ಕಾರ್ಲೆ ಆದಿವಾಸಿಗಳಿಗೆ ಸುಸಜ್ಜಿತ ಸೇತುವೆ ಮರೀಚಿಕೆ
►ಪ್ರಾಣಭೀತಿಯಲ್ಲಿ ಕಾಲುಸಂಕ ದಾಟಬೇಕಾದ ಸ್ಥಿತಿ ►ಜನಪ್ರತಿನಿಧಿಗಳ ನಿರ್ಲಕ್ಷ್ಯ ಆರೋಪ

ಚಿಕ್ಕಮಗಳೂರು, ಜು.17: ಅಪ್ಪಟ ಗುಡ್ಡಗಾಡು ಪ್ರದೇಶವಾಗಿರುವ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಆದಿವಾಸಿ ಸಮುದಾಯದ ಕಾಲನಿಗಳು ಹೆಚ್ಚಿವೆ. ಇಂತಹ ಆದಿವಾಸಿಗಳ ಸಾವಿರಾರು ಕಾಲನಿಗಳ ಪೈಕಿ ಬಹುತೇಕ ಕಾಲನಿಗಳು ಇಂದಿಗೂ ಮೂಲಭೂತ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿವೆ.
ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಈ ಹಿಂದೆ ನಕ್ಸಲ್ ಪೀಡಿತ ಗ್ರಾಮಗಳಾಗಿದ್ದ ಕಳಸ ತಾಲೂಕಿನ ಕಾರ್ಲೆ, ಈಚಲುಹೊಳೆ, ಹೇರಡ್ಕ, ಕುರುಮುಡುಕ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ಇಂದಿಗೂ ವಂಚಿತವಾಗಿವೆ. ಇಲ್ಲಿನ ಜನರ ಸಮಸ್ಯೆಗಳ ಪೈಕಿ ಗ್ರಾಮಗಳ ಸಮೀಪದಲ್ಲಿ ಹರಿಯುವ ನದಿಗೆ ಸುಸಜ್ಜಿತ ಸೇತುವೆ ಇಲ್ಲದಿರುವುದು ಇಲ್ಲಿನ ಜನರ ಪ್ರಮುಖ ಸಮಸ್ಯೆಯಾಗಿದೆ.
ಜಿಲ್ಲಾ ಕೇಂದ್ರ ಚಿಕ್ಕಮಗಳೂರು ನಗರದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಕಳಸ ಆದಿವಾಸಿಗಳು, ಪರಿಶಿಷ್ಟರು, ಕೂಲಿ ಕಾರ್ಮಿಕರು ಹೆಚ್ಚಾಗಿರುವ ತಾಲೂಕಾಗಿದೆ. ಈ ತಾಲೂಕಿನಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಆದಿವಾಸಿ(ಗಿರಿಜನ) ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ಕೆಲ ಆದಿವಾಸಿ ಕಾಲನಿಗಳಿಗೆ ನಕ್ಸಲ್ ಪ್ಯಾಕೇಜ್‌ನಡಿಯಲ್ಲಿ ವಿದ್ಯುತ್, ರಸ್ತೆ, ಸೇತುವೆಯಂತಹ ಮೂಲಸೌಕರ್ಯಗಳಿಗಾಗಿ ಕೋಟ್ಯಂತರ ರೂ. ಅನುದಾನವೂ ಬಿಡುಗಡೆಯಾಗಿದೆ. ಕೆಲ ಕಾಲನಿಗಳಿಗೆ ನಕ್ಸಲ್ ಪ್ಯಾಕೇಜಿನಡಿಯಲ್ಲಿ ಕೆಲ ಸೌಲಭ್ಯಗಳನ್ನೂ ಒದಗಿಸಲಾಗಿದೆ.
ಆದರೆ, ಕಳಸ ಪಟ್ಟಣದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಕಾರ್ಲೆ, ಈಚಲುಹೊಳೆ, ಹೇರಡ್ಕ, ಕುರುಮುಡುಕ ಗ್ರಾಮಗಳು ಇಂದಿಗೂ ಹಲವಾರು ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ.
ಕಾರ್ಲೆ, ಈಚಲುಹೊಳೆ ಗ್ರಾಮಗಳಲ್ಲಿ 15-20 ಗಿರಿಜನ ಕುಟುಂಬಗಳು ವಾಸವಾಗಿದ್ದರೆ, ಹೇರಡ್ಕ ಮತ್ತು ಕುರುಮುಡುಕ ಗ್ರಾಮಗಳಲ್ಲಿ ತಲಾ ಒಂದು ಆದಿವಾಸಿ ಗಿರಿಜನರ ಕುಟುಂಬಗಳು ವಾಸವಾಗಿವೆ. ಕಳಸ ಪಟ್ಟಣದಿಂದ ಈ ಗ್ರಾಮಗಳನ್ನು ಸಂಪರ್ಕಿಸಲು ರಸ್ತೆ ಇದೆಯಾದರೂ ಗ್ರಾಮಗಳ ಸಮೀಪದಲ್ಲಿ ಭದ್ರಾ ನದಿಯ ಉಪನದಿ ಹರಿಯತ್ತಿದೆ. ಈ ನದಿಯಲ್ಲಿ ಬೇಸಿಗೆ ಕಾಲದಲ್ಲಿ ನೀರು ಕಡಿಮೆ ಇರುವುದರಿಂದ ನಿವಾಸಿಗಳು ನದಿಯನ್ನು ಕಾಲ್ನಡಿಗೆಯಲ್ಲಿ ದಾಟಿ ಹೊರ ಜಗತ್ತಿನ ಸಂಪರ್ಕಕ್ಕೆ ಬರುತ್ತಾರೆ. ಆದರೆ, ಮಳೆಗಾಲದಲ್ಲಿ ಈ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುವುದರಿಂದ ನದಿ ಪಾತ್ರದ ಈ ಗ್ರಾಮಗಳ ನಿವಾಸಿ ಗಳಿಗೆ ನದಿ ದಾಟಲು ಸಾಧ್ಯವಾಗದೆ 6 ತಿಂಗಳುಗಳ ಕಾಲ ಗ್ರಾಮಗಳಿಂದ ಹೊರ ಬಾರದ ಸ್ಥಿತಿ ನಿರ್ಮಾಣ ಉಂಟಾಗುತ್ತದೆ.
ಮಳೆಗಾಲದಲ್ಲಿ ಗ್ರಾಮಗಳ ನಿವಾಸಿಗಳು ನದಿ ದಾಟಿ ಸಮೀಪದ ಕಳಸ ಪಟ್ಟಣ, ಸಂಸೆ ಗ್ರಾಮಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಳೆಗಾಲಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿ ದಾಸ್ತಾನು ಮಾಡಬೇಕಾದ ಸ್ಥಿತಿ ಉಂಟಾಗಿದೆ. ಮಳೆಗಾಲದಲ್ಲಿ ಇಲ್ಲಿನ ಶಾಲಾ ಕಾಲೇಜು ಮಕ್ಕಳನ್ನು ನಿವಾಸಿಗಳು ಸಮೀಪದ ಹಾಸ್ಟೆಲ್‌ಗಳಲ್ಲಿ ಓದಲು ಬಿಡುವುದು ಸಾಮಾನ್ಯವಾಗಿದೆ.
ಅನಿವಾರ್ಯ ಅಥವಾ ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಈ ಗ್ರಾಮಗಳ ಜನರು ಮಳೆಗಾಲದಲ್ಲಿ ನದಿ ದಾಟಲು ತಾವೇ ನಿರ್ಮಿಸಿಕೊಂಡ ಕಾಲು ಸಂಕ ಬಳಸುತ್ತಿದ್ದಾರೆ. ಈ ಕಾಲು ಸಂಕ ಹಳೆಯದಾಗಿದ್ದು, ಶಿಥಿಲಗೊಂಡಿರುವುದರಿಂದ ನಿವಾಸಿಗಳು ಪ್ರಾಣಭೀತಿಯಲ್ಲಿ ಅಪಾಯಕಾರಿಯಾದ ಕಾಲು ಸಂಕ ದಾಟಬೇಕಾಗಿದೆ. ನಡೆಯಲು ಸಾಧ್ಯವಾಗದ ಅನಾರೋಗ್ಯ ಪೀಡಿತರು, ವೃದ್ಧರನ್ನು ಮಳೆಗಾಲದ ಅವಧಿಯಲ್ಲಿ ನಿವಾಸಿಗಳು ಜೋಳಿಗೆಯಲ್ಲಿ ಕಟ್ಟಿ ಹೊತ್ತುಕೊಂಡು ನದಿ ದಾಟಿಸಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ ಎಂದು ನಿವಾಸಿಗಳು ಸಂಕಟ ತೋಡಿಕೊಳ್ಳುತ್ತಿದ್ದಾರೆ.
ತಮ್ಮ ಗ್ರಾಮಗಳ ಸಮೀಪದಲ್ಲಿ ಹರಿಯುವ ನದಿ ದಾಟಲುಸುಸಜ್ಜಿತ ಸೇತುವೆ ನಿರ್ಮಿಸಿಕೊಡಿ ಎಂದು ಹಲವಾರು ಬಾರಿ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಅವರಿಂದ ಬರೀ ಭರವಸೆ ಸಿಗುತ್ತಿದೆಯೇ ಹೊರತು ಸೇತುವೆ ಭಾಗ್ಯ ಇನ್ನೂ ಸಿಗಲಿಲ್ಲ. ಓಟು ಕೇಳಲು ಬರುವವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೂ ಮತ ಪಡೆದು ಗೆದ್ದವರು ಇದುವರೆಗೂ ತಮ್ಮ ಗ್ರಾಮಗಳತ್ತ ತಿರುಗಿಯೂ ನೋಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸ್ಳುತ್ತಿದ್ದಾರೆ.
ಸುಸಜ್ಜಿತ ಸೇತುವೆ ಅಲ್ಲದೆ ಈ ಗ್ರಾಮಗಳಲ್ಲಿ ಅನೇಕ ಕುಟುಂಬಗಳು ನಿವೇಶನ, ಆಶ್ರಯಮನೆ, ಶೌಚಾಲಯ, ವಿದ್ಯುತ್ ಸೌಲಭ್ಯಗಳಂತಹ ಸೌಲಭ್ಯಗಳಿಲ್ಲದೆ ಅನಾಗರಿಕರಂತೆ ಬದುಕುತ್ತಿದ್ದಾರೆ. ಈ ಸೌಲಭ್ಯಗಳಿಗಾಗಿ ಸಂಬಂಧಿಸಿದವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಗ್ರಾಮಗಳ ಹಲವಾರು ನಿವಾಸಿಗಳು ಇಂದಿಗೂ ಗುಡಿಸಲುಗಳಲ್ಲಿ ವಾಸ ಮಾಡುವಂತಾಗಿದ್ದು, ಸ್ವಂತ ಖರ್ಚಿನಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಳ್ಳಲು ಅಗತ್ಯ ಸಾಮಗ್ರಿ ಗಳನ್ನು ತರಲು ಸೇತುವೆ ಸೌಲಭ್ಯ ಇಲ್ಲದಿರುವುದು ಅಡ್ಡಿಯಾಗಿದೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.
ನಮ್ಮ ಗ್ರಾಮಕ್ಕೆ ಈ ಹಿಂದೆ ನಕ್ಸಲರು ಬರುತ್ತಿದ್ದರು. ನಕ್ಸಲರ ಕಾರಣದಿಂದಾಗಿ ಕೆಲ ಸೌಲಭ್ಯಗಳು ಗ್ರಾಮಕ್ಕೆ ಬಂದಿವೆ. ಈಗ ಅವರು ಬರುತ್ತಿಲ್ಲ. ಅವರ ಬಳಿಕ ಎಎನ್‌ಎಫ್‌ನವರು ಬಂದಿದ್ದರು. ಅವರ ಬಳಿ ಸಮಸ್ಯೆ ಹೇಳಿಕೊಂಡಾಗ ನಮ್ಮ ಸಮಸ್ಯೆಗಳ ಬಗ್ಗೆ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಹೇಳಿಹೋಗಿದ್ದರು. ನಂತರ ನಕ್ಸಲ್ ಪ್ಯಾಕೇಜ್‌ನಡಿ ಮೂಲಸೌಲಭ್ಯ ಕಲ್ಪಿಸಲು ಅನುದಾನ ಬಿಡುಗಡೆಯಾಗಿದೆ ಎಂದು ಹೇಳುತ್ತಿದ್ದರು. ಆದರೆ, ನಮ್ಮ ಗ್ರಾಮಕ್ಕೆ ಯಾವ ಸೌಲಭ್ಯವೂ ಬಂದಿಲ್ಲ. ರಸ್ತೆ, ಸೇತುವೆ, ಮನೆ, ವಿದ್ಯುತ್ ಸೌಲಭ್ಯ ನಮಗಿನ್ನೂ ಸಿಕ್ಕಿಲ್ಲ. ಇದಕ್ಕಾಗಿ ಎಷ್ಟೇ ಅರ್ಜಿ ಕೊಟ್ಟರೂ ಪ್ರಯೋಜನ ಆಗುತ್ತಿಲ್ಲ. ನಾವು ಸತ್ತಮೇಲೆ ಸೌಲಭ್ಯ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ.
-ಶಂಕರೇಗೌಡ, ಕಾರ್ಲೆ ಗ್ರಾಮದ ನಿವಾಸಿ
ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ನಾವಿಲ್ಲಿ ಅನಾದಿಕಾಲದಿಂದಲೂ ವಾಸವಾಗಿದ್ದೇವೆ. ನಮ್ಮ ಗ್ರಾಮಗಳ ಸಮೀಪದಲ್ಲಿ ನದಿ ಹರಿಯುತ್ತಿದ್ದು, ಈ ನದಿ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ನದಿ ದಾಟಲು ಸಾಧ್ಯವಾಗುತ್ತಿಲ್ಲ. ನದಿ ದಾಟಲು ಸೇತುವೆ ಇಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಕಾಲು ಸಂಕ ಬಳಸಬೇಕಿದೆ. ಕಾಲುಸಂಕ ಶಿಥಿಲಗೊಂಡಿರುವುದರಿಂದ ಪ್ರಾಣಭೀತಿಯಲ್ಲಿ ನದಿ ದಾಟಬೇಕಾಗಿದೆ. ಹೀಗೆ ದಾಟಲು ಹೋಗಿ ಹಲವಾರು ಮಂದಿ ಕಾಲುಜಾರಿ ನದಿಗೆ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ. ಕೆಲವರು ನದಿ ದಾಟಲು ಹೋಗಿ ಕೊಚ್ಚಿ ಹೋಗಿರುವ ಘಟನೆಗಳೂ ನಡೆದಿವೆ. ನಮ್ಮ ಗ್ರಾಮದ ಬಳಿ ನದಿ ಇರುವುದೇ ಸಮಸ್ಯೆಯಾಗಿದೆ. ನದಿ ದಾಟಲು ಒಂದು ತೂಗುಸೇತುವೆಯನ್ನಾದರೂ ನಿರ್ಮಿಸಿಕೊಡಿ ಎಂದು ಸಂಬಂಧಿಸಿದವರ ಬಳಿ ಹತ್ತಾರು ಬಾರಿ ಮನವಿ ಮಾಡಿದರೂ ಅವರಿಂದ ಕೇವಲ ಭರವಸೆ ಸಿಗುತ್ತಿದೆಯೇ ಹೊರತು ಸೇತುವೆ ಭಾಗ್ಯ ಮಾತ್ರ ನಮಗಿನ್ನೂ ಸಿಕ್ಕಿಲ್ಲ. ಈ ಬಾರಿ ಸೇತುವೆ ನಿರ್ಮಿಸಿಕೊಡದಿದ್ದಲ್ಲಿ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಕಾರ್ಲೆ ಗ್ರಾಮದ ನಿವಾಸಿ ನವೀನ ಎಚ್ಚರಿಸಿದ್ದಾರೆ.