ಹೈಟೆಕ್ ರೂಪ ಪಡೆದುಕೊಂಡ ಹಂಗರವಳ್ಳಿ ಸರಕಾರಿ ಶಾಲೆ

ಚಿಕ್ಕಮಗಳೂರು: ಆಂಗ್ಲ ಮಾಧ್ಯಮದ ವ್ಯಾಮೋಹ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ರಾಜ್ಯಾದ್ಯಂತ ಹಲವು ಸರಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಹಂಗರವಳ್ಳಿ ಸರಕಾರಿ ಶಾಲೆ ಗ್ರಾಮಸ್ಥರು, ದಾನಿಗಳು,ಶಿಕ್ಷಕರ ಇಚ್ಛಾಶಕ್ತಿ ಹಾಗೂ ಹಳೇ ವಿದ್ಯಾರ್ಥಿಯೊಬ್ಬರ ಅಭಿಮಾನದಿಂದ ಹೈಟೆಕ್ ರೂಪ ಪಡೆದುಕೊಂಡಿದೆ.
ಸುಮಾರು 75 ವರ್ಷಗಳ ಹಿಂದೆ, ಹಂಗರವಳ್ಳಿ ಗ್ರಾಮದಲ್ಲಿ ಒಂದು ಸರಕಾರಿ ಶಾಲೆ ಪ್ರಾರಂಭವಾಯಿತು. ಆರಂಭದಲ್ಲಿ ಮರದ ನೆರಳಿನಲ್ಲಿ ತರಗತಿಗಳು ನಡೆಯುತ್ತಿದ್ದರೂ, ಕ್ರಮೇಣ ಸುಸಜ್ಜಿತ ಕಟ್ಟಡದೊಂದಿಗೆ ಶಾಲೆ ಬೆಳೆಯಿತು. 2000ನೇ ಇಸವಿಗೂ ಮುನ್ನ, ಒಂದರಿಂದ ಏಳನೇ ತರಗತಿಯವರೆಗಿನ ಪ್ರಾಥಮಿಕ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಆದರೆ, 2000ರ ನಂತರ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚಾದಾಗ, ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಶುರು ಮಾಡಿದರು. ಇದರ ಪರಿಣಾಮವಾಗಿ 2009ರ ಹೊತ್ತಿಗೆ ಶಾಲೆಯ ಮಕ್ಕಳ ಸಂಖ್ಯೆ ಕೇವಲ 9ಕ್ಕೆ ಇಳಿದಿತ್ತು. ಶೈಕ್ಷಣಿಕ ಇಲಾಖೆಯು ಶಾಲೆಯನ್ನು 10 ಕಿ.ಮೀ. ದೂರದಲ್ಲಿರುವ ಆಲ್ದೂರು ಪಟ್ಟಣದ ಮತ್ತೊಂದು ಶಾಲೆಗೆ ವಿಲೀನಗೊಳಿಸಲು ಆದೇಶ ಹೊರಡಿಸಿತು.
ಶಾಲೆಯನ್ನು ಉಳಿಸಿಕೊಳ್ಳಲು ಪಣತೊಟ್ಟ ಶಿಕ್ಷಕರು, ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ‘ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್’ ಅನ್ನು ಸ್ಥಾಪಿಸಿದರು. ಮಕ್ಕಳು ಶಾಲೆಗೆ ಬರಲು ವಾಹನ ವ್ಯವಸ್ಥೆ ಇಲ್ಲದಿರುವುದು, ಎಲ್‌ಕೆಜಿ, ಯುಕೆಜಿ ತರಗತಿಗಳು ಇಲ್ಲದಿರುವುದು, ಮತ್ತು ಆಂಗ್ಲ ಭಾಷೆ ಶಿಕ್ಷಣದ ಕೊರತೆಯೇ ಶಾಲೆಯ ಅವನತಿಗೆ ಮುಖ್ಯ ಕಾರಣ ಎಂದು ಅವರು ಗುರುತಿಸಿದರು. ಟ್ರಸ್ಟ್ ಸದಸ್ಯರು ತಲಾ 10 ಸಾವಿರ ರೂ. ದೇಣಿಗೆ ನೀಡುವ ಮೂಲಕ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದಾನಿಗಳಿಂದ ಹಣ ಸಂಗ್ರಹಿಸುವ ಮೂಲಕ ಶಾಲೆಯ ಅಭಿವೃದ್ಧಿಗೆ ಬದ್ಧರಾದರು.
ಇದೇ ಗ್ರಾಮದಲ್ಲಿ ಹುಟ್ಟಿ, ಇದೇ ಶಾಲೆಯ ಹಳೇ ವಿದ್ಯಾರ್ಥಿ, ಪ್ರಸಕ್ತ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿರುವ ಕೆಎಎಸ್ ಅಧಿಕಾರಿ ಎಚ್.ಜಿ.ಪ್ರಭಾಕರ್ ಅವರ ಗಮನಕ್ಕೆ ಈ ವಿಷಯ ತರಲಾಯಿತು. ತಾವು ಕಲಿತ ಶಾಲೆ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದ್ದಕ್ಕೆ ಬೇಸರಗೊಂಡ ಪ್ರಭಾಕರ್ ಅವರು, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ ನೀಡಿದರು. ಅವರ ಪ್ರಯತ್ನದಿಂದ ಶಾಲೆಯಲ್ಲಿ ದ್ವಿಭಾಷಾ ಶಿಕ್ಷಣ ಹಾಗೂ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ದೊರೆಯಿತು.
ರಾಜ್ಯ ಸರಕಾರ, ಕೆಎಎಸ್ ಅಧಿಕಾರಿ ಪ್ರಭಾಕರ್, ಟ್ರಸ್ಟ್ ಸದಸ್ಯರು ಮತ್ತು ದಾನಿಗಳ ನೆರವಿನಿಂದ ಹಂಗರವಳ್ಳಿ ಶಾಲೆ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡದೊಂದಿಗೆ ಹೊಸರೂಪ ಪಡೆದುಕೊಂಡಿದೆ. ಇಂದು ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿಯಿಂದ 7ನೇ ತರಗತಿವರೆಗಿನ ತರಗತಿಗಳು ನಡೆಯುತ್ತಿವೆ. ಮಕ್ಕಳ ಸಂಖ್ಯೆ 9 ರಿಂದ 330ಕ್ಕೆ ಏರಿಕೆಯಾಗಿದೆ. ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳೂ ಈ ಸರಕಾರಿ ಶಾಲೆಗೆ ಮರಳಿ ದಾಖಲಾಗುತ್ತಿದ್ದಾರೆ.
ಹಂಗರವಳ್ಳಿ ಶಾಲೆಯು ಇಂದು ಸುಸಜ್ಜಿತ ಆಟದ ಮೈದಾನ, ವಿಶಾಲವಾದ ಸಭಾಂಗಣ, ಕಂಪ್ಯೂಟರ್ ಪ್ರಯೋಗಾಲಯ ಮತ್ತು ಆಧುನಿಕ ಶೌಚಾಲಯಗಳನ್ನು ಹೊಂದಿದೆ. 25 ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಆಂಗ್ಲ ಮಾಧ್ಯಮ ಬೋಧನೆಗಾಗಿ ಟ್ರಸ್ಟ್ ವತಿಯಿಂದ ಐವರು ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಅವರಿಗೆ ವೇತನವನ್ನೂ ಟ್ರಸ್ಟ್‌ನಿಂದಲೇ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ಗ್ರಾಮಗಳ ಮಕ್ಕಳ ಸೌಕರ್ಯಕ್ಕಾಗಿ ಎರಡು ಸ್ಕೂಲ್ ಬಸ್‌ಗಳನ್ನೂ ಒದಗಿಸಲಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳಿಂದ ಈ ಶಾಲೆ ಪ್ರತೀ ವರ್ಷ ಉತ್ತಮ ಫಲಿತಾಂಶ ಸಾಧಿಸುತ್ತಿದೆ.
ಒಟ್ಟಾರೆಯಾಗಿ, ಮುಚ್ಚುವ ಹಂತದಲ್ಲಿದ್ದ ಹಂಗರವಳ್ಳಿ ಸರಕಾರಿ ಶಾಲೆ, ಗ್ರಾಮಸ್ಥರು, ಶಿಕ್ಷಕರು, ದಾನಿಗಳು ಮತ್ತು ಕೆಎಎಸ್ ಅಧಿಕಾರಿಯೊಬ್ಬರ ಅವಿರತ ಪ್ರಯತ್ನ ಮತ್ತು ಇಚ್ಛಾಶಕ್ತಿಯಿಂದಾಗಿ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಸರಕಾರಿ ಶಾಲೆಗಳನ್ನು ಉಳಿಸಲು ಮತ್ತು ಅಭಿವೃದ್ಧಿಪಡಿಸಲು ಇಚ್ಛಾಶಕ್ತಿ ಇದ್ದರೆ ಸಾಕು ಎಂಬುದಕ್ಕೆ ಈ ಶಾಲೆ ಜೀವಂತ ನಿದರ್ಶನವಾಗಿದೆ.
ನಾನು ಹಂಗರವಳ್ಳಿ ಶಾಲೆಯ ಹಳೇ ವಿದ್ಯಾರ್ಥಿ. ನಾನು ಕಲಿತ ಶಾಲೆ ಮುಚ್ಚಲಿದೆ ಎಂಬ ವಿಷಯ ಗೊತ್ತಾದಾಗ ಬೇಸರವಾಗಿತ್ತು. ಹುಟ್ಟಿದ ಊರು, ಕಲಿತ ಶಾಲೆ, ಬೆಳೆಸಿದ ಸಮಾಜಕ್ಕೆ ಏನಾದರೂ ಕೊಡಲೇಬೇಕು, ಋಣ ತೀರಿಸಬೇಕೆಂದು ಯೋಚನೆ ಮಾಡಿದೆ. ಈ ಕಾರಣಕ್ಕಾಗಿ ನನ್ನೂರಿನ ಸರಕಾರಿ ಶಾಲೆ ಉಳಿಸಲು ಒಂದಿಷ್ಟು ಅಳಿಲು ಸೇವೆ ಮಾಡಿದ್ದೇನಷ್ಟೆ.
-ಎಚ್.ಜಿ.ಪ್ರಭಾಕರ್,ಕೆಎಎಸ್ ಅಧಿಕಾರಿ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ