ಎಫ್‌ಎಸ್‌ಎಲ್ ವರದಿ ವಿಳಂಬ: ಆರೋಪ

ಚಾಮರಾಜನಗರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಐದು ಹುಲಿಗಳ ಸಾವಿನ ಪ್ರಕರಣದ ಬೆನ್ನ ಹಿಂದೆಯೇ ನಡೆದ ಚಿರತೆ ಸಾವು , ಕೋತಿಗಳ ಮಾರಣ ಹೋಮ ಪ್ರಕರಣದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿ ಹಂತಕರು ಬಂಧನದ ಭಯದಿಂದ ದೂರ ಇದ್ದಾರೆ.
ಜೂನ್ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಹನೂರು ತಾಲೂಕಿನ ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಬಳಿಯ ಅರಣ್ಯ ಪ್ರದೇಶದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳು ಮೃತಪಟ್ಟವು. ಇದರ ಬೆನ್ನಲ್ಲೇ ಇದೇ ವನ್ಯಜೀವಿಧಾಮ ವ್ಯಾಪ್ತಿಯ ಚಾಮರಾಜನಗರ ಜಿಲ್ಲೆಯ ಹನೂರು ಉಪ ವಿಭಾಗದ ರಾಮಾಪುರ ವನ್ಯಜೀವಿ ವಲಯ (ಕೌದಳ್ಳಿ ಕಚೇರಿ) ಅರಣ್ಯ ಪ್ರದೇಶದಲ್ಲಿ ಚಿರತೆ ಮೃತಪಟ್ಟಿತ್ತು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ- ಕೊಡಸೋಗೆ ಗ್ರಾಮದ ರಸ್ತೆಯಲ್ಲಿ ನಡೆದಿದ್ದ ಕೋತಿಗಳ ಮಾರಣ ಹೋಮ ನಡೆದಿತ್ತು. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿಯಲ್ಲಿ ಅನುಮಾನಾಸ್ಪದವಾಗಿ ಚಿರತೆ ಮೃತಪಟ್ಟಿತ್ತು.
ತನಿಖೆ ಪ್ರಗತಿಯತ್ತ ಚಿರತೆ ಸಾವು ಪ್ರಕರಣ: ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಚಿರತೆಯ ಸಾವಿನ ವರದಿಯನ್ನು ಅರಣ್ಯ ಇಲಾಖೆ ಕಾಯುತ್ತಿದೆ. ವರದಿಯಲ್ಲಿ ಸಾವಿಗೆ ನಿಖರ ಕಾರಣ ಮತ್ತು ವಿಷ ಪ್ರಾಶನವಾಗಿರುವುದು ಖಚಿತವಾದ ಬಳಿಕವಷ್ಟೇ ಮುಂದಿನ ತನಿಖೆ ನಡೆಸಲು ಸಾಧ್ಯ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.
ಆದರೂ ಈ ಪ್ರಕರಣದಲ್ಲಿ ಶಂಕೆ ಇರುವ ವ್ಯಕ್ತಿಯೊಬ್ಬನ ಮೇಲೆ ನಿಗಾವಹಿಸಲಾಗಿದೆ. ಆದರೆ ಶಂಕಿತ ವ್ಯಕ್ತಿ ಗ್ರಾಮದಿಂದ ಬೇರೆ ಕಡೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಯಲ್ಲಿ ಸತ್ತ ಚಿರತೆಯ ಮುಂಗಾಲು ಕತ್ತರಿಸಿರುವುದಾಗಿ ತಿಳಿದುಬಂದಿದೆ. ಈ ಕೃತ್ಯವೆಸಗಿರುವ ಆರೋಪಿಗಳು ಇನ್ನೂ ಸೆರೆ ಸಿಕ್ಕಿಲ್ಲ .
ಈ ನಡುವೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇ ಗಾಲ-ಕೊಡಸೋಗೆ ನಡುವೆ ಪತ್ತೆಯಾದ ಕೋತಿ ಗಳ ಮಾರಣ ಹೋಮ ಅಮಾನವೀಯತೆಯ ಕರಾಳ ಮುಖವಾಡವನ್ನು ಬಿಚ್ಚಿಟ್ಟಿತ್ತು. ಮೇಲ್ನೊಟಕ್ಕೆ ಕೋತಿಗಳಿಗೆ ವಿಷ ಹಾಕಲಾಗಿದೆ. ಸಾಯದೆ ಇದ್ದ ಕೋತಿಗಳ ತಲೆಯ ಮೇಲೆ ಹೊಡೆದು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಯೋಗಾಲಯದಿಂದ ವರದಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಅರಣ್ಯಾ ಧಿಕಾರಿಗಳು ತನಿಖೆಯನ್ನು ಪೂರ್ಣ ಪ್ರಮಾಣದಲ್ಲಿ ಅಂತಿಮಗೊಳಿಸಲು ಆಗದೆ, ಅಪರಾಧಿಗಳನ್ನು ವಶಕ್ಕೆ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ.
ಜು.26 ರಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಹುಲಿ ಸಾವಿನ ಪ್ರಕರಣದ ಆರೋಪಿಗಳು
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ಬಳಿಯ ಗಾಜನೂರು ಸಮೀಪದ ಅರಣ್ಯದಲ್ಲಿ ಐದು ಹುಲಿಗಳ ಸಾವಿಗೆ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು ಜು.26 ನ್ಯಾಯಾಲಯಕ್ಕೆ ಹಾಜರಾಗಲಿರುವರು.
ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳಿಗೆ ವಿಷ ಹಾಕಿದ್ದ ಪ್ರಕರಣದಲ್ಲಿ ಆರೋಪಿಗಳಾದ ಮಾದುರಾಜು, ನಾಗರಾಜು, ಕೋನಪ್ಪ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಜು.26 ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕೋರ್ಟ್‌ಗೆ ವಿಚಾರಣೆ ಹಾಜರಾಗಲಿದ್ದಾರೆ ಎಂದು ಆರೋಪಿಗಳ ಪರ ವಕೀಲ ಎಂ.ಮಹದೇವಪ್ರಸಾದ್(ಎಂ.ಎಂ.ಪಿ) ತಿಳಿಸಿದ್ದಾರೆ.
ಬೇರೆ ಕಡೆ ಕೋತಿಗಳನ್ನು ಸಾಯಿಸಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಬಳಿ ತಂದು ಎಸೆದು ಹೋಗಿದ್ದಾರೆ. ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ಕೋತಿಗಳ ಮರಣದ ತನಿಖೆಗಾಗಿ ಎಫ್‌ಎಸ್‌ಎಲ್ ವರದಿಗೆ ಕಳುಹಿಸಿ ಕಾಯಲಾಗುತ್ತಿದೆ.
-ಎನ್.ಪಿ. ನವೀನ್‌ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಬಂಡೀಪುರ ಉಪ ವಿಭಾಗ
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ರಾಮಾಪುರ ಅರಣ್ಯದಲ್ಲಿ ಮೃತಪಟ್ಟಿದ್ದ ಚಿರತೆ ಪ್ರಕರಣದ ತನಿಖೆ ನಡೆಯುತ್ತಿದೆ. ಸಿಡಿಆರ್ ಮತ್ತು ಇತರ ಮಾಹಿತಿಗಳನ್ನು ಕಲೆ ಹಾಕಾಗುತ್ತಿದೆ.
-ಟಿ. ಹಿರಲಾಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಾಮರಾಜನಗರ ವೃತ್ತ
ಚಾಮರಾಜನಗರ ತಾಲೂಕಿನ ಕೊತ್ತಲವಾಡಿಯ ಕರಿಕಲ್ಲು ಕ್ವಾರಿಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಚಿರತೆಯ ಅಂಗಾಂಗದ ಪರಿಕ್ಷಾ ವರದಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಬರಬೇಕಾಗಿದ್ದು, ವರದಿಯನ್ನು ಆಧರಿಸಿದ ತನಿಖೆಯನ್ನು ಮಾಡಿದ್ದೇವೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
-ಶ್ರೀಪತಿ, ನಿರ್ಧೇಶಕರು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ,ಚಾಮರಾಜನಗರ