ಬೀದಿಗಳಲ್ಲಿ ನವಜಾತ ಶಿಶುಗಳ ಎಸೆಯುವವರ ಸಂಖ್ಯೆ ಹೆಚ್ಚಳ

ರಾಯಚೂರು: ಮಮತೆಯ ತೊಟ್ಟಿಲು ಎಂಬ ಕಾರ್ಯಕ್ರಮ ಅಡಿಯಲ್ಲಿ ಬೇಡವಾದ ಮಗುವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಂರಕ್ಷಣಾ ಘಟಕದಿಂದ ಅಳವಡಿಸಿದ ತೊಟ್ಟಿಲಲ್ಲಿ ಹಾಕಬಹುದಾಗಿದ್ದು ಆದರೆ ಇದರ ಮಾಹಿತಿ ಕೊರತೆಯಿಂದಾಗಿ ಅನೇಕ ಪಾಲಕರು ರಸ್ತೆ ಬದಿಯಲ್ಲಿ ನವಜಾತ ಶಿಶು ಎಸೆಯುವ ಅಮಾನವೀಯ ಘಟನೆ ಜಿಲ್ಲೆಯ ಕೆಲವೆಡೆ ವರದಿಯಾಗಿದೆ.
ರಾಯಚೂರಿನ ಆಜಾದ್‌ನಗರದ ಮಕ್ಕಳ ರಕ್ಷಣಾ ಘಟಕದ ಕಚೇರಿ ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್ ) ಆಸ್ಪತ್ರೆಯ ಆವರಣದ ಸಖಿ ಕೇಂದ್ರದಲ್ಲಿ ಮಮತೆಯ ತೊಟ್ಟಿಲು ಇಡಲಾಗಿದೆ. ಇದರ ಹೊರತಾಗಿಯೂ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಸಂಪರ್ಕಿಸಿ ತಮಗೆ ಬೇಡವಾದ ಮಗು, ನವಜಾತ ಶಿಶುವನ್ನು ಮಕ್ಕಳ ಸಂರಕ್ಷಣಾ ಘಟಕಕ್ಕೆ ನೀಡಿದ್ದಲ್ಲಿ ಮಗು ನೀಡಿದ ಪಾಲಕರ ಮಾಹಿತಿ ಗೌಪ್ಯವಾಗಿಟ್ಟು ಮಗುವನ್ನು ಪಡೆದು ಪೋಷಣೆ ಮಾಡಿ ಬಳಿಕ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಮಕ್ಕಳು ಇಲ್ಲದ ದಂಪತಿಗೆ ನೀಡಲಾಗುತ್ತಿದೆ.
ಒಂದೇ ವಾರದಲ್ಲಿ ಎರಡು ಮಕ್ಕಳು ಬೀದಿಗೆ: ರಾಯಚೂರು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ಕೊನೆಯ ವಾರದಲ್ಲಿ ಎರಡು ನವಜಾತ ಶಿಶುಗಳನ್ನು ಬೀದಿಯಲ್ಲಿ ಎಸೆಯಲಾಗಿತ್ತು. ಆಗಸ್ಟ್ ೧೯ ರಂದು ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದಲ್ಲಿ ಕ್ಯಾನಲ್ ಬಳಿಯ ರಸ್ತೆಯ ಪಕ್ಕದಲ್ಲಿ ಯಾರೋ ಅಪರಿಚಿತ ಪಾಲಕರು ನವಜಾತ ಶಿಶು ಎಸೆದಿದ್ದರು. ಬೈಕ್ ಸವಾರನೋರ್ವ ನೋಡಿ ಸ್ಥಳೀಯರ ಸಹಾಯದೊಂದಿಗೆ ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಬಳಿಕ ರಿಮ್ಸ್ ಆಸ್ಪತ್ರೆ ಮೂಲಕ ಮಕ್ಕಳ ರಕ್ಷಣಾ ಘಟಕಕ್ಕೆ ಸೇರಿತ್ತು. ಅದೇ ವಾರ ದೇವದುರ್ಗ ತಾಲೂಕಿನಲ್ಲಿ ಹಳ್ಳದ ದಂಡೆಯಲ್ಲಿ ನವಜಾತ ಶಿಶುವನ್ನು ಯಾರೂ ಬಿಟ್ಟು ಹೋಗಿದ್ದರು.
ಬೇಡವಾದ ನವಜಾತ ಶಿಶುಗಳನ್ನು ಕಾನೂನು ರೀತಿಯಲ್ಲಿ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಬಹುದಾಗಿದ್ದರೂ ಅಪ್ರಾಪ್ತರಿಂದ, ಪ್ರೇಮ ಪ್ರಕರಣ, ಅಕ್ರಮ ಸಂಬಂಧದಿಂದ ಜನಿಸಿದ ಮಕ್ಕಳನ್ನು ಎಲ್ಲೆಂದರಲ್ಲಿ ನಿರ್ದಯವಾಗಿ ಎಸೆಯಲಾಗುತ್ತಿದೆ. ಮಮತೆಯ ತೊಟ್ಟಿಲು, ಮಕ್ಕಳ ಸಹಾಯವಾಣಿ ಕೇಂದ್ರ ಮೂಲಕ ಬೇಡವಾದ ಮಕ್ಕಳನ್ನು ಹಸ್ತಾಂತರ ಮಾಡಬಹುದಾಗಿದ್ದರೂ ಸಾಕಷ್ಟು ಪ್ರಚಾರದ ಕೊರತೆಯಿಂದಾಗಿ ಸಾರ್ವಜನಿಕರಿಗೆ ಮಾಹಿತಿ ತಲುಪುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೇವಲ ದಿನ ಪತ್ರಿಕೆಗಳಲ್ಲಿ ಪ್ರಕಟನೆ ನೀಡದೇ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಗೋಡೆ ಬರಹ ಅಥವಾ ಪ್ರಚಾರ ಮಾಡಬೇಕು. ಕೇವಲ ಎರಡು ಕಡೆಯಲ್ಲಿ ತೊಟ್ಟಿಲು ಇಡಲಾಗಿದ್ದು ಅದು ಸಹ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ. ಇನ್ನೂ ಹೆಚ್ಚಿನ ಕಡೆಗಳಲ್ಲಿ ಇಂತಹ ತೊಟ್ಟಿಲು ಇಡಬೇಕು ಹಾಗೂ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಪ್ರಗತಿಪರರು ಒತ್ತಾಯಿಸಿದ್ದಾರೆ.
ಬೇಡವಾದ ನವಜಾತ ಶಿಶುವನ್ನು ಸರಕಾರಿ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸಿ: ಡಿಸಿ ನಿತೀಶ್
ಪೋಷಕರು ತಮಗೆ ಜನಿಸಿದ ನವಜಾತ ಶಿಶು ಬೇಡವಾದಲ್ಲಿ ಅಂತಹ ಮಕ್ಕಳನ್ನು ಮಕ್ಕಳ ಸಹಾಯವಾಣಿ ಸಂಖ್ಯೆ:೧೦೯೮ ಗೆ ಕರೆ ಮಾಡಿ ಮಾಹಿತಿ ನೀಡಿ, ಸರಕಾರಿ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್.ಕೆ ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಯಾವುದೇ ಕಾರಣದಿಂದ ತಮಗೆ ಜನಿಸಿದ ನವಜಾತ ಶಿಶುಗಳು ತಮಗೆ ಬೇಡವಾದಲ್ಲಿ ಮಕ್ಕಳ ಸಹಾಯಣಿಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ಸ್ವೀಕರಿಸಿ, ಸರಕಾರಿ ವಿಶೇಷ ದತ್ತು ಸಂಸ್ಥೆಗೆ ದಾಖಲು ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ನವಜಾತ ಮಗುವಿನ ತಾಯಿ/ಪೋಷಕರಿಗೆ ಯಾವುದೇ ವಿಚಾರಣೆಗೆ ಒಳಪಡಿಸಲಾಗುವದಿಲ್ಲ. ಸಾರ್ವಜನಿಕರು ಯಾವದೇ ಕಾರಣಕ್ಕೂ ಮಕ್ಕಳನ್ನು ಕಸದ ಬುಟ್ಟಿಯಲ್ಲಿ, ರಸ್ತೆ ಬದಿಯಲ್ಲಿ, ತಿಪ್ಪೆಗುಂಡಿಯಲ್ಲಿ ಹಾಕುವುದರ ಮೂಲಕ ಮಕ್ಕಳ ಸಾವಿಗೆ ಕಾರಣರಾಗಬಾರದು ಎಂದು ಜಿಲ್ಲಾಧಿಕಾರಿ ತಮ್ಮ ಸಾರ್ವಜನಿಕ ಪ್ರಕಟನೆೆಯಲ್ಲಿ ಕರೆ ನೀಡಿದ್ದಾರೆ.
‘ಮಮತೆಯ ತೊಟ್ಟಿಲು’ ಕಾರ್ಯಕ್ರಮ ಬೆಡವಾದ ಮಕ್ಕಳನ್ನು ತಾಯಿ, ಪೋಷಕರು ಸುರಕ್ಷಿತವಾಗಿ ಮಕ್ಕಳರಕ್ಷಣಾ ಘಟಕಕ್ಕೆ ನೀಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿದೆ. ಮಕ್ಕಳ ರಕ್ಷಣಾ ಘಟಕದಲ್ಲಿ ಸದ್ಯ ೪ ಮಕ್ಕಳಿದ್ದವು. ಈ ಪೈಕಿ ಗುರುವಾರ ಭಾರತ ಮೂಲದ ಸಿಂಗಾಪುರದ ದಂಪತಿ ಕಾನೂನು ನಿಯಮಾನುಸಾರ ದತ್ತು ಪಡೆದಿದ್ದಾರೆ. ಈಗ ಮೂರು ಮಕ್ಕಳಿದ್ದು ಇಲಾಖೆಯ ನಿಯಮಾನುಸಾರ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ಮಗುವನ್ನು ಪಡೆದ ಪಾಲಕರಿಗೆ ೨ ತಿಂಗಳ ಕಾಲಾವಾಕಾಶ ನೀಡಲಾಗುತ್ತಿದೆ. ಅವರು ಮನ ಬದಲಾಯಿಸಿದರೆ ಇಲಾಖೆಗೆ ಮಗುವನ್ನು ವಾಪಸ್ ನೀಡಬಹುದು. ದತ್ತು ಪಡೆದ ಮಕ್ಕಳ ಆರೈಕೆ ಸರಿಯಾಗಿ ಮಾಡಲಾಗುತ್ತಿದೆಯಾ ಎಂಬದರ ಬಗ್ಗೆ ಕಾಲಕಾಲಕ್ಕೆ ಇಲಾಖೆಯಿಂದಲೂ ಪರಿಶೀಲಿಸಲಾಗುತ್ತದೆ.
-ಅಮರೇಶ ಹಾವಿನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ರಾಯಚೂರು