ವಕ್ಫ್ ಬಗ್ಗೆ ಸುಪ್ರೀಂ ಮಧ್ಯಂತರ ತೀರ್ಪು | ಕೋಮುವಾದಿ ನಿಯಮಗಳಿಗೆ ಮನ್ನಣೆ - ಜಾರಿಗೆ ಮಾತ್ರ ಕೆಲವು ಷರತ್ತುಗಳು!

Photo credit: PTI
ಮೋದಿ ಸರ್ಕಾರ ಜಾರಿ ಮಾಡಿದ ಹಿಂದುತ್ವವಾದಿ 'ವಕ್ಫ್ (ತಿದ್ದುಪಡಿ) ಕಾಯಿದೆ-2025ʼಯನ್ನು ರದ್ದು ಮಾಡಬೇಕೆಂದು ಕೋರಿದ್ದ ದಾವೆಗಳ ಬಗ್ಗೆ (WP (C) 276/2025) ಸುಪ್ರೀಂನ ಮುಖ್ಯ ನ್ಯಾಯಾಧೀಶರಾದ ಗವಾಯಿ ಮತ್ತು ನ್ಯಾ. ಮಸಿಹ ಅವರ ದ್ವಿಸದಸ್ಯ ಪೀಠ ಮಧ್ಯಂತರ ತೀರ್ಪು ನೀಡಿದೆ. ಆದೇಶದ ಬಗ್ಗೆ ವರದಿ ಮಾಡಿರುವ Live Law ಮತ್ತು Bar And Bench ಲಾ ವೆಬ್ ಪತ್ರಿಕೆಗಳು ಹಾಗೂ ಮುಖ್ಯಧಾರೆ ಮಾಧ್ಯಮಗಳು "ಕಾಯಿದೆಯ ಪ್ರಮುಖ ಅಂಶಗಳಿಗೆ ತಡೆಯಾಜ್ಞೆ" ಎಂಬ ಶೀರ್ಷಿಕೆಯಲ್ಲಿ ಮಾಹಿತಿ ನೀಡುತ್ತಿವೆ.
ಆದರೆ ಮಧ್ಯಂತರ ತೀರ್ಪಿನ ಬಗ್ಗೆ ಕಾನೂನು ವೆಬ್ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಕೂಲಂಕಷವಾಗಿ ಓದಿ ನೋಡಿದರೆ ಸುಪ್ರೀಂ ಪೀಠವು ಮೋದಿ ಸರ್ಕಾರದ ತಿದ್ದುಪಡಿಗಳಲ್ಲಿ ಅತ್ಯಂತ ಸುಸ್ಪಷ್ಟವಾಗಿದ್ದ ನಾಲ್ಕು ಪ್ರಮುಖ ಸಂವಿಧಾನ ಬಾಹಿರ ಹಿಂದುತ್ವವಾದಿ ಅಂಶಗಳನ್ನು ಸಂವಿಧಾನ ಬಾಹಿರ ಎಂದು ಪರಿಗಣಿಸಿಲ್ಲ ವೆಂಬ ನಿರಾಶಾದಾಯಕ ಅಂಶ ಎದ್ದು ಕಾಣುತ್ತದೆ.
1."ಮುಸ್ಲಿಂ ವಕ್ಫ್ ಗಳಲ್ಲಿ ಮುಸ್ಲಿಮೇತರರ ಸದಸ್ಯತ್ವಕ್ಕೆ ಸುಪ್ರೀಂ ಒಪ್ಪಿಗೆ- ಅತ್ಯಂತ ತಾರತಮ್ಯಕಾರಿ, ಅತ್ಯಂತ ಅಪಾಯಕಾರಿ:
ಸುಪ್ರೀಂನ ಮಧ್ಯಂತರ ಆದೇಶದ ಅತ್ಯಂತ ಅಪಾಯಕಾರಿ ಅಂಶವೆಂದರೆ ಮೋದಿ ಸರ್ಕಾರ ಅತ್ಯಂತ ಕೋಮುವಾದಿ ಉದ್ದೇಶದಿಂದ ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯದ ವಕ್ಫ್ ಬೋರ್ಡು ಗಳಲ್ಲಿ ಮುಸ್ಲಿಮೇತರ ಸದಸ್ಯರು ಕಡ್ಡಾಯವಾಗಿ ಇರಬೇಕೆಂದು ಮಾಡಿದ್ದ ನಿಯಮಗಳ ಸಾಂವಿಧಾನಿಕತೆಯನ್ನೇ ಪ್ರಶ್ನಿಸದೆ ಸುಪ್ರೀಂ ಒಪ್ಪಿಕೊಂಡಿರುವುದು.
ಈ ವರೆಗಿನ ಯಾವುದೇ ವಕ್ಫ್ ಕಾಯಿದೆಗಳಲ್ಲಿ ಅಥವಾ ಇತರ ಧಾರ್ಮಿಕ ಸಂಸ್ಥೆಗಳ ನಿಯಂತ್ರಣಾ ಕಾಯಿದೆಗಳಲ್ಲಿ ಇಂಥ ಅಂಶಗಳೇ ಇರಲಿಲ್ಲ. ಈಗಲೂ ತಿರುಪತಿ, ಕಾಶಿ ವಿಶ್ವನಾಥದಂತಹ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಹಿಂದೂಯೇತರರು ಇರಬಾರದೆಂಬ ಕಾಯಿದೆ ಇದೆ. ಹಾಗೆಯೇ ಕ್ರಿಶ್ಚಿಯನ್ ಮತ್ತು ಸಿಖ್ ಧಾರ್ಮಿಕ ನಿಯಂತ್ರಣ ಸಂಸ್ಥೆಗಳಲ್ಲೂ ಆಯಾ ಧಾರ್ಮಿಕರೇ ಇದ್ದಾರೆ. ಸಂವಿಧಾನದ ಆರ್ಟಿಕಲ್ 26 ತಮ್ಮ ಧಾರ್ಮಿಕ ಸಂಸ್ಥೆಗಳನ್ನು ತಾವೇ ನಿರ್ವಹಣೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಅದನ್ನು ನಿರಾಕರಿಸುವ ಕಾನೂನು/ಕಾಯಿದೆ ಸಂವಿಧಾನ ಬಾಹಿರ. ಹೀಗಿರುವಾಗ ಮುಸ್ಲಿಮರ ವಕ್ಫ್ ನಿಯಂತ್ರಣಗಳಲ್ಲಿ ಮಾತ್ರ ಕಡ್ಡಾಯವಾಗಿ ಮುಸ್ಲಿಮೇತರರು ಇರಬೇಕೆಂದು ಮೋದಿ ಸರ್ಕಾರ ನಿಯಮ ಸೇರಿಸಿದ್ದೆ ಮುಸ್ಲಿಂ ಧಾರ್ಮಿಕ ವ್ಯವಸ್ಥೆಯನ್ನು ಹಿಂದುತ್ವದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ.
ಮೇಲ್ನೋಟಕ್ಕೆ ಸಂವಿಧಾನ ಬಾಹಿರವೆಂದು ಸ್ಪಷ್ಟವಾಗಿರುವ ಈ ನಿಯಮವನ್ನು ಸಾರಾಸಗಟು ರದ್ದು ಮಾಡುವ ಬದಲು ಸುಪ್ರೀಂ ಮಧ್ಯಂತರ ಆದೇಶ 20 ಸದಸ್ಯರ ಕೇಂದ್ರೀಯ ವಕ್ಫ್ ಕೌನ್ಸಿಲ್ ನಲ್ಲಿ 4 ಕ್ಕಿಂತ ಹೆಚ್ಚು ಮುಸ್ಲಿಮೇತರರು ಇರಬಾರದೆಂದೂ, ಹಾಗೆಯೇ ರಾಜ್ಯದ 7 ವಕ್ಫ್ ಬೋರ್ಡ್ ಸದಸ್ಯರಲ್ಲಿ ಮುಸ್ಲಿಮೇತತರು ಮೂವರಿಗಿಂತ ಹೆಚ್ಚಿರಬಾರದೆಂದು ಆದೇಶಿಸಿದೆ.
ಮೋದಿ ಸರ್ಕಾರ ಜಾರಿಗೆ ತಂದಿದ್ದ ಕಾಯಿದೆಯಲ್ಲಿ 22 ಜನರ ವಕ್ಫ ಕೌನ್ಸಿಲ್ ನಲ್ಲಿ 10 ಸದಸ್ಯರು ಮಾತ್ರ ಕಡ್ಡಾಯವಾಗಿ ಮುಸ್ಲಿಮರಾಗಿರುತ್ತಿದ್ದರು. ಇನ್ನುಳಿದ 12 ಸದಸ್ಯರು ಮುಸ್ಲಿಮೇತರಾಗಿರುವ ಅವಕಾಶವನ್ನು ಈ ಕಾಯಿದೆ ಒದಗಿಸುತ್ತಿತ್ತು. . ಅಂದರೆ ವಕ್ಫ್ ಕೌನ್ಸಿಲ್ನಲ್ಲಿ ಮುಸ್ಲಿಮರೇ ಅಲ್ಪಸಂಖ್ಯಾತರು ಆಗುತ್ತಿದ್ದರು.
ಆದರೆ 2025 ರ ಕಾಯಿದೆ ಸೆಕ್ಷನ್ ಗೆ ತಿದ್ದುಪಡಿ ತಂದಿದೆ. ಹೊಸ ಕಾಯಿದೆಯ ಪ್ರಕಾರ ಅದೇ ರೀತಿ ಮೋದಿ ಕಾಯಿದೆಯ ಪ್ರಕಾರ ರಾಜ್ಯ ವಕ್ಫ್ ಬೋರ್ಡಿನ 11 ಜನ ಬೋರ್ಡ್ ಸದಸ್ಯರಲ್ಲಿ ಕಡ್ಡಾಯವಾಗಿ 4 ಜನರು ಮಾತ್ರ ಮುಸ್ಲಿಮರಿರುತ್ತಿದ್ದರು. ಉಳಿದ ಏಳು ಸದಸ್ಯರು ಸರ್ಕಾರದಿಂದ ನೇಮಕವಾಗುವ ಸದಸ್ಯರು ಮುಸ್ಲಿಮೇತರರಾಗುವ ಸಾಧ್ಯತೆ ಇತ್ತು.
ಹೀಗೆ ವಕ್ಫ್ (ತಿದ್ದುಪಡಿ) ಕಾಯಿದೆ-2025 ವಕ್ಫ್ ಕೌನ್ಸಿಲ್ ಮತ್ತು ವಕ್ಫ್ ಬೋರ್ಡ್ ಎರಡರಲ್ಲೂ ಮುಸ್ಲಿಮರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡುವ ಹುನ್ನಾರವನ್ನು ಮಾಡಿತ್ತು. ಇದೀಗ ಸುಪ್ರೀಂನ ಮಧ್ಯಂತರ ಆದೇಶ ವಕ್ಫ್ ಬೋರ್ಡ್ ಮತ್ತು ಕೌನ್ಸಿಲ್ ಗಳಲ್ಲಿ ಮುಸ್ಲಿಮರೇ ಮೈನಾರಿಟಿಗಳಾಗಿ , ಮುಸ್ಲಿಮೇತರ ರು ಮೆಜಾರಿಟಿಯಾಗಬಹುದಿದ್ದ ಅವಕಾಶಗಳನ್ನು ತಡೆದಿದೆ.
ಆದರೆ ಅದೇ ಸಮಯದಲ್ಲಿ ಒಂದು ಮುಸ್ಲಿಂ ಧಾರ್ಮಿಕ ಸಂಸ್ಥೆಯಾದ ವಕ್ಫ್ ಬೋರ್ಡ್ ಮತ್ತು ವಕ್ಫ್ ಕೌನ್ಸಿಲ್ ಗಳಲ್ಲಿ ಮುಸ್ಲಿಮೇತರರು ಸದಸ್ಯರಾಗಬಹುದೆಂಬ ಸಂವಿಧಾನ ಬಾಹಿರ ನಿಯಮಕ್ಕೆ ಸಮ್ಮತಿಯನ್ನು ನೀಡಿದೆ.
ಹಿಂದೂ, ಮುಸ್ಲಿಂ, ಕ್ರಿಸ್ತ ಇನ್ನಿತರ ಎಲ್ಲಾ ಧರ್ಮೀಯರು ಸಂವಿಧಾನದ ಆರ್ಟಿಕಲ್ 26 ರ ಅಡಿಯಲ್ಲೇ ಧಾರ್ಮಿಕ ಹಾಗೂ ದತ್ತಿ ದಾನ ಸಂಸ್ಥೆಗಳನ್ನು ಕಟ್ಟಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಇಂಥಾ ಧಾರ್ಮಿಕ ಸಂಸ್ಥೆಗಳ ಆಡಳಿತ ಸಂಸ್ಥೆಗಳಲ್ಲಿ ಆಯಾ ಧರ್ಮೀಯರೇ ಇರುತ್ತಾರೆ. ಸರ್ಕಾರದ ಪ್ರತಿನಿಧಿಗಳು ಇರುವ ಸಂದರ್ಭದಲ್ಲಿ ಅಂಥಾ ಸರ್ಕಾರಿ ಅಧಿಕಾರಿ ಅಥವಾ ಮಂತ್ರಿ ಆಯಾ ಧರ್ಮೀಯರೇ ಆಗಿರುತ್ತಿದ್ದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ ಕಾಶಿ ವಿಶ್ವನಾಥ ದೇವಸ್ಥಾನ, ಅಯೋಧ್ಯೆ ರಾಮಮಂದಿರ, ಇತ್ತೀಚೆಗೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟುಗಳಲ್ಲೂ ಸರ್ಕಾರಿ ಅಧಿಕಾರಿ ಮತ್ತು ಕರ್ಮಾಚಾರಿಗಳೂ ಹಿಂದೂಗಳೇ ಆಗಿರಬೇಕೆಂದು ಕಾನೂನು ಮಾಡಿವೆ.
ಹೀಗಿರುವಾಗ ಮೋದಿ ಸರ್ಕಾರ ವಕ್ಫ್ ಸಂಸ್ಥೆಗಳಿಗೆ ಮಾತ್ರ ಮಾಡಿರುವ ಸಂವಿಧಾನ ವಿರೋಧಿ ಮೌಲಿಕ ತಾರತಮ್ಯವನ್ನು ಸುಪ್ರೀಂ ಏಕೆ ಪರಿಗಣಿಸಲಿಲ್ಲ? ಹಾಗೆಯೇ ಕೌನ್ಸಿಲ್ ನ CEO ಮುಸ್ಲಿಮೇತರರೂ ಆಗಿರಬಹುದೆಂಬ ಅವಕಾಶವನ್ನು ರದ್ದು ಮಾಡಿಲ್ಲ, ಏಕೆ?
ಬದಲಿಗೆ ಸಾಧ್ಯವಾದಷ್ಟು ಮುಸ್ಲಿಮರೇ ಇರುವಂತೆ ನೋಡಿಕೊಳ್ಳಬೇಕೆಂದು ʼಸಲಹೆʼ ನೀಡಿದೆ. ಆದೇಶವನ್ನೇ ಜಾರಿಗೆ ತರದ ಸರ್ಕಾರಗಳು, ಸಲಹೆಗಳನ್ನು ಒಪ್ಪುವುದೇ?
ಆ ಮೂಲಕ ಸುಪ್ರೀಂ ತನ್ನ ಮಧ್ಯಂತರ ಆದೇಶದಲ್ಲಿ ಮೋದಿ ಸರ್ಕಾರದ ಹಿಂದುತ್ವವಾದಿ ತಿದ್ದುಪಡಿಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟು ಬಿಟ್ಟಿದೆ. ಇವು ಅತ್ಯಂತ ಅಪಾಯಕಾರಿಯಾಗಿದೆ.
2. ವಕ್ಫ್ ಮಾಡುವ ವಾಕೀಫರ ಮುಸ್ಲಿಂತನ ಸಾಬೀತು ಮಾಡಬೇಕೆಂಬ ಸಂವಿಧಾನ ಬಾಹಿರ ನಿಯಮ ರದ್ದಾಗಿಲ್ಲ. ಷರತ್ತು ಬದ್ಧವಾಗಿ ಜಾರಿಯಾಗಲಿದೆ!
ಮೋದಿ ಸರ್ಕಾರದ ವಕ್ಫ್ ತಿದ್ದುಪಡಿ ಕಾಯಿದೆಯಲ್ಲಿ ವಕ್ಫ್ ಅನ್ನು ಮುಸ್ಲಿಮರೇ ಮಾಡಬೇಕು ಮತ್ತು ಆ ಮುಸ್ಲಿಂ ಇಸ್ಲಾಮ್ ಅನ್ನು ಐದು ವರ್ಷಗಳ ಆಚರಿಸುತ್ತಿದ್ದರು ಎಂದು ಸಾಬೀತು ಮಾಡಬೇಕು ಎಂಬ ಹಾಸ್ಯಾಸ್ಪದವಾದ ಮತ್ತು ಅಪಾಯಕಾರಿ ಅಂಶಗಳಿದ್ದವು.
ಈ ಅಂಶಗಳು ಸಂವಿಧಾನ ಬಾಹಿರ. ಏಕೆಂದರೆ ವಕ್ಫ್ ಅನ್ನು ಭಾರತದ ಯಾವುದೇ ಧರ್ಮಾನುಯಾಯಿ ಮಾಡಬಹುದು. ಅದೇ ರೀತಿ ಇತರ ಧರ್ಮಗಳ ಅನುಸರಣೆಗಾಗಿಯೂ ದತ್ತಿ- ಧರ್ಮವನ್ನು ಯಾರು ಬೇಕಾದರೂ ಮಾಡಬಹುದು. ಹೀಗಿರುವಾಗ ವಕ್ಫ್ ಅನ್ನು ಮಾತ್ರ ಮುಸ್ಲಿಮರೇ ಮಾಡಬೇಕು ಎನ್ನುವ ನಿಯಮವೇ ಸಂವಿಧಾನದ ಆರ್ಟಿಕಲ್ 15 ರ ಪ್ರಕಾರ ಸರ್ಕಾರ ಮಾಡುವ ಧಾರ್ಮಿಕ ತಾರತಮ್ಯ. ಹಾಗೆಯೇ ತನ್ನ ಆಸ್ತಿಯನ್ನು ಹೇಗೆ ಬೇಕಾದರೂ ಬಳಸಬಹುದು ಎಂಬ ಅಧಿಕಾರವನ್ನು ಸಂವಿಧಾನದ ಆರ್ಟಿಕಲ್ 300 ಕೊಡುತ್ತದೆ. ಆದರೆ ಮುಸ್ಲಿಮಲ್ಲದ ವ್ಯಕ್ತಿ ತನ್ನ ಆಸ್ತಿಯನ್ನು ಹೇಗೆ ಬೇಕಾದರೂ ಬಳಸಬಹುದು ಆದರೆ ವಕ್ಫ್ ಮಾತ್ರ ಮಾಡಬಾರದು ಎಂಬ ನಿಯಮ ಮುಸ್ಲಿಮೇತಯರ ಭಾರತೀಯರ ಹಕ್ಕುಗಳನ್ನೂ ಕೂಡ ಉಲ್ಲಂಘಿತ್ತದೆ. ಹೀಗಾಗಿ ಹಕ್ಕುಗಳ ರಕ್ಷಣೆ ಮಾಡಬೇಕಿರುವ ಸುಪ್ರೀಂ ಕೋರ್ಟ್ ಕಾಯಿದೆಯ ಈ ಅಂಶವನ್ನೇ ಸಂವಿಧಾನ ಬಾಹಿರ ಎಂದು ರದ್ದು ಮಾಡಬೇಕಿತ್ತು.
ಆದರೆ ಸುಪ್ರೀಂ ಕೋರ್ಟು ಕಾಯಿದೆಯ ಈ ಅಂಶದ ಅಸಾಂವಿಧಾನಿಕತೆಯನ್ನು ಪರಿಗಣನೆಗೆ ತೆಗೆದುಕೊಂಡಿದಿಯೇ? ಇಲ್ಲ. ಬದಲಿಗೆ ಐದು ವರ್ಷಗಳ ಕಾಲ ಇಸ್ಲಾಮ್ ಅನುಸರಣೆಯನ್ನು ಮಾಡಿರಬೇಕು ಎಂಬ ಅಂಶಕ್ಕೆ ಮಾತ್ತ್ರ ತಡೆ ವಿಧಿಸಿದೆ. ಅದೂ ಕೂಡ ಆ ನಿಯಮ ಸಂವಿಧಾನ ಬಾಹಿರ ಎಂದಲ್ಲ. ಬದಲಿಗೆ ಇಸ್ಲಾಮ್ ಅನುಸರಣೆಯನ್ನು ಮಾಡಿದ್ದಾರೋ ಇಲ್ಲವೋ ಎನ್ನುವುದರ ಬಗ್ಗೆ ರಾಜ್ಯ ಸರ್ಕಾರಗಳು ನಿಯಮವನ್ನು ರಚಿಸುವ ತನಕ ಮಾತ್ರ ಅದನ್ನು ತಡೆಹಿಡಿಯಲಾಗಿದೆ. ಅಂತಹ ನಿಯಮಗಳು ಇಲ್ಲದಿರುವಾಗ ಸರ್ಕಾರಗಳು ಈ ಅಶವನ್ನು ಬೇಕಾಬಿಟ್ಟಿ ಬಳಸಬಹುದು ಎಂಬ ಕಾಳಜಿಯಿಂದ ನಿಯಮ ರಚಿಸುವವರೆಗೆ ತಡೆಯಾಜ್ಞೆ ವಿಧಿಸಲಾಗಿದೆ.
ಅಷ್ಟರ ಮಟ್ಟಿಗೆ ಅದು ಸರಿ. ಆದರೆ ರಾಜ್ಯ ಸರ್ಕಾರಗಳು ಅದರ ಬಗ್ಗೆ ನಿಯಮ ರಚಿಸಿದ ನಂತರ ಈ ಕಾನೂನು ಜಾರಿಯಾಗುತ್ತದೆ.
ಅತ್ಯಂತ ಮೂಲಭೂತವಾಗಿ ಯಾವುದು ಧಾರ್ಮಿಕ ಅನುಸರಣೆ ಮತ್ತು ಯಾವುದು ಅಲ್ಲ ಎಂಬ ತೀರ್ಮಾನ ಮತ್ತು ಅದರ ಉಸ್ತುವಾರಿಯನ್ನು ಸರ್ಕಾರ ಮಾಡುವುದೇ ಸಂವಿಧಾನದ ಆರ್ಟಿಕಲ್ 19 ಮತ್ತು 26 ರ ಘೋರ ಉಲ್ಲಂಘನೆ. ಹೀಗಾಗಿ ಸುಪ್ರೀಂ ರಾಜ್ಯ ಸರ್ಕಾರ ಇದರ ಬಗ್ಗೆ ಕಾನೂನು ಮಾಡಬಹುದು ಎಂಬ ಪರವಾನಗಿಯನ್ನು ನೀಡಿ ಸರ್ಕಾರಕ್ಕೆ ಮುಸ್ಲಿಮರ ಧಾರ್ಮಿಕ ಒಳ ವಿಷಯಗಳಲ್ಲಿ ಮೂಗು ತೋರಿಸುವ ಅವಕಾಶ ನೀಡಿದೆ. ಇದು ಅತ್ಯಂತ ಆತಂಕಕಾರಿ.
3. ವಕ್ಫ್ ರಿಜಿಸ್ಟ್ರೇಷನ್ ಗೆ ಮೋದಿ ಸರ್ಕಾರ ತಂದಿರುವ ಸನಾತನ ಷರತ್ತುಗಳ ಬಗ್ಗೆ ಏಕೆ ತಡೆಯಿಲ್ಲ?
ಇದಲ್ಲದೆ ವಕ್ಫ್ ರಿಜಿಸ್ಟ್ರೇಷನ್ 1995 ರ ಕಾಯಿದೆಯಲ್ಲೂ ಇತ್ತು ಎನ್ನುವ ಕಾರಣವೊಡ್ಡಿ 2025 ರ ಕಾಯಿದೆಯಲ್ಲಿ ಮೋದಿ ಸರ್ಕಾರ ರಿಜಿಸ್ಟ್ರೇಷನ್ ಗೆ ತಂದಿರುವ ಸನಾತನ ತಿದ್ದುಪಡಿಗಳು ಒಡ್ಡುವ ಆತಂಕಗಳನ್ನು ಸುಪ್ರೀಂ ಸರಿಯಾಗಿ ಪರಿಗಣಿಸಿಲ್ಲ. ಉದಾಹರಣೆಗೆ ವಕ್ಫ್ ರಿಜಿಸ್ಟರ್ ಮಾಡುವಾಗ ಆ ವಕ್ಫ್ ಮಾಡಿದ ವಾಕಿಫರ ಹೆಸರು ಮತ್ತು ಇಸವಿಯನ್ನು ನೋಂದಾಯಿಸುವುದನ್ನು ಮೋದಿ ಸರ್ಕಾರ ಕಡ್ಡಾಯ ಮಾಡಿದೆ. ಅವುಗಳನ್ನು ನೀಡದಿದ್ದರೆ ಸಂಬಂಧಪಟ್ಟ ಮುತಾವಲಿಯನ್ನು ಶಿಕ್ಷಿಸುವ ಅವಕಾಶಗಳಿವೆ.
ಆದರೆ ನೂರಾರು ವರ್ಷ ಹಳೆಯ ವಕ್ಫ್ ಗಳಿಗೆ ಈ ಬಗೆಯ ದಾಖಲೆಗಳಿರುವುದಿಲ್ಲ ಎನ್ನುವುದನ್ನೇ ವಕೀಲರು ಸುಪ್ರೀಂ ಗಮನಕ್ಕೆ ಪದೇ ಪದೇ ತಂದಿದ್ದರು.
ಈ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ರಿಜಿಸ್ಟ್ರೇಷನ್ ಬಗ್ಗೆ ತಮ್ಮ ಲಿಖಿತ ಆದೇಶದಲ್ಲಿ ಪೂರ್ಣ ಆದೇಶವನ್ನು ಕೊಡುವುದಾಗಿ ಸುಪ್ರೀಂ ಹೇಳಿದೆ. ಅದರಲ್ಲಿ ಮೋದಿ ಸರ್ಕಾರದ ರಿಜಿಸ್ಟ್ರೇಷನ್ ಕಡ್ಡಾಯದ ಹುನ್ನಾರ ನೈಜ ತೊಂದರೆಗಳನ್ನು ಗಾಮನದಲ್ಲಿಟ್ಟುಕೊಳ್ಳುತದೆ ಎಂದು ಆಶಿಸಬಹುದಷ್ಟೆ.
4. ಸಂವಿಧಾನ ವಿರೋಧಿ ಮೋದಿ ಸರ್ಕಾರದ ಕಾಲದಲ್ಲಿ ಕೋರ್ಟುಗಳ ಸರ್ಕಾರ ಪರ ಪೂರ್ವಗ್ರಹಗಳು ಸಂವಿಧಾನ ರಕ್ಷಿಸುವುದೇ?
ಸುಪ್ರೀಂ ಕೋರ್ಟ್ ಇಡೀ ಕಾಯಿದೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇಡೀ ಕಾಯಿದೆಗೆ ತಡೆಯಾಜ್ಞೆ ನೀಡಲಾಗುತ್ತದೆ ಎಂದು ಹೇಳಿದೆ ಹಾಗೂ ಈ ಪ್ರಕರಣದಲ್ಲಿ ಇಡೀ ಕಾಯಿದೆಗೆ ತಡೆಯಾಜ್ಞೆ ನೀಡಬೇಕೆಂಬ ಅಗತ್ಯ ಸಾಬೀತಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಏಕೆಂದರೆ ಜನರಿಂದ ಸಂವಿಧಾನ ಬದ್ಧವಾಗಿ ಜನರಿಂದ ಆಯ್ಕೆಯಾದ ಸರ್ಕಾರಗಳು ಕಾನೂನು-ಕಾಯಿದೆಗಳನ್ನು ಸಂವಿಧಾನಕ್ಕೆ ಅನುಗುಣವಾಗಿಯೇ ಮಾಡಿರುತ್ತದೆ ಎಂದೇ ಕೋರ್ಟ್ ಗಳು ಭಾವಿಸುತ್ತವೆ ಎಂದು ಹೇಳಿದೆ. ಆದರೆ ಕೋರ್ಟು ಹೇಳಿರುವ ಕೊನೆಯ ಸಾಂವಿಧಾನಿಕ ಅಂಶವು ಪ್ರಜಾತಾಂತ್ರಿಕ ಸಂದರ್ಭಗಳಲ್ಲಿ ಸರಿಯಾದುದಾದರೂ, ಸಂವಿಧಾನ ವಿರೋಧಿ ನಡಾವಳಿಗಳಲ್ಲಿ ತೊಡಗಿರುವ ಮೋದಿ ಸರ್ಕಾರದ ಸಂದರ್ಭದಲ್ಲಿ ನ್ಯಾಯಾಲಯ ಈ ರೀತಿ ಸರ್ಕಾರದ ಪರವಾಗಿ ಪೂರ್ವಗ್ರಹ ತಾಳುವುದು ಸಂವಿಧಾನಕ್ಕೆ ಅಪಚಾರವನ್ನೇ ಮಾಡಬಹುದು.
5. ವಕ್ಫ್ ಮತ್ತು ಸರ್ಕಾರದ ನಡುವಿನ ತಗಾದೆಗಳನ್ನೂ ಸರ್ಕಾರವೇ ತೀರ್ಮಾನ ಮಾಡುವಂತಿಲ್ಲ - ಏಕೈಕ ಸ್ವಾಗತಾರ್ಹ ಆದೇಶ
ವಕ್ಫ್ ಮತ್ತು ಸರ್ಕಾರದ ನಡುವಿನ ವ್ಯಾಜ್ಯಗಳನ್ನು ಸರಕಾರೀ ಅಧಿಕಾರಿ ತೀರ್ಮಾನ ಮಾಡುವಂತಿಲ್ಲ. ಏಕೆಂದರೆ ಅಂತ ಏರ್ಪಾಡು ಸಂವಿಧಾನವು ವಿಧಿಸಿರುವ ಕಾರ್ಯಂಗ ಮತ್ತು ನ್ಯಾಯಾಂಗಗಳ ನಡುವಿನ ಅಧಿಕಾರ ವಿಭಜನೆಯನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಅಂತ ತಗಾದೆಗಳನ್ನು ಟ್ರಿಬ್ಯುನಲ್ ಮತ್ತು ಹೈಕೋರ್ಟುಗಳ ತೀರ್ಮಾನ ಮಾಡುವ ತನಕ ಅವು ವಕ್ಫ್ ಆಗಿಯೇ ಮುಂದುವರೆಯುತ್ತವೆ ಹಾಗೂ ವಕ್ಫ್ ಬೋರ್ಡ್ ಕೂಡ ಅದರ ಬಗ್ಗೆ ಅಂತಿಮ ತೀರ್ಮಾನ ಬರುವವರೆಗೆ ಮೂರನೆಯ ವ್ಯಕ್ತಿಗಳ ಮಧ್ಯಪ್ರವೇಶಕ್ಕೆ ಅವಕಾಶ ಕೊಡುವಾಂತಿಲ್ಲ ಎಂಬ ಮತ್ತೊಂದು ತಡೆಯಾಜ್ಞೆಯನ್ನು ಸುಪ್ರೀಂ ನೀಡಿದೆ.
ಇದು ಮಾತ್ರ ಮಧ್ಯಂತರ ತೀರ್ಪಿನಲ್ಲಿ ನೀಡಿರುವ ಏಕೈಕ ಮತ್ತು ಸಂಪೂರ್ಣ ನ್ಯಾಯಪರ ಸಾಂವಿಧಾನಿಕ ಆದೇಶ. ಮತ್ತು ಅದು ಸ್ವಾಗತಾರ್ಹ.
ಒಟ್ಟಿನಲ್ಲಿ ವಕ್ಫ್ (ತಿದ್ದುಪಡಿ) ಕಾಯಿದೆ-2025 ನ್ನು ತಡೆಹಿಡಿಯಬೇಕೆಂದು ದಾಖಲಾದ ಅಹವಾಲುಗಳ ಬಗ್ಗೆ ಸುಪ್ರೀಂ ನೀಡಿರುವ ಮಧ್ಯಂತರ ಆದೇಶವು, ಸರ್ಕಾರವೇ ತನ್ನ ಮತ್ತು ವಕ್ಫ್ ನಡುವೆ ಇರುವ ತಗಾದೆಗಳ ಬಗ್ಗೆ ತೀರ್ಮಾನ ಮಾಡಬಾರದೆಂಬ ಸ್ವಾಗತಾರ್ಹ ತೀರ್ಪನ್ನು ಬಿಟ್ಟರೆ, ಮಿಕ್ಕಂತೆ ಅತ್ಯಂತ ಸಮಸ್ಯಾತ್ಮಕವೂ, ಸಂವಿಧಾನಕ್ಕೆ ಆತಂಕ ಹುಟ್ಟಿಸುವಂತೆಯೂ , ಮೋದಿ ಸರ್ಕಾರದ ಹಿಂದೂತ್ವ ರಾಜಕಾರಣಕ್ಕೆ ಪೂರಕವಾಗಿಯೂ ಇದೆ.
ಆದರೆ ಇದಿನ್ನೂ ಮಧ್ಯಂತರ ಆದೇಶ.
ಅಂತಿಮ ಆದೇಶ ನ್ಯಾಯ ಮತ್ತು ಸಂವಿಧಾನದ ಪರವಾಗಿ ಬರುವಂತೆ ಸುಪ್ರೀಂನಲೂ, ಬೀದಿಯಲ್ಲೂ ಹೋರಾಟ ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲ. ಅಲ್ಲವೇ?