Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪರದೆಯ ಹಿಂದಿನ ಅಮಾನುಷತೆಯನ್ನು...

ಪರದೆಯ ಹಿಂದಿನ ಅಮಾನುಷತೆಯನ್ನು ತೆರೆದಿಡುವ ‘ಒಡಲ ತುಡಿತಕ್ಕೆ ಕೇಡು’

ನಾ. ದಿವಾಕರನಾ. ದಿವಾಕರ16 Jun 2025 11:56 AM IST
share
ಪರದೆಯ ಹಿಂದಿನ ಅಮಾನುಷತೆಯನ್ನು ತೆರೆದಿಡುವ ‘ಒಡಲ ತುಡಿತಕ್ಕೆ ಕೇಡು’

2008ರಲ್ಲಿ ಪ್ರಕಟವಾಗಿದ್ದ ಮಂಜುನಾಥ್ ಅದ್ದೆ ಅವರ ‘ಒಡಲ ತುಡಿತಕ್ಕೆ ಕೇಡು’ ಎಂಬ ಸಂಶೋಧನಾತ್ಮಕ-ಮಾಹಿತಿಪೂರ್ಣ-ದತ್ತಾಂಶ ಆಧಾರಿತ ಕೃತಿಯು ಹೆಣ್ಣು ಭ್ರೂಣ ಶಿಶು ಹೇಗೆ ಭಾರತೀಯ ಸಮಾಜದ ಅವಕೃಪೆಗೆ ಪಾತ್ರವಾಗಿದೆ ಎನ್ನುವುದನ್ನು ವಿವರಿಸುತ್ತದೆೆ. ಐದು ದಶಕಗಳಿಗೂ ಹೆಚ್ಚು ಕಾಲ ಮಹಿಳಾ ಸಬಲೀಕರಣಕ್ಕಾಗಿ, ಹಕ್ಕುಗಳಿಗಾಗಿ ಅಹರ್ನಿಶಿ ಹೋರಾಡುತ್ತಾ ಬಂದಿರುವ ‘ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ’ ಪ್ರಕಟಿಸಿರುವ ಈ ಕೃತಿಯನ್ನು 17 ವರ್ಷಗಳ ನಂತರ ಮರು ಮುದ್ರಿಸಲಾಗಿದೆ.

ವಿಮೋಚನಾ ಸಂಘಟನೆಯ ಅಧ್ಯಯನದಲ್ಲಿ ಕ್ಷೇತ್ರಕಾರ್ಯ ನಡೆಸಿ ಅದಕ್ಕೆ ಅಕ್ಷರ ರೂಪ ಕೊಡುವ ಮೂಲಕ ಅದ್ದೆ ಅವರು ನಮ್ಮ್ಮೊಳಗಿನ ಒಂದು ಕ್ರೂರ ಸಮಾಜವನ್ನು ತೆರೆದಿಟ್ಟಿದ್ದಾರೆ. ಹತ್ತು ಅಧ್ಯಾಯಗಳಲ್ಲಿ ವಿಸ್ತರಿಸಿರುವ ಈ ಅಧ್ಯಯನ ಕೃತಿ ಈ ಶತಮಾನದ ಮೊದಲ ದಶಕದಲ್ಲಿ ನಡೆಸಿದ (2001) ಸಮೀಕ್ಷೆಯನ್ನು ಆಧರಿಸಿದ್ದರೂ, ಕಡೆಯ ಎರಡು ಅಧ್ಯಾಯಗಳಲ್ಲಿ ಇತ್ತೀಚಿನ ಪಾಂಡವಪುರ-ಮಂಡ್ಯ ಜಿಲ್ಲೆಯ ಪ್ರಕರಣಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಮೊದಲನೇ ಅಧ್ಯಾಯದಲ್ಲಿ ಜಾಗತಿಕ ನೋಟದ ಮೂಲಕ ಹೇಗೆ ಬುಡಕಟ್ಟು ಸಮುದಾಯಗಳು ಸೇರಿದಂತೆ ಎಲ್ಲ ಸಮಾಜಗಳಲ್ಲೂ ಹೆಣ್ಣು ವರ್ಜಿತಳಾಗಿ ಕಾಣುತ್ತಾಳೆ ಎಂಬ ಅಂಶವನ್ನು ಚಾರಿತ್ರಿಕ ವಾಸ್ತವಗಳ ನಡುವೆ ಅದ್ದೆ ವಿವರಿಸುತ್ತಾರೆ. ಈ ನಿರೂಪಣೆಯಲ್ಲಿ ಸ್ತ್ರೀವಾದ ಒಂದೇ ಅಲ್ಲದೆ, ಮಾರ್ಕ್ಸ್‌ವಾದಿ ಚಿಂತನೆ ಮತ್ತು ಪಿತೃಪ್ರಧಾನತೆಯ ಒಳಸೂಕ್ಷ್ಮಗಳು ಇಡೀ ಕೃತಿಯ ಮೆರುಗು ಹೆಚ್ಚಿಸುತ್ತದೆ.

ಎರಡನೇ ಅಧ್ಯಾಯದಲ್ಲಿ ಭಾರತದ ಚಿತ್ರಣವನ್ನು ಕಟ್ಟಿಕೊಡುವ ಅದ್ದೆ ಅವರು ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಹಿಂದೂ ಸಮಾಜ ಹೆಣ್ಣಿನ ಮೇಲೆ ವಿಧಿಸುವ ನಿರ್ಬಂಧಗಳನ್ನು, ಬೇಲಿಗಳನ್ನು ತಾತ್ವಿಕ ನೆಲೆಯಲ್ಲಿ ಚರ್ಚೆಗೊಳಪಡಿಸುತ್ತಾರೆ. ಭಾರತೀಯ ಸಮಾಜದ ವೈಶಿಷ್ಟ್ಯ ಇರುವುದು, ಹೆಣ್ಣಿನ ಸಾಮಾಜಿಕ-ಸಾಂಸ್ಕೃತಿಕ ಸ್ಥಾನಮಾನವನ್ನು ನಿರ್ಧರಿಸಲು ಎರಡಂಚಿನ ಕತ್ತಿಯನ್ನು ಬಳಸುವುದರಲ್ಲಿ. ಪುರುಷ ಪ್ರಧಾನ ಮೌಲ್ಯಗಳನ್ನು ಜಾತಿ ವ್ಯವಸ್ಥೆ ಶ್ರೇಷ್ಠತೆಯ ನೆಲೆಯಲ್ಲಿ ಹಾಗೂ ಜಾತಿ ಪ್ರಾಬಲ್ಯದ ಯಜಮಾನಿಕೆಯಲ್ಲಿ ಹೇರಿದರೆ, ಧರ್ಮದ ನೆಲೆಯಲ್ಲಿ ಧಾರ್ಮಿಕ ಸಂಹಿತೆಗಳನ್ನು ಅವಲಂಬಿಸಲಾಗುತ್ತದೆ. ಮನುಸ್ಮತಿಯ ಉದಾಹರಣೆಗಳನ್ನು ನೀಡುವ ಮೂಲಕ ಅದ್ದೆ ಅವರು ಇದನ್ನು ಸ್ಪಷ್ಟೀಕರಿಸುವುದು ಅಧ್ಯಯನಶೀಲತೆಯ ಕ್ಷಮತೆಯ ದ್ಯೋತಕವಾಗಿ ಕಾಣುತ್ತದೆ. ವಿವಿಧ ರಾಜ್ಯಗಳ ಲಿಂಗಾನುಪಾತದ ಅಂಕಿಸಂಖ್ಯೆಗಳನ್ನು ನೀಡುವ ಮೂಲಕ ಈ ಅಧ್ಯಯನಕ್ಕೆ ತಾತ್ವಿಕ ನೆಲೆ ಒದಗಿಸುತ್ತಾರೆ. (ಪುಟ 15 -16-17 )..

ಇದೇ ಅಧ್ಯಾಯದ ಎರಡನೇ ಭಾಗದಲ್ಲಿ ದಕ್ಷಿಣ ಭಾರತದ ಚಿತ್ರಣವನ್ನು ಕಟ್ಟಿಕೊಡುವ ಲೇಖಕರು ಈ ಪ್ರದೇಶದಲ್ಲಿ ಲಿಂಗಾನುಪಾತ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಸಕಾರಾತ್ಮಕವಾಗಿ ಕಂಡರೂ, ಆರ್ಥಿಕವಾಗಿ-ಶೈಕ್ಷಣಿಕವಾಗಿ ಮುಂದುವರಿದ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಲಿಂಗಾನುಪಾತ ಕುಸಿಯುತ್ತಿರುವುದನ್ನು ದತ್ತಾಂಶಗಳ ಮೂಲಕ ವಿವರಿಸಿದ್ದಾರೆ (ಪುಟ21). ದುರಂತ ಎಂದರೆ ಭಾರತದಲ್ಲಿ ತನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚರಿತ್ರೆಯಲ್ಲಿ, ಸಮಾಜ ಸುಧಾರಣೆಯನ್ನು 12ನೇ ಶತಮಾನದಲ್ಲೇ, ಬಸವ-ಅಲ್ಲಮರ ಮತ್ತಿತರರ ವಚನ ಚಳವಳಿಯ ಹಿನ್ನೆಲೆಯಲ್ಲಿ, ಕಂಡಿದ್ದ ಕರ್ನಾಟಕ ಹೆಣ್ಣು ಭ್ರೂಣ-ಶಿಶು ಹತ್ಯೆಯಲ್ಲಿ ಅಗ್ರಸ್ಥಾನ ಪಡೆದಿರುವುದು. ಹಾಗೂ ಇದು ದಿನೇದಿನೇ ಹೆಚ್ಚಾಗುತ್ತಿರುವುದು ಇಲ್ಲಿನ ಅಂಕಿಅಂಶಗಳು ಸೂಚಿಸುತ್ತವೆ. (ಪುಟ 25).

ಇದೇ ಅಧ್ಯಾಯದ ಮುಂದುವರಿಕೆಯಾಗಿ ಏಳು ತಾಲೂಕುಗಳ ಚಿತ್ರಣವನ್ನೂ ನೀಡಿರುವುದು ಸಾಮಾಜಿಕ-ಆರ್ಥಿಕ ನೆಲೆಯಲ್ಲಿ ಹೆಣ್ಣು ಭ್ರೂಣ-ಶಿಶುಹತ್ಯೆಯ ವಿದ್ಯಮಾನವನ್ನು ಪರಾಮರ್ಶಿಸಲು ನೆರವಾಗುತ್ತದೆ. ಮೂರನೇ ಮತ್ತು 4ನೇ ಅಧ್ಯಾಯದಲ್ಲಿ ಮಂಡ್ಯ ಜಿಲ್ಲೆಯ ಮಹಿಳೆಯರ ಬದುಕು ಮತ್ತು ಸ್ಥಾನಮಾನವನ್ನು ಒರೆಹಚ್ಚಿ ನೋಡುವ ಲೇಖಕರು ಕಳೆದ ಒಂದು ಶತಮಾನದಲ್ಲಿ ಈ ಜಿಲ್ಲೆ ಕಂಡಂತಹ ನೀರಾವರಿ ಸೌಕರ್ಯ, ಕೈಗಾರಿಕಾ ಅಭಿವೃದ್ಧಿಯು ಹೆಣ್ಣು ಜೀವದ ಅಸ್ತಿತ್ವವನ್ನು ಕಾಪಾಡಲು ಸಾಧ್ಯವಾಗಿಲ್ಲ ಎನ್ನುವುದನ್ನು ದತ್ತಾಂಶಗಳ ಮೂಲಕ ಪ್ರಮಾಣೀಕರಿಸುತ್ತಾರೆ. ಪ್ರಗತಿಪರ ಚಳವಳಿಗಳಲ್ಲಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಈ ಜಿಲ್ಲೆ ಈ ದಿಕ್ಕಿನಲ್ಲಿ ಏಕೆ ದೂರಗಾಮಿ ಆಲೋಚನೆಗಳಿಗೆ ತೆರೆದುಕೊಂಡಿಲ್ಲ ಎನ್ನುವ ಜಿಜ್ಞಾಸೆಗೆ ಈ ಅಧ್ಯಾಯ ಮತ್ತಷ್ಟು ಜಟಿಲ ಪ್ರಶ್ನೆಗಳನ್ನು ಸೇರಿಸುತ್ತದೆ.

5ನೇ ಅಧ್ಯಾಯದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಕಾರಣ-ಪರಿಣಾಮಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಚರ್ಚಿಸುವ ಲೇಖಕರು, ಆಧುನಿಕ ಜೀವನಶೈಲಿ, ನಗರೀಕರಣ ಮತ್ತು ಈ ಪ್ರಕ್ರಿಯೆಗಳಿಗೆ ತೆರೆದುಕೊಂಡಿರುವ ಗ್ರಾಮೀಣ ಜನರೂ ಸಹ, ರೈತ ಸಮುದಾಯವನ್ನೂ ಒಳಗೊಂಡಂತೆ, ಹೇಗೆ ಅದ್ದೂರಿ ಮದುವೆ ಮತ್ತಿತರ ಸಮಾರಂಭಗಳಿಗಾಗಿ ಹಾಗೂ ಹೆಣ್ಣುಮಕ್ಕಳ ಪೋಷಕರು ಗಂಡು ಸಮಾಜದ ವರದಕ್ಷಿಣೆಯ ಒತ್ತಡಗಳಿಂದ ದುಬಾರಿ ವೆಚ್ಚದ ಮದುವೆಗಳನ್ನು ಏರ್ಪಡಿಸುತ್ತಾರೆ ಎಂಬುದನ್ನು ವಿಷದವಾಗಿ ವ್ಯಾಖ್ಯಾನಿಸಿದ್ದಾರೆ. ಭೂಮಿಯ ಒಡೆತನ ಮತ್ತು ಗಂಡುಮಕ್ಕಳ ಸಿರಿವಂತಿಕೆ ಸಮಾಜದಲ್ಲಿ ವರದಕ್ಷಿಣೆ ಎಂಬ ನಿಷೇಧಿತ ವ್ಯಾಧಿಯನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವುದನ್ನು ಪ್ರಮಾಣೀಕರಿಸುತ್ತಾ, 6ನೇ ಅಧ್ಯಾಯದಲ್ಲಿ ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಹೇಗೆ ದುರ್ಬಳಕೆ ಮಾಡಲಾಗುತ್ತಿದೆ ಮತ್ತು ವೈದ್ಯರೂ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಹೇಗೆ ತಮ್ಮ ವಿದ್ಯೆ, ಜ್ಞಾನ ಮತ್ತು ಅರಿವನ್ನು ಸ್ವಾರ್ಥಕ್ಕಾಗಿ ಬಳಸುವುದೇ ಅಲ್ಲದೆ, ಹೆಣ್ಣು ಜೀವದ ವಿನಾಶಕ್ಕಾಗಿ ಬಳಸುತ್ತಿದ್ದಾರೆ ಎನ್ನುವುದನ್ನು ಸಂಯಮದಿಂದ ಹೇಳಿದ್ದಾರೆ.

ವ್ಯವಸ್ಥೆಯ ಮೌನ ಮತ್ತು ತಣ್ಣನೆಯ ಕ್ರೌರ್ಯ

7ನೇ ಅಧ್ಯಾಯದಲ್ಲಿ ಸರಕಾರದ ನೀತಿಗಳ ಪರಾಮರ್ಶೆ ಮಾಡಲಾಗಿದೆ. ಯಾವುದೇ ಸರಕಾರದ ನಿಕಟವರ್ತಿಗಳಾಗಿಯೇ ಇರುವ ವಾಣಿಜ್ಯೋದ್ಯಮಿಗಳು, ಕಾರ್ಪೊರೇಟ್ ಆಸ್ಪತ್ರೆಗಳು ಹೇಗೆ ಜನಸಾಮಾನ್ಯರನ್ನು ವಂಚಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿವೆ, ಇದು ತಿಳಿದಿದ್ದರೂ ಸರಕಾರಗಳು ಹೇಗೆ ದಿವ್ಯ ನಿರ್ಲಕ್ಷ್ಯ ವಹಿಸಿವೆ ಎನ್ನುವುದನ್ನು ಮಂಜುನಾಥ್ ಅದ್ದೆ ಸರಳವಾದರೂ ನಿಷ್ಠುರ ಭಾಷೆಯಲ್ಲಿ ಅರುಹಿದ್ದಾರೆ. ಪಿಎನ್‌ಡಿಟಿ ಕಾಯ್ದೆಯ ಅನುಷ್ಠಾನದಲ್ಲಿ ಇರುವ ಕೊರತೆ ಮತ್ತು ಲೋಪಗಳನ್ನೂ ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಿದ್ದಾರೆ. 8ನೇ ಅಧ್ಯಾಯದಲ್ಲಿ ವಿಮೋಚನಾ ಸಂಘಟನೆ ಇತರ ಮಹಿಳಾ ಸಂಘಟನೆಗಳೊಂದಿಗೆ ನಡೆಸಿದ ಹೆಣ್ಣು ಭ್ರೂಣ ಹತ್ಯೆ ವಿರೋಧಿ ಹೋರಾಟದ ಸಂಕ್ಷಿಪ್ತ ಹಿನ್ನೋಟ ಇದೆ. ಕಡೆಯದಾಗಿ 9ನೇ ಅಧ್ಯಾಯದಲ್ಲಿ ಮಂಡ್ಯ ಜಿಲ್ಲೆಯ ಆಲೆಮನೆಗಳಲ್ಲಿ ನಡೆದ 900 ಹೆಣ್ಣು ಭ್ರೂಣ ಹತ್ಯೆಯ ಪ್ರಕರಣದ ವಿವರಗಳನ್ನು ಸೇರ್ಪಡಿಸಲಾಗಿದೆ.

ಈ ಅಧ್ಯಾಯದಲ್ಲಿ ಒದಗಿಸಲಾಗಿರುವ ಲಿಂಗಾನುಪಾತದ ಅಂಕಿಅಂಶಗಳು ಬಹಳ ಉಪಯುಕ್ತವಾಗಿವೆ. ರಾಜ್ಯವಾರು ಹಾಗೂ ಕರ್ನಾಟಕದಲ್ಲಿ ಜಿಲ್ಲಾವಾರು ದತ್ತಾಂಶಗಳನ್ನು 2022ರವರೆಗೂ ನೀಡಲಾಗಿದ್ದು, ಕರ್ನಾಟಕದಲ್ಲಿ ಕೊಂಚ ಸುಧಾರಿತವಾಗಿ ಕಂಡುಬಂದರೂ, ಇದು ಅಧಿಕೃತ ದಾಖಲಾದ ಪ್ರಕರಣಗಳನ್ನು ಮಾತ್ರ ಬಿಂಬಿಸುತ್ತವೆ. ಅನಧಿಕೃತವಾಗಿ ನಡೆಯುವ ಹೆಣ್ಣು ಭ್ರೂಣ ಹತ್ಯೆಯನ್ನು ಪರಿಶೋಧಿಸುವ ಜವಾಬ್ದಾರಿ ಇಡೀ ನಾಗರಿಕ ಸಮಾಜದ ಮೇಲಿದೆ. ವಿಮೋಚನಾ ಸಂಘಟನೆ ಇಟ್ಟಿರುವ ಹೆಜ್ಜೆ ಕೇವಲ ಮಹಿಳಾ ಸಂಘಟನೆಗಳ ಕರ್ತವ್ಯವಷ್ಟೇ ಅಲ್ಲ. ಇದು ದೇಶದ ಪ್ರಗತಿ, ಸಂವಿಧಾನ ರಕ್ಷಣೆ ಮತ್ತು ಸಾಂವಿಧಾನಿಕ ಆಶಯಗಳಾದ ಸಮಾನತೆಯನ್ನು ಸಾಧಿಸಲು ಶ್ರಮಿಸುತ್ತಿರುವ ಎಲ್ಲ ಸಂಘಟನೆಗಳ ಆದ್ಯತೆಯಾಗಬೇಕಿದೆ. ಲೇಖಕ ಮಂಜುನಾಥ್ ಅದ್ದೆ ತಮ್ಮ ಅಧ್ಯಯನಕ್ಕಾಗಿ 2001ರ ಜನಗಣತಿಯನ್ನು ಅವಲಂಬಿಸಿರುವುದನ್ನು ಗಮನಿಸಿ, ವರ್ತಮಾನ ಭಾರತದಲ್ಲಿ ಹೆಣ್ಣು ಜೀವದ ರಕ್ಷಣೆಗಾಗಿ ಮಾರ್ಗೋಪಾಯಗಳನ್ನು ಗುರುತಿಸಬೇಕಿದೆ.

‘ಒಡಲ ತುಡಿತಕ್ಕೆ ಕೇಡು’ ಕೃತಿಯು ಒಂದು ಅತ್ಯಮೂಲ್ಯ ಆಕರವನ್ನು ಒದಗಿಸಿದ್ದು, 17 ವರ್ಷಗಳ ಕಾಲ ಅಜ್ಞಾತದಲ್ಲಿದ್ದುದೇ ನಮ್ಮನ್ನು ಆತ್ಮಾವಲೋಕನಕ್ಕೆ ದೂಡಬೇಕಿದೆ. ನಿತ್ಯ ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಬಹಿಷ್ಕಾರಗಳನ್ನು ಎದುರಿಸುತ್ತಿರುವ ಹೆಣ್ಣು ಸಂಕುಲವನ್ನು ರಕ್ಷಿಸುವ ನಿಟ್ಟಿನಲ್ಲಿ, ಜೀವ ತಳೆಯುವ ಮುನ್ನವೇ ಬುಡದಲ್ಲೇ ಹೊಸಕಿ ಹಾಕುವ ಹೆಣ್ಣು ಭ್ರೂಣ ಹತ್ಯೆ ಎಂಬ ಪಾಶವಿ ಕೃತ್ಯಕ್ಕೆ ಅಂತ್ಯ ಹಾಡುವ ಸಂಕಲ್ಪದೊಂದಿಗೆ ಮಹಿಳಾ ಚಳವಳಿಗಳು, ಎಡಪಕ್ಷಗಳು, ಪ್ರಗತಿಪರ ಸಂಘಟನೆಗಳು ಹಾಗೂ ಬಹುಮುಖ್ಯವಾಗಿ ಕಾರ್ಮಿಕ-ರೈತ ಸಂಘಟನೆಗಳು ಕ್ರಿಯಾಶೀಲವಾಗಿ ಕಾರ್ಯಯೋಜನೆಗಳನ್ನು ರೂಪಿಸಬೇಕಿದೆ. ಅಂಕಿ ಸಂಖ್ಯೆಗಳನ್ನು ದಾಟಿ, ವಿಶಾಲ ಸಮಾಜದತ್ತ ದೃಷ್ಟಿ ನೆಟ್ಟಾಗ ನಮಗೆ ಗೋಚರಿಸುವಂತಹ ಮಹಿಳಾ ದೌರ್ಜನ್ಯಗಳ ವಿರುದ್ಧ ನಾಗರಿಕ ಜಗತ್ತು ಧ್ವನಿ ಎತ್ತುವುದು ವರ್ತಮಾನ ಭಾರತದ ತುರ್ತು.

ಈ ನಿಟ್ಟಿನಲ್ಲಿ ‘ಒಡಲ ತುಡಿತಕ್ಕೆ ಕೇಡು’ ಕೃತಿಯು ನಮ್ಮೊಳಗಿನ ಹೋರಾಟದ ಕಿಚ್ಚನ್ನು ಮತ್ತಷ್ಟು ಕ್ರಿಯಾಶೀಲವಾಗಿಸುತ್ತದೆ.

share
ನಾ. ದಿವಾಕರ
ನಾ. ದಿವಾಕರ
Next Story
X