Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬೇಡರೂ ಅಲ್ಲದ, ಜಂಗಮರೂ ಅಲ್ಲದ...

ಬೇಡರೂ ಅಲ್ಲದ, ಜಂಗಮರೂ ಅಲ್ಲದ ‘ಬೇಡಗಂಪಣರು’

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್17 Sept 2025 10:44 AM IST
share
ಬೇಡರೂ ಅಲ್ಲದ, ಜಂಗಮರೂ ಅಲ್ಲದ ‘ಬೇಡಗಂಪಣರು’

ಮಲೆಮಾದೇಶ್ವರ ಬೆಟ್ಟದ ಮಾದಪ್ಪನ ಪೂಜಾರಿಗಳ ಕುಲೀನರು ಈ ಬೇಡಗಂಪಣರು. ಇವರ ಜನಸಂಖ್ಯೆ ಕೇವಲ ಹದಿನೈದು ಸಾವಿರದಿಂದ ಇಪ್ಪತ್ತು ಸಾವಿರದ ಒಳಗಿದ್ದು, ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದ ಸುತ್ತಲಿನ ಕಾಡಿಗೆ ಆತುಕೊಂಡಂತೆ ಇರುವ ಸುಮಾರು ಮೂವತ್ತು ಹಳ್ಳಿಗಳಲ್ಲಿ ಈ ಸಮುದಾಯದ ಕುಟುಂಬಗಳಿವೆ. ಮೂಲತಃ ಅಪ್ಪಟ ಆದಿವಾಸಿ ಸಮುದಾಯವಾಗಿರುವ ಬೇಡಗಂಪಣರ ಕುಲವೃತ್ತಿ ಬೇಟೆಯೇ ಆಗಿರುವುದರಿಂದ ಇವರ ಹೆಸರಲ್ಲಿ ‘ಬೇಡ’ ಎಂಬ ಪದ ಸೇರಿಕೊಂಡು ಬೇಡಗಂಪಣರಾಗಿದ್ದಾರೆ.

ಸುಮಾರು ಮೂವತ್ತು ನಲವತ್ತು ವರ್ಷಗಳ ಹಿಂದೆ ಮಲೆಮಾದೇಶ್ವರ ಬೆಟ್ಟದಲ್ಲಿ ಘಟನೆಯೊಂದು ನಡೆದಿತ್ತು. ಬೆಂಗಳೂರಿನ ಕೊಳದಮಠದ ಮಠಾಧಿಪತಿಗಳು ಮಲೆಮಾದೇಶ್ವರ ದೇವಸ್ಥಾನದ ಗರ್ಭಗುಡಿಗೆ ಹೋಗಿ ‘‘ಮಾದೇಶ್ವರ ನಮಗಿಂತ ಕಡಿಮೆ ಜಾತಿಯವರು. ಆದ್ದರಿಂದ ಗರ್ಭಗುಡಿಗೆ ಹೋಗಬಹುದು’’ ಎಂದು ಕ್ಯಾತೆ ತೆಗೆದು ದೊಡ್ಡ ಜಗಳವಾಗಿ, ಕಡೆಗೆ ಮಾದಪ್ಪನ ದೇವಸ್ಥಾನದ ಪೂಜಾರಿಗಳಾದ ಬೇಡರು ಮಠಾಧಿಪತಿಯ ಮೇಲೆ ಹಲ್ಲೆ ಮಾಡಿ ಕಳಿಸಿದ್ದರು. ‘ಲಂಕೇಶ್ ಪತ್ರಿಕೆ’ ವರದಿಗಾರನಾಗಿ ವರದಿ ಮಾಡಲು ಅಲ್ಲಿಗೆ ಹೋಗಿ ವಿವರವಾದ ವರದಿ ಬರೆದಿದ್ದೆ. ಅವರು ಕೇವಲ ಬೇಡರಲ್ಲ ಬೇಡಗಂಪಣರು ಎಂಬುದು ಎಷ್ಟೋ ವರ್ಷಗಳ ನಂತರ ತಿಳಿಯಿತು.

ಇದಾದ ನಂತರ ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ದೀಪಾವಳಿ ಹಬ್ಬದ ದಿನ ಪಟಾಕಿಯ ಸದ್ದು ಮತ್ತು ಸಲ್ಫರ್ ವಾಸನೆಯಿಂದ ತಪ್ಪಿಸಿಕೊಳ್ಳಲು ಮಲೆಮಾದೇಶ್ವರ ಬೆಟ್ಟಕ್ಕೆ ಹೋಗಿದ್ದೆ. ಅಂದು ಬೆಟ್ಟದಲ್ಲಿ ಜಾತ್ರೆ ಇದ್ದು, ಅಂದಿನ ಬೆಳಗಿನ ಜಾವದಲ್ಲಿ ಎದ್ದು ಸುತ್ತಾಡಲು ಹೊರಬಂದಾಗ, ಇನ್ನೂ ಮೈನೆರೆಯದ ಪುಟ್ಟಪುಟ್ಟ ಆದಿವಾಸಿ ಹೆಣ್ಣುಮಕ್ಕಳು ಸೀರೆ ಉಟ್ಟು, ಮುಡಿಯಲ್ಲಿ ಕಾಡುಹೂಗಳ ಮುಡಿದು, ಅರಿಶಿನ ಕುಂಕುಮದಲ್ಲಿ ಸಿಂಗಾರ ಮಾಡಿಕೊಂಡು ಮಾದಪ್ಪನ ಅಭಿಷೇಕಕ್ಕೆಂದು ಪುಟ್ಟ ಕೊಡಗಳಲ್ಲಿ ಹಾಲು ತುಂಬಿ, ತಲೆಯ ಮೇಲೆ ಹೊತ್ತುಕೊಂಡು ಕಾಡಿನ ನಡುವೆ ಸಾಲುಸಾಲಾಗಿ ನಡೆದುಬರುತ್ತಿದ್ದ ಅಮೋಘವಾದ ದೃಶ್ಯ ನೋಡಿ ಬೆಕ್ಕಸ ಬೆರಗಾಗಿ ನಿಂದಿದ್ದೆ. ಆ ಸುಂದರ ದೃಶ್ಯ ಇನ್ನೂ ನನ್ನ ಕಣ್ಣಲ್ಲಿದೆ! ಆ ಪುಟ್ಟ ಮಕ್ಕಳು ಬೇಡಗಂಪಣರ ಮಕ್ಕಳೆಂದು ತಿಳಿಯಿತು. ಬೇಡಗಂಪಣರ ಪರಿಚಯ ಆಗಿದ್ದು ಹೀಗೆ.. ಬೇಡಗಂಪಣರು ಕೇವಲ ಮಲೆಮಾದೇಶ್ವರ ಬೆಟ್ಟದಲ್ಲಿರುವುದರಿಂದ ಈ ಸಮುದಾಯದ ಬಗ್ಗೆ ಕರ್ನಾಟಕದಲ್ಲೇ ಹೆಚ್ಚು ಜನಕ್ಕೆ ಗೊತ್ತಿಲ್ಲ.

ಮಲೆಮಾದೇಶ್ವರ ಬೆಟ್ಟದ ಮಾದಪ್ಪನ ಪೂಜಾರಿಗಳ ಕುಲೀನರು ಈ ಬೇಡಗಂಪಣರು. ಇವರ ಜನಸಂಖ್ಯೆ ಕೇವಲ ಹದಿನೈದು ಸಾವಿರದಿಂದ ಇಪ್ಪತ್ತು ಸಾವಿರದ ಒಳಗಿದ್ದು, ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದ ಸುತ್ತಲಿನ ಕಾಡಿಗೆ ಆತುಕೊಂಡಂತೆ ಇರುವ ಸುಮಾರು ಮೂವತ್ತು ಹಳ್ಳಿಗಳಲ್ಲಿ ಈ ಸಮುದಾಯದ ಕುಟುಂಬಗಳಿವೆ. ಮೂಲತಃ ಅಪ್ಪಟ ಆದಿವಾಸಿ ಸಮುದಾಯವಾಗಿರುವ ಬೇಡಗಂಪಣರ ಕುಲವೃತ್ತಿ ಬೇಟೆಯೇ ಆಗಿರುವುದರಿಂದ ಇವರ ಹೆಸರಲ್ಲಿ ‘ಬೇಡ’ ಎಂಬ ಪದ ಸೇರಿಕೊಂಡು ಬೇಡಗಂಪಣರಾಗಿದ್ದಾರೆ. ಮಲೆಯಾದಿ ಸಮುದಾಯದ ಪಾರಂಪರಿಕ ಕತೆಗಳ ಪ್ರಕಾರ, ಇವರು ಶ್ರೀಶೈಲ (ಆಂಧ್ರ ಪ್ರದೇಶ) ಪ್ರದೇಶದಿಂದ ಸುಮಾರು ಸಾವಿರ ವರ್ಷಗಳ ಹಿಂದೆ ಕಾಡುಮೇಡುಗಳಲ್ಲಿ ಅಲೆಯುತ್ತಾ, ಆದಿವಾಸಿ ಅಲೆಮಾರಿಗಳಾಗಿ ಮಾದೇಶ್ವರ ಬೆಟ್ಟದ ಕಾಡಿಗೆ ಬಂದಿರಬಹುದೆಂದು ಅಂದಾಜಿಸಲಾಗಿದೆ. ಇವರ ಹಳೆಯ ಜೀವನಶೈಲಿಯ ಪ್ರಕಾರ ಇವರು hunters. ಇವರು ಹಿಂದೆ ಬೇಟೆಯಾಡಿ ಮಾಂಸವನ್ನು ತಿನ್ನುತ್ತಿದ್ದರು. ಮಾದಪ್ಪನಿಂದ ಲಿಂಗಧಾರಣೆ ಆದನಂತರ ಇವರು ಅಪ್ಪಟ ಸಸ್ಯಾಹಾರಿಗಳಾಗಿದ್ದಾರೆ. ಬಹುಷ ಜಗತ್ತಿನಲ್ಲಿ ಸಸ್ಯಾಹಾರಿ ಟ್ರೈಬ್ ಅಂದರೆ ಇವರೊಬ್ಬರೇ ಅನಿಸುತ್ತದೆ.

ಇವರ ಧಾರ್ಮಿಕ ಸಂಬಂಧ ವಿಚಿತ್ರವಾದುದು. ಮಲೆಮಾದೇಶ್ವರರ ನಿಷ್ಕಪಟ ಆರಾಧನೆ ಈ ಸಮುದಾಯವನ್ನು ಭಕ್ತಿಯಿಂದ ಲಿಂಗಧಾರಣ ದೀಕ್ಷೆ ಪಡೆಯಲು ಕಾರಣವಾಗಿದೆ. ಆದರೆ ವೀರಶೈವರೆಂಬುದನ್ನು ಇವರು ಒಪ್ಪುವುದಿಲ್ಲ. ‘‘ನಾವು ಮೂಲತಃ ಆದಿವಾಸಿಗಳು ನಾವು ಹೇಗೆ ವೀರಶೈವರಾಗಲು ಸಾಧ್ಯ..?’’ ಎನ್ನುತ್ತಾರೆ.

‘‘ಅರಣ್ಯದಲ್ಲಿ ಗೆಡ್ಡೆಗೆಣಸು, ಬೇಟೆ ಸಿಕ್ಕಾಗ ಮಾಂಸ ತಿಂದು ಕಾಡುಮೃಗಗಳಂತೆಯೇ ಇದ್ದ ನಮ್ಮನ್ನು ಮಲೈ ಮಹದೇಶ್ವರರು ಈ ಪ್ರದೇಶಕ್ಕೆ ಬಂದಾಗ ನಮ್ಮ ಆಚಾರ ವಿಚಾರ, ಮೌಢ್ಯತೆಯನ್ನು ನೋಡಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ತನ್ನ ಪೂಜಾಕರ್ತರನ್ನಾಗಿ ನೇಮಿಸಿಕೊಂಡರು. ಅಂದಿನಿಂದ ನಾವು ಸಸ್ಯಾಹಾರಿಗಳಾಗಿ ನಮ್ಮದೇ ಬೇಡಗಂಪಣ ಬುಡಕಟ್ಟು ಸಮುದಾಯದಂತೆ ಬದುಕುತಿದ್ದೇವೆ’’ ಎನ್ನುವ ಬೇಡಗಂಪಣರ ನಾಯಕರಾದ ಪುಟ್ಟಣ್ಣ, ಮಾದೇಶ, ಮುರುಗ ಮುಂತಾದವರು ತಮ್ಮ ಸಮುದಾಯದ ಗೋಳುಗಳ ಕುರಿತು ನೋವಿನಿಂದ ಮಾತನಾಡುತ್ತಾರೆ.

ಇಂದಿಗೂ ಕಾಡಲ್ಲಿ ವಾಸವಾಗಿರುವ ಅರಣ್ಯಕ್ಕೆ ಅಂಟಿಕೊಂಡಂತೆ ಒಂದೆರಡು ಎಕರೆ ಜಮೀನಿರುವ ಬೆರಳೆಣಿಕೆಯ ಜನ ಒಂದಷ್ಟು ಸಣ್ಣ ಪ್ರಮಾಣದ ವ್ಯವಸಾಯ ಮಾಡಿದರೆ ಮಿಕ್ಕವರು ಆಡು, ಕುರಿ, ಎಮ್ಮೆ ಮೇಯಿಸುವುದು, ಬಿದಿರಿನ ಉತ್ಪನ್ನಗಳ ಬಳಕೆ, ದನದ ಸೆಗಣಿಯಿಂದ ವಿಭೂತಿ ಉಂಡೆ, ಮಲೆಉಂಡೆ ಮಾಡಿ ಮಾರುವುದು ಮುಂತಾದ ಜೀವನೋಪಾಯಗಳನ್ನು ಮಾಡುತ್ತಾರೆ. ಈಗೀಗ ಅರಣ್ಯ ಇಲಾಖೆಯ ಆದಿವಾಸಿ ವಿರೋಧಿ ಕಾನೂನುಗಳಿಂದಾಗಿ ಈ ವೃತ್ತಿಗೂ ಸಂಚಕಾರ ಬಂದಿದೆ. ಈ ಕಾರಣಕ್ಕೆ ಕಲ್ಲುಕೋರೆಗಳಲ್ಲಿ ಕೆಲಸ ಮಾಡುತ್ತಾರೆ, ಇತರ ಜಿಲ್ಲೆಗಳಿಗೆ ಹೋಗಿ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ.

ಇವರ ಜನಸಂಖ್ಯೆಯಲ್ಲಿ ಸುಮಾರು ಒಂದೂವರೆ ಸಾವಿರ ಜನ ಮಾತ್ರ ಸರದಿಯಲ್ಲಿ ಮಲೆಮಾದೇಶ್ವರ ಸ್ವಾಮಿಯ ಪೂಜೆಯ ಕೆಲಸ ಮಾಡುತ್ತಾರೆ. ಒಂದು ತಿಂಗಳ ಸರದಿಯಲ್ಲಿ ಮೂವತ್ತರಿಂದ ನಲವತ್ತು ಜನಕ್ಕೆ ಮಾತ್ರ ಪೂಜಿಸುವ ಕೆಲಸ ಲಭ್ಯವಾಗುತ್ತದೆ. ಇವರಿಗೆ ಗ್ರೂಪ್ ನೌಕರನ ಸಂಬಳದೊಂದಿಗೆ ಒಂದಷ್ಟು ತಟ್ಟೆಕಾಸು ಬಿಟ್ಟರೆ ಬೇರೆ ಯಾವುದೇ ಆದಾಯ, ಸೌಲಭ್ಯಗಳಿಲ್ಲ. ಮಲೆಮಾದೇಶ್ವರ ದೇವಸ್ಥಾನಕ್ಕೆ ವಾರ್ಷಿಕ ಕೋಟ್ಯಂತರ ರೂ. ಆದಾಯವಿದ್ದರೂ ಅದರ ಬಿಡಿಗಾಸೂ ಇವರಿಗೆ ದಕ್ಕಲ್ಲ. ಇವರ ಹಾಡಿಗಳಿಗೆ ಸಮರ್ಪಕ ರಸ್ತೆ, ವಿದ್ಯುತ್ ಸೌಲಭ್ಯಗಳೂ ಇಲ್ಲ. ಬೇಡಗಂಪಣರಿಗೆ ಸರಕಾರಿ ನೌಕರಿಯೂ ಇಲ್ಲ. ಇವರ ರಾಜಕೀಯ ಪ್ರಾತಿನಿಧ್ಯ ಕೇವಲ ಮಂಡಲ ಪಂಚಾಯತ್‌ಗೆ ಮುಕ್ತಾಯ!

ಮಲೆ ಮಾದೇಶ್ವರರಿಗೆ ಕಾರಯ್ಯ ಮತ್ತು ಬಿಲ್ಲಯ್ಯ ಎಂಬ ಇಬ್ಬರು ಶಿಷ್ಯರಿದ್ದರಂತೆ. ಮಾದೇಶ್ವರ ಶಿಷ್ಯರಾದ ಇವರು ಅಣ್ಣತಮ್ಮಂದಿರಾಗಿ ಸಮಾನರು. ಮುಂದೆ ಈ ಇಬ್ಬರ ಹೆಸರಲ್ಲಿ ಕಾರಯ್ಯನ ಗುಂಪು ಮತ್ತು ಬಿಲ್ಲಯ್ಯನ ಗುಂಪುಗಳಾಗಿ ವಿಭಾಗವಾಯಿತು. ಕಾರಯ್ಯನ ಗುಂಪಿಗೆ ಸೋಲಿಗರು ಸೇರಿದ್ದು ಅವರು ಎಸ್.ಟಿ. ಪಟ್ಟಿಯಲ್ಲಿದ್ದಾರೆ. ಆದರೆ ಬಿಲ್ಲಯ್ಯನ ಗುಂಪಿನಲ್ಲಿರುವ ಬೇಡಗಂಪಣರು ಯಾವುದೇ ಜಾತಿ ಪಟ್ಟಿಯಲಿಲ್ಲ! ಬೇಡಗಂಪಣ ಮತ್ತು ಸೋಲಿಗರಿಗೆ ಅನೇಕ ಸಾಮ್ಯತೆಗಳಿವೆ. ಈ ಇಬ್ಬರೂ ಅನೇಕ ಹಾಡಿಗಳಲ್ಲಿ ಒಟ್ಟೊಟ್ಟಿಗೆ ಜೀವಿಸುತ್ತಿದ್ದಾರೆ. ಆದರೆ ಸರಕಾರ ಮಾತ್ರ ಈ ಇಬ್ಬರ ನಡುವೆ ತಾರತಮ್ಯ ಮಾಡುತ್ತಿದೆ! ಒಂದು ಹಿಂದುಳಿದ ಆಯೋಗ ಬೇಡಗಂಪಣರನ್ನು ಎಸ್.ಟಿ.ಗೆ ಸೇರಿಸಲು ಶಿಫಾರಸು ಮಾಡಿದರೆ ಮತ್ತೊಂದು ಹಿಂದುಳಿದ ಆಯೋಗ ಇವರನ್ನು ಪ್ರವರ್ಗ 2(ಎ)ಗೆ ಸೇರಿಸಬೇಕೆಂದು ಶಿಫಾರಸು ಮಾಡುತ್ತದೆ! ಸರಕಾರಕ್ಕೆ ಆಯೋಗಗಳ ವರದಿಗಳನ್ನು ನೋಡುವ ಪರಿಪಾಟ ಇಲ್ಲದ್ದರಿಂದ ಈ ಸಮುದಾಯದ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ.

ಕೊಂತಮ್ ಸತೀಶ್ ಎನ್ನುವವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಬೇಡಗಂಪಣರ ಕುರಿತು ಸಂಶೋಧನೆ ಮಾಡಿ ಇವರ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಕುರಿತು ದಾಖಲಿಸಿದ್ದಾರೆ.

ಒಂದು ಅಸಕ್ತಿದಾಯಕ ವಿಷಯವೆಂದರೆ ಬೇಡಗಂಪಣ ಜನಾಂಗದ ಒಂದು ಭಾಗ ಕರ್ನಾಟಕ ದಲ್ಲಿದ್ದರೆ ಇನ್ನೊಂದು ಭಾಗ ತಮಿಳುನಾಡಿನ ಬರಗೂರು ಅರಣ್ಯ ಪ್ರದೇಶದಲ್ಲಿದೆ, ಮಲೆಮಾದೇಶ್ವರ ಅರಣ್ಯದ ಮುಂದುವರಿದ ಇನ್ನೊಂದು ಭಾಗವೇ ಇದು. ಇವರಲ್ಲಿ ಅನೇಕ ಪಂಗಡಗಳಿವೆ ಇವನ್ನು ಪಾಲುಗಳು ಎಂದು ಕರೆದುಕೊಳ್ಳುತ್ತಾರೆ. ಇದರಲ್ಲಿ ದೊಡ್ಡಪಾಲು, ಚಿಕ್ಕಪಾಲು, ಕಾಡುವೀರನ ಗುಂಪಾದರೆ, ಮಿಕ್ಕಂತೆ ಮೊಣ್ಣೆಪಾಲು, ಊಜುಮರೆಪಾಲು, ಕೊಲ್ದಿಸಿದ್ದನ ಪಾಲು, ಮಡಿವಾಳಪಾಲು, ಅಮ್ಮಯ್ಯನಪಾಲು, ಜಂಬುನೇರಳೆಪಾಲು, ಕುರುಬನಪಾಲು, ಗೌಡನಪಾಲು, ಕುರಿಹಿಂಡಿನಪಾಲು ಹೀಗೆ ಸುಮಾರು ಇಪ್ಪತ್ತು ಪಾಲುಗಳಿವೆ. ಆಶ್ಚರ್ಯ ವೆಂದರೆ ಕೆಲವು ಪಾಲುಗಳ ನಡುವೆ ಹೆಣ್ಣನ್ನು ಕೊಟ್ಟುತೆಗೆಯುವುದು ನಿಷಿದ್ಧ.

ಹೊಯ್ಸಳ ಬಲ್ಲಾಳದೇವರ ತಾಮ್ರಶಾಸನ ವೊಂದರಲ್ಲಿ ಬೇಡರ ಕಣ್ಣಪ್ಪ ಬೇಡಗಂಪಣರ ಕುಲಕ್ಕೆ ಸೇರಿದವರೆಂಬ ದಾಖಲೆಯಿದೆ.

ಇಷ್ಟೆಲ್ಲ ಆದಿವಾಸಿ ಹಿನ್ನೆಲೆಯ ಬೇಡಗಂಪಣರನ್ನು ಹಿಂದುಳಿದ ವರ್ಗಗಳ ಪ್ರವರ್ಗ 3(ಬಿ)ಯಲ್ಲಿ ವೀರಶೈವ ಲಿಂಗಾಯತರೊಂದಿಗೆ ಇರಿಸಲಾಗಿದೆ! ಈ ಸಮುದಾಯದವರು ತಮ್ಮನ್ನು ವೀರಶೈವರಿಂದ ಬೇರ್ಪಡಿಸಿ ಆದಿವಾಸಿ ಸಮುದಾಯ ಎಂದೇ ಪರಿಗಣಿಸಬೇಕೆಂದು ಆಯೋಗಕ್ಕೆ ಮನವಿ ಮಾಡಿದ್ದಾರೆ. ಈಚೆಗೆ ಮೂರುನಾಲ್ಕು ತಿಂಗಳ ಹಿಂದೆ ಸಿದ್ದರಾಮಯ್ಯನವರ ಸರಕಾರದ ವಿಶೇಷ ಕ್ಯಾಬಿನೆಟ್ ಸಭೆ ಮಲೆಮಹದೇಶ್ವರ ಬೆಟ್ಟದಲ್ಲೇ ನಡೆಯಿತು. ಸಭೆಗೆ ಬಂದ ಮಂತ್ರಿ ಶಾಸಕರನ್ನು ಬೇಡಗಂಪಣರು ಅತ್ಯಂತ ಪ್ರೀತಿಯಿಂದ ನೋಡಿಕೊಂಡು, ಮುಖ್ಯಮಂತ್ರಿಯವರನ್ನು ಮಾದಪ್ಪನ ಗುಡಿಗೆ ಆಹ್ವಾನಿಸಿ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ ಇವರ ಮನವಿ ಮುಖ್ಯಮಂತ್ರಿಗಳಿಗೆ ತಲುಪಿತೋ ಇಲ್ಲವೋ ಗೊತ್ತಿಲ್ಲ!

ಬೇರೆಲ್ಲಾ ದೊಡ್ಡ ದೊಡ್ಡ ಪ್ರಭಾವಿ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರಕಾರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ. ಈ ಸಣ್ಣ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಕೇವಲ ನಾಲ್ಕೈದು ಲಕ್ಷ ರೂ. ಸಾಕು. ಇವರ ಕುಲಶಾಸ್ತ್ರೀಯ ಅಧ್ಯಯನವಾದರೆ ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ದಾಖಲೆಯಾಗುತ್ತದೆ. ಆದರೆ ಸರಕಾರ ಈ ತಬ್ಬಲಿ ಸಮುದಾಯಕ್ಕೆ ಸಣ್ಣ ಕೆಲಸ ಮಾಡಲೂ ಮೀನಮೇಷ ಎಣಿಸುತ್ತಿದೆ.

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X