‘ಮಳೆ’ ಬೆಂಗಳೂರಿನಲ್ಲಿ ಬೀನ್ಸ್, ಅವರೆಕಾಯಿ ಬೆಲೆ ಹೆಚ್ಚಳ

ಬೆಂಗಳೂರು: ಮೂರು-ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣಕ್ಕಾಗಿ ಬೀನ್ಸ್ ಮತ್ತು ಅವರೆಕಾಯಿ ಬೆಲೆ ತೀವ್ರ ಹೆಚ್ಚಳವಾಗಿದ್ದು, ಕೆಲವು ತರಕಾರಿಗಳು ಬೆಲೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿವೆ.
ಬೆಂಗಳೂರು ನಗರಕ್ಕೆ ತರಕಾರಿ ಪೂರೈಕೆ ಕಡೆಮೆಯಾಗುತ್ತಿದೆ. ಹಾಗೂ ಕಡಿಮೆ ಪ್ರಮಾಣದ ತರಕಾರಿ ಕೂಡ ಅಂಗಡಿಗಳಿಗೆ ತಡವಾಗಿ ಪೂರೈಕೆಯಾಗುತ್ತಿರುವ ಕಾರಣಕ್ಕೆ ಕೆಲವು ತರಕಾರಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ತರಕಾರಿ ವ್ಯಾಪಾರಿಯೊಬ್ಬರ ಅಭಿಪ್ರಾಯವಾಗಿದೆ.
ಈ ಬಾರಿ ಅವರೆಕಾಯಿ ಬೆಳೆಯುವ ಪ್ರದೇಶದಲ್ಲಿ ಸರಿಯಾಗಿ ಮಳೆಯಾಗದ ಇಳುವರಿ ಕಡಿಮೆಯಾಗಿತ್ತು. ಆದ್ದರಿಂದ ಕೆಲವು ತಿಂಗಳುಗಳಿಂದ ಅವರೆಕಾಯಿ ಬೆಲೆ ಕೆಜಿಗೆ ಅಂದಾಜು 80ರಿಂದ 85ರ ವರೆಗೆ ಇತ್ತು. ಈಗ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ 88 ರೂ. ಇದ್ದರೆ, ಕೆಲವು ಅಂಗಡಿಗಳಲ್ಲಿ 100 ರೂ.ವರೆಗೆ ಇದೆ. ಇನ್ನೂ ಬೀನ್ಸ್ ಕೆ.ಜಿಗೆ 98ರಿಂದ 100 ರೂ.ವರೆಗೆಯಿರುವುದರಿಂದ ಗ್ರಾಹಕರು ಬೀನ್ಸ್ ಮತ್ತು ಅವರೆಕಾಯಿಯನ್ನು ಬಳಸದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿನ ತರಕಾರಿ ಬೆಲೆ (ಕೆಜಿಗಳಲ್ಲಿ): ಸೌತೆಕಾಯಿ-45 ರೂ., ಕ್ಯಾರೆಟ್-40.ರೂ., ಬೆಂಡೆಕಾಯಿ-48 ರೂ., ಬದನೆಕಾಯಿ-40 ರೂ., ಈರುಳ್ಳಿ 20 ರೂ., ಟೊಮೆಟೊ-18.ರೂ., ತೊಂಡೆಕಾಯಿ- 48 ರೂ., ಆಲೂಗಡ್ಡೆ-30 ರೂ., ಹಸಿ ಮೆಣಸಿನಕಾಯಿ-58 ರೂ., ಹಸಿ ಶುಂಠಿ-100 ರೂ., ಗೆಡ್ಡೆ ಕೋಸು-58 ರೂ., ಬೀಟ್‌ರೂಟ್-44 ರೂ, ಕ್ಯಾಪ್ಸಿಕಂ 58 ರೂ., ಚವಳಿಕಾಯಿ-80 ರೂ., ಚಿಕ್ಕ ಈರುಳ್ಳಿ-80 ರೂ., ಇದು ನಗರದ ಪ್ರಮುಖ ಮಾರುಕಟ್ಟೆ ಮತ್ತು ತರಕಾರಿ ಅಂಗಡಿಗಳಲ್ಲಿ ಇರುವ ಬೆಲೆಯಾಗಿದೆ.
ಟೊಮೆಟೊ ಬೆಲೆ ಕುಸಿತ
ರಾಜ್ಯದಲ್ಲಿ ಈ ಬಾರಿ ಟೊಮೆಟೊ ಇಳುವರಿ ಹೆಚ್ಚಾಗಿರುವುದರಿಂದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಬೇಸಿಗೆಯಿಂದಿಡಿದು ಮಳೆಗಾಲ ಪ್ರಾರಂಭವಾದರೂ ಕೂಡ ಟೊಮೆಟೊ ಬೆಲೆ ಕೆಜಿಗೆ 30 ರೂ. ದಾಟಿಲ್ಲ. ಮಳೆಗಾಲ ಪ್ರಾರಂಭವಾದರೂ ಟೊಮೆಟೊ ಕೆಜಿಗೆ 12ರಿಂದ 18 ರೂ. ಮಾತ್ರವಿದೆ. ಮಳೆ ಪ್ರಮಾಣ ಹೆಚ್ಚಾದರೆ ಟೊಮೆಟೊ ಬೆಲೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ ಎಂದು ತರಕಾರಿ ವ್ಯಾಪಾರಿಗಳು ಹೇಳಿದ್ದಾರೆ.
ವರ್ಷದ ಎಲ್ಲ ಕಾಲಗಳಲ್ಲೂ ಅವರೆ ಬೆಳೆಯಲಾಗುತ್ತಿದೆ. ಅವರೆಕಾಯಿಯಿಂದ ಉಪಹಾರ, ಅಡುಗೆಯ ರುಚಿಗಾಗಿ ಯಥೇಚ್ಚವಾಗಿ ಬಳಸಲಾಗುತ್ತಿದೆ. ಅವರೆಕಾಳು ಸಾಂಬಾರ್, ಅವರೆಕಾಳು ಬಸ್ಸಾರು, ಅವರೆಕಾಳು ಉಪ್ಪಿಟ್ಟು, ರೈಸ್‌ಬಾತ್ ಹಾಗೂ ಮಾಂಸಾಹಾರದಲ್ಲೂ ಅವರೆಕಾಯಿಯನ್ನು ಬಳಸುವುದರಿಂದ ಅವರೆಗೆ ಯಾವಾಗಲೂ ಬೇಡಿಕೆಯಿರುತ್ತದೆ.
-ಮಂಜುನಾಥ, ತರಕಾರಿ ವ್ಯಾಪಾರಿ