ಪಿಎಂಎವೈ ವಸತಿ ಯೋಜನೆಯಲ್ಲಿ 2 ಕೋಟಿ ರೂ. ದುರುಪಯೋಗ: ಆರೋಪ

ಹಾಸನ: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ 190ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೀಮಿತವಾದ 2 ಕೋಟಿ ರೂ.ಗಿಂತಲೂ ಹೆಚ್ಚಿನ ಸರಕಾರಿ ಅನುದಾನವನ್ನು ಜಿಲ್ಲಾ ವಸತಿ ನೋಡಲ್ ಅಧಿಕಾರಿ ಕೆ.ಎಂ.ರಾಜೇಶ್ ದುರುಪಯೋಗಪಡಿಸಿಕೊಂಡಿರುವ ಹಗರಣ ಬೆಳಕಿಗೆ ಬಂದಿದೆ.
ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ರಾಜೇಶ್ 2022ರವರೆಗೆ ಸಕಲೇಶಪುರ ತಾಲೂಕು ಪಂಚಾಯತ್‌ನ ವಸತಿ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಜಿಲ್ಲಾ ವಸತಿ ನೋಡಲ್ ಅಧಿಕಾರಿಯಾಗಿ (ಹೆಚ್ಚುವರಿ ಜವಾಬ್ದಾರಿ) ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ನ ಲಾಗಿನ್‌ಗಳನ್ನು ದುರ್ಬಳಕೆ ಮಾಡಿಕೊಂಡು ಅನುದಾನವನ್ನು ದುರ್ಬಳಕೆ ಮಾಡಿರುವ ಆರೋಪವಿದೆ.
ಲಾಗಿನ್ ದುರ್ಬಳಕೆ ಮತ್ತು ನಕಲಿ ದಾಖಲೆ: ರಾಜೇಶ್ ಎಂಐಎಸ್ ಲಾಗಿನ್‌ಗಳನ್ನು ದುರುಪಯೋಗ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮನೆ ನಿರ್ಮಾಣದ ಪ್ರಗತಿಯ ಫೋಟೊಗಳನ್ನು ತಿರುಚಿ, ಸುಳ್ಳು ವರದಿಗಳ ಮೂಲಕ ಅನುದಾನ ಬಿಡುಗಡೆ ಮಾಡಿಸಿದ್ದಾರೆ.ತಾಲೂಕಿನ ಅರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗಬೇಕಿದ್ದ ಅನುದಾನವನ್ನು ಹಾಸನ ತಾಲೂಕಿನ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಫಲಾನುಭವಿಗಳ ಹೆಸರು, ಗ್ರಾಮ, ಮತ್ತು ಮಂಜೂರಾತಿ ಸಂಖ್ಯೆ ಸಕಲೇಶಪುರಕ್ಕೆ ಸಂಬಂಧಿಸಿದ್ದರೂ, ಬ್ಯಾಂಕ್ ಖಾತೆ ವಿವರಗಳು (ಶಾಖೆ, ಐಎಫ್‌ಎಸ್‌ಸಿ ಕೋಡ್, ಖಾತೆ ಸಂಖ್ಯೆ) ಬದಲಾವಣೆ ಮಾಡಲಾಗಿದೆ.
2025ರ ಫೆಬ್ರವರಿ 7ರಂದು ಸರಕಾರವು ಹೊಸ ಲಾಗಿನ್ ವ್ಯವಸ್ಥೆಗೆ ಆದೇಶ ನೀಡಿತ್ತು. ರಾಜೇಶ್, ಮಾಸ್ಟರ್ ಟ್ರೈನರ್ ಆಗಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ವಸತಿ ನೋಡಲ್ ಅಧಿಕಾರಿಗಳು, ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಬೇಕಿತ್ತು. ಆದರೆ, ಉದ್ದೇಶಪೂರ್ವಕವಾಗಿ ಯಾರಿಗೂ ತರಬೇತಿ ನೀಡದೆ, ಲಾಗಿನ್‌ನಲ್ಲಿ ತನ್ನ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ನವೂದಿಸಿ, ಮಾಹಿತಿಯು ಮೇಲಾಧಿಕಾರಿಗಳಿಗೆ ತಲುಪದಂತೆ ಮಾಡಿದ್ದಾರೆ.
ಯೋಜನೆಯಡಿ, ಗ್ರಾಮ ಪಂಚಾಯತ್ ಅಧಿಕಾರಿಗಳು ತೆಗೆದ ಫೋಟೊಗಳನ್ನು ತಾಲೂಕು ವಸತಿ ನೋಡಲ್ ಅಧಿಕಾರಿ ಪರಿಶೀಲಿಸಿ, ಲಿಖಿತವಾಗಿ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಬೇಕು. ಇದನ್ನು ಜಿಲ್ಲಾ ಪಂಚಾಯತ್ ಲಾಗಿನ್‌ಗೆ ಕಳುಹಿಸಬೇಕು. ರಾಜೇಶ್ ಈ ಪ್ರಕ್ರಿಯೆಯನ್ನು ಬಿಟ್ಟು, ದುರುದ್ದೇಶದಿಂದ ಲಾಗಿನ್‌ಗಳನ್ನು ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪವಿದೆ.
ಸಕಲೇಶಪುರ ತಾಲೂಕಿನ ಫಲಾನುಭವಿಗಳು ಹಣ ಜಮೆಯಾಗದಿರುವ ಬಗ್ಗೆ ತಾಲೂಕು ಪಂಚಾಯತ್‌ಗೆ ದೂರು ನೀಡಿದ್ದರು. ಆನ್‌ಲೈನ್ ಪರಿಶೀಲನೆಯಲ್ಲಿ ಅಕ್ರಮ ಬಯಲಾಯಿತು. ಆಗಸ್ಟ್ 7, 2025ರಂದು ಸಕಲೇಶಪುರ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಜಿ.ಡಿ. ಗಂಗಾಧರನ್ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಅವರಿಗೆ ಈ ಬಗ್ಗೆ ಲಿಖಿತ ವರದಿ ಸಲ್ಲಿಸಿದರು. ಅವರ ಸೂಚನೆಯಂತೆ, ರಾಜೇಶ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಿಎಂಎವೈ ವಸತಿ ಯೋಜನೆಯ 2 ಕೋಟಿ ರೂ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಪಂ ಇಒ ಮತ್ತು ಜಿಪಂ ಮುಖ್ಯ ಲೆಕ್ಕಾಧಿಕಾರಿಗಳ ಕರ್ತವ್ಯ ಲೋಪವೇ ಕಾರಣ. ಇವರ ವಿರುದ್ದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದು ದುರಾದೃಷ್ಟಕರ. ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡಲಾಗುವುದು.
-ಲಕ್ಷ್ಮೀಕಾಂತ್, ಹಿರಿಯ ವಕೀಲ, ಹಾಸನ
ಪಿಎಂಎವೈ ವಸತಿ ಯೋಜನೆಯ ವಂಚನೆ ಪ್ರಕರಣ ತನಿಖೆಯ ಹಂತದಲ್ಲಿದೆ. ಆರೋಪಿ ಯಾರ ಗಮನಕ್ಕೂ ಬಾರದ ಹಾಗೆ ಯೋಜನೆಯ ಗೌಪ್ಯವಾಗಿ ಇಟ್ಟು, ಹಣ ದುರ್ಬಳಕೆ ಮಾಡಿದ್ದಾನೆ, ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿದೆ. ಈ ಹಗರಣದ ಬಗ್ಗೆ ಬಹಳಷ್ಟು ಸಾಕ್ಷಿ ಇವೆ.
-ಗಂಗಾಧರ, ತಾಪಂ ಇಒ, ಸಕಲೇಶಪುರ
ಪ್ರಮುಖಾಂಶಗಳು
ಆರೋಪಿತ: ಕೆ.ಎಂ. ರಾಜೇಶ್, ಜಿಲ್ಲಾ ವಸತಿ ನೋಡಲ್ ಅಧಿಕಾರಿ.
ಯೋಜನೆ: ಪಿಎಂಎವೈ (ಪ್ರಧಾನ ಮಂತ್ರಿ ಆವಾಸ್ ಯೋಜನೆ).
ಬಾಧಿತರು: ಸಕಲೇಶಪುರ ತಾಲೂಕಿನ 190ಕ್ಕೂ ಹೆಚ್ಚು ಫಲಾನುಭವಿಗಳು.
ಅನುದಾನ: ಸುಮಾರು 2 ಕೋಟಿ ರೂಪಾಯಿ
ಕೃತ್ಯದ ವಿಧಾನ: ಲಾಗಿನ್ ದುರ್ಬಳಕೆ, ನಕಲಿ ಫೋಟೊ ಅಪ್‌ಲೋಡ್, ಹಣ ವರ್ಗಾವಣೆ.
ಈ ಅಕ್ರಮವು ಬಡ ಕುಟುಂಬಗಳಿಗೆ ಸರಕಾರದ ವಸತಿ ಸೌಲಭ್ಯವನ್ನು ತಲುಪದಂತೆ ಮಾಡಿದೆ. ತನಿಖೆಯಿಂದ ಹೆಚ್ಚಿನ ವಿವರಗಳು ತಿಳಿದುಬರಲಿವೆ.