ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇವೆ ಬಾಲ್ಯವಿವಾಹ ಪ್ರಕರಣಗಳು

ಸಾಂದರ್ಭಿಕ ಚಿತ್ರ PC: freepik
ಮಂಡ್ಯ: ಆಲೆಮನೆಯ ಕೊಠಡಿ, ಆಸ್ಪತ್ರೆಯ ಕ್ವಾಟ್ರಸ್ ಸೇರಿದಂತೆ ನಾನಾ ಕಡೆ ಕೆಲವು ವರ್ಷದ ಹಿಂದೆ ಬೆಳಕಿಗೆ ಬಂದಿದ್ದ ಹೆಣ್ಣುಭ್ರೂಣ ಹತ್ಯೆ ಪ್ರಕರಣದಿಂದ ನಾಡಿನೆಲ್ಲೆಡೆ ಸುದ್ದಿಗೆ ಗ್ರಾಸವಾಗಿದ್ದ ಮಂಡ್ಯ ಜಿಲ್ಲೆ ಬಾಲ್ಯವಿವಾಹ ಪ್ರಕರಣದಲ್ಲೂ ಗಮನ ಸೆಳೆದಿದೆ. ಎಷ್ಟೇ ಕಾನೂನುಗಳಿದ್ದರೂ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಶಿಕ್ಷಣ ಮತ್ತು ನಾಗರಿಕತೆಯಲ್ಲಿ ಜನರು ಪ್ರಗತಿಯತ್ತ ಹೆಜ್ಜೆ ಇಡುತ್ತಿದ್ದರೂ ಇನ್ನೂ ಬಾಲ್ಯವಿವಾಹಕ್ಕೆ ಜೋತು ಬಿದ್ದಿರುವುದು ನಾಗರಿಕ ಸಮಾ ಜವನ್ನು ತಲೆತಗ್ಗಿಸುವಂತೆ ಮಾಡಿದೆ.
ಬಾಲ್ಯವಿವಾಹ ನಿಷೇಧಿಸಿ ಕಾನೂನು, ಕಾಯಿದೆ ಜಾರಿಗೊಳಿಸಿದ್ದರೂ 18 ವರ್ಷದೊಳಗಿನ ಹೆಣ್ಣು ಮಕ್ಕಳ ಮದುವೆ ತಡೆಯಲು ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಕದ್ದು ಮುಚ್ಚಿ ಬಾಲ್ಯವಿವಾಹಗಳನ್ನು ನಡೆಸಲಾಗುತ್ತಿದೆ. ಬಡತನ, ಅನಕ್ಷರತೆ, ಪೋಷಕರು ಮತ್ತು ಕುಟುಂಬದ ಹಿರಿಯರ ಅನಾರೋಗ್ಯ ನೆಪ, ಪ್ರೇಮವಿವಾಹ, ಇನ್ನಿತರ ಕಾರಣಗಳಿಂದ ಬಾಲ್ಯವಾಹಗಳು ನಡೆಯುತ್ತಿವೆ. ಉನ್ನತ ಶಿಕ್ಷಣ ಪಡೆಯುವ ಆಸೆಯುಳ್ಳವರು ಬೇಗ ಮದುವೆಗೆ ಒಪ್ಪುವುದಿಲ್ಲ, ಆದರೆ, ಹೆಣ್ಣು ಮಕ್ಕಳ ಶಾಲಾ ಡ್ರಾಪ್ಔಟ್, ಎಸೆಸೆಲ್ಸಿ ನಂತರ ಕಾಲೇಜಿಗೆ ಕಳುಹಿಸದಿರುವುದು ಪರೋಕ್ಷವಾಗಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮದುವೆ ಮಾಡಲು ಪೋಷಕರಿಗೆ ಪ್ರೇರಣೆಯಾಗುತ್ತಿದೆ ಎನ್ನಲಾಗುತ್ತಿದೆ.
ಅರಿವಿನ ಕೊರತೆ, ಪೋಷಕರ ಒತ್ತಾಯಕ್ಕೆ ಎಷ್ಟೋ ಹೆಣ್ಣು ಮಕ್ಕಳು ಮದುವೆಗೆ ಒಪ್ಪಿಗೆ ನೀಡುತ್ತಿದ್ದಾರೆ. ಜತೆಗೆ ಪ್ರೇಮಪಾಶಕ್ಕೆ ಬಿದ್ದು 18ವರ್ಷ ಆಗುವ ಮೊದಲೇ ಮದುವೆಯಾಗುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಬಾಲ್ಯವಿವಾಹ ತಡೆಯ ಸರಕಾರಕ್ಕೆ ದೊಡ್ಡ ಸವಾಲಾಗಿದೆ. ಬಾಲ್ಯವಿವಾಹ ಕಾರಣದಿಂದಲೇ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ 18 ವರ್ಷದೊಳಗಿನ 135 ಬಾಲಕಿಯರು ಗರ್ಭಿಣಿಯಾಗಿದ್ದಾರೆ. ನಾಲ್ಕು ವರ್ಷಗಳಲ್ಲಿ 1,809 ಮಂದಿ ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ತಾಯಿ ಕಾರ್ಡ್ ಪಡೆಯಲು ಆರೋಗ್ಯ ಇಲಾಖೆ ಮೂಲಕ ಆರ್ಸಿಎಚ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿರುವ ಪ್ರಕ್ರಿಯೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇತ್ತೀಚೆಗೆ ಪ್ರೇಮ ಪ್ರಕರಣಗಳಿಂದಾಗಿಯೇ ಬಾಲ್ಯವಿವಾಹಗಳು ಹೆಚ್ಚಾಗುತ್ತಿವೆ ಎನ್ನಲಾಗುತ್ತಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ಅನೇಕ ಹೆಣ್ಣುಮಕ್ಕಳು ಪ್ರೇಮದ ಬಲೆಗೆ ಬೀಳುತ್ತಿದ್ದು, ಪೋಷರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುತ್ತಿದ್ದಾರೆ. ಕೆಲವರು ಮನೆಯವರಿಗೆ ಎಲ್ಲಿ ವಿಷಯ ಗೊತ್ತಾಗುವುದೋ ಎನ್ನುವ ಭಯದಿಂದಲೇ ಮೊದಲೇ ಪ್ರೇಮ ವಿವಾಹವಾಗುತ್ತಿದ್ದಾರೆ.
ಬಾಲ್ಯಾವಸ್ಥೆಯಲ್ಲೇ ಗರ್ಭಿಣಿ: 2020-21ನೇ ಸಾಲಿನಲ್ಲಿ 569 ಮಂದಿ, 2021-22ನೇ ಸಾಲಿನಲ್ಲಿ 484, 2022-23ನೇ ಸಾಲಿನಲ್ಲಿ 405 ಮಂದಿ, 2023-24ನೇ ಸಾಲಿನಲ್ಲಿ 216 ಹಾಗೂ 2024-25ರಲ್ಲಿ (ಎಪ್ರಿಲ್ ಮತ್ತು ಮೇ) 135 ಹೆಣ್ಣು ಮಕ್ಕಳು ತಮಗೆ ಹದಿನೆಂಟು ವರ್ಷ ತುಂಬುವ ಮೊದಲೇ ಗರ್ಭಿಣಿಯಾಗಿದ್ದಾರೆ. ಕಳೆದ ಐದೂಕಾಲು ವರ್ಷದಲ್ಲಿ 311 ಬಾಲ್ಯವಾಹಗಳು ನಡೆದಿವೆ. 2025-26ನೇ ಸಾಲಿನಲ್ಲಿ ಕೇವಲ ಎರಡು ತಿಂಗಳಲ್ಲಿ(ಎಪ್ರಿಲ್, ಮೇ) 13 ಬಾಲ್ಯವಿವಾಹಗಳಾಗಿವೆ. ಇವೆರಡು ತಿಂಗಳಲ್ಲಿ ಬಾಲ್ಯವಿವಾಹ ಸಂಬಂಧ 49 ದೂರುಗಳು ಬಂದಿದ್ದವು. ಈ ಪೈಕಿ 36 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಆದರೆ, ಅಧಿಕಾರಿಗಳು ಹೋಗುವಷ್ಟರಲ್ಲಿ 13 ಮದುವೆಗಳು ನಡೆದಿದ್ದು, ಈ ಸಂಬಂಧ 13 ಪ್ರಕರಣಗಳು ದಾಖಲಾಗಿವೆ.
ಬಾಲ್ಯವಿವಾಹ ಪ್ರಕರಣಗಳ ವಿವರ: 2020-21ರಲ್ಲಿ 76 ಬಾಲ್ಯವಿವಾಹ ಪ್ರಕರಣಗಳ ದೂರು ಬಂದಿದ್ದು, 42ನ್ನು ತಡೆಯಲಾಗಿದೆ. 34 ಬಾಲ್ಯವಿವಾಹಗಳು ನಡೆದಿವೆ. 2021-22ರಲ್ಲಿ 138 ಪ್ರಕರಣಗಳಲ್ಲಿ 71 ತಡೆಯಲಾಗಿದ್ದು, 67 ಮದುವೆಗಳಾಗಿವೆ. 2022-23ರಲ್ಲಿ 147 ಪ್ರಕರಣ ಪೈಕಿ 85ನ್ನು ತಡೆಯಲಾಗಿದ್ದು, 62 ನಡೆದಿವೆ. 2023-24ನೇ ಸಾಲಿನಲ್ಲಿ 182 ಪ್ರಕರಣಗಳ ಪೈಕಿ 85 ಮದುವೆ ತಡೆಯಲಾಗಿದ್ದು, 78 ನೆರವೇರಿವೆ. 2024-25ರಲ್ಲಿ 186 ಪ್ರಕರಣ ದಾಖಲಾಗಿದ್ದು, 129ಅನ್ನು ತಡೆಯಲಾಗಿದೆ. 57 ಬಾಲ್ಯವಿವಾಹಗಳು ನೆರವೇರಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಮದುವೆಯ ಬಗ್ಗೆ ಅಂಗನವಾಡಿ, ಆಶಾ ಕಾಯಕರ್ತೆಯರು, ಪಿಡಿಒ ಹಾಗೂ ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ಬರುತ್ತಿಲ್ಲವೆಂದು ನಂಬಲು ಸಾಧ್ಯವಿಲ್ಲ. ಹೀಗಾಗಿ ಬಾಲ್ಯವಿವಾಹ ತಡೆಗೆ ವಿಫಲರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿನಿ 3 ದಿನಗಳಿಗಿಂತ ಹೆಚ್ಚು ಶಾಲೆಗೆ ಬರುತ್ತಿಲ್ಲವೆಂದರೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಡಾ.ಕುಮಾರ, ಮಂಡ್ಯ ಜಿಲ್ಲಾಧಿಕಾರಿ
ಹೆಣ್ಣುಮಕ್ಕಳು ಅಪ್ತಾಪ್ತ ವಯಸ್ಸಿನಲ್ಲಿ ಮದುವೆಯಾಗಿ ಗರ್ಭ ಧರಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗರ್ಭಕೋಶ ಚೆನ್ನಾಗಿ ಬೆಳೆವಣಿಗೆಯಾಗದೆ ಹಾಗೂ ಹೆರಿಗೆಗೆ ಗುಪ್ತಾಂಗ ಸಿದ್ಧವಾಗದೆ ಹೆರಿಗೆ ಕಷ್ಟವಾಗಲಿದೆ. ಇಂತಹ ಸಂದರ್ಭದಲ್ಲಿ ಸಹಜ ಹೆರಿಗೆ ಕಷ್ಟವಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಲಿದೆ. ಕೆಲವು ಸಂದರ್ಭ ತಾಯಿ-ಮಗು ಸಾವು ಸಾಧ್ಯತೆ ಹೆಚ್ಚು.
-ಡಾ.ಎಚ್.ಸಿ.ಸವಿತಾ,ಮುಖ್ಯಸ್ಥರು, ಗರ್ಭಿಣಿ ಮತ್ತು ಸ್ತ್ರೀರೋಗ ವಿಭಾಗ, ಮಿಮ್ಸ್