ಪರಿಸರ ದಿನಾಚರಣೆ ಅರ್ಥಪೂರ್ಣವಾಗಬೇಕಾದರೆ...
ಇಂದು ವಿಶ್ವ ಪರಿಸರ ದಿನ

1972ರಲ್ಲಿ ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದ ನೆನಪಿನಲ್ಲಿ ಜೂನ್ 5ನ್ನು ‘ವಿಶ್ವ ಪರಿಸರ ದಿನ’ ಎಂದು ಸಾಂಕೇತಿಕವಾಗಿ ಆಚರಿಸಲಾಗುತ್ತದೆ. ಇಂದು ನಮ್ಮ ಪರಿಸರ ಕಾಳಜಿಗಳನ್ನು ಮರು ವಿಮರ್ಶೆಗೆ ಒಡ್ಡಿಕೊಳ್ಳುವ ದಿನ.
ಮನುಷ್ಯನ ಆಸೆ ಆಕಾಂಕ್ಷೆಗಳಿಗೆ ಮಿತಿಯೆಂಬುದೇ ಇಲ್ಲ. ಕೈಗಾರೀಕರಣದ ಹೆಸರಲ್ಲಿ ಅಭಿವೃದ್ಧಿಯ ನೆಪದಲ್ಲಿ ಮರಗಿಡಗಳನ್ನು ಕಡಿದು, ನೆಲ, ಹೊಲ, ಜಲಗಳನ್ನು ಕಲುಷಿತಗೊಳಿಸಿ ಸಸ್ಯರಾಶಿಯನ್ನು ಬಲಿತೆಗೆದು ಕಾಡು ಕಡಿದು ಕಾಂಕ್ರಿಟ್ ನಾಡು ಮಾಡುವ ಹುನ್ನಾರದಿಂದ ನಾವು ಬದುಕುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದೇವೆ. ಭೂತಾಯಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಯಾಂತ್ರೀಕೃತ ಬದುಕಿನಲ್ಲಿ ಜನರು ಉಸಿರಾಡಲು ಕಷ್ಟವಾಗುವ ಪರಿಸ್ಥಿತಿ ಬಂದೊದಗಿದೆ. ಅಕ್ರಮ ಗಣಿಗಾರಿಕೆ, ಅವೈಜ್ಞಾನಿಕ ಮೀನುಗಾರಿಕೆ, ಇಂಧನಗಳ ಪೋಲುಗಾರಿಕೆ, ನೈಸರ್ಗಿಕ ಸಂಪನ್ಮೂಲಗಳ ಕೊಳ್ಳೆಗಾರಿಕೆ ಹೀಗೆ ಒಂದಲ್ಲ, ಎರಡಲ್ಲ. ಹಗಲು ರಾತ್ರಿ ಪರಿಸರದ ಮೇಲೆ ಮನುಷ್ಯನ ದಬ್ಬಾಳಿಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ.
ನಮ್ಮ ಆಧುನಿಕ ಜೀವನ ಶೈಲಿಯ ಅವಶ್ಯಕತೆಗಳನ್ನು ಪೂರೈಸಲು ಪೂರಕವಾಗಿ ಬೆಳೆಯುತ್ತಿರುವ ಆಧುನೀಕರಣ, ವ್ಯಾಪಾರೀಕರಣ, ಕೈಗಾರಿಕೀಕರಣ, ಗಣಿಗಾರಿಕೆ ಇತ್ಯಾದಿಗಳಿಂದ ಪರಿಸರ ಮಾಲಿನ್ಯ ತಾರಕಕ್ಕೇರಿದೆ. ಮನುಷ್ಯ ತನ್ನ ದುರಾಸೆ ತ್ಯಜಿಸಿ, ಕ್ಷಣಿಕ ಸುಖದ ಆಸೆಗೆ ತಿಲಾಂಜಲಿ ಬಿಟ್ಟು, ತಾನು ಬದುಕುವ ನೆಲ-ಜಲಕ್ಕೆ ಗೌರವ ನೀಡಿದಲ್ಲಿ ಮಾತ್ರ ಮುಂದಿನ ಜನಾಂಗಕ್ಕೂ ಬದುಕಲು ಎಡೆಯಾಗಬಹುದು. ಇಲ್ಲವಾದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗಿ, ಭೂಮಿ ಬರಡಾಗಿ, ಉಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ ಮತ್ತು ತಿನ್ನುವ ತುತ್ತು ಅನ್ನಕ್ಕೂ ತತ್ವಾರ ಬರುವ ದಿನಗಳು ದೂರವಿಲ್ಲ. ವಿಪರ್ಯಾಸವೆಂದರೆ ನಮ್ಮ ಜನರ ಪರಿಸರ ಕಾಳಜಿ ಫೇಸ್ ಬುಕ್‌ನಲ್ಲಿ ಗಿಡನೆಟ್ಟ ಚಿತ್ರ ಬಂದಲ್ಲಿ ಲೈಕ್ ಮಾಡುವುದಕ್ಕಷ್ಟೇ ಸೀಮಿತವಾಗಿ ಬಿಡುತ್ತದೆ.
ಕಳೆದ ನಲವತ್ತು ವರ್ಷಗಳಲ್ಲಿ ಮನುಷ್ಯ ಭಯಾನಕವಾಗಿ ಬೆಳವಣಿಗೆಯ ನೆಪದಲ್ಲಿ ಹೊಲ, ನೆಲ, ಜಲವನ್ನು ಕಲುಷಿತಗೊಳಿಸುತ್ತಿದ್ದಾನೆ. ನೋಡು ನೋಡುತ್ತಿದ್ದಂತೆಯೇ ನಮ್ಮ ಭೂಮಂಡಲ ಸಮಸ್ಯೆಗಳ ಆಗರವಾಗಿ ಬೆಳೆದು ನಿಂತಿದೆ. ಜನಸಂಖ್ಯಾ ಸ್ಫೋಟ, ಆಹಾರ ಸಮಸ್ಯೆ, ಶಕ್ತಿ ಸಮಸ್ಯೆ, ಕಚ್ಚಾ ಪದಾರ್ಥಗಳ ಸಮಸ್ಯೆ, ಪರಿಸರ ಮಾಲಿನ್ಯ ಹೀಗೆ ಒಂದಲ್ಲ, ಎರಡಲ್ಲ ಹತ್ತು ಹಲವು ಸಮಸ್ಯೆಗಳು ಭೂತಾಕಾರವಾಗಿ ಬೆಳೆದು ನಿಂತಿದೆ. ಪರಿಸರ ಮಾಲಿನ್ಯ ತಾರಕಕ್ಕೇರಿದೆ. ಇಡೀ ಭೂ ಮಂಡಲದ ಜೀವ ಸಂಕುಲಗಳೇ ವಿನಾಶದತ್ತ ಸಾಗಿವೆ. ಕಾರ್ಖಾನೆಗಳಿಂದ ಕ್ಯಾನ್ಸರ್ ಹಬ್ಬಿಸಬಲ್ಲ ವಿಷಪೂರಿತ ರಾಸಾಯನಿಕಗಳು ದಿನ ನಿತ್ಯವೂ ಪರಿಸರಕ್ಕೆ ಸೇರುತ್ತಿವೆ. ವಾತಾವರಣದ ಓರೆನ್ ವಲಯ ಛಿದ್ರವಾಗುತ್ತಿದೆ. ಹುಳಿ ಮಳೆ ಸುರಿಯ ತೊಡಗಿದೆ. ಕೈಗಾರಿಕಾ ಕಾರ್ಖಾನೆಗಳಿಂದ ಹಸಿರು ಅನಿಲ ಎಂದೇ ಕುಖ್ಯಾತಿ ಪಡೆದ ಇಂಗಾಲದ ಡೈ ಆಕ್ಸೈಡ್, ಮಿಥೇನ್ ಮುಂತಾದ ಅನಿಲಗಳು ನಾವು ಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿ ಸುತ್ತಿದೆ. ಮರುಭೂಮಿ ವಿಸ್ತರಿಸುತ್ತಿದೆ. ಅಂತರ್ಜಲ ಬತ್ತಿ ಕೆರೆ, ಬಾವಿಗಳು ಬರಡಾಗುತ್ತಿದೆ. ನೂರಾರು ಅಡಿ ಅಗೆದರೂ ಕೊಳವೆ ಬಾವಿಗಳಲ್ಲಿ ಹನಿ ನೀರು ಕೂಡ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ನದಿ, ಕೆರೆ, ಸಾಗರಗಳೂ ಮಲಿನಗೊಳ್ಳುತ್ತಿವೆ. ಕುಡಿಯುವ ಹನಿ ನೀರಿಗೂ ತಾತ್ವಾರ ಬಂದೊದಗಿದೆ. ಭೂಗರ್ಭದಲ್ಲಿ ಕಾವು ಏರಿ, ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹವಾಮಾನದಲ್ಲಿ ಅನೀರಿಕ್ಷಿತ ಸ್ಥಿತ್ಯಂತರಗಳೂ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಜೀವ ಸಂಕುಲಗಳ ಸಮತೋಲನಕ್ಕೆ ಧಕ್ಕೆ ಬಂದಿದೆ.
ಆದ್ದರಿಂದ ವಿಶ್ವಪರಿಸರ ದಿನಾಚರಣೆಯು ಅರ್ಥಪೂರ್ಣವಾಗಬೇಕಾದರೆ ಸರಕಾರದ ಜೊತೆಗೆ ಸರಕಾರೇತರ ಸಂಘಸಂಸ್ಥೆಗಳ ಮುಖಾಂತರ ಪರಿಸರ ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು, ಪರಿಸರ ವಿಚಾರವಾದಿಗಳು ಮತ್ತು ಜನಸಾಮಾನ್ಯರಲ್ಲೂ ನಿಜವಾದ ಬದಲಾವಣೆ ಉಂಟಾಗಬೇಕಾಗಿದೆ. ಇಲ್ಲವಾದಲ್ಲಿ ಈ ವಿಶ್ವ ಪರಿಸರ ದಿನವು ಮತ್ತೊಂದು ಘೋಷಣಾ ದಿನವಾಗಿ ಮಾತ್ರ ಉಳಿಯಬಹುದು.
ಹಾಗಾಗಿ ಪರಿಸರಮಾಲಿನ್ಯಕ್ಕೆ ಕಾರಣವಾಗುವ ಮತ್ತು ಭೂತಾಯಿಯ ಒಡಲನ್ನು ಬರಡು ಮಾಡುವ ಎಲ್ಲಾ ಕಾರ್ಯಗಳನ್ನು ನಿಲ್ಲಿಸಲು ಮನಸ್ಸು ಮಾಡಿ ನಾವೂ ಬದುಕೋಣ, ಇತರ ಜೀವ ಸಂಕುಲಗಳನ್ನು ಬದುಕಲು ಅವಕಾಶ ನೀಡೋಣ. ನಮ್ಮ ಮುಂದಿನ ತಲೆಮಾರಿನ ಜೀವಿಗಳು ಬದುಕಲು ಪೂರಕವಾದ ನೆಲ, ಹೊಲ, ಜಲ, ಗಾಳಿ, ನೀರು ಉಳಿಸುವ ಜವಾಬ್ದಾರಿ ನಮ್ಮದಾಗಲಿ.