ಮನುಷ್ಯಕುಲಕ್ಕೆ ಮುಳುವಾದ ಅದೃಶ್ಯ ಬೆದರಿಕೆ

ಜನ್ಮ ದಿನಾಚರಣೆ, ಮದುವೆ, ವಾರ್ಷಿಕೋತ್ಸವ ಹೀಗೆ ಯಾವುದೇ ಸಂಭ್ರಮಾಚರಣೆಯೇ ಇರಲಿ, ಆ ಸ್ಥಳಗಳಲ್ಲಿ ಅಬ್ಬರದ ಸಂಗೀತವನ್ನು ಹಾಕಿ ಮನಸೋ ಇಚ್ಛೆ ನರ್ತಿಸುವುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಜೊತೆಗೆ ಮದ್ಯಗೋಷ್ಠಿ ಇದ್ದರಂತೂ ಮುಗಿಯಿತು. ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವ ಅರಿವೂ ಅಲ್ಲಿ ನೆರೆದವರಲ್ಲಿ ಇರುವುದಿಲ್ಲ. ಮಕ್ಕಳು, ವಯಸ್ಸಾದವರ ಮೇಲೆ ಈ ಅಬ್ಬರದ ಸಂಗೀತ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ ಎಂಬ ಅರಿವೂ ಅವರಿಗಿರುವುದಿಲ್ಲ. ಅಬ್ಬರದ ಸಂಗೀತ ಮನಸ್ಸಿಗೆ ಉಲ್ಲಾಸವನ್ನು ಮಾತ್ರ ನೀಡುತ್ತದೆ ಎಂದುಕೊಂಡಿರುತ್ತಾರೆ ಸಂಭ್ರಮದಲ್ಲಿ ಮುಳುಗಿರುವವರು.
ಸಂತೋಷದಲ್ಲಿ ಮೈಮರೆತು ಖುಷಿಯಿಂದ ನರ್ತಿಸುವಾಗ ಕುಸಿದು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಅದರಲ್ಲೂ ಯುವಜನರೇ ಇಂಥ ಅವಘಡಗಳಿಗೆ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ. ಇಂಥ ಆಕಸ್ಮಿಕ ಸಾವುಗಳಿಗೆ ಹೃದಯ ಸ್ತಂಭನ ಕಾರಣ ಎಂದುಕೊಂಡು ಎಲ್ಲರೂ ಸುಮ್ಮನಾಗುತ್ತಾರೆ. ಆದರೆ ಅದರ ಕಾರಣವನ್ನು ಕೆದಕಿ ನೋಡಿದಾಗ ಹೃದಯ ಸ್ತಂಭನದ ಮೂಲ ಕಾರಣ ತಿಳಿಯುತ್ತದೆ. ಹೆಚ್ಚಿನ ಶಬ್ದದ ಕುರಿತು ವೈದ್ಯರು ಕೂಡ ಎಚ್ಚರಿಕೆಯನ್ನು ನೀಡುತ್ತಾರೆ. 65 ಡೆಸಿಬಲ್‌ಗಿಂತ ಹೆಚ್ಚಿಗೆ ಹೊರಡಿಸುವ ಶಬ್ದವನ್ನು ಶಬ್ದ ಮಾಲಿನ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. 75 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವು ಹಾನಿಕಾರಕವೂ 120 ಡೆಸಿಬಲ್‌ಗಿಂತ ಶಬ್ದವು ಹೆಚ್ಚಾದಾಗ ಅದು ಅಪಾಯಕರ ಎಂದು ಹೇಳಲಾಗುತ್ತದೆ.
ದಿನ ನಿತ್ಯ ನಾವು ಕೇಳುವ ನಮ್ಮ ಸುತ್ತ ಮುತ್ತಲಿನ ಅಬ್ಬರದ ಶಬ್ದಗಳು ಮನುಷ್ಯ ಹಾಗೂ ಪ್ರಾಣಿ ಸಂಕುಲಕ್ಕೂ ಹಾನಿಯನ್ನುಂಟು ಮಾಡಬಲ್ಲವು. ವಾಹನಗಳ ಓಡಾಟ, ಕಟ್ಟಡಗಳ ನಿರ್ಮಾಣ ಕಾರ್ಯ, ಕೈಗಾರಿಕೋದ್ಯಮ, ಧ್ವನಿವರ್ಧಕಗಳಿಂದ ಹೊರಡುವ ಜೋರಾದ ಶಬ್ದಗಳಿಂದ ಆರೋಗ್ಯದ ಮೇಲೆ ಹಲವಾರು ದುಷ್ಪರಿಣಾಮಗಳುಂಟಾಗುತ್ತವೆ. ಕಳಪೆ ನಗರ ಯೋಜನೆಗಳ ಕಾರಣದಿಂದಾಗಿ ನಾಯಿಕೊಡೆಗಳಂತೆ ಮೇಲೇಳುತ್ತಿರುವ ಕೈಗಾರಿಕೆಗಳು ವಸತಿ ಪ್ರದೇಶದಲ್ಲಿನ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಇದರಿಂದ ಕಿವುಡುತನ, ನಿದ್ರಾಹೀನತೆ, ಉದ್ವೇಗ, ಅರಿವಿನ ದುರ್ಬಲತೆ, ಹೃದಯ ಸ್ತಂಭನದಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಸಾವು ಸಂಭವಿಸದಿದ್ದರೂ ರಕ್ತದೊತ್ತಡದಲ್ಲಿ ಏರಿಕೆ, ಆತ್ಮಹತ್ಯೆಗೆ ಪ್ರೇರೇಪಿಸಲೂಬಹುದು. ಪ್ರತೀ ವರ್ಷ 12,000 ಅಕಾಲಿಕ ಮರಣಗಳು ಹಾಗೂ 48,000 ಹೊಸ ಹೃದಯ ಕಾಯಿಲೆಯ ಪ್ರಕರಣಗಳಿಗೆ ಶಬ್ದವು ಕಾರಣವಾಗಿದೆಯೆಂದು ವರದಿಯೊಂದು ಹೇಳುತ್ತದೆ. ಹೆಚ್ಚಿನ ಶಬ್ದ ಮಟ್ಟಗಳಿಗೆ ದೀರ್ಘ ಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶಾಶ್ವತ ಶ್ರವಣ ದೋಷಕ್ಕೆ ಕಾರಣವಾಗಬಹುದು. ಶಬ್ದ ಮಾಲಿನ್ಯವು ಒಂದು ಅದೃಶ್ಯ ಬೆದರಿಕೆಯಾಗಿ ಮನುಕುಲವನ್ನು ಕಾಡುತ್ತಿದೆ.
ಶಬ್ದ ಮಾಲಿನ್ಯವು ಮನುಷ್ಯನ ಮೇಲಷ್ಟೇ ಅಲ್ಲ, ಪ್ರಾಣಿಗಳ ಮೇಲೂ ಅಗಾಧವಾದ ಪರಿಣಾಮವನ್ನು ಬೀರಬಲ್ಲದು. ಪ್ರಾಣಿಗಳ ಸಂತಾನೋತ್ಪತ್ತಿ ಕ್ರಿಯೆಗೆ ಅಡ್ಡಿಯಾಗುವುದಲ್ಲದೆ ಕೆಲವು ಜಾತಿಯ ಪ್ರಾಣಿಗಳ ಅಳಿವಿಗೂ ಕಾರಣವಾಗಬಲ್ಲದು. ಹಿಂದೆ ಸೇನಾ ಪಡೆಯೊಂದರ ಜಲಾಂತರ ದೂರ ಸಂವೇದಿ ಉಪಕರಣವು ಹೊರಡಿಸುತ್ತಿದ್ದ ಭಾರೀ ಸದ್ದಿನಿಂದ ಕಡಲ ದಡದ ಕೆಲವು ಪ್ರಭೇದದ ತಿಮಿಂಗಿಲಗಳು ಸಾವನ್ನಪ್ಪಿದ ಉದಾಹರಣೆಗಳಿವೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವುದು ಒಂದು ಸವಾಲಿನ ಕೆಲಸವೇ ಆಗಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಶಬ್ದ ಮಾಲಿನ್ಯವನ್ನು ತಹಬದಿಗೆ ತರಬಹುದು. ತಮ್ಮ ವಾಹನಗಳಿಗೆ ಶಬ್ದ ನಿರೋಧಕಗಳನ್ನು ಅಳವಡಿಸುವುದು, ವಾಹನದ ವೇಗವನ್ನು ಕಡಿಮೆಗೊಳಿಸುವಂತಹ ಕಾರ್ಯಗಳನ್ನು ಕೈಗೊಳ್ಳಬಹುದು. ಕೆಲ ಯುವಕರು ವಾಹನಗಳನ್ನು ಚಲಾಯಿಸುವಾಗ ವಾಹನಗಳಿಂದ ಕರ್ಕಶವಾದ ಶಬ್ದ ಹೊಮ್ಮುತ್ತದೆ. ಇಂಥವರನ್ನು ಪೊಲೀಸ್ ಇಲಾಖೆ ಗುರುತಿಸಿ ದಂಡವನ್ನು ವಿಧಿಸುವುದಲ್ಲದೇ ಶಿಕ್ಷೆಯನ್ನೂ ನೀಡುವಂತಾಗಬೇಕು. ಅಲ್ಲದೇ ಸಾರ್ವಜನಿಕರಿಗೆ ಶಬ್ದ ಮಾಲಿನ್ಯದಿಂದುಂಟಾಗುವ ದುಷ್ಪರಿಣಾಮಗಳ ಕುರಿತಂತೆ ಹೆಚ್ಚು ಹೆಚ್ಚು ಅರಿವು ನೀಡುವ ಕಾರ್ಯಕ್ರಮಗಳು ನಡೆಯಬೇಕು.