ಅಣುಶಕ್ತಿ ರಾಷ್ಟ್ರಗಳ ನಿದ್ದೆಗೆಡಿಸಿದ್ದ ಭಾರತ

‘‘ನಾವು ಹುಲ್ಲು ತಿಂದಾದರೂ ಬದುಕುತ್ತೇವೆ. ಆದರೆ ಭಾರತವನ್ನು ಎದುರಿಸಲು ಪರಮಾಣು ಶಕ್ತಿ ಸ್ಥಾಪನೆಗೆ ವೆಚ್ಚ ಮಾಡುತ್ತೇವೆ’’.
1974ರ ಮೇ 18ರಂದು ‘ಆಪರೇಷನ್ ಸ್ಮೈಲಿಂಗ್ ಬುದ್ಧ’ ಎನ್ನುವ ಹೆಸರಿನಡಿ ಮೊತ್ತಮೊದಲ ಪರಮಾಣು ಶಕ್ತಿ ಪರೀಕ್ಷೆಯನ್ನು ರಾಜಸ್ಥಾನದ ಪೊಖ್ರಾನ್‌ನಲ್ಲಿ ಭಾರತವು ಕೈಗೊಂಡಾಗ ಪಾಕಿಸ್ತಾನದ ಆಗಿನ ಪ್ರಧಾನಿಯಾಗಿದ್ದ ಝುಲ್ಫಿಕರ್ ಅಲಿ ಭುಟ್ಟೊ ಪ್ರತಿಕ್ರಿಯಿಸಿದ್ದು ಹೀಗೆ. ಇದು ಕೇವಲ ಮಾತಷ್ಟೇ ಆಗಿರಲಿಲ್ಲ. ಮುಂದಿನ ವರ್ಷವೇ ಪಾಕ್ ಸರಕಾರವು ಪರಮಾಣು ಶಕ್ತಿ ಸ್ಥಾಪನೆಗೆ ಅಣಿ ಕೂಡ ಆಯಿತು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಈಚೆಗೆ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಉಗ್ರರ ಹುಟ್ಟಡಗಿಸಲು ಹೊರಟ ಭಾರತೀಯ ಸೇನೆಗೆ ಪಾಕ್ ಸೇನೆ ಅನಗತ್ಯ ತೊಂದರೆ ಕೊಟ್ಟಿತು. ಒಂದೆಡೆ ‘ನಾವು ಉಗ್ರರನ್ನು ಬೆಂಬಲಿಸುತ್ತಿಲ್ಲ’ ಎಂದು ಹೇಳಿಕೊಳ್ಳುತ್ತಲೇ ಇರುವ ಪಾಕಿಸ್ತಾನ, ಇತ್ತ ಉಗ್ರರ ಮೇಲಿನ ದಾಳಿಗೆ ಸೇನೆಯ ಮೂಲಕ ಪ್ರತಿದಾಳಿ ಮಾಡಿ ತಮ್ಮದೇ ಹೇಳಿಕೆಗೆ ವಿರುದ್ಧ ನಡೆದುಕೊಂಡಿದೆ. ಹಾಗಾಗಿ ಭಾರತೀಯ ಸೇನೆ ಹಾಗೂ ಪಾಕ್ ಉಗ್ರರ ನಡುವಿನ ಸಂಘರ್ಷ ಈಗ ಎರಡೂ ರಾಷ್ಟ್ರಗಳ ಸೇನಾ ಸಂಘರ್ಷವಾಗಿ ಮಾರ್ಪಟ್ಟು, ಕೊನೆಗೆ ಕದನ ವಿರಾಮವೂ ಆಗಿ, ಪಾಕಿಸ್ತಾನದಿಂದ ಕದನ ವಿರಾಮದ ಉಲ್ಲಂಘನೆಯೂ ಆಯಿತು.
ಪಾಕ್ ಪ್ರಧಾನಿ ಶಹಬಾಝ್ ಶರೀಫ್, ‘‘ನಾವು ಭಾರತದ ದಾಳಿಯನ್ನು ಹಿಮ್ಮಟ್ಟಿಸಿದ್ದೇವೆ. ಇದು ನಮ್ಮ ಗೆಲುವು’’ ಎಂದೆಲ್ಲ ಹೇಳಿಕೆ ನೀಡಿದ್ದಾರೆ. ಜೊತೆಗೆ ‘ಚೀನಾ ನಮ್ಮ ಬೆಂಬಲಕ್ಕಿದೆ’ ಎನ್ನುವುದನ್ನು ಉಲ್ಲೇಖಿಸಲು ಮರೆಯಲಿಲ್ಲ. ಕದನ ವಿರಾಮದ ನಂತರ ‘ಎಕ್ಸ್’ನಲ್ಲಿ ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊಗೆ ಧನ್ಯವಾದ ತಿಳಿಸಿದ್ದಾರೆ. ಒಟ್ಟಿನಲ್ಲಿ ಅಮೆರಿಕವನ್ನು ಎತ್ತಿ ಮೇಲಿಟ್ಟದ್ದು ಬಿಟ್ಟರೆ ಆ ಟ್ವೀಟ್‌ನಲ್ಲಿ ಬೇರೇನೂ ಇರಲಿಲ್ಲ. ಇದು ಜಗತ್ತಿನ ಕಣ್ಣಿಗೆ ಹೇಗೆ ಕಾಣಬೇಕೋ ಹಾಗೆಯೇ ಕಂಡಿರುತ್ತದೆ.
ಈ ನಡುವೆ ಕದನ ವಿರಾಮದ ಘೋಷಣೆ ಕುರಿತಂತೆ ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ಮೊದಲು ಮಾಹಿತಿ ನೀಡಿದ್ದರು. ಟ್ರಂಪ್ ಎಂತಹ ಕುತಂತ್ರ ಬುದ್ಧಿಯ ಮನುಷ್ಯ ಎನ್ನುವುದಕ್ಕೆ ಅವರ ಆ ಟ್ವೀಟ್ ಸಾಕ್ಷಿ. ಕದನ ವಿರಾಮಕ್ಕೆ ಒಪ್ಪಿದ ಭಾರತ ಹಾಗೂ ಪಾಕಿಸ್ತಾನಕ್ಕೆ ಶುಭ ಕೋರಿ ತಮ್ಮ ಟ್ವೀಟ್‌ನಲ್ಲಿ, ‘ಕಾಮನ್ ಸೆನ್ಸ್ ಬಳಸಿಕೊಂಡು ಎರಡೂ ರಾಷ್ಟ್ರಗಳು ಕದನ ವಿರಾಮ ಒಪ್ಪಿದ್ದಕ್ಕೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ. ಅಮೆರಿಕ ಜಗತ್ತಿನ ದೊಡ್ಡಣ್ಣ ಆಗುವುದೇ ಹೀಗೆ. ಇತರರನ್ನು ಹಳಿಯುತ್ತ, ಜಗತ್ತಿಗೆ ತಾನು ಸಂಭಾವಿತ ಎಂದು ತೋರಿಸಿಕೊಳ್ಳುವ ಕೆಲವರಿರುತ್ತಾರೆ. ಅಮೆರಿಕ ಮಾಡುತ್ತಿರುವುದು ಅದೇ ಕೆಲಸ. ಟ್ರಂಪ್ ಟ್ವೀಟ್ ಮಾಡಿದ್ದಾರೆ ಎಂದರೆ ಇಡೀ ಜಗತ್ತು ಖಂಡಿತ ನೋಡುತ್ತದೆ. ಅದರ ಅರಿವಿದ್ದುಕೊಂಡೇ ಭಾರತದ ಕುರಿತು ‘ಕಾಮನ್ ಸೆನ್ಸ್’ನ ಮಾತನಾಡಿ, ಭಾರತಕ್ಕೆ ವಿಶ್ವದ ಮುಂದೆ ಅವಮಾನ ಮಾಡಿಬಿಟ್ಟಿದ್ದಾರೆ. ದೇಶಕ್ಕೆ ಈ ಪರಿಸ್ಥಿತಿ ತಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೊಣೆ ಮಾಡಬೇಕಾಗುತ್ತದೆ. ಕದನ ವಿರಾಮ ಘೋಷಣೆಗೆ ಟ್ರಂಪ್‌ನ ಅಗತ್ಯವಾದರೂ ಏನಿತ್ತು? ಇನ್ನೂ ಕೂಡ ಭಾರತ ಅಮೆರಿಕವನ್ನು ಎದುರಿಸಿ ನಿಲ್ಲಬಲ್ಲ ಪ್ರಭಾವಶಾಲಿ ರಾಷ್ಟ್ರ ಎಂದು ತೋರಿಸಿಕೊಡಲು ಶಕ್ತವಾಗಿಲ್ಲವೇ? ಅಷ್ಟಕ್ಕೂ ನಮ್ಮ ದೇಶದ ವಿಷಯದಲ್ಲಿ ಮುಖ್ಯ ಪಾತ್ರ ವಹಿಸುವುದಕ್ಕೆ ಡೊನಾಲ್ಡ್ ಟ್ರಂಪ್ ಯಾರು? ಆತ ನಮ್ಮ ದೇಶದ ಮಾರ್ಗದರ್ಶಕನೇ? ‘ಆಟ’ವನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟ ಭಾರತ ಹಾಗೂ ಪಾಕ್ ಈ ಎರಡೂ ರಾಷ್ಟ್ರಗಳ ಪ್ರಧಾನಿಗಳ ನಡೆಯಲ್ಲಿ ಅಡಗಿರುವ ರಾಜಕೀಯ ಏನು ಎಂಬುದು ಬಯಲಾಗಬೇಕಿದೆ.
ಭಾರತದಲ್ಲಿ ಪೊಖ್ರಾನ್-2 ಪರಮಾಣು ಶಕ್ತಿ ಪರೀಕ್ಷೆ ನಡೆದು ಮೇ 11ಕ್ಕೆ ಸರಿಯಾಗಿ 37 ವರ್ಷಗಳು ಸಲ್ಲುತ್ತವೆ. 1988ರ ಮೇ 11ರಂದು ಬೆಳಗ್ಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಿಸೈಲ್ ಪರಿಣತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ವಿಜ್ಞಾನಿಗಳ ತಂಡ ರಾಜಸ್ಥಾನದ ಪೊಖ್ರಾನ್‌ನಲ್ಲಿ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಪರಮಾಣು ಶಕ್ತಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದರು. ಈ ಮೂಲಕ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ನಿಲ್ಲಬಲ್ಲದು ಎನ್ನುವುದನ್ನು ಮತ್ತೆ ಸಾರಿದರು.
ಇದಕ್ಕಿಂತ ಹಿಂದೆ, ಅಂದರೆ 1974ರಲ್ಲಿ ಭಾರತದ ಮೊತ್ತಮೊದಲ ಪರಮಾಣು ಶಕ್ತಿ ಪರೀಕ್ಷೆ ‘ಆಪರೇಷನ್ ಸ್ಮೈಲಿಂಗ್ ಬುದ್ಧ’ ಎನ್ನುವ ಹೆಸರಿನಲ್ಲಿ ಇದೇ ಪೊಖ್ರಾನ್‌ನಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ನಡೆದಿತ್ತು. ಆಗ ವಿಜ್ಞಾನಿಗಳ ತಂಡದಲ್ಲಿ ಡಾ. ಹೋಮಿ ಎನ್.ಸೇಠ್ನಾ, ಡಾ. ರಾಜಾ ರಾಮಣ್ಣ, ಆರ್.ಚಿದಂಬರಂ ಮುಖ್ಯ ಪಾತ್ರ ವಹಿಸಿದ್ದರು. ಈ ಪರೀಕ್ಷೆ ಅಮೆರಿಕ ಹಾಗೂ ಕೆನಡಾ ರಾಷ್ಟ್ರಗಳನ್ನು ಬೆಕ್ಕಸ ಬೆರಗಾಗಿಸಿತ್ತು. ಗೌಪ್ಯವಾಗಿ, ಯಾವುದೇ ಸಣ್ಣ ಸುಳಿವು ಕೂಡ ನೀಡದೆ ಭಾರತ ಈ ಕೆಲಸ ಮಾಡಿದ್ದು ಅವೆರಡು ರಾಷ್ಟ್ರಗಳಿಗೆ ಅಸಮಾಧಾನ ತಂದಿತ್ತು. ಅವರ ಅಸಮಾಧಾನಕ್ಕೆ ಮುಖ್ಯ ಕಾರಣವೊಂದಿತ್ತು. ಅದು ಭಾರತ ಕೆನಡಾಕ್ಕೆ ಕೊಟ್ಟಿದ್ದ ಮಾತು ಮುರಿದ ಬಗ್ಗೆ. ವಿಜ್ಞಾನ, ಸಂಶೋಧನೆಗಳ ‘ಶಾಂತಿಯುತ’ ಬಳಕೆಗಾಗಿ ಅಮೆರಿಕದ ಸಹಕಾರದೊಂದಿಗೆ ಕೆನಡಾ ಕೊಟ್ಟಿದ್ದ ‘ರಿಯಾಕ್ಟರ್’ ಅನ್ನು ಭಾರತ ಪರಮಾಣು ಶಕ್ತಿ ತಯಾರಿಕೆಗೆ ಬಳಸಿದ್ದು ತಪ್ಪು ಹಾಗೂ ಕೊಟ್ಟ ಮಾತು ಉಲ್ಲಂಘಿಸಿ ನಡೆದುಕೊಂಡಿದೆ ಎಂದು ಆರೋಪ ಮಾಡಿತು. ಆದರೆ ಅದು ಹೇಳಿ ಕೇಳಿ ಇಂದಿರಾ ಗಾಂಧಿ ಯುಗ. ಭಾರತವು ‘ಶಾಂತಿಯುತ ಪರಮಾಣು ಸ್ಫೋಟ’(ಪಿಎನ್‌ಟಿ) ಎನ್ನುವ ಹೆಸರಿಟ್ಟುಕೊಂಡು ಪರಮಾಣು ಪರೀಕ್ಷೆ ನಡೆಸುವ ಮೂಲಕ, ತಾನು ‘ಶಾಂತಿಯುತ’ವಾಗಿಯೇ ಬಳಸಿದ್ದಾಗಿ ಸಮರ್ಥಿಸಿಕೊಂಡಿತು. ವಾಸ್ತವ ಏನೆಂದರೆ ಇಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವಾಗಿ ಬೆಳೆಯದಂತೆ ಅಮೆರಿಕ ಹದ್ದಿನ ಕಣ್ಣಿಟ್ಟು ಕಾಯುತ್ತಿತ್ತು. ಹಾಗಿರುವಾಗ ಹೀಗೊಂದು ಬೆಳವಣಿಗೆ ನಡೆಯುತ್ತದೆ ಎಂದು ಅಮೆರಿಕ ಊಹಿಸಿಯೇ ಇರಲಿಲ್ಲ. ಇಂತಹ ವಾತಾವರಣದಲ್ಲಿ ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯ ದೃಷ್ಟಿಯಿಂದ, ‘ಕೊಟ್ಟ ಮಾತು ತಪ್ಪುವುದು’ ಭಾರತಕ್ಕೆ ನಗಣ್ಯ ವಿಚಾರವೇ ಆಗಿತ್ತು.
ಸ್ವತಂತ್ರವಾಗಿ ನ್ಯೂಕ್ಲಿಯರ್ ಶಕ್ತಿ ಸ್ಥಾಪನೆಗೆ ಶಕ್ತ ಎಂದು ತೋರಿಸಿಕೊಡುವ ಮೂಲಕ ಭಾರತ ಬಲಶಾಲಿ ರಾಷ್ಟ್ರಗಳ ಸಾಲಿಗೆ ಸೇರುತ್ತಿದೆ ಎನ್ನುವುದು ಕೆಲವು ಪ್ರಭಾವಿ ರಾಷ್ಟ್ರಗಳಿಗೆ ನುಂಗಲಾರದ ತುತ್ತಾಗಿ ಹೋಯಿತು. ಭಾರತದ ಈ ಬೆಳವಣಿಗೆ ಮುಂದೆ ವಿಶ್ವದಲ್ಲಿ ನ್ಯೂಕ್ಲಿಯರ್ ಸಪ್ಲೈಯರ್ ಗ್ರೂಪ್(ಎನ್‌ಎಸ್‌ಜಿ) ರಚನೆಗೂ ಕಾರಣವಾಯಿತು. ಸದ್ಯ ಅಮೆರಿಕ, ಜಪಾನ್, ಕೆನಡಾ, ರಶ್ಯ, ಯು.ಕೆ., ಫ್ರಾನ್ಸ್, ಚೀನಾ ಸೇರಿದಂತೆ 48 ದೇಶಗಳು ಸದಸ್ಯತ್ವ ಹೊಂದಿವೆ. ಆದರೆ ಯಾವ ದೇಶ ಈ ಸಂಘ ಸ್ಥಾಪನೆಗೆ ಕಾರಣವಾಯಿತೋ ಅದೇ ದೇಶಕ್ಕೆ ಈ ಸಂಘದ ಸದಸ್ಯತ್ವ ಪಡೆಯಲು ಆಗದೆ ಇರುವುದು ದುರಂತ. ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯದ ಹಾಗೆ ತಡೆಯೊಡ್ಡುತ್ತಿರುವ ಪ್ರಮುಖ ರಾಷ್ಟ್ರವೆಂದರೆ ಅದು ಚೀನಾ. ಈ ವಿಚಾರವನ್ನೂ, ಪಹಲ್ಗಾಮ್ ದಾಳಿ, ಪಾಕ್ ಬೆನ್ನಿಗೆ ನಿಂತು ಬೆಂಬಲ ನೀಡುವುದನ್ನೂ ತಾಳೆ ಹಾಕಿ ನೋಡಿದಾಗ ಭಾರತದ ನಿಜವಾದ ಶತ್ರು ಯಾರು ಎಂಬುದನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಎನ್‌ಎಸ್‌ಜಿ ಸದಸ್ಯತ್ವ ಸಿಕ್ಕಿದರೆ ಭಾರತಕ್ಕೆ ಅಣ್ವಸ್ತ್ರ ತಯಾರಿಕೆಗೆ ಬೇಕಾದ ಹಲವು ರೀತಿಯ ಅನುಕೂಲಗಳನ್ನು ಪಡೆಯಲು ಸಾಧ್ಯವಾಗುತ್ತದೆ.
‘ಆಪರೇಷನ್ ಸ್ಮೈಲಿಂಗ್ ಬುದ್ಧ’ ಕಾರ್ಯಾಚರಣೆಯನ್ನು ಪೊಖ್ರಾನ್-1’ ಎಂದು, ’ಆಪರೇಷನ್ ಶಕ್ತಿ’ಯನ್ನು ‘ಪೊಖ್ರಾನ್ -2’ ಎಂದು ಕೂಡ ಕರೆಯಲಾಗುತ್ತದೆ. ಮುಂಬೈನ ಟ್ರಾಂಬೆ ಎಂಬಲ್ಲಿರುವ ಬಾರ್ಕ್ (ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರ) ಈ ಎಲ್ಲ ವಿಜ್ಞಾನ ಪ್ರಯೋಗಗಳ ಹಿಂದಿನ ಶಕ್ತಿ. ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತದ ಅನಿರೀಕ್ಷಿತ ಬೆಳವಣಿಗೆ ದೊಡ್ಡ ಎಚ್ಚರ ಹಾಗೂ ಅಚ್ಚರಿ ಉಂಟುಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನೆರೆಯ ಪಾಕಿಸ್ತಾನಕ್ಕೆ ಇದು ದೊಡ್ಡ ಹೊಡೆತವನ್ನೇ ಕೊಟ್ಟಿತು. ಅದೇ ಕಾರಣಕ್ಕೆ ನೋಡಿ ಝುಲ್ಫಿಕರ್ ಅಲಿ ಭುಟ್ಟೊ ‘ಹುಲ್ಲು ತಿನ್ನುವ’ ಹೇಳಿಕೆ ನೀಡಿದ್ದು. ಅಮೆರಿಕ ಸೇರಿದಂತೆ ಹಲವು ಬಲಿಷ್ಠ ರಾಷ್ಟ್ರಗಳು ಪಾಕಿಸ್ತಾನದ ಮೇಲೆ ನ್ಯೂಕ್ಲಿಯರ್ ಶಕ್ತಿ ಸ್ಥಾಪನೆ ಮಾಡುವಂತೆ ಒತ್ತಡ ಹೇರಿದವು. ಈಗಿನ ಅಮೆರಿಕದ ಕುತಂತ್ರಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆಗಿನ ಅಮೆರಿಕ ಭಾರತದೊಂದಿಗೆ ನಡೆದುಕೊಂಡಿದ್ದ ರೀತಿಯನ್ನು ಅರ್ಥೈಸಬೇಕಿದೆ.
ಅಮೆರಿಕ ವಿಶ್ವಕ್ಕೆ ದೊಡ್ಡಣ್ಣನಾಗಿ ಉಳಿಯಲು ಸದಾಕಾಲ ಶ್ರಮಿಸುತ್ತದೆ. ಅದಕ್ಕಾಗಿ ಏನು ಬೇಕಾದರೂ ಮಾಡುತ್ತದೆ. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ, ನಾಗಸಾಕಿ ಮಹಾನಗರಗಳ ಮೇಲೆ ನ್ಯೂಕ್ಲಿಯರ್ ದಾಳಿ ಮಾಡಿದ್ದರ ಹಿಂದಿನ ಉದ್ದೇಶ ಕೇವಲ ಅವರನ್ನು ಶರಣಾಗುವಂತೆ ಮಾಡುವುದಷ್ಟೇ ಆಗಿರಲಿಲ್ಲ. ಇತರ ರಾಷ್ಟ್ರಗಳಿಗೆ ತನ್ನ ಶಕ್ತಿ ಪ್ರದರ್ಶನವನ್ನು ಮಾಡುವ ಉದ್ದೇಶವೂ ಇತ್ತು. ಹಾಗಾಗಿ ಅದು ತನ್ನ ನಡೆಯನ್ನು ಏಕೆ ಮತ್ತು ಹೇಗೆ ತೆಗೆದುಕೊಳ್ಳುತ್ತದೆ ಹಾಗೂ ಬದಲಿಸುತ್ತದೆ ಎನ್ನುವುದನ್ನು ಮನಗಾಣಬೇಕು.
ಆ ಮೂರು ‘ಅಸಹಜ’ ಸಾವುಗಳು
ಬಾರ್ಕ್ ಮೊದಲೇ ಬಾರ್ಕ್ ಆಗಿರಲಿಲ್ಲ. 1954ರಲ್ಲಿ ಅದರ ಆರಂಭವಾದಾಗ, ‘ಪರಮಾಣು ಶಕ್ತಿ ಸ್ಥಾಪನೆ ಕೇಂದ್ರ’ ಎಂದು ಹೆಸರಿಡಲಾಗಿತ್ತು. 1966ರಲ್ಲಿ ಅದರ ಸಂಸ್ಥಾಪಕ, ಖ್ಯಾತ ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಭಾಭಾ ಅವರ ನಿಧನದ ನಂತರ ‘ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರ’ ಎಂದು ಮರುನಾಮಕರಣ ಮಾಡಲಾಯಿತು. ಹೋಮಿ ಭಾಭಾ ಕೇವಲ ತಮ್ಮ 56 ವರ್ಷ ವಯಸ್ಸಿಗೆ 1966ರ ಜನವರಿ 24ರಂದು ಫ್ರಾನ್ಸ್ ನಲ್ಲಿ ಸಂಭವಿಸಿದ ವಿಮಾನ ದುರಂತವೊಂದರಲ್ಲಿ ಸಾವನ್ನಪ್ಪಿದರು. ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ಆಯೋಜಿಸಲಾಗಿದ್ದ ಅಣುಶಾಸ್ತ್ರಕ್ಕೆ ಸಂಬಂಧಿಸಿದ ಸಮಾವೇಶದಲ್ಲಿ ಭಾಗವಹಿಸಲು ಹೊರಟಿದ್ದರು. 100ಕ್ಕೂ ಅಧಿಕ ಜನರನ್ನು ಬಲಿ ಪಡೆದ ಈ ದುರಂತ ಹಾಗೂ ಅದರಲ್ಲಿ ಹೋಮಿ ಭಾಭಾ ಅವರ ಸಾವು ಸಂಭವಿಸಿದ್ದು ಇಂದಿಗೂ ‘ಅಸಹಜ’ ಎಂದೇ ಪರಿಗಣಿತವಾಗಿದೆ. ಅಷ್ಟೇ ಅಲ್ಲ ಅವರ ಸಾವಿನ ಹಿಂದೆ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ(ಸಿಐಎ) ಕೈವಾಡ ಇತ್ತು ಎಂಬ ಗುರುತರ ಆರೋಪ ಈಗಲೂ ಇದೆ. ನೆನಪಿರಲಿ ಆ ದಿನವೇ ಇಂದಿರಾ ಗಾಂಧಿಯವರು ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈ ಅನುಮಾನಕ್ಕೆ ಪುಷ್ಟಿ ನೀಡುವ ಇನ್ನೆರಡು ಅಸಹಜ ಸಾವಿನ ಪ್ರಕರಣಗಳೂ ಇಲ್ಲಿ ಬಹಳ ಮುಖ್ಯವಾಗುತ್ತವೆ. ಅದು ಹೋಮಿ ಭಾಭಾ ಸಾವಿಗೆ ಎರಡು ವಾರ ಮೊದಲು ಸಂಭವಿಸಿದ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವು ಮತ್ತು 1971ರಲ್ಲಿ ಸಂಭವಿಸಿದ ಇಸ್ರೊ ಸ್ಥಾಪಕ ಭೌತಶಾಸ್ತ್ರಜ್ಞ ವಿಕ್ರಂ ಸಾರಾಭಾಯ್ ಅವರ ಸಾವು. ಈ ಮೂರು ಮಹತ್ವದ ವ್ಯಕ್ತಿಗಳ ಸಾವು ನಿಗೂಢ ಪ್ರಕರಣಗಳಾಗಿ ಇಂದಿಗೂ ಉಳಿದಿವೆ.
1965ರ ಇಂಡೋ- ಪಾಕ್ ಯುದ್ಧದ ಬಳಿಕ ಶಾಸ್ತ್ರಿ ಅವರು ಪಾಕಿಸ್ತಾನದೊಂದಿಗೆ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನ ತಾಷ್ಕೆಂಟ್‌ನಲ್ಲಿಯೇ ಮೃತಪಟ್ಟರು. ಶೀತಲ ಸಮರದಲ್ಲಿ ಭಾರತ ಅಲಿಪ್ತ ನೀತಿ ಅನುಸರಿಸುತ್ತದೆ. ಯಾವುದೇ ಬಲಿಷ್ಠ ರಾಷ್ಟ್ರಗಳ ಕೈಗೊಂಬೆಯಾಗದೆ ಸ್ವತಂತ್ರವಾಗಿ ಇರಲು ಬಯಸಿ ಭಾರತ ಅಲಿಪ್ತ ನೀತಿ ಅನುಸರಿಸಿದ್ದು. ಈ ನಡುವೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವಲ್ಪ ಮಟ್ಟಿಗೆ ಸೋವಿಯತ್ ರಶ್ಯ ಪರ ನಿಲುವು ಹೊಂದಿದ್ದರು ಎಂಬುದು ಅಮೆರಿಕಕ್ಕೆ ಅಸಹನೆಯ ಸಂಗತಿಯಾಗಿತ್ತು. ಅಲ್ಲದೆ ಅವರು ಹೋಮಿ ಭಾಭಾ ಅವರೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರು. ಹೋಮಿ ಜಹಾಂಗೀರ್ ಭಾಭಾ ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಬದಲಿಸಬಲ್ಲ ವಿಜ್ಞಾನಿ ಎಂಬ ಅರಿವು ಅಮೆರಿಕಕ್ಕೆ ಇತ್ತು. ಅಲಿಪ್ತ ನೀತಿ ವಿಚಾರ ಹಾಗೂ ಪರಮಾಣು ಶಕ್ತಿ ಅಭಿವೃದ್ಧಿ ಕಾರಣ ಇಟ್ಟುಕೊಂಡು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಮುಗಿಸುವ ತಂತ್ರ ಅಮೆರಿಕ ಹೂಡಿರುವ ಸಾಧ್ಯತೆ ಇದೆ. ಆದರೆ ಅವರ ಸಾವಿನ ಬಳಿಕದ ಬೆಳವಣಿಗೆಗಳಲ್ಲಿ ಆಂತರಿಕ ರಾಜಕಾರಣದ ತಂತ್ರಗಳೂ ಇದ್ದಿರಬಹುದು.
ಶಾಸ್ತ್ರಿ ಅವರ ನಂತರ ಇಂದಿರಾ ಗಾಂಧಿ ಪ್ರಬಲ ನಾಯಕಿ ಆಗಬಲ್ಲ ಸಾಮರ್ಥ್ಯ ಹೊಂದಿರುವವರು ಎಂಬುದು ಅಮೆರಿಕಕ್ಕೆ ಗೊತ್ತಾಗಿದ್ದೇ ತಡ, ಅವರ ಪ್ರಮಾಣ ವಚನದ ದಿನವೇ ವಿಯೆನ್ನಾ ಪ್ರವಾಸದಲ್ಲಿದ್ದ ಹೋಮಿ ಜೆ.ಭಾಭಾ ಅವರನ್ನೊಳಗೊಂಡ ವಿಮಾನ ಫ್ರಾನ್ಸಿನ ಪರ್ವತ ಪ್ರದೇಶವಾದ ಮೌಂಟ್ ಬ್ಲಾಂಕ್ ಎಂಬಲ್ಲಿ ಅಪಘಾತಕ್ಕೀಡಾಗಿ ಪತನವಾಯಿತು. ಘಟನೆಯಿಂದ 106 ಮಂದಿ ಸಾವನ್ನಪ್ಪಿದರು. ಒಂದು ವೇಳೆ ಈ ದುರ್ಘಟನೆ ಸಂಭವಿಸದೇ ಹೋಗಿದ್ದಿದ್ದರೆ 1974ರಲ್ಲಿ ನಡೆದ ಪರಮಾಣು ಶಕ್ತಿ ಪರೀಕ್ಷೆ 1970ರ ಒಳಗೆಯೇ ಹೋಮಿ ಭಾಭಾ ಅವರ ನೇತೃತ್ವದಲ್ಲಿ ನಡೆಯುತ್ತಿತ್ತೋ ಏನೊ. ಅಮೆರಿಕ ಯಾವುದಕ್ಕೂ ಹೇಸುವುದಿಲ್ಲ ಎಂದು ನಾನು ಹೇಳಿದ್ದು ಇದೇ ಕಾರಣಕ್ಕೆ.
ಇನ್ನೊಂದು ದುರಂತ ಎಂದರೆ 1971ರ ಡಿಸೆಂಬರ್ 30ರಂದು ಸಂಭವಿಸಿದ ಇಸ್ರೋ ಸಂಸ್ಥಾಪಕ ವಿಕ್ರಂ ಸಾರಾಭಾಯ್ ಅವರ ಸಾವು. ಕೇರಳದ ಕೋವಲಂ ಎಂಬಲ್ಲಿನ ಹೋಟೆಲೊಂದರ ಕೋಣೆಯೊಳಗೆ ವಿಕ್ರಂ ಸಾರಾಭಾಯ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು. ಹೃದಯ ಸಂಬಂಧಿ ಕಾಯಿಲೆ ಇದ್ದರೂ ಸಾರಾಭಾಯ್ ಆ ಸಂದರ್ಭದಲ್ಲಿ ಆರೋಗ್ಯವಾಗಿಯೇ ಇದ್ದರು. ಡಿಸೆಂಬರ್ 29ರಂದು ತಿರುವನಂತಪುರದಲ್ಲಿ ನಡೆದ ಭಾರತೀಯ ಬಾಹ್ಯಾಕಾಶ ಯೋಜನೆಗೆ ಸಂಬಂಧಿಸಿದ ಸಭೆಯೊಂದರಲ್ಲಿ ಭಾಗವಹಿಸಿ ಹಿಂದಿರುಗಿದ್ದರಷ್ಟೆ. ಕ್ರಿಯಾಶೀಲರಾಗಿಯೇ ಇದ್ದರು. ಆದರೆ ಅಂದು ರಾತ್ರಿ ಸತತ ಕರೆ ಮಾಡಿದರೂ ಸ್ವೀಕರಿಸದೆ ಇದ್ದಾಗ ಆತಂಕಗೊಂಡ ಹೋಟೆಲ್ ಸಿಬ್ಬಂದಿ ನೇರವಾಗಿ ಅವರ ಕೋಣೆಗೆ ಹೋಗಿ ನೋಡಿದರು. ಅಷ್ಟರಲ್ಲಿ ಅವರು ಮೃತಪಟ್ಟ ಸ್ಥಿತಿಯಲ್ಲಿದ್ದರು. ಅದು ನಸುಕಿನ 3:30ರ ಸಮಯವಾಗಿತ್ತು. ಅವರು ಸಾಯುವ ಒಂದು ತಾಸಿಗೆ ಮುನ್ನ ಕಲಾಂ ಅವರೊಂದಿಗೆ ಫೋನಿನಲ್ಲಿ ಸಂಭಾಷಣೆ ನಡೆಸಿದ್ದರು. ಬಹುಶಃ ಅದೇ ಅವರ ಕೊನೆಯ ಕರೆಯಾಗಿರಬೇಕು.
ಭಾಭಾ ಮೃತಪಟ್ಟಿದ್ದು 56ನೇ ವಯಸ್ಸಿಗೆ. ಸಾರಾಭಾಯ್ ಅಗಲಿದ್ದು 52ನೇ ವಯಸ್ಸಿಗೆ. ಈ ದುರಂತಗಳು ಸಂಭವಿಸದೇ ಹೋಗಿದ್ದಿದ್ದರೆ, ಇನ್ನೂ ಒಂದೆರಡು ದಶಕಗಳ ಕಾಲ ಇವರಿಬ್ಬರೂ ಬದುಕಿದ್ದಿದ್ದರೆ ಅವರ ಕೊಡುಗೆಯಿಂದ ಭಾರತದ ದಿಶೆಯೇ ಬದಲಾಗುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.
ಭಾಭಾ, ಶಾಸ್ತ್ರಿ ಹಾಗೂ ಸಾರಾಭಾಯ್, ಈ ಮೂವರ ಸಾವಿನ ನಂತರದ ಬೆಳವಣಿಗೆಯೆಂದರೆ ಮೂವರಲ್ಲಿ ಯಾರೊಬ್ಬರ ಮರಣೋತ್ತರ ಪರೀಕ್ಷೆಯೂ ನಡೆಯಲಿಲ್ಲ! ಅಲ್ಲದೆ ಅಸಹಜ ಸಾವಿಗೆ ಸಂಬಂಧಿಸಿ ಗಂಭೀರ ತನಿಖೆಯೂ ನಡೆಯಲಿಲ್ಲ!
ಪರಮಾಣು ಶಕ್ತಿ ಅಭಿವೃದ್ಧಿ ವಿಚಾರದಲ್ಲಿಯೂ ವಿಕ್ರಂ ಸಾರಾಭಾಯ್ ಪ್ರಮುಖ ಪಾತ್ರ ವಹಿಸಿ ಕೆಲಸ ಮಾಡುತ್ತಿದ್ದರು. ಜೊತೆಗೆ ಬಾಹ್ಯಾಕಾಶಕ್ಕೆ ಸಂಬಂಧಿಸಿಯೂ ವೇಗವಾದ ಕೆಲಸಗಳು ನಡೆಯುತ್ತಲೇ ಇದ್ದವು. ಇಸ್ರೋ ಸ್ಥಾಪನೆ, ಅಲ್ಲಿನ ವಿಜ್ಞಾನ ಕಾರ್ಯಗಳ ವೇಗ ಅಮೆರಿಕಕ್ಕೆ ತಲೆನೋವಾಗಿತ್ತು. ಗಮನಿಸಬೇಕಾದ ಅಂಶವೆಂದರೆ ‘ನಂಬಿ ಎಫೆಕ್ಟ್’ ಮೂಲಕ ಹೆಸರಾದ ಇಸ್ರೋದ ಪ್ರಮುಖ ವಿಜ್ಞಾನಿ ನಂಬಿ ನಾರಾಯಣನ್ ಅವರು, ‘‘ಹೋಮಿ ಭಾಭಾ ಹಾಗೂ ಸಾರಾಭಾಯ್ ಅವರ ಸಾವು ಅಸಹಜವೇ ಹೌದು, ಇದು ಅಮೆರಿಕದ ಏಜೆನ್ಸಿ ಕೈವಾಡ ಎಂದೇ ಬಲವಾದ ಅನುಮಾನವಿದೆ’’ ಎಂದು ಈ ಹಿಂದೆ ಹೇಳಿದ್ದರು. ಇದಕ್ಕೂ ಮೊದಲು ತಮಗೂ ಸೇರಿದಂತೆ ಭಾಭಾ, ಸಾರಾಭಾಯ್ ಹಾಗೂ ಹಲವು ವಿಜ್ಞಾನಿಗಳಿಗೆ ಬಾಹ್ಯ ಶಕ್ತಿಗಳು ಹಲವು ಜೀವ ಬೆದರಿಕೆ ಒಡ್ಡಿದ್ದವು ಎನ್ನುವ ವಿಚಾರವನ್ನೂ ಅವರು ಬಹಿರಂಗಪಡಿಸಿದ್ದರು. ಈ ಎಲ್ಲ ವಿಚಾರಗಳು ಅಮೆರಿಕದ ‘ಸಿಐಎ’ ಸುತ್ತಲೇ ಗಿರಕಿ ಹೊಡೆಯುವುದರಿಂದ ಇದರಲ್ಲಿ ಅಮೆರಿಕದ ಕೈವಾಡ ಇರಲು ಬಹುಪಾಲು ಸಾಧ್ಯತೆ ಇದೆ ಎಂದೇ ಹೇಳಬಹುದು. ಅಮೆರಿಕ ಹಲವಾರು ರೀತಿಯಲ್ಲಿ ಭಾರತ ಬಲಿಷ್ಠ ಶಕ್ತಿಯಾಗಿ ಮೇಲೆ ಬರುವುದನ್ನು ತಡೆಯುವ ಪ್ರಯತ್ನ ಮಾಡುತ್ತಲೇ ಬಂದಿದೆ. ರಶ್ಯ ಸೇರಿದಂತೆ ಯಾವುದೇ ದೇಶ ಭಾರತದ ಭದ್ರತಾ ಸಾಮರ್ಥ್ಯ ಹೆಚ್ಚಿಸುವ ಕೆಲಸಕ್ಕೆ ಪೂರಕ ವಸ್ತುಗಳ ಪೂರೈಕೆಗೆ ಸಂಬಂಧಿಸಿದ ಒಪ್ಪಂದಕ್ಕೆ ಮುಂದಾದರೆ ಅದನ್ನು ತಡೆಯಲು ಶತಾಯಗತಾಯ ಪ್ರಯತ್ನ ಮಾಡುತ್ತಿತ್ತು. ತಾನು ನೀಡುತ್ತಿದ್ದ ನೆರವು ಒಂದು ಹಂತದವರೆಗೆ ಮಾತ್ರವಾಗಿದ್ದು, ಅವು ಮಿಲಿಟರಿ ಸಂಬಂಧಿತ ಅಭಿವೃದ್ಧಿಗೆ ಬಳಸಲಿಕ್ಕೆ ಅಲ್ಲ ಎಂಬ ಸೂಚನೆಯೊಂದಿಗೆ ನೀಡಲಾಗುತ್ತಿತ್ತು.
ಅಮೆರಿಕ ಹಾಗೂ ಇತರ ದೇಶಗಳ ತೀವ್ರವಾದ ಒತ್ತಡವನ್ನು ಸೂಕ್ಷ್ಮವಾಗಿ ಗ್ರಹಿಸಿಕೊಂಡಿದ್ದ ಪ್ರಧಾನಿ ಇಂದಿರಾ ಗಾಂಧಿ, ಆ ಸಂದರ್ಭಗಳನ್ನು ಅಷ್ಟೇ ಸಮರ್ಥವಾಗಿ, ಎಚ್ಚರದಿಂದ ಎದುರಿಸಿದರು. ಪೊಖ್ರಾನ್-1 ಪರೀಕ್ಷೆಯ ವಿಚಾರ ಬಹಳ ಗುಪ್ತವಾಗಿಯೇ ಇತ್ತು. ತಂಡದ ವಿಜ್ಞಾನಿಗಳನ್ನು ಹೊರತುಪಡಿಸಿ ಎಲ್ಲಿಯೂ ಮಾಹಿತಿ ಹರಡದಂತೆ ಇಂದಿರಾ ನೋಡಿಕೊಂಡಿದ್ದರು. ಒಂದು ವೇಳೆ ಮಾಹಿತಿ ಸೋರಿಕೆ ಆಗಿದ್ದಿದ್ದರೆ ಪರಿಣಾಮ ಬೇರೆ ಆಗಿರುತ್ತಿತ್ತೋ ಏನೊ.
1968ರ ಪರಮಾಣು ಪ್ರಸರಣ ರಹಿತ ಒಪ್ಪಂದಕ್ಕೆ (ಎನ್ ಪಿಟಿ) ಭಾರತ ಸಹಿ ಹಾಕದಿರುವುದು ಹಲವು ದೇಶಗಳ ನಿದ್ದೆಗೆಡಿಸಿತ್ತು. ಅಮೆರಿಕಕ್ಕೂ ಈ ಸಿಟ್ಟು ಇತ್ತು. ಭಾರತ ಸಹಿ ಹಾಕುವುದಿಲ್ಲ ಎಂದು ಮುಕ್ತವಾಗಿಯೇ ಒಪ್ಪಂದವನ್ನು ತಿರಸ್ಕರಿಸಿತ್ತು. ಒಂದು ವೇಳೆ ಸಹಿ ಹಾಕಿದ್ದೇ ಆಗಿದ್ದರೆ, ಯಾವುದೇ ಕಾರಣಕ್ಕೆ ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರವಾಗಿ ಬೆಳೆಯಲು ಉಳಿದ ರಾಷ್ಟ್ರಗಳು ಬಿಡುತ್ತಿರಲಿಲ್ಲ. ಆದರೆ ಭಾರತ ಸ್ವತಂತ್ರ ಶಕ್ತಿಯಾಗಿ ಬೆಳೆಯಲು ಸಮೃದ್ಧ ಅವಕಾಶವನ್ನು ಬಾಹ್ಯ ಒತ್ತಡಗಳ ನಡುವೆಯೂ ತಾನಾಗಿಯೇ ಸೃಷ್ಟಿಸಿಕೊಂಡಿದ್ದು ಸಾಧನೆಯೇ ಸರಿ. ಇಂದಿರಾ ಗಾಂಧಿಯವರ ದಿಟ್ಟತನ ಈ ನಿಟ್ಟಿನಲ್ಲಿ ಶ್ಲಾಘನೀಯ. ಭಾರತ ನ್ಯೂಕ್ಲಿಯರ್ ಬಲ ಪ್ರದರ್ಶಿಸುವ ಮೊದಲು ಪರಮಾಣು ಶಕ್ತಿಯ ರಾಷ್ಟ್ರಗಳು(ಅಮೆರಿಕ, ಫ್ರಾನ್ಸ್, ಸೋವಿಯತ್ ರಶ್ಯ, ಯು.ಕೆ. ಹಾಗೂ ಚೀನಾ) ಹಾಗೂ ಪರಮಾಣು ಶಕ್ತಿ ಹೊಂದಿರದ ರಾಷ್ಟ್ರಗಳು ಎಂಬ ಎರಡು ಮಾದರಿಯ ಜಾಗತಿಕ ಬೆಳವಣಿಗೆ ಸಾಗುತ್ತಿತ್ತು. ಜೊತೆಗೆ ಮೇಲಿನ ಐದು ರಾಷ್ಟ್ರಗಳು ಮಾತ್ರ ಪರಮಾಣು ಶಕ್ತಿ ತಯಾರಿಸಬೇಕು ಎನ್ನುವ ತಮ್ಮದೇ ಸಿದ್ಧಾಂತದೊಂದಿಗೆ ಒಂದು ಬಗೆಯ ದಬ್ಬಾಳಿಕೆ ಶುರುವಾಗಿತ್ತು. ಈ ಬಗೆಯ ತಾರತಮ್ಯ ನೀತಿಯನ್ನು ಭಾರತ ವಿರೋಧಿಸಿ ಸ್ವತಂತ್ರ ಶಕ್ತಿಯಾಗಿ ನಿಲ್ಲಲು ಪಣತೊಟ್ಟು ಯಶಸ್ವಿಯಾಯಿತು.
ಇಂದಿರಾ ಗಾಂಧಿಯವರಂತಹ ‘ಉಕ್ಕಿನ ಮಹಿಳೆ’ಯ ಆಡಳಿತ ಅವಧಿಯಲ್ಲಿಯೇ ಇಷ್ಟೆಲ್ಲ ಒತ್ತಡಗಳನ್ನು ಸೃಷ್ಟಿಸಿದ್ದ ಅಮೆರಿಕ, ಈಗ ಭಾರತಕ್ಕೆ ತಾನು ‘ಸಾಚಾ’ ಎಂದು ತೋರಿಸಿಕೊಡಲು ಬಂದರೆ ಯಾರಾದರೂ ಒಪ್ಪಲು ಸಾಧ್ಯವೇ? ಭಾರತ-ಪಾಕ್ ಇತ್ತೀಚಿನ ಸಂಘರ್ಷದ ಮೂಲವಾದ ಪಹಲ್ಗಾಮ್ ದಾಳಿ ಪ್ರಕರಣದಿಂದ ಹಿಡಿದು (ಜೆ.ಡಿ.ವ್ಯಾನ್ಸ್ ಭಾರತ ಭೇಟಿ) ಕದನ ವಿರಾಮದ ವರೆಗೆ (ಟ್ರಂಪ್ ಘೋಷಣೆ) ಅಮೆರಿಕ ಬಲೆ ಹೆಣೆದಿದ್ದಂತೂ ಸತ್ಯ. ನೇರ ಸಾಕ್ಷ್ಯಾಧಾರಗಳಿಲ್ಲ ಎನ್ನುವ ಕಾರಣಕ್ಕೆ ಈ ಬೆಳವಣಿಗೆಗಳಲ್ಲಿ ಅಮೆರಿಕದ ಪಾತ್ರ ಇಲ್ಲವೆಂದು ಹೇಳಲಾಗದು. ಈ ಹಿಂದೆ ನಡೆದ, ಮೇಲೆ ಉಲ್ಲೇಖಿಸಿದ ಯಾವುದೇ ಘಟನೆಗಳಲ್ಲಿ ಅಮೆರಿಕದ ಷಡ್ಯಂತ್ರಗಳಿಗೆ ನೇರ ಸಾಕ್ಷ್ಯಾಧಾರಗಳು ಇರಲಿಲ್ಲ ಎನ್ನುವುದು ಯೋಚಿಸಬೇಕಾದ ವಿಚಾರ.
ಟ್ರಂಪ್ ಮಾತಿಗೆ ವಿರುದ್ಧವಾಗಿ ತನ್ನ ದೇಶದ ಸ್ವಾಭಿಮಾನದ ಸಾಕ್ಷಿಯೆಂಬಂತೆ ಒಂದೇ ಒಂದು ಮಾತನ್ನು ಪ್ರಧಾನಿ ಮೋದಿಯವರು ಆಗಲೇ ಆಡಿದ್ದಿದ್ದರೆ ಭಾರತದ ಬಗೆಗಿನ ಜಗತ್ತಿನ ದೃಷ್ಟಿಕೋನವೇ ಬದಲಾಗುತ್ತಿತ್ತು. ಇಂದಿರಾ ಗಾಂಧಿಯವರನ್ನು ಈ ಹೊತ್ತಿನಲ್ಲಿ ವ್ಯಾಪಕವಾಗಿ ಸ್ಮರಿಸುವುದಕ್ಕೆ, ಅವರ ಭಾಷಣಗಳ ವೀಡಿಯೊ ತುಣುಕುಗಳು ವೈರಲ್ ಆಗುವುದಕ್ಕೆ ಕಾರಣವೇ ಇದು. ಇಂದಿರಾ ಗಾಂಧಿ ಎಂದಿಗೂ ಅಮೆರಿಕಕ್ಕೆ ತಲೆಬಾಗಲಿಲ್ಲ. ಅಮೆರಿಕವನ್ನು ದೊಡ್ಡಣ್ಣ ಎಂದು ಪರಿಗಣಿಸಿ ದೀಡ್ ನಮಸ್ಕಾರ ಹಾಕಲಿಲ್ಲ. ಅಮೆರಿಕವನ್ನು ಎಲ್ಲಿ ಇಡಬೇಕಿತ್ತೋ ಅಲ್ಲಿ ಇಟ್ಟಿದ್ದರು. ಹಾಗಾಗಿಯೇ ಅವರು ಅಮೆರಿಕದ ಒತ್ತಡಗಳ ಆಚೆಗೆ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಕ್ಷಿಪ್ರಗತಿಯಲ್ಲಿ ಮುಂದುವರಿಸಲು ಸಾಧ್ಯವಾಯಿತು. ಈ ದೃಷ್ಟಿಯಲ್ಲಿ ಭಾರತದ ಭವಿಷ್ಯವನ್ನು ನೋಡುವುದಾದರೆ ಟ್ರಂಪ್ ಮಧ್ಯಪ್ರವೇಶ, ಮೋದಿಯವರ ಮೌನ ಒಂದು ಆತಂಕಕಾರಿ ಬೆಳವಣಿಗೆಯೇ ಹೌದು. ಅತ್ತ ಪಾಕಿಸ್ತಾನದ ಸರಕಾರ, ಪ್ರಧಾನಿ, ಮಾಧ್ಯಮಗಳು ‘ಪ್ರಚಂಡ ಗೆಲುವು’ ಎಂದು ಕದನವೇ ಇಲ್ಲದೆ ಘೋಷಣೆಯಾದ ಕದನ ವಿರಾಮವನ್ನು ಸಂಭ್ರಮಿಸುತ್ತ ಭರ್ಜರಿ ಪ್ರಚಾರ ಮಾಡುತ್ತ ವಿದೇಶಿ ಮಾಧ್ಯಮಗಳನ್ನು ಮರುಳು ಮಾಡುತ್ತಿವೆ. ಇತ್ತ ಭಾರತದ ಘನತೆಗೆ ಟ್ರಂಪ್ ಕೇವಲ ಟ್ವೀಟ್ ಮೂಲಕ ವಿಶ್ವಮಟ್ಟದಲ್ಲಿ ಬಹಳ ಸಲೀಸಾಗಿ, ಅದೂ ಭಾರತದ ‘ಒಪ್ಪಿಗೆಯೊಂದಿಗೆ’ ಧಕ್ಕೆ ತಂದಿದ್ದಾರೆ. ಹಾಗಾದರೆ ಭಾರತವು ಅಮೆರಿಕಕ್ಕೆ ಸಂಪೂರ್ಣ ಶರಣಾಗಿದೆ ಎಂದಲ್ಲವೇ ಈ ಸುಲಭ ಸಾಧ್ಯತೆಯ ಸೂಚನೆ? ಬಗಲಿನಲ್ಲಿ ಮಿತ್ರನಂತೆ ನಿಂತುಕೊಂಡು ದ್ರೋಹ ಮಾಡಿ ನಮ್ಮ ದೇಶವನ್ನೇ ಜಗತ್ತಿನ ಎದುರು ನಗೆಪಾಟಲಿಗೀಡು ಮಾಡಿ ನಗುತ್ತಿದೆ ಅಮೆರಿಕ! ನಿರ್ಣಾಯಕ ಸಂದರ್ಭದಲ್ಲಿ ಅಸಹಾಯಕ ಸ್ಥಿತಿ ಪ್ರದರ್ಶಿಸಿದ ಪ್ರಧಾನಿ ಮೋದಿಯವರ ನಡೆ ಅನುಮಾನ ಮೂಡಿಸಿದೆ.
ನೆಹರೂ ಹಾಕಿಕೊಟ್ಟ ಅಡಿಪಾಯದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿಯಿಂದ ವಾಜಪೇಯಿವರೆಗೆ, ಹೋಮಿ ಭಾಭಾ, ರಾಜಾ ರಾಮಣ್ಣ, ಸಾರಾಭಾಯ್, ಕಲಾಂ ಅವರಂತಹ ಪ್ರಖ್ಯಾತ ವಿಜ್ಞಾನಿಗಳ ಅಸಾಧಾರಣ ಪ್ರತಿಭೆಯ ಬಳಕೆಯಿಂದ ಭಾರತದಲ್ಲಿ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ನಡೆದು ಬಂದ ಹಾದಿ ರೋಚಕವಾದದ್ದು. ಆದರೂ ‘ಭಾರತೀಯ ಪರಮಾಣು ಯೋಜನೆಗಳ ಪಿತಾಮಹ’, ‘ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ’ ಬಿರುದಾಂಕಿತ ಇಬ್ಬರು ವಿಜ್ಞಾನ ಲೋಕದ ಮೇರು ಪ್ರತಿಭೆಗಳನ್ನು, ‘ಶಾಂತಿಯ ದೂತ’ ಎಂದೇ ಹೆಸರಾದ ಪ್ರಾಮಾಣಿಕ, ಬದ್ಧ ರಾಜಕೀಯ ನಾಯಕನನ್ನು ವಿಶ್ವ ರಾಜಕಾರಣದ ಸ್ವಾರ್ಥಕ್ಕಾಗಿ ಭಾರತ ಕಳೆದುಕೊಳ್ಳುವಂತಾಯಿತಲ್ಲ ಎಂಬ ಖೇದ ಎಂದೂ ಮಾಯುವುದಿಲ್ಲ.