ಗಮನ ಸೆಳೆದ ಬೆಂಗಳೂರು ‘ನಾಣ್ಯಗಳ ಪ್ರದರ್ಶನ’

ಬೆಂಗಳೂರು : ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ಫಾಲ್ಕನ್ ಕಾಯಿನ್ಸ್ ಗ್ಯಾಲರಿ ವತಿಯಿಂದ ಆಯೋಜಿಸಿದ್ದ ಬೆಂಗಳೂರು ನಾಣ್ಯಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.
ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಬಂದಿದ್ದ ನಾಣ್ಯ ಸಂಗ್ರಹಕರು ತಾವು ಸಂಗ್ರಹಿಸಿರುವ ನಾಣ್ಯ, ನೋಟು, ಅಂಚೆ ಚೀಟಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದು, ಬೆಂಗಳೂರಿನ ನಾಣ್ಯ ಪ್ರಿಯರು ಹಳೆಯ ನಾಣ್ಯಗಳನ್ನು ನೋಡಿ ಸಂಭ್ರಮಿಸಿದರು.
6ನೇ ಶತಮಾನದ ಗಂಗರ ಕಾಲದಿಂದ, ವಿಜಯನಗರ ಸಾಮ್ರಾಜ್ಯ, ಮೈ ಸೂರು ಒಡೆಯರ್ ಕಾಲದ ನಾಣ್ಯ, ಪ್ರಪಂಚದ ಎಲ್ಲ ದೇಶಗಳ ನಾಣ್ಯ, ಬ್ರಿಟೀಷರ ಕಾಲದ ನಾಣ್ಯಗಳು ಸೇರಿದಂತೆ ಭಾರತ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗಿನ ನಾಣ್ಯಗಳು ಮತ್ತು ನೋಟುಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿದ್ದವು.
ಪ್ರದರ್ಶನದಲ್ಲಿ ಏನೇನು ಇದ್ದವು
ನಾಣ್ಯಗಳ ಪ್ರದರ್ಶನದಲ್ಲಿ ಕೇವಲ ನಾಣ್ಯಗಳು ಮಾತ್ರವಲ್ಲದೇ, ಅಪರೂಪದ ಅಂಚೆ ಚೀಟಿಗಳು, ತಾಮ್ರ ಶಾಸನಗಳು, ಸ್ಟ್ಯಾಂಪ್‌ಗಳು, ಮೆಡಲ್‌ಗಳು, ಚಿತ್ರಕಲೆ, ಹಳೇ ಪುಸ್ತಕಗಳು, ಬ್ಯಾಂಕ್ ನೋಟ್ಸ್ ಸೇರಿದಂತೆ ಇನ್ನಿತರೆ ಐತಿಹಾಸಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಬ್ರಿಟೀಷರ ಕಾಲದಲ್ಲಿ ರಾಜರು ಬದಲಾದಂತೆ ನಾಣ್ಯಗಳೂ ಕೂಡ ಬದಲಾಗಿವೆ. ಬ್ರಿಟೀಷರ ನಾಣ್ಯಗಳು ಸೇರಿದಂತೆ, ಸ್ವಾತಂತ್ರ್ಯ ಬಂದ ಮೇಲೆ ನಾಣ್ಯಗಳು ಯಾವ ರೀತಿಯಲ್ಲಿ ಬದಲಾವಣೆಯಾದವು ಎನ್ನುವುದನ್ನು ಆಣೆ, ಪೈಸೆಗಳಿಂದ ಇಂದಿನ ರೂಪಾಯಿವರೆಗೆ ಒಟ್ಟು 185 ವರ್ಷಗಳ ನಾಣ್ಯಗಳನ್ನು ಸಂಗ್ರಹಿಸಿದ್ದೇವೆ.
-ಎಸ್.ನವನೀಥನ್ ರಾಮಾನುಜಂ, ಕನ್ನಡನಾಡು ನಾಣ್ಯ ಸಂಘದ ಸದಸ್ಯ
ನಮ್ಮ ದೇಶದ ನಾಣ್ಯ ಸಂಸ್ಕೃತಿಯನ್ನು ಉಳಿಸಬೇಕು. ಯಾವುದಾದರೂ ಬೆಳ್ಳಿ, ಚಿನ್ನದ ನಾಣ್ಯಗಳು ಸಿಕ್ಕರೆ ಅವುಗಳನ್ನು ನಾವು ಚಿನ್ನದ ಅಂಗಡಿಗೆ ಹೋಗಿ ಮಾರುತ್ತಾರೆ. ಆದರೆ ಅದನ್ನು ಮಾರಬಾರದು. ಕರ್ನಾಟಕ ನಾಣ್ಯ ಸಂಘಕ್ಕೆ ಬಂದು ತೋರಿಸಿದರೆ, ಅದರ ಇತಿಹಾಸವನ್ನು ತಿಳಿಸುತ್ತಾರೆ.
-ಕೀರ್ತಿ, ಆಯೋಜಕ