ಅಪಾಯಕ್ಕೆ ಅಹ್ವಾನ ನೀಡುತ್ತಿರುವ ಶಿಥಿಲಗೊಂಡಿರುವ ವಿದ್ಯುತ್ ಕಂಬ
ಕಂಬ ಬದಲಾವಣೆಗೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

ಯಾದಗಿರಿ : ವಿದ್ಯುತ್ ಕಂಬವೊಂದು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿ ನಿಂತಿದೆ. ಗಾಳಿ ಬೀಸಿದರೆೆ ಕಂಬಗಳು ಅಲುಗಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಶಿಥಿಲಗೊಂಡಿದ್ದರೂ ಇದರ ದುರಸ್ತಿಗೆ ಜೆಸ್ಕಾಂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಈ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಂಬೇಡ್ಕರ್ ನಗರದ ವಾರ್ಡ್ ನಂಬರ್ 18ರಲ್ಲಿ ವಿದ್ಯುತ್ ಕಂಬ ಸಂರ್ಪೂಣ ತುಕ್ಕು ಹಿಡಿದು ನೆಲಕ್ಕೆ ಬೀಳುವ ಹಂತದಲ್ಲಿ ಇದ್ದು ಸಾರ್ವಜನಿಕರಿಗೆ ಯಮನಂತೆ ಕಾದು ಕುಳಿತ್ತಿದ್ದು ಸಾಕಷ್ಟು ಬಾರಿ ಕಂಬದ ದುರಸ್ತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ನಗರದ ನಿವಾಸಿಗಳ ಆರೋಪವಾಗಿದೆ.
ನಗರದಲ್ಲಿ ಇತ್ತೀಚೆಗೆ ಸುರಿದ ಗಾಳಿ, ಮಳೆಗೆ ನಾನಾ ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅಪಾಯದ ಭೀತಿ ಸೃಷ್ಟಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿರುವ ವಿದ್ಯುತ್ ಕಂಬಗಳುವಾಲಿವೆ.
ವಿದ್ಯುತ್ ತಂತಿಗಳು ನೆಲಕ್ಕೆ ತಾಗುತ್ತಿವೆ. ಸುಮಾರು ವರ್ಷಗಳಿಂದ ನಗರದಲ್ಲಿ ನಿರ್ಮಿಸಿದ ವಿದ್ಯುತ್ ಕಂಬಗಳು ತೀರಾ ಹಳೆಯದಾಗಿರುವುದು ಇಲ್ಲಿನ ಸಮಸ್ಯೆಯಾಗಿದೆ
ಯಾವಾಗಬೇಕಾದರೂ ನೆಲಕ್ಕೆ ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬದಿಂದ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪ್ರಸಂಗ ಉದ್ಭವಿಸಿದೆ.
ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಕಂಬ ದೊಡ್ಡ ಅನಾಹುತವೇ ಆಗುವಷ್ಟು ಅಪಾಯದ ಮಟ್ಟದಲ್ಲಿದೆ, ಸುತ್ತಮುತ್ತ ಮನೆಗಳಿದ್ದು, ಮಕ್ಕಳು ಅಲ್ಲೆ ಆಟವಾಡುತ್ತಾರೆ ಅಂತಹ ಸಂದರ್ಭದಲ್ಲಿ ಏನಾದರೂ ವಿದ್ಯುತ್ ಕಂಬ ನೆಲಕ್ಕೆ ಬಿದ್ದರೆ ಇದಕ್ಕೆ ಹೊಣೆ ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ರಸ್ತೆಗೆ ಬಾಗಿದ ಕಂಬ :
ಯಾದಗಿರಿಯ ಅಂಬೇಡ್ಕರ್ ನಗರದ ವಾರ್ಡ್ ನಂಬರ್ 18ರಲ್ಲಿ ಮುಖ್ಯರಸ್ತೆಯಲ್ಲಿರುವ 11 ಕೆವಿ ವಿದ್ಯುತ್ ಕಂಬ ರಸ್ತೆಗೆ ವಾಲಿದ್ದು, ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ಜನರು ಸಂಚರಿಸುತ್ತಾರೆ. ವಿದ್ಯುತ್ ಕಂಬ ಬಾಗಿದ್ದು, ಬೀಳುವ ಹಂತದಲ್ಲಿದ್ದು, ಜನರಿಗೆ, ಮಕ್ಕಳಿಗೆ ಅಪಾಯವಾಗುವ ಸಂಭವವಿದೆ.
ಆದುದರಿಂದ ಕಂಬವನ್ನು ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ವಿದ್ಯುತ್ ಕಂಬವನ್ನು ಅಳವಡಿಸಬೇಕು ಎಂದು ಸ್ಥಳೀಯ ನಿವಾಸಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಯಾದಗಿರಿಯ ಅಂಬೇಡ್ಕರ್ ನಗರದ ವಾರ್ಡ್ ನಂಬರ್ 18ರ ಮುಖ್ಯರಸ್ತೆಯಲ್ಲಿರುವ 11 ಕೆವಿ ವಿದ್ಯುತ್ ಕಂಬ ಬೀಳುವ ಹಂತದಲ್ಲಿದೆ. ಈ ಬಗ್ಗೆ ಗಮನಹರಿಸಬೇಕೆಂದು ಕೆಇಬಿ ಸಿಬ್ಬಂದಿಗೆ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸಿಲ್ಲ. ಜೆಸ್ಕಾಂ ಅಧಿಕಾರಿಗಳು ತಕ್ಷಣವೇ ಸಮಸ್ಯೆಗೆ ಸ್ಪಂದಿಸಬೇಕು.
-ಪರಶುರಾಮ ಒಡೆಯರ್, ಅಂಬೇಡ್ಕರ್ ನಗರ ನಿವಾಸಿ
ಅಂಬೇಡ್ಕರ್ ನಗರದ ವಿದ್ಯುತ್ ಕಂಬದ ಸಮಸ್ಯೆಯ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಈ ಕೂಡಲೇ ಸೆಕ್ಷನ್ ಆಫೀಸರ್ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಸೂಚಿಸುತ್ತೇನೆ.
-ಮಾರ್ಕಂಡೇಶ್ವರ, ಕೆಇಬಿ ಎಇಇ