ಯುದ್ಧದಿಂದ ಯಾರಾದರೂ ನೆಮ್ಮದಿ ಪಡೆದಿದ್ದಾರೆಯೇ?

ಪಹಲ್ಗಾಮ್ ಹತ್ಯೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಭಾರತ, ಪಾಕಿಸ್ತಾನದ ಮೇಲೆ ಯುದ್ಧ ನಡೆಸುವುದು ದೊಡ್ಡ ವಿಷಯವೇನೂ ಅಲ್ಲ. ಯುದ್ಧದ ನಂತರ ಆಗುವ ಪರಿಣಾಮಗಳ ಬಗ್ಗೆ ಮೊದಲೇ ಅರಿತುಕೊಳ್ಳುವುದು ಮುಖ್ಯ. ಆಧುನಿಕ ಜಗತ್ತಿನಲ್ಲಿ ಎಲ್ಲಾ ಯುದ್ಧಗಳು ನಡೆದಿದ್ದು ಮುದಿ ನಾಯಕರ ಕುರ್ಚಿಗಳಿಗಾಗಿ. ಆದರೆ ಯುದ್ಧಗಳಲ್ಲಿ ಸತ್ತವರು ಮಾತ್ರ ಜಗತ್ತಿನಲ್ಲಿ ಏನೇನೂ ಅನುಭವಿಸದ ಯುವಕರು. ಸತ್ತ ಯುವಕರ ಪತ್ನಿಯರು, ಮಕ್ಕಳು ಮತ್ತು ಅವರ ಮುದಿ ಪೋಷಕರ ಗೋಳನ್ನು ಕೇಳುವವರ್ಯಾರು?
ಪಹಲ್ಗಾಮ್ ಘಟನೆಯ ನಂತರ ಸುದ್ದಿ ಚಾನೆಲ್‌ಗಳು ಭಾರತ ಮತ್ತು ಪಾಕಿಸ್ತಾನ ಇನ್ನೇನು ನಾಳೆಯೇ ಯುದ್ಧ ಮಾಡಿಬಿಡುತ್ತವೆ ಎಂಬಂತೆ ಸುದ್ದಿಗಳನ್ನು ಚಿಜಿತ್ತರಿಸುತ್ತಿವೆ, ಜೊತೆಗೆ ಯುದ್ಧ ತಜ್ಞರು ಮತ್ತು ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಕರೆಸಿ ಚೆರ್ಚೆಗಳನ್ನು ಮಾಡುತ್ತಿವೆ. ರಶ್ಯ, ಉಕ್ರೇನ್ ಮೇಲೆ ಮೂರು ವರ್ಷಗಳಿಂದ ದಾಳಿ ನಡೆಸಿ ಸುಸ್ತಾಗಿ ಸುಧಾರಿಸಿಕೊಳ್ಳುವಂತಾಗಿದೆ. ಪಾಕಿಸ್ತಾನ ಇಂದಿನ ಸ್ಥಿತಿಗೆ ತಲುಪಲು ಅಮೆರಿಕ ಹೆಚ್ಚು ಕಾರಣವಾಗಿದೆ. ಜಗತ್ತಿನ ಭೂಪಟದಲ್ಲಿ ಪುಟ್ಟ ಹಕ್ಕಿಗಳಂತಿರುವ ಇಸ್ರೇಲ್ ಮತ್ತು ಫೆಲೆಸ್ತೀನ್ ದೇಶಗಳು ಯುದ್ಧದಿಂದಾಗಿ ತತ್ತರಿಸುತ್ತಿವೆ. ಇನ್ನು ಚೀನಾ ಜಗತ್ತೇ ತನ್ನದು ಎಂಬುದಾಗಿ ಆಗ್ನೇಯ ದೇಶಗಳ ಮೇಲೆ ಕಾಲು ಕೆದರಿಕೊಂಡು ನಿಂತಿದೆ. ಅಂತೂ ಇಂತೂ ಎಲ್ಲಾ ದಾರಿಗಳು ಮೂರನೇ ಯುದ್ಧಕ್ಕೆ ದಾರಿಯಾಗುತ್ತಿವೆ. ಜಗತ್ತಿನ ಮೊದಲ ಮತ್ತು ಎರಡನೇ ವಿಶ್ವ ಮಹಾಯುದ್ಧಗಳು ನಡೆದ ನಂತರ ಏನೆಲ್ಲ ಅನಾಹುತಗಳಾದವು ಎನ್ನುವುದನ್ನು ಜಗತ್ತು ನೆನಪಿಸಿಕೊಳ್ಳಬೇಕಿದೆ.
ಪುರಾಣ ಕಾಲದಲ್ಲಿ ನಡೆದ ಯುದ್ಧಗಳನ್ನು ಕೈಬಿಟ್ಟು ಇತಿಹಾಸದಲ್ಲಿ ದಾಖಲಾಗಿರುವ ಕೆಲವು ಯುದ್ಧಗಳನ್ನು ಗಮನಿಸೋಣ. ಮಧ್ಯ ಯುರೋಪ್‌ನಲ್ಲಿ ಮೂರು ದಶಕಗಳ ಕಾಲ(1618-1648) ಕೂಟ 1: ಬೊಹೆಮಿಯಾ ಸಾಮ್ರಾಜ್ಯ, ಸ್ವೀಡನ್, ಪ್ಯಾಲಟಿನೇಟ್, ಸವೊಯ್, ಟ್ರಾನ್ಸಿಲ್ವೇನಿಯಾ, ಡಚ್ ಗಣರಾಜ್ಯ, ಡೆನ್ಮಾರ್ಕ್ -ನಾರ್ವೆ, ಬ್ರಾಂಡೆನ್ಬರ್ಗ್-ಪ್ರಷ್ಯಾ ಇತ್ಯಾದಿ ಮತ್ತು ಕೂಟ 2: ಸ್ಯಾಕ್ಸನಿ, ಹ್ಯಾಬ್ಸ್ಬರ್ಗ್ ರಾಜಪ್ರಭುತ್ವ, ಸ್ಪ್ಯಾನಿಷ್ ಸಾಮ್ರಾಜ್ಯ, ಬವೇರಿಯಾ ಮತ್ತು ಕೆಥೊಲಿಕ್ ಕೂಟ ಯುದ್ಧದಲ್ಲಿ ಪಾಲ್ಗೊಂಡಿತು. ಈ ಯುದ್ಧದಲ್ಲಿ ಸಾಮ್ರಾಜ್ಯಶಾಹಿಯ 80,000ರಿಂದ 90,000, ಸ್ಪ್ಯಾನಿಷ್‌ನ 90,000 ಮತ್ತು 20,500 ಬವೇರಿಯನ್ನರು ಮಡಿದರು.
1786-1799ರಲ್ಲಿ ತೆರಿಗೆ ಹೆಚ್ಚಿ ಬದುಕಲು ಅಸಾಧ್ಯವಾದ ಕಾರಣ ನಡೆದ ಫ್ರೆಂಚ್ ಕ್ರಾಂತಿಯಲ್ಲಿ ಸುಮಾರು 1,70,000 ಜನರು ಸತ್ತರು. 1850-1864ರ ಮಧ್ಯ ನಡೆದ ಚೀನಾದ ತೈಪೆಂಗ್ ಅಂತರ್ಯುದ್ಧದಲ್ಲಿ ಎರಡರಿಂದ ಮೂರು ಕೋಟಿ ಜನರು ಪ್ರಾಣ ಕಳೆದುಕೊಂಡರು. 1861-1865ರ ಮಧ್ಯದಲ್ಲಿ ನಡೆದ ಅಮೆರಿಕ ಅಂತರ್ಯುದ್ಧದಲ್ಲಿ ಎರಡು ಗುಂಪುಗಳು ತೊಡಗಿಕೊಂಡಿದ್ದವು. ಗುಂಪು 1: ಯುನೈಟೆಡ್ ಸ್ಟೇಟ್ಸ್ ಮತ್ತು ಗುಂಪು 2: ಒಕ್ಕೂಟ ರಾಜ್ಯಗಳು. ಯುನೈಟೆಡ್ ಸ್ಟೇಟ್ಸ್ ಕಡೆ 8,28,000 ಜನರು ಸತ್ತರೆ, 2,82,000 ಜನರು ಗಾಯಗೊಂಡರು ಮತ್ತು 1,81,193 ಜನರನ್ನು ಸೆರೆಹಿಡಿಯಲಾಯಿತು. ಒಕ್ಕೂಟ ರಾಜ್ಯಗಳ ಕಡೆ 8,64,000 ಜನರು ಸತ್ತರೆ, 1,37,000 ಜನರು ಗಾಯಗೊಂಡರು ಮತ್ತು 4,36,658 ಜನರನ್ನು ಸೆರೆಹಿಡಿಯಲಾಯಿತು.
ಚೀನಾದ ಡುಂಗನ್ ಯುದ್ಧ ನಡೆದಿದ್ದು 1862-1877ರ ನಡುವೆ. ಈ ಯುದ್ಧದಲ್ಲಿ ನಿರತರಾದವರು 1: ಕ್ವಿಂಗ್ ರಾಜವಂಶ ಬೆಂಬಲಿಗರು (ರಶ್ಯ, ಹುಯಿ ಮುಸ್ಲಿಮ್ ನಿಷ್ಠಾವಂತರು, ಗನ್ಸುನಲ್ಲಿ ಮಾ ಝಾನಾವೊ ಅಡಿಯಲ್ಲಿ ಖುಫಿಯಾ, ಶಾಂಕ್ಸಿಯ ಬೆಟಾಲಿಯನ್‌ಗಳು ಮತ್ತು ಹುವಾ ಬೆಟಾಲಿಯನ್ ಇತ್ಯಾದಿ).
2: ಕಶ್ಗಾರಿಯಾ ಬೆಂಬಲಿತರು (ಬ್ರಿಟನ್, ಒಟ್ಟೋಮನ್ ಸಾಮ್ರಾಜ್ಯ, ತರಂಚಿ ಸುಲ್ತಾನರು, ಯಾರ್ಖಂಡ್‌ನ್ ಡುಂಗನ್ ಬಂಡುಕೋರರು, ಇಸ್ಲಾಮ್ ಸಾಮ್ರಾಜ್ಯ, ಖೋಟಾನೀಸ್ ಬಂಡುಕೋರರು, ಕಿರ್ಗಿಸ್ ಬಂಡುಕೋರರು ಇತ್ಯಾದಿ). ಈ ಯುದ್ಧದಲ್ಲಿ ಹತ್ಯಾಕಾಂಡಗಳು, ವಲಸೆ, ಕ್ಷಾಮ, ಪ್ಲೇಗ್ ರೋಗದಿಂದ 21 ದಶಲಕ್ಷಗಳ ಜನರು ಪ್ರಾಣ ಕಳೆದುಕೊಂಡರು.
ರಶ್ಯ ಅಂತರ್ಯುದ್ಧದಲ್ಲಿ (1917-1923) ತೊಡಗಿಕೊಂಡ ಬೋಲ್ಷೆವಿಕ್‌ಗಳ ಗುಂಪು, ರಶ್ಯನ್ ಗಣರಾಜ್ಯ (ಬಿಳಿ ಚಳವಳಿ ಮತ್ತು ಬಿಳಿ ಸೇನೆ) ಮತ್ತು ಪ್ರತ್ಯೇಕತಾವಾದಿಗಳ ನಡುವೆ ನಡೆಯಿತು. ಈ ಯುದ್ಧದಲ್ಲಿಯೂ ಅನೇಕ ದೇಶಗಳು ಪಾಲ್ಗೊಂಡಿದ್ದವು. ಇದೇ ಕಾಲದಲ್ಲಿ ಲೆನಿನ್ ಹತ್ಯೆಯೂ ನಡೆಯಿತು. ಯುದ್ಧದಲ್ಲಿ ಒಟ್ಟು 7 ದಶಲಕ್ಷ ಜನರು ಪ್ರಾಣ ಕಳೆದುಕೊಂಡರು. 1921ರ ಹೊತ್ತಿಗೆ ಕೃಷಿ ಭೂಮಿ ಶೇ. 62ಕ್ಕೆ ಕುಗ್ಗಿ ಸುಗ್ಗಿಯ ಇಳುವರಿ ಶೇ. 37ಕ್ಕೆ ಇಳಿಯಿತು. ಕುದುರೆಗಳ ಸಂಖ್ಯೆ 35 ದಶಲಕ್ಷದಿಂದ 24 ದಶಲಕ್ಷಕ್ಕೆ ಮತ್ತು ಜಾನುವಾರುಗಳ ಸಂಖ್ಯೆ 58 ದಶಲಕ್ಷದಿಂದ 37 ದಶಲಕ್ಷಕ್ಕೆ ಇಳಿಯಿತು. ಯುಎಸ್‌ನ ಒಂದು ಡಾಲರ್‌ಗೆ 1920ರಲ್ಲಿ 1,200 ರೂಬಲ್‌ಗೆ ಇಳಿದಿತ್ತು.
ಮೊದಲನೇ ವಿಶ್ವ ಮಹಾಯುದ್ಧ (28.07.1914ರಿಂದ 11.11.1918) ಮಿತ್ರರಾಷ್ಟ್ರಗಳು ಮತ್ತು ಕೇಂದ್ರ ಶಕ್ತಿಗಳು ಎಂಬ ಎರಡು ಒಕ್ಕೂಟಗಳ ನಡುವೆ ನಡೆಯಿತು. ಯುದ್ಧ ಯುರೋಪ್, ಆಫ್ರಿಕಾ, ಮಧ್ಯಪ್ರಾಚ್ಯ, ಪೆಸಿಫಿಕ್, ಅಟ್ಲಾಂಟಿಕ್, ಮೆಡಿಟರೇನಿಯನ್ ಮತ್ತು ಅಡ್ರಿಯಾಟಿಕ್‌ವರೆಗೂ ನಡೆಯಿತು. ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಗೆದ್ದು ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಯುಗೊಸ್ಲಾವಿಯಾ, ಜರ್ಮನಿ, ಪೋಲ್ಯಾಂಡ್, ಸೋವಿಯತ್ ಒಕ್ಕೂಟ, ಲಿಥುವೇನಿಯಾ, ಎಸ್ಟೋನಿಯಾ, ಲಾಟ್ವಿಯಾ, ಆಸ್ಟ್ರಿಯಾ, ಹಂಗೇರಿ, ಝೆಕೊಸ್ಲೊವಾಕಿಯಾ, ಟರ್ಕಿ, ಹೆಜಾಜ್ ಮತ್ತು ಯಮೆನ್‌ನಂತಹ ಹೊಸ ದೇಶಗಳ ರಚನೆಯಾಯಿತು. ಜರ್ಮನ್ ವಸಾಹತುಗಳು ಮತ್ತು ಇತರ ಪ್ರದೇಶಗಳನ್ನು ಗೆದ್ದ ದೇಶಗಳಿಗೆ ವರ್ಗಾಯಿಸಲಾಯಿತು. ಒಟ್ಟೋಮನ್ ಸಾಮ್ರಾಜ್ಯದ ವಿಭಜನೆ, ಆಸ್ಟ್ರಿಯಾ ಹಂಗೇರಿ ವಿಭಜನೆ ನಡೆಯಿತು. ಮಿತ್ರರಾಷ್ಟ್ರಗಳ (ಫ್ರಾನ್ಸ್, ಯು.ಕೆ. ಮತ್ತು ಇತರ ದೇಶಗಳ) ಒಟ್ಟು ಸಾವುಗಳು 90,00,000. ಇದರಲ್ಲಿ 55,25,000 ನಾಗರಿಕರು ಸೇರಿದ್ದರು. ಕೇಂದ್ರ ಶಕ್ತಿ ದೇಶಗಳಾದ ಜರ್ಮನಿ, ಆಸ್ಟ್ರಿಯಾ-ಹಂಗೇರಿ, ಒಟ್ಟೋಮನ್ ಸಾಮ್ರಾಜ್ಯ, ಬಲ್ಗೇರಿಯಾ ಮತ್ತು ಇತರ ದೇಶಗಳ ಒಟ್ಟು ಸಾವುಗಳು 80,00,000. ಇದರಲ್ಲಿ ನಾಗರಿಕರ ಸಾವುಗಳು 37,00,000.
ಎರಡನೇ ವಿಶ್ವ ಮಹಾಯುದ್ಧ 01.09.1939ರಿಂದ 02.09.1945ರ ನಡುವೆ ನಡೆಯಿತು. ಈ ಯುದ್ಧವೂ ಮಿತ್ರರಾಷ್ಟ್ರಗಳು ಮತ್ತು ಕೇಂದ್ರ ಶಕ್ತಿದೇಶಗಳ ಮಧ್ಯೆ ನಡೆಯಿತು. ಮೊದಲನೇ ಯುದ್ಧ ನಡೆದ ದೇಶ/ಪ್ರದೇಶಗಳ ಜೊತೆಗೆ ಹಿಂದೂ ಮಹಾಸಾಗರ, ಆಗ್ನೇಯ ಏಶ್ಯ, ಚೀನಾ, ಜಪಾನ್, ಮೆಡಿಟರೇನಿಯನ್, ಆಸ್ಟ್ರೇಲಿಯ, ಕೆರಿಬಿಯನ್, ಉತ್ತರ ಮತ್ತು ದಕ್ಷಿಣ ಅಮೆರಿಕಕ್ಕೆ ಹರಡಿಕೊಂಡಿತು. ಪ್ರಮುಖ ಮಿತ್ರ ರಾಷ್ಟ್ರಗಳ ನಾಯಕರು ಜೋಸೆಫ್ ಸ್ಟಾಲಿನ್, ಫ್ರಾಂಕ್ಲಿನ್ ಡಿ ರೊಸ್ವೆಲ್ಟ್, ವಿನ್‌ಸ್ಟನ್ ಚರ್ಚಿಲ್ ಮತ್ತು ಚಿಯಾಂಗ್ ಕೈ-ಶೇಕ್. ಮಿಲಿಟರಿ (1,60,00,000), ನಾಗರಿಕರು (4,50,00,000) ಸೇರಿ ಒಟ್ಟು ಸಾವುಗಳು 6,10,00,000. ಕೇಂದ್ರ ಶಕ್ತಿದೇಶಗಳ ನಾಯಕರು ಅಡಾಲ್ಫ್ ಹಿಟ್ಲರ್, ಹಿರೋಹಿಟೊ ಮತ್ತು ಬೆನಿಟೊ ಮುಸ್ಸೋಲಿನಿ. ಮಿಲಿಟರಿ 8,00,000, ನಾಗರಿಕರು 40,00,000 ಸೇರಿ ಒಟ್ಟು ಸಾವುಗಳು 1,20,00,000.
ಈ ಎರಡೂ ವಿಶ್ವ ಮಹಾಯುದ್ಧಗಳಲ್ಲಿ ಸಾವಿರಾರು ಬ್ರಿಟಿಷ್-ಭಾರತೀಯ ಸೈನಿಕರು ಪಾಲ್ಗೊಂಡು ಪ್ರಾಣ ಕಳೆದುಕೊಂಡರು. ಮೊದಲನೇ ವಿಶ್ವ ಮಹಾಯುದ್ಧದಲ್ಲಿ ಪಾಲ್ಗೊಂಡವರ ಸಂಖ್ಯೆ ಸುಮಾರು 17,80,000. ಸತ್ತವರ ಸಂಖ್ಯೆ 62,000 ಮತ್ತು ಗಾಯಗೊಂಡವರ ಸಂಖ್ಯೆ 27,000. ಎರಡನೇ ವಿಶ್ವ ಮಹಾಯುದ್ಧದಲ್ಲಿ ಪಾಲ್ಗೊಂಡವರ ಸಂಖ್ಯೆ 2.5 ದಶಲಕ್ಷ. ಇದರಲ್ಲಿ 87,000 ಸೈನಿಕರು ಪ್ರಾಣ ಕಳೆದುಕೊಂಡು 34,354 ಸೈನಿಕರು ಗಾಯಗೊಂಡರು ಮತ್ತು 67,340 ಸೈನಿಕರನ್ನು ಸೆರೆಹಿಡಿಯಲಾಯಿತು.
ಒಂದು ಕಾಲದಲ್ಲಿ ಜಪಾನ್ ತುಂಬಾ ಕ್ರೂರವಾಗಿ ನಡೆದುಕೊಂಡ ದೇಶ. ಅಮೆರಿಕ ಮೇಲೆ ಕಾಲು ಕೆದರಿಕೊಂಡು ಹೋಗಿ 1941 ಡಿಸೆಂಬರ್ 7ರಂದು ಪರ್ಲ್ ಬಂದರು ಮೇಲೆ ಬಾಂಬ್ ಹಾಕಿತು. ಆನಂತರ ಅಮೆರಿಕ 1945 ಆಗಸ್ಟ್ 6 ಮತ್ತು 9ರಂದು ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಎರಡು ಬಾಂಬ್‌ಗಳನ್ನು ಹಾಕಿತು. 1915 ಮತ್ತು 1937-1954ರ ನಡುವೆ ಎರಡು ಭೀಕರ ಮತ್ತು ದೀರ್ಘವಾದ ಸೀನೋ-ಜಪಾನ್ ಯುದ್ಧಗಳು ನಡೆದವು. ಈ ಯುದ್ಧಗಳಲ್ಲಿ 32,11,000-1,00,00,000 ರಾಷ್ಟ್ರೀಯವಾದಿಗಳು, 38,00,000-1,06,00,000 ಕಮ್ಯುನಿಸ್ಟರು, 25,00,000 ಜಪಾನಿಯರು ಮತ್ತು 1,50,00,000-2,20,00,000 ಕೈಗೊಂಬೆ ದೇಶಗಳು/ಸಹಯೋಗಿಗಳು ಸಾವನ್ನಪ್ಪಿದ್ದರು. ಅಮೆರಿಕ ಬೆಂಕಿ ಹಚ್ಚಿದ ಎರಡು ವಿಯೆಟ್ನಾಂ ದೇಶಗಳ ನಡುವಿನ ರೈಸ್ ಫೀಲ್ಡ್ ಯುದ್ಧದಲ್ಲಿ (1955-1975) 23,26,494-44,47,494 ಜನರು ಪ್ರಾಣ ಕಳೆದುಕೊಂಡರು. ಅಮೆರಿಕ ಯುದ್ಧದಿಂದ ಕಾಲು ಕಿತ್ತಮೇಲೆ ಎರಡೂ ವಿಯೆಟ್ನಾಂ ದೇಶಗಳು 1976ರಲ್ಲಿ ಒಂದಾಗಿ ನೆಮ್ಮದಿ ಪಡೆದುಕೊಂಡವು.
ಮಂಗೋಲರ ಗೆಂಘೀಸ್ ಖಾನ್ (1206-1227) ನಡೆಸಿದ ಆಕ್ರಮಣಗಳಲ್ಲಿ 40 ದಶಲಕ್ಷ ಜನರು ಸತ್ತು ಜಗತ್ತಿನ ಶೇ. 22 ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರು ಎನ್ನಲಾಗಿದೆ. ರಶ್ಯದ ಜೋಸೆಫ್ ಸ್ಟಾಲಿನ್ (1870-1924) ಕಾಲದಲ್ಲಿ ಸತ್ತವರ ಸಂಖ್ಯೆ 9 ದಶಲಕ್ಷ ಎನ್ನಲಾಗಿದೆ. ಇದರಲ್ಲಿ 6 ದಶಲಕ್ಷ ಜನರನ್ನು ಕೊಂದರೆ, ಆತ ತೆಗೆದುಕೊಂಡ ನೀತಿಗಳಿಂದ 3 ಲಕ್ಷ ಜನರನ್ನು ಸಾಯಿಸಲಾಯಿತು ಎಂಬುದಾಗಿ ಇತಿಹಾಸಕಾರ ಸ್ನೈಡರ್ ಹೇಳುತ್ತಾರೆ. ಇನ್ನು ಅಡಾಲ್ಫ್ ಹಿಟ್ಲರ್ 1934-1945ರ ನಡುವೆ ಭೀಕರ ಸೆರೆಮನೆ ಶಿಬಿರಗಳಲ್ಲಿ ನರಮೇಧ, ಒತ್ತೆಯಾಳುಗಳು, ಹತ್ಯೆ ಬಲವಂತ ಕಾರ್ಮಿಕ ‘ದಯಾಮರಣ’, ಹಸಿವು, ವೈದ್ಯಕೀಯ ಪ್ರಯೋಗಗಳು ಮತ್ತು ಭಯೋತ್ಪಾದಕ ಬಾಂಬ್ ದಾಳಿಯಲ್ಲಿ 1,50,03,000 ರಿಂದ 3,15,95,000 ಜನರನ್ನು ಸಾಯಿಸಿದ ಎನ್ನಲಾಗಿದೆ. ಸತ್ತವರಲ್ಲಿ ವೃದ್ಧರು, ರೋಗಿಗಳು, ಯುದ್ಧ ಕೈದಿಗಳು, ಕಾರ್ಮಿಕರು, ವಿಮರ್ಶಕರು, ಸಲಿಂಗಕಾಮಿಗಳು, ಯಹೂದಿಗಳು, ಸ್ಲಾವ್‌ಗಳು, ಸರ್ಬ್‌ಗಳು, ಜರ್ಮನ್ನರು, ಜೆಕ್‌ಗಳು, ಇಟಾಲಿಯನ್ನರು, ಫೋಲ್‌ಗಳು, ಫ್ರೆಂಚ್, ಉಕ್ರೇನಿಯನ್ನರು ಮತ್ತು ಮಕ್ಕಳು ಇದ್ದರು.
ಚೀನಾದ ಮಾವೋ ಝೆಡಾಂಗ್ (1893-1976) 1955ರಲ್ಲಿ ‘ಮಾವೋ ಸುಫಾನ್ ಚಳವಳಿ’ ಮತ್ತು 1957ರಲ್ಲಿ ‘ಬಲಪಂಥೀಯ ವಿರೋಧಿ ಅಭಿಯಾನ’ವನ್ನು ಪ್ರಾರಂಭಿಸಿದ. ಈ ಅಭಿಯಾನದಲ್ಲಿ ಕನಿಷ್ಠ 550,000 ಜನರು ಹೆಚ್ಚಾಗಿ ಬುದ್ಧಿಜೀವಿಗಳು ಮತ್ತು ಭಿನ್ನಮತೀಯರು ಕಿರುಕುಳಕ್ಕೊಳಗಾದರು. 1958ರಲ್ಲಿ ಚೀನಾ ‘ಗ್ರೇಟ್ ಲೀಪ್ ಫಾರ್ವರ್ಡ್’ ಪ್ರಾರಂಭಿಸಲಾಯಿತು. ಇದು ಕೃಷಿ, ಕೈಗಾರಿಕೆ ಮತ್ತು ಆರ್ಥಿಕತೆಯನ್ನು ವೇಗವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿತ್ತು. ಆದರೆ ಇದು ಭೀಕರ ಕ್ಷಾಮಕ್ಕೆ ತುತ್ತಾಗಿ 1958-1962ರ ನಡುವೆ 15-55 ದಶಲಕ್ಷ ಜನರ ಸಾವಿಗೆ ಕಾರಣವಾಯಿತು. 1963ರಲ್ಲಿ ಮಾವೋ ಸಮಾಜವಾದಿ ಶಿಕ್ಷಣ ಚಳವಳಿ ಮತ್ತು 1966ರಲ್ಲಿ ಸಾಂಸ್ಕೃತಿಕ ಕ್ರಾಂತಿಯನ್ನು ಪ್ರಾರಂಭಿಸಿದ. ಇದು ಚೀನೀ ಸಮಾಜದಲ್ಲಿನ ಪ್ರತಿ-ಕ್ರಾಂತಿಕಾರಿ ಅಂಶಗಳನ್ನು ತೆಗೆದುಹಾಕುವ ಕಾರ್ಯಕ್ರಮವಾಗಿದ್ದು ಇದು ಒಂದು ದಶಕದ ಕಾಲ ನಡೆಯಿತು. ಹಿಂಸಾತ್ಮಕ ವರ್ಗ ಹೋರಾಟ, ಸಾಂಸ್ಕೃತಿಕ ಕಲಾಕೃತಿಗಳ ವ್ಯಾಪಕ ನಾಶ ಮತ್ತು ಮಾವೋ ಆರಾಧನೆಯಿಂದ ಗುರುತಿಸಲ್ಪಟ್ಟಿತು. ಈ ಸಮಯದಲ್ಲಿ 10 ದಶಲಕ್ಷ ಜನರು ಕಿರುಕುಳಕ್ಕೊಳಗಾದರೆ, ದಶಲಕ್ಷ ಜನರು ಪ್ರಾಣ ಕಳೆದುಕೊಂಡರು.
ವಿಶೇಷ ಎಂದರೆ ಈಗ ಗೆಂಘೀಸ್ ಖಾನ್, ಅಡಾಲ್ಫ್ ಹಿಟ್ಲರ್, ಜೋಸೆಫ್ ಸ್ಟಾಲಿನ್ ಮತ್ತು ಮಾವೋ ಝೆಡಾಂಗ್ ಅವರವರ ದೇಶಗಳ ನಿರ್ಮಾತೃರು ಎಂದು ಕೊಂಡಾಡಲಾಗುತ್ತಿದೆ. ಜರ್ಮನಿಯ ಅಡಾಲ್ಫ್ ಹಿಟ್ಲರ್ ಮತ್ತು ಅವನ ವಾರಸುದಾರರು ‘ಜಗತ್ತಿನಲ್ಲಿಯೇ ನಾವು, ನಮ್ಮ ರಕ್ತ ಶ್ರೇಷ್ಠ’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಗೆಂಘೀಸ್ ಖಾನ್‌ನನ್ನು ಮಂಗೋಲಿಯಾದ ಮೂಲ ಪುರುಷ ಎಂದು ಕೊಂಡಾಡುತ್ತಾರೆ. ಜೋಸೆಪ್ ಸ್ಟಾಲಿನ್ ಮತ್ತು ಮಾವೋ ಝೆಡಾಂಗ್‌ರನ್ನು ಆಧುನಿಕ ರಶ್ಯ ಮತ್ತು ಚೀನಾ ದೇಶಗಳನ್ನು ಕಟ್ಟಿದವರು ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ಜಗತ್ತಿನ ಮೂಲೆಮೂಲೆಯಲ್ಲೂ ಲೆಕ್ಕವಿಲ್ಲದಷ್ಟು ಯುದ್ಧಗಳು ನಡೆದಿವೆ. ಅದಕ್ಕೂ ಮುಂಚೆ ಜಗತ್ತಿನ ಇತಿಹಾಸದಲ್ಲಿ ಹೆಣ್ಣು-ಹೊನ್ನು-ಮಣ್ಣಿಗಾಗಿ ಹೇರಳವಾಗಿ ಯುದ್ಧಗಳು ನಡೆದಿವೆ. ಇನ್ನು ಮುಂದೆ ನೀರಿಗಾಗಿ ಯುದ್ಧಗಳು ನಡೆಯುತ್ತವೆ ಎನ್ನಲಾಗಿದೆ, ಅದು ಸತ್ಯವೂ ಆಗಿದೆ. ಆದರೆ ಈಗ ನಡೆಯುತ್ತಿರುವ ಎರಡು ರೀತಿಯ ಯುದ್ಧಗಳು ಒಂದು ಪವರ್‌ಗಾಗಿ ಮತ್ತೊಂದು ಧರ್ಮಕ್ಕಾಗಿ.
ಪಹಲ್ಗಾಮ್ ಹತ್ಯೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಭಾರತ, ಪಾಕಿಸ್ತಾನದ ಮೇಲೆ ಯುದ್ಧ ನಡೆಸುವುದು ದೊಡ್ಡ ವಿಷಯವೇನೂ ಅಲ್ಲ. ಯುದ್ಧದ ನಂತರ ಆಗುವ ಪರಿಣಾಮಗಳ ಬಗ್ಗೆ ಮೊದಲೇ ಅರಿತುಕೊಳ್ಳುವುದು ಮುಖ್ಯ. ಆಧುನಿಕ ಜಗತ್ತಿನಲ್ಲಿ ಎಲ್ಲಾ ಯುದ್ಧಗಳು ನಡೆದಿದ್ದು ಮುದಿ ನಾಯಕರ ಕುರ್ಚಿಗಳಿಗಾಗಿ. ಆದರೆ ಯುದ್ಧಗಳಲ್ಲಿ ಸತ್ತವರು ಮಾತ್ರ ಜಗತ್ತಿನಲ್ಲಿ ಏನೇನೂ ಅನುಭವಿಸದ ಯುವಕರು. ಸತ್ತ ಯುವಕರ ಪತ್ನಿಯರು, ಮಕ್ಕಳು ಮತ್ತು ಅವರ ಮುದಿ ಪೋಷಕರ ಗೋಳನ್ನು ಕೇಳುವವರ್ಯಾರು? ಮೊಂಡುವಾದಿ ಪಾಕಿಸ್ತಾನ ಅರ್ಥ ಮಾಡಿಕೊಳ್ಳದೇ ಹೋದರೂ ಭಾರತ ಅರ್ಥಮಾಡಿಕೊಳ್ಳಬೇಕಿದೆ. ಜಗತ್ತನ್ನೇ ಗೆಲ್ಲಲು ಹೊರಟು ಅಲೆಕ್ಸಾಂಡರ್ ದಿ ಗ್ರೇಟ್ ತಾನು ಸಾಯುವ ಮುನ್ನ ತನ್ನ ಖಾಲಿ ಅಂಗೈಯನ್ನು ನೆಲದ ಮೇಲೆ ಬಿಟ್ಟು ಮಣ್ಣುಮುಚ್ಚುವಂತೆ ಹೇಳಿ ಸತ್ತನೆಂಬುದನ್ನು ನೆನಪಿಟ್ಟುಕೊಳ್ಳಬೇಕಾಗಿದೆ.