ಆರು ವರ್ಷ ಕಳೆದರೂ ಆಗದ ನೇಮಕಾತಿ; ಅತಂತ್ರದಲ್ಲಿ ಡಿಪಿಎಸ್‌ಇ ಶಿಕ್ಷಕರು
ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಆಗ್ರಹ

ಕಲಬುರಗಿ: ರಾಜ್ಯದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಎಲ್‌ಕೆಜಿ, ಯುಕೆಜಿಯಿಂದ 2ನೇ ತರಗತಿಯ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಶಿಕ್ಷಣದ ಜೊತೆಗೆ ಮಕ್ಕಳಿಗೆ ಶೈಕ್ಷಣಿಕ ಬೌದ್ಧಿಕ ಮಟ್ಟ ಹೆಚ್ಚಿಸುವ ಸಲುವಾಗಿ ಡಿಪಿಎಸ್‌ಇ ಕೋರ್ಸ್ ಪ್ರಾರಂಭಿಸಿತು. ಈ ತರಬೇತಿ ಪಡೆದ ನೂರಾರು ಶಿಕ್ಷಕರು ನೇಮಕಾತಿ ಇಲ್ಲದೇ ಅತಂತ್ರಕ್ಕೆ ಒಳಗಾಗಿದ್ದಾರೆ.
283 ಕರ್ನಾಟಕ ಪಬ್ಲಿಕ್ ಶಾಲೆ ಮತ್ತು 1,000ಕ್ಕೂ ಹೆಚ್ಚು ಪ್ರಾಥಮಿಕ ಹಂತದ ಸರಕಾರಿ ಇಂಗ್ಲಿಷ್ ಶಾಲೆಗಳ ಮಕ್ಕಳಿಗೆ ಮಾನಸಿಕ, ಬೌದ್ಧಿಕ, ಸಾಮಾಜಿಕವಾಗಿ ಗುಣಾತ್ಮಕವಾಗಿಸುವುದು, ಸೃಜನಶೀಲ ಚಟುವಟಿಕೆಗಳ ಕ್ರಿಯಾತ್ಮಕ ಮತ್ತು ಭಾವನಾತ್ಮಕ ಬೆಳವಣಿಗೆಯ ಜೊತೆಗೆ ಸರ್ವತೊಮುಖ ಅಭಿವೃದ್ಧಿ ಹೊಂದಲು ಕಲಬುರಗಿ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಡಿಪಿಎಸ್‌ಇ ತರಬೇತಿ ಪ್ರಾರಂಭಿಸಿದೆ. ತರಬೇತಿ ಪಡೆದ ನೂರಾರು ಶಿಕ್ಷಕರು ಸರಕಾರದ ನೇಮಕಾತಿ ನಿರೀಕ್ಷೆಯಲ್ಲಿ 6 ವರ್ಷಗಳು ಕಳೆದರೂ ಈವರೆಗೆ ನೇಮಿಸಿಕೊಳ್ಳದೆ ನಿರಾಶೆ ಮೂಡಿದೆ ಎಂದು ತರಬೇತಿ ಪಡೆದ ಮತ್ತು ನೇಮಕಾತಿ ನಿರೀಕ್ಷೆಯಲ್ಲಿದ ಡಿ.ಪಿ.ಎಸ್.ಇ ಶಿಕ್ಷಕ ವಿಖಾರ್ ತನ್ನ ಅಳಲು ತೊಡಿಕೊಂಡಿದ್ದಾರೆ.
ನೇಮಕಾತಿಗಾಗಿ 4 ವರ್ಷಗಳಿಂದ ಸರಕಾರದೊಂದಿಗೆ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯದರ್ಶಿ ಮತ್ತು ಸರಕಾರದ ಕಾರ್ಯದರ್ಶಿ ಹಂತದಲ್ಲಿ ನೇಮಕಾತಿ ಆದೇಶ ಹೊರಡಿಸುವುದು ಬಾಕಿ ಇದೆ.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಂತ ಕೆಳ ಸ್ಥಾನವನ್ನು ಕಾಯ್ದುಕೊಂಡಿರುತ್ತದೆ. ಇದನ್ನು ತಪ್ಪಿಸಲು ರಾಜ್ಯ ಸರಕಾರ ಪ್ರಾಥಮಿಕ ಹಂತದ ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕವಾಗಿ ಸುಧಾರಣೆ ತರದೆ ಫಲಿತಾಂಶದಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ’ ಎಂದು ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ತಜ್ಞರ ವಿಶ್ಲೇಷಣೆಯಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ಸರಕಾರಿ ಎಲ್‌ಕೆಜಿ, ಯುಕೆಜಿ ಹಾಗೂ 2ನೇ ತರಗತಿವರೆಗೆ ಆಂಗ್ಲ ಮಾಧ್ಯಮ ತರಬೇತಿ ನೀಡುವ ಡಿಪಿಎಸ್‌ಐ ತರಬೇತಿ ಪಡೆದ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಎಂದು 6 ವರ್ಷಗಳಿಂದ ನೇಮಕಾತಿ ನಿರೀಕ್ಷೆಯಲ್ಲಿರುವ ಶಿಕ್ಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮಕ್ಕಳ ಸಮಗ್ರ ಅಭಿವೃದ್ಧಿ ಬೋಧನೆಯ ನಿರೀಕ್ಷೆಯಲ್ಲಿ ರಾಜ್ಯ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಕ್ರಮ ಆಗಿಲ್ಲ. ನೇಮಕಾತಿ ನಿರೀಕ್ಷೆಯಲ್ಲಿರುವ ಶಿಕ್ಷಕರ ವಯೋಮಿತಿ ಮೀರುವ ಮುನ್ನ ಸರಕಾರ ಕೇಡರ್ ಮತ್ತು (ಸಿ ಮತ್ತು ಆರ್) ನಿಯಮಗಳನ್ನು ರೂಪಿಸಿ ನೇಮಕಾತಿ ನಡೆಸಬೇಕು.
-ವಿಖಾರ್ ಅಹ್ಮದ್, ನೇಮಕಾತಿ ನಿರೀಕ್ಷೆಯಲ್ಲಿರುವ ಡಿಪಿಎಸ್‌ಇ ಶಿಕ್ಷಕ