ಮಂದಗತಿಯಲ್ಲಿ ಸಾಗುತ್ತಿರುವ ಪರಿಶಿಷ್ಟ ಜಾತಿಗಳ ‘ಒಳಮೀಸಲಾತಿ ಸಮೀಕ್ಷೆ’

ಸಾಂದರ್ಭಿಕ ಚಿತ್ರ PC: istockphoto
ಬೆಂಗಳೂರು: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯವಿರುವ ದತ್ತಾಂಶದ ಸಂಗ್ರಹಕ್ಕಾಗಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಒಳಮೀಸಲಾತಿ ಏಕಸದಸ್ಯ ವಿಚಾರಣಾ ಆಯೋಗದ ನೇತೃತ್ವದಲ್ಲಿ ನಡೆಯುತ್ತಿರುವ ಸಮೀಕ್ಷೆಯು ಮಂದಗತಿಯಲ್ಲಿ ನಡೆಯುತ್ತಿದ್ದು, ಇನ್ನೂ ಕೆಲವು ಮನೆಗೆ ಸಮೀಕ್ಷೆದಾರರೇ ಬಂದಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.
ಮೇ 5ರಿಂದ ರಾಜ್ಯಾದ್ಯಂತ ಪ್ರಾರಂಭವಾದ ಸಮೀಕ್ಷೆ ಕಾರ್ಯವು, ಪ್ರಾರಂಭದಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದೀಗ ಆಯೋಗ ಮನೆ-ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸುವ ಸಮಯ ಮುಕ್ತಾಯವಾಗುವ ಹಂತದಲ್ಲಿದ್ದರೂ ಇನ್ನೂ ಕೆಲವು ಮನೆಯ ಸಮೀಕ್ಷೆಯೇ ಆಗಿಲ್ಲ. ಹೀಗಾಗಿ ಒಳಮೀಸಲಾತಿ ಜಾರಿಯಾಗುತ್ತದೆಯೋ, ಇಲ್ಲವೋ? ಎನ್ನುವ ಆತಂಕ ಪರಿಶಿಷ್ಟ ಜಾತಿಗಳಲ್ಲಿ ಸೃಷ್ಟಿಸಿದೆ.
ದುಡಿಯಲು ಬೇರೆ ರಾಜ್ಯಗಳಿಗೆ ವಲಸೆ ಹೋದ ಕುಟುಂಬಗಳು ಹಾಗೂ ಮನೆಗಳಿಗೆ ಸಮೀಕ್ಷೆದಾರರು ಭೇಟಿ ನೀಡಿದ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದವರು, ಸಮೀಕ್ಷೆಯಿಂದ ಹೊರಗುಳಿದ ಉದಾಹರಣೆಗಳು ಕಾಣುತ್ತಿವೆ. ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಕಾರಣದಿಂದ ಮೊಬೈಲ್ ಆ್ಯಪ್ ಸಮೀಕ್ಷೆಯಲ್ಲಿ ಪರಿಣಾಮಕಾರಿ ಫಲಿತಾಂಶ ದೊರೆತಿಲ್ಲ. ಹಾಗೂ ಬೆಂಗಳೂರು ನಗರ ಸೇರಿ ದೊಡ್ಡ ನಗರಗಳಲ್ಲಿ ಬಾಡಿಗೆ ಮನೆಯಲ್ಲಿ ಇರುವ ಅನೇಕರು ಜಾತಿ ಹೆಸರನ್ನು ಹೇಳಿಲ್ಲ. ಆದ್ದರಿಂದ ಒಳಮೀಸಲಾತಿ ಸಮೀಕ್ಷೆ ಪರಿಣಾಮಕಾರಿಯಾಗಿಲ್ಲ ಎನ್ನುವುದು ಕೂಡ ಸಾರ್ವಜನಿಕರ ಆರೋಪವಾಗಿದೆ.
ಮನೆ-ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸುವ ಅವಧಿ ಈಗಾಗಲೇ ಮುಕ್ತಾಯವಾಗಿದ್ದು, ಮೇ 30ರಿಂದ ವಿಶೇಷ ಶಿಬಿರದ ಸಮೀಕ್ಷೆ ನಡೆಯಲಿದೆ. ಸಮೀಕ್ಷೆದಾರರು ಮನೆ ಭೇಟಿ ಸಂದರ್ಭದಲ್ಲಿ ಜಾತಿ ಹೇಳಿಕೊಳ್ಳಲಾಗದವರು, ಮನೆಯಲ್ಲಿ ಇಲ್ಲದೇ ಇರುವವರು ವಿಶೇಷ ಶಿಬಿರದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎನ್ನುವುದು ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರ ಅಭಿಪ್ರಾಯವಾಗಿದೆ.
ಜು.31ರವರೆಗೆ ಆಯೋಗದ ಅವಧಿ ವಿಸ್ತರಣೆ
ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಒಳಮೀಸಲಾತಿ ನೀಡುವ ಕುರಿತು (ಎಂಪಿರಿಕಲ್ ಡೇಟಾ) ದತ್ತಾಂಶಗಳನ್ನು ನೀಡುವ ಶಿಫಾರಸಿಗಾಗಿ ರಚನೆಯಾಗಿದ್ದ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ವಿಚಾರಣಾ ಆಯೋಗದ ಅವಧಿಯನ್ನು ಜೂ.1ರಿಂದ, ಜು.31ರವರೆಗೆ (ಎರಡು ತಿಂಗಳು) ವಿಸ್ತರಿಸಲಾಗಿದೆ.
25.50 ಲಕ್ಷ ಮನೆಗಳಲ್ಲಿ ಸಮೀಕ್ಷೆ
ರಾಜ್ಯದಲ್ಲಿ ಇದುವರೆಗೂ ಸುಮಾರು 25.50 ಲಕ್ಷ ಮನೆಗಳ ಸಮೀಕ್ಷೆ ಮಾಡಲಾಗಿದೆ. ಮನೆ-ಮನೆ ಸಮೀಕ್ಷೆ ಮುಕ್ತಾಯವಾಗಿದ್ದು, ಶಿಬಿರಗಳ ಸಮೀಕ್ಷೆ ಪ್ರಾರಂಭವಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಸಮೀಕ್ಷೆಯ ಅವಧಿಯನ್ನು ವಿಸ್ತರಿಸುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡಲಾಗುವುದು. ರಾಜ್ಯದ ಬಹುತೇಕ ಕಡೆ ಶೇ.90ರಷ್ಟು ಸಮೀಕ್ಷೆ ಕೆಲಸವಾಗಿದೆ ಎಂದು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ತಿಳಿಸಿದ್ದಾರೆ.