ಈ ಯುಗದಲ್ಲೂ ಬರಿಗೈಯಲ್ಲಿ ಮಲ ಬಳಿಯುವ ‘ಭಂಗಿ’ಗಳು

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರವೂ ಬದುಕಲಿಕ್ಕೆಂದು ಮತ್ತೇನೂ ಆಸ್ಪದಗಳಿಲ್ಲದೆ ಕಕ್ಕಸುಗುಂಡಿಯೊಳಗೆ ಇಳಿದು ಬೆತ್ತಲೆ ಕೈಗಳಿಂದ ಮಲಗುಂಡಿ ಸ್ವಚ್ಛಗೊಳಿಸುತ್ತಿರುವ ಭಂಗಿ ವೃತ್ತಿನಿರತ ಸಮುದಾಯದವರು ಅಧಿಕೃತ ದಾಖಲೆಗಳ ಪ್ರಕಾರವೇ ಲಕ್ಷಗಟ್ಟಲೆ ಇರುವುದು ಸ್ವಾಯತ್ತ ದೇಶವೊಂದಕ್ಕೆ ಮತ್ತು ಒಕ್ಕೂಟ ವ್ಯವಸ್ಥೆಯೊಳಗಿನ ರಾಜ್ಯವೊಂದಕ್ಕೆ ಅಪಮಾನಕಾರಿ. ಹಾಗಾದರೆ ಇಂತಹ ಬರ್ಬರ ಪದ್ಧತಿಯೊಂದರ ನಿಯಂತ್ರಣಕ್ಕೆ ಮತ್ತು ಇಲ್ಲವಾಗಿಸುವಿಕೆಗೆ ಇಷ್ಟರವರೆಗೆ ಯಾವ ಆಳುವವರು, ಕಾನೂನು ನಿರೂಪಣಾಗಾರರು ಯತ್ನಿಸಿದರೊ? ಇಲ್ಲವೊ? ಎಂಬ ಪ್ರಶ್ನೆಯಂತೂ ಹುಟ್ಟುತ್ತದೆ.
ಭೂಮಿ ಬಗೆದು ಜಗತ್ತಿಗೇ ಬಂಗಾರಕೊಟ್ಟ ಕೆ.ಜಿ.ಎಫ್.ನ ಗಣಿಕಾರ್ಮಿಕ, ಚಿನ್ನ ಖಾಲಿ ಆದ ಮೇಲೆ ಅದೇ ಭೂಮಿಯಿಂದ ಮಲ ಎತ್ತುವವನಾದ. ಇದು ಅನಿವಾರ್ಯವಾಗಿ ‘ಭಂಗಿ’ಗಳಾದ ‘ವಿಕಾಸವಾದ’
ಭಂಗಿ ಎನ್ನುವ ಹೆಸರು ಕೇಳುತ್ತಿದ್ದಂತೆಯೇ ನಮ್ಮ ಕಣ್ಣೆದುರು ಕಸ ಬಳಿಯುವ, ಬೀದಿ ಗುಡಿಸುವ, ಚರಂಡಿ ಸ್ವಚ್ಛ ಮಾಡುವ, ಶೌಚಾಲಯದ ಗುಂಡಿಗಳನ್ನು ಬಳಿಯುತ್ತಿರುವ ಹತಭಾಗ್ಯ ಜನಗಳ ಚಿತ್ರ ಮೂಡುತ್ತವೆ. ಈ ಚಿತ್ರದೊಳಗೆ ಬರಬಹುದಾದ ಸ್ವಚ್ಛತೆ ಆಧಾರಿತ ಕೆಲಸಗಳನ್ನು ಮಾಡುತ್ತಾ ಬರುತ್ತಿರುವ ಸಮುದಾಯ ಅಂತ ಒಂದಿದ್ದರೆ ಅದು ಭಂಗಿ ಸಮುದಾಯ. ಈ ಸಮುದಾಯ ಕಾಲಾನುಕಾಲದಿಂದ ತುಳಿತಕ್ಕೆ ಸಿಕ್ಕಿ ನಜ್ಜುಗುಜ್ಜಾದ ತಲೆಮಾರುಗಳನ್ನು ಕಂಡೇ ಬೆಳೆದು ಬಂದ ಅಸ್ಪಶ್ಯ ಸಮುದಾಯಗಳಲ್ಲೊಂದು. ಅಸ್ಪಶ್ಯ ದಲಿತ ಸಮುದಾಯವು ಏನೆಲ್ಲ ದುಃಖ ದುಮ್ಮಾನಗಳನ್ನು ತನ್ನೊಡಲೊಳಗೆ ಹೊತ್ತಕೊಂಡು ಬಂದಿದೆಯೋ, ಆ ನೋವುಗಳ ಚರಿತ್ರೆಯ ಇತಿಹಾಸದಲ್ಲಿ ಅತಿ ದೊಡ್ಡ ಕೊಂಬೆಯಾಗಿ ಇವತ್ತಿಗೂ ಉಳಿದಿರುವ ಸಮುದಾಯವಿದು. ಜಾತಿಯಾಧಾರಿತ ಅಸಮಾನತೆ ಮತ್ತು ಸಾಮಾಜಿಕ ಕಡುಕಟ್ಟಳೆಗಳಿಂದ ಅಸ್ಪಶ್ಯ ಸಮುದಾಯಗಳು ಏನೆಲ್ಲ ದಬ್ಬಾಳಿಕೆಗಳನ್ನು ಅನುಭವಿಸಿದೆಯೋ, ಆ ದಬ್ಬಾಳಿಕೆಗಳ ಸಂಗ್ರಹದೊಳಗೆ ಅತಿ ಹೆಚ್ಚಿನ ಕಹಿ ಅನುಭವಗಳು ದಾಖಲಾಗಿರುವುದು ಭಂಗಿ ಸಮುದಾಯಗಳೊಳಗೆ. ಒಂದರ್ಥದಲ್ಲಿ ಇವರು ದಲಿತರೊಳಗೆ ದಲಿತರು. ಕೆಲವೊಮ್ಮೆ ದಲಿತರಿಗಿಂತಲೂ ಹೀನಾಯವಾಗಿ ನೋವುಂಡ ಅಸ್ಪಶ್ಯ ಚರಿತ್ರೆಯ ಪರಂಪರೆಯವರು.
ಭಂಗಿಗಳು ಎಂದಾಕ್ಷಣ ನಮ್ಮ ಬಾಲ್ಯದ ಹಲವಾರು ಘಟನೆಗಳು ಕಣ್ಣ ಮುಂದೆ ಬರುತ್ತವೆ. ಎಲ್ಲರೂ ‘ಎಲ್ಲಿ’ ಎಂದು ಕರೆಯುತ್ತಿದ್ದ ಮಲ ಬಾಚಲು ಬರುತ್ತಿದ್ದ ಆ ಹೆಣ್ಣುಮಗಳ ಹೆಸರು ಎಲ್ಲಮ್ಮ. ಆಕೆ ಮನೆಮನೆಗೂ ಹೋಗಿ ಮಂಕರಿಗಳಲ್ಲಿ ಶೇಖರವಾಗಿರುತ್ತಿದ್ದ ಮಲವನ್ನು ತಲೆ ಮೇಲೆ ಹೊತ್ತು, ಮುಖ, ಮೈಮೇಲೆಲ್ಲ ಸೋರಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಆಗ ನಮ್ಮಂತಹ ಸ್ಪಶ್ಯ ಕುಟುಂಬದಲ್ಲಿ ಹುಟ್ಟಿದವರಿಗೆ ಇವೆಲ್ಲ ಸಹಜವೆಂಬಂತೆ ಕಾಣುತ್ತಿದ್ದವು. ಆದರೆ ಅದೇ ಎಲ್ಲಮ್ಮ ಕಕ್ಕಸ್ಸು ಬಾಚಿ ಸೋಪು ಕೂಡ ಹಾಕದೆ ಕೈ ತೊಳೆದುಕೊಂಡು ಬಂದು, ಕೊಟ್ಟ ಮುದ್ದೆ, ಅಂಭ್ರವನ್ನು ಅಂಗೈಲಿಟ್ಟುಕೊಂಡು ಆತುರಾತುರವಾಗಿ ತಿನ್ನುವಾಗ ನಮ್ಮಂತಹ ಬಾಲಕರ ಮನಸ್ಸಲ್ಲೂ ಒಂದು ನೋವಿನ, ಗಿಲ್ಟ್‌ನ ಎಳೆ ಹಾದುಹೋದ ನೆನಪು.
ನಾವೆಲ್ಲ ಬೆಳೆದು ದೊಡ್ಡವರಾಗಿ ಬೆಂಗಳೂರು ಸೇರಿದ ಮೇಲೂ ಒಮ್ಮೊಮ್ಮೆ ಊರಿಗೆ ಹೋದಾಗ ಎಲ್ಲಮ್ಮ ಕಾಣಿಸುತ್ತಿದ್ದರು. ನಂತರ ಮುಂದೊದು ದಿನ ಆಕೆ ಮಣ್ಣಲ್ಲಿ ಮಣ್ಣಾದ ಕತೆಯನ್ನು ಕೇಳಿ ಯಾಕೋ ಮನಸ್ಸು ಘಾಸಿಗೊಂಡಿತು. ಎಲ್ಲಮ್ಮನ ಗಂಡ ಹೊಟ್ಟೆಪ್ಪ, ಆಕೆಯ ಮಕ್ಕಳಾದ ಮುನಿಲಚ್ಮಿ, ಶಂಕರ ಕೂಡ ಕಾಣದಾದರು.
ನನ್ನ ತಾಯಿಯ ಹುಟ್ಟೂರು ಕೆ.ಜಿ.ಎಫ್. ಒಮ್ಮೆ ವಿಲ್ಸನ್ ಕರೆಯ ಮೇರೆಗೆ ಕೆ.ಜಿ.ಎಫ್.ನಲ್ಲಿ ನಡೆದ ಭಂಗಿಗಳ ‘ಪಬ್ಲಿಕ್ ಹಿಯರಿಂಗ್’ನಲ್ಲಿ ಭಾಗವಹಿಸಿ ಅವರ ಬದುಕುಗಳನ್ನು ಹತ್ತಿರದಿಂದ ಕಂಡಾಗಲಂತೂ ತೀವ್ರ ನೋವು, ಒಂದು ರೀತಿಯ ಗಿಲ್ಟ್ ಎಲ್ಲವನ್ನೂ ಅನುಭವಿಸಿದೆ. ನಂತರ ಭಂಗಿಗಳ ಚಳವಳಿಯಲ್ಲಿ ಅವರೊಡನೆ ಭಾಗವಹಿಸತೊಡಗಿದೆ.
ನಾವೆಲ್ಲರೂ ಮಲ ಹೊರುವ ಪದ್ಧತಿ ಅನ್ನುವ ಬರ್ಬರ ಸಾಮಾಜಿಕ ಪದ್ಧತಿ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ, ನೋಡಿದ್ದೇವೆ. ಆದರೆ ನಮ್ಮ ಟಿ.ಕೆ. ದಯಾನಂದ್‌ರವರು ಡಾ.ಅಂಬೇಡ್ಕರ್ ಸಂಶೋಧನಾ ಕೇಂದ್ರಕ್ಕೆ ಬರೆದು ಕೊಟ್ಟ ‘ಭಂಗಿ’ ಎಂಬ ಸಂಶೋಧನಾ ಪುಸ್ತಕ ಭಂಗಿಗಳ ಬದುಕಿನ ಒಳನೋಟಗಳನ್ನು ನೀಡು ವಂತೆ ಮತ್ಯಾವ ಪುಸ್ತಕವೂ ನೀಡಿದ ಉದಾಹರಣೆ ನಾನು ಕಂಡಿಲ್ಲ! ಈ ನನ್ನ ಬರಹಕ್ಕೆ ನನ್ನ ವೈಯಕ್ತಿಕ ಅನುಭವ ಮತ್ತು ಗ್ರಹಿಕೆ ಬಿಟ್ಟರೆ, ಸಾಕಷ್ಟು ಇತರ ವಿಷಯಗಳನ್ನು ಪಡೆದುಕೊಂಡಿದ್ದು ಅಲ್ಲಿಂದಲೇ.
ಮನುಷ್ಯನೊಬ್ಬನ ಮಲವನ್ನು ಮತ್ತೊಬ್ಬ ಮನುಷ್ಯ ಬಳಿಯುತ್ತಾನೆ, ಹಾಗೆ ಬಳಿಯುವುದೇ ಅವನ ಜೀವನ ನಿರ್ವಹಣೆಗೆ ಇರುವ ಒಂದೇ ದಾರಿ ಎಂಬುದನ್ನು ನೆನೆಸಿಕೊಂಡರೆ ತಲೆ ತಗ್ಗಿಸುವಂತಾಗುತ್ತದೆ. ಇಂತಹ ವ್ಯವಸ್ಥೆಯೊಂದನ್ನು ಶತಮಾನಗಳಿಂದ ಆಚರಣೆಯಲ್ಲಿಟ್ಟುಕೊಂಡು ಬಂದ ಸಮಾಜದ ಬಗ್ಗೆ ಜಿಗುಪ್ಸೆಯಷ್ಟೇ ಹುಟ್ಟುತ್ತದೆ. ಮಲಹೊರುವ ವೃತ್ತಿಯನ್ನು ಮಾಡುತ್ತ ಬದುಕುತ್ತಿರುವ ಜನರ ಬಗ್ಗೆ ಹೊರಗಿನಿಂದ ನೋಡುವವರಿಗೆ ಅಷ್ಟು ಸಂಕಟವಾಗುವುದಾದರೆ, ಅಂತಹದ್ದೊಂದು ಯಾತನೆಯ ಬದುಕನ್ನು ಬದುಕುತ್ತಿರುವ ಆ ದಲಿತ ಜನರ ಬದುಕು ಇನ್ನೆಷ್ಟು ದಾರುಣವಾಗಿರಬೇಕು? ಇಂತಹ ದಾರುಣ ಸ್ಥಿತಿಯಲ್ಲಿರುವ ದಲಿತ ಸಮುದಾಯದ ಒಂದು ಪಂಗಡವೇ ‘ಭಂಗಿ’ ಸಮುದಾಯ. ಭಂಗಿ ಸಮುದಾಯಕ್ಕೂ ಈ ಸಮುದಾಯದ ಬೆನ್ನು ಬಿಡದೆ ಕಾಡುತ್ತಿರುವ ಮಲ ಹೊರುವ ವೃತ್ತಿಯ ಶಾಪಕ್ಕೂ ಇರುವ ಅಂತರ್ ಸಂಬಂಧಗಳು ಅತ್ಯಂತ ವೇದನಾಮಯ. ಭಂಗಿಗಳು ದಲಿತರಲ್ಲೇ ದಲಿತರು, ತುಳಿತಕ್ಕೊಳಗಾದವರಲ್ಲಿ ಕೊನೆಯ ಸಾಲಲ್ಲಿ ನಿಂತವರು.
ದೇವರಾಜ ಅರಸುರವರ ಕಾಲದಲ್ಲಿ ದಿವಂಗತ ಬಸವಲಿಂಗಪ್ಪನವರು ಮಲ ಹೊರುವ ಪದ್ಧತಿ ನಿಷೇಧದ ಕಾನೂನನ್ನೂ ಜಾರಿಗೆ ತಂದು ಇಷ್ಟು ವರ್ಷಗಳಾದ ಮೇಲೂ ಮಾಧ್ಯಮಗಳಲ್ಲಿ ಈ ಪದ್ಧತಿ ಜಾರಿಯಲ್ಲಿರುವುದು ಆಗಾಗ ವರದಿಯಾಗುತ್ತಲೇ ಇದೆ. ಸ್ಥಳೀಯ ಸಂಸ್ಥೆಗಳು ಆಧುನಿಕ ನೈರ್ಮಲ್ಯ ಪದ್ಧತಿಯನ್ನು ಬಳಸುವ ವಿಧಾನವನ್ನು ನಿರ್ಲಕ್ಷಿಸುವುದು ಸಹ ಇದಕ್ಕೊಂದು ಕಾರಣವನ್ನಾಗಿ ಗುರುತಿಸಬಹುದು. ಎಲ್ಲದಕ್ಕೂ ಯಂತ್ರಗಳು ಬಂದಿರುವ ಈ ಆಧುನಿಕ ಜಗತ್ತಿನಲ್ಲಿ ಮಲದಗುಂಡಿ, ಶೌಚಾಲಯ ಸ್ವಚ್ಛತೆಗೆ ಆಧುನಿಕ ಯಂತ್ರಗಳನ್ನು ಬಳಸದಿರುವುದು ಏನನ್ನು ತೋರಿಸುತ್ತದೆ..? ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ದಲಿತರಿಗೆ ಮೀಸಲಿಟ್ಟ ವಿಶೇಷ ಘಟಕ ಯೋಜನೆಯ ಅನುದಾನದಲ್ಲೇ ಯಂತ್ರೋಪಕರಣಗಳನ್ನು ಖರೀದಿಸಿ ನೈರ್ಮಲ್ಯ ಪ್ರಕ್ರಿಯೆಯನ್ನು ಯಾಂತ್ರೀಕರಣಗೊಳಿಸಬೇಕಿದೆ. ದುರಂತವೆಂದರೆ ದಲಿತರಿಗೆಂದೇ ಮೀಸಲಿಟ್ಟ ಆ ಅನುದಾನವನ್ನು ವಿವಿಧ ಇಲಾಖೆಗಳ ಅಧಿಕಾರ ಶಾಹಿಯು ದಲಿತರಿಗೇ ಬಳಸುತ್ತಿಲ್ಲ. ಸರಕಾರದ ಉತ್ತಮ ಯೋಜನೆಗಳೂ ಅಧಿಕಾರಿ ವರ್ಗದವರ ನಿರ್ಲಕ್ಷ್ಯ ಮತ್ತು ಉದಾಸೀನತೆಯಿಂದ ದಲಿತರನ್ನು ತಲುಪದಿರುವುದು ಎಲ್ಲರಿಗೂ ತಿಳಿದಿರುವ ಸತ್ಯ.
ದೇವರಾಜ ಅರಸುರವರು ಮುಖ್ಯಮಂತ್ರಿ ಯಾಗಿದ್ದಾಗ ಸಲ್ಲಿಕೆಯಾದ ‘ಐಪಿಡಿ ಸಾಲಪ್ಪನವರ ಅಧ್ಯಯನ ವರದಿ’ ರಾಜ್ಯಸರಕಾರಕ್ಕೆ ಈ ಸಫಾಯಿ ಕರ್ಮಚಾರಿಗಳು ಪೌರಕಾರ್ಮಿಕರ ಅಭಿವೃದ್ಧಿಗೆಂದು 58 ಶಿಫಾರಸುಗಳನ್ನು ಮಾಡಿತ್ತು. ಅವುಗಳಲ್ಲಿ ಯಾವೊಂದು ಈವರೆಗೂ ಆಚರಣೆಗೆ ಬಂದಿಲ್ಲ. ಈ ಶಿಫಾರಸಿನಲ್ಲಿದ್ದ ಪ್ರತಿವರ್ಷ ಸ್ಥಳೀಯ ಸಂಸ್ಥೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಬೇಕು ಎಂಬ ಶಿಫಾರಸನ್ನು ಮಾತ್ರ ಚಾಚೂ ತಪ್ಪದೆ ನೆರವೇರಿಸಿ ಕೊಂಡು ಉಳಿದೆಲ್ಲವನ್ನೂ ಗಾಳಿಗೆ ತೂರಲಾಗಿದೆ!
2011ರ ಜನಗಣತಿಯ ದಾಖಲೆಯ ಪ್ರಕಾರವೇ ಕರ್ನಾಟಕ ರಾಜ್ಯದಲ್ಲಿ 56 ಸಾವಿರ ಮಂದಿ ಮಲ ಹೊರುವವರು ಇದ್ದಾರೆ ಎಂಬುದೇ ರಾಜ್ಯದ 7ಕೋಟಿ ಜನರು ತಲೆ ತಗ್ಗಿಸಬೇಕಾದ ವಿಚಾರ. 2011ರ ಗಣತಿ ಇಡೀ ದೇಶದಲ್ಲಿ 7 ಲಕ್ಷ ಜನ ಮಲ ಹೊರುವವರು ಇದ್ದಾರೆ ಎಂಬುದನ್ನು ಪ್ರಕಟಿಸಿತು. ದೇಶದಲ್ಲಿ ನೀರು ಬಳಸದ ಒಣ ಶೌಚಾಲಯಗಳೇ 7.94 ಲಕ್ಷ ಇದೆ ಎಂಬುದನ್ನು ಈ ವರದಿ ಬಯಲಿಗಿಟ್ಟಿದೆ. ಈ ಗಣತಿಯ ಪ್ರಕಾರ ಕರ್ನಾಟಕದಲ್ಲಿ ಇರುವ ಒಣ ಶೌಚಾಲಯಗಳ ಸಂಖ್ಯೆಯೇ 7,740. ಅನಧಿಕೃತ ಶೌಚಾಲಯಗಳ ಸಂಖ್ಯೆ ಪಕ್ಕಕ್ಕಿಟ್ಟರೂ ಸರಕಾರವೇ ಇಷ್ಟು ಶೌಚಾಲಯಗಳಲ್ಲಿ ಕೈನಲ್ಲಿ ಮಲ ಬಾಚಿ ತಲೆ ಮೇಲೆ ಹೊರುವ ಸ್ಥಿತಿ ಇದೆ ಎಂದು ಒಪ್ಪಿದಂತಾಯಿತು. ಇದರ ಅರ್ಥ ಸರಕಾರವೇ ತಾನು 1993ರಲ್ಲಿ ಇಂತಹ ಒಣ ಶೌಚಾಲಯವನ್ನು ನಿರ್ಮಿಸುವುದರ ವಿರುದ್ದ, ತಲೆಯ ಮೇಲೆ ಮಲ ಹೊರುವುದರ ವಿರುದ್ಧ ರೂಪಿಸಿದ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದಾಗುತ್ತದೆ.
ಈ ಭಂಗಿ ಸಮುದಾಯಕ್ಕೆ ಒಂದೊಂದು ಕಡೆಯಲ್ಲಿ ಒಂದೊಂದು ಹೆಸರು. ಕುಲದೈವ, ಇತಿಹಾಸ, ಸಂಸ್ಕೃತಿಯನ್ನು ಹೊಂದಿರುವ ಭಂಗಿಗಳದ್ದು ನಿಜಕ್ಕೂ ಕುತೂಹಲಕಾರಿ ಸಮಾಜ. ಭಂಗಿಗಳ ಇತಿಹಾಸವನ್ನು ಕೆದಕುತ್ತಾ ಹೋದರೆ ಒಂದಕ್ಕಿಂತ ಒಂದು ಭಿನ್ನವಾದ ವಿವರಗಳು ಬಿಚ್ಚಿಕೊಳ್ಳುತ್ತವೆ. ಭಾರತದ ಚರಿತ್ರೆಯ ದಾಖಲೀಕರಣದ ಮೊದಲ ಪ್ರಯತ್ನದ ಪುಟಗಳಾದ ವೇದಗಳಲ್ಲಿ ‘ಭಂಗಿ’ಗಳನ್ನು ‘ಚಂಡಾಲ’ರೆಂದು ಗುರುತಿಸಿರುವುದೇ ಇವರ ಮೊದಲ ಇತಿಹಾಸದ ಗುರುತಾಗಿದೆ. ‘ಚಾಂಡಾಳ’ಎಂದರೆ ಶೂದ್ರ ಪುರುಷನಿಗೂ ಬ್ರಾಹ್ಮಣ ಸ್ತ್ರೀಗೂ ಜನಿಸಿದವನು ಎಂದರ್ಥ. ‘ಭಂಗಿ’ ಎಂಬ ಪದವು ಸಂಸ್ಕೃತ ಮೂಲದ ಪದವಾಗಿದ್ದು ‘ಶೆರೆ, ಸಾರಾಯಿ, ಮದ್ಯ ಎಂಬರ್ಥವನ್ನು ಕೊಡುತ್ತದೆ’. ವರ್ಣಸಂಕರದಿಂದ ಜನಸಿದವರಲ್ಲಿದ್ದ ಮದ್ಯ ಸೇವನೆಯ ಅಭ್ಯಾಸದ ಕಾರಣಕ್ಕೆ ಚಂಡಾಳರನ್ನು ಭಂಗಿಗಳೆಂದು ಕರೆಯುವ ಅಭ್ಯಾಸ ನಡೆದುಕೊಂಡು ಬಂದಿದೆ.
ಭಂಗಿ ಸಮುದಾಯವು ಚಾರಿತ್ರಿಕ ಕಾಲಮಾನ ದಿಂದಲೂ ಉಳಿದವರು ಯಾರೂ ನಿರ್ವಹಿಸಲು ಹಿಂಜರಿಯುವ ಹೊಲಸು ವೃತ್ತಿಗಳನ್ನು ಮಾಡಿಕೊಂಡು ಬಂದ ಶ್ರಮಿಕ ಸಮುದಾಯ. ಶೌಚವ್ಯವಸ್ಥೆಯನ್ನು ಇಂದಿನಂತೆ ಸಮರ್ಪಕವಾಗಿ ಕಟ್ಟಿಕೊಳ್ಳಲು ಹಿಂಜರಿದ ಅಂದಿನ ಸಮುದಾಯಗಳು ಬಯಲು ಶೌಚ, ಸಾರ್ವಜನಿಕ ಶೌಚ ಎಂಬ ಕೆಟ್ಟ ವ್ಯವಸ್ಥೆಯನ್ನೇ ಅಂದಿನ ದಿನಮಾನಗಳಲ್ಲಿ ರೂಪಿಸಿಕೊಂಡಿದ್ದವು. ಇಂಥ ಕಚ್ಚಾ ಶೌಚ ವ್ಯವಸ್ಥೆಯಲ್ಲಿ ವಿಸರ್ಜನೆಯಾದ ಮಲ ಮೂತ್ರವನ್ನು ವಿಲೇವಾರಿ ಮಾಡುವ ಯಾವ ವ್ಯವಸ್ಥೆಯೂ ಇರಲಿಲ್ಲ. ಅಂತಹ ಅನೈರ್ಮಲ್ಯವಾದ ಶೌಚದ ಸ್ಥಳಗಳನ್ನು ಕೈಯಿಂದ ಎತ್ತಿ ಶುಚಿಗೊಳಿಸುವ ಹೀನ ಕೆಲಸಕ್ಕೆ ಅವತ್ತಿನ ಸಮಾಜವು ಬಲವಂತವಾಗಿ ನೂಕಿದ ಸಮುದಾಯವೇ ಭಂಗಿ ಸಮುದಾಯ. ಕರ್ನಾಟಕ ಸರಕಾರದ ಅಧಿಕೃತ ಮಾಹಿತಿಯಂತೆ ರಾಜ್ಯ ದಲ್ಲಿರುವ ಒಟ್ಟು ಭಂಗಿ ಸಮುದಾಯದ ಸಂಖ್ಯೆ 5,281 ಮಾತ್ರ. ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಚದುರಿ ಹೋಗಿರುವ ಈ ಭಂಗಿ ಸಮುದಾಯದ ಜನರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಅಸ್ಪಶ್ಯ-ದಲಿತ ಜಾತಿಗಳ ಜೊತೆಗೆ ಬೆರೆತು ಬದುಕುತ್ತಿದ್ದಾರೆ.
ಭಂಗಿಗಳ ಮನೆಗಳಲ್ಲಿನ ಹೊಸ್ತಿಲನ್ನು ‘ಕಡಪ’ ಎಂದು ಕರೆಯುತ್ತಾರೆ. ಕಡಪ ಎನ್ನುವುದು ತೆಲುಗಿನ ಪದ, ಕನ್ನಡದಲ್ಲಿ ಹೊಸಲು ಎನ್ನುತ್ತೇವೆ. ಈ ಕಡಪ ತುಂಬಾ ಪವಿತ್ರವೆಂಬ ನಂಬಿಕೆ ಇವರಲ್ಲಿದೆ. ತಮ್ಮ ಪ್ರೀತಿ ಪಾತ್ರರು ಸತ್ತು ಹೋದಾಗ ಹೆಣದ ಮೇಲೆ ಎಸೆಯಲಾಗುವ ಚಿಲ್ಲರೆ ನಾಣ್ಯಗಳನ್ನು ಆರಿಸಿ ತಂದು ಅದನ್ನು ಎಳೆ ಮಕ್ಕಳ ಕುತ್ತಿಗೆಗೆ ದಾರದಿಂದ ಕಟ್ಟುತ್ತಾರೆ ಅಥವಾ ಬಾಗಿಲ ಹೊಸ್ತಿಲಿಗೆ ಬಡಿದಿರುತ್ತಾರೆ. ಮನೆಯನ್ನು ಪ್ರವೇಶಿಸುವಾಗ ಅಥವಾ ತೆರಳುವಾಗ ಹೊಸ್ತಿಲಿನ ನಾಣ್ಯಕ್ಕೆ ನಮಸ್ಕರಿಸುವ ಸಂಪ್ರದಾಯ ಈ ಕುಟುಂಬದಲ್ಲಿರುತ್ತದೆ. ಇದರ ಅರ್ಥ ಸತ್ತವರು ಈ ನಾಣ್ಯದ ರೂಪದಲ್ಲಿ ಸದಾ ನಮ್ಮ ಕಣ್ಮುಂದೆ ಮಕ್ಕಳ ಕತ್ತಿನಲ್ಲೊ, ಬಾಗಿಲಲ್ಲೋ ಇರುತ್ತಾರೆ ಎಂಬ ನಂಬಿಕೆ. ಮನೆಯ ಹೊಸ್ತಿಲಿನ ಕಂಬಕ್ಕೆ ನಾಣ್ಯದ ಜೊತೆ ಕುದುರೆ ಲಾಳವನ್ನು ಬಿಗಿಯಲಾಗುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರವೂ ಬದುಕಲಿಕ್ಕೆಂದು ಮತ್ತೇನೂ ಆಸ್ಪದಗಳಿಲ್ಲದೆ ಕಕ್ಕಸುಗುಂಡಿಯೊಳಗೆ ಇಳಿದು ಬೆತ್ತಲೆ ಕೈಗಳಿಂದ ಮಲಗುಂಡಿ ಸ್ವಚ್ಛಗೊಳಿಸುತ್ತಿರುವ ಭಂಗಿ ವೃತ್ತಿನಿರತ ಸಮುದಾಯದವರು ಅಧಿಕೃತ ದಾಖಲೆಗಳ ಪ್ರಕಾರವೇ ಲಕ್ಷಗಟ್ಟಲೆ ಇರುವುದು ಸ್ವಾಯತ್ತ ದೇಶವೊಂದಕ್ಕೆ ಮತ್ತು ಒಕ್ಕೂಟ ವ್ಯವಸ್ಥೆಯೊಳಗಿನ ರಾಜ್ಯವೊಂದಕ್ಕೆ ಅಪಮಾನಕಾರಿ. ಹಾಗಾದರೆ ಇಂತಹ ಬರ್ಬರ ಪದ್ಧತಿಯೊಂದರ ನಿಯಂತ್ರಣಕ್ಕೆ ಮತ್ತು ಇಲ್ಲವಾಗಿಸುವಿಕೆಗೆ ಇಷ್ಟರವರೆಗೆ ಯಾವ ಆಳುವವರು, ಕಾನೂನು ನಿರೂಪಣಾಗಾರರು ಯತ್ನಿಸಿದರೊ? ಇಲ್ಲವೊ? ಎಂಬ ಪ್ರಶ್ನೆಯಂತೂ ಹುಟ್ಟುತ್ತದೆ.
ಮಲಹೊರುವ ಪದ್ಧತಿ ಕಸುಬು ಮತ್ತು ಒಣ ಶೌಚಾಲಯಗಳ ನಿರ್ಮೂಲನಾ ಕಾಯ್ದೆ (Employment of Manual Scavengers and Construction of Dry Latrines (Prohibition) ACT, 1993) ಅನ್ನು ಮಂಡಿಸಿದ್ದರು. ಅಲ್ಲಿಯವರೆಗೆ ಆಚರಣೆಯಲ್ಲಿದ್ದ ಬಸವಲಿಂಗಪ್ಪನವರು ಅಸ್ತಿತ್ವಕ್ಕೆ ತಂದಿದ್ದ ‘ಮಲಹೊರುವ ಪದ್ಧತಿ ನಿಷೇಧ ಕಾಯ್ದೆ’ಯ ಜಾಗವನ್ನು ಈ ಹೊಸ ಕಾಯ್ದೆಯು ಸ್ಥಾನಪಲ್ಲಟಗೊಳಿಸಿತು. ಆದರೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನ ಆಗಿಲ್ಲ.
ಕೆ.ಜಿ.ಎಫ್.ನ ಗೆಳೆಯರೊಬ್ಬರು ಹೇಳಿದ ಕಣ್ಣಾರೆ ಕಂಡ ಘಟನೆಯೊಂದಿಗೆ ಈ ಬರಹವನ್ನು ಮುಗಿಸುತ್ತೇನೆ... ಚಿನ್ನದ ಗಣಿಕಾರ್ಮಿಕ ಹೊಟ್ಟೆಪಾಡಿನ ಅನುವಾರ್ಯತೆಗಾಗಿ ಮಲಬಳಿಯುವ ಭಂಗಿಯಾದ. ಬೆಳಗ್ಗೆ ಹೆಂಡತಿ ಮತ್ತು ಪುಟ್ಟ ಮಗುವನ್ನು ಬಿಟ್ಟು ಹೋದರೆ, ಸಂಜೆ ಬರಿಗೈಯಲ್ಲಿ ಮಲ ಬಳಿದು ಶೆಡ್‌ಗೆ ಹಿಂದಿರುಗುತ್ತಿದ್ದ. ಅಪ್ಪನ ಬರುವಿಕೆಗಾಗಿ ಮಗು ಬಾಗಿಲಲ್ಲೇ ಕಾಯುತ್ತಿತ್ತು. ಅಪ್ಪ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಊಟಕ್ಕೆ ಕುಳಿತರೆ ಮಗು ಬಂದು ತೊಡೆಯ ಮೇಲೆ ಕುಳಿತು ತುತ್ತಿಗಾಗಿ ಬಾಯಿ ತೆರೆಯುತ್ತಿತ್ತು. ಮಗುವಿಗೆ ತಿನ್ನಿಸಲು ತುತ್ತನ್ನು ಕೈಗೆತ್ತಿಕೊಂಡರೆ ಕೈಗೆ ಮೆತ್ತಿದ ಮಲ ನೆನಪಾಗಿ ಆತ ಗಳಗಳನೆ ಅತ್ತು, ಮಗುವಿಗೆ ತುತ್ತು ತಿನ್ನಿಸದೆ ಮಗುವನ್ನು ಹೆಂಡತಿಯ ಕೈಗೆ ಕೊಟ್ಟು ಎದ್ದುಬಿಡುತ್ತಿದ್ದ...