಾರದಿಂದ ತಲಾ 5 ಲಕ್ಷ ರೂ. ಗಳಂತೆ ನಗದು ರೂಪದಲ್ಲಿ 36 ಕುಟುಂಬಗಳಿಗೆ ವಿತರಿಸಿರುವಾಗ, ಆ 1 ಕೋಟಿ 30 ಲಕ್ಷ ರೂ. ಎಲ್ಲಿಂದ ಬಂತು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.
ಆ ಹಣ ಎಲ್ಲಿಂದ ಬಂತು ಎಂಬುದನ್ನು ದೃಢಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಸಿ ಹೇಳುತ್ತದೆ.
ನಗದು ಪಡೆದಿರುವುದನ್ನು ದೃಢಪಡಿಸಿದವರಲ್ಲಿ ಹೆಚ್ಚಿನವರು ಹಣ ಹಸ್ತಾಂತರಿಸುತ್ತಿರುವ ವೀಡಿಯೊಗಳು ಮತ್ತು ಫೋಟೊಗಳನ್ನು ಹೊಂದಿದ್ದಾರೆ ಎಂದು ವರದಿ ಹೇಳುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಯುಪಿ ಪೊಲೀಸರು ಹಣ ವಿತರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ವರದಿ ಹೇಳುತ್ತದೆ.
ಬಿಬಿಸಿ ತನಿಖೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಫೋಟೊಗಳು, ಸಂತ್ರಸ್ತರ ಜೊತೆಗಿನ ಮಾತುಕತೆಗಳನ್ನು ಆಧರಿಸಿದೆ.
ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ ಎಂದು ವರದಿ ಕೊನೆಯಲ್ಲಿ ಹೇಳುತ್ತದೆ. ಆದರೆ, ತಾನು 82 ಎಂದು ಹೇಳುತ್ತಿರುವುದು ಅತ್ಯಂತ ಖಚಿತ ಪುರಾವೆಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಂಡಿರುವುದರಿಂದ ಎಂಬುದನ್ನು ಕೂಡ ಬಿಬಿಸಿ ಸ್ಪಷ್ಟಪಡಿಸಿದೆ.
ಈಗ ಎದ್ದಿರುವ ಪ್ರಶ್ನೆಗಳಿಗೆ ಆದಿತ್ಯನಾಥ್ ಸರಕಾರ ಹಾಗೂ ಮೋದಿ ಸರಕಾರ ಉತ್ತರಿಸುವುದೇ?
ವಿಪಕ್ಷಗಳ ಕೆಲವು ಹಿರಿಯ ನಾಯಕರು ಕುಂಭ ಮೇಳದ ಕಾಲ್ತುಳಿತದಲ್ಲಿ ನೂರಾರು ಸಾವಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಅದನ್ನು ಉತ್ತರ ಪ್ರದೇಶ ಹಾಗೂ ಮೋದಿ ಸರಕಾರ ಸಾರಾಸಗಟಾಗಿ ತಿರಸ್ಕರಿಸಿತ್ತು. ಆದರೆ ನಿಜವಾಗಿಯೂ ಎಷ್ಟು ಸಾವಾಗಿದೆ ಎಂಬ ಬಗ್ಗೆ ಉತ್ತರ ಪ್ರದೇಶ ಸರಕಾರ ಸರಿಯಾದ ಮಾಹಿತಿ ನೀಡುತ್ತಿಲ್ಲ ಯಾಕೆ ?
ಈಗ ಉತ್ತರ ಪ್ರದೇಶ ಸರಕಾರ ಹೇಳಿದ 37 ಸಾವುಗಳ ಸಂಖ್ಯೆ ಸುಳ್ಳು ಎಂದು ಸಾಬೀತಾಗಿದೆ. ಆದರೆ ಬಿಬಿಸಿ ಹೇಳಿರುವ 82 ಸಾವಿನ ಸಂಖ್ಯೆ ಕೂಡ ಅಂತಿಮವಲ್ಲ. ಅಲ್ಲಿ ನಿಜವಾಗಿಯೂ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂಬುದು ಬಯಲಾಗಬೇಕಿದೆ. ಯಾಕೆಂದರೆ ಬಿಬಿಸಿ ಪಕ್ಕಾ ದಾಖಲೆ ಸಿಕ್ಕಿರುವವರನ್ನು ಮಾತ್ರ ಸಾವಿನ ಲೆಕ್ಕಕ್ಕೆ ಸೇರಿಸಿದೆ.
ಬೆಂಗಳೂರಿನ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕದ ಕಾಂಗ್ರೆಸ್ ಸರಕಾರ ಕನಿಷ್ಠ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿದೆ.
ಕಾಲ್ತುಳಿತ ದುರಂತದ ಬಳಿಕ ಕರ್ನಾಟಕ ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಕರ್ನಾಟಕ ಸರಕಾರ ತಪ್ಪಾಗಿದೆ, ಹೀಗಾಗಬಾರದಿತ್ತು ಎಂದಾದರೂ ಒಪ್ಪಿಕೊಂಡಿದೆ.
ಮೃತರ ವಿವರಗಳನ್ನು ಜನರ ಮುಂದಿಟ್ಟಿದೆ.
ಸಿಎಂ, ಡಿಸಿಎಂ ಗಾಯಾಳುಗಳನ್ನು ಭೇಟಿಯಾಗಿದ್ದಾರೆ.
ಘಟನೆಯ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ.
ಮೃತರಿಗೆ ಪರಿಹಾರ ಘೋಷಿಸಲಾಗಿದೆ.
ಆದರೆ, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಕುಂಭಮೇಳದ ಕಾಲ್ತುಳಿತದಲ್ಲಿ ಕನಿಷ್ಠ ಇಷ್ಟಾದರೂ ಪಾರದರ್ಶಕತೆ ಅಥವಾ ಜವಾಬ್ದಾರಿಯನ್ನು ಕಾಣಲು ಸಾಧ್ಯವಾಗಿಲ್ಲ.