ಮಲಿನ ಪರಿಸರದಲ್ಲಿ ಓದುತ್ತಿರುವ ಸರಕಾರಿ ಶಾಲಾ ವಿದ್ಯಾರ್ಥಿಗಳು

ಯಾದಗಿರಿ: ಜಿಲ್ಲೆಯ ಕೋಟೆಗಾರವಾಡ ನಗರದ ಸರಕಾರಿ ಪ್ರಾಥಮಿಕ ಶಾಲೆಯ ಎದುರುಗಡೆ ಕೊಳಚೆ ನೀರು ಹರಿಯುತ್ತಿದ್ದು, ಮಳೆ ಬಂದಾಗ ನೀರು ನಿಂತು ದಾರಿಯಿಡೀ ಕೆಸರುಮಯವಾಗಿದೆ.
ಪ್ರತಿದಿನ ಮಕ್ಕಳು ಶಾಲೆಯೊಳಗೆ ಪ್ರವೇಶಿಸಲು ಇಟ್ಟಿಗೆಗಳನ್ನು ಇಟ್ಟುಕೊಂಡೇ ಹೆಜ್ಜೆ ಹಾಕುವಂತಹ ಸ್ಥಿತಿ ಎದುರಾಗುತ್ತಿದೆ. ಈ ದೃಶ್ಯ ನೋಡಿದರೆ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಆಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಶಾಲೆ ಅಂದರೆ ಮಕ್ಕಳ ಭವಿಷ್ಯದ ದೇವಾಲಯವಿದಂತೆ ಆದರೆ ಶಾಲೆಯ ಮುಭಾಗದಲ್ಲೇ ಮಲೀನ ಪರಿಸರ ಮುಂದುವರಿದರೆ ಮಕ್ಕಳ ಆರೋಗ್ಯವೇ ಅಪಾಯಕ್ಕೆ ಸಿಲುಕುತ್ತದೆ. ದುರ್ವಾಸನೆಯ ನಡುವೆ ಪಾಠ ಮಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ವಿಷಯದಲ್ಲಿ ಪೋಷಕರಲ್ಲೂ ಆತಂಕ ಹೆಚ್ಚಾಗಿದೆ. ‘ನಮ್ಮ ಮಕ್ಕಳು ಜ್ವರ, ಚರ್ಮರೋಗಗಳಿಗೆ ತುತ್ತಾಗಬಹುದೆಂಬ ಭಯವಿದೆ’ ಎಂದು ಪೋಷಕರು ಆತಂಕವ್ಯಕ್ತಪಡಿಸುತ್ತಿದ್ದಾರೆ.
ಶಾಲೆಯ ಸುತ್ತಮುತ್ತ ಬಹಿರ್ದಸೆಯಿಂದ ಉಂಟಾಗಿರುವ ಅಸಹ್ಯ ವಾತಾವರಣ ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ, ಸೋಂಕುಗಳು ಹರಡುವ ಭೀತಿ ಹೆಚ್ಚಿಸಿದೆ. ಮತ್ತು ಶಾಲೆಯ ಮುಂಭಾಗದಲ್ಲಿರುವ ಕಾಂಪೌಂಡ್ ಗೋಡೆ ಬಿರುಕು ಬಿಟ್ಟಿದ್ದು ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿ ನಿಂತಿದೆ. ವಿದ್ಯಾರ್ಥಿಗಳು ಪ್ರತಿದಿನ ಈ ಅಪಾಯದ ನೆರಳಿನಲ್ಲಿ ಓಡಾಡುತ್ತಿದ್ದು, ಅವರ ಜೀವ ಅಪಾಯದಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಗೋಡೆಯ ದುರಸ್ತಿ, ಶಾಲೆ ಸುತ್ತಲಿನ ಸ್ವಚ್ಛತೆ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವುದು ಅತ್ಯಂತ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳು ಪ್ರತಿದಿನ ಕೊಳಚೆ ನೀರನ್ನು ದಾಟಿಕೊಂಡೇ ಶಾಲೆಗೆ ಹೋಗುತ್ತಿದ್ದಾರೆ. ನಮ್ಮ ಮಕ್ಕಳ ಆರೋಗ್ಯ ಯಾರು ಹೊಣೆ? ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು.
- ಮೌನೇಶ, ಪೋಷಕರು
ಕೊಟಗಾರವಾಡ್ ನಗರದಲ್ಲಿ ಇರುವ ಸರಕಾರಿ ಶಾಲೆಯ ಸುತ್ತಲೂ ಸುತ್ತುಗೊಡೆ ಇಲ್ಲ. ಜೊತೆಗೆ ಶಾಲೆ ಮುಂಭಾಗದಲ್ಲಿ ಕೊಳಚೆ ನೀರು ಹರಿಯುತ್ತಿದೆ. ಮಕ್ಕಳು ಅದನ್ನು ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಬೇರೆ ನಗರಗಳ ಮಕ್ಕಳಿಗೆ ಉತ್ತಮ ಶಾಲಾ ವಾತಾವರಣವಿದೆ. ಆದರೆ ನಮ್ಮ ಮಕ್ಕಳಿಗೆ ಕೊಳಚೆ ನೀರೇ ಪ್ರವೇಶದ್ವಾರ. ಇಂತಹ ನಿರ್ಲಕ್ಷ್ಯಕ್ಕೆ ಹೊಣೆಗಾರರಾದ ಅಧಿಕಾರಿಗಳು ಕೂಡಲೇ ಅಮಾನತು ಆಗಬೇಕು.
- ಚಂದಪ್ಪ ಮುನಿಯಪ್ಪನೋರ, ಡಿಎಸ್‌ಎಸ್ ಯಾದಗಿರಿ ಜಿಲ್ಲಾ ಸಂಚಾಲಕ