ದ.ಕ. ಜಿಲ್ಲೆಗೆ ‘ತುಳು ನಾಡು’ ಹೆಸರು ಸೂಕ್ತ

ದಕ್ಷಿಣ ಕನ್ನಡ ಹೆಸರನ್ನು ಬದಲಾಯಿಸುವುದಿದ್ದರೆ ತುಳು ನಾಡು ಎನ್ನುವುದು ಸೂಕ್ತವಾದೀತು. ಸೌತ್ ಕೆನರಾ ಎಂಬ ಹೆಸರು ಈ ಜಿಲ್ಲೆಗೆ ಹಿಂದೆ ಇತ್ತು. ಅದರ ವ್ಯಾಪ್ತಿ ವಿಸ್ತಾರವಾಗಿತ್ತು. ಅದೇ ಪ್ರದೇಶ ತುಳುನಾಡು ಎಂದು ಕರೆಸಿಕೊಳ್ಳಲು ಯೋಗ್ಯವಾಗಿದೆ. ಈ ಪ್ರದೇಶ ಬಹತೇಕ ಜನರ ಭಾಷೆಯಾದ ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಬೇಕು ಎನ್ನುವ ಬೇಡಿಕೆ ಇದುವರೆಗೆ ಈಡೇರಿಲ್ಲ. ಅದು ಈಡೇರುವ ಲಕ್ಷಣವೂ ಕಂಡು ಬರುತ್ತಿಲ್ಲ. ಈ ಸಂದರ್ಭದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಸ್ವೀಕರಿಸಬೇಕೆಂಬ ಆಗ್ರಹ ಇದೆ. ಅದು ಸರಿಯಾದ ಬೇಡಿಕೆಯೂ ಹೌದು. ‘ತುಳು ನಾಡಿಗೆ’ ತಮಿಳು ನಾಡಿನ ರೀತಿ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿದರೆ ಇನ್ನೂ ಉತ್ತಮ. ನಮ್ಮ ದೇಶದ ಉತ್ತರ ಭಾಗದಲ್ಲಿ ಅತ್ಯಂತ ಸಣ್ಣ ಭೂ ಭಾಗಗಳನ್ನು ಹೊಂದಿರುವ ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ಕೊಡಗು, ತುಳು ನಾಡು ಎಂದು ಪ್ರತ್ಯೇಕ ರಾಜ್ಯಗಳನ್ನು ರಚನೆ ಮಾಡಿದರೆ ಇನ್ನೂ ಉತ್ತಮ. ಇದರಿಂದ ಜಿಲ್ಲೆಯಲ್ಲಿ ತುಳುವರ ಅಸ್ಮಿತೆಯನ್ನು ಉಳಿಸಿಕೊಂಡು ರಾಷ್ಟ್ರಮಟ್ಟದಲ್ಲೂ ಈ ಪ್ರದೇಶದ ಜನರು ತಮ್ಮದೇ ಆದ ರೀತಿಯ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಬಹುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಾಗಿಸಿ ಒಂದನ್ನು ‘ಉಡುಪಿ’ ಎಂದು ಹೆಸರಿಡಲಾಯಿತು. ಈ ಸಂದರ್ಭದಲ್ಲಿ ತುಳುನಾಡು ಎಂಬ ಹೆಸರು ದಕ್ಷಿಣ ಕನ್ನಡ ಜಿಲ್ಲೆಗೆ ನಾಮಕರಣ ಮಾಡಲು ಒಂದು ಉತ್ತಮ ಅವಕಾಶವಿತ್ತು. ಅದು ಕೈ ತಪ್ಪಿಹೋಯಿತು. ಜಿಲ್ಲೆಯ ಮಟ್ಟಿಗೆ ಹಲವು ಶತಮಾನಗಳ ಇತಿಹಾಸವನ್ನು ಹೊಂದಿರುವ ತುಳು ಭಾಷೆಯನ್ನಾಡುವ ತುಳುವರು ನೆಲೆಸಿರುವ ಪ್ರದೇಶವನ್ನು ತುಳು ನಾಡು ಎಂದು ಘೋಷಿಸಬೇಕು ಎನ್ನುವ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. ಆ ಕಾರಣದಿಂದ ಸದ್ಯ ಹೆಸರು ಬದಲಾವಣೆ ಅನಿವಾರ್ಯ ಆಗಿದ್ದರೆ ತುಳು ನಾಡು ಎನ್ನುವ ಹೆಸರು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ.