ಮೂರೇ ವರ್ಷಗಳಲ್ಲಿ 9 ಸರಕಾರಿ ಹುದ್ದೆಗಳನ್ನು ಗಿಟ್ಟಿಸಿದ ಸಾಧಕಿ

ಪಲ್ಲವಿ ಹೊಸಮನಿ
ಕಲಬುರಗಿ: ಇಂದಿನ ಸರ್ಧಾತ್ಮಕ ಯುಗದಲ್ಲಿ ಯುವಕರಿಗೆ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಪಡೆದುಕೊಳ್ಳುವುದು ದೊಡ್ಡ ಸವಾಲಾಗಿದೆ. ಸರಕಾರಿ ಹುದ್ದೆಗಳಿಗಂತೂ ಸ್ಪರ್ಧಾಕಾಂಕ್ಷಿಗಳು ಹರಸಾಹಸ ಪಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಯುವತಿಯೊಬ್ಬಳು ಕೇವಲ ಮೂರು ವರ್ಷದಲ್ಲೇ ಬರೋಬ್ಬರಿ 9 ಸರಕಾರಿ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವುದು ಅಚ್ಚರಿಯ ಸಂಗತಿ.
ಅಫ್ಝಲ್ಪುರ ತಾಲೂಕಿನ ದೇವಲ ಗಾಣಗಾಪುರ ನಿವಾಸಿಗಳಾದ ನಾಗೇಶ್ ಹೊಸಮನಿ ಹಾಗೂ ವಿಜಯಲಕ್ಷ್ಮೀ ಎಂಬ ದಂಪತಿ ದ್ವಿತೀಯ ಪುತ್ರಿ ಪಲ್ಲವಿ ಹೊಸಮನಿ ಅವರೇ ಸರಕಾರದ ವಿವಿಧ ಇಲಾಖೆಗಳಲ್ಲಿ 9 ಸರಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡ ಗಟ್ಟಿಗಿತ್ತಿ.
ರಾಯಚೂರಿನಲ್ಲಿ ಬಿ.ಟೆಕ್ ಅಗ್ರಿಕಲ್ಚರ್ ವಿಭಾಗದ ಪದವೀಧರೆಯಾಗಿ ತೇರ್ಗಡೆಯಾದ ಪಲ್ಲವಿ, ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಲಾಸ್ಟ್ ಬೆಂಚ್ ವಿದ್ಯಾರ್ಥಿನಿಯಾಗಿ ಓದು ಮುಗಿಸಿದ್ದರು. ‘ಪದವಿ ಮುಗಿದ ಬಳಿಕ ಯಾವುದೋ ಕೆಲಸಗಳು ಸಿಗುತ್ತವೆ ಎನ್ನುವ ನಿರೀಕ್ಷೆಗಳು ಸಿಗಲಿಲ್ಲ. ಹಾಗಾಗಿ ಕೆಪಿಟಿಸಿಎಲ್ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರ ಸಲಹೆಯ ಮೇರೆಗೆ ತನಗೂ ಸರಕಾರಿ ಹುದ್ದೆ ಪಡೆಯಬೇಕೆಂಬ ಹಂಬಲ ಹುಟ್ಟಿತು. ಅಲ್ಲಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡೇ ಈಗ ಬರೆದ ಎಲ್ಲ ಪರೀಕ್ಷೆಗಳಲ್ಲೂ ನೌಕರಿ ಪಡೆದಿದ್ದೇನೆ’ ಎನ್ನುತ್ತಾರೆ ಪಲ್ಲವಿ.
ಓದಿಗಾಗಿ ಹೆಚ್ಚಿನ ಸಮಯ ನೀಡಿದ್ದಕ್ಕಾಗಿಯೇ ಇಂದು ಇಷ್ಟೊಂದು ಸರಕಾರಿ ನೌಕರಿ ಪಡೆಯಲು ಸಾಧ್ಯವಾಗಿದೆ. ತಂದೆ, ತಾಯಿ ನನ್ನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಧ್ಯಯನ ಮಾಡುತ್ತಿದ್ದಾಗ ಹಲವು ಬಾರಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಮಧ್ಯಮ ವರ್ಗದ ಕುಟುಂಬವಾದರೂ ನಮಗೆ ಕೆಲವೊಂದು ಕಟ್ಟುಪಾಡು, ಸಮಸ್ಯೆಗಳು ಇತ್ತು. ಅವುಗಳನ್ನು ಮೆಟ್ಟಿದ್ದರಿಂದಲೇ ಇಂದು ಸರಕಾರಿ ನೌಕರಿಗಳು ಪಡೆದುಕೊಂಡಿರುವುದಾಗಿ ಪಲ್ಲವಿ ವಿವರಿಸುತ್ತಾರೆ.
ಪಲ್ಲವಿ ಅವರು ಈಗಾಗಲೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ ಐಡಿಎಲ್) ಇಲಾಖೆ ಕಲಬುರಗಿ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಆಯ್ಕೆಯಾಗಿರುವ ವಾಣಿಜ್ಯ ತೆರಿಗೆ ಇನ್ಸ್ಪೆಕ್ಟರ್ (ಸಿಟಿಐ) ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸಲಿದ್ದಾರೆ.
9 ಹುದ್ದೆಗಳು: 2023ರಲ್ಲಿ ಕೆಪಿಟಿಸಿಎಲ್ ನಲ್ಲಿ ದ್ವಿತೀಯ ದರ್ಜೆ ಸಹಾಯಕ, ಡಿಸಿಸಿ ಬ್ಯಾಂಕ್ ನಲ್ಲಿ ಪ್ರಥಮ ದರ್ಜೆ ಸಹಾಯಕ, ಲೇಬರ್ ಇನ್ಸ್ಪೆಕ್ಟರ್, ಸ್ಟಾಟಿಸ್ಟಿಕ್ಸ್ ಮತ್ತು ಆರ್ಥಿಕ ಇಲಾಖೆಯಲ್ಲಿ ಡಾಟಾ ಎಂಟ್ರಿ, ಕೆಆರ್ಐಡಿಎಲ್ನಲ್ಲಿ ಪ್ರಥಮ ದರ್ಜೆ ಸಹಾಯಕ, ಕಾರ್ಮಿಕ ಇಲಾಖೆಯಲ್ಲಿ ಫಿಲ್ಡ್ ಇನ್ಸ್ಪೆಪೆಕ್ಟರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ, 2024 ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ನೇಮಕ ಹಾಗೂ ಸದ್ಯ 2025ನೇ ಸಾಲಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗೆ ಆಯ್ಕೆಯಾಗುವ ಮೂಲಕ ‘ಹುದ್ದೆಗಳ ರಾಣಿ’ಯಾಗಿ ಪಲ್ಲವಿ ಹೊಸಮನಿ ಗಮನ ಸೆಳೆದಿದ್ದಾರೆ.
ಸರಕಾರಿ ಹುದ್ದೆಗಳನ್ನು ಪಡೆಯಲು ದಿನಪೂರ್ತಿ ಓದುವುದಕ್ಕಿಂತ ಹೆಚ್ಚಾಗಿ ಬೆಳಗಿನ ಜಾವದಲ್ಲಿ ಎದ್ದು ನಾಲ್ಕೈದು ಗಂಟೆ ಓದುವುದನ್ನು ರೂಢಿಸಿಕೊಳ್ಳಬೇಕು. ಮುಂಜಾನೆಯ ಅಧ್ಯಯನವು ದಿನಪೂರ್ತಿ ಓದುವುದಕ್ಕೆ ಸಮ. ಕೋಚಿಂಗ್ ಕೇಂದ್ರಗಳು ನಮಗೆ ದಾರಿ ಮಾಡಿಕೊಡುತ್ತವೆ ಅಷ್ಟೇ; ಅವುಗಳಿಂದ ನಮಗೆ ಉದ್ಯೋಗ ಸಿಗುವುದಿಲ್ಲ. ನಾವು ಕಠಿಣ ಶ್ರಮದಿಂದ ಅಧ್ಯಯನ ಮಾಡಿದಾಗ ಮಾತ್ರ ಯಶಸ್ಸು ಸಿಗುವುದು ನಿಶ್ಚಿತ. ಸ್ಪರ್ಧಾಕಾಂಕ್ಷಿಗಳು ಹೆಚ್ಚಾಗಿ ಸ್ವಯಂ ಅಧ್ಯಯನಕ್ಕೆ ಒತ್ತು ನೀಡಬೇಕು.
-ಪಲ್ಲವಿ ಹೊಸಮನಿ
ಮಗಳು 9 ವಿವಿಧ ಇಲಾಖೆಗಳ ಅಡಿಯಲ್ಲಿ ಆಯ್ಕೆಯಾಗಿರುವುದು ಸಂತಸ ತಂದಿದೆ. ವಿದ್ಯಾರ್ಥಿ ದಿಸೆಯಿಂದ ಅವಳಿಗೆ ಯಾವುದೇ ಕೊರತೆಯಾಗದಂತೆ ಶಿಕ್ಷಣ ಕೊಡಿಸಿದ್ದೇನೆ. ಕಷ್ಟ ಪಟ್ಟು ಓದಿಸಿದಕ್ಕೂ ಸಾರ್ಥಕವಾಗಿದೆ.
-ನಾಗೇಶ ಹೊಸಮನಿ (ಪಲ್ಲವಿ ತಂದೆ)