ಸಿದ್ದರಾಮಯ್ಯ ಹೆಸರು ಜಪಿಸಿ 501 ಚಾವಟಿ ಏಟು!

ಬೆಂಗಳೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡುವಾಗ ರಾಜ್ಯ ಸರಕಾರ ಧ್ವನಿ ಇಲ್ಲದ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಲೆಮಾರಿ ಸಮುದಾಯದ ಕಲಾವಿದರು, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಜಪಿಸಿ 501 ಚಾವಟಿ ಏಟು’ ಬಾರಿಸಿಕೊಂಡರು.
ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಜಮಾಯಿಸಿದ ಶಿಳ್ಳೇಕ್ಯಾತ, ಸಿಂದೂಳ್, ಕಿಳ್ಳೇಕ್ಯಾತ, ಜೋಗಿ ಮಸಣ, ಬಂಡಿ, ಮಾಲ ದಾಸರಿ, ಸುಡಗಾಡ ಸಿದ್ಧ, ಮುಖ್ರಿ ಸೇರಿದಂತೆ ವಿವಿಧ ಅಲೆಮಾರಿ ಸಮುದಾಯದ ಸದಸ್ಯರು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಶಂಖ, ಜಾಗಟೆ, ಉರಿಮೆ, ಢಕ್ಕಿ, ತಂಬೂರಿ ಬಾರಿಸುವುದು ಮಾತ್ರವಲ್ಲದೆ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಜಪಿಸಿ 501 ಚಾವಟಿ ಏಟು’ ಬಾರಿಸಿಕೊಳ್ಳುವ ಮೂಲಕ ಕಲಾತ್ಮಕವಾಗಿ ಸರಕಾರಕ್ಕೆ ತಮ್ಮ ಹಕ್ಕೊತ್ತಾಯ ಮಂಡಿಸಿದರು.
ಅದರಲ್ಲೂ ಸಿಂದೂಳ್, ಶಿಳ್ಳೇಕ್ಯಾತ ಸಮುದಾಯ ಹನುಮಂತ, ಮಾರಪ್ಪ ಸೇರಿದಂತೆ ನಾಲ್ವರು ಕಲಾವಿದರು ಗುರುವಾರ ಧರಣಿ ಸತ್ಯಾಗ್ರಹ ಆರಂಭವಾಗುತ್ತಿದ್ದಂತೆ ತಮಗೆ ಅನ್ಯಾಯ ಮಾಡಲಾಗಿದೆ. ಸರಕಾರ ತಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಬೇಸರ ಹೊರಹಾಕಿ ಚಾವಟಿ ಏಟು ಬಾರಿಸಿಕೊಂಡರು.
ಇವತ್ತಿಗೂ ಅಲೆಮಾರಿ ಸಮುದಾಯ ತುತ್ತು ಅನ್ನಕ್ಕೆ ಪರದಾಡುತ್ತಿದೆ. ಅವರಿಗೆ ನಿರ್ದಿಷ್ಟ ಊರು, ಕೇರಿ, ಮನೆ ಇಲ್ಲ. ಪರರ ಜಮೀನುಗಳಲ್ಲಿ ಹಾಕಿಕೊಂಡ ಗುಡಿಸಲುಗಳೇ ಅವರಿಗೆ ವಾಸಸ್ಥಳ. ಹಂದಿ ಸಾಕಣೆ, ಭಿಕ್ಷಾಟನೆ, ಕೂದಲು ಮಾರಾಟವೇ ಅವರ
ಕಸುಬಾಗಿದೆ. ಅದೇ ರೀತಿಯಲ್ಲಿ ಸಣ್ಣಪುಟ್ಟ ವ್ಯಾಪಾರವನ್ನು ನಂಬಿಕೊಂಡು ಊರೂರು ಅಲೆಯುತ್ತಾರೆ. ಇಂತಹ ಅಲೆಮಾರಿ ಸಮುದಾಯವನ್ನು ಸ್ಪೃಶ್ಯ ಜಾತಿಗಳೊಂದಿಗೆ ಸೇರಿಕೊಂಡು ಮೀಸಲಾತಿ ಪಡೆಯಬೇಕೆಂದರೆ ಸಾಮಾಜಿಕ ನ್ಯಾಯ ಹೇಗೆ ಪಡೆದುಕೊಳ್ಳುವುದು ಎಂದು ಹಂದಿಜೋಗಿ ಸಮುದಾಯದ ಸದಸ್ಯರು ತಮ್ಮ ಅಳಲು ತೋಡಿಕೊಂಡರು.
ಅಲೆಮಾರಿಗಳು ಬೆಂಕಿಯಿಂದ ಬಾಣಲೆಗೆ
ರಾಜ್ಯ ಸರಕಾರ ಎಡಗೈ, ಬಲಗೈ ಸಮುದಾಯಗಳಿಗೆ ತಲಾ ಶೇ.6, ಸ್ಪೃರ್ಶ, ಅಲೆಮಾರಿಗಳಿಗೆ ಶೇ.5ರಷ್ಟು ಒಳಮೀಸಲಾತಿ ನೀಡಲು ತೀರ್ಮಾನಿಸಿ ರುವುದು ಅಲೆಮಾರಿಗಳ ಪಾಲಿಗೆ ಮರಣ ಶಾಸನ. ನಾವು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿ ನೀಡಿದರೆ ನಮಗೆ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ ಎಂದು ಅಲೆಮಾರಿ ಸಮುದಾಯದ ಹೋರಾಟಗಾರರ ಅಭಿಪ್ರಾಯವಾಗಿದೆ.