ಪರಿಶಿಷ್ಟರ ವಿಶ್ವಸನೀಯ ಜಾತಿ ಸಮೀಕ್ಷೆಯತ್ತ ಬೇಕಿದೆ ಜಾಗೃತಿಯ ಹಸ್ತ

ಸಾಂದರ್ಭಿಕ ಚಿತ್ರ | PC: Grok
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗೆ ಪೂರಕವಾಗಿ ಮತ್ತು ನಮ್ಮ ಸರಕಾರದ ಕ್ಯಾಬಿನೆಟ್ ನಿರ್ಧಾರದ ಅನ್ವಯ ಜರುಗುತ್ತಿರುವ ಪರಿಶಿಷ್ಟ ಸಮುದಾಯಗಳ ಜಾತಿ ಸಮೀಕ್ಷೆಯು ಅತ್ಯಂತ ಪರಿಣಾಮಕಾರಿಯಾಗಿ ಜರುಗುತ್ತಿದ್ದು ನಮ್ಮ ಸರ್ಕಾರದ ನುಡಿದಂತೆ ನಡೆ ಎನ್ನುವ ಮಾತಿಗೆ ಸಾಕ್ಷಿಯಾಗಿದೆ. ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜರುಗುತ್ತಿರುವ ಈ ಜಾತಿ ಸಮೀಕ್ಷೆಯು ಎಲ್ಲ ರೀತಿಯಲ್ಲೂ ಪರಿಣಾಮಕಾರಿಯಾಗಿ ಮೂಡಿ ಬರಲು ನಮ್ಮ ಸರಕಾರವು ಗಣನೀಯವಾಗಿ ಕೆಲಸ ಮಾಡುತ್ತಿದ್ದು ಈ ಬಗ್ಗೆ ಎಲ್ಲರಲ್ಲೂ ವಿಶ್ವಾಸ ಮೂಡಿದೆ.
ಈ ಸಮೀಕ್ಷೆಗಾಗಿ ಈಗಾಗಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿರುವ ನಮ್ಮ ಸರಕಾರದ ಅವಧಿಯಲ್ಲೇ ಈ ಸಮೀಕ್ಷಾ ಕೆಲಸವು ಈಗಾಗಲೇ ಭರದಿಂದ ಸಾಗಿದೆ.
ಪ್ರಸ್ತುತ ಈ ಆಯೋಗವು ಸಮೀಕ್ಷೆದಾರರು ಮನೆ ಮನೆ ಭೇಟಿ ನೀಡಿ, ಬ್ಲಾಕ್ ಮಟ್ಟದಲ್ಲಿ ವಿವಿಧ ಶಿಬಿರಗಳನ್ನು ಆಯೋಜಿಸುವ ಮೂಲಕ ಮತ್ತು ಆನ್ ಲೈನ್ನಲ್ಲೂ ಮಾಹಿತಿಯನ್ನು ಪಡೆದುಕೊಳ್ಳುವ ಕೆಲಸ ಮಾಡುತ್ತಿದೆ.
ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಸಮೀಕ್ಷೆ ನಡೆಸಲು ರೂಪಿಸಲಾದ ಸಮೀಕ್ಷಾದಾರರು ಮತದಾರರ ಪಟ್ಟಿಯ ಸಹಾಯದಿಂದ ಒಂದು ಪ್ರದೇಶದಲ್ಲಿ ಎಷ್ಟು ಮನೆಗಳಿವೆ ಎಂಬುದನ್ನು ಗುರುತಿಸಿ, ಯಾವ ಮನೆಯ ಸಮೀಕ್ಷೆ ಮಾಡಲಾಗುವುದು ಎಂಬ ಸಂಗತಿಯನ್ನು ಆದಷ್ಟು ಮುಂಚಿತವಾಗಿಯೇ ಗ್ರಾಮಸ್ಥರಿಗೆ ತಿಳಿಸಬೇಕು. ಇನ್ನು ಒಂದು ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಸಮುದಾಯದ ಕುಟುಂಬಗಳಿಗೆ ಸಂಬಂಧಿಸಿದಂತೆ ಇರುವ ಮಾಹಿತಿಯನ್ನು ಗ್ರಾಮಕ್ಕೆ ಸಂಬಂಧಿಸಿದ ಗ್ರಾಮದ ಆಡಳಿತಾಧಿಕಾರಿಗಳು, ಬಿಲ್ ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತರು ಮತ್ತು ಇತರ ನೆರವನ್ನು ಪಡೆದುಕೊಂಡು ಈ ಸಮೀಕ್ಷಾ ಕೆಲಸವನ್ನು ಮಾಡಲಾಗುತ್ತಿದೆ.
ಸಮೀಕ್ಷೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಸಂಗತಿಗಳ ಬಗ್ಗೆ ಸರಕಾರವು ಹೆಚ್ಚು ನಿಗಾ ವಹಿಸಿದ್ದು ಸಮೀಕ್ಷೆ ಆದ ನಂತರದಲ್ಲಿ, ಸಮೀಕ್ಷೆಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಕುಟುಂಬಗಳ ಮಾಹಿತಿಯನ್ನು ಮತ್ತೆ ಪಡೆಯುವುದು ಹಾಗೂ ದೋಷವಿದ್ದಲ್ಲಿ ವಿವರಗಳನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕು. ವಿವರಗಳನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ತುಂಬಬೇಕಿದ್ದು ಎಚ್ಚರಿಕೆಯಿಂದ ವಿವರಗಳನ್ನು ಭರ್ತಿ ಮಾಡಲು ಸೂಚಿಸಿದೆ.
ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಜನ ಸಮುದಾಯಗಳ ಸಮಗ್ರ ಏಳಿಗೆಗಾಗಿ ಸಂವಿಧಾನದಲ್ಲಿ ಅನೇಕ ಅವಕಾಶಗಳನ್ನು ಕಲ್ಪಿಸಲಾಗಿದೆ. ಈ ಪೈಕಿ ಸಂವಿಧಾನದ 15(4) 16 (4) ನೇ ವಿಧಿಯ ಅಡಿಯಲ್ಲಿ ಹಿಂದುಳಿದ ವರ್ಗಗಳಿಗೆ ನೀಡಲಾದ ಶೈಕ್ಷಣಿಕ ಮೀಸಲಾತಿಯ ಅನುಸಾರವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿ ಗಣತಿಯನ್ನು ಮಾಡುವುದು ಹೆಚ್ಚು ಸೂಕ್ತವೆಂದು ತಜ್ಞರು ಎಂದಿನಿಂದಲೂ ಅಭಿಪ್ರಾಯ ಪಟ್ಟಿದ್ದು ಅವರ ಅಭಿಪ್ರಾಯ ಮತ್ತು ಪರಿಶಿಷ್ಟ ಸಮುದಾಯಗಳ ಬೇಡಿಕೆಗೆ ಅನುಸಾರವಾಗಿ ಈ ಜಾತಿ ಸಮೀಕ್ಷೆಯನ್ನು ಸರಕಾರ ಮಾಡುತ್ತಿದೆ.
ಭಾರತದ ಮಟ್ಟಿಗೆ ಜನ ಗಣತಿಗೆ ತನ್ನದೇ ಆದ ಇತಿಹಾಸವಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಆಡಳಿತಾತ್ಮಕ ಕಾರಣಕ್ಕಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಜನಗಣತಿಯನ್ನು ನಡೆಸುವ ಬಗ್ಗೆ ಪ್ರಸ್ತಾವವಿತ್ತು. ಇದರ ನಂತರದಲ್ಲಿ ಬಂದ ಮೊಗಲ್ ದೊರೆ ಅಕ್ಬರ್ನ ಆಸ್ಥಾನದಲ್ಲಿ ಆತನ ಮಂತ್ರಿ ಹಾಗೂ ಖ್ಯಾತ ಇತಿಹಾಸಕಾರ ಅಬುಲ್ ಫಝಲ್ನ ‘ಐನ್ ಅಕ್ಬರಿ’ ಕೃತಿಯಲ್ಲಿ ವೈಜ್ಞಾನಿಕ ತಂತ್ರಗಳ ಆಧಾರದಲ್ಲಿ ಜನಗಣತಿ ಮಾಡಬೇಕು ಎಂಬುದರ ಕುರಿತು ಪ್ರಸ್ತಾವವಿದೆ.
ಇನ್ನು ಭಾರತದಲ್ಲಿ 1872 ರ ವೇಳೆಗೆ ಬ್ರಿಟಿಷರ ಕಾಲದಲ್ಲಿ ಆಧುನಿಕ ಜನಗಣತಿಯ ಪ್ರಕ್ರಿಯೆಗಳು ಆರಂಭಗೊಂಡವು. ವ್ಯಕ್ತಿಯ ಹೆಸರು, ಜಾತಿ, ಧರ್ಮ, ಜನಾಂಗ, ಸಾಕ್ಷರತೆ ಹಾಗೂ ಅವರ ವರ್ಗದ ಆಧಾರದ ಮೇಲೆ ನಡೆಸಿದ ಈ ಜನಗಣತಿಯು ಬಹಳ ಸೀಮಿತ ಪ್ರಾಂತಗಳಲ್ಲಿ ನಡೆಸಿದ್ದ ಕಾರಣದಿಂದಾಗಿ ಇದು ಸಮಗ್ರ ಭಾರತದ ಚಿತ್ರಣವನ್ನು ಕಟ್ಟಿಕೊಡಲಿಲ್ಲ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ 1951 ರಲ್ಲಿ ಮೊದಲ ಬಾರಿಗೆ ಜನಗಣತಿ ನಡೆಯಿತು. ಈ ವೇಳೆ ಭಾರತವು ಆಧುನಿಕ ಮತ್ತು ಜಾಗತಿಕ ಪ್ರಜಾಪ್ರಭುತ್ವದೆಡೆಗೆ ಸಾಗುತ್ತಿರುವ ಕಾರಣದಿಂದಾಗಿ ಜಾತಿ ಗಣತಿ ಬೇಡವೆಂಬ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿಯೇ 1953 ರಲ್ಲಿ ನೇಮಕ ಮಾಡಲಾಗಿದ್ದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಪರಿಮಿತಿಯಲ್ಲಿ ಕಾಕಾ ಕಾಲೇಕರ್ ಅವರು ಬಲವಾಗಿ ಶಿಫಾರಸು ಮಾಡಿದ ಹಿಂದುಳಿದ ವರ್ಗಗಳ ಜಾತಿಗಣತಿಯ ಪ್ರಸ್ತಾವವು ಪರಿಗಣಿತವಾಗಲಿಲ್ಲ.
ಆದರೆ ಹಿಂದುಳಿದ ವರ್ಗಗಳ ಅಂಕಿ ಅಂಶಕ್ಕೆ ಸಂಬಂಧಿಸಿದಂತೆ ನಿಖರವಾದ ದತ್ತಾಂಶವು ಇಲ್ಲದ ಕಾರಣಕ್ಕಾಗಿ ದಿನದಿಂದ ದಿನಕ್ಕೆ ಹಿಂದುಳಿದ ವರ್ಗಗಳ ಪ್ರತಿನಿಧೀಕರಣಕ್ಕೆ ಬೇಡಿಕೆಯು ಹೆಚ್ಚಾಯಿತು. 1979 ರ ಜನವರಿ 1 ರಂದು ಭಾರತದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ದೃಷ್ಟಿಯಿಂದ ಮಂಡಲ್ ಆಯೋಗವನ್ನು ರಚಿಸಲಾಯಿತು. ನಂತರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಜನಪರ ನೀತಿಗಳನ್ನು ರೂಪಿಸಲು ಹಿಂದುಳಿದ ವರ್ಗಗಳ ಜಾತಿ ಗಣತಿಯನ್ನು ಮಾಡಬೇಕೆಂದು ಮಂಡಲ್ ಆಯೋಗವು ಶಿಫಾರಸು ಮಾಡಿತು. 1991 ರಲ್ಲಿ ಮಂಡಲ್ ಆಯೋಗದ ವರದಿಯು ಜಾರಿಯಾಗಿ 2001 ರ ಜನಗಣತಿಯಲ್ಲಿ ಜಾತಿಗಣತಿಯನ್ನೂ ಮಾಡಬೇಕೆಂದು ತೀರ್ಮಾನಿಸಲಾಯಿತು.
ಆದರೆ 1996 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಕೇವಲ 13 ದಿನಗಳ ಕಾಲ ಅಸ್ತಿತ್ವದಲ್ಲಿದ್ದ ಎನ್ ಡಿಎ ಸರಕಾರವು ತಾನು ಅಧಿಕಾರದಲ್ಲಿದ್ದ 13 ದಿನಗಳಲ್ಲೇ ಜಾತಿ ಗಣತಿಯನ್ನು ನಿಲ್ಲಿಸಬೇಕೆಂಬ ನಿರ್ಧಾರವನ್ನು ಕೈಗೊಂಡಿತು. ಎಲ್ಲ ಕಾಲದಲ್ಲೂ ಇರುವಂತಹ ವೈದಿಕಶಾಹಿಗಳ ಭಯವೇ ಇಂತಹ ನಡೆಗೆ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾಗಿಲ್ಲ ಎಂದು ಕಾಣುತ್ತದೆ.
ಇದೇ ರೀತಿಯಲ್ಲಿ 1975ರಲ್ಲಿ ಎಲ್.ಜಿ. ಹಾವನೂರು ಅವರು ಪ್ರಸ್ತಾವಿಸಿದ ಜಾತಿ ಸಮೀಕ್ಷೆಯ ಶಿಫಾರಸನ್ನೂ ಸಹ ಒಪ್ಪದಂತಹ ಕಾಲವನ್ನೂ ದಾಟಿ ಇದೀಗ, ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಜರುಗುತ್ತಿರುವ ಜಾತಿ ಸಮೀಕ್ಷೆಯ ಕಾಲಘಟ್ಟಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ.
ನುಡಿದಂತೆ ನಡೆಯುವ, ಬಸವ ತತ್ವದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಸರಕಾರವು ಕಳೆದ ಅವಧಿಯಲ್ಲಿ ಮತ್ತು ಪ್ರಸ್ತುತ ಅವಧಿಯಲ್ಲಿ ನೀಡಿದ್ದ ಪ್ರಣಾಳಿಕೆಗಳಿಗೆ ಅನುಸಾರವಾಗಿ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಮಾಡುತ್ತಿದ್ದು, ಪರಿಶಿಷ್ಟ ಸಮುದಾಯಗಳ ಜಾತಿ ಸಮೀಕ್ಷೆ ಮತ್ತು ಅದನ್ನು ಆಧರಿಸಿದ ಒಳ ಮೀಸಲಾತಿಯ ಸೌಲಭ್ಯವನ್ನು ನೀಡಲು ಬದ್ಧವಾಗಿದ್ದು ಈ ದಿಸೆಯಲ್ಲೇ ನಿರಂತರವಾಗಿ ಕೆಲಸ ಮಾಡುತ್ತಿದೆ.
ಈಗಾಗಲೇ ನಮ್ಮ ಸರಕಾರವು ಪರಿಶಿಷ್ಟ ಸಮುದಾಯಗಳ ಬೇಡಿಕೆಗೆ ಅನುಸಾರವಾಗಿ ಒಳ ಮೀಸಲಾತಿ ಜಾರಿಗೆ ಶ್ರಮಿಸುತ್ತಿದೆ. ಸಮೀಕ್ಷಾ ಕೈಪಿಡಿಯ ಮೂಲಕ ಸಾಕಷ್ಟು ಮಾಹಿತಿಯನ್ನು ನೀಡಿರುವ ನಮ್ಮ ಸರಕಾರವು, ಸಮೀಕ್ಷೆಯ ಅವಧಿಯಲ್ಲಿ ಕೇಳುವಂತಹ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಗಳನ್ನು ಒದಗಿಸುವ ಕೆಲಸವನ್ನು ಮಾಡಿದೆ.
ಇನ್ನು ಸರಕಾರದ ಪ್ರಾಮಾಣಿಕವಾದ ಪ್ರಯತ್ನಗಳ ನಡುವೆ, ನಮ್ಮ ಪರಿಶಿಷ್ಟ ಸಮುದಾಯದ ಜನರಿಗೆ ಈ ಸಮೀಕ್ಷೆಯ ಮಹತ್ವದ ಬಗ್ಗೆ ಮತ್ತು ಇದರ ರೀತಿ ನೀತಿಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ನಮ್ಮ ಯುವ ಸಮುದಾಯಗಳು ಮಾಡಿದರೆ, ಅದು ಸಾಮಾಜಿಕ ನ್ಯಾಯವನ್ನು ಜಾರಿ ಮಾಡುವ ಸರಕಾರದ ಪ್ರಯತ್ನಕ್ಕೆ ಸಿಗುವ ಬೆಂಬಲ ಆಗಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಾವು ಹಕ್ಕುಗಳನ್ನು ಕೇಳುವಾಗ ಅದನ್ನು ತಲುಪಿಸುವ ಜವಾಬ್ದಾರಿಯುತವಾದ ಕೆಲಸವೂ ಇದಾಗಿದೆ ಎಂದು ಈ ಮೂಲಕ ತಿಳಿಸಲು ಬಯಸುತ್ತೇನೆ.
ಸೂಕ್ತ ದತ್ತಾಂಶ ಸಂಗ್ರಹಣೆ, ಸೂಕ್ತ ಮಾಹಿತಿಯ ಅವಲೋಕನ ಮತ್ತು ವೈಜ್ಞಾನಿಕವಾದ ಮಾದರಿಯಲ್ಲಿ ಜರುಗುತ್ತಿರುವ ಪರಿಶಿಷ್ಟರ ಜಾತಿ ಸಮೀಕ್ಷೆಯು ಪರಿಶಿಷ್ಟರ ಜನಸಂಖ್ಯೆ ಮತ್ತು ಅವರ ಸಾಮಾಜಿಕ ಸ್ಥಿತಿಗತಿಯನ್ನು ಅರಿಯುವ ನಿಟ್ಟಿನಲ್ಲಿ ಒಂದು ಪ್ರಮುಖವಾದ ಹೆಜ್ಜೆ ಆಗಲಿದ್ದು ಇದು ಸಮುದಾಯಗಳ ಬೇಡಿಕೆಗಳ ಹಂಚಿಕೆ ಮತ್ತು ಜಾರಿಗೆ ನ್ಯಾಯದ ಸ್ಪರ್ಶವನ್ನು ನೀಡಲಿದೆ.
ನ್ಯಾಯವನ್ನು ಒದಗಿಸುವುದು ಜವಾಬ್ದಾರಿ ನಿಜ, ಆದರೆ ಅದನ್ನು ಸರಿಯಾಗಿ ಒದಗಿಸದೇ ಹೋದರೆ ಅದು ಎಂದಿಗೂ ನ್ಯಾಯ ಎಂದು ಅನಿಸಿಕೊಳ್ಳುವುದಿಲ್ಲ ಮತ್ತು ಅದು ಇತಿಹಾಸಕ್ಕೆ ಎಸಗಿದ ಅಪಚಾರ ಆಗುತ್ತದೆ. ಹೀಗಾಗಿ ಅಂತಹ ಅಪಚಾರ ಆಗದಂತೆ ಜನ ಮೆಚ್ಚುವಂತೆ ನಮ್ಮ ಸರಕಾರ ಕೆಲಸ ಮಾಡುತ್ತಿದ್ದು ಇದು ರಾಜಕೀಯ ಮೀರಿದ ಮಹತ್ವದ ನಡೆ ಆಗಿದೆ ಮತ್ತು ಇಂತಹ ಕೆಲಸವು ಕಾಂಗ್ರೆಸ್ ಅವಧಿಯಲ್ಲೇ ಸಾಧ್ಯವಾಗುತ್ತಿದೆ ಎಂಬ ಹೆಮ್ಮೆ ನಮ್ಮದು.