ಸ್ವಾಯತ್ತೆ -ಸರ್ವಾಧಿಕಾರದ ಸಂಘರ್ಷದಲ್ಲಿ
ಸಾಂಸ್ಕೃತಿಕ ಲೋಕದ ಯಾವ ಸಂಸ್ಥೆಯೂ ಸರ್ವಾಧಿಕಾರದ ಅಡಿಯಲ್ಲಿ ಏಳಿಗೆಯಾಗದು

ಕನ್ನಡ ಸಾಹಿತ್ಯ ಲೋಕ ಎಷ್ಟೇ ಸ್ವತಂತ್ರ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದರೂ, ಶತಮಾನ ಮೀರಿದ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಈ ತಾತ್ವಿಕತೆಯನ್ನು ಅರಿಯವುದರಲ್ಲೇ ಎಡವುತ್ತಿದೆ. ಹಾಗಾಗಿಯೇ ಕೆಲವು ವರ್ಷಗಳ ಹಿಂದೆ ಮೇರು ಸಾಹಿತಿ ಗೋಪಾಲಕೃಷ್ಣ ಅಡಿಗರು ಕಸಾಪ ವಿಸರ್ಜನೆ ಮಾಡಿಬಿಡಿ ಎಂದು ನೋವಿನಿಂದ ಹೇಳಿದ್ದ ನೆನಪು. ಅದಿರಲಿ, ಈ ಒಂದು ಮೇರು ಸಂಸ್ಥೆಯನ್ನು ವಿಸರ್ಜಿಸುವುದಕ್ಕಿಂತಲೂ ಹೆಚ್ಚಾಗಿ ಆಗಬೇಕಿರುವುದು ಸಾಂಸ್ಥಿಕ ಚೌಕಟ್ಟಿನೊಳಗಿನ ಸೂಕ್ಷ್ಮ ಸಂವೇದನೆ ಮತ್ತು ಪ್ರಜಾಪ್ರಭುತ್ವೀಯ ಲಕ್ಷಣಗಳ ಪುನರುತ್ಥಾನ. ವರ್ತಮಾನದ ಕರ್ನಾಟಕದ ಸಂಕೀರ್ಣ ಪರಿಸ್ಥಿತಿಗಳಲ್ಲಿ ಕೋಮುವಾದ, ಭ್ರಷ್ಟಾಚಾರ, ಮಹಿಳಾ ದೌರ್ಜನ್ಯ, ಮತಾಂಧತೆ, ಜಾತಿ ತಾರತಮ್ಯ ಎಲ್ಲವೂ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ, ದಿಕ್ಕು ತಪ್ಪಿರುವ ಅಥವಾ ತಪ್ಪುತ್ತಿರುವ ಸಮಾಜಕ್ಕೆ, ವಿಶೇಷವಾಗಿ ಯುವ ಸಮುದಾಯಕ್ಕೆ ಸರಿದಾರಿ ತೋರುವ ನೈತಿಕ ಜವಾಬ್ದಾರಿ ಸಾಹಿತ್ಯದ ಮೇಲಿದೆ. ಇಲ್ಲಿ ಕಸಾಪದ ಆದ್ಯತೆಗಳನ್ನು ನಿರ್ವಚಿಸಬೇಕಾಗುತ್ತದೆ.
ಕಸಾಪ ತನ್ನ ಸಾಹಿತ್ಯಕ ಬಾಹ್ಯ ರೂಪವನ್ನು ಉಳಿಸಿಕೊಂಡಿದ್ದರೂ, ಆಂತರಿಕವಾಗಿ ಅಲ್ಲಿ ಬೇರುಬಿಟ್ಟಿರುವ ಅಸ್ಮಿತೆಗಳ ನೆಲೆಗಳು ಸಂಸ್ಥೆಯನ್ನು ಕ್ರಮೇಣವಾಗಿ ಶಿಥಿಲಗೊಳಿಸುತ್ತಿವೆ. ಕಸಾಪ ಅಧಿಕಾರ ರಾಜಕಾರಣದ ಹಿಡಿತಕ್ಕೆ ಸಿಲುಕಿ ಬಹಳ ವರ್ಷಗಳೇ ಸಂದಿವೆ. ಏಕೆಂದರೆ ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ಒದಗಿಸುವ ಸರಕಾರಗಳು ತಮ್ಮ ಯಜಮಾನಿಕೆಯನ್ನು ಬಿಟ್ಟುಕೊಡುವುದಿಲ್ಲ. ಇದರ ಹೊರತಾಗಿ ಸಮ್ಮೇಳನ ನಡೆಸುವ ಇಚ್ಛಾಶಕ್ತಿಯಾಗಲೀ, ದೂರಗಾಮಿ ಚಿಂತನೆಯಾಗಲೀ ಕಸಾಪದಲ್ಲಿ ಚರ್ಚೆಯೇ ಆಗಿಲ್ಲ. ಇದರ ಮುಂದಿನ ಹಂತವೇ ಜಾತಿಯ ಪ್ರವೇಶ. ಜಾತಿ ಅಸ್ಮಿತೆಗಳು ರಾಜ್ಯದ ಉದ್ದಗಲಕ್ಕೂ ಎಲ್ಲ ವಲಯಗಳನ್ನೂ ಆಕ್ರಮಿಸಿರುವಾಗ ಕಸಾಪ ಹೊರತಾಗಿರಲು ಸಾಧ್ಯವೂ ಇಲ್ಲವೇನೋ. ಈ ಜಾತಿ-ರಾಜಕಾರಣದ ಹಿಂದೆಯೇ ಸಾಹಿತ್ಯ ಪರಿಷತ್ತನ್ನು ಆವರಿಸಿದ್ದು ಮಾರುಕಟ್ಟೆ-ಬಂಡವಾಳ ಮತ್ತು ಇವೆರಡನ್ನೂ ನಿರ್ದೇಶಿಸಿ ನಿಯಂತ್ರಿಸುವ ಔದ್ಯಮಿಕ ಹಿತಾಸಕ್ತಿಗಳು.
ಹಾಗಾಗಿಯೇ ಕಳೆದ ಎರಡು ದಶಕಗಳಲ್ಲಿ ಕಸಾಪ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತಕ್ಕೊಳಗಾಗಿದ್ದು ತನ್ನ ಸಾಹಿತ್ಯಕ ಬಾಹ್ಯ ಸ್ವರೂಪವನ್ನೂ ಕಳೆದುಕೊಳ್ಳುತ್ತಿದೆ. ಇಲ್ಲಿ ಕಳೆದುಹೋಗುತ್ತಿರುವುದೇನು?
ಮೊದಲನೆಯದಾಗಿ ಸಾಂಸ್ಥಿಕ ಪ್ರಜಾಪ್ರಭುತ್ವ, ಎರಡನೆಯದು ಆಂತರಿಕ ಸಮನ್ವಯತೆ, ಮೂರನೆಯದು ಕಾರ್ಯಕ್ಷೇತ್ರದ ಸ್ವಾಯತ್ತೆ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಸಾಹಿತ್ಯ ಜಗತ್ತಿಗೆ ಅಡಿಪಾಯವಾಗಿರಬೇಕಾದ ಬಹುತ್ವದ ನೆಲೆಗಳು. ಸಾಂಸ್ಥಿಕ ಸ್ವಾಯತ್ತೆಯನ್ನು ಕಳೆದುಕೊಂಡು, ಅಧಿಕಾರ ಪೀಠಗಳನ್ನು ಅವಲಂಬಿಸುವ ಯಾವುದೇ ಸಾಂಸ್ಕೃತಿಕ ನೆಲೆಗಳು ಎದುರಿಸುವ ಸಂಕೀರ್ಣ ಸಿಕ್ಕುಗಳನ್ನೇ ಕಸಾಪ ಸಹ ಎದುರಿಸುತ್ತಿದೆ. ಆದ್ದರಿಂದಲೇ ಕಸಾಪ ಚುನಾವಣೆಗಳು ರಾಜಕೀಯ ಚುನಾವಣೆಗಳ ಪ್ರತಿರೂಪದಂತೆ ಕಾಣುತ್ತವೆ. ಹಣಬಲ, ಜಾತಿ ಪಾರಮ್ಯ ಮತ್ತು ರಾಜಕೀಯ ಪ್ರಾಬಲ್ಯ ಸಂಸ್ಥೆಯ ಅಂತಃಸತ್ವವನ್ನೇ ಹೀರಿ ಹೈರಾಣಾಗಿಸಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಇದು ಢಾಳಾಗಿ ಕಾಣುತ್ತದೆ.
ಅಧಿಕಾರದ ಚೌಕಟ್ಟುಗಳಿಂದಾಚೆ
ಮತ್ತೊಂದೆಡೆ ವಿಕೇಂದ್ರೀಕೃತ ವ್ಯವಸ್ಥೆಯನ್ನು ಅಳವಡಿಸಿಕೊಂಡು, ಹೋಬಳಿ ಮಟ್ಟದಿಂದ ರಾಜ್ಯಮಟ್ಟದವರೆಗೆ ಸಾಂಸ್ಥಿಕ ನೆಲೆಗಳು ವಿಸ್ತರಿಸಿದ್ದರೂ, ಪ್ರತೀ ಸ್ತರದಲ್ಲೂ ಕೇಂದ್ರೀಕೃತ ಯಜಮಾನಿಕೆಯ ಪರಂಪರೆಯೇ ಸ್ವೀಕೃತವಾಗಿದೆ. ಪರಿಣಾಮ, ತಾಲೂಕು-ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ತುಗಳೂ ಸಹ ಸಿದ್ಧಮಾದರಿಯನ್ನೇ ಅನುಸರಿಸುತ್ತಿವೆ. ಅಧ್ಯಕ್ಷರನ್ನೂ ಒಳಗೊಂಡಂತೆ ಪರಿಷತ್ತುಗಳ ಅಧ್ಯಕ್ಷತೆ ಅಥವಾ ಇತರ ಜವಾಬ್ದಾರಿಯುತ ಹುದ್ದೆಗಳಿಗೆ ಸಾಹಿತ್ಯಕ ಅನುಭವ-ಅರಿವು-ಪರಿಕಲ್ಪನೆ ಮತ್ತು ಸಾಧನೆಗಳು ಮಾನದಂಡವಾಗುವುದೇ ಇಲ್ಲ. ಇದರ ನಕಾರಾತ್ಮಕ ಪರಾಕಾಷ್ಠೆಯನ್ನು ಮಹಿಳಾ ಪ್ರಾತಿನಿಧ್ಯದ ಕೊರತೆಯಲ್ಲಿ ಗುರುತಿಸಬಹುದು. ಶತಮಾನ ಕಳೆದರೂ ಈವರೆಗೂ ಒಮ್ಮೆಯೂ ಮಹಿಳಾ ಅಧ್ಯಕ್ಷರನ್ನು ಚುನಾಯಿಸದ ಕಸಾಪ, 87 ಸಮ್ಮೇಳನಗಳಲ್ಲಿ ನಾಲ್ಕು ಬಾರಿ ಮಾತ್ರ ಮಹಿಳಾ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿದೆ. ಇದು ಪಿತೃಪ್ರಧಾನ ಮೌಲ್ಯಗಳ ವಿರಾಟ್ ದರ್ಶನ.
ಈ ಸಂಕೀರ್ಣತೆಗಳ ನಡುವೆಯೇ ಕಸಾಪ ಮತ್ತೊಂದು ವಿವಾದಕ್ಕೀಡಾಗಿದೆ. ಹಾಲಿ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅವರ ಸರ್ವಾಧಿಕಾರಿ ವರ್ತನೆಯ ವಿರುದ್ಧ ರಾಜ್ಯದ ಸಾಹಿತಿ ಕಲಾವಿದರು ಬಂಡಾಯದ ದನಿಎತ್ತಿದ್ದಾರೆ. ಪರಿಷತ್ತಿನ ಕಾರ್ಯನಿರ್ವಹಣೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ (Inclusive) ನೀತಿಯನ್ನು ಅನುಸರಿಸದೆ, ಏಕಪಕ್ಷೀಯ ಅಥವಾ ಆಂತರಿಕವಾಗಿ ಸೃಷ್ಟಿಯಾದ ನಿರ್ದಿಷ್ಟ ಕೂಟಗಳ ಇಚ್ಛೆಯಂತೆ ಕಸಾಪದ ಬೈ-ಲಾಗಳನ್ನು ತಿದ್ದುಪಡಿ ಮಾಡಲು ಹೊರಟಿರುವುದು ಸಾಹಿತ್ಯ ವಲಯದಲ್ಲಿ ಕಂಪನ ಮೂಡಿಸಿದೆ. ಸಾಹಿತ್ಯ ಸಮ್ಮೇಳನ ನಡೆಸಲು ರಾಜ್ಯಘಟಕದ ಅಧ್ಯಕ್ಷರಿಗೆ ಮಾರ್ಗಸೂಚಿ ಉಪಸಮಿತಿ ರಚಿಸುವ ಪರಮಾಧಿಕಾರ ನೀಡುವುದು, ವಿವಿಧ ಸ್ತರಗಳಲ್ಲಿ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಲು ಅಥವಾ ನಿರ್ದೇಶಿತ ಸದಸ್ಯರನ್ನು ಬದಲಾಯಿಸುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ನೀಡುವುದು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೊಸಕಿಹಾಕುವ ಒಂದು ಮಾದರಿ.
ನಾಮ ನಿರ್ದೇಶಿತ ಸದಸ್ಯರನ್ನು ಕಾರಣ ನೀಡದೆಯೇ ಬದಲಾಯಿಸುವ ಪರಮಾಧಿಕಾರವನ್ನು ಪಡೆಯಲಿರುವ ರಾಜ್ಯಾಧ್ಯಕ್ಷರು, ಅವರ ರಾಜೀನಾಮೆಯನ್ನು ತಿರಸ್ಕರಿಸುವ/ಅನುಮೋದಿಸುವ ಅಧಿಕಾರವನ್ನೂ ಹೊಂದಲಿದ್ದಾರೆ. ಹಾಗಾಗಿ ಸಾಹಿತ್ಯೇತರ ವಲಯದಿಂದ, ಈಗಿನ ಸನ್ನಿವೇಶದಲ್ಲಿ ಬಹುತೇಕ ಔದ್ಯಮಿಕ ವಲಯದಿಂದ ಬಂಡವಾಳ ಮತ್ತು ರಾಜಕೀಯ ಬೆಂಬಲ ಹೊಂದಿರುವವರನ್ನು ಪರಿಷತ್ತಿನ ವಿವಿಧ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಒಂದು ಮಾರುಕಟ್ಟೆ ಪರಂಪರೆಗೂ ನಾಂದಿ ಹಾಡಲಾಗುತ್ತದೆ. ಈಗಾಗಲೇ ವ್ಯಾಪಾರ-ವಾಣಿಜ್ಯ-ಲಾಭಾಂಶಗಳ ಜಾತ್ರೆಯ ಹಾಗೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳು ನೇರವಾಗಿ ಸಂತೆಯ ಸ್ವರೂಪ ಪಡೆದುಕೊಳ್ಳುತ್ತವೆ. ಮಾರುಕಟ್ಟೆ ಮತ್ತು ಬಂಡವಾಳದ ಬಾಲಂಗೋಚಿಯಂತೆ ಬೆನ್ನತ್ತಿ ಬರುವ ಅಧಿಕಾರ ರಾಜಕಾರಣ ಪರಿಷತ್ತಿನ ಅಂತಃಸತ್ವವನ್ನು ಸಾಹಿತ್ಯಕ ನೆಲೆಯಿಂದ ಸಂಪೂರ್ಣವಾಗಿ ವಿಮುಖಗೊಳಿಸಿಬಿಡುತ್ತದೆ.
ಸ್ಥಾನಮಾನ ಮತ್ತು ಸಾಹಿತ್ಯಸೇವೆ
ಕಸಾಪ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವುದು, ಅಧಿಕಾರವನ್ನು ಸ್ವಹಿತಾಸಕ್ತಿಗಾಗಿ-ಅನಿರ್ಬಂಧಿತವಾಗಿ ಬಳಸಿಕೊಳ್ಳುವುದಕ್ಕಾಗಿಯೋ ಅಥವಾ ಕನ್ನಡ ಸಾಹಿತ್ಯ ಲೋಕದ ಔನ್ನತ್ಯ ಮತ್ತು ಏಳಿಗೆಗೆ ಪೂರಕವಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವುಕ್ಕಾಗಿಯೋ ? ಮೊದಲನೆಯ ಕಾರಣಕ್ಕೇ ಆದರೆ ಆ ಸ್ಥಾನವನ್ನು ತೆಗೆದುಹಾಕಬೇಕು. ಎರಡನೆಯ ಕಾರಣವಾದರೆ, ಈ ವಿಸ್ತರಣೆಯ ಸ್ವರೂಪ, ರೂಪುರೇಷೆಗಳು ದೂರಗಾಮಿ ದೃಷ್ಟಿಕೋನದೊಂದಿಗೆ ನಿಷ್ಕರ್ಷೆಯಾಗಬೇಕು. ದತ್ತಿ ಪ್ರಶಸ್ತಿಗಳು, ತತ್ಸಂಬಂಧಿತ ಸನ್ಮಾನಗಳು, ಹಾರ-ಶಾಲು-ತುರಾಯಿ-ಪೇಟಗಳ ಊಳಿಗಮಾನ್ಯ ಆಚರಣೆಗಳು, ಸಾಹಿತ್ಯ ಸಮ್ಮೇಳನಾಧ್ಯಕ್ಷರ ಪಲ್ಲಕ್ಕಿ ಉತ್ಸವಗಳು ಈ ಎಲ್ಲ ಪ್ರಾಚೀನ ಆಚರಣೆಗಳನ್ನು ಬದಿಗೊತ್ತಿ, ಕರ್ನಾಟಕದ ಜನತೆ, ವಿಶೇಷವಾಗಿ ಮಿಲೇನಿಯಂ ಯುವ ಸಮೂಹ ಎದುರಿಸುತ್ತಿರುವ ಜಟಿಲ ಸಿಕ್ಕುಗಳನ್ನು ಸಾಹಿತ್ಯಕವಾಗಿ ಬಿಡಿಸುವ ನಿಟ್ಟಿನಲ್ಲಿ ಈ ವಿಸ್ತರಣೆ ನಡೆಯಬೇಕು.
ಕಳೆದ ಮೂರ್ನಾಲ್ಕು ದಶಕಗಳಲ್ಲಿ ಇಂತಹ ಪ್ರಯತ್ನಗಳನ್ನು ಕಾಣಲು ಸಾಧ್ಯವಾಗಿಲ್ಲ. ಸಾಹಿತ್ಯ ಶೂನ್ಯದಲ್ಲಿ ಉದ್ಭವಿಸುವುದಿಲ್ಲ ಅಥವಾ ಸಾಹಿತಿಯೊಬ್ಬರ ಆಲೋಚನಾ ಕ್ರಮಗಳು ಕೇವಲ ವೈಯಕ್ತಿಕ ಅನುಭವ-ಅನುಭಾವದ ನೆಲೆಯಲ್ಲಿ ಪರ್ಯಾವಸಾನ ಹೊಂದುವುದಿಲ್ಲ. ವಿಶಾಲ ಸಮಾಜದ ಆಗುಹೋಗುಗಳನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ, ವರ್ತಮಾನದ ಚೌಕಟ್ಟಿನೊಳಗೆ, ಭವಿಷ್ಯದ ದಿಕ್ಸೂಚಿಯಾಗಿ ಹೊರಹೊಮ್ಮಿಸುವ ಅಕ್ಷರ ಪ್ರಯೋಗಗಳನ್ನು ಸಾಹಿತ್ಯ ಎಂದು ವಿಶಾಲ ನೆಲೆಯಲ್ಲಿ ನಿರ್ವಚಿಸಬಹುದು. ಹೀಗಿರುವಾಗ, ಕಸಾಪ ವರ್ತಮಾನದ ಸಮಸ್ಯೆಗಳಿಗೆ ಪೂರಕವಾದ ಸಾಹಿತ್ಯ ಸೃಷ್ಟಿಸುತ್ತಿರುವ ಪ್ರತಿಭೆಗಳನ್ನು ಎಷ್ಟರ ಮಟ್ಟಿಗೆ ಗುರುತಿಸುತ್ತಿದೆ? ಅಥವಾ ಈ ಸಾಹಿತ್ಯ ಸೃಷ್ಟಿಗೆ ಅಗತ್ಯವಾದ ಬೌದ್ಧಿಕ ಪರಿಕರಗಳನ್ನು, ಭೌತಿಕ ಸೌಕರ್ಯಗಳನ್ನು ಹೇಗೆ ಒದಗಿಸುತ್ತಿದೆ ?
ಈ ಪ್ರಶ್ನೆ ಇಂದು ಕನ್ನಡ ಸಾಹಿತ್ಯ ಜಗತ್ತನ್ನು ಕಾಡಬೇಕಿದೆ.
ಕಸಾಪ ಎಂಬ ಒಂದು ಸ್ವಾಯತ್ತ ಸಂಸ್ಥೆ ತನ್ನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಉಳಿಸಿಕೊಂಡು ಮುನ್ನಡೆದರೆ ಮಾತ್ರ ಈ ಹೆಜ್ಜೆಗಳು ಮಂದಡಿಯಿಡಲು ಸಾಧ್ಯ. ದುರದೃಷ್ಟವಶಾತ್ ಹಾಲಿ ಕಸಾಪ ಅಧ್ಯಕ್ಷರ ಕೆಲವು ನಿರ್ಧಾರಗಳು, ತಜ್ಞರ ಸಮಿತಿಯಿಂದ ನಿರ್ದೇಶಿಸಲಾಗಿದೆ ಎಂದು ಹೇಳಲಾದರೂ, ಈ ಸ್ವರೂಪವನ್ನು ವಿರೂಪಗೊಳಿಸುವ ನಿಟ್ಟಿನಲ್ಲಿ ಸಾಗಿವೆ. ಕನ್ನಡದ ಸಾಹಿತಿ ಕಲಾವಿದರ ಒಂದು ವರ್ಗ ಬಂಡಾಯದ ದನಿ ಎತ್ತಿರುವುದು ಈ ಅಪ್ರಜಾಸತ್ತಾತ್ಮಕ ಕ್ರಮಗಳ ವಿರುದ್ಧ. ಇದನ್ನು ಎಡ-ಬಲಗಳ ಸೈದ್ಧಾಂತಿಕ ಚೌಕಟ್ಟುಗೊಳೊಳಗೆ ಬಂಧಿಸುವ ಮೂಲಕ ಸಂಕೀರ್ಣ ಸಮಸ್ಯೆಯನ್ನು ಸರಳೀಕರಿಸುವುದರ ಬದಲು, ಕನ್ನಡ ಸಾಹಿತ್ಯದ ಭವಿಷ್ಯದ ದೃಷ್ಟಿಯಿಂದ ಮುಕ್ತ ಚರ್ಚೆ ನಡೆಸುವುದು ಕನ್ನಡದ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸುತ್ತದೆ.
ಸಾಂಸ್ಥಿಕ ನೆಲೆಯ ಔನ್ನತ್ಯಗಳು
ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯವನ್ನು ಗುರುತಿಸುವ ಏಜೆಂಟ್ ಅಲ್ಲ , ಬದಲಾಗಿ, ಸಾಹಿತ್ಯ ಸೃಷ್ಟಿಗೆ ಅಗತ್ಯವಾದ ಬೀಜಗಳನ್ನು ಬಿತ್ತುವ, ಸಮಾಜದಲ್ಲಿ ಅಡಗಿರಬಹುದಾದ ಸಾಹಿತ್ಯಕ ಪ್ರತಿಭೆ/ಮನಸ್ಸುಗಳನ್ನು ಪ್ರೋತ್ಸಾಹಿಸಿ ಬೆಳೆಸುವ, ಸಾಹಿತ್ಯ ಕೃತಿಗಳನ್ನು ತಳಮಟ್ಟದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭ ದರದಲ್ಲಿ ದೊರೆಯುವಂತೆ ಮಾಡುವ ಹಾಗೂ ವಿಶಾಲ ಸಮಾಜದ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿ, ಸಂವೇದನಾಶೀಲ ಚಿಂತನಾ ಮಾದರಿಗಳನ್ನು ಹುಟ್ಟುಹಾಕುವ ಹಾಗೂ ವರ್ತಮಾನದ ಸಂದರ್ಭದಲ್ಲಿ ಲಿಂಗ ಸೂಕ್ಷ್ಮತೆಯನ್ನು ವ್ಯವಸ್ಥಿತವಾಗಿ ಪಸರಿಸುವ, ಒಬ್ಬ ವ್ಯವಸಾಯಗಾರ ಸಂಸ್ಥೆಯಾಗಿ ಕೆಲಸ ಮಾಡಬೇಕಿದೆ. ಸಾಹಿತ್ಯವನ್ನು ಆಲಂಕಾರಿಕವಾಗಿ ಕೃಷಿ ಎಂದೂ ನಿರ್ವಚಿಸಲಾಗುತ್ತದೆ ಆದರೆ ಇಲ್ಲಿ ಕೃಷಿಕರನ್ನು ಗುರುತಿಸಿ, ಬೆಳೆಸಿ, ಪ್ರೋತ್ಸಾಹಿಸುವ ಔದಾರ್ಯ ಇರುವ ಒಂದು ಪ್ರಜಾಸತ್ತಾತ್ಮಕ ನಾಯಕತ್ವದ ಅಗತ್ಯವಿದೆಯೇ ಹೊರತು, ಪ್ರಾಚೀನ ಮಾದರಿಯ ಊಳಿಗಮಾನ್ಯ-ಪಿತೃಪ್ರಧಾನ ಯಜಮಾನಿಕೆಯನ್ನು ಹೇರುವ ಮುಂದಾಳತ್ವದ್ದಲ್ಲ.
ಈ ದೃಷ್ಟಿಯಿಂದಲೇ ಕಸಾಪವನ್ನು ಪ್ರಜಾಸತ್ತಾತ್ಮಕ ಕೇಂದ್ರವನ್ನಾಗಿ ಮರು ರೂಪಿಸಬೇಕಿದೆ. ಮಹಿಳಾ ಪ್ರಾತಿನಿಧ್ಯ, ತಳಸಮುದಾಯಗಳ ಪ್ರತಿನಿಧಿತ್ವ, ಅವಕಾಶವಂಚಿತ-ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಅಸ್ಮಿತೆಗಳು ಹಾಗೂ ಕಾರ್ಪೊರೇಟ್ ಮಾರುಕಟ್ಟೆಯ ಹೊಡೆತದಿಂದ ಜರ್ಜರಿತವಾಗುತ್ತಿರುವ ಯುವ ಸಮುದಾಯದ ಸುಭದ್ರ ಭವಿಷ್ಯ ಇವೆಲ್ಲವನ್ನೂ ಒಳಗೊಂಡಂತಹ ಒಂದು ವಿಶಾಲ ಸಾಹಿತ್ಯಕ ಕ್ಯಾನ್ವಾಸ್ ಸಿದ್ಧಪಡಿಸಬೇಕಿದೆ. ಇದು ಸರ್ವಾಧಿಕಾರದ ವಾತಾವರಣದಲ್ಲಿ ಸಾಧ್ಯವಾಗುವುದಿಲ್ಲ. ಎಲ್ಲರನ್ನೂ ಒಳಗೊಳ್ಳುವ (Inclusive)ಮಾದರಿ ಅತ್ಯವಶ್ಯವಾಗಿ ಅನುಸರಿಸಬೇಕಾಗುತ್ತದೆ. ಸರಕಾರಗಳ ಬಣ್ಣ ಯಾವುದೇ ಇರಲಿ, ಕನ್ನಡ ಸಾಹಿತ್ಯದ ಮುನ್ನಡೆಯ ಹಾದಿ ಒಂದೇ ಆಗಿರಬೇಕಾಗುತ್ತದೆ. ಹಾಗಾಗಬೇಕಾದರೆ, ಕಸಾಪ ಒಂದು ಸ್ವಾಯತ್ತ-ಪ್ರಜಾಸತ್ತಾತ್ಮಕ-ಕ್ರಿಯಾಶೀಲ-ಸ್ವತಂತ್ರ ಸಾಂಸ್ಕೃತಿಕ ಸಂಸ್ಥೆಯಾಗಿ ಬೆಳೆಯಬೇಕು. ಮಹೇಶ್ ಜೋಷಿ ಅವರ ವಿರುದ್ಧ ಎದ್ದಿರುವ ಪ್ರತಿರೋಧದ ಕೂಗು, ವ್ಯಕ್ತಿಗತ ನೆಲೆಯಲ್ಲಿ ನೋಡುವುದಕ್ಕಿಂತಲೂ, ವ್ಯವಸ್ಥೆಯ ನೆಲೆಯಲ್ಲಿ ನೋಡಿದಾಗ ಅಲ್ಲಿ ಅಡಗಿರಬಹುದಾದ ‘ಸಾಮಾಜಿಕ ವ್ಯಾಧಿ-ಸಾಂಸ್ಕೃತಿಕ ವ್ಯಸನ’ಗಳನ್ನು ಗುರುತಿಸಲು ಸಾಧ್ಯ.
ಇದು ಕನ್ನಡ ಸಾಹಿತ್ಯ ಲೋಕದ ನೈತಿಕ ಜವಾಬ್ದಾರಿ. ಕಸಾಪ ಸದಸ್ಯತ್ವದಿಂದ ಹೊರತಾಗಿಯೂ ಈ ಜವಾಬ್ದಾರಿಯನ್ನು ನಿಭಾಯಿಸಬೇಕಾದ ತುರ್ತು ಎದುರಾಗಿದೆ.