ಅಮೆರಿಕದೊಂದಿಗಿನ ಮುಸುಕಿನ ಗುದ್ದಾಟದ ಈ ಹೊತ್ತಲ್ಲಿ ಭಾರತವು ಚೀನಾವನ್ನು ಕುರುಡಾಗಿ ಹಿಂಬಾಲಿಸುತ್ತಿದೆಯೇ?

ಭಾರತವು ಟ್ರಂಪ್ ಅವರ ಬದಲಾಗುತ್ತಿರುವ ಮನಸ್ಥಿತಿ ಗಮನದಲ್ಲಿಟ್ಟುಕೊಂಡು, ವಿವೇಕದಿಂದ ಸಂಪರ್ಕ ಕಾಪಾಡಿಕೊಳ್ಳುವ ಅವಶ್ಯಕತೆಯಿದೆ. ಈಗ ಟ್ರಂಪ್ ಅವರೊಂದಿಗೆ ಮಾತನಾಡುವ ಬದಲು ಮೋದಿ ಚೀನಾದ ಕಡೆಗೆ ಸಾಗುತ್ತಿದ್ದಾರೆ. ಅಮೆರಿಕದ ನಂತರ, ಮುಂದಿನ ಆಯ್ಕೆ ಭಾರತದ ಅತಿದೊಡ್ಡ ಪ್ರತಿಸ್ಪರ್ಧಿಯಾಗಿರುವ ಚೀನಾ ಮಾತ್ರ! ಇದು ಚೆನ್ನಾಗಿ ಯೋಚಿಸಿದ ರಾಜತಾಂತ್ರಿಕತೆಯಲ್ಲ. ಇದು ಖಂಡಿತವಾಗಿಯೂ ಗೊಂದಲಮಯ ತಂತ್ರವಾಗಿದೆ.
ಇದುವರೆಗೆ ಚೀನಾದ ವಿರುದ್ಧ ಮಾತಾಡುತ್ತಿರುವವರು ಈಗ ಚೀನಾದೊಂದಿಗೆನೇ ಆತ್ಮೀಯತೆ ಪ್ರದರ್ಶಿಸಲು ಶುರು ಮಾಡಿದ್ದಾರೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ 3 ವರ್ಷಗಳ ನಂತರ ಎರಡು ದಿನಗಳ ಭೇಟಿಗಾಗಿ ದಿಲ್ಲಿಗೆ ಬಂದ ನಂತರ ಈಗ ಭಾರತದ ಪ್ರಧಾನಿ ಮೋದಿ 7 ವರ್ಷಗಳ ನಂತರ ಆಗಸ್ಟ್ 31ರಂದು ಚೀನಾಕ್ಕೆ ಹೋಗುತ್ತಾರೆ.
ಹಾಗಾದರೆ, ಏನಾದರೂ ಬದಲಾಗಿದೆಯೇ ಅಥವಾ ಇನ್ನಾರದೋ ಕಾರಣದಿಂದಾಗಿ ಎಲ್ಲ ಬದಲಾದಂತೆ ಕಾಣುತ್ತಿದೆಯೆ?
ವಿದೇಶಾಂಗ ನೀತಿಗೆ ತನ್ನದೇ ಆದ ತಂತ್ರಗಳಿವೆ. ಆದರೆ ವಿದೇಶಾಂಗ ನೀತಿಯನ್ನು ಕೂಡ ಚುನಾವಣಾ ವಿಷಯವನ್ನಾಗಿ ಮಾಡಿ, ವಿದೇಶದಲ್ಲಿ ಭಾರತ ಪ್ರಸಿದ್ಧವಾಗುತ್ತಿದೆ ಎಂದು ಪ್ರಚಾರ ಮಾಡಿದರೆ ಏನಾದೀತು?
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ಫೋಟೋ ತೆಗೆಸಿಕೊಂಡರು.
ಚೀನಾದೊಂದಿಗೆ ಫೋಟೊಗಳಲ್ಲಿ ಮಿಂಚುವುದು ಶುರುವಾಗಿರುವಾಗ, ಅದನ್ನು ಏಕೆ ಮಾಡಲಾಗುತ್ತಿದೆ ಎಂಬುದರ ಸುಳಿವನ್ನು ಮೋದಿ ಸರಕಾರ ಕೊಡುತ್ತಿಲ್ಲ.
ಟ್ರಂಪ್ ಕಾರಣದಿಂದಾಗಿ ಭಾರತದ ವಿದೇಶಾಂಗ ನೀತಿಯಲ್ಲಿನ ದೊಡ್ಡ ಬದಲಾವಣೆಯೆಂದರೆ, ಚೀನಾದೊಂದಿಗಿನ ಈ ಫೋಟೊ ಪ್ರದರ್ಶನ ಎಂಬಂತೆ ಕಾಣುತ್ತಿದೆ.
‘ಆಪರೇಷನ್ ಸಿಂಧೂರ’ ಸಮಯದಲ್ಲಿ ಚೀನಾ ಶಸ್ತ್ರಾಸ್ತ್ರಗಳ ಮೂಲಕ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎಂದು ವರದಿಗಳಾಗುತ್ತಿತ್ತು. ಅದು ಪಾಕಿಸ್ತಾನದ ಮೂಲಕ ತನ್ನ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿತ್ತು. ಅಂಥ ಚೀನಾದೊಂದಿಗಿನ ಈ ಸ್ನೇಹ ಇದ್ದಕ್ಕಿದ್ದಂತೆ ಹೇಗೆ ಕುದುರಿತು?
ಕಳೆದ ವರ್ಷ ಭಾರತ-ಚೀನಾ ಎರಡೂ ದೇಶಗಳ ಸೈನ್ಯಗಳು ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಕೆಲ ಸ್ಥಳಗಳಲ್ಲಿ ಕೊಂಚ ಹಿಂದಕ್ಕೆ ಸರಿಯಲಿವೆ ಎನ್ನಲಾಯಿತು.
ಆದರೆ ವರದಿಗಳ ಪ್ರಕಾರ, ಹೆಸರು ಬಹಿರಂಗಪಡಿಸಲಿಚ್ಛಿಸದ ಸೇನಾ ಅಧಿಕಾರಿಯೊಬ್ಬರು ಭಾರತ ಜಾಗರೂಕವಾಗಿಯೇ ಇರಬೇಕಾಗುತ್ತದೆ ಎಂದಿದ್ದರು.
ಚೀನಾ ರಸ್ತೆಗಳ ಜಾಲವನ್ನು ಹೇಗೆ ನಿರ್ಮಿಸಿದೆಯೆಂದರೆ, ಅದು ಹಿಮ್ಮೆಟ್ಟಿದರೂ ಅಷ್ಟೇ ವೇಗವಾಗಿ ಹಿಂದಿರುಗಬಹುದು. ಆದರೆ ಭಾರತೀಯ ಸೈನ್ಯಕ್ಕೆ ಅದು ಸಾಧ್ಯವಿಲ್ಲ.
ಎರಡೂ ದೇಶಗಳು ಉದ್ವಿಗ್ನತೆ ತಗ್ಗಿಸುವ ಮಾತುಕತೆಗೆ ಒಪ್ಪಿಕೊಂಡಿವೆ ಎಂದು ವರದಿಯಿದೆ. ಹಾಗಿದ್ದೂ ಸಹ, ಎರಡೂ ಕಡೆಯ ಪಡೆಗಳನ್ನು ಗಡಿಯಲ್ಲಿ ಮುಂದಕ್ಕೆ ನಿಯೋಜಿಸಲಾಗಿದೆ. ಅಂದರೆ, ಪೂರ್ವ ಲಡಾಖ್‌ನ ಗಡಿಯಲ್ಲಿ ಏನೂ ಬದಲಾಗಿಲ್ಲ.
2020ರಿಂದ, ಗಾಲ್ವಾನ್ ಕಣಿವೆಯಲ್ಲಿನ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಅದು ಭವಿಷ್ಯದಲ್ಲಿಯೂ ನಡೆಯುತ್ತದೆ. ಆದರೆ ಆ ಮಾತುಕತೆ ಎಲ್ಲಿಗೆ ಮುಟ್ಟಿದೆ, ಎಲ್ಲಿಗೆ ಮುಟ್ಟುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ಮೋದಿ ಸರಕಾರದ ವಿದೇಶಾಂಗ ಸಚಿವರು ಸಾರ್ವಜನಿಕವಾಗಿ ಮಾತನಾಡಲು ಸಹ ಸಾಧ್ಯವಾಗುವುದಿಲ್ಲ. ಮಡಿಲ ಮಾಧ್ಯಮಗಳು ಅವರನ್ನು ಕೇಳುವುದೂ ಇಲ್ಲ.
ಚೀನಾ ಭಾರತದ ವಿದೇಶಾಂಗ ನೀತಿಯ ಮೇಲೆ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರುತ್ತಿದೆ ಎಂಬ ಮಾತುಗಳಿವೆ.
ಆಪರೇಷನ್ ಸಿಂಧೂರ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ ಎಂಬುದನ್ನು ಅಧಿಕೃತವಾಗಿ ಹೇಳಬೇಕಾದವರು ಹೇಳಲೇ ಇಲ್ಲ. ಅದನ್ನು ಭಾರತೀಯ ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್. ಸಿಂಗ್ ಹೇಳಿದರು.
ಈಗಿನ ಎರಡು ದಿನಗಳ ಸಭೆಯಲ್ಲಿ ಆಪರೇಷನ್ ಸಿಂಧೂರ ಹೊತ್ತಿನಲ್ಲಿ ಭಾರತದ ವಿರುದ್ಧ ಚೀನಾದ ಪಾತ್ರ ಏನು ಎಂಬುದರ ಪ್ರಸ್ತಾಪವಿತ್ತೆ?
ಇದ್ದಕ್ಕಿದ್ದಂತೆ ಚೀನಾ ಏಕೆ ನೆನಪಾಯಿತು?
ಜೂನ್‌ನಲ್ಲಿ ರಾಜನಾಥ್ ಸಿಂಗ್ ಚೀನಾದ ರಕ್ಷಣಾ ಸಚಿವರನ್ನು ಭೇಟಿಯಾದರು. ಜುಲೈನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾಕ್ಕೆ ಹೋದರು. ಮೊನ್ನೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಬಂದರು ಮತ್ತು ಈಗ ಪ್ರಧಾನಿ ಮೋದಿ ಅಲ್ಲಿಗೆ ಹೋಗುತ್ತಿದ್ದಾರೆ. 2018ರ ನಂತರ ಇದು ಅವರ ಮೊದಲ ಚೀನಾ ಭೇಟಿಯಾಗಲಿದೆ.
ಟ್ರಂಪ್ ಜೊತೆ ಇಲ್ಲದಿದ್ದರೆ ಚೀನಾ, ಚೀನಾ ಜೊತೆ ಇಲ್ಲದಿದ್ದರೆ ಟ್ರಂಪ್ ಇದು ಭಾರತದ ವಿದೇಶಾಂಗ ನೀತಿಯಾಗಿದೆಯೆ?
ನಿಜವೇನೆಂದರೆ, ಟ್ರಂಪ್ ಚೀನಾ ವಿರುದ್ಧ ಹೋಗಿಲ್ಲ.
ಒಮ್ಮೆ ಬೆದರಿಸಿ ನೋಡಿದರು. ಆದರೆ ಚೀನಾ ಟ್ರಂಪ್ ಅವರೇ ಸುಮ್ಮನಾಗುವ ರೀತಿಯಲ್ಲಿ ಪ್ರತಿಕ್ರಿಯಿಸಿತು.
ಚೀನಾದ ಮೇಲಿನ ಸುಂಕಗಳಿಗೆ ಗಡುವು ಆಗಸ್ಟ್ 12 ರಂದು ಕೊನೆಗೊಳ್ಳುತ್ತಿತ್ತು. ಅದನ್ನು 90 ದಿನಗಳವರೆಗೆ ವಿಸ್ತರಿಸಲಾಯಿತು. ಅಂದರೆ, ಟ್ರಂಪ್ ಚೀನಾವನ್ನು ದೂರವಿಟ್ಟಿಲ್ಲ. ಆದರೆ ಟ್ರಂಪ್ ಕಾರಣದಿಂದಾಗಿ ಭಾರತ ಮಾತ್ರ ಚೀನಾಕ್ಕೆ ಹತ್ತಿರವಾಗುತ್ತಿದೆ.
ಟ್ರಂಪ್ ಹೇಳಿಕೆಗಳಿಗೆ ನೇರವಾಗಿ ಪ್ರತಿಕ್ರಿಯಿಸುವ ನೀತಿ ಚೀನಾದ್ದಾದರೆ, ಟ್ರಂಪ್ ಹೇಳಿಕೆ ಬಗ್ಗೆ ಮೌನವಾಗಿರುವುದು ಭಾರತದ ನೀತಿಯಂತಿದೆ.
ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ, 1990 ರಿಂದ 2005ರವರೆಗೆ ಭಾರತ ಮತ್ತು ಚೀನಾ ನಡುವಿನ ಅಸಮಾನತೆ ಈಗಿನಷ್ಟು ಕೆಟ್ಟದಾಗಿರಲಿಲ್ಲ. ಕಳೆದ 10-11 ವರ್ಷಗಳಲ್ಲಿ ಚೀನಾ ನಮಗಿಂತ ಬಹಳ ಮುಂದೆ ಸಾಗಿದೆ.ವೈಜ್ಞಾನಿಕವಾಗಿ, ಆರ್ಥಿಕವಾಗಿ, ರಾಜತಾಂತ್ರಿಕವಾಗಿ, ಭೌಗೋಳಿಕವಾಗಿ ರಾಜಕೀಯವಾಗಿ ಅದನ್ನು ಈಗ ಅಮೆರಿಕಕ್ಕೆ ಸಮಾನವಾಗಿ ನೋಡಲಾಗುತ್ತಿದೆ.
ಜಾಗತಿಕ ವೇದಿಕೆಗಳಲ್ಲಿ ಇತ್ತೀಚೆಗೆ ಭಾರತವನ್ನು ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡಲಾಗಿದೆ. ಚೀನಾ ತುಂಬಾ ಬಲಿಷ್ಠ, ಅತ್ಯಂತ ಶಕ್ತಿಶಾಲಿ, ಬಹಳ ದೊಡ್ಡ ದೇಶ ಮತ್ತು ಅದಕ್ಕೆ ಹೋಲಿಸಿದರೆ ಭಾರತ ಚಿಕ್ಕದು ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ, ಹಳೆಯ ಒಪ್ಪಂದಗಳಿಗೆ ಅಂಟಿಕೊಳ್ಳುವುದು ಮತ್ತು ಅವುಗಳ ಅನುಷ್ಠಾನ ಭಾರತಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಏಕೆಂದರೆ ಭಾರತ ಮತ್ತು ಚೀನಾ ನಡುವೆ ಹೆಚ್ಚು ಅಂತರವಿಲ್ಲದಿದ್ದ ಸಮಯದಲ್ಲಿ ಅವುಗಳಿಗೆ ಸಹಿ ಹಾಕಲಾಯಿತು.
ಟ್ರಂಪ್ ಭಾರತದ ಮೇಲೆ ಸುಂಕಗಳನ್ನು ವಿಧಿಸಿದರು ಮತ್ತು ರಶ್ಯದಿಂದ ತೈಲ ಖರೀದಿಸಿದ್ದಕ್ಕಾಗಿ ದಂಡ ವಿಧಿಸಿದರು.
ಉಕ್ರೇನ್ ಮೇಲೆ ರಶ್ಯ ದಾಳಿಯ ನಂತರ ರಶ್ಯದಿಂದ ತೈಲವನ್ನು ಖರೀದಿಸುವ ಮೂಲಕ ಭಾರತ ಗಳಿಸಿದ ಲಾಭ ಸ್ವೀಕಾರಾರ್ಹವಲ್ಲ ಎಂದು ಹೇಳಲಾಗುತ್ತದೆ.
ರಶ್ಯದಿಂದ ಅಗ್ಗದ ತೈಲ ಖರೀದಿಸಿದ್ದರಿಂದ ಭಾರತಕ್ಕೆ ಸುಮಾರು 1,37,000 ಕೋಟಿ ರೂ. ಲಾಭವಾಯಿತು ಎಂದು ಅಮೆರಿಕ ಹೇಳುತ್ತಿದೆ.
ನಮ್ಮ ಜನರ ಅನುಕೂಲಕ್ಕಾಗಿ ನಾವು ರಶ್ಯದಿಂದ ತೈಲ ಖರೀದಿಸುತ್ತಿದ್ದೇವೆ ಎಂದು ಹೇಳಲಾಗಿತ್ತು. ಆದರೆ ಜನರಿಗೆ ಲಾಭವಾಗಿದೆಯೇ? ತೈಲ ಅಗ್ಗವಾಗಿದೆಯೆ? ಜನರಿಗೆ ಅಗ್ಗದ ದರದಲ್ಲಿ ಪೆಟ್ರೋಲ್ ಸಿಗದಿದ್ದರೆ, ಭಾರತದ ಕೆಲವು ಶ್ರೀಮಂತರು ಶತಕೋಟಿ ಲಾಭ ಗಳಿಸಿದರೆ, ಇದು ರಾಷ್ಟ್ರೀಯ ಹಿತಾಸಕ್ತಿ ಹೇಗಾಗುತ್ತದೆ?
ಭಾರತಕ್ಕೆ ರಫ್ತು ಮಾಡುವ ಅಪರೂಪದ ಭೂ ಖನಿಜಗಳ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಚೀನಾ ತೆಗೆದುಹಾಕಿದೆ ಎಂದು ಚೀನಾದ ವಿದೇಶಾಂಗ ಸಚಿವರು ಭಾರತೀಯ ಅಧಿಕಾರಿಗಳಿಗೆ ಹೇಳಿರುವುದಾಗಿ ವರದಿಯಾಗಿದೆ. ಚೀನಾದ ವಿದೇಶಾಂಗ ವಕ್ತಾರರು ಈ ವರದಿಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳುತ್ತಾರೆ.
ಚೀನಾದ ವಿದೇಶಾಂಗ ಸಚಿವರೊಂದಿಗಿನ ಸಭೆಯಲ್ಲಿ, ಎರಡೂ ದೇಶಗಳು ಪಾಲುದಾರರಾಗಬೇಕು ಎಂದು ಹೇಳಲಾಯಿತು. ಪರಸ್ಪರ ಗೌರವ, ಪರಸ್ಪರ ಸಂವೇದನೆ, ಪರಸ್ಪರ ಆಸಕ್ತಿ ಎರಡೂ ದೇಶಗಳ ನಡುವೆ ಹೆಚ್ಚಿದೆ ಎಂದು ಎಸ್. ಜೈಶಂಕರ್ ಪ್ರಾಸ ಬಳಸಿ ಮಾತಾಡಿದರು.
ಆದರೆ ಅದರಿಂದ ಏನೂ ಆಗುವುದಿಲ್ಲ. ಯುದ್ಧದ ವೇಳೆ ಭಯೋತ್ಪಾದನೆಯ ಹಿಂದಿರುವ ಪಾಕಿಸ್ತಾನದೊಂದಿಗೆ ಸೇರಿದ ನಡೆ ನಮಗೆ ಇಷ್ಟವಾಗಲಿಲ್ಲ ಎಂದು ಚೀನಾದ ವಿದೇಶಾಂಗ ಸಚಿವರ ಮುಂದೆ ಹೇಳಲು ಸಾಧ್ಯವಾದರೆ, ಆಗ ಗುರಿ ತಲುಪಿದಂತಾಗುತ್ತದೆ.
ದಿಲ್ಲಿಯ ನಂತರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕಾಬೂಲ್‌ಗೆ ಹೋದರು. ಅಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ವಿದೇಶಾಂಗ ಸಚಿವರನ್ನು ಭೇಟಿಯಾಗಿ ನಂತರ ಪಾಕಿಸ್ತಾನಕ್ಕೆ ಹೋದರು.
ಭಾರತಕ್ಕೆ ಏನೂ ಹೇಳಲು ಸಾಧ್ಯವಾಗಲಿಲ್ಲ.
ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ, ಚೀನಾ ಅದನ್ನು ಖಂಡಿಸಿತು ಮತ್ತು ಭಾರತ ಮೌನವಾಗಿತ್ತು.
ತಾಲಿಬಾನ್ ಸರಕಾರ ಅಧಿಕಾರಕ್ಕೆ ಬಂದ ನಂತರ, ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಮೊದಲ ದೇಶಗಳಲ್ಲಿ ಚೀನಾ ಸೇರಿತ್ತು. ಅದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದೊಂದಿಗಿನ ತನ್ನ ಸಂಬಂಧಗಳನ್ನು ಬಲಪಡಿಸಿತು.
ಭಾರತ ಪಾಕಿಸ್ತಾನದೊಂದಿಗೆ ಮಾತನಾಡದಿರುವ ನೀತಿಯನ್ನು ಅಳವಡಿಸಿಕೊಂಡಿತು. ಆದರೆ ಭಾರತ ದುಬೈನಲ್ಲಿ ಪಾಕಿಸ್ತಾನದೊಂದಿಗೆ ಪಂದ್ಯಗಳನ್ನು ಆಡುತ್ತಲೇ ಇತ್ತು.
ಸೆಪ್ಟಂಬರ್ 19ರಂದು ಮತ್ತೆ ಆಡಲಿದೆ. ಏಕೆಂದರೆ ಎಲ್ಲರಿಗೂ ಕ್ರಿಕೆಟ್ ಎಂಬುದು ಹಣಕ್ಕೆ ಸಂಬಂಧಿಸಿದೆ ಎಂಬುದು ಗೊತ್ತು. ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಜಾಹೀರಾತುಗಳಿಂದ ಆದಾಯ ಬರುತ್ತದೆ.
ಚೀನಾದೊಂದಿಗಿನ ಮಾತುಕತೆಯಲ್ಲಿ ಭಾರತದ ಯಾವ ಉದ್ದೇಶವನ್ನು ಪೂರೈಸಲಾಗುತ್ತಿದೆ? ಗಡಿ ವಿವಾದದ ಕುರಿತು ಚೀನಾ ಭಾರತದ ಮೇಲೆ ಒತ್ತಡ ಹೇರುತ್ತಿದೆ ಎಂದು ಏಕೆ ಹೇಳಲಾಗುತ್ತಿದೆ? ಭಾರತ ಚೀನಾದ ಮುಂದೆ ಹತಾಶೆಗೆ ಒಳಗಾಗುತ್ತಿದೆಯೇ ಮತ್ತು ಚೀನಾ ಆ ಹತಾಶೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದೆಯೇ?
ವ್ಯವಹಾರ ಹೆಚ್ಚಿಸುವುದು, ವೀಸಾಗಳನ್ನು ನೀಡುವುದು, ನೇರ ವಿಮಾನ ಸೇವೆಗಳನ್ನು ಪುನರಾರಂಭಿಸುವುದರಿಂದ ಹೆಚ್ಚಿನದೇನೂ ಆಗುವುದಿಲ್ಲ. ಚೀನಾದಿಂದ ಆಮದುಗಳು ಹೆಚ್ಚುತ್ತಲೇ ಇದ್ದವು ಮತ್ತು ಚೀನಾದೊಂದಿಗಿನ ಭಾರತದ ವ್ಯಾಪಾರ ಗಮನಾರ್ಹವಾಗಿ ಕಡಿಮೆಯಾಯಿತು.
ಚೀನಾದ ವಿದೇಶಾಂಗ ಸಚಿವರೊಂದಿಗಿನ ಮಾತುಕತೆಯಲ್ಲಿ ಈ ವ್ಯಾಪಾರ ಕೊರತೆ ಬಗ್ಗೆ ಯಾವುದೇ ಚರ್ಚೆ ನಡೆದಿದೆಯೇ?
ವಾಂಗ್ ಯೀ ಭಾರತಕ್ಕೆ ನೀಡಿದ ಭೇಟಿಯಿಂದ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ.
ದೊಡ್ಡ ವಿಷಯವೆಂದರೆ, ನಿಜವಾಗಿಯೂ ಏಳುವ ಪ್ರಶ್ನೆಯೆಂದರೆ, ಭಾರತಕ್ಕೆ ಚೀನಾದಿಂದ ಸಹಾಯದ ಅಗತ್ಯವಿರುವ ಸಮಸ್ಯೆ ಯಾವುದು?
ಮೊದಲ ಮತ್ತು ದೊಡ್ಡ ಸಮಸ್ಯೆ ಲಡಾಖ್.
ಭಾರತೀಯ ಸೇನೆ ಇನ್ನೂ ಲಡಾಖ್‌ನಲ್ಲಿದೆ. 500 ಸೈನಿಕರು ಅಲ್ಲಿ ನೆಲೆಸಿದ್ದಾರೆ. ಭಾರತೀಯ ಸೈನಿಕರು ಆ ಪ್ರದೇಶಗಳಲ್ಲಿ ಗಸ್ತು ತಿರುಗಲು ಸಾಧ್ಯವಾಗುತ್ತಿಲ್ಲ. 2020ಕ್ಕಿಂತ ಮೊದಲು ಅವರು ಹೋಗಲು ಸಾಧ್ಯವಾಗುತ್ತಿದ್ದ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಅದು ಬಫರ್ ವಲಯ.
ಬಫರ್ ವಲಯವನ್ನು ತೆಗೆದುಹಾಕಲಾಗುವುದು ಮತ್ತು ಭಾರತೀಯ ಸೈನಿಕರು ಅಲ್ಲಿಗೆ ಹೋಗಲು ಸಾಧ್ಯವಾಗುತ್ತದೆ ಎಂದು ಚೀನಾ ಹೇಳಿಲ್ಲ. ಉದ್ವಿಗ್ನತೆ ನಿವಾರಿಸುವ ಬಗ್ಗೆ ಯಾವಾಗ ಚರ್ಚಿಸಲಾಗುವುದು ಎಂಬ ಬಗ್ಗೆ ಭರವಸೆಯಿಲ್ಲ.
ಭಾರತದ ಎರಡನೇ ಪ್ರಮುಖ ಸಮಸ್ಯೆ ಬ್ರಹ್ಮಪುತ್ರ.
ಚೀನಾ ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟನ್ನು ನಿರ್ಮಿಸುತ್ತಿದೆ. ಚೀನಾ ಆ ನದಿಯ ಡೇಟಾವನ್ನು ಭಾರತದೊಂದಿಗೆ ಹಂಚಿಕೊಳ್ಳುವುದಿಲ್ಲ.
ತಾಂತ್ರಿಕ ಡೇಟಾ, ನೀರಿನ ಡೇಟಾವನ್ನು ತನ್ನೊಂದಿಗೆ ಸಂಪೂರ್ಣವಾಗಿ ಹಂಚಿಕೊಳ್ಳಬೇಕೆಂದು ಭಾರತ ಬಯಸುತ್ತದೆ.ಆದರೆ ಚೀನಾ ತುರ್ತು ಸಂದರ್ಭಗಳಲ್ಲಿ ಮಾತ್ರ ಮಾನವೀಯ ಆಧಾರದ ಮೇಲೆ ಈ ಡೇಟಾ ಹಂಚಿಕೊಳ್ಳುವುದಾಗಿ ಹೇಳಿದೆ.
ಭಾರತದ ವಿದೇಶಾಂಗ ಸಚಿವರು ಚೀನಾದ ವಿದೇಶಾಂಗ ಸಚಿವರೊಂದಿಗೆ ಈ ವಿಷಯ ಎತ್ತಿದ್ದರು. ಆದರೆ ಇದರ ಬಗ್ಗೆ ಚೀನಾದಿಂದ ಯಾವುದೇ ಭರವಸೆ, ಬದ್ಧತೆ ಬಂದಿಲ್ಲ.
ಮೂರನೆಯ ದೊಡ್ಡ ವಿಷಯ ವ್ಯಾಪಾರ.
ಚೀನಾದೊಂದಿಗಿನ ಭಾರತದ ವ್ಯಾಪಾರ ಸಂಪೂರ್ಣವಾಗಿ ಚೀನಾ ಪರವಾಗಿದೆ. ಈಗ, ನಾವು ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಎಂಬ ಹೇಳಿಕೆ ನೀಡಲಾಗಿದೆ. ಆದರೆ, ಭಾರತಕ್ಕೆ ಲಾಭವಾಗುವ ರೀತಿಯ ಯಾವುದೇ ಬದ್ಧತೆಯನ್ನು ಚೀನಾ ತೋರಿಸಿಲ್ಲ. ಹಾಗಾದರೆ, ಭಾರತಕ್ಕೆ ಚೀನಾದಿಂದ ಏನು ಸಿಕ್ಕಿತು?
ಈಗ ಚೀನಾ ಹೇಳಿಕೊಳ್ಳುತ್ತಿರುವ ಪ್ರಕಾರ, ಭಾರತ ತೈವಾನ್ ಅನ್ನು ಚೀನಾದ ಭಾಗವಾಗಿ ಒಪ್ಪಿಕೊಂಡಿದೆ.
ಇದರ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭಾರತ ಸರಕಾರ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಏಕೆ ನೀಡಲಿಲ್ಲ?
ತೈವಾನ್ ಚೀನಾದ ಒಂದು ಭಾಗ ಎಂದು ಜೈಶಂಕರ್ ಹೇಳಿದ್ದು, ನಾವು ಒನ್ ಚೀನಾ ನೀತಿಯಲ್ಲಿ ನಂಬಿಕೆ ಇಡುತ್ತೇವೆ ಎಂದು ದೊವಲ್ ಹೇಳಿದ್ದು ಚೀನಾದ ಹೇಳಿಕೆಯಲ್ಲಿ ಸ್ಪಷ್ಟವಾಗಿತ್ತು.
ಕಳೆದ 15-16 ವರ್ಷಗಳಿಂದ ಭಾರತ ಸರಕಾರ ಈ ಬಗ್ಗೆ ಮೌನವಾಗಿದೆ. ನಮಗೆ ಒನ್ ಚೀನಾ ನೀತಿ ಇದೆ ಎಂದು ಅದು ಯಾವುದೇ ಸ್ಪಷ್ಟ ಒಪ್ಪಂದಗಳ ಮೂಲಕ ಹೇಳುತ್ತಿಲ್ಲ.
ಟ್ರಂಪ್ ಅವರ ಬದಲಾಗುತ್ತಿರುವ ಮನಸ್ಥಿತಿ ಗಮನದಲ್ಲಿಟ್ಟುಕೊಂಡು, ವಿವೇಕದಿಂದ ಸಂಪರ್ಕ ಕಾಪಾಡಿಕೊಳ್ಳುವ ಅವಶ್ಯಕತೆಯಿದೆ. ಈಗ ಟ್ರಂಪ್ ಅವರೊಂದಿಗೆ ಮಾತನಾಡುವ ಬದಲು ಮೋದಿ ಚೀನಾದ ಕಡೆಗೆ ಸಾಗುತ್ತಿದ್ದಾರೆ. ಅಮೆರಿಕದ ನಂತರ, ಮುಂದಿನ ಆಯ್ಕೆ ಭಾರತದ ಅತಿದೊಡ್ಡ ಪ್ರತಿಸ್ಪರ್ಧಿಯಾಗಿರುವ ಚೀನಾ ಚೀನಾ ಮಾತ್ರ.
ಇದು ಚೆನ್ನಾಗಿ ಯೋಚಿಸಿದ ರಾಜತಾಂತ್ರಿಕತೆಯಲ್ಲ. ಇದು ಖಂಡಿತವಾಗಿಯೂ ಗೊಂದಲಮಯ ತಂತ್ರವಾಗಿದೆ.
ಅಮೆರಿಕ ವಿಧಿಸಿದ ಸುಂಕದಿಂದಾಗಿ ಗುಜರಾತ್‌ನ ವಜ್ರ ಮಾರುಕಟ್ಟೆಯಲ್ಲಿ 1 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಂಕದಿಂದಾಗಿ ಕೃಷಿ, ಆಟೋ, ಜವಳಿ, ಆಭರಣ ವಲಯದಲ್ಲಿ 2ರಿಂದ 3 ಲಕ್ಷ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಬಹುದು ಎಂದು ಮಿಂಟ್ ವರದಿ ಮಾಡಿದೆ.
ಈಗ ಇದ್ದಕ್ಕಿದ್ದಂತೆ ಹೀಗೆ ಚೀನಾದ ಬೆನ್ನ ಹಿಂದೆ ಹೊರಟಿರುವ ಭಾರತ ಎಲ್ಲಿಗೆ ಮುಟ್ಟಲಿದೆ?