ಪ್ರಜಾಪ್ರಭುತ್ವದಲ್ಲಿ ಜಾಗೃತಿ ಎಂಬುದು ನಿರಂತರ ಜವಾಬ್ದಾರಿ
ಬುದ್ಧನ ಕಾಲದಿಂದಲೂ ಗಣಗಳ ರೂಪದಲ್ಲಿ ಅಲ್ಲಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರಭುತ್ವದ ಸಂವಾದದ ಮಾದರಿಗಳು, ಕ್ರಮೇಣ ಒಂದು ದೊಡ್ಡ ವ್ಯವಸ್ಥೆಯಾಗಿ ವ್ಯಾಪಿಸಿದವು.
ಜನ ಸಾಮಾನ್ಯರನ್ನು ಕೇಳಿಸಿಕೊಳ್ಳುವುದು, ಅವರೊಂದಿಗೆ ಸಂವಾದ ಮಾಡುವುದು ಒಂದು ವಿಧವಾದರೆ, ಕ್ರಮೇಣ ರಾಜಕೀಯ ವ್ಯವಸ್ಥೆಯಲ್ಲಿ ಜನರ ಪ್ರಾತಿನಿಧ್ಯ, ಕಾನೂನು ರೂಪಿಸುವಲ್ಲಿ ಅವರ ಪಾತ್ರ ಮತ್ತು ಇನ್ನಿತರ ವಿಧಾನಗಳಲ್ಲಿ ಅವರ ಭಾಗವಹಿಸುವಿಕೆಯ ಕುರಿತು ಜಾರಿಗೊಂಡ ಪ್ರಾಯೋಗಿಕ ಅಂಶಗಳೂ ಇಲ್ಲಿ ಮುಖ್ಯ ಎನಿಸಿವೆ.
‘ಸಾರ್ವತ್ರಿಕ ಮತದಾನದ ಹಕ್ಕು’ ನಮ್ಮ ಸ್ವಾತಂತ್ರ್ಯ ಹೋರಾಟದ ಮುಖ್ಯ ತತ್ವಗಳಲ್ಲಿ ಒಂದಾಗಿತ್ತು. 1928ರಲ್ಲಿ ಮೋತಿಲಾಲ್ ನೆಹರೂ ವರದಿಯನ್ವಯ ಅದು ರೂಪಿತವಾಗಿತ್ತು. 1929ರಲ್ಲಿ ‘ಪೂರ್ಣ ಸ್ವರಾಜ್’ ಘೋಷಣೆಯಾದಾಗಲೂ ಅದನ್ನೇ ಪುನರುಚ್ಚರಿಸಲಾಗಿತ್ತು. ಸಂವಿಧಾನವು ವಯಸ್ಕರ ಮತದಾನ ತತ್ವವನ್ನು 326ನೇ ವಿಧಿಯಲ್ಲಿ ಸೇರಿಸಿತು. 21 ವರ್ಷ ದಾಟಿದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮತದಾರನಾಗಿ ನೋಂದಾಯಿಸಿಕೊಳ್ಳುವ ಹಕ್ಕು ಇದೆ ಎನ್ನುವುದನ್ನು ಅದು ಪ್ರತಿಪಾದಿಸಿತು. ಭಾರತದ ಪೌರತ್ವವು ಜನನ ಹಾಗೂ ವಾಸಸ್ಥಾನದ ಆಧಾರದ ಮೇಲೆ (ವಂಶದ ಹಿನ್ನೆಲೆ ಅಥವಾ ಜನಾಂಗದ ಆಧಾರದ ಮೇಲೆ ಅಲ್ಲ) ನಿರ್ಧಾರವಾಗುತ್ತದೆ ಎಂದು ಸಂವಿಧಾನದ 5ನೇ ವಿಧಿ ಒತ್ತಿಹೇಳಿದೆ. ಪೌರತ್ವ ಮುಂದುವರಿಸಿಕೊಂಡು ಹೋಗುವ ಹಾಗೂ ಅದನ್ನು ರಕ್ಷಿಸುವ ಕಾರ್ಯವನ್ನು 10ನೇ ವಿಧಿ ಮಾಡುತ್ತದೆ. ಅದರಂತೆ, ಭಾರತದ ಪ್ರತಿ ನಾಗರಿಕ ಅಥವಾ ಹಾಗೆ ಪರಿಗಣಿತವಾಗಿರುವ ವ್ಯಕ್ತಿ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ
ಮೊದಲ 75 ವರ್ಷಗಳಲ್ಲಿ ಭಾರತೀಯ ಜನತಂತ್ರ ವ್ಯವಸ್ಥೆಯು ಸಾಂವಿಧಾನಿಕ ಭರವಸೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ಎಲ್ಲರನ್ನೂ ಒಳಗೊಳ್ಳುವ ತತ್ವ’ವನ್ನು ಅನುಸರಿಸಿತು. ಸಂವಿಧಾನದ ಆಶಯ ಈಡೇರಿಸುವುದೇ ಅದರ ಉದ್ದೇಶವಾಗಿತ್ತು. ‘ಮ್ಯಾಪಿಂಗ್ ಆಫ್ ಸಿಟಿಝನ್ಸ್ ಆಫ್ ಇಂಡಿಯಾ’ ಪುಸ್ತಕದಲ್ಲಿ ಅನುಪಮಾ ರಾಯ್ ಅವರು ಎಲ್ಲರನ್ನೂ ಒಳಗೊಳ್ಳುವಿಕೆಯ ತರ್ಕ ಮತ್ತು ಮಹತ್ವದ ಕುರಿತು ಚರ್ಚಿಸಿದ್ದಾರೆ.
ಒಂದು ಭೌಗೋಳಿಕ ಪರಿಸರದಲ್ಲಿರುವ ಎಲ್ಲರನ್ನೂ ಒಳಗೊಳ್ಳುವುದು ವಿಶ್ವಮಾನವ ತತ್ವದೆಡೆಗಿನ ಒಂದು ಹೆಜ್ಜೆಯಾಗಿದ್ದು, ಎಲ್ಲರಿಗೂ ಪೌರತ್ವ ವಿಸ್ತರಿಸುವ ಮೂಲಕ ಭಿನ್ನತೆಗಳನ್ನು ಗೌರವಿಸಿ ಪ್ರಜಾಪ್ರಭುತ್ವದ ಸತ್ವವನ್ನು ಗಟ್ಟಿಗೊಳಿಸಬೇಕೆಂದು ಅವರು ಹೇಳುತ್ತಾರೆ. ಜತೆಯಲ್ಲೇ, ಅದಕ್ಕೆ ವಿರುದ್ಧವಾದ ರೀತಿಯಲ್ಲಿ ಪೌರತ್ವವನ್ನು ನಿರಾಕರಿಸುವುದು, ಪೌರತ್ವದ ಬಗ್ಗೆ ಶಂಕೆ ವ್ಯಕ್ತಪಡಿಸುವುದು ಮತ್ತು ಪೌರತ್ವವನ್ನು, ಪ್ರತ್ಯೇಕಗೊಳಿಸಿ ನೋಡುವ ರೀತಿಯೂ ಕೂಡಾ ಜಾರಿಯಲ್ಲಿದೆ. ಆದರೆ ಹೀಗೆ ಇದ್ದ ಮಾತ್ರಕ್ಕೆ, ಈ ತರ್ಕವನ್ನು ಮತದಾನದ ಹಕ್ಕನ್ನು ಮೊಟಕುಗೊಳಿಸುವ ಮಟ್ಟಕ್ಕೆ ವಿಸ್ತರಿಸಲಾಗದು. ಆದರೆ ಗಣತಂತ್ರದ ಎಚ್ಚರಿಕೆಯ ದೃಷ್ಟಿಯನ್ನು ಇಲ್ಲಿನ ರೀತಿಯನ್ನು ಗಮನಿಸಬೇಕೆಂದು ಅವರು ಹೇಳುತ್ತಾರೆ.
ಇನ್ನು ಮಾನವಶಾಸ್ತ್ರಜ್ಞೆ ಮುಕುಲಿಕಾ ಬ್ಯಾನರ್ಜಿ ಅವರ ‘ವೈ ಇಂಡಿಯಾ ವೋಟ್ಸ್?’ ( ಭಾರತ ಏಕೆ ಮತದಾನ ಮಾಡುತ್ತದೆ) ಎಂಬ ಕೃತಿಯಲ್ಲಿ ಒಂದು ವಾದವಿದೆ: ಮತದಾನದ ಜಾತ್ಯತೀತ ರಿವಾಜು ಈಗ ಭಾರತದಲ್ಲಿ ಪರಮಪವಿತ್ರ ಸ್ಥಾನಮಾನವನ್ನು ಪಡೆದುಕೊಂಡಿದೆ. ಅದೀಗ ಸ್ವೀಕೃತ ಅಭಿಪ್ರಾಯವಾಗಿ ಬದಲಾಗಿದ್ದು ಎಲ್ಲರಿಗೂ ಸಮಾನ ಮತದಾನದ ಹಕ್ಕು ಲಭಿಸಿದೆ ಎಂದು ಅವರು ಹೇಳುತ್ತಾರೆ
ಎಲ್ಲರನ್ನೂ ಒಳಗೊಳ್ಳುವ ತತ್ವವು ಇಲ್ಲಿ ಆಕಸ್ಮಿಕವಾಗಿ ಘಟಿಸಿಲ್ಲ. ಬದಲಿಗೆ ಕಾನೂನು, ನಿಯಮ ಹಾಗೂ ಸಾಂಸ್ಥಿಕ ನಡಾವಳಿಗಳಲ್ಲಿ ಬೆರೆತುಹೋಗಿತ್ತು. ಯಾವ ಮತದಾರನನ್ನೂ ಮತದಾನದಿಂದ ಹೊರಗೆ ಇಡಬಾರದು ಎನ್ನುವುದೇ ಇವೆಲ್ಲವುಗಳ ಗುರಿಯಾಗಿತ್ತು. ಅಮೆರಿಕದಲ್ಲಿ ಹಾಗೂ ಇತರ ಕೆಲವು ದೇಶಗಳಲ್ಲಿ ಅರ್ಹ ವ್ಯಕ್ತಿಯು ಮತದಾರನಾಗಿ ನೋಂದಣಿ ಮಾಡಿಸಲು ಅರ್ಜಿ ಸಲ್ಲಿಸಬೇಕು. ಇದರಿಂದಾಗಿ, ಅಮೆರಿಕದಲ್ಲಿ ನೋಂದಾಯಿತ ಮತದಾರರು ಶೇ. 74ರಷ್ಟು ಇದ್ದರೆ, ಭಾರತದಲ್ಲಿ ಶೇ. 96ರಷ್ಟು ನಾಗರಿಕರಿಗೆ ಮತದಾನದ ಹಕ್ಕು ಇದೆ. ಮತದಾರರ ಪಟ್ಟಿಗೆ ಜನರು ತಾವೇ ಹೆಸರು ನೋಂದಾಯಿಸುವ ಅವಕಾಶ ನಮ್ಮಲ್ಲಿ ಇದೆಯಾದರೂ, ತಾತ್ವಿಕವಾಗಿ ಅದರ ಹೊಣೆಗಾರಿಕೆ ಚುನಾವಣಾ ಅಧಿಕಾರಿಗಳ ಮೇಲಿದೆ (ಈಗ ಬೂತ್ ಮಟ್ಟದ ಅಧಿಕಾರಿ-ಬಿಎಲ್‌ಒ ಹಾಗೂ ಚುನಾವಣಾ ನೋಂದಣಾಧಿಕಾರಿ-ಇಆರ್‌ಒ). ಪ್ರತಿ ವಯಸ್ಕ ನಿವಾಸಿಯನ್ನು ಸಂಪರ್ಕಿಸಿ, ಅರ್ಹರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ಮಾಡುವುದು ಅವರ ಹೊಣೆ ಆಗಿದೆ.
ಎರಡನೆಯದಾಗಿ, ಪೌರತ್ವ ಕುರಿತು ಒಂದು ಸಾಮಾನ್ಯ ಭಾವನೆ ಇದೆ? ವಯಸ್ಕನಂತೆ ಕಾಣುವ ಯಾವುದೇ ನಿವಾಸಿಗೂ ದೇಶದ ಪೌರತ್ವ ಸಿಗುತ್ತದೆ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರುತ್ತದೆ. ಯಾವುದೋ ದೂರು ಅಥವಾ ಶಂಕೆಯ ಕಾರಣದಿಂದ ಅದು ತಪ್ಪಬಹುದು ಅಷ್ಟೇ. ಒಂದು ಸಲ ಮತದಾರರ ಪಟ್ಟಿಗೆ ಹೆಸರು ಸೇರಿದರೆ, ಆಮೇಲೆ ಸಮರ್ಪಕ ಪ್ರಕ್ರಿಯೆ ಇಲ್ಲದೆ ಅದನ್ನು ತೆಗೆಯುವಂತಿಲ್ಲ. ಹೆಸರಾಂತ ಇತಿಹಾಸಕಾರ ಆರ್ನಿಟ್ ಶಾನಿ ಅವರ ಜನಪ್ರಿಯ ಕೃತಿ ‘ಹೌ ಇಂಡಿಯಾ ಬಿಕೇಮ್ ಡೆಮಾಕ್ರೆಟಿಕ್’ ಕೂಡ ಮತದಾರರ ಸಾರ್ವತ್ರೀಕರಣಕ್ಕೆ ಭಾರತೀಯ ಚುನಾವಣಾ ಆಯೋಗ ಏನೆಲ್ಲಾ ಅಸಾಮಾನ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಅಂಚಿನಲ್ಲಿ ಇರುವ ಜನರನ್ನು ಮತದಾರರ ಪಟ್ಟಿಗೆ ಸೇರಿಸಲು ಆಯೋಗ ಅನೇಕ ವರ್ಷಗಳಿಂದ ದಾರಿಗಳನ್ನು ಹುಡುಕುತ್ತಾ ಬಂದಿದೆ. ಅಲೆಮಾರಿ ಸಮುದಾಯಗಳು, ವಸತಿರಹಿತರು, ಲೈಂಗಿಕ ಕಾರ್ಯಕರ್ತರು, ಲಿಂಗತ್ವ ಅಲ್ಪಸಂಖ್ಯಾತರು, ಅನಾಥರು, ದಾಖಲೆಗಳಿಲ್ಲದ ನಾಗರಿಕರು ಹಾಗೂ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ಒದಗಿಸುವ ಪ್ರಯತ್ನಗಳನ್ನು ನಡೆಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿ ‘ನನ್ನ ಮತ ನನ್ನ ಹಕ್ಕು’ ಎಂಬ ವಾಕ್ಯವು ಮತದಾನದ ಹಕ್ಕಿನ ಜೊತೆಗೆ ಜನರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸ್ತಿತ್ವವನ್ನೂ ಸಹ ನಿರ್ಧರಿಸುತ್ತದೆ. ಇನ್ನು ಸ್ವಾತಂತ್ರ್ಯದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಅಂಶಗಳನ್ನು ಒಳಗೊಂಡ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿಯ ಆರೋಗ್ಯಕರ ಅಂಶಗಳು ಇರಬೇಕು, ಅದರ ಇರುವಿಕೆಯ ಪ್ರಾಮುಖ್ಯತೆಯನ್ನು ಜನ ಜನಿತ ಮಾಡಲು ನಮ್ಮ ಸರಕಾರವು ಕಳೆದ 2 ವರ್ಷಗಳಿಂದಲೂ ಗಂಭೀರವಾದ ಪ್ರಯತ್ನ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಚಟುವಟಿಕೆಯನ್ನು ಕೈಗೊಂಡಿದೆ.
ಭಾವೈಕ್ಯಕ್ಕೆ ವಿರುದ್ಧವಾದ ಸಂಗತಿಗಳು ಹಲವು ಕಾರಣಕ್ಕೆ ಹೆಚ್ಚಾಗಿರುವ, ಧರ್ಮಾಂಧತೆ, ಮೌಢ್ಯ ಅಧಿಕವಾಗಿರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನೈಜ ಉದ್ದೇಶಗಳನ್ನು ಜಾರಿಗೊಳಿಸಲು ಶ್ರಮಿಸುವುದು ಮತ್ತು ಪ್ರಜಾಪ್ರಭುತ್ವ ಆರೋಗ್ಯಕರ ವಾತಾವರಣವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಒಂದು ವೇಳೆ ನಮ್ಮ ಕರ್ತವ್ಯವನ್ನು ನಾವು ಮರೆತು ಕಷ್ಟಪಟ್ಟು ಪಡೆದ ಪ್ರಜಾಪ್ರಭುತ್ವವನ್ನು ಕಳೆದುಕೊಂಡರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ನಾವು ನಾಯಿ ನರಿಗಳಂತೆ ಬದುಕಬೇಕಾಗುತ್ತದೆ.
ಹೀಗಾಗಿ ಈ ಬಾರಿಯ ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ನೆಪದಲ್ಲಿ ನಾವೆಲ್ಲರೂ ನಮ್ಮ ಹಕ್ಕಿನ ಪ್ರಜ್ಞೆಯ ಜೊತೆ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳನ್ನು ಕಾಪಾಡುವ ಪ್ರತಿಜ್ಞೆ ಕೈಗೊಳ್ಳೋಣ ಮತ್ತು ‘ನನ್ನ ಮತ ನನ್ನ ಹಕ್ಕು ’ ಕಾರ್ಯಕ್ರಮದಲ್ಲಿ ಭಾಗವಹಿಸೋಣ.