Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತದ ಸ್ವಾತಂತ್ರ್ಯ ಮತ್ತು ಆರ್ಥಿಕ...

ಭಾರತದ ಸ್ವಾತಂತ್ರ್ಯ ಮತ್ತು ಆರ್ಥಿಕ ಸಾರ್ವಭೌಮತೆ

ಟಿ.ಆರ್. ಭಟ್ಟಿ.ಆರ್. ಭಟ್15 Aug 2025 9:51 AM IST
share
ಭಾರತದ ಸ್ವಾತಂತ್ರ್ಯ ಮತ್ತು ಆರ್ಥಿಕ ಸಾರ್ವಭೌಮತೆ
ಅಮೆರಿಕದ ಹೊಸ ಸುಂಕ ನೀತಿಯ ಪ್ರಭಾವ ► ಆರ್ಥಿಕ ಸ್ವಾತಂತ್ರ್ಯ

ಪಂಡಿತ್ ನೆಹರೂ ಯುಗದಲ್ಲಿ ಅಂದಿನ ಸೋವಿಯತ್ ರಶ್ಯ ಮತ್ತು ಅಮೆರಿಕದ ಬಂಡವಾಳಶಾಹಿ ಕೂಟಗಳಿಂದ ದೂರವಿದ್ದು ಅಲಿಪ್ತ ರಾಷ್ಟ್ರಗಳ ಒಕ್ಕೂಟವನ್ನು ಸ್ಥಾಪಿಸಿ ಅಂತರ್‌ರಾಷ್ಟ್ರೀಯ ರಂಗದಲ್ಲಿ ಗೌರವಕ್ಕೆ ಭಾಗಿಯಾದ ಭಾರತಕ್ಕೆ ಅದೇ ತರದ ಮುತ್ಸದ್ದಿತನ ಇಂದು ಅಗತ್ಯವಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ನೀತಿಯು ಅಂತರ್‌ರಾಷ್ಟ್ರೀಯ ವಾಣಿಜ್ಯ ರಂಗದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ರಶ್ಯದ ಮೇಲೆ ಅಮೆರಿಕ ಹೇರಿದ ಆರ್ಥಿಕ ದಿಗ್ಬಂಧನವನ್ನು ಕಡೆಗಣಿಸಿ ಭಾರತವು ಅಲ್ಲಿಂದ ಕಚ್ಚಾ ತೈಲ ಮತ್ತು ಯುದ್ಧಸಾಮಗ್ರಿಗಳನ್ನು ಆಮದು ಮಾಡುವ ಕ್ರಮಕ್ಕೆ ದಂಡವಾಗಿ ನಮ್ಮಲ್ಲಿಂದ ಅಮೆರಿಕಕ್ಕೆ ರಫ್ತುಗೊಳ್ಳುವ ಸಾಮಗ್ರಿಗಳ ಮೇಲೆ ಶೇ. 50 ಸುಂಕವನ್ನು ಹೇರಿದ್ದಾರೆ. ಅವರ ಏಕಪಕ್ಷೀಯ ನಿರ್ಧಾರಗಳು ಜಗತ್ತಿನ ಅನೇಕ ದೇಶಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮವನ್ನು ಬೀರಲಿವೆ, ಮಾತ್ರವಲ್ಲ ಅವುಗಳ ಆರ್ಥಿಕ ಪರಮಾಧಿಕಾರಕ್ಕೂ ಹೊಡೆತ ನೀಡುತ್ತಿವೆ. ಈ ನೀತಿಯಿಂದಾಗಿ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಸುಗಮಗೊಳಿಸಲು ಹುಟ್ಟಿದ ವಿಶ್ವ ವಾಣಿಜ್ಯ ಸಂಘದ ಭವಿಷ್ಯದ ಬಗ್ಗೆ ಕಾರ್ಮೋಡ ಮುಸುಕಿದೆ. ಟ್ರಂಪ್ ಅವರ ನಿರ್ಧಾರಗಳಿಗೆ ವಿಶ್ವ ಸಂಘವೂ ಅಲ್ಲದೆ ಅದರ ಸದಸ್ಯ ದೇಶಗಳು ತೀವ್ರವಾದ ಆಕ್ಷೇಪವನ್ನು ಎತ್ತಿವೆ. ಅಮೆರಿಕದಲ್ಲಿಯೇ ತಜ್ಞರು ಹೊಸ ನೀತಿಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.

ವಿಶ್ವ ವಾಣಿಜ್ಯ ಸಂಘದ ಹುಟ್ಟು ಮತ್ತು ಉದ್ದೇಶ

ಜಾಗತೀಕರಣದ ಹೊಸ್ತಿಲಲ್ಲಿ ದೇಶಗಳ ನಡುವೆ ಮುಕ್ತ ವ್ಯಾಪಾರವನ್ನು ಪ್ರೋತ್ಸಾಹಿಸಲು 1948ರಿಂದ ಜಾರಿಯಲ್ಲಿದ್ದ ಸುಂಕ ಮತ್ತು ವ್ಯಾಪಾರದ ಸಾಮಾನ್ಯ ಒಪ್ಪಂದ (GATT) ದ ಉತ್ತರಾಧಿಕಾರಿಯಾಗಿ ವಿಶ್ವ ವಾಣಿಜ್ಯ ಸಂಘ (ವಿವಾಸಂ) 1995ರಲ್ಲಿ ಹುಟ್ಟಿಕೊಂಡಿತು. 166 ದೇಶಗಳು ಈ ಸಂಸ್ಥೆಯ ಸದಸ್ಯರು. ಇಡೀ ವಿಶ್ವದ ಒಟ್ಟು ಆದಾಯದ ಶೇ. 98ರಷ್ಟನ್ನು ಈ ದೇಶಗಳು ಉತ್ಪಾದಿಸುತ್ತವೆ.

ಮುಕ್ತ ವ್ಯಾಪಾರದಿಂದ ಪ್ರತೀ ದೇಶದ ಪ್ರಜೆಗಳ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವೆಂಬುದು ಪ್ರಗತಿ ಹೊಂದಿದ ದೇಶಗಳ ವಾದವಾಗಿತ್ತು. ಆದರೆ ಎಲ್ಲ ದೇಶಗಳಿಗೂ ತಮ್ಮದೇ ಆದ ಭೌಗೋಳಿಕ, ಆರ್ಥಿಕ ಮತ್ತು ಸಾಮಾಜಿಕ ವೈಶಿಷ್ಟ್ಯವಿರುವುದರಿಂದ, ಅವುಗಳನ್ನು ಸಂರಕ್ಷಿಸಲು ಮತ್ತು ದೇಶೀಯ ಆರ್ಥಿಕತೆಯನ್ನು ಉತ್ತೇಜಿಸಲು ಅಂತರ್‌ರಾಷ್ಟ್ರೀಯ ವ್ಯಾಪಾರವನ್ನು ಕೆಲವೊಂದು ನಿರ್ಬಂಧಗಳಿಗೆ ಒಳಪಡಿಸಬೇಕಾಗಿತ್ತು. ಈ ಕಾರಣಕ್ಕಾಗಿ ಪ್ರತಿಯೊಂದು ದೇಶವೂ ತಾನು ಆಮದು ಮಾಡುವ ಸರಕು ಮತ್ತು ಸೇವೆಗಳ ಮೇಲೆ ಸುಂಕಗಳನ್ನು ಮತ್ತು ಆಮದಿನ ಮೇಲೆಯೇ ನಿರ್ಬಂಧಗಳನ್ನು ಹೇರುವ ಹಕ್ಕು ವಿವಾಸಂನ ನೀತಿಯಲ್ಲಿ ಅಡಕವಾಗಿದೆ, ಅದು ಸಾರ್ವಭೌಮತೆಯ ಸಂಕೇತವೂ ಆಗಿದೆ. ಆದರೆ ಆ ಹೇರುವಿಕೆಯು ಬಹುಪಕ್ಷೀಯ ಚರ್ಚೆ ಮತ್ತು ಒಪ್ಪಂದಗಳ ಚೌಕಟ್ಟಿನಲ್ಲಿ ಆಗಬೇಕು. ಯಾವುದೇ ದೇಶವು ತನಗೆ ಇಷ್ಟ ಬಂದಂತೆ ಸುಂಕವನ್ನು ಹೇರುವುದು ವಿವಾಸಂನ ನೀತಿಗೆ ವಿರುದ್ಧವಾಗುತ್ತದೆ.

ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ

ಸುಮಾರು ಎರಡು ಶತಮಾನಗಳ ಕಾಲ ಬಿಳಿಯರ ವಸಾಹತು ಆಗಿದ್ದ ಭಾರತವು ಸ್ವತಂತ್ರವಾದಾಗ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸಾರ್ವಭೌಮತ್ವವನ್ನು ಬೆಳೆಸಿಕೊಂಡು ಕಾಪಾಡುವ ಅಗತ್ಯವನ್ನು ಅಂದಿನ ರಾಷ್ಟ್ರನಾಯಕರು ಮನಗಂಡಿದ್ದರು. ಈ ದೃಷ್ಟಿಕೋನಕ್ಕೆ ಅನುಗುಣವಾಗಿ ನಮ್ಮ ಆರ್ಥಿಕ ನೀತಿಗಳನ್ನು ರೂಪಿಸಿಕೊಳ್ಳಲಾಯಿತು. ಆರ್ಥಿಕ ನೀತಿಗಳ ಗುರಿ ಸಮಷ್ಟಿಯ ಹಿತವನ್ನು ಸಾಧಿಸುವುದಾಗಿತ್ತು. ಸಾಧ್ಯವಾದಷ್ಟು ರಂಗಗಳಲ್ಲಿ ಸ್ವಾವಲಂಬನೆ, ಆಹಾರ ಭದ್ರತೆ, ಉದ್ಯೋಗ ಸೃಷ್ಟಿ, ಕೌಶಲ್ಯ ವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ ಮುಂತಾದ ಕಾರ್ಯಕ್ರಮಗಳಿಗೆ ಪ್ರಾಶಸ್ತ್ಯ ನೀಡಿದ ಹೊಸ ಭಾರತವು, ಅಂತರ್‌ರಾಷ್ಟ್ರೀಯ ಸಹಕಾರಕ್ಕೂ ಒತ್ತು ಕೊಟ್ಟು ವಿಭಿನ್ನ ಸಂಸ್ಥೆಗಳ ಸದಸ್ಯದೇಶವಾಯಿತು. ಪರಸ್ಪರ ಸಹಕಾರ ಮತ್ತು ಸಮಾನತೆಯ ಆಧಾರದಲ್ಲಿ ಅಮೆರಿಕ, ರಶ್ಯ, ಐರೋಪ್ಯ ಹಾಗೂ ಇನ್ನಿತರ ಅನೇಕ ದೇಶಗಳ ಜೊತೆ ವಾಣಿಜ್ಯ ನೀತಿಯನ್ನು ತನಗೆ ಅಗತ್ಯವಾದ ರೀತಿಯಲ್ಲಿ ರೂಪಿಸಿಕೊಂಡಿತು. ಆರ್ಥಿಕ ಸಾರ್ವಭೌಮತೆ ಇಲ್ಲದ ರಾಜಕೀಯ ಪರಮಾಧಿಕಾರವು ಸಮಷ್ಟಿಯ ಹಿತವನ್ನು ಕಾಪಾಡಲು ಸಾಧ್ಯವಿಲ್ಲ ಎಂಬ ತತ್ವ ಈ ನೀತಿಯ ತಳಹದಿಯಾಗಿತ್ತು.

ಆರ್ಥಿಕ ಸಾರ್ವಭೌಮತೆಗೆ ಧಕೆ್ಕ

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯ ಮತ್ತು ಆರ್ಥಿಕ ವ್ಯವಹಾರಗಳು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ. ಕೆಲವು ಕೈಗಾರಿಕೋತ್ಪನ್ನಗಳನ್ನು ನಾವು ಬೇರೆ ದೇಶದಿಂದ ಆಮದು ಮಾಡಬೇಕಾಗುತ್ತದೆ. ನಮ್ಮಲ್ಲಿ ಗುಣಮಟ್ಟದ ತಂತ್ರಜ್ಞಾನದ ಕೊರತೆ, ಕಚ್ಚಾ ವಸ್ತುಗಳ ಅಭಾವ, ಹಕ್ಕುಸ್ವಾಮ್ಯದ ನಿರ್ಬಂಧ-ಹೀಗೆ ವಿಭಿನ್ನ ಕಾರಣಗಳಿಂದಾಗಿ ಹಲವು ವಸ್ತುಗಳನ್ನು ನಾವು ಉತ್ಪಾದಿಸಲು ಸಾಧ್ಯವಾಗದೆ ಅವುಗಳ ಪೂರೈಕೆಗೆ ಬೇರೆ ದೇಶವನ್ನು ಅವಲಂಬಿಸಬೇಕಾಗುತ್ತದೆ.

ಉದಾಹರಣೆಗಾಗಿ, ನಮ್ಮಲ್ಲಿ ಕಚ್ಚಾ ತೈಲದ ಉತ್ಪತ್ತಿ ಸಾಕಷ್ಟಿಲ್ಲ; ಅದನ್ನು ಆಮದು ಮಾಡಲೇಬೇಕಾದ ಅನಿವಾರ್ಯತೆ ನಮ್ಮ ದೇಶಕ್ಕಿದೆ. ಅತ್ಯಂತ ಕಡಿಮೆ ದರದಲ್ಲಿ ಯಾವ ದೇಶವು ಅದನ್ನು ನಮಗೆ ಒದಗಿಸಲು ಸಿದ್ಧವಿದೆಯೋ ಅದರೊಂದಿಗೆ ನಾವು ಸಾರ್ವಭೌಮ ರಾಷ್ಟ್ರವಾಗಿ ಒಪ್ಪಂದ ಮಾಡಿಕೊಂಡು ತೈಲವನ್ನು ಆಮದುಮಾಡಿಕೊಳ್ಳುವುದು ವಿವೇಕಯುತ ನಿರ್ಧಾರ.

ನಮ್ಮ ದೇಶದ ರೈತರ ರಕ್ಷಣೆಗೆ ಅಗತ್ಯವಾದ ನಿರ್ಬಂಧಗಳನ್ನು ಕೃಷ್ಯುತ್ಪನ್ನಗಳ ಆಮದಿನ ಮೇಲೆ ಹೇರುವ ಅಧಿಕಾರವು ಸರಕಾರಕ್ಕೆ ಇದೆ. ಟ್ರಂಪ್ ಅವರ ಪ್ರಕಾರ ಅಮೆರಿಕದ ಕೃಷಿ ಆಧಾರಿತ ಉತ್ಪನ್ನಗಳ ಆಯಾತದ ಮೇಲೆ ಭಾರತವು ಹಾಕಿರುವ ನಿರ್ಬಂಧಗಳನ್ನು ತೆಗೆಯಬೇಕು. ಈ ಬೇಡಿಕೆಯು ದೇಶದ ಕೃಷಿಗೆ ಹಾನಿಕಾರಕ, ಮಾತ್ರವಲ್ಲ ಆಂತರಿಕ ಅರ್ಥನೀತಿಯಲ್ಲಿ ನಮ್ಮ ಸರಕಾರದ ಪರಮಾಧಿಕಾರವನ್ನು ಮೊಟಕುಗೊಳಿಸುವ ಒಂದು ಕ್ರಮ.

ಮತ್ತೊಂದು ಉದಾಹರಣೆ ಎಂದರೆ ರಕ್ಷಣಾ ಸಾಮಗ್ರಿಗಳ ಆಮದು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಯುದ್ಧೋಪಕರಣಗಳು ದೇಶದ ರಕ್ಷಣೆಗೆ ಅಗತ್ಯ. ಅವುಗಳನ್ನು ದೇಶದಲ್ಲಿಯೇ ತಯಾರಿಸುವಷ್ಟು ಕೌಶಲ ನಮ್ಮಲ್ಲಿ ಇನ್ನೂ ಬೆಳೆದಿಲ್ಲ. ಹಾಗಾಗಿ ಮುಂದುವರಿದ ರಾಷ್ಟ್ರಗಳಿಂದ ನಾವು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಈ ವಿಷಯದಲ್ಲಿಯೂ ಟ್ರಂಪ್ ಅವರ ಇಬ್ಬಂದಿತನವು ಸ್ಪಷ್ಟ: ಬೋಯಿಂಗ್ ವಿಮಾನಗಳನ್ನು ಅಮೆರಿಕದಿಂದ ಭಾರತ ಆಮದು ಮಾಡಿಕೊಳ್ಳಬಹುದು; ಆದರೆ ಯುದ್ಧವಿಮಾನಗಳನ್ನು ರಶ್ಯದಿಂದ ಪಡಕೊಳ್ಳಬಾರದು ಎಂದು ಅವರ ‘ತೀರ್ಮಾನ’!

ಭಾರತದಂತಹ ಪ್ರಗತಿಶೀಲ ರಾಷ್ಟ್ರಗಳು ತಮ್ಮ ದೇಶಗಳೊಳಗಿನ ಉದ್ದಿಮೆಗಳ ಬೆಳವಣಿಗೆಗೋಸ್ಕರ, ರಾಜಸ್ವವನ್ನು ಹೆಚ್ಚಿಸಲು ಮತ್ತು ಅಂತರ್‌ರಾಷ್ಟ್ರೀಯ ವ್ಯಾಪಾರದಲ್ಲಿ ಖೋತವಾಗುವ ಸಂದರ್ಭದಲ್ಲಿ ಸುಂಕಗಳನ್ನು ಹೆಚ್ಚಿಸುವ ಪರಮಾಧಿಕಾರವನ್ನು ಹೊಂದಿವೆ. ಅಷ್ಟು ಮಾತ್ರವಲ್ಲ, ವಿದೇಶಿ ಕಂಪೆನಿಗಳ ಸ್ಪರ್ಧೆಯಿಂದಾಗಬಹುದಾದ ಹಾನಿಯನ್ನು ತಪ್ಪಿಸಲು, ಹೊಸ ಹೊಸ ರಂಗಗಳಲ್ಲಿ ಹುಟ್ಟಿದ ಉದ್ದಿಮೆಗಳನ್ನು ರಕ್ಷಿಸಲು ರಕ್ಷಣಾ ಸುಂಕ (Protective tariffs)ಗಳನ್ನು ಹೇರುವ ಹಕ್ಕು ಅವಕ್ಕಿವೆ.

ಒಂದು ದೇಶದ ಆರ್ಥಿಕ ನೀತಿಗಳನ್ನು ಹೇಗೆ ರೂಪಿಸಬೇಕೆಂಬುದು ಆ ದೇಶದ ಪರಮಾಧಿಕಾರದ ಪರಿಧಿಯೊಳಗೆ ಸೇರಿಕೊಂಡಿದೆ. ಅದನ್ನು ಪ್ರಶ್ನಿಸಿ, ನಮ್ಮ ಮೇಲೆ ದಂಡ ವಿಧಿಸುವುದು ನಮ್ಮ ಪರಮಾಧಿಕಾರವನ್ನು ಕಿತ್ತುಕೊಳ್ಳುವ ಒಂದು ಕ್ರಮವಾಗುತ್ತದೆ. ಅದನ್ನು ಯಾವುದೇ ದೇಶವೂ ಸಹಿಸಲು ಸಾಧ್ಯವಿಲ್ಲ.

ಸದಸ್ಯ ದೇಶದ ಆರ್ಥಿಕ ಪರಮಾಧಿಕಾರವನ್ನು ವಿಶ್ವ ವಾಣಿಜ್ಯ ಸಂಘವು ಕೂಡ ಒಪ್ಪಿಕೊಂಡಿದೆ. ಅದು ಯಾವುದಾದರೂ ಹೊಸ ನೀತಿಯನ್ನು ರೂಪಿಸುವ ಮೊದಲು ಹಲವು ಹಂತಗಳಲ್ಲಿ ಸದಸ್ಯದೇಶಗಳೊಂದಿಗೆ ವಿಸ್ತೃತ ಚರ್ಚೆ ನಡೆಯುತ್ತದೆ. ಒಮ್ಮತಕ್ಕೆ ಬಂದ ಮೇಲೆ ಹೊಸ ನೀತಿಯ ಕರಡು ತಯಾರಾಗುತ್ತದೆ. ಆ ಬಳಿಕ ಅದು ಆಯಾಯ ದೇಶದ ಸಂಸತ್ತಿನಲ್ಲಿ ಚರ್ಚೆಯಾಗಿ ಅನುಮೋದನೆಗೊಂಡರೆ ಮಾತ್ರ ಆ ದೇಶ ಹೊಸ ನೀತಿಗೆ ಬಾಧ್ಯವಾಗುತ್ತದೆ. ಸದಸ್ಯ ದೇಶಗಳ ಸಾರ್ವಭೌಮತೆಗೆ ಸಂಘವು ಗೌರವ ನೀಡುತ್ತದೆ. ಟ್ರಂಪ್ ಅವರ ಧೋರಣೆ ಇದಕ್ಕೆ ತೀರಾ ವಿರುದ್ಧವಾಗಿದೆ.

ರಶ್ಯ-ಭಾರತದ ಬಾಂಧವ್ಯಕ್ಕೆ ಅನೇಕ ದಶಕಗಳ ಹಿನ್ನೆಲೆಯಿದೆ. ಇದನ್ನು ಗಮನದಲ್ಲಿಟ್ಟು, ನಮ್ಮ ಸೈನ್ಯಗಳಿಗೆ ಅಗತ್ಯವಾದ ಯುದ್ಧೋಪಕರಣಗಳನ್ನು ಮತ್ತು ದೇಶಕ್ಕೆ ಬೇಕಾದ ಕಚ್ಚಾ ತೈಲವನ್ನು ರಶ್ಯದಿಂದ ಭಾರತವು ಕಡಿಮೆ ಬೆಲೆಯಲ್ಲಿ ಆಮದುಮಾಡಿಕೊಳ್ಳುತ್ತದೆ. ಈಗ, ಉಕ್ರೇನ್-ರಶ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತವು ರಶ್ಯದ ಜೊತೆ ತಾನು ನಡೆಸುತ್ತಿರುವ ವಾಣಿಜ್ಯವ್ಯವಹಾರವನ್ನು ಕಡಿತಗೊಳಿಸಬೇಕೆಂದು ಅಮೆರಿಕ ಫರ್ಮಾನು ಹೊರಡಿಸಿದೆ. ರಶ್ಯದೊಂದಿಗೆ ನಮ್ಮ ಆರ್ಥಿಕ ವ್ಯವಹಾರವು ಹೇಗಿರಬೇಕೆಂಬುದು ದೇಶದ ಸಾರ್ವಭೌಮತೆಗೆ ಒಳಪಟ್ಟಿದೆ. ಅಮೆರಿಕವಾಗಲೀ, ಇನ್ನೊಂದು ದೇಶವಾಗಲೀ ಈ ಬಗ್ಗೆ ನಿರ್ದೇಶನ ನೀಡುವ ಅಧಿಕಾರ ಹೊಂದಿಲ್ಲ.

ವರದಿಗಳ ಪ್ರಕಾರ ರಶ್ಯದಿಂದ ಅಮೆರಿಕವೇ ಬೇರೆ ಬೇರೆ ಸರಕುಗಳನ್ನು (ಉದಾಹರಣೆಗೆ ರಸಗೊಬ್ಬರ) ಆಮದು ಮಾಡಿಕೊಳ್ಳುತ್ತದೆ; ಐರೋಪ್ಯ ದೇಶಗಳು ಕಚ್ಚಾ ತೈಲವನ್ನು ಕೊಂಡುಕೊಳ್ಳುತ್ತವೆ. ಭಾರತವು ಆಮದು ಮಾಡಿದ ಯುದ್ಧ ಸಾಮಗ್ರಿಗಳಿಂದ ಸಂಪಾದಿಸಿದ ಹಣವನ್ನು ಉಕ್ರೆನ್‌ನಲ್ಲಿ ಜನರನ್ನು ಕೊಲ್ಲಲು ರಶ್ಯ ಬಳಸುತ್ತಿದೆ ಎಂದು ಟ್ರಂಪ್ ಅವರ ಆರೋಪ. ಆದರೆ ಅಮೆರಿಕ ರಫ್ತು ಮಾಡುವ ಯುದ್ಧಸಾಮಗ್ರಿಗಳನ್ನು ಇಸ್ರೇಲ್ ಗಾಝಾದಲ್ಲಿ ನರಸಂಹಾರಕ್ಕೆ ಉಪಯೋಗಿಸುತ್ತಿದೆ ಎಂಬುದು ಸರ್ವವಿದಿತ.

ಮುತ್ಸದ್ದಿತನದ ಅಗತ್ಯ

ಭಾರತದ ಪ್ರಧಾನಿ ಮೋದಿಯವರು ‘ನನ್ನ ಆತ್ಮೀಯ ಸ್ನೇಹಿತ’ ನೆಂದು ಹೇಳಿಕೊಂಡೇ ಭಾರತದಿಂದ ಬರುವ ಸರಕುಗಳ ಮೇಲೆ ಸುಂಕಗಳನ್ನು ಏಕಪಕ್ಷೀಯವಾಗಿ ಏರಿಸುವ ಮೂಲಕ ಅಧ್ಯಕ್ಷ ಟ್ರಂಪ್ ಬಿಳಿಯರ ವಸಾಹತುವಾದಿ ಮನೋಧರ್ಮವನ್ನು ಮತ್ತೆ ಬಿಚ್ಚಿಟ್ಟಿದ್ದಾರೆ. ಅವರ ನೀತಿಯು ಭಾರತದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆಯನ್ನುಂಟುಮಾಡುವುದಲ್ಲದೆ ಆರ್ಥಿಕತೆಗೆ ಬಲವಾದ ಪೆಟ್ಟು ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಹಾಗಾದಲ್ಲಿ ಸ್ವಾತಂತ್ರ್ಯವು ಅರ್ಥಹೀನವಾಗುತ್ತದೆ.

ಇಂದಿನ ಪರಿಸ್ಥಿತಿಯಲ್ಲಿ ಮೋದಿ ಸರಕಾರವು ದೇಶದ ಹಿತಾಸಕ್ತಿಗಳ ರಕ್ಷಣೆಗೆ ಕಟಿಬದ್ಧವಾಗಬೇಕು. ಅದು ನಮ್ಮ ಸಾರ್ವಭೌಮತೆಯ ಸಂಕೇತ ಕೂಡ. ಮುಂದಿನ ವರ್ಷಗಳಲ್ಲಿ ದೇಶದ ಸ್ವಾವಲಂಬನೆಗೆ ಇನ್ನಷ್ಟು ಉತ್ತೇಜನ ನೀಡಬೇಕಿದೆ.

ಜಗತ್ತಿನ ಇತರ ದೇಶಗಳ ಮೇಲೆಯೂ ಸುಂಕದ ಮೂಲಕ ಸಮರವನ್ನು ಘೋಷಿಸಿದ ಅಮೆರಿಕವನ್ನು ಎದುರಿಸಲು, ಪ್ರಗತಿಶೀಲ ರಾಷ್ಟ್ರಗಳು ಒಟ್ಟು ಸೇರಿ ಸಾಮೂಹಿಕವಾದ ನಿಲುವನ್ನು ಕೈಗೊಳ್ಳುವ ಅಗತ್ಯ ಇಂದಿದೆ. ಪಂಡಿತ್ ನೆಹರೂ ಯುಗದಲ್ಲಿ ಅಂದಿನ ಸೋವಿಯತ್ ರಶ್ಯ ಮತ್ತು ಅಮೆರಿಕದ ಬಂಡವಾಳಶಾಹಿ ಕೂಟಗಳಿಂದ ದೂರವಿದ್ದು ಅಲಿಪ್ತ ರಾಷ್ಟ್ರಗಳ ಒಕ್ಕೂಟವನ್ನು ಸ್ಥಾಪಿಸಿ ಅಂತರ್‌ರಾಷ್ಟ್ರೀಯ ರಂಗದಲ್ಲಿ ಗೌರವಕ್ಕೆ ಭಾಗಿಯಾದ ಭಾರತಕ್ಕೆ ಅದೇ ತರದ ಮುತ್ಸದ್ದಿತನ ಇಂದು ಅಗತ್ಯವಿದೆ.


share
ಟಿ.ಆರ್. ಭಟ್
ಟಿ.ಆರ್. ಭಟ್
Next Story
X