ದೇಶ ಮತ್ತು ಸರಕಾರ

ಹಳೆಯ ಕಾಯ್ದೆಯಡಿ ಇದ್ದ ‘ದೇಶದ್ರೋಹ’ದ ವಿಭಾಗವು ಹೊಸಕಾಯ್ದೆಯಲ್ಲಿ ಸೇರಿಕೊಳ್ಳಲಿಲ್ಲ. ಇದು ಒಂದರ್ಥದಲ್ಲಿ ಎಲ್ಲರಿಗೂ ಸಂತಸ ತಂದು ನಿರಾಳತೆಯನ್ನು ನೀಡಬೇಕಾದ ವಿಚಾರ. ಈ ಹೊಸ ಕಾಯ್ದೆ ತಂದವರು ಇದನ್ನು ‘ಬ್ರಿಟಿಷರನ್ನು ಈ ದೇಶದಿಂದ ಹೊರದಬ್ಬಲು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ದೇಶದ್ರೋಹದ ಆಪಾದನೆಯಡಿ ತಮ್ಮ ಅಮೂಲ್ಯ ಜೀವನವನ್ನು ಬಲಿಕೊಟ್ಟು ಜೈಲು ಸೇರಿದರು. ಸ್ವತಂತ್ರ ಭಾರತದಲ್ಲಿ ಈ ರದ್ದತಿಯು ಅವರ ಆತ್ಮಗಳಿಗೆ ಸಮಾಧಾನ ನೀಡುತ್ತದೆ’ ಎಂದರು. ಆದರೆ ವಾಸ್ತವ ಹೀಗಿಲ್ಲ. ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಈ ಹೊಸ ಕಾಯ್ದೆಯಡಿ ದೇಶದ್ರೋಹವು ಹೊಸ ಉಡುಪು-ತೊಡುಪು, ಮುಖವಾಡ ತೊಟ್ಟು ಭಾರತೀಯ ನ್ಯಾಯ ಸಂಹಿತೆಯ 152ನೇ ವಿಭಾಗ ಸೇರಿಕೊಂಡಿದೆ.
ದೇಶ ಮತ್ತು ಸರಕಾರದ ನಡುವಣ ವ್ಯತ್ಯಾಸವನ್ನು ನೇತ್ಯಾತ್ಮಕ ಅಂಶಗಳಿಂದ ಗುರುತಿಸಬೇಕಾದ ಸಂದರ್ಭ ಬಂದಿರುವುದು ವಿಚಿತ್ರವೂ ಹೌದು; ದುರದೃಷ್ಟಕರವೂ ಹೌದು. ಅಧಿಕಾರದಲ್ಲಿರುವ ಪ್ರತಿಯೊಬ್ಬನೂ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ತನ್ನ ಧೋರಣೆಯನ್ನು ಒಪ್ಪದ ಜನರ, ಸಮೂಹದ, ನಾಯಕರ ವಿರುದ್ಧ ಎಲ್ಲ ಬಗೆಯ ಒತ್ತಡದ, ಬಲವಂತದ ವಾಮಮಾರ್ಗಗಳನ್ನು ಆರಿಸಿಕೊಳ್ಳುವುದು ಸಹಜವೇ. ದೇಶಭಕ್ತನೊಬ್ಬ ಸರಕಾರದ ಭಕ್ತನಾಗಿರಬೇಕಾಗಿಲ್ಲ ಎಂಬ ಸರಳ ಸತ್ಯವನ್ನು ಅಧಿಕಾರಸ್ಥರು ಒಪ್ಪಿಕೊಳ್ಳುವುದಿಲ್ಲ. ಇದು ರಾಜಸತ್ತೆಯಿದ್ದಾಗ ಹೆಚ್ಚು ನೇರವಾಗಿತ್ತು. ರಾಜನೊಬ್ಬ ತನ್ನನ್ನು ತಾನೇ ಸೃಷ್ಟಿ-ಸ್ಥಿತಿ-ಲಯಗಳ ದೇವತೆಯಾಗಿ ಆರೋಪಿಸಿಕೊಂಡು ತನ್ನ ಪ್ರಾದೇಶಿಕ ವ್ಯಾಪ್ತಿಯನ್ನು ಹಿಗ್ಗಿಸಲು ಇತರರ ವಿರುದ್ಧ ದಾಳಿ ಮಾಡಿದರೆ, ತನ್ನ ಒಳಾಡಳಿತವನ್ನು ನಿರಂಕುಶವಾಗಿ ನಡೆಸಲು ಅಡ್ಡಿಯಾಗುವ ಯಾವುದೇ ರೀತಿಯ ಅಭಿವ್ಯಕ್ತಿಯನ್ನು, ಚಟುವಟಿಕೆಗಳನ್ನು ತಡೆಯಲು, ನಿಯಂತ್ರಿಸಲು ಎಲ್ಲ ಬಗೆಯ ತಂತ್ರಗಳನ್ನು ಹೂಡುತ್ತಿದ್ದುದನ್ನು ಚರಿತೆಯಿಂದ ಕಾಣಬಹುದು. ಭಾರತವೆಂಬ ಭೂಭಾಗವು ವಸಾಹತುಶಾಹಿ ಆಳ್ವಿಕೆಯಲ್ಲಿ ದೇಶ ಮತ್ತು ಸರಕಾರದ ನಡುವಿರುವ ಅಂತರವನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಇದು ಹೆಚ್ಚು ಢಾಳಾಗಿ ಪ್ರದರ್ಶಿತವಾಯಿತು. ದೇಶೀಯರಿಗೆ ತಮ್ಮ ದೇಶ; ಆಳುವವರಿಗೆ ತಮ್ಮ ಅಧಿಕಾರ ಈ ಮುಖಾಮುಖಿಯಲ್ಲಿ ಆಡಳಿತದ ರಕ್ಷಣೆಗಾಗಿ-ದೇಶದ ರಕ್ಷಣೆಗಾಗಿ ಅಲ್ಲ- ಕಾಯ್ದೆಯ ಮೂಲಕ ದೇಶದ್ರೋಹವೆಂಬ ಅಪರಾಧವನ್ನು ಅಳವಡಿಸಲಾಯಿತು. ರಾಜಸತ್ತೆಯಲ್ಲಿ ಒಬ್ಬ ವ್ಯಕ್ತಿಯ ಇಷ್ಟಾನಿಷ್ಟಗಳು ದೇಶದ್ರೋಹವನ್ನು ವ್ಯಾಖ್ಯಾನಿಸಿದರೆ, ವಸಾಹತುಶಾಹಿಯಡಿ ಅದು ಒಂದು ಆಳ್ವಿಕೆಯ, ಆಡಳಿತದ ಸುಸೂತ್ರತೆಯ ರಕ್ಷಣೆಗೆ ಸಾಧನವಾದವು. ದೇಶ ಮತ್ತು ಸರಕಾರದ ಅಂತರವನ್ನು ನ್ಯಾಯಾಲಯಗಳು ವಿಷದಪಡಿಸಬೇಕಾದ ಅನಿವಾರ್ಯತೆಯನ್ನು ಈ ಕಾಯ್ದೆ ತಂದದ್ದು ಒಂದು ವ್ಯಂಗ್ಯ. ಇದರ ಚರಿತ್ರೆ ಮತ್ತು ವರ್ತಮಾನವು ರೋಚಕ.
ಸಂವಿಧಾನವನ್ನು ಮತ್ತದರ ಅಡಿಯ ಕಾನೂನುಗಳನ್ನು ಗಮನಿಸುವವರಿಗೆ ಭಾರತೀಯ ದಂಡ ಸಂಹಿತೆ (ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವತಂತ್ರ ಭಾರತದಲ್ಲಿಯೂ ‘ಇಂಡಿಯನ್ ಪೀನಲ್ ಕೋಡ್’ ಎಂದೇ ಇಂಗ್ಲಿಷ್‌ಭಾಷೆಯಲ್ಲಿ ಬಳಸಲಾಗಿರುವ)ಯ 124ಎಯ ವಿಭಾಗದ (ಇಂಗ್ಲಿಷ್‌ನ ‘ಸೆಕ್ಷನ್’ ಎಂಬ ಪದಕ್ಕೆ ಪರ್ಯಾಯವಾಗಿ ಇದನ್ನು ಬಳಸಲಾಗಿದೆ) ಪರಿಚಯವಿರುತ್ತದೆ. ಇದು ದೇಶದ್ರೋಹಕ್ಕೆ ಸಂಬಂಧಿಸಿದ್ದು. ಇಂಗ್ಲಿಷ್‌ನಲ್ಲಿ ‘ಸೆಡಿಷನ್’ ಎಂಬ ಪದ ಬಳಕೆಯಾಗುತ್ತದೆ. ಇದು ಬ್ರಿಟಿಷ್ ಅಥವಾ ವಸಾಹತುಶಾಹಿ ಹಿನ್ನೆಲೆಯಿಂದ ಉಗಮವಾದ ಕಾನೂನು. ಸಂಕ್ಷಿಪ್ತವಾಗಿ ಇದನ್ನು ಹೀಗೆ ನಿರೂಪಿಸಬಹುದು:
ದೇಶದ್ರೋಹ: ಯಾರೇ ಆಗಲಿ, ಮಾತು ಅಥವಾ ಬರೆಹಗಳ ಅಥವಾ ಸಂಕೇತಗಳಿಂದ ಅಥವಾ ದೃಶ್ಯ ದಾಖಲೆ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ ಭಾರತದ ಕಾನೂನಿನನ್ವಯ ಸ್ಥಾಪಿತವಾದ ಸರಕಾರದ ಕುರಿತು ದ್ವೇಷ ಅಥವಾ ನಿಂದನೆಯನ್ನು ತರುತ್ತಾರೋ ಅಥವಾ ತರಲು ಪ್ರಯತ್ನಿಸುತ್ತಾರೋ ಅಥವಾ ಅತೃಪ್ತಿಯನ್ನು ತರುತ್ತಾರೋ ಅಥವಾ ತರಲು ಪ್ರಯತ್ನಿಸುತ್ತಾರೋ ಅಂಥವರು ಜೀವಾವಧಿ ಸೆರೆವಾಸ ಮತ್ತು ದಂಡವನ್ನು ಅಥವಾ ಮೂರು ವರ್ಷಗಳ ಸೆರೆವಾಸದೊಂದಿಗೆ ದಂಡವನ್ನು ಅಥವಾ ದಂಡವನ್ನು ವಿಧಿಸಬಹುದಾದ ಶಿಕ್ಷೆಗೆ ಒಳಗಾಗುತ್ತಾರೆ.
ವಿವರಣೆ 1: ‘ಅತೃಪ್ತಿ’ಯೆಂಬ ಅಭಿವ್ಯಕ್ತಿಯು ನಿಷ್ಠೆಯಿಲ್ಲದಿರುವಿಕೆ ಮತ್ತು ಎಲ್ಲಾ ರೀತಿಯ ದ್ವೇಷಭಾವನೆಗಳನ್ನು ಒಳಗೊಂಡಿದೆೆ.
ವಿವರಣೆ 2: ದ್ವೇಷ, ತಿರಸ್ಕಾರ ಅಥವಾ ಅತೃಪ್ತಿಯನ್ನು ಪ್ರಚೋದಿಸದೆ, ಅಥವಾ ಪ್ರಚೋದಿಸಲು ಪ್ರಯತ್ನಿಸದೆ ಕಾನೂನು ಬದ್ಧ ಪ್ರಕ್ರಿಯೆಗಳ ಮೂಲಕ ಅಂತಹ ಬದಲಾವಣೆಯನ್ನು ಪಡೆಯುವ ಉದ್ದೇಶದಿಂದ ಸರಕಾರದ ಕ್ರಮಗಳ ಅಸಮ್ಮತಿಯನ್ನು ವ್ಯಕ್ತಪಡಿಸುವ ಟೀಕೆಗಳು ಈ ವಿಭಾಗದಡಿ ಅಪರಾಧವಾಗುವುದಿಲ್ಲ.
ವಿವರಣೆ 3: ದ್ವೇಷ, ತಿರಸ್ಕಾರ ಅಥವಾ ಅತೃಪ್ತಿಯನ್ನು ಪ್ರಚೋದಿಸದೆ ಅಥವಾ ಪ್ರಚೋದಿಸಲು ಪ್ರಯತ್ನಿಸದೆ ಸರಕಾರದ ಆಡಳಿತಾತ್ಮಕ ಅಥವಾ ಇತರ ಕ್ರಮಗಳ ಅಸಮ್ಮತಿಯನ್ನು ವ್ಯಕ್ತಪಡಿಸುವ ಟೀಕೆಗಳು ಈ ವಿಭಾಗದಡಿ ಅಪರಾಧವಾಗುವುದಿಲ್ಲ.
ಮೆಕಾಲೆಯ 1837ರ ಆಡಳಿತ ಸುಧಾರಣಾ ಚಿಂತನೆಯ ಭಾಗವಾಗಿ ರೂಪುಗೊಂಡ ಭಾರತೀಯ ದಂಡ ಸಂಹಿತೆಯು 1860ರ 45ನೇ ಕಾಯ್ದೆಯಾಗಿ ಮೊದಲಬಾರಿಗೆ ರಚನೆಯಾಗಿ ಜಾರಿಯಾದಾಗ ಈ ವಿಭಾಗವು ಅಡಕವಾಗಿರಲಿಲ್ಲ. ಆದರೆ ಅದಾದ 10 ವರ್ಷಗಳಲ್ಲಿ ದಂಗೆ ಮುಂತಾದ ದೇಶೀಯ ಚಟುವಟಿಕೆಗಳು ಗರಿಗೆದರಿದಾಗ ಮತ್ತು ಮುಖ್ಯವಾಗಿ ಅರಾಜಕತೆಯನ್ನು ಮತ್ತು ಪ್ರಕ್ಷುಬ್ಧತೆಯನ್ನು ಸೃಷ್ಟಿಸಿದೆಯೆಂದು ವಸಾಹತುಶಾಹಿ ಆಡಳಿತ ಸಂಶಯಿಸಿದ ವಹಾಬಿ ಮುಂತಾದ ಗುಂಪುಗಳನ್ನು ನಿಯಂತ್ರಿಸುವ ಮತ್ತು ಶಿಕ್ಷಿಸುವ ಉದ್ದೇಶದಿಂದ ಈ ವಿಭಾಗವನ್ನು ಸೇರಿಸಲಾಯಿತು. ಸಾಮಾನ್ಯವಾಗಿ ಯಾವುದೇ ಕಾನೂನು ಜನಹಿತಕ್ಕಾಗಿ ಇಲ್ಲವೇ ಸಾಮಾಜಿಕ ಶಿಸ್ತು ಮತ್ತು ವ್ಯವಸ್ಥೆಯ ರಕ್ಷಣೆಗಾಗಿ ರಚನೆಯಾಗುತ್ತದೆ. ಅಪರಾಧ ಸಂಹಿತೆಯೂ ಜನರಕ್ಷಣೆಗಾಗಿಯೇ ಇದೆ. ಅಪರಾಧಿಗಳನ್ನು ಶಿಕ್ಷಿಸಿ ಸಾಮಾಜಿಕ ಹಿತವನ್ನು ಕಾಪಾಡುವುದು ದಂಡ (ಕ್ರಿಮಿನಲ್) ಕಾನೂನಿನ ಉದ್ದೇಶ. ಆದರೆ ಇದು ಶೋಷಣೆಯ, ಸೇಡಿನ ಸಾಧನವಾದ ಪರಿಣಾಮವಾಗಿ ಜನಹಿತಕ್ಕಾಗಿ ರಚನೆಯಾಗಬೇಕಾಗಿದ್ದ ಕಾನೂನುಗಳ ನಡುವೆ ದೇಶದ್ರೋಹದ ಈ ವಿಭಾಗವು ನುಸುಳಿಕೊಂಡು ಸ್ಥಾಪಿತಗೊಂಡಿತು. ಸ್ವಾತಂತ್ರ್ಯ ಹೋರಾಟದ ದಿಕ್ಕು-ದೆಸೆಗಳನ್ನು, ರೋಚಕ ಮೈಲಗಲ್ಲುಗಳನ್ನು ತಿಳಿದವರಿಗೆ ಹೋರಾಟಗಾರರನ್ನು ಶಿಕ್ಷಿಸಲು ಈ ಕಾಯ್ದೆ ಹೇಗೆ ಕೆಲಸಮಾಡಿದೆಯೆಂಬುದು ಗೊತ್ತಿರಬಹುದು.
ವಸಾಹತುಶಾಹಿ ಬ್ರಿಟಿಷ್ ಆಡಳಿತ ಕೊನೆಗೊಂಡು ಸ್ವತಂತ್ರ ಆಡಳಿತ ಬಂದರೂ ಈ ವಿಭಾಗಕ್ಕೆ ಮಾತ್ರವಲ್ಲ, ಆಗ ಅಸ್ತಿತ್ವದಲ್ಲಿದ್ದ ಬಹುತೇಕ ಎಲ್ಲ ಕಾಯ್ದೆಗಳಿಗೆ ಮುಕ್ತಿ ಸಿಗಲಿಲ್ಲ. ಇಂದಿಗೂ ನಮ್ಮಲ್ಲಿ ಜಾರಿಯಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ಕಾಯ್ದೆಗಳಲ್ಲಿ ವಿದೇಶೀ ಘಾಟು ಗೋಚರವಾಗುತ್ತದೆ. ಈ ದೇಶದಲ್ಲಿರುವ ವೈವಿಧ್ಯಗಳಿಂದಾಗಿ ಮತ್ತು ಆಡಳಿತದ ಅನುಕೂಲಕ್ಕಾಗಿ ಇವನ್ನು ಭಾರತೀಯರಿಗೆ ಅನ್ಯಾಯವಾಗದ ಹಾಗೆ ಬದಲಾಯಿಸುವುದೋ ತಿದ್ದುಪಡಿಮಾಡುವುದೋ ಸುಲಭಸಾಧ್ಯವಲ್ಲ. ನ್ಯಾಯಾಲಯ ನಿಂದನೆ, ದೇಶದ್ರೋಹ ಮುಂತಾದ ಕ್ರಿಮಿನಲ್ ವಿಭಾಗಗಳು ಮತ್ತು ಪ್ರತಿರೋಧ ಸ್ವಾಧೀನ ಮುಂತಾದ ಸಿವಿಲ್ ವಿಭಾಗಗಳು ಉಳಿದುಕೊಂಡವು.
ದೇಶದ್ರೋಹದ ಕಾನೂನು ಈ ದೇಶಕ್ಕೆ ಸಲ್ಲದೆಂಬ ಪ್ರತಿರೋಧದ ನಡುವೆಯೂ ಇದನ್ನು ಮುಂದುವರಿಸಲಾಯಿತು. ಮುಂದುವರಿಸಿದ್ದು ಮಾತ್ರವಲ್ಲ ಇದನ್ನು ‘ಸಂಜ್ಞೇಯ’ ಅಂದರೆ ನ್ಯಾಯಾಲಯದ ಅನುಮತಿಯಿಲ್ಲದೆಯೂ ದಸ್ತಗಿರಿ ಮಾಡಬಲ್ಲ ಅಧಿಕಾರವನ್ನು 1973ರಲ್ಲಿ ಪೊಲೀಸರಿಗೆ ನೀಡಲಾಯಿತು. ಇದು ದೇಶದ ರಕ್ಷಣೆಗಿಂತ ಹೆಚ್ಚಾಗಿ ಸರಕಾರದ ಅಥವಾ ಆಳುವ ಪಕ್ಷದ ರಕ್ಷಣೆಗಾಗಿ ಬಳಕೆಯಾದದ್ದು ದೇಶದ ದುರ್ದೈವ. ಆದರೆ ನ್ಯಾಯಾಲಯಗಳ ಮಧ್ಯ ಪ್ರವೇಶದಿಂದ ಹಲವಾರು ಜನಪರ ಹೋರಾಟಗಳು, ಪ್ರಮೇಯಗಳು, ದೇಶದ್ರೋಹದ ಕುಣಿಕೆಯಿಂದ ಪಾರಾದವು.
ಆನಂತರ ಇದನ್ನು ಕೊನೆಗೊಳಿಸಬೇಕೆಂಬ ಕೂಗು ದೊಡ್ಡದಾಗಿ ಎದ್ದಿತು. ಸರ್ವೋಚ್ಚ ನ್ಯಾಯಾಲಯದ ಮುಂದೆ 124ಎಯ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಲಾಯಿತು. ಅದಿನ್ನೂ ಇತ್ಯರ್ಥವಾಗಿಲ್ಲ. ಆದರೆ ಇವುಗಳ ನಡುವೆಯೇ 2023ರಲ್ಲಿ ‘ಭಾರತೀಯ ದಂಡ ಸಂಹಿತೆ’ಯ ಬದಲಿಗೆ ‘ಭಾರತೀಯ ನ್ಯಾಯ ಸಂಹಿತೆ’ ಎಂಬ ಕಾಯ್ದೆಯು ಜಾರಿಯಾಯಿತು. ಇಂಗಿಷ್‌ನಲ್ಲೂ ಇದನ್ನು ‘ಭಾರತೀಯ ನ್ಯಾಯ ಸಂಹಿತೆ’ ಎಂದೇ ಕರೆದರು. ಇದರ ಸಾಧುತ್ವ ಇಲ್ಲಿ ಪ್ರಸ್ತುತವಲ್ಲ. ಅದು ರಾಜಕೀಯ ಮತ್ತು ಹಿಂದಿ ಹೇರಿಕೆಯ ಭಾಷಾ ವಿವಾದವಾದೀತು.
ಭಾರತೀಯ ನ್ಯಾಯ ಸಂಹಿತೆಯು ವಸಾಹತುಶಾಹಿ ನಿಲುವಿನಿಂದ ಭಾರತವನ್ನು ಮುಕ್ತಗೊಳಿಸಿದೆಯೆಂದು ಇದನ್ನು ರಚಿಸಿದವರೂ ಪ್ರಶಂಸಿಸಿದರು. ಸಮೂಲಾಗ್ರ ಬದಲಾವಣೆಯಾಗಿದೆಂದು ಹೇಳಿಕೊಂಡರೂ ಇದರಲ್ಲಿ ವಿಭಾಗಗಳ ಸಾತತ್ಯವನ್ನು ಬದಲಾಯಿಸಿ ಗೊಂದಲಮಯವಾಗಿಸಿ, ಗೋಜಲಾಗಿಸಲಾಗಿದೆಯೆಂದು ಅನ್ನಿಸುತ್ತದೆ. ಬಹುತೇಕ ವಿಭಾಗಗಳು ತಮ್ಮ ಸರದಿಯ ಸಂಖ್ಯೆಯನ್ನು ಬದಲಾಯಿಸಿಕೊಂಡಿವೆಯೇ ಹೊರತು ರೂಪ, ಲಕ್ಷಣ, ಪರಿಣಾಮಗಳನ್ನಲ್ಲ. ಹಳೆಯ ಕಾಯ್ದೆಯನ್ನು ಕಲಿತವರಿಗೆ ಹೊಸದನ್ನು ಕಲಿಯುವ ಕಷ್ಟ. ಇದು ಹಿರಿಯ ವಕೀಲರನ್ನಾಗಲಿ, ನ್ಯಾಯಾಧೀಶರನ್ನಾಗಲಿ ಬಿಟ್ಟಿಲ್ಲ. ಈಗ ಹಳೆಯ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲದಿರುವುದರಿಂದ ಮತ್ತು ಇದು ಹೊಸ ಪ್ರಕರಣಗಳಿಗಷ್ಟೇ ಅನ್ವಯಿಸುವುದರಿಂದ ಇದರ ಸಾಧಕ-ಬಾಧಕಗಳು ಅರ್ಥವಾಗಬೇಕಾದರೆ, ಅನಾವರಣಗೊಳ್ಳಬೇಕಾದರೆ ಇನ್ನೂ ಒಂದಷ್ಟು ಕಾಲ ಬೇಕಾದೀತು.
ಆದರೆ ಹಳೆಯ ಕಾಯ್ದೆಯಡಿ ಇದ್ದ ‘ದೇಶದ್ರೋಹ’ದ ವಿಭಾಗವು ಹೊಸಕಾಯ್ದೆಯಲ್ಲಿ ಸೇರಿಕೊಳ್ಳಲಿಲ್ಲ. ಇದು ಒಂದರ್ಥದಲ್ಲಿ ಎಲ್ಲರಿಗೂ ಸಂತಸ ತಂದು ನಿರಾಳತೆಯನ್ನು ನೀಡಬೇಕಾದ ವಿಚಾರ. ಈ ಹೊಸ ಕಾಯ್ದೆ ತಂದವರು ಇದನ್ನು ‘ಬ್ರಿಟಿಷರನ್ನು ಈ ದೇಶದಿಂದ ಹೊರದಬ್ಬಲು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ದೇಶದ್ರೋಹದ ಆಪಾದನೆಯಡಿ ತಮ್ಮ ಅಮೂಲ್ಯ ಜೀವನವನ್ನು ಬಲಿಕೊಟ್ಟು ಜೈಲು ಸೇರಿದರು. ಸ್ವತಂತ್ರ ಭಾರತದಲ್ಲಿ ಈ ರದ್ದತಿಯು ಅವರ ಆತ್ಮಗಳಿಗೆ ಸಮಾಧಾನ ನೀಡುತ್ತದೆ’ ಎಂದರು. ಆದರೆ ವಾಸ್ತವ ಹೀಗಿಲ್ಲ. ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಈ ಹೊಸ ಕಾಯ್ದೆಯಡಿ ದೇಶದ್ರೋಹವು ಹೊಸ ಉಡುಪು-ತೊಡುಪು, ಮುಖವಾಡ ತೊಟ್ಟು 152ನೇ ವಿಭಾಗ ಸೇರಿಕೊಂಡಿದೆ. ಇದು ಅರ್ಥವಾಗಬೇಕಾದರೆ ಇದನ್ನು ಪರಿಶೀಲಿಸಬೇಕು:
152ನೇ ವಿಭಾಗವು ಹೀಗಿದೆ:
ಯಾರೇ ಆಗಲಿ, ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದೂ ಮಾತು ಅಥವಾ ಬರೆಹ ಅಥವಾ ಸಂಜ್ಞೆಗಳ ಮೂಲಕ ಅಥವಾ ದೃಶ್ಯರೂಪದಲ್ಲಿ ಅಥವಾ ವಿದ್ಯುನ್ಮಾನ ಸಂವಹನದ ಮೂಲಕ ಅಥವಾ ಹಣಕಾಸಿನ ಬಳಕೆಯ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಇಲ್ಲವೇ ವಿಧ್ವಂಸಕ ಚಟುವಟಿಕೆಗಳನ್ನು ಪ್ರಚೋದಿಸುವ ಅಥವಾ ಪ್ರಚೋದಿಸಲು ಪ್ರಯತ್ನಿಸುವ ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರಚೋದಿಸುವ ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಹಾಗೂ ಸಮಗ್ರತೆಗೆ ಭಂಗವನ್ನುಂಟುಮಾಡುವ ಅಥವಾ ಅಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವ ಅಥವಾ ಮಾಡುವ ವ್ಯಕ್ತಿಗೆ ಜೀವಾವಧಿ ಸೆರೆವಾಸ ಅಥವಾ ಏಳು ವರ್ಷಗಳ ವರೆಗೆ ವಿಸ್ತರಿಸಬಹುದಾದ ಸೆರೆವಾಸ ಮತ್ತು ದಂಡವನ್ನು ವಿಧಿಸುವ ಶಿಕ್ಷೆಗೆ ಒಳಪಡಿಸಲಾಗುತ್ತದೆ.
ವಿವರಣೆ:
ಈ ವಿಭಾಗದಲ್ಲಿ ಉಲ್ಲೇಖಿಸಲಾದ ಚಟುವಟಿಕೆಗಳನ್ನು ಪ್ರಚೋದಿಸದೆ ಕಾನೂನುಬದ್ಧ ವಿಧಾನಗಳ ಮೂಲಕ ಅವುಗಳ ಬದಲಾವಣೆಯನ್ನು ಪಡೆಯುವ ಉದ್ದೇಶದಿಂದ ಸರಕಾರದ ಕ್ರಮಗಳು ಅಥವಾ ಆಡಳಿತಾತ್ಮಕ ಅಥವಾ ಇತರ ಕ್ರಮಗಳ ಅಸಮ್ಮತಿಯನ್ನು ವ್ಯಕ್ತಪಡಿಸುವ ಟೀಕೆಗಳು ಈ ವಿಭಾಗದಲ್ಲಿ ಅಪರಾಧವಾಗುವುದಿಲ್ಲ.
ಇವನ್ನು ಒಟ್ಟಾಗಿ ಓದಿದರೆ ಹಳೆಯ 124ಎಗಿಂತ ಇಲ್ಲಿ ಭಿನ್ನವಾದದ್ದೇನನ್ನೂ ಸಾಧಿಸಿಲ್ಲವೆಂಬುದು ಅರ್ಥವಾಗುತ್ತದೆ. ‘ಆರು’ ಎಂಬ ಅಂಕೆಯನ್ನು ‘ಅರ್ಧ ಡಜನ್’ ಎಂದು ಕರೆದಿದ್ದಾರೆ ಅಷ್ಟೇ. ಉಳಿದದ್ದನ್ನೆಲ್ಲ ಸಂಕ್ಷಿಪ್ತವಾಗಿ ಹೇಳಲಾಗಿದೆ. ಭಾಷೆಯ ಬಳಕೆ ಬದಲಾಗುತ್ತ ಹೋದಂತೆ ಮನುಷ್ಯ ಬುದ್ಧಿವಂತನಾಗುತ್ತ ಹೋಗುತ್ತಾನೆ. ಜೀವಾವಧಿ ಶಿಕ್ಷೆ ಇದೆ. ಇತರ ಶಿಕ್ಷೆಗಳಿಲ್ಲ. ಆದ್ದರಿಂದ ಆರೋಪಿಗೆ ಆಯ್ಕೆಯಿಲ್ಲ.
ಈಗ ಇದನ್ನೂ ಅನೇಕ ಸಂಘಟನೆಗಳು, ನ್ಯಾಯವೇತ್ತರು ಪ್ರಶ್ನಿಸಿದ್ದಾರೆ. ಈ ಬಗ್ಗೆ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವೇ ಭಾಗಿಯಾಗಿರುವುದರಿಂದ ಇದಕ್ಕಿಂತ ಮುಂದೆ ಚರ್ಚೆಯನ್ನು ಒಯ್ಯುವ ಅಗತ್ಯ ಈಗಿಲ್ಲವೆಂದುಕೊಂಡಿದ್ದೇನೆ. ಆದರೆ ಮತ್ತೆ ಅದೇ ಪ್ರಶ್ನೆ: ಸರಕಾರದ ವಿರುದ್ಧ ಪ್ರತಿಭಟಿಸುವುದು ದೇಶದ ವಿರುದ್ಧದ ಚಟುವಟಿಕೆಯಾಗುವುದು ಹೇಗೆ? ಈ ಬಗ್ಗೆ ಕಾಯ್ದೆ ಸ್ಪಷ್ಟೀಕರಿಸಬಹುದಿತ್ತು. ಅದಿಲ್ಲದಿರುವುದರಿಂದ ಲೋಕಸಭೆಯಲ್ಲಿ ಸೋತವರನ್ನು ರಾಜ್ಯಸಭೆಗೆ ತಂದಂತೆ ಅಲ್ಲದಿದ್ದರೂ, ಹಿಂಬಾಗಿಲ ಹಾದಿಯನ್ನು ದೊಡ್ಡದಾಗಿ ತೆರೆದಂತೆ ಅನ್ನಿಸುತ್ತದೆ. ಬರಲಿರುವ ದಿನಗಳು ಈಗಿನ ಆಡಳಿತದಲ್ಲಿ ಕಷ್ಟಕರವಾಗಲು ಈ ಕಾಯ್ದೆ ನೆರವಾಗಬಹುದೇನೋ?