ಬಿರುಕು ಬಿಟ್ಟಿರುವ ಶಾಲಾ ಕೊಠಡಿ, ಜೀವಭಯದಲ್ಲಿ ಮಕ್ಕಳ ಕಲಿಕೆ

ಯಾದಗಿರಿ, ಜು.26: ಸರಕಾರಿ ಶಾಲೆಯ ಎಲ್ಲ ಕೊಠಡಿಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಶಾಲೆಯ ಮೇಲ್ಛಾವಣಿ ಶಿಥಿಲಗೊಂಡು ಆಗಾಗ ಕಳಚಿ ಬೀಳುತ್ತಿದೆ. ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳಿಗೆ
ಗ್ರಹಣ ಬಡಿದಿದೆ ಎಂಬುದಕ್ಕೆ ಜೀವಂತ ನಿದರ್ಶನವಾಗಿದೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾವೂರ ಗ್ರಾಮದ ಸರಕಾರಿ ಶಾಲೆಯ ದುಃಸ್ಥಿತಿ.
ನಾಲ್ಕೈದು ವರ್ಷಗಳಿಂದ ಈ ಶಾಲೆ ಮಳೆಯಿಂದ ಸೋರುತ್ತಿದ್ದರೂ ಇಲ್ಲಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಕಾಯಕಲ್ಪಒದಗಿಸಲು ಮುಂದಾಗಿಲ್ಲ. ಜಿಲ್ಲೆಯ ಶಿಕ್ಷಣಾಧಿಕಾರಿಯ ನಿರ್ಲಕ್ಷ್ಯದಿಂದ ಮಕ್ಕಳು ಭಯದಲ್ಲಿಯೇ ಕುಳಿತು ಪಾಠ ಕೇಳುವಂತಹ ಪರಿಸ್ಥಿತಿ ಬಂದೊದಗಿದೆ. ಮಕ್ಕಳ ಈ ಸ್ಥಿತಿಗೆ ಯಾರು ಹೊಣೆ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ. ಕೊಠಡಿಗಳಲ್ಲಿ ಮಳೆ ಬಂದು ನೀರು ಸೋರಲು ಆರಂಭವಾದರೆ ಮಕ್ಕಳು ಬೇರೆ ತರಗತಿಯ ವಿದ್ಯಾರ್ಥಿಗಳೊಂದಿಗೆ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.
ಮೂಲಭೂತ ಸೌಲಭ್ಯದ ಕೊರತೆ: ಮಕ್ಕಳು ಆಟವಾಡಲು ಈ ಶಾಲೆಯಲ್ಲಿಮೈದಾನವಿಲ್ಲ, ತರಗತಿ ನಡೆಸಲು ಸೂಕ್ತ ಕೋಣೆಗಳೇ ಇಲ್ಲ, ಶೌಚಾಲಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಒಟ್ಟಿನಲ್ಲಿ ಈ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲ ಬಿಇಒಗಳಿಗೆ ನಾನು ಆದೇಶ ಮಾಡಿದ್ದೇನೆ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳು ಕಂಡು ಬಂದಲ್ಲಿ ಕೂಡಲೇ ವರದಿ ಪಡೆದುಕೊಂಡು ನಮಗೆ ನೀಡಲು ತಿಳಿಸಿದ್ದೇವೆ.ಆದಷ್ಟು ಬೇಗನೇ ಈ ಶಾಲೆಯ ಕುರಿತು ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ.
-ಚನ್ನಬಸಪ್ಪ ಮುದೋಳ, ಡಿಡಿಪಿಐ ಯಾದಗಿರಿ
ನಾವು ಸಣ್ಣವರಿದ್ದಾಗ ಇದೇ ಶಾಲೆಯಲ್ಲಿ ಓದಿದ್ದೇವೆ. ಇದು ಬಹಳ ವರ್ಷದ ಹಳೆಯ ಶಾಲೆಯಾಗಿದ್ದು. ಎಲ್ಲಾ ಕಡೆ ಬಿರುಕು ಬಿಟ್ಟಿರುವುದರಿಂದ ಬೀಳುವ ಹಂತಕ್ಕೆ ಬಂದಿದೆ. ನಮ್ಮ ಗ್ರಾಮದ ಮಕ್ಕಳು ಜೀವ ಕೈಯಲ್ಲಿ ಹಿಡಿದು ಶಾಲೆಗೆ ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ಮೇಲ್ಛಾವಣಿ ಮತ್ತು ಗೋಡೆಗಳು ಯಾವಾಗ ಬೀಳುತ್ತವೆಂದು ಊಹಿಸಲು ಸಾಧ್ಯವಿಲ್ಲ. ಈ ಹಂತಕ್ಕೆ ಬಂದಿದೆ ಶಾಲೆಯ ಪರಿಸ್ಥಿತಿ. ಅನಾಹುತ ಸಂಭವಿಸದರೆ ಯಾರು ಜವಾಬ್ದಾರರು? ಕ್ಷೇತ್ರದ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ನಮ್ಮ ಗ್ರಾಮದ ಶಾಲೆಗೆ ಭೇಟಿ ನೀಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು
-ರಾಜು ದೊರೆ, ಗ್ರಾಮದ ಮುಖಂಡ