2024ರಿಂದ 2025ರ ಜುಲೈವರೆಗೆ 13,719 ಪೊಕ್ಸೊ ಪ್ರಕರಣ ದಾಖಲು: 348 ಮಂದಿಗೆ ಮಾತ್ರ ಶಿಕ್ಷೆ

ಬೆಂಗಳೂರು, ಸೆ.13: ರಾಜ್ಯದಲ್ಲಿ 2024ರಿಂದ 2025ರ ಜುಲೈವರೆಗೆ ಬರೋಬ್ಬರಿ 13,719 ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಕೇವಲ 348 ಮಂದಿಗೆ ಮಾತ್ರ ಶಿಕ್ಷೆಯಾಗಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಸರಕಾರ ಅಗತ್ಯ ಕಾನೂನು ಮತ್ತು ಅರಿವು ಮೂಡಿಸುವ ಯೋಜನೆಗಳನ್ನು ರೂಪಿಸಿದರೂ ಕೂಡ ರಾಜ್ಯದಲ್ಲಿ ಪೊಕ್ಸೊ ಪ್ರಕರಣಗಳ ಇತ್ಯರ್ಥ ಮತ್ತು ಶಿಕ್ಷೆಗೊಳಪಟ್ಟ ಪ್ರಕರಣಗಳು ಅತ್ಯಂತ ಕಡಿಮೆಯಿರುವುದು ಅನೇಕ ಆತಂಕಗಳಿಗೆ ಎಡೆ ಮಾಡಿಕೊಟ್ಟಂತಿದೆ.
ರಾಜ್ಯದಲ್ಲಿ 2022ರಲ್ಲಿ 3,209 ಪೊಕ್ಸೊ ಪ್ರಕರಣಗಳು ದಾಖಲಾಗಿದ್ದು, 186 ಪ್ರಕರಣಗಳಿಗೆ ಮಾತ್ರ ಶಿಕ್ಷೆಯಾಗಿವೆ. ಒಟ್ಟು 3,196 ಪ್ರಕರಣಗಳು ಮುಕ್ತಾಯಗೊಂಡಿವೆ. 2023ರಲ್ಲಿ 3,902 ಪ್ರಕರಣಗಳು ದಾಖಲಾಗಿದ್ದು, 126 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 3,883 ಪ್ರಕರಣಗಳು ಮುಕ್ತಾಯಗೊಂಡಿವೆ. 2024ರಲ್ಲಿ 4,064 ಪ್ರಕರಣಗಳು ದಾಖಲಾಗಿದ್ದು, 36 ಪ್ರಕರಣಗಳಿಗೆ ಶಿಕ್ಷೆಯಾಗಿವೆ. ಒಟ್ಟು 4,026 ಪ್ರಕರಣಗಳು ಮುಕ್ತಾಯಗೊಂಡಿವೆ. 2025ರ ಜುಲೈ ವರೆಗೆ 2,544 ಪ್ರಕರಣಗಳು ದಾಖಲಾಗಿದ್ದು, ಯಾವುದೇ ಪ್ರಕರಣಗಳಲ್ಲಿ ಶಿಕ್ಷೆಯಾಗಿಲ್ಲ. 1,928 ಪ್ರಕರಣಗಳು ಮುಕ್ತಾಯಗೊಂಡಿವೆ. 2024-25ರಲ್ಲಿ ಪೊಕ್ಸೊ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.
2022ರಲ್ಲಿ ಬೆಂಗಳೂರು ನಗರದಲ್ಲಿ 501, ಬೆಂಗಳೂರು ಜಿಲ್ಲೆಯಲ್ಲಿ 86, ಬೆಂಗಳೂರು ದಕ್ಷಿಣದಲ್ಲಿ 86 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಬೆಂಗಳೂರು ನಗರದಲ್ಲಿ 627, ಬೆಂಗಳೂರು ಜಿಲ್ಲೆಯಲ್ಲಿ 99, ಬೆಂಗಳೂರು ದಕ್ಷಿಣದಲ್ಲಿ 199 ಪ್ರಕರಣಗಳು ದಾಖಲಾಗಿವೆ. 2025ರ ಜುಲೈವರೆಗೆ ಬೆಂಗಳೂರು ನಗರದಲ್ಲಿ 319, ಬೆಂಗಳೂರು ಜಿಲ್ಲೆಯಲ್ಲಿ 66, ಬೆಂಗಳೂರು ದಕ್ಷಿಣದಲ್ಲಿ 54 ಪ್ರಕರಣಗಳು ದಾಖಲಾಗಿವೆ.
ಪೊಕ್ಸೊ ಪ್ರಕರಣ ತಡೆಯಲು ಸರಕಾರದ ಕ್ರಮ :
‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದ ಮೂಲಕ ಜಾಗೃತಿ, ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಸರಳ ಭಾಷೆಯಲ್ಲಿ ಮಕ್ಕಳಿಗೆ ತಿಳಿಸುವುದು. ಉದ್ಯಾನವನ, ಆಟದ ಮೈದಾನ, ಆಶ್ರಯ ಗೃಹ ಮತ್ತು ಶಾಲೆ ಮತ್ತು ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಬಗ್ಗೆ ಅರಿವು, 1091 ಮಹಿಳಾ, 1098 ಮಕ್ಕಳ ಸಹಾಯವಾಣಿಗಳ ಕಾರ್ಯ ನಿರ್ವಹಣೆ, ಸೇಫ್ ಸಿಟಿ ಯೋಜನೆಯಡಿಯಲ್ಲಿ 7,500 ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಸೇರಿ ಅನೇಕ ಕ್ರಮಗಳನ್ನು ಸರಕಾರ ಮಾಡುತ್ತಿದೆ.
ಈ ಹಿಂದೆ ಮಕ್ಕಳ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಿದ್ದವು. ಆದರೆ, ಅವು ಬೆಳಕಿಗೆ ಬರುತ್ತಿರಲಿಲ್ಲ. ಇತ್ತೀಚೆಗೆ ಪೊಕ್ಸೊ ಪ್ರಕರಣಗಳು ದಾಖಲಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆ, ಮಕ್ಕಳ ಮೇಲೆ ಯಾವುದೇ ದೌರ್ಜನ್ಯಗಳು ನಡೆದಾಗ ಪೋಷಕರು ಪ್ರಕರಣವನ್ನು ದಾಖಲಿಸಬೇಕು. ಅದರಿಂದ ದೌರ್ಜನ್ಯ ಮಾಡಿದವರಿಗೆ ಒಂದು ಪಾಠವಾಗುತ್ತದೆ. ಅದಕ್ಕಿಂತ ಮೊದಲು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಬೇಕು. ಪೊಕ್ಸೊ ಪ್ರಕರಣದ ಕುರಿತು ಜನರಿಗೆ ಭಯ ಮೂಡಬೇಕು. ಒಟ್ಟಿನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಮಾಡಿದವರಿಗೆ ಕಾನೂನು ರೀತಿಯ ಕ್ರಮ ಆಗಬೇಕು.
- ಡಾ.ಕೆ.ಟಿ.ತಿಪ್ಪೇಸ್ವಾಮಿ, ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ