ಕಲ್ಯಾಣ ಭಾಗದ ಪ್ರಸಿದ್ಧ 'ಓಸ್ಮಾನಿಯಾ ಬಿಸ್ಕಟ್'ಗೆ ಶತಮಾನೋತ್ಸವ ಸಂಭ್ರಮ

ಕಲಬುರಗಿ: ಸ್ವಾತಂತ್ರ್ಯ ಪೂರ್ವದಲ್ಲಿ ಹೈದ್ರಾಬಾದ್ ಕರ್ನಾಟಕವನ್ನು (ಈಗಿನ ಕಲ್ಯಾಣ ಕರ್ನಾಟಕ) ಗಮನಿಸಿದರೆ ನಿಝಾಮ ಶಾಹಿ ಆಡಳಿತದ ವೈಖರಿಯಲ್ಲಿ ಸಾಮಾನ್ಯವಾಗಿ ಶೈಕ್ಷಣಿಕ ಕೇಂದ್ರಗಳು, ಸ್ಮಾರಕಗಳು, ಮಸೀದಿಗಳು, ಕಲ್ಲಿನ ಕೋಟೆ(ಖಿಲೇ)ಗಳು ಗಮನ ಸೆಳೆಯುತ್ತವೆ. ಆಗಿನ ರಾಜ ಪರಂಪರೆಯಲ್ಲಿ ದಿನನಿತ್ಯದ ಜೀವನದಲ್ಲಿ ಸೇವಿಸುವ ವಿವಿಧ ಪದಾರ್ಥಗಳ ಕುರಿತಾಗಿ ಕಣ್ಣು ಹಾಯಿಸಿದರೆ ವಿಶ್ವದ ಶ್ರೀಮಂತರು ಬಳಸುವ ಪದಾರ್ಥಗಳನ್ನು ಇವರೂ ಬಳಸುತ್ತಿದ್ದರು ಎನ್ನುವುದು ಆಶ್ಚರ್ಯ. ಅದರಲ್ಲಿ ಕೆಲವು ಸಿಹಿ ತಿನಿಸುಗಳು ಇವರ ಕಾಲದಿಂದಲೇ ಶುರುವಾಗಿದ್ದಲ್ಲದೆ ಅವು ಇಂದಿಗೂ ಜನರ ಅಚ್ಚುಮೆಚ್ಚಿ ನ ತಿನಿಸುಗಳಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವುಗಳಲ್ಲಿ ಪ್ರಮುಖವಾದದ್ದು ಹೇಳಲು ಹೊರಟಿರುವುದು ಓಸ್ಮಾನಿಯಾ ಬಿಸ್ಕಟ್!. ಈಗಲೂ ಬೆಳಗ್ಗಿನಿಂದಲೇ ಚಹಾದೊಂದಿಗೆ ನೆನಪಾಗುವ ಈ ಓಸ್ಮಾನಿಯಾ ಬಿಸ್ಕಟ್ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ.
ನಿಝಾಮ ವಂಶದ ಕೊನೆಯ ಮತ್ತು ಏಳನೇ ಅರಸ ಮೀರ್ ಓಸ್ಮಾನ್ ಅಲಿ ಖಾನ್ ಬಹಾದುರ್ ಅವರು ತಮ್ಮ ಅಪಾರ ಶ್ರೀಮಂತಿಕೆಗೆ ಪ್ರಸಿದ್ಧರಾಗಿದ್ದರು ಮತ್ತು ಆ ಕಾಲದಲ್ಲಿ ವಿಶ್ವದ ಅತಿಶ್ರೇಷ್ಠ ಶ್ರೀಮಂತರಲ್ಲೊಬ್ಬರಾಗಿದ್ದರು. ಅವರು ಆಧುನಿಕ ಹೈದರಾಬಾದ್‌ನ ಶಿಲ್ಪಿಯೂ ಎಂದು ಹೇಳಲಾಗುತ್ತಿದೆ. ಅಂತಹ ರಾಜನ ಆಳ್ವಿಕೆಯಲ್ಲಿ ಓಸ್ಮಾನಿಯಾ ಬಿಸ್ಕಟ್ ಉತ್ಪಾದನೆಯಾಗಿ ಆಗಿನ ಕಾಲಕ್ಕೂ ಮತ್ತು ಇಂದಿಗೂ ಅದು ಕಲ್ಯಾಣ ಕರ್ನಾಟಕ ಭಾಗದ ಅಚ್ಚು ಮೆಚ್ಚಿನ ತಿನಿಸು ಎಂದರೆ ತಪ್ಪಾಗಲಿಕ್ಕಿಲ್ಲ.
ಈ ಬಿಸ್ಕಟ್‌ಗಳು ಈಗಿನ ತೆಲಂಗಾಣ ರಾಜಧಾನಿ ಹೈದರಾಬಾದ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಜನಪ್ರಿಯತೆ ಗಳಿಸಿವೆ. ಕಲಬುರಗಿ (ಆಗಿನ ಗುಲ್ಬರ್ಗಾ), ಬೀದರ್, ರಾಯಚೂರು ಹಾಗೂ ಯಾದಗಿರ್ ಪ್ರದೇಶದ ಜನರು ಈ ಬಿಸ್ಕಟ್‌ಗಳನ್ನು ತಮ್ಮ ಚಹಾ ಸಮಯದಲ್ಲಿ ಕುಡಿಯುವ ಸ್ವಾದಿಷ್ಟ ತಿನಿಸಾಗಿ ಬಳಸುತ್ತಾರೆ. ಈ ವ್ಯಾಪ್ತಿಯಲ್ಲಿ ಯಾವುದೇ ಹೋಟೆಲ್, ಬೇಕರಿ, ಶಾಪಿಂಗ್ ಮಾಲ್ ಅಥವಾ ಚಹಾ ಅಂಗಡಿಗೆ ಹೋದರೂ ಈ ಬಿಸ್ಕಟ್‌ಗಳು ಸುಲಭವಾಗಿ ಲಭ್ಯವಿರುತ್ತವೆ.
ಈ ಬಿಸ್ಕಟ್‌ಗಳು ದಪ್ಪವಾದ ವೃತ್ತಾಕಾರದ ಆಕಾರದಲ್ಲಿದ್ದು, ತುಂಡಾಗಿರುವ ಮೇಲ್ಮೈ ಮತ್ತು ವಿಭಿನ್ನ ತೋರಿಕೆಯನ್ನು ಹೊಂದಿವೆ. ಉತ್ತಮ ಗುಣಮಟ್ಟದ ಪದಾರ್ಥಗಳಿಂದ ತಯಾರಾದ ಈ ಬಿಸ್ಕಟ್‌ಗಳು ಸಿಹಿ ಮತ್ತು ಉಪ್ಪಿನ ಸಮತೋಲನದಿಂದ ಖಾಸವಾದ ರುಚಿಯನ್ನು ನೀಡುತ್ತವೆ. ಇದರಲ್ಲಿ ಮೈದಾ, ಬೆಣ್ಣೆ ಅಥವಾ ತುಪ್ಪ, ಸಕ್ಕರೆ, ಹಾಲಿನ ಪುಡಿ ಮತ್ತು ಸ್ವಲ್ಪ ಉಪ್ಪುಸೇರಿಸಲಾಗುತ್ತದೆ.
ಕಲಬುರಗಿಯವರಿಗಿದು ಚಹಾ ಜೊತೆಗೆ ಬಳಸುವ ಮೊದಲನೇ ಆಯ್ಕೆಯೇ ಈ ಬಿಸ್ಕಟ್ ಆಗಿದೆ. ಕಳೆದ ನೂರು ವರ್ಷಗಳಿಂದಲೂ ಕಲಬುರಗಿ ನಗರದಲ್ಲಿ ಎಂ.ಎಸ್.ಕೆ.ಮಿಲ್, ತಿಮ್ಮಾಪುರಿ, ಮುಸ್ಲಿಮ್ ಚೌಕ್, ದರ್ಗಾ ರೋಡ್, ಸೂಪರ್ ಮಾರ್ಕೆಟ್ ಸಹಿತ ಇನ್ನಿತರ ಪ್ರದೇಶಗಳಲ್ಲೂ ಈ ಬಿಸ್ಕಟ್ ಇಂದಿಗೂ ಬೆಳಂಬೆಳಗ್ಗೆ ಗಮನ ಸೆಳೆಯುತ್ತವೆ.
ಈ ಬಿಸ್ಕಟ್ ಮೊದಲು ಬಳಕೆಗೆ ಬಂದದ್ದು ಹೇಗೆ?:
1920-40ರ ಅವಧಿಯ ಆಗಿನ ಹೈದ್ರಾಬಾದ್ ನಿಝಾಮ ಮೀರ್ ಓಸ್ಮಾನ್ ಅಲಿ ಖಾನ್ ಕಾಲದಲ್ಲೇ ಈ ಬಿಸ್ಕಟ್‌ಗಳನ್ನು ಪರಿಚಯಿಸಲಾಗಿದೆ ಎಂದು ಇತಿಹಾಸ ಮೂಲಗಳು ಹೇಳುತ್ತವೆ.
ಮೀರ್ ಓಸ್ಮಾನ್ ಅಲಿ ಖಾನ್ ಬಹಾದ್ದುರ್ ಅವರು ಓಸ್ಮಾನಿಯಾ ಆಸ್ಪತ್ರೆ ಭೇಟಿಯಾಗಿದ್ದರು. ಆ ವೇಳೆಯಲ್ಲಿ ರೋಗಿಗಳಿಗೆ ಹೆಚ್ಚು ಶಕ್ತಿದಾಯಕ ಬಿಸ್ಕಟ್‌ಗಳನ್ನು ನೀಡುವ ಸಲಹೆ ನೀಡಿದರೆಂದು ಹೇಳಲಾಗುತ್ತದೆ. ಈ ಬಿಸ್ಕಟ್‌ಗಳನ್ನು ಮೊದಲ ಬಾರಿಗೆ ಓಸ್ಮಾನಿಯಾ ಜನರಲ್ ಆಸ್ಪತ್ರೆಯ ಆಹಾರತಜ್ಞರು ರೋಗಿಗಳಿಗಾಗಿ ತಯಾರಿಸಿದರು, ಈ ಕ್ರಮವು ನಂತರ ಸಂಪೂರ್ಣ ಹೈದರಾಬಾದ್ ರಾಜ್ಯದಾದ್ಯಂತ ಹರಡಿತು ಮತ್ತು ಇತರ ಬೇಕರ್‌ಗಳೂ ಈ ರೆಸಿಪಿಯನ್ನು ಅನುಸರಿಸಿದರು.
ಈ ಬಿಸ್ಕಟ್‌ಗಳು ಅರಸನ ಮನಪೂರ್ಣವಾದ ತಿನಿಸುಗಳಾಗಿದ್ದು, ಪ್ರತೀ ದಿನ ಸಂಜೆ ಚಹಾ ಜೊತೆ ಅವರು ಸೇವಿಸುತ್ತಿದ್ದರೆಂದು ಹೇಳಲಾಗುತ್ತದೆ. ಪ್ರತೀ ದಿನ ಅರಮನೆಯಿಂದ ಒಂದು ಕಾರು ಆಸ್ಥಾನದ ಅಬಿಡ್‌ನ ಹೋಟೆಲ್‌ವರೆಗೆ ಈ ಬಿಸ್ಕಟ್‌ಗಳನ್ನು ತರಲು ಹೋಗುತ್ತಿತ್ತೆಂಬ ಕಥೆಯೂ ಇದೆ ಎನ್ನುತ್ತಾರೆ ಸಂಶೋಧಕ ಡಾ.ರಹ್ಮಾನ್ ಪಟೇಲ್.
ಬೆಳಗ್ಗೆ ಚಹಾ ಕುಡಿಯಲು ಹೋದರೆ ತಕ್ಷಣ ನಮಗೆ ನೆನಪಾ ಗುವುದು ಓಸ್ಮಾನಿಯಾ ಬಿಸ್ಕಟ್. ಚಹಾದೊಂದಿಗೆ ಉಪ್ಪು ಮಿಶ್ರಿತ ಈ ಬಿಸ್ಕಟ್ ನಮಗೆ ಫೇವರಿಟ್ ಆಗಿದೆ. ಇದಕ್ಕೆ ದೊಡ್ಡ ಇತಿಹಾಸವಿರುವುದು ನಮಗೆ ಹೆಮ್ಮೆ.
-ಲಕ್ಷ್ಮಿಪುತ್ರ ತಳವಾರ್, ಕಲಬುರಗಿ ನಗರ ನಿವಾಸಿ
ಜಿಐ ಟ್ಯಾಗ್‌ಗಾಗಿ ಕಸರತ್ತು?
ಒಂದು ಗುಂಪು ಬೇಕರ್‌ಗಳು ಓಸ್ಮಾನಿಯಾ ಬಿಸ್ಕಟ್‌ಗಳಿಗೆ ಭೌಗೋಳಿಕ ಸೂಚಿಕೆ (ಜಿಐ ಟ್ಯಾಗ್) ಪಡೆಯಲು ಪ್ರಯತ್ನಿಸಿದರು. ಆದರೆ ಅವರಿಗೆ ಯಶಸ್ಸು ದೊರೆಯಲಿಲ್ಲ. ಆದರೆ ಈಗ ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿ ಸೇರಿದಂತೆ ಕರ್ನಾಟಕದಾದ್ಯಂತ ಮತ್ತು ಪಕ್ಕದ ರಾಜ್ಯಗಳಲ್ಲೂ ಈ ಬಿಸ್ಕಟ್ ಗಳು ಲಭ್ಯವಿವೆ. ಇದಕ್ಕೆ ಮತ್ತೆ ಜಿಐ ಟ್ಯಾಗ್‌ಗಾಗಿ ಕಸರತ್ತು ನಡೆಸಿದರೆ ಅದಕ್ಕೆ ಜಾಗತಿಕ ಗುರುತು ಸಿಗಬಹುದೇನೋ ಎನ್ನುತ್ತಾರೆ ಬೇಕರ್‌ಗಳು.
ಹೈದ್ರಾಬಾದ್ ನಿಝಾಮರ ಆಳ್ವಿಕೆಯಿಂದ ಈವರೆಗೂ ಈ ಭಾಗದಲ್ಲಿ ಓಸ್ಮಾನಿಯಾ ಬಿಸ್ಕಟ್ ಎಂದರೆ ಬಹುಬೇಡಿಕೆ. ಇಂತಹ ವಿಶಿಷ್ಟ ಸಿಹಿ ತಿನಿಸು ಪ್ರಾರಂಭವಾಗಿ ಶತಮಾನೋತ್ಸವ ಸಂಭ್ರಮದಲ್ಲಿರುವುದು ಹೆಮ್ಮೆ. ಈ ಭಾಗದಿಂದ ಗುರುತಿಸುವ ಬಿಸ್ಕಟ್‌ಗೆ ಹೆಚ್ಚಿನ ಆದ್ಯತೆ ಸಿಗಲಿ.
-ಡಾ.ರಹ್ಮಾನ್‌ಪಟೇಲ್, ಸಂಶೋಧಕ