ಎಚ್‌ಕೆಇ ಸಂಸ್ಥೆಯ 3 ಮೆಡಿಕಲ್ ಕಾಲೇಜುಗಳ ಕಟ್ಟಡ ತೆರವು ಆದೇಶಕ್ಕೆ ಹೈಕೋರ್ಟ್ ತಡೆ
14 ಎಕರೆ ಸರಕಾರಿ ಜಾಗ ತನ್ನ ಹೆಸರಿಗೆ ಬರೆದುಕೊಂಡ ಸಂಸ್ಥೆ: 30 ಕೋ.ರೂ. ವಸೂಲಿಗೆ ಆದೇಶ

ಕಲಬುರಗಿ: ಎಂ.ಆರ್.ಎಂ.ಸಿ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ಟೈಪೆಂಡ್ ದುರ್ಬಳಕೆ ಮಾಡಿಕೊಂಡಿರುವ ವಿವಾದಕ್ಕೆ ಗುರಿಯಾಗಿದ್ದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ಇದೀಗ ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಾಣ ಸೇರಿದಂತೆ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಂಡಿರುವ ಮತ್ತೊಂದು ಆರೋಪವನ್ನು ಎದುರಿಸುತ್ತಿದೆ.
57 ವರ್ಷಗಳಿಂದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಜಮೀನು ಸ್ವಾಧೀನಪಡಿಸಿಕೊಂಡು ಪರವಾನಿಗೆ ಪಡೆಯದೆ ಹಲವು ಕಟ್ಟಡಗಳನ್ನು ನಿರ್ಮಿಸಿದ ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಸಂಸ್ಥೆಯಾಗಿರುವ ಹೈದ್ರಾಬಾದ್ ಕರ್ನಾಟಕ ಶಿಕ್ಷಣ(ಎಚ್ ಕೆಇ) ಸಂಸ್ಥೆಯ ಮೂರು ಮೆಡಿಕಲ್ ಕಾಲೇಜುಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಎಚ್‌ಕೆಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬಿಜೆಪಿ ಎಂಎಲ್‌ಸಿ ಶಶೀಲ್ ನಮೋಶಿ, ಸಂಸ್ಥೆಯ ಕಾರ್ಯದರ್ಶಿ ಮತ್ತು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು ಹೈಕೋರ್ಟ್ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿ, ಕಲಬುರಗಿ ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿದ್ದರು. ಮನವಿ ಪುರಸ್ಕರಿಸಿದ ಹೈಕೊರ್ಟ್‌ನ ನ್ಯಾ.ಎಂ.ಐ.ಅರುಣ್ ಅವರಿದ್ದ ಪೀಠವು, ಆಯುಕ್ತರ ಆದೇಶ, ಸರಕಾರಿ ಅಥವಾ ಸರಕಾರೇತರರು ಈ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳುವ ಮೂಲಕ ಹೊರಡಿಸಿದ ಆದೇಶಗಳನ್ನು ತಡೆಹಿಡಿದು ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿ ಆದೇಶಿಸಿದೆ.
ಏನಿದು ಪ್ರಕರಣ?:
1968ರಲ್ಲಿ ಆಗಿನ ಮೈಸೂರು ಸರಕಾರದ ಲೋಕೋಪಯೋಗಿ ಇಲಾಖೆ ವತಿಯಿಂದ ಕಲಬುರಗಿ ನಗರದ ಬಡೇಪುರ ಪ್ರದೇಶದ ಸರ್ವೇ ನಂ.127ರಲ್ಲಿ ಬರುವ 11 ಎಕರೆ 3 ಗುಂಟೆ ಜಮೀನನ್ನು 50 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. 50 ವರ್ಷಗಳ ಗುತ್ತಿಗೆಯ ಕಾಲಾವಧಿಯು 2018ರಲ್ಲಿ ಮುಗಿದಿದೆ. ಹಾಗಾಗಿ ಗುತ್ತಿಗೆಯ ಅವಧಿ ಮುಗಿದರೂ ಸಂಸ್ಥೆ ಲೀಸ್‌ನ ನವೀಕರಣ ಮಾಡಿಲ್ಲ. ಅಲ್ಲದೆ ಗುತ್ತಿಗೆ ನೀಡಿರುವ ಜಮೀನನ್ನು ಎಚ್ ಕೆಇ ಸಂಸ್ಥೆಯು ನಿಯಮಬಾಹಿರವಾಗಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ತನ್ನ ಹೆಸರಿಗೆ (ತಾವೇ ಮಾಲಕತ್ವ) ವರ್ಗಾವಣೆ ಮಾಡಿಕೊಂಡು ಖಾತಾ ಪಡೆದುಕೊಂಡಿದೆ. 11 ಎಕರೆ 3 ಗುಂಟೆ ಇರುವ ಗುತ್ತಿಗೆ ಜಮೀನು ಸೇರಿಕೊಂಡು ಒಟ್ಟಾರೆ 14 ಎಕರೆ 27 ಗುಂಟೆಯ ಜಮೀನಿನಲ್ಲಿ ಅನುಭವದ್ದಾರನ್ನಾಗಿದೆ. ಹೀಗೆ ಲೀಸ್ ನವೀಕರಣ, ಖಾತಾ ಬದಲಾವಣೆ ಮತ್ತು ಹೆಚ್ಚಿನ ಜಮೀನು ಸ್ವಾಧೀನಪಡಿಸಿಕೊಂಡಿರುವ ಆರೋಪ ಎಚ್ ಕೆಇ ಸಂಸ್ಥೆ ಎದುರಿಸುತ್ತಿದೆ.
ಪ್ರಕರಣ ವಿಚಾರಣೆಗೆ ಬಂದದ್ದು ಹೇಗೆ?:
ಹೈದ್ರಾಬಾದ್ ಶಿಕ್ಷಣ ಸಂಸ್ಥೆಯವರು ನಿಯಮಬಾಹಿರವಾಗಿ ಸಕ್ಷಮ ಪ್ರಾಧಿಕಾರದ ಲೀಸ್ ಆದೇಶ ನವೀಕರಿಸದೇ, ಅದಕ್ಕೆ ಸಂಬಂಧ ಪಟ್ಟ ಬಾಡಿಗೆ ಮೊತ್ತ ಸಂದಾಯ ಮಾಡದೆ ಸರಕಾರಿ ದಾಖಲೆಗಳಲ್ಲಿ ತಾವೇ ಮಾಲಕತ್ವ ಹೊಂದಿರುವುದಾಗಿ ನಮೂದಿಸಿಕೊಂಡಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾತನಾಡಿರುವ ವೀಡಿಯೊ ವೈರಲ್ ಆಗಿತ್ತು. ಸರಕಾರದ ಹಿತಾಸಕ್ತಿ ಅಡಗಿರುವ ವಿಷಯವನ್ನು ಅರಿತು ಕಲಬುರಗಿ ಪ್ರಾದೇಶಿಕ ಆಯುಕ್ತರು ಸ್ವಯಂಪ್ರೇರಿತವಾಗಿ ಮೇಲ್ಮನವಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು.
ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಈ ಪ್ರಕರಣದ ಕುರಿತಾಗಿ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆಯ ಆಯುಕ್ತರು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ಮೇರೆಗೆ ಉನ್ನತ ಅಧಿಕಾರಿಗಳು ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು.
ಪ್ರಕರಣದಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಲೀಸ್ ನವೀಕರಣ ಮಾಡದೆ, ಸರಕಾರಿ ದಾಖಲೆಗಳಲ್ಲಿ ತಾವೇ ಮಾಲಕರೆಂದು ನಮೂದಿಸಿದಲ್ಲದೆ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡು ಸರ್ಕಾರಕ್ಕೆ ಆರ್ಥಿಕವಾಗಿ ಅನ್ಯಾಯ ಮಾಡುತ್ತಿರುವ ಆರೋಪದಲ್ಲಿ ಎಚ್‌ಕೆಇ ಸಂಸ್ಥೆಯು ಪರವಾನಿಗೆ ಪಡೆಯದೆ ನಿರ್ಮಾಣ ಮಾಡಿರುವ ಎಲ್ಲ ಕಟ್ಟಡಗಳನ್ನು ನಿಯಮನುಸಾರವಾಗಿ ದಂಡ ಸಹಿತ ತೆರವುಗೊಳಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಆದೇಶಿಸಿದ್ದಾರೆ.
ಸಂಸ್ಥೆಯು ಈಗಾಗಲೇ ಈಗಿರುವ ಒಟ್ಟಾರೆ 14 ಎಕರೆ 27 ಗುಂಟೆಯಲ್ಲಿ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜು, ಡಾ.ಮಾಲಕರೆಡ್ಡಿ ಹೋಮಿಯೋಪತಿ ಮೆಡಿಕಲ್ ಕಾಲೇಜು ಮತ್ತು ಮಾತೋಶ್ರೀ ತಾರದೇವಿ ರಾಂಪೂರೆ ಫಾರ್ಮಸಿ ಕಾಲೇಜು ಕಟ್ಟಡಗಳನ್ನು ನಿರ್ಮಿಸಿದೆ. ಇದೀಗ ದೊಡ್ಡ ಸಂಕೀರ್ಣದ ಕಟ್ಟಡಗಳನ್ನೇ ತೆರವುಗೊಳಿಸಬೇಕೆಂದು ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅಲ್ಲದೆ, ಲೋಕೋಪಯೋಗಿ ಇಲಾಖೆಯ ಮಾರ್ಗಸೂಚಿಯಂತೆ 2023 ಮತ್ತು 2024ರ ದರದಂತೆ 30,65,86,007 ರೂ.ನ್ನು ‘ಭೂಕಂದಾಯ ಬಾಕಿ’ ಎಂದು ವಸೂಲಿ ಮಾಡಬೇಕೆಂದು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.
ಕಳೆದ ಎಪ್ರಿಲ್‌ನಲ್ಲಿ ಎಚ್‌ಕೆಇ ಸಂಸ್ಥೆಯ ಮೇಲೆ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜಿನ(ಎಂ.ಆರ್.ಎಂ.ಸಿ) 282 ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ಟೈಪೆಂಡ್ ದುರ್ಬಳಕೆ ಆರೋಪದಡಿ ಈ.ಡಿ. ದಾಳಿ ನಡೆಸಿತ್ತು. ಕೋಟ್ಯಂತರ ರೂ. ಸ್ಟೈಪೆಂಡ್ ದುರ್ಬಳಕೆ ಆರೋಪದಲ್ಲಿ ಗಮನ ಸೆಳೆದ ಈ ಸಂಸ್ಥೆ ಈಗ ಮತ್ತೊಂದು ಆರೋಪದಲ್ಲಿ ತಳುಕು ಹಾಕಿದೆ.
ಸರಕಾರಿ ಅಥವಾ ಸರಕಾರೇತರು ಇದಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕಲಬುರಗಿ ಹೈಕೋರ್ಟ್ ಪೀಠ ಹೇಳಿದೆ. ಸರಕಾರ ಕೊಟ್ಟಿರುವ ಕಾರಣಗಳಲ್ಲಿ ಅನೇಕ ತಪ್ಪುಗಳಿವೆ. ಹೈಕೋರ್ಟ್ ತಡೆ ನೀಡಿದರೂ ಪ್ರಾದೇಶಿಕ ಆಯುಕ್ತರು ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದಾರೆ.
-ಶಶೀಲ್ ನಮೋಶಿ, ಎಂಎಲ್‌ಸಿ, ಎಚ್ ಕೆಇ ಸಂಸ್ಥೆಯ ಅಧ್ಯಕ್ಷ
ಲೀಸ್ ಕೊಟ್ಟ 11 ಎಕರೆ ಜಮೀನು ಸೇರಿ ಒಟ್ಟಾರೆ 14 ಎಕರೆ ಸರಕಾರಿ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಸರಕಾರಕ್ಕೆ ಆರ್ಥಿಕವಾಗಿ ನಷ್ಟವನ್ನುಂಟು ಮಾಡಿರುವ ಎಚ್‌ಕೆಇ ಸಂಸ್ಥೆಯ ಮೆಡಿಕಲ್ ಕಾಲೇಜುಗಳ ಬೃಹದಾಕಾರದ ಕಟ್ಟಡಗಳನ್ನೂ ತೆರವುಗೊಳಿಸಬೇಕೆಂದು ಪ್ರಾದೇಶಿಕ ಆಯುಕ್ತರ ಆದೇಶದಿಂದ ಸರಕಾರಿ ಜಮೀನು ಉಳಿದಿದೆ. ಇದು ಕಲಬುರಗಿ ಜನರಿಗೆ ಸಿಕ್ಕ ದೊಡ್ಡ ಜಯ.
-ಶರಣು ಐ.ಟಿ., ಸಾಮಾಜಿಕ ಕಾರ್ಯಕರ್ತ