ಜನಪ್ರಿಯತೆಯ ವ್ಯಸನ

1990ರಲ್ಲಿ ಹಿರಿಯ ಲೇಖಕ ಕೆ.ವಿ. ಸುಬ್ಬಣ್ಣನವರು ‘ಶ್ರೇಷ್ಠತೆಯ ವ್ಯಸನ’ ಎಂಬ ಭಾಷಣ/ಲೇಖನವನ್ನು ಬರೆದರು. ಅದು ಒಮ್ಮೆ ಅನೇಕ ಹಿರಿಯ ಮತ್ತು ಆಗ ಶ್ರೇಷ್ಠರೆನಿಸಿಕೊಂಡ ಮತ್ತು ಶ್ರೇಷ್ಠರೆನಿಸಿಕೊಳ್ಳಬಯಸಿದ ಲೇಖಕರನ್ನು ಬೆಚ್ಚಿ ಬೀಳಿಸಿತು. ಹೀಗಾಗಬಹುದೆಂಬ ಅರಿವು ಸುಬ್ಬಣ್ಣನವರಿಗಿತ್ತೆಂಬುದನ್ನು ಆ ಲೇಖನದಿಂದ ತಿಳಿಯಬಹುದು. ಪ್ರಜ್ಞಾಪೂರ್ವಕವಾಗಿಯೇ ಅವರು ‘ಶ್ರೇಷ್ಠತೆ’ ಮತ್ತು ‘ಶ್ರೇಷ್ಠತೆಯ ವ್ಯಸನ’ದ ಅಂತರವನ್ನು ಗುರುತಿಸಿದ್ದರು. ಅದಕ್ಕೂ ಮೊದಲೇ ಗೋಪಾಲಕೃಷ್ಣ ಅಡಿಗರು ಶ್ರೇಷ್ಠತೆಯ ಬಗ್ಗೆ ಮೈಮುಟ್ಟಿಕೊಳ್ಳುವಂತೆ ಬರೆದಿದ್ದರು. (ಬೇರೆಯವರೂ ಈ ಕುರಿತು ಬರೆದಿರಬಹುದೆಂಬ ಸಂದೇಹ ನನಗಿದೆ.) ಆದರೆ ‘ಶ್ರೇಷ್ಠತೆಯ ವ್ಯಸನ’ವೆಂಬ ನುಡಿಗಟ್ಟನ್ನು ಕನ್ನಡಕ್ಕೆ ಕೊಟ್ಟವರು ಸುಬ್ಬಣ್ಣನವರೇ ಇರಬಹುದೆಂದು ನನ್ನ ತಿಳಿವಳಿಕೆ.
ಇರಲಿ. ಇದೀಗ ‘ಶ್ರೇಷ್ಠತೆ’ಯ ಮಾನದಂಡ ಬದಲಾಗುತ್ತಿದೆಯೆಂದು ಕಾಣಿಸುತ್ತಿದೆ. ಈಗೀಗ ಸಾಹಿತಿಗಳಿಗೆ ತಮ್ಮ ಪರಿಚಯ ಜನರಿಗೆ ಇಲ್ಲದಿದ್ದರೆ ತಾವೇನೇ ಮತ್ತು ಎಷ್ಟೇ ಬರೆದರೂ ‘ಶ್ರೇಷ್ಠ’ರಾಗುವುದಿಲ್ಲವೇನೋ ಎಂಬ ಆತಂಕ ಮನೆಮಾಡಿದಂತೆ, ಸಾಹಿತ್ಯದ ಮೂಲಕ ಸಾಹಿತಿ ಶ್ರೇಷ್ಠರಾಗುವ ಕಾಲ ಕಳೆದಂತೆ, ತಮ್ಮ ಸಾಹಿತ್ಯ ‘ಶ್ರೇಷ್ಠ’ವಾದರೆ ಸಾಲದು, ತಾವು ಕನಿಷ್ಠ ತಮ್ಮ ಕಾಲದಲ್ಲಾದರೂ ‘ಶ್ರೇಷ್ಠ’ರಾಗಬೇಕೆಂಬ ಹಪಹಪಿಕೆ ಕಾಣಿಸುತ್ತದೆ. ಈ ಶ್ರೇಷ್ಠತೆಗೆ ಸುಲಭದ ದಾರಿ ಯಾವುದು? ಜನಪ್ರಿಯತೆ.
ಯಾವುದೇ ಮೌಲ್ಯಕ್ಕೆ ಒಂದೊಂದು ಕಾಲಕ್ಕೆ ಒಂದೊಂದು ಮಾನದಂಡಗಳಿರುತ್ತವೆ. ಅವು ಆಯಾಯ ಕಾಲದ ಶ್ರೇಷ್ಠತೆಯನ್ನು, ಪ್ರಸಿದ್ಧಿಯನ್ನು ಕೊಂಡಾಡುತ್ತವೆ. ಕಾಲಕ್ರಮದಲ್ಲಿ ಅವು ಬದಲಾಗುವುದೂ ಉಂಟು. ಭವಿಷ್ಯದಲ್ಲಿ ಉಳಿಯುವುದೇ ಶ್ರೇಷ್ಠ ಮತ್ತು ಅದು ತನ್ನ ಕಾಲದಲ್ಲಿ, ಎಲ್ಲರಿಗೂ ಗೊತ್ತಿರಬೇಕಾಗಿಲ್ಲ ಎಂದು ತಿಳಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತೀ ಕೃತಿಯೂ ಬಿಡುಗಡೆಯಾಗುವ ಸಂದರ್ಭವನ್ನು ಗಮನಿಸಿದರೆ ಸಾಕು: ಮದುವೆಯ ದಿನ ವಧೂವರರನ್ನು ಬಣ್ಣಿಸಿದ ಹಾಗೆ ಕೃತಿಯ ಕುರಿತು ಪುಂಖಾನುಪುಂಖವಾಗಿ ಮೆಚ್ಚುಗೆಗಳು ದೊರೆಯುತ್ತವೆ. ಆದರೆ ಈ ಹೊಗಳಿಕೆಯ ದೊರೆತನ ಎಷ್ಟು ಕಾಲ ಮತ್ತು ಎಷ್ಟು ಮನಸ್ಸುಗಳನ್ನು ಆಳುತ್ತದೆಯೆಂಬುದೇ ಆ ಕೃತಿಯ ಜೀವನಾಡಿಯೆಂಬುದನ್ನು ಬಹಳಷ್ಟು ಕಿರಿಯರೂ ಕೆಲವು ಹಿರಿಯರೂ ಅರ್ಥಮಾಡಿಕೊಂಡಂತಿಲ್ಲ. ಸಮುದ್ರದ ಅಲೆಗಳಂತೆ ಬಂದು ಹೋಗುವ ಕೆಲವು ಕೃತಿಗಳ ನಾಡಿಬಡಿತವು ಕಡಿದುಹೋಗಿ ಅವು ಜನನಾಡಿಗಳಾಗುವುದರ ಬದಲಿಗೆ ಜವನಾಡಿಗಳಾಗುತ್ತವೆ.
1960-70ರ ದಶಕದಲ್ಲಿ ‘ಸಾಕ್ಷಿ’ ಎಂಬ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಸಾಗರದ ಅಕ್ಷರ ಪ್ರಕಾಶನದಿಂದ ಪ್ರಕಟವಾಗುತ್ತಿತ್ತು. ನವ್ಯದ ಗಾಳಿ ಎಷ್ಟು ಮತ್ತು ಹೇಗಿತ್ತೆಂದರೆ ‘ಸಾಕ್ಷಿ’ಯಲ್ಲಿ ಯಾವುದೇ ಬರೆಹ ಪ್ರಕಟವಾದರೆ ಸಾಹಿತ್ಯಪ್ರೌಢತೆ ಬಂದಿದೆಯೆಂದು ನನ್ನಂಥ ಆಗಿನ ಎಳೆಯರೆಲ್ಲ ನಂಬುತ್ತಿದ್ದೆವು ಅಥವಾ ನಮಗೆ ನಾವೇ ಭ್ರಮಿಸುತ್ತಿದ್ದೆವು. ಅದರ ಹೊರತಾಗಿ ‘ಸಂಕ್ರಮಣ’ ಮುಂತಾದ ಸಾಹಿತ್ಯ ಪತ್ರಿಕೆಗಳೂ ಇದೇ ಗರ್ವವನ್ನು ತರುತ್ತಿದ್ದವು. ಈ ಭ್ರಮೆಯನ್ನು ನಿವಾರಣೆ ಮಾಡುವಂತೆ ‘ಸಾಕ್ಷಿ’ ಪತ್ರಿಕೆಯ ಜನವರಿ 1972ರ ಸಂಚಿಕೆಯಲ್ಲಿ ಅಡಿಗರು ಒಂದು ಸಂಪಾದಕೀಯವನ್ನು ಬರೆದರು. ಅದರಲ್ಲಿ ಅವರು ‘‘ಸಾಕ್ಷಿಗೆ ಬೇಕಾದ ಅಭ್ಯಾಸಪೂರ್ಣ, ಕೂಲಂಕಷ ವಿಚಾರಭರಿತ ಲೇಖನಗಳು ಅಲ್ಲೊಂದು ಇಲ್ಲೊಂದು ಬಹಳ ಕಷ್ಟದಿಂದ ದೊರೆಯುತ್ತಿದ್ದರೂ ಪ್ರಕಟಣೆಗಾಗಿ ಬರುವ ಅಸಂಖ್ಯ ಕವನಗಳನ್ನು ಓದಿದಾಗ ತುಂಬ ಕಸಿವಿಸಿಯಾಗುತ್ತದೆ. ಗುಣದಲ್ಲಿ ಇಷ್ಟು ಬೀಳಾದ ಇಂಥ ಪದ್ಯಗಳನ್ನು ನಮ್ಮ ತರುಣರು ಏಕೆ ಬರೆಯುತ್ತಾರೆ, ಯಾವುದಾದರೊಂದು ವಿಷಯವನ್ನು ಆರಿಸಿಕೊಂಡು ಆಳವಾಗಿ ಅಭ್ಯಾಸ ಮಾಡಿ ಚಿಂತಿಸಿ ಅದನ್ನು ತನ್ನದಾಗಿ ಮಾಡಿಕೊಂಡು ಏಕೆ ಇವರು ಬರೆಯಬಾರದು, ಬರೆಯುವ ಶಕ್ತಿಯನ್ನು ಕುದುರಿಸಿಕೊಳ್ಳಬಾರದು ಎಂದು ಅನ್ನಿಸುತ್ತದೆ. ಪದ್ಯ ಬರೆಯುವುದು ಅಷ್ಟು ಸುಲಭವೆಂದು ತಿಳಿದರೇ? ಅಥವಾ ಯಾರು ಬೇಕಾದರೂ ಕಾವ್ಯರಚನೆ ಮಾಡಬಹುದು ಎನ್ನಿಸುತ್ತದೆಯೇ? ಕಾವ್ಯರಚನೆಯೊಂದೇ ಸಾಹಿತ್ಯರಚನೆ, ಕೀರ್ತಿಪ್ರದ ಎಂದು ಇವರಿಗೆ ಏಕೆ ಅನ್ನಿಸಬೇಕು?’’ ಎಂದು ಮುಂತಾಗಿ ಬರೆದರು. ಮುಂದೆ ಅವರು ಸೃಷ್ಟಿಶಕ್ತಿಯಿಲ್ಲದಿದ್ದರೂ ಬುದ್ಧಿಯ ಮಟ್ಟದಲ್ಲಿ ಮಾಡಬೇಕಾದ ಕೆಲಸವನ್ನು, ವರ್ತಮಾನವನ್ನು ಪರಂಪರೆಯೊಂದಿಗೆ ಸೇರಿಸುವ ಅಗತ್ಯವನ್ನು, ಜೊತೆಗೆ ನಮ್ಮ ಸಂಸ್ಕೃತಿಯ ಬೇರೆಂದು ಸಂಸ್ಕೃತಕ್ಕೆ ಜೋಡಣೆಯಾಗಬೇಕಾದ ಅನಿವಾರ್ಯವೇ ಮುಂತಾದ ಚರ್ಚಾಸ್ಪದ ವಿಚಾರಗಳನ್ನೂ ಪ್ರಸ್ತಾಪಿಸುತ್ತಾರೆ. ಅವು ಇಲ್ಲಿ ಅಪ್ರಸ್ತುತ.
ಇದು ಒಂದು ಜನಾಂಗದ ಕಣ್ಣು ತೆರೆಸಿತೋ ಮುಚ್ಚಿಸಿತೋ ಚರ್ಚೆಯಾಗುತ್ತಿದೆ; ಆಗಬೇಕು. ಆದರೆ ನನ್ನಂಥವರು ಎಚ್ಚೆತ್ತೆವು. ಆಗ ನನ್ನ ಸಮಕಾಲೀನ ಬರೆಹಗಾರರನೇಕರು ವಿದ್ಯಾರ್ಥಿಗಳು ಅಥವಾ ಆಗಷ್ಟೇ ಶಿಕ್ಷಣ ಮುಗಿಸಿದವರು. ನಾನೂ ವಿದ್ಯಾರ್ಥಿಯಾಗಿದ್ದೆ. ನನ್ನದೂ ಕೆಲವು ಕವನಗಳು, ಒಂದು ಕಥೆ ‘ಸಾಕ್ಷಿ’ಯಲ್ಲಿ ಪ್ರಕಟವಾಗಿತ್ತು. ಶ್ರೇಷ್ಠತೆಯೋ, ಜನಪ್ರಿಯತೆಯೋ, ಪ್ರಸಿದ್ಧಿಯೋ ಅಂತೂ ಒಂದು ವರ್ತುಲದಲ್ಲಿ ಸ್ವೀಕಾರಾರ್ಹತೆಗೆ ಇವು ಒಂದೆರಡು ಮೆಟ್ಟಲುಗಳಾಗಿದ್ದರೂ ಗುರಿ ಮುಟ್ಟಲು ಇನ್ನೂ ಅನೇಕ ಮೆಟ್ಟಲುಗಳಿವೆಯೆಂದು ಅರ್ಥವಾಗಿತ್ತು. ಸುಬ್ಬಣ್ಣನವರು ತಮ್ಮ ಲೇಖನದಲ್ಲಿ ಉದಾಹರಿಸಿದ ಮೇಲ್ಮಾಳಿಗೆಯ ಗುರುವನ್ನು ಆವಾಹಿಸಿದ ಬ್ರಹ್ಮರಾಕ್ಷಸ ನಮ್ಮನ್ನು ಆವಾಹಿಸಬೇಕಾದರೆ ಅಪಾರ ಶ್ರಮ ಮತ್ತು ಪ್ರತಿಭೆ ಬೇಕೆಂಬ ಅರಿವಾಗಿತ್ತು.
ಈಗ ‘ಜನಪ್ರಿಯತೆ’ಯ ಯುಗವೆಂದು ಕಾಣುತ್ತದೆ. ಹೀಗಂದರೇನು ಎಂಬ ಬಗ್ಗೆ ಬಹಳಷ್ಟು ಜನರಿಗೆ ಜಿಜ್ಞಾಸೆಯಿಲ್ಲ. ಇದು ಇಂಗ್ಲಿಷ್‌ನ ‘ಪಾಪ್ಯುಲರ್’ ಅಥವಾ ‘ಫೇಮಸ್’ ಪದಕ್ಕೆ ಸಂವಾದಿಯಲ್ಲ; ಪರ್ಯಾಯವೂ ಅಲ್ಲ. ಈ ಎರಡು ಇಂಗ್ಲಿಷ್ ಪದಗಳಿಗೆ ಅತೀ ಹತ್ತಿರ ಬರುವ ಕನ್ನಡ ಪದವೆಂದರೆ ‘ಪ್ರಸಿದ್ಧ’ ಎಂಬುದು. ಆದರೆ ಜನಪ್ರಿಯ ಎಂಬುದು ಇದಕ್ಕಿಂತ ಭಿನ್ನ ಅರ್ಥವನ್ನು ಸ್ಫುರಿಸುವ ಪದ. ಜನರಿಗೆ ಹತ್ತಿರವಾಗುವುದೇ, ಇಷ್ಟವಾಗುವುದೇ ‘ಜನಪ್ರಿಯತೆ’. ತುಂಬಾ ಪ್ರಸಿದ್ಧರಾಗಿರುವವರು ಜನಪ್ರಿಯರೆಂದೇನೂ ಅಲ್ಲ. ಹಾಗಂತ ಟೀಕೆಗೆ ಗುರಿಯಾಗುತ್ತಾರೆಂದೂ ಅಲ್ಲ. ಬಹಳಷ್ಟು ರಾಜಕಾರಣಿಗಳು ಪ್ರಸಿದ್ಧರಾಗಿರುತ್ತಾರೆ. ಈ ಪೈಕಿ ಹೆಚ್ಚಿನವರು ‘ಕುಪ್ರಸಿದ್ಧ’ರು. ಕೆಲವರಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿ ‘ಸುಪ್ರಸಿದ್ಧ’ರು. ಇಂಥವರನ್ನು ಜನಪ್ರಿಯರೆಂದು ಹೇಳಬಹುದು. ಇದರಿಂದಾಗಿಯೇ ಈ ಎರಡು ಪದಗಳ (ಕುಪ್ರಸಿದ್ಧ, ಸುಪ್ರಸಿದ್ಧ)ಗಳ ನಡುವೆ ನಿರ್ಲಿಪ್ತವಾಗಿರುವ ಪ್ರಸಿದ್ಧವೆಂಬ ಪದ ಉಳಿದುಕೊಂಡಿದೆ. ಪ್ರಾಯಃ ಕಲೆ, ಸಾಹಿತ್ಯ, ಕ್ರೀಡೆ ಮುಂತಾದ ನಿರುಪದ್ರವಿ ಕ್ಷೇತ್ರಗಳಲ್ಲಿ ಈ ಪದವನ್ನು ಹೆಚ್ಚಾಗಿ ಬಳಸಬಹುದು.
ಜನಪ್ರಿಯತೆಗೂ ಮನ್ನಣೆಗೂ ವ್ಯತ್ಯಾಸವಿದೆ. ಗೌರವ, ಪ್ರಶಸ್ತಿ, ಸನ್ಮಾನ ಮುಂತಾದವು, ಮನ್ನಣೆಯನ್ನು ತರಬಹುದು ಅಥವಾ ತಂದಂತೆ ಭಾಸವಾಗಬಹುದು. ಆದರೆ ಇಂದಿನ ಭಾರೀ ಸಂಖ್ಯೆಯ ಇಂತಹ ಉದ್ದಿಮೆಗಳ ನಡುವೆ ಇವು ಎಂದಿಗಿಂತ ಬೇಗ ಮರೆಯಾಗಬಹುದು; ಮರೆತುಹೋಗಬಹುದು. ಜನಪ್ರಿಯತೆಯು ಓದುವ ಮತ್ತು ಓದದ ಜನರ ನಡುವಣ ಪ್ರೀತಿಯಿಂದ ಮತ್ತು ಬರೆಹದ ಗುಣಮಟ್ಟದಿಂದ ಒಟ್ಟಾಗಿ ಬರಬೇಕೇ ಹೊರತು ಯಾವುದೇ ಇಂತಹ ವಿಶೇಷಣಗಳಿಂದಲ್ಲ. ಮಠಾಧಿಪತಿಗಳು ತಮ್ಮ ಎಲ್ಲಾ ಬಿಜಯಗಳಲ್ಲಿ ತಮ್ಮ ಶಿಷ್ಯರಿಂದ ತಮ್ಮ ಲಾಂಛನವನ್ನು ಕೊಂಡೊಯ್ಯುವಂತೆ ಪ್ರಶಸ್ತಿ ವಿಜೇತರು, ಸನ್ಮಾನಿತರು ಇವುಗಳನ್ನು ಕೊಂಡೊಯ್ಯುವ ಕಾಲ ಬಂದಿದೆ.
ಇಂದು ಬೇಕಾದಷ್ಟು, ಸಾಕಾದಷ್ಟು ಕೃತಿಗಳು ಪ್ರಕಟವಾಗುತ್ತಿವೆ. ಕೆಲವು ಗ್ರಹಗಳಂತೆ ಚಲಿಸುತ್ತಿದ್ದರೆ, ಇನ್ನುಳಿದವು ತಾರೆಗಳಂತೆ ಮಿನುಗುತ್ತವೆ. ಈ ಮಿಣುಕು ನೋಟದಿಂದ ಒಂದು ಕೃತಿ ಓದುಗನನ್ನು ತಲುಪುವಾಗ ಜ್ಯೋತಿರ್ವರ್ಷಗಳ ಅಂತರದಿಂದಾಗಿ ಮೂಲದಲ್ಲಿ ಅದು ಸತ್ತಿರುವುದೂ ಉಂಟು. ಇದರ ಪೈಕಿ ಕವನ ಸಂಕಲನಗಳನ್ನಂತೂ ಎಷ್ಟೇ ವಿಮರ್ಶಾ ಜಾಹೀರಾತುಗಳು ಬಂದರೂ ಜನರು ಕೊಂಡುಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಅಷ್ಟರ ಮಟ್ಟಿಗೆ ಓದುಗರು ವಿಮರ್ಶೆಯ ಕುರಿತೂ ಭ್ರಮನಿರಸನಗೊಳ್ಳುತ್ತಿದ್ದಾರೆ. ಈ ಸ್ಥಿತಿ ಬರಲು ಕಾರಣವೇನೆಂದು ಚಿಂತನಶೀಲರು ಚಿಂತಿಸಬಹುದು.
ಅಂದರೆ ಬಹಳಷ್ಟು ಬರೆಹಗಾರರು (ಕವಿಗಳು ಅಂತಲ್ಲ ಎಲ್ಲರೂ!) ನಿಕಟವರ್ತಿಗಳಿಂದ ತಮ್ಮ ಬಗ್ಗೆ ಬರೆಸಿ ಅದನ್ನು ಪ್ರಭಾವಳಿಯಂತೆ ಬಳಸುತ್ತಿದ್ದಾರೆ. ಬರೆಯುವವರೋ ವಿಮರ್ಶೆಯೆಂಬ ಹೆಸರಿನಲ್ಲಿ ಅಭಿನಂದನಾ ಭಾಷಣವನ್ನು ಮಾಡುತ್ತಿದ್ದಾರೆ; ಸನ್ಮಾನ ಪತ್ರವನ್ನು ನೀಡುತ್ತಿದ್ದಾರೆ. ಈ ಅಭಿನಂದನೆಯನ್ನು ವಾಸ್ತವವೆಂದು ತಿಳಿದು ಕೃತಿಗಳನ್ನು ಖರೀದಿಸುವವರೂ ಇರಬಹುದು. ಕೃತಿಕಾರನಿಗೂ ಓದುಗನಿಗೂ ಸಂಬಂಧ ಕಲ್ಪಿಸುವ ಕೆಲಸವನ್ನು ಮಾಧ್ಯಮಗಳೂ ವಿಮರ್ಶಕರೂ ಮಾಡಬೇಕಾದರೂ ಅವುಗಳ ಪ್ರಸ್ತುತಿಯ ಹಾದಿ ಭಿನ್ನವಾದದ್ದು. ಓದಲೇಬೇಕಾದ ಪುಸ್ತಕ ಎಂದು ಮಾಧ್ಯಮಗಳು ಹೇಳಬಹುದು. ಆದರೆ ವಿಮರ್ಶಕರಲ್ಲ. ಅವರೂ ಇದನ್ನೇ ಹೇಳಿದರೆ ಅದನ್ನು ಸಾಹಿತ್ಯದ ಗ್ಯಾರಂಟಿಯಂತೆ ಜನರಿಗೆ ಉಚಿತವಾಗಿ ಹಂಚುವ ಕೆಲಸವನ್ನು ಯಾರಾದರೂ ಮಾಡಬಹುದೇ ಎಂದೂ ಅನ್ನಿಸುತ್ತದೆ.
ಮುಖ್ಯವಾಗಿ ಇಂದಿನ ಜನಸಂಖ್ಯಾ ಸ್ಫೋಟ ಮತ್ತು ಶಿಕ್ಷಣದ, ಸಂಪರ್ಕ ಸಾಧನಗಳ, ಲಭ್ಯತೆಯೇ ಇದಕ್ಕೆ ಕಾರಣವಿರಬಹುದು. ಬರೆಹಗಾರರ ಸಂಖ್ಯೆಯು ಒಟ್ಟು ಜನಸಂಖ್ಯೆಗೆ ಅನುಗುಣವಾದ ಅನುಪಾತದಲ್ಲಿರಲೇ ಬೇಕೆಂದಿಲ್ಲ; ಆದರೆ ಸಾಮಾನ್ಯವಾಗಿ ಹಾಗಿರುತ್ತವೆ. ಬರೆದ ತಕ್ಷಣ ಅದಕ್ಕೆ ನಾಲ್ಕು ಮಂದಿಯ ನಡುವೆ ನಿಸ್ತಂತು ಪ್ರಕಟಣೆಯ ಭಾಗ್ಯವನ್ನು ದೊರಕಿಸಿಕೊಡಲು ಸಾಮಾಜಿಕ ಜಾಲತಾಣಗಳಿವೆ. ಎಲ್ಲರೂ ಸ್ವೇಚ್ಛೆಯಿಂದ ಅಡ್ಡಾಡಲು ಲಭ್ಯವಿರುವ ಮೈದಾನವಿರುವಾಗ ಓಡಲು, ನಡೆದಾಡಲು, (ಕುಂಟುನಡೆಗೂ, ತೆವಳುವುದಕ್ಕೂ!) ಸಾಧ್ಯವಿರುವವರೆಲ್ಲ ಅಡ್ಡಾಡಬಹುದು. ಅದಕ್ಕೊಂದು ಶಿಸ್ತು ಅಥವಾ ಮಿತಿಯಿರಲು ಸಾಧ್ಯವಿಲ್ಲ. ಅಥವಾ ಸಾಂಸ್ಥಿಕ ಬಯಲು ರಂಗಮಂಟಪಗಳಂತೆ ಗೊತ್ತಾದ ತೆರದೊಂದಿಗೆ ಅಲ್ಲಿ ವಿಶೇಷ ಪ್ರಕಟಣೆಗಳಿರುತ್ತವೆ. ಮತ್ತದೇ ಸಮಾರಂಭ, ಕೃತಿಯ ಕುರಿತ ಮಾತು, ಮೆಚ್ಚುಗೆ, ಕೃತಿಯ ಅನನ್ಯತೆ, ಹೀಗೆ ಸಭಾಂಗಣ ತೆರವಾಗುವವರೆಗೆ ಕೃತಿ ಮತ್ತು ಕೃತಿಕಾರನ ಹಬ್ಬ. ಮರುದಿನ ಇನ್ನೊಬ್ಬರಿಗೆ ಅಲ್ಲೇ ಅವಕಾಶ.
ಕಾವ್ಯವನ್ನೇ ಸಾಹಿತ್ಯವೆಂದು ತಿಳಿದ ಕಾಲವೊಂದಿತ್ತು. ಉಳಿದವೆಲ್ಲ ಅದರ ಅಂಗಗಳು. ‘ಕಾವ್ಯೇಷು ನಾಟಕಂ ರಮ್ಯಂ’ ಎಂಬ ವಾಡಿಕೆಯ ಮಾತು ಇದರಿಂದಲೇ ಉತ್ಪತ್ತಿಯಾದದ್ದೆಂದು ಕಾಣುತ್ತದೆ. ಕೆಲವೇ ಜನರು ಹೇಳುವ ಮಾತುಗಳನ್ನು ಎಲ್ಲರೂ ಕೇಳುವ ಕಾಲದಲ್ಲಿ ಕೃತಿಗಳಿಗೆ ಮಾದರಿ ಮೌಲ್ಯಮಾಪನವಿದ್ದು ಅದನ್ನು ಎಲ್ಲರೂ ಒಪ್ಪುತ್ತಿದ್ದರು. ಈಗ ಹಾಗಲ್ಲ. ಪ್ರತಿಯೊಬ್ಬನಿಗೂ ಒಂದು ನಿಲುವಿದೆ. ಅದು ಕುರಿಗಳ ನಿಲುವೂ ಆಗಬಹುದು. ಆದರೂ ಅದೊಂದು ನಿಲುವು- ನಮ್ಮ ರಾಜಕಾರಣದ ಅಭಿಮಾನಿಗಳಂತೆ. ಕವನ ಸಂಕಲನಗಳ ಭಾಗ್ಯವು ಮಾಧ್ಯಮಗಳಲ್ಲಿ ಮಾತ್ರವಲ್ಲದೆ ಸೀಮಿತ ಪ್ರಸಾರದ ಅಥವಾ ಖಾಸಗಿ ಸಾಹಿತ್ಯ ಪತ್ರಿಕೆಗಳಲ್ಲಿ ಬರುವ ಕಾಲ ಇತ್ತೀಚಿನ ವರೆಗೂ ಇತ್ತು. ಆದರೆ ಈಗ ಅಂತಹ ಸಾಹಿತ್ಯ ಪತ್ರಿಕೆಗಳು ಆಧುನಿಕತೆಯೊಂದಿಗೆ ಸ್ಪರ್ಧಿಸಲಾಗದೆ ಶಾಶ್ವತವಾಗಿ ಬಾಗಿಲು ಮುಚ್ಚಿವೆ.
ಕವಿತೆಗಳನ್ನಂತೂ ಪ್ರಕಟಿಸುವವರು (ಬಹುಪಾಲು ಕೃತಿಕಾರರೇ) ಪ್ರಕಟಣೆಗೆ ಮುನ್ನ ಅವನ್ನು ಸಾಕಷ್ಟು ಮಂದಿಯಿಂದ ಓದಿಸುವುದು ಅವರಿಗೂ ಹಿತ; ಓದುಗರಿಗೂ ಹಿತ. ಎಷ್ಟೆಂದರೂ ಗುಣಮಟ್ಟವನ್ನು ಗಣಿಸದೆ ಎಲ್ಲರೂ ಮೆಚ್ಚುವುದಿಲ್ಲ; ಕೆಲವು ಬಾರಿ ಒಂದೆರಡು ಕವಿತೆಗಳು ಚೆನ್ನಾಗಿದ್ದು ಉಳಿದವು ಕಳಪೆಯಾಗಿದ್ದರೆ ಪ್ರತಿಕ್ರಿಯಿಸುವವರು ಆ ಕವನಗಳನ್ನಷ್ಟೇ ಉಲ್ಲೇಖಿಸಿ ಮೆಚ್ಚಿಗೆ ಸೂಚಿಸುತ್ತಾರೆ; ಉಳಿದ ಕವನಗಳ ಕುರಿತು ಏನೂ ಹೇಳುವುದಿಲ್ಲ. ಹೀಗೆ ಮೌನವಾಗಿರುವುದು ಕೃತಿಕಾರರಿಗೆ ಮೆಚ್ಚುಗೆಯ ಸೂಚನೆಯಂತಿರುತ್ತದೆ. ಇದೂ ಒಂದು ರಾಜಕಾರಣವೇ. ಮೌನವಾಗಿದ್ದು ಎಲ್ಲದಕ್ಕೂ ಅಲಿಪ್ತ ನಿಲುವನ್ನು ತಾಳುವುದು ಅಜಾತಶತ್ರುಗಳನ್ನು ಸೃಷ್ಟಿಸಿದೆಯೆಂದು ತಿಳಿಯುವುದು ತಪ್ಪು. ಸಮಾಜ ಹಾದಿ ತಪ್ಪುವಲ್ಲಿ ಇಂಥವರ ಈ ರಾಜಕಾರಣದ ಕೊಡುಗೆ ಅಪಾರ. ನಿಷ್ಠುರಿಗಳೇ ಅನೇಕ ಬಾರಿ ನಿಜಕ್ಕೂ ಪ್ರಾಮಾಣಿಕರು. ಆದರೆ ಮೆಚ್ಚುಗೆಯನ್ನು ಮೆಚ್ಚದವರು ಯಾರು? ಹೀಗಾಗಿ ಸ್ತುತಿಪಾಠಕರ ತಂಡವೇ ನಿರ್ಮಾಣವಾಗಿದೆ. ಎಲ್ಲವೂ ಅಸಾಮಾನ್ಯವಾದರೆ, ಸಾಮಾನ್ಯವಾದದ್ದು ಯಾವುದು? ಊರಿಗೆ ಊರೇ ಹಸೆಯಲಿ ಕುಳಿತರೆ ಆರತಿ ಬೆಳಗುವವರೇ ಎಲ್ಲರೂ ಆದರೆ, ಸ್ವಚ್ಛಗೊಳಿಸುವವರು ಯಾರು?
ಜನಪ್ರಿಯತೆ ನಿಜಾರ್ಥದಲ್ಲಿ, ಯಥಾರ್ಥದಲ್ಲಿ ದಕ್ಕಬೇಕು. ಮೇಕಪ್ಪಿನಿಂದಲ್ಲ. ಅದರ ಅಗತ್ಯವಿದೆ; ಆದರೆ ಅದು ಚಟವಾಗಬಾರದು; ವ್ಯಸನವಂತೂ ಆಗಲೇಬಾರದು. ಸಾಹಿತ್ಯಕ್ಕೆ ಚಲನಚಿತ್ರಗಳಂತೆ ‘ರೀಲ್ ಲೀಫ್’ ಎಂಬುದಿಲ್ಲ. ‘ರಿಯಲ್ ಲೈಫ್’ ಮಾತ್ರ. ಆರಂಭದಿಂದಲೇ ಗಂಭೀರ; ಮಧ್ಯಂತರದಿಂದಲ್ಲ.