ಅಣಬೆಗೆ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ

ಹೊಸಕೋಟೆ: ಅಣಬೆ (ಮಶ್ರೂಮ್) 25 ದಿನಗಳಲ್ಲಿ ಬೆಳೆಯುವಂತಹ ಬೆಳೆಯಾಗಿದ್ದು, ಅದರಲ್ಲೂ ಸಾವಯುವ ಕೃಷಿಯಲ್ಲಿ ಬೆಳೆದ ಅಣಬೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಅಣಬೆಯಲ್ಲಿ ರೋಗ ನಿರೋಧಕ ಶಕ್ತಿವುಳ್ಳ ಅಂಶಗಳು ಇರುವುದರಿಂದ ಕೋವಿಡ್ ಬಂದ ಬಳಿಕ ಹೆಚ್ಚಿನ ಜನರು ಅಣಬೆ ಸೇವನೆಗೆ ಒತ್ತು ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ಅಣಬೆಗೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಹುತೇಕ ಮಾಂಸಹಾರಿಗಳು ಮಾಂಸ ಸೇವನೆಯಿಂದ ದೂರ ಉಳಿಯುತ್ತಾರೆ. ಮಾಂಸದ ಬದಲಿಗೆ ಬಾಯಿ ರುಚಿಗಾಗಿ ಅಣಬೆ ಬಳಸಿ ಮಸಾಲೆ ಪದಾರ್ಥಗಳಿಂದ ಸಾಂಬಾರ, ಫಲಾವ್ ಇತರ ಅಡುಗೆಗಳ ತಯಾರಿಕೆಗೆ ಹೆಚ್ಚು ಬಳಕೆ ಮಾಡಲಾಗುತ್ತಿದೆ.
ಇತ್ತೀಚೆಗೆ ಮದುವೆ, ನಾಮಕಾರಣ, ಇತರ ಶುಭಕಾರ್ಯಗಳಲ್ಲಿ ಅಣಬೆ ಹೆಚ್ಚು ಬಳಕೆಯಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ಪಟ್ಟಣದಲ್ಲಿ ಐಸ್ ಕ್ರೀಂ ಮಳಿಗೆ, ನಂದಿನಿ ಬೂತ್, ಬೇಕರಿ, ಹಾಪ್‌ಕಾಮ್ಸ್, ತರಕಾರಿ ಅಂಗಡಿ, ಖಾಸಗಿ ಮಾಲ್ ಸಹಿತ ಇತರ ಕಡೆಗಳಲ್ಲಿ ಅಣಬೆ ಮಾರಾಟ ಮಾಡಲಾಗುತ್ತಿದೆ. ಆದರೆ ಈಗ ಬಹುತೇಕ ಮಳಿಗೆಗಳಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಣಬೆ ಸಿಗುತ್ತಿಲ್ಲ.
ದರ ಹೆಚ್ಚಳ: ಸಾಮಾನ್ಯ ದಿನಗಳಲ್ಲಿ 1 ಕೆ.ಜಿ. ಅಣಬೆ 200 ರೂ.ಗೆ ಮಾರಾಟವಾಗುತ್ತಿದೆ. ಶ್ರಾವಣ, ಕಾರ್ತಿಕ ಮಾಸ, ಇತರ ವಿಶೇಷ ಸಂದರ್ಭಗಳಲ್ಲಿ 300 ರೂ.ಯಿಂದ 350ರೂ.ವರೆಗೆ ಮಾರಾಟವಾಗುತ್ತಿದೆ.
ಸಾವಯವ ಅಣಬೆ: ರಾಸಾಯನಿಕ ಬಳಸಿ ಬಟನ್ ಅಣಬೆ ಬೆಳೆಯಲಾಗುತ್ತದೆ. ಇದನ್ನು ಬೆಳೆಯಲು ಹೆಚ್ಚು ವೆಚ್ಚ ತಗಲುತ್ತದೆ. ಸಾವಯುವ ಬೇಸಾಯದಲ್ಲಿ ಭತ್ತದ ಹುಲ್ಲು, ಸ್ಪಾನ್ ಬಳಸಿ ಆಯುಸ್ಟಾರ್, ಮಿಲ್ಕಿ, ವೈಟ್, ಪಿಂಕ್, ಗ್ರೇ ಅಣಬೆ ಬೆಳೆಯಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ ಅಣಬೆ ಕೃಷಿಕ ನಂದೀಶ್.
ಅಣಬೆ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದ್ದು, ಇತ್ತೀಚೆಗೆ ಇದರ ಬಳಕೆ ಹೆಚ್ಚಿದೆ. ಶ್ರಾವಣ ಮಾಸದಲ್ಲಿ ಮಾಂಸ ಸೇವನೆ ಬದಲು ಅಣಬೆಯಿಂದ ರುಚಿಕರ ಆಹಾರ ತಯಾರಿಸುತ್ತಾರೆ. ಶುಭ ಸಮಾರಂಭಗಳಲ್ಲಿ ಅಣಬೆಯ ಬಳಕೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ದಿನಗಳಿಗಿಂತ ದರವು ಹೆಚ್ಚಾಗಿರುತ್ತದೆ.
-ನಂದೀಶ್, ಅಣಬೆ ಕೃಷಿಕ