ಅಂಗೈಯಲ್ಲಿ ದೀಪ ಹಿಡಿದು ಕಾಪಾಡುವ ‘ಕಾಪಾಳರು’
ಮುಟ್ಟಲಾರದವರು ನೋಡಲಾರದವರು ತಲುಪಲಾರದವರು

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ಸಂದರ್ಭ, ನಮ್ಮ ಆಯೋಗ ಕೊಡಗಿನ ಪ್ರವಾಸದಲ್ಲಿತ್ತು, ನಾವು ಬಹುತೇಕ ಕೊಡವರ ಜೀವನ ಪದ್ಧತಿಗಳನ್ನು ಅರಿಯಲು ಕೊಡವರೊಂದಿಗೆ ಓಡಾಡುತ್ತಾ ಕೊಡವರ ಐನ್ ಮನೆಗಳ ಒಕ್ಕ (ಕೊಡವ ಕುಲ) ಖಾಂದನ್ ಗಳ ಬಗ್ಗೆ ವಿವರ ಸಂಗ್ರಹಿಸುತ್ತಿದ್ದೆವು. ಈ ಮಧ್ಯೆ ಮಡಿಕೇರಿಯಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಒಂದಷ್ಟು ಕೆಲಸ ಮಾಡಿಕೊಂಡಿದ್ದ ರಮೇಶ್ ಎನ್ನುವವರು ನಮ್ಮನ್ನು ಭೇಟಿಯಾಗಿ ಕೊಡಗು ಕಾಪಾಳರು ಎಂಬ ಅತಿ ಸಣ್ಣ ಸಮುದಾಯದ ಬಗ್ಗೆ ಮಾಹಿತಿ ನೀಡಿದರು. ‘ಕಾಪಾಳರು’ ಎಂಬ ಸಮುದಾಯವೊಂದು ನಮ್ಮ ಹಿಂದುಳಿದ ವರ್ಗದ ಪ್ರವರ್ಗ 1ರ ಪಟ್ಟಿಯಲ್ಲಿರುವ ಬಗ್ಗೆ ನನಗೆ ಗಮನವಿತ್ತು. ಆದರೆ ಈ ಸಮುದಾಯದವರು ಎಂದೂ ಆಯೋಗಕ್ಕೆ ಅರ್ಜಿ ನೀಡುವುದಾಗಲೀ ಆಯೋಗದ ಮುಂದೆ ಹಾಜರಾಗುವುದಾಗಲೀ ಏನನ್ನೂ ಮಾಡಿರಲಿಲ್ಲ. ಆ ಕಾರಣಕ್ಕೆ ಸಮುದಾಯದ ಬಗ್ಗೆ ವಿಶೇಷವಾಗಿ ಗಮನ ಹರಿಸಿರಲಿಲ್ಲ. ರಮೇಶ್ ಅವರು ಹೇಳಿದಾಕ್ಷಣ ಈ ಬಗ್ಗೆ ನಮ್ಮ ಅಧಿಕಾರಿಗಳನ್ನು ವಿಚಾರಿಸಿದೆ, ಅವರಿಗೆ ಕಾಪಾಳರ ಬಗ್ಗೆ ಕನಿಷ್ಠ ಮಾಹಿತಿಯೂ ಇರಲಿಲ್ಲ.. ನನಗೆ ಕುತೂಹಲವುಂಟಾಯಿತು, ನಮ್ಮ ಆಯೋಗದ ಸದಸ್ಯರೊಂದಿಗೆ ಮಾತನಾಡಿ ಕಾಪಾಳರಿರುವ ಜಾಗಕ್ಕೆ ಹೋಗೋಣ ಅಂದೆ, ಅವರೆಲ್ಲ ‘‘ಸರಿ ಸರ್ ಹೋಗಿ ಬರೋಣ’’ವೆಂದರು. ತಕ್ಷಣ ರಮೇಶರಿಗೆ ವಿಷಯ ತಿಳಿಸಿದೆ. ರಮೇಶ್ ಹೇಳಿದಂತೆ ಕಾಪಾಳರು ಕೊಡಗಿನ ಕಾಡಿನ ಮಧ್ಯೆ ಇದ್ದರು, ಅಲ್ಲಿಗೆ ವಾಹನ ಹೋಗಲು ದಾರಿಯೇ ಇರಲಿಲ್ಲ, ಸುಮಾರು ಹತ್ತಾರು ಕಿ.ಮೀ. ನಡೆಯಬೇಕಿತ್ತು, ನಾನು ಮತ್ತು ನಮ್ಮ ಸದಸ್ಯರು ಸಿದ್ಧರಾಗಿದ್ದೆವು, ಅಧಿಕಾರಿಗಳು ನಡೆಯಬೇಕಲ್ಲ ಎಂಬ ಕಾರಣಕ್ಕೆ ಗೊಣಗುತ್ತಿದ್ದರು.
ನಾವು ಕಾಪಾಳರನ್ನು ಹುಡುಕುತ್ತಾ ಕಾಡು ಹೊಕ್ಕಿದ್ದೆವು, ಮಡಿಕೇರಿಯ ಕಕ್ಕೆಬೆ (ಕುಂಜಿಲ) ಬಳಿಯ ಯುವಕಪಾಡಿ ಎಂಬಲ್ಲಿ ನೆಲೆಸಿದ್ದ ಕಾಪಾಳರನ್ನು ತಲುಪಲು ದುರ್ಗಮ ಹಾದಿಯಲ್ಲಿ ನಾವು ಗಂಟೆಗಟ್ಟಲೆ ನಡೆದಿದ್ದೆವು. ದಟ್ಟ ಅಡವಿಯ ಬೆಟ್ಟ ಗುಡ್ಡಗಳ ಮಧ್ಯೆ ಅತಿ ಎತ್ತರವಾದ ಗುಡ್ಡ ‘ತಂಡಿಯಂಡಮೋಳ್’ ಶಿಖರದ ಅಡಿಯ ಹಚ್ಚ ಹಸುರಿನ ಮಧ್ಯ ಕಾಪಾಳರಿರುವುದು ಗೋಚರವಾಯಿತು. ಕಡೆಗೂ ಕಾಪಾಳರು ಸಿಕ್ಕರು ಎಂಬ ನೆಮ್ಮದಿ ನಮಗೆ. ಕಾಪಾಳರ ಲೋಕ ನಮಗೆ ವಿಶೇಷವಾಗಿ ಕಂಡರೆ ಕಾಪಾಳರಿಗೆ ನಾವು ದುತ್ತನೆ ಎದುರು ಬಂದ ಆಗಂತುಕರಂತೆ ಕಂಡೆವು. ದಾರಿದ್ರ್ಯವೇ ಮೂರ್ತಿವೆತ್ತಂತೆ ಸಣ್ಣ ಸಣ್ಣ ಗುಡಾರಗಳಲ್ಲಿ ಕಾಪಾಳರು ವಾಸಿಸುತ್ತಿದ್ದರು. ಯಾವ ನಾಗರಿಕ ಸಮಾಜದ ಸಂಪರ್ಕವೂ ಇವರಿಗೆ ಇದ್ದಂತೆ ನಮಗೆ ಗೋಚರಿಸಲಿಲ್ಲ. ಇಡೀ ಸಮಾಜವೇ ತಲೆತಗ್ಗಿಸುವಂತಹ ಬಡತನದಲ್ಲಿ ಇವರು ಜೀವಿಸುತ್ತಿದ್ದರು. ಇವರಿಗಾಗಿ ಒಂದು ಆಯೋಗವಿದೆ ಎನ್ನುವುದಿರಲಿ ಒಂದು ಸರಕಾರವಿದೆ ಎಂಬ ಕನಿಷ್ಠ ಅರಿವು ಇವರಿಗೆ ಇದ್ದಂತಿರಲಿಲ್ಲ, ಇವರು ತಮ್ಮ ಗೋಳುಗಳನ್ನು ಹೇಳಿಕೊಳ್ಳುತ್ತಿದ್ದರೆ ನಾವು ಗಾಢಮೌನ ಮತ್ತು ವಿಷಾದದಿಂದ ಕೇಳಿಸಿಕೊಳ್ಳುತ್ತಿದ್ದೆವು, ನಮ್ಮ ಗಿಲ್ಟ್ ನಮ್ಮನ್ನು ಸುಡುತ್ತಿತ್ತು.
ಒಂದಷ್ಟು ದೂರದಲ್ಲಿ ಪಾಳು ಬಿದ್ದ ಒಂದು ಅರಮನೆಯ ಅವಶೇಷಗಳನ್ನು ತೋರಿಸುತ್ತಾ ಅವರ ಕರುಣಾಜನಕ ಕತೆ ಹೇಳತೊಡಗಿದರು...
ಸುಮಾರು ಇನ್ನೂರು ವರ್ಷಗಳ ಹಿಂದೆ ಕೇರಳದ ಯಾವುದೋ ಮೂಲೆಯಿಂದ ಕೊಡಗಿಗೆ ಕಾಪಾಳರನ್ನು ಕರೆದುಕೊಂಡು ಬಂದ ಇತಿಹಾಸವನ್ನು ಅವರಿಗೆ ಅವರ ಪೂರ್ವಿಕರು ಹೇಳಿದಂತೆ ನಮಗೆ ಹೇಳತೊಡಗಿದರು. ಚಿಕ್ಕವೀರರಾಜೇಂದ್ರ ಈ ದುರ್ಗಮ ಕಾಡಿನಲ್ಲಿ ತನ್ನ ವಿಲಾಸಗಳಿಗಾಗಿ ಈ ಪುಟ್ಟ ಅರಮನೆಯನ್ನು ಕಟ್ಟಿಕೊಂಡಿದ್ದನಂತೆ. ಅವನ ಸುತ್ತ ಸೇವಕಿಯರು, ನರ್ತಕಿಯರು, ಪರಿಚಾರಕಿಯರು ಸದಾ ಸುತ್ತುವರಿದಿರುತ್ತಿದ್ದರಂತೆ. ಸಂಗೀತ, ನೃತ್ಯದಲ್ಲಿ ರಾಜನಿಗೆ ಮನೋರಂಜನೆ ನೀಡುವುದು. ರಾಜನ ವಿಲಾಸ, ಶೈಯ್ಯಾಗೃಹಗಳೊಂದಿಗೆ ಅರಮನೆಯಲ್ಲಿ ರಾಜ ತನ್ನ ಮನೋರಂಜನೆಯಲ್ಲಿ ಮೈಮರೆತು ಮುಳುಗಿ ಏಳುವಾಗ ಇಡೀ ರಾತ್ರಿ ಕೈಯಲ್ಲಿ ದೀಪ ಹಿಡಿದು ಕಾಪಾಳರು ಶಯ್ಯಾಗೃಹದ ಸುತ್ತಾ ಸುತ್ತುತ್ತಾ ಕಾವಲು ಕಾಯುತ್ತಾ ಕಾಪಾಡುತ್ತಿದ್ದರು. ಈ ಕಾರಣಕ್ಕಾಗಿ ರಾಜನನ್ನು, ಅರಮನೆಯನ್ನು ಕಾಪಾಡುವ ಇವರಿಗೆ ‘ಕಾಪಾಳ’ರು ಎಂಬ ಹೆಸರು ಬಂತಂತೆ. ಕಾಲಾನುಕ್ರಮದಲ್ಲಿ ರಾಜ ಮತ್ತು ರಾಜಾಶ್ರಯ ಎಲ್ಲವೂ ಕಳೆದು ಹೋದವು. ಆದರೆ ಈ ಕಾಪಾಳರು ಮಾತ್ರ ದಿಕ್ಕು ತೋಚದೆ ಅಲ್ಲೇ ಉಳಿದರು. ಒಂದು ಮಾಹಿತಿಯ ಪ್ರಕಾರ ಈ ಕಾಪಾಳರು ಕೇವಲ ಕಾಯುವವರೇ ಆಗಿರದೆ ರಾಜನಿಂದ ಶಿಕ್ಷೆಗೆ ಒಳಗಾದವರ ರುಂಡಚೇದನ ಮಾಡುವವರು ಆಗಿದ್ದರಂತೆ! ಆದರೆ ಇವರನ್ನು ನೋಡಿದಾಗ ನಮ್ಮ ಮನಸ್ಸಿನಲ್ಲಿ ಇದು ಸತ್ಯ ಎನಿಸಲಿಲ್ಲ.
ನಮ್ಮನ್ನು ಮುತ್ತಿಕೊಂಡ ರಕ್ತಹೀನ ಮಕ್ಕಳನ್ನು ಕಂಡರೆ ನೋವಾಗುತ್ತಿತ್ತು. ಶಾಲೆಯ ಮುಖವನ್ನೇ ನೋಡದ ಅವರು ಅಕ್ಷರಗಳಿಂದ ದೂರವಾಗಿ ಪ್ರಾಣಿಗಳಂತೆಯೇ ಬೆಳೆಯುತ್ತಿದ್ದರು. ಕಷ್ಟಪಟ್ಟು ನಮ್ಮೊಂದಿಗೆ ಬಂದ ಅಧಿಕಾರಿಗಳು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದರು. ಕಾಡಿನಿಂದ ನಾಡಿಗೆ ಹೋಗುವ ಹಾಸ್ಟೆಲ್‌ಗೆ ಮಕ್ಕಳನ್ನು ಸೇರಿಸಲು ಅಲ್ಲೇ ಆದೇಶ ನೀಡಿದೆ. ಹಿಂದುಳಿದ ವರ್ಗದ ಪ್ರವರ್ಗ 1ಕ್ಕೆ ಬರುವ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುವಂತೆ ಅಲ್ಲೇ ಅಧಿಕಾರಿಗಳಿಗೆ ತಿಳಿಸಿ ಆಗಿಂದಾಗ ನನಗೆ ಪ್ರೋಗ್ರೆಸ್ ಬಗ್ಗೆ ತಿಳಿಸಬೇಕೆಂದು ಆದೇಶವಿತ್ತೆ.
ಸಂಜೆ ಸುಮಾರು 5 ಗಂಟೆಯಾಗಿತ್ತು. ನಡೆದೂ ನಡೆದೂ ಸಾಕಷ್ಟು ಬಳಲಿದ್ದೆವು, ಮತ್ತೆ ನಡೆಯುತ್ತಾ ಹೋಗಿ ರಸ್ತೆ ತಲುಪಿದಾಗ ಕೆಲ ಅಧಿಕಾರಿಗಳು ‘‘ಸರ್ ಇಲ್ಲೇ ಹತ್ತಿರದಲ್ಲಿ ಭಾಗಮಂಡಲ ಇದೆ, ಒಂದಷ್ಟು ಹೊತ್ತು ರಿಲ್ಯಾಕ್ಸ್ ಮಾಡಿಕೊಳ್ಳೋಣ’’ ಅಂದರು. ಭಾಗಮಂಡಲದ ಸಿಮೆಂಟ್ ಚೇರಿನ ಮೇಲೆ ಕುಳಿತು ನಾನು ದೊಡ್ಡದಾಗಿ ಉಸಿರಾಡುತ್ತ ನಿಸರ್ಗವನ್ನು ಅನುಭವಿಸುತ್ತಿದ್ದರೆ ನಮ್ಮ ಸದಸ್ಯರು ಹಾಗೂ ಅಧಿಕಾರಿಗಳು ಕೊಳದ ಬಳಿ ಹೋಗಿ ಅರ್ಚಕರ ಬಳಿ ತೀರ್ಥ ಪ್ರಸಾದ ಪಡೆದು ಬಂದರು. ಇದಾವುದರ ಅರಿವು ನನಗಿರಲಿಲ್ಲ, ಕಾಪಾಳರೇ ನನ್ನನ್ನು ಕಾಡುತ್ತಿದ್ದರು.
ಮಾರನೆ ದಿನ ಬೆಳಗ್ಗೆ ನಾನಿದ್ದ ಪ್ರವಾಸಿ ಬಂಗಲೆ ಬಳಿ ಸಂಘಪರಿವಾರದ ಕೆಲವರು ಕುಡಿದು ಬಂದು ಗಲಾಟೆ ಮಾಡಿದರು. ಇದರ ನೇತೃತ್ವವನ್ನು ಅಲ್ಲಿನ ಶಾಸಕ ಬೋಪಯ್ಯ ವಹಿಸಿದ್ದರು. ಯಾವ ಸರಕಾರಿ ಅಧಿಕಾರಿಯು, ರಾಜಕಾರಣಿಯು ಕಾಲಿಡದ ಕಾಪಾಳರನ್ನು ಸ್ಪರ್ಶಿಸಿ ಬಂದ ನನ್ನನ್ನು ಅಭಿನಂದಿಸಲಿಕ್ಕೆ ಬರಬೇಕಾಗಿದ್ದ ಈ ಜನ ನಾನು ಕಾವೇರಿ ತೀರ್ಥವನ್ನು ಪಡೆಯಲಿಲ್ಲ ಎಂಬ ನೆಪಕ್ಕೆ ಹಳೆಯ ಕೊಕಾಕೋಲ ಬಾಟಲಿಯಲ್ಲಿ ‘ತೀರ್ಥ’ ತಂದು ನನಗೆ ಕುಡಿಸಲು ಪ್ರಯತ್ನಿಸುವ ಲಜ್ಜೆಗೆಟ್ಟ ಕೆಲಸಕ್ಕೆ ಮುಂದಾಗಿದ್ದರು!!
‘‘ನನಗೆ ಕಾವೇರಿಯ ಪ್ರತೀ ಹನಿಯೂ ತೀರ್ಥ’’ ಎಂದು ಸಮರ್ಥಿಸಿಕೊಂಡ ನನ್ನ ಮಾತುಗಳು ಬೆಳಗ್ಗೆಯೇ ‘ತೀರ್ಥ’ ಸೇವಿಸಿ ತೂರಾಡಿಕೊಂಡು ಬಂದ ಈ ದೇಶಭಕ್ತರಿಗೆ ಕೇಳಿಸಲೇ ಇಲ್ಲ. ದುರಂತವೆಂದರೆ ಮುಂದೆ ಈ ಶಾಸಕರೇ ವಿಧಾನಸಭೆಯ ಸ್ಪೀಕರ್ ಆಗಿ ಆ ಹುದ್ದೆಯ ಘನತೆಯನ್ನು ಪಾತಾಳಕ್ಕೆ ತಲುಪಿಸಿದ್ದರು! ಅದಿರಲಿ..
ಕೊಡಗು ಕಾಪಾಳರು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿರುವ ಸಮುದಾಯವಾಗಿದ್ದು ವಿಶ್ವದ ಯಾವುದೇ ಮೂಲೆಯಲ್ಲಿ ಈ ಸಮುದಾಯವಿಲ್ಲ ಮತ್ತು ಕೇರಳದಲ್ಲೂ ಕಾಪಾಳರ ಸಂಖ್ಯೆ ಇಳಿಮುಖವಾಗುತ್ತಿದೆಯಂತೆ! ಸುಮಾರು ಇನ್ನೂರು ವರ್ಷಗಳ ಹಿಂದೆ ಕೊಡಗಿಗೆ ಬಂದ ಈ ಸಂತತಿಯವರು ಕೊಡಗರ ಆಚಾರ ವಿಚಾರಗಳನ್ನೇ ಅಳವಡಿಸಿಕೊಳ್ಳುತ್ತಿದ್ದಾರೆ.
ವಿಷೇಶವೆಂದರೆ ಇವರಿಗೆ ವಿಶಿಷ್ಟ ದೈವವೊಂದಿದೆ. ಅದರ ಹೆಸರು ‘ಕುಂಞ್ಞಬೊಳ್ತ್’. ಇವರಿಗೆ ನೇರವಾಗಿ ಒಂದು ಮನೆಯಿಲ್ಲದಿದ್ದರೂ, ಇವರು ನೆಲೆಸಿರುವ ಯಮಿಲಕಪಾಡಿಯಲ್ಲೇ ಇವರ ದೈವಕ್ಕೆ ಒಂದು ಸಣ್ಣ ಗುಡಿ ಕಟ್ಟಿಕೊಂಡಿದ್ದಾರೆ. ಇದರೊಂದಿಗೆ ಇಲ್ಲಿನ ವನದೇವತೆಯಾದ ‘ಚೌಂಡಿಕದೇವಿ’ಯನ್ನೂ ಪೂಜಿಸುತ್ತಾರೆ. ಕೊಡಗಿನ ಹಿಂದುಳಿದ ಸಮಾಜವಾದ ‘ಬಣ್ಣ’ ಸಮಾಜದವರು ಕಕ್ಕಬ್ಬೆ ಗ್ರಾಮದಲ್ಲಿರುವ ನಿಟ್ಟುಮಾಡು ಭಗವತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ನಡೆಸುವಾಗ ಕಾಪಾಳರು ತಮ್ಮ ದೈವವಾದ ‘ಕುಂಞ್ಞಬೊಳ್ತ್’ಗೂ ಉತ್ಸವ ಮಾಡುತ್ತಾರೆ. ಇದರೊಂದಿಗೆ ಕೊಡಗಿನ ದೇವತೆಗಳಾದ ಕಾವೇರಿ ಮತ್ತು ಪಾಡಿ ಇಗ್ಗುತ್ತಪ್ಪ ದೇವರುಗಳನ್ನು ಆರಾಧಿಸುತ್ತಾರೆ.
ಕಾಪಾಳರು ಅತ್ಯಂತ ಬಡವರು, ನಿರ್ಗತಿಕರೂ ಆಗಿದ್ದು ಕಾಫಿತೋಟಗಳಿಗೆ ಕೂಲಿಗೆ ಹೋಗುತ್ತಾರೆ. ಕೆಲವರು ಜೇನು ಸಾಕಣೆ ಮಾಡಿದರೆ ಮತ್ತೆ ಕೆಲವರು ಬಿದಿರಿನಿಂದ ಮೊರ, ಬುಟ್ಟಿ, ಬರ್ಜಿಗಳನ್ನು ಮಾಡುತ್ತಾರೆ. ಭತ್ತದ ಕೃಷಿ ಭೂಮಿಯಲ್ಲಿ ಕೂಲಿಗೆ ಹೋಗುವ ಕಾಪಾಳರು ಕಟ್ಟಡದ ಕೆಲಸ, ರಸ್ತೆ, ಮೋರಿ ಕೆಲಸಗಳಿಗೆ ಹೋಗುತ್ತಾರೆ. ನಮ್ಮ ಗಮನಕ್ಕೆ ಬಂದಂತೆ ಅಲ್ಲಿ 290 ಮಂದಿ ಕಾಪಾಳರಿದ್ದು ಅದರಲ್ಲಿ ಬಹುತೇಕರು 4,5,6 ಮತ್ತು 7ನೇ ತರಗತಿಗೆ ಡ್ರಾಪ್ ಔಟ್‌ಗಳಾಗಿದ್ದಾರೆ. ಎಸೆಸೆಲ್ಸಿ ಮತ್ತು ಪಿಯುಸಿ ತಲುಪಿದವರು ನಾಲ್ಕೈದು ಮಂದಿ ಮಾತ್ರ! ನಮ್ಮ ಹಿಂದುಳಿದ ವರ್ಗದ ಪ್ರವರ್ಗ 1ರಲ್ಲಿ ಕಾಪಾಳರ ಹೆಸರು ನಮೂದಾಗಿದ್ದರೂ ಅವರಿಗೆ ಇದರ ಅರಿವಿರಲಿಲ್ಲ. ಹೀಗಾಗಿ ಸರಕಾರದ ಯಾವುದೇ ಯೋಜನೆಗಳು ಈ ಜನರಿಗೆ ಈವರೆಗೂ ತಲುಪಿಲ್ಲ.
ಶಿಕ್ಷಣ, ಆರೋಗ್ಯ, ವೃತ್ತಿ ಎಲ್ಲದರಿಂದಲೂ ಸಾಮಾಜಿಕವಾಗಿ, ಆರ್ಥಿಕವಾಗಿ ತಬ್ಬಲಿಗಳಾಗಿರುವ ಕಾಪಾಳರ ಏಳಿಗೆಗೆ ನಮ್ಮ ಆಯೋಗದಿಂದ ವಿಶೇಷ ಪ್ಯಾಕೇಜ್ ನೀಡಬೇಕೆಂದು ಸರಕಾರಕ್ಕೆ ಶಿಫಾರಸು ಮಾಡಿದ್ದೇವೆ. ಆದರೆ ಪಂಚೇದ್ರಿಯಗಳನ್ನು ಕಳಕೊಂಡ ಸರಕಾರಗಳು ತನ್ನದೇ ಸರಕಾರದ ಆಯೋಗ ನೀಡಿರುವ ಶಿಪಾರಸುಗಳನ್ನು ಈವರೆಗೂ ತೆರೆದುಕೂಡ ನೋಡಿಲ್ಲ, ಅಧಿಕಾರಿಗಳು, ಶಾಸಕರೂ ಕೂಡ ಇತ್ತ ಗಮನ ಹರಿಸಿಲ್ಲ, ಕಾಪಾಳರಿಗೆ ಇದನ್ನು ಕೇಳಿಪಡೆಯುವ ಶಕ್ತಿ, ಸಂಘಟನೆ ಮತ್ತು ಅರಿವಿಲ್ಲ.
ನಾವು ಅಸಹಾಯಕರಾಗಿ ಮಾತ್ರ ಕಾಪಾಳರ ಬಗ್ಗೆ ಮರುಗುವಂತಾಗಿದೆ.