ದಸಂಸ ಪೊರಕೆ ಮತ್ತೆ ಚಿಗುರಿ ಹೊಂಬಾಳೆಯಾದಾಗ

ಕರ್ನಾಟಕದ ತುಂಬೆಲ್ಲಾ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟುಹಬ್ಬ ಮತ್ತು ಅವರ ಬದುಕು ಬರಹ ಚಿಂತನೆಗಳು ಈ ಹೊತ್ತು ಸಡಗರದಿಂದ ನಡೆಯುತ್ತಿದ್ದರೆ, ಇದರ ಮೂಲ ಶಕ್ತಿ ದಲಿತ ಸಂಘರ್ಷ ಸಮಿತಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ನಾನೊಬ್ಬ ದಸಂಸ ಕಾರ್ಯಕರ್ತನಾಗಿ ಇದರ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಮೂಡುತ್ತದೆ. ರಾಜಕಾರಣಕ್ಕಾಗಿ ದಸಂಸ ಹುಟ್ಟಿದ್ದಲ್ಲ. ದಸಂಸ ಎಲ್ಲಾ ನೊಂದವರ, ಬಡವರ, ಶೋಷಿತರ, ಮಹಿಳೆಯರ ಬಿಡುಗಡೆಗಾಗಿ ಬಾಬಾ ಸಾಹೇಬರು ಹೇಳಿದ ಮೂರು ಮಹಾಮಂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ತತ್ವಗಳ ಅಡಿಯಲ್ಲಿ ಸಂವಿಧಾನದ ಹಕ್ಕುಗಳಿಗಾಗಿ ಮತ್ತು ಮನುಷ್ಯತ್ವವನ್ನೇ ಮರೆತ ಧರ್ಮ, ಜಾತಿ, ದೇವರುಗಳ ಹೆಸರಲ್ಲಿ ನಡೆಯುತ್ತಿರುವ ಮೌಢ್ಯಗಳನ್ನು ನಿರ್ನಾಮ ಮಾಡಲು ಪುಟ್ಟ ತೊರೆಯಾಗಿ ಹುಟ್ಟಿಕೊಂಡಿತು. ಪ್ರಾರಂಭಕ್ಕೆ ದಲೇಖ ಒಡಲೊಳಗಿಂದ ಚಿಗುರಿದ ಈ ಸಂಘಟನೆ 1970-1980ರ ದಶಕದಲ್ಲಿ ಎಲ್ಲರ ಎದೆಗಳಲ್ಲಿ ಕಿಚ್ಚು ಮತ್ತು ರೋಮಾಂಚನ ಮೂಡಿಸಿದ್ದು ಈಗ ಇತಿಹಾಸ. ಆದರೆ ಬೆಳೆಯುತ್ತಾ ಬೆಳೆಯುತ್ತಾ ರಕ್ತ ಮಾಂಸಗಳನ್ನು ಕಳೆದುಕೊಂಡ ಅಸ್ಥಿಪಂಜರವಾಗಿದ್ದು ಸುಳ್ಳೇನಲ್ಲ. ನಾನೇ ಹಿಂದೊಮ್ಮೆ ದಸಂಸದ ಮೇಲ್ಛಾವಣಿ ಹಾರಿಹೋಗಿದೆ ಎಂದು ಬರೆದಿದ್ದೆ. ಈ ಹೊತ್ತು ನಾಡಿನ ಎಲ್ಲಾ ರಾಜಕೀ
ಯ ಪಕ್ಷಗಳು, ದಲಿತ ಸಂಘಟನೆಗಳನ್ನು ಸೇರಿದಂತೆ ಹಣ ಮತ್ತು ಅಧಿಕಾರಕ್ಕಾಗಿ ಬಾಬಾ ಸಾಹೇಬರ ಆಶಯಗಳನ್ನು ಧೂಳೀಪಟಮಾಡಲಾಗಿದೆ. ಈಗ ಸಮಾಜ ಬಾಬಾ ಸಾಹೇಬರ ಸಿದ್ಧಾಂತಗಳನ್ನು ಬದುಕು ಬರಹಗಳನ್ನು ನೆಪಕ್ಕಷ್ಟೇ ಇಟ್ಟುಕೊಂಡು ಅಧಿಕಾರದ ಲಾಲಸೆಗಾಗಿ ಅವರ ವೈಚಾರಿಕ ಚಿಂತನೆಯನ್ನೇ ಮರೆಮಾಚುತಿದೆೆ ಅನ್ನಿಸುತ್ತದೆ. ಅಂಬೇಡ್ಕರ್ ಆರಾಧನೆ ಹಾಗೂ ಪೂಜಿಸುವ ಮಟ್ಟಕ್ಕೆ ಬಂದಿರುವುದು ಅತ್ಯಂತ ನೋವಿನ ಸಂಗತಿ.
ದಸಂಸ ಎನ್ನುವುದು ವಚನ ಚಳವಳಿಯ ನಂತರ ಶೋಷಿತರ ಬಿಡುಗಡೆಗಾಗಿ ಹುಟ್ಟಿದ ಮಾನವೀಯ ಸಂಬಂಧಗಳನ್ನು ಬೆಸೆಯಲು ನಡೆದ ಚಳುವಳಿ ಎನ್ನುವುದರಲ್ಲಿ ಎರಡುಮಾತಿಲ್ಲ. ವಚನ ಚಳವಳಿಯ ಮುಂದುವರಿದ ಭಾಗವಾಗಿ ದಲಿತ ಚಳುವಳಿಯನ್ನು ಒಂದು ಮಹತ್ವದ ಸ್ಥಾನದಲ್ಲಿಟ್ಟು ನೋಡುವ ದಿನ ಬಹಳ ದೂರವಿಲ್ಲ. ಅನ್ಯಾಯಕ್ಕೊಳಗಾದವರು ನ್ಯಾಯಕ್ಕಾಗಿ ನಡೆಸಿದ ಚಳವಳಿಯಾದ್ದರಿಂದ ಇದರಲ್ಲಿ ಮನುಷ್ಯತ್ವದ ಪ್ರೀತಿ ಸದಾ ಜಿನುಗುತ್ತಿರುತ್ತದೆ. ಇದು ಸಹನೆಯ ಕುಲದವರು ಕಟ್ಟಿದ ಚರಿತ್ರೆಯಾಗಿ ಉಳಿಯಲಿದೆ. ಇತ್ತೀಚೆಗೆ ಸಂವಾದ ಮಾಸಪತ್ರಿಕೆಯ ಅಂಬೇಡ್ಕರ್ ವಿಶೇಷಾಂಕದಲ್ಲಿ ಎರಡು ವಿಶೇಷ ಲೇಖನಗಳನ್ನು ಗಮನಿಸಿದೆ. ಅದರಲ್ಲಿ ಹಿರಿಯ ಚಿಂತಕರು, ಲೇಖಕರು ದಸಂಸ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಂದೂಧರ ಹೊನ್ನಾಪುರ ಅವರ ‘ದಸಂಸ ಅಸಲಿ ಇತಿಹಾಸ: ಬಂಡೆಗಳ ಮೇಲೆ ಚಿಗುರೊಡೆದ ದಲಿತ ಳವಳಿ’ ಎನ್ನುವ ಲೇಖನದಲ್ಲಿ ಒಂದು ಮಾತು ಹೀಗೆ ಹೇಳುತ್ತಾರೆ. ‘‘ನಮಗೆ ಆ ಕಾಲದಲ್ಲಿ ಸಿದ್ಧಾಂತವೇ ನಾಯಕತ್ವ ವಹಿಸಿತ್ತು. ನಾವೆಲ್ಲಾ ಕಾರ್ಯಕರ್ತರಾಗಿದ್ದೆವು. ಈಗ ಸಿದ್ಧಾಂತವನ್ನು ನುಂಗಿ ನೀರು ಕುಡಿದವರು ನಾಯಕರಾಗಿದ್ದಾರೆ. ಇದು ಎಲ್ಲರಿಗೂ ಕಾಣುತ್ತಿದೆ’’ ಇನ್ನೊಂದು ಲೇಖನದಲ್ಲಿ ಕೋಲಾರದ ಸಿಎಂ ಮುನಿಯಪ್ಪ ‘‘ಪಂಚಮ ಪತ್ರಿಕೆಗಾಗಿ ಕೊಡಲು ಹಾಸ್ಟೆಲ್‌ನಲ್ಲಿ ಇದ್ದ ಹದಿನೈದು ವಿದ್ಯಾರ್ಥಿಗಳೊಂದಿಗೆ ಬೆಳೆಕೊಯ್ಯುವ ಕೂಲಿಗೆ ಹೋಗಿ ನೂರು ರೂಪಾಯಿ ಕೊಟ್ಟಿದ್ದು ಚಳವಳಿಯ ಮೌಲ್ಯವನ್ನು ಹೆಚ್ಚಿಸಿದೆ. ಅವತ್ತಿನ ಕಾರ್ಯಕರ್ತರ ಅಮೂಲ್ಯವಾದ ಶ್ರಮ, ಪ್ರಾಮಾಣಿಕತೆ, ಈ ಹೊತ್ತಿನ ಕೋಟಿ ರೂಪಾಯಿಗೂ ಸಮವಿಲ್ಲ’’ ಎಂದು ಹೇಳುತ್ತಾರೆ.
ದಲಿತ ಸಾಹಿತ್ಯ ಮತ್ತು ಸಂಘಟನೆ ಬಗ್ಗೆ ಮಾತನಾಡುವಾಗ ಸಂಘಟನೆ ದೇಹವಾದರೆ ಸಾಹಿತ್ಯ ಉಸಿರಾಗಿತ್ತು. ಇವೆರಡೂ ಸೇರಿದ್ದಕ್ಕೆ ದಸಂಸಕ್ಕೆ ಚಾಲಕ ಶಕ್ತಿ ಸಿಕ್ಕಿದ್ದು. ಇಡೀ ಶೋಷಿತರು ಮತ್ತು ನೊಂದವರು ಇದರಲ್ಲಿ ಒಳಗೊಳ್ಳಲು ಸಾಧ್ಯವಾಯಿತು.
ಇವತ್ತು ದಲಿತ ಸಂಘರ್ಷ ಸಮಿತಿ ಏನಾಗಿದೆ ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಆದರೆ ದಲಿತರಿಗಾಗಿ ಮಿಡಿಯುವ ಮನಸ್ಸುಗಳು ನಾಡಿನಲ್ಲಿ ಸಾವಿರ ಸಾವಿರ ಕಾರ್ಯಕರ್ತರು ಈ ಹೊತ್ತಿಗೂ ಪೇಶ್ವೆಗಳ ವಿರುದ್ಧ ಹೋರಾಡಿದ ಸಿದ್ಧ್ದನಾಕರಂತೆ ಸಿದ್ಧ್ದರಿದ್ದಾರೆ. ಇಲ್ಲದಿದ್ದರೆ 2022 ರ ಡಿಸೆಂಬರ್ 6 ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೀಲಿ ಸಾಗರವೇ ಹರಿದಂತೆ ಜನರು ಸೇರುತ್ತಿರಲಿಲ್ಲ. ಕಟ್ಟುವ ಕೆಲಸ ಯಾವತ್ತಿಗೂ ಮುಗಿಯುವುದಿಲ್ಲ. ಇದನ್ನೆಲ್ಲಾ ನಮಗೆ ಇತಿಹಾಸ ಕಲಿಸಿಕೊಟ್ಟಿದೆ. ಒಡೆಯುವವರು ನೂರುಜನರಿದ್ದರೆ ಕಟ್ಟುವವರು ಹತ್ತುಜನ ಕನಿಷ್ಟ ಇದ್ದೇ ಇರುತ್ತಾರೆ. ನಾವು ನಮ್ಮನ್ನು ಕಟ್ಟಿಕೊಳ್ಳಬೇಕಾಗಿದೆ. ಇದು ಭೀಮಾ ಸಾಹೇಬರ ಮೂಲ ಆಶಯ. ಅಂತಹುದೊಂದು ಸಂವೇದನೆಯ ಸಾಹಿತ್ಯದ ಸಭೆಯನ್ನು ಎಪ್ರಿಲ್ 22, 2025 ರಂದು ಬೆಂಗಳೂರಿನಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಿತ್ತು. ಈ ಸಮ್ಮೇಳನವನ್ನು ಉದ್ಘಾಟಿಸಿದ ಈ ನಾಡಿನ ಶ್ರೇಷ್ಠ ಚಿಂತಕರು ಪ್ರಸಿದ್ಧ್ದ ವಾಗ್ಮಿಗಳು ಅಪಾರ ಶಿಷ್ಯ ಬಳಗವನ್ನು ಹೊಂದಿರುವ, ‘ಬಂಡಾಯ ಎನ್ನುವುದು ಒಂದು ಮನೋಧರ್ಮ’ ಎನ್ನುವ ನುಡಿಗಟ್ಟನ್ನು ಕೊಟ್ಟ, ಸದಾ ಶೋಷಿತರ, ನೊಂದವರ, ನೋ ವಿಗೆ ಮಿಡಿ ಯುವ ನಾಡೋಜ ಬರ ಗೂರು ರಾಮ ಚಂದ್ರಪ್ಪ ಅವರು ಮಾತನಾಡುತ್ತಾ, ‘‘ಭಾರತದ ಎರಡು ಕಣ್ಣುಗಳೆಂದರೆ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್. ಗಾಂಧೀಜಿ ಸತ್ಯಾಗ್ರಹದ ಮೂಲಕ ಸ್ವ್ವಾತಂತ್ರ್ಯ ಚಳವಳಿಯನ್ನು ಕಟ್ಟಿದರೆ, ಸ್ವಾತಂತ್ರ್ಯದೊಳಗೊಂದು ಸ್ವಾತಂತ್ರ್ಯದ ಅಗತ್ಯ ಈ ದೇಶಕ್ಕೆ ಇದೆ ಎನ್ನುವುದನ್ನು ತೋರಿಸಿಕೊಟ್ಟವರು ಬಾಬಾಸಾಹೇಬರು. ಒಬ್ಬರು ಉಪ್ಪನ್ನು ಬೊಗಸೆಯಲ್ಲಿ ಎತ್ತಿ ಹಿಡಿದರೆ ಇನ್ನೊಬ್ಬರು ನೈಸರ್ಗಿಕವಾಗಿ ಸಿಗಬೇಕಾದ ನೀರನ್ನು ಮುಟ್ಟಬೇಡಿ ಎನ್ನುವ ಜೀವ ವಿರೋಧಿ ಯಾದ ಸಮಾಜಕ್ಕೆ ಸೆಡ್ಡ್ದು ಹೊಡೆದು ಚೌದಾರ್ ಕೆರೆಯಲ್ಲಿ ನೀರು ಎತ್ತಿಹಿಡಿದದ್ದು, ಅಸ್ಪಶ್ಯರ ಮೊಟ್ಟಮೊದಲ ಹೋರಾಟವಾಗಿ ಕಾಣುತ್ತದೆ. ಈ ಇಬ್ಬರ ಹೃದಯದಲ್ಲಿ ಮಿಡಿಯುತ್ತಿದ್ದುದು ಸ್ವಾತಂತ್ರ್ಯ, ಸಮಾನತೆ, ಸೋದರತೆ. ಈ ಸೋದರತೆಗೆ ಹೆಚ್ಚು ಮಹತ್ವ ಕೊಟ್ಟಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಸೋದರತೆಯ ಸಮಾನತೆಯಲ್ಲಿ ದೇಶ ಕಟ್ಟುವ ಕನಸು ಅವರದಾಗಿತ್ತು. ಈ ಆಶಯಗಳನ್ನು ಹೊತ್ತ ದಲಿತ ಚಳವಳಿಯನ್ನು ಮತ್ತೆ ಕಟ್ಟುವ ಕೆಲಸ ಆಗಬೇಕಿದೆ. ಕೋಮುವಾದದ ಆಂತರಿಕ ಮತ್ತು ಬಾಹ್ಯ ಹಿಂಸೆ ವಾಸ್ತವವಾಗಿ ಎದ್ದುಕಾಣುತ್ತಿರುವ ಸಂದರ್ಭದಲ್ಲಿ ವರ್ತಮಾನ ಮತ್ತು ಭವಿಷ್ಯವನ್ನು ಎದುರಿಸುವ ಶಕ್ತಿ ದಲಿತರಿಗೆ ಮುಂಬರುವ ದಿನಗಳಲ್ಲಿ ಬೇಕಾಗುತ್ತದೆ.’’ ಎಂದು ಹೇಳಿದರು.
ದಲಿತ ಸಂಘರ್ಷಸಮಿತಿಯ ಪ್ರಮುಖ ನಾಯಕ ಮಾವಳ್ಳಿ ಶಂಕರ್ ಮಾತನಾಡುತ್ತಾ ‘‘ಬಂಡವಾಳ ಶಾಹಿ ಮತ್ತು ಬ್ರಾಹ್ಮಣಶಾಹಿ ಇವೆರಡೂ ದೇಶವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿವೆ. ಇಂದು ದಲಿತರ ಮೇಲಿನ ದೌರ್ಜನ್ಯ ಹತ್ಯಾಕಾಂಡಗಳಿಗೆ ಸಿಗದಷ್ಟು ಪ್ರಚಾರ, ಪ್ರಾಮುಖ್ಯತೆ ಜನಿವಾರಕ್ಕೆ ಸಿಗುತ್ತಿರುವುದು ದುರಂತ. ಬಹುತ್ವದ ಪರಿಕಲ್ಪನೆಯ ಭಾರತವನ್ನು ಏಕ ಭಾರತವು ಕೊಲ್ಲುತ್ತಿದೆ. ಈ ನಿಟ್ಟಿನಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ’’ ಎಂದರು. ರಾಮ ಮಂದಿರ ಕಟ್ಟುವುದಕ್ಕಾಗಿ ಇಟ್ಟಿಗೆ ಒಯ್ಯುವಾಗ ‘‘ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’’ ಎಂದು ಲಂಕೇಶ್ ಹೇಳಿದ್ದು ನೆನಪಾಗುತ್ತದೆ. ‘ಜೀವಪವಿತ್ರ, ದಾರ ಪವಿತ್ರವಲ’್ಲ ಎನ್ನುವುದನ್ನು ಮರೆಯಬಾರದು. ಇನ್ನು ಮುಖ್ಯವಾಗಿ ಈ ಸಮ್ಮೇಳನದ ಸರ್ವಾಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ಆಡಿದ ಮಾತುಗಳು ಇಡೀ ಸಭೆಯಲ್ಲಿ ವಿದ್ಯುತ್ ಸಂಚಾರವಾಗುವಂತೆ ಮಾಡಿದವು. ರಾಮಣ್ಣ ಏನು ಮಾತನಾಡುತ್ತಾರೆ ಎಂದು ಕುತೂಹಲ ಇದ್ದವರಿಗೆ ಅದನ್ನು ಸತ್ಯ ಮಾಡಿದರು. ಬ್ಯಾಂಕ್ ನೌಕರಿಗೆ ರಾಜೀನಾಮೆ ಎಸೆದು, ದಲಿತ ಸಂಘರ್ಷ ಸಮಿತಿಯಲ್ಲಿ ಮುಳುಗಿಹೋಗಿ, ತನ್ನ ಬರವಣಿಗೆಯ ಮೂಲಕ ಇಡೀ ನಾಡಿನ ಎದೆಯ ಹಾಡಾದ ರಾಮಣ್ಣ ನಿಷ್ಠುರವಾದ ತೀಕ್ಷ್ಣ್ಣಮಾತುಗಳಿಂದ ಎಲ್ಲರ ಗಮನ ಸೆಳೆದರು. ಪತ್ರಕರ್ತರಾಗಿ ಸುದ್ದಿ ಸಂಗಾತಿ, ಮುಂಗಾರು ಮುಂತಾದ ಪತ್ರಿಕೆಗಳಲ್ಲಿ ಕೆಲಸಮಾಡಿದ ರಾಮಣ್ಣ ಸಿನೆಮಾ, ಮಕ್ಕಳ ನಾಟಕ, ಸಾಕ್ಷರ ಆಂದೋಲನಕ್ಕಾಗಿ ಬರೆದ ಹಾಡುಗಳು ನಾಡಿನೆಲ್ಲೆಡೆ ಕ್ರಾಂತಿ ಉಂಟುಮಾಡಿದವು.
‘ನಾವು ನಮ್ಮ ಕೊರಳಲ್ಲಿ ನೀಲಿ ಶಾಲು ಬಳಸುತ್ತೇವೆ’ ಇದರ ಕುರಿತು ದಸಂಸ ನಾಯಕ ಕಮಲಾನಗರದ ಸಿದ್ದಲಿಂಗಯ್ಯನವರು ಮಾತನಾಡುತ್ತಾ ‘‘ನೀಲಿ ಶಾಲಿನ ಅಂಚಿನಲ್ಲಿ ಕೇಸರಿ ಕಾಣಿಸುತ್ತಿದೆ. ಇದು ದಲಿತರ ಒಗ್ಗಟ್ಟನ್ನು ಮತ್ತು ಹೃದಯವನ್ನೇ ಒಡೆಯುವ ಕೆಲಸವಾಗಿದೆ. ಇದರ ಬಗ್ಗೆ ದಲಿತರು ತುಂಬಾ ಎಚ್ಚರಿಕೆಯಲ್ಲಿರುವುದು ಅಗತ್ಯ’’ ಎಂದರು. ಇನ್ನೊಬ್ಬ ನಾಯಕರ ಬಗ್ಗೆ ಮಾತನಾಡುವಾಗ ನಾವೆಲ್ಲಾ ಆಘಾತಕರ ಸುದ್ದಿಯನ್ನು ಕೇಳಿದೆವು. ಬಾಬಾ ಸಾಹೇಬರು ಕಟ್ಟಿದ ಸಮತ ಸೈನಿಕ ದಳವನ್ನು ಇವತ್ತು ಕರ್ನಾಟಕದ ತುಂಬೆಲ್ಲಾ ಇನ್ನ್ನೂ ಜೀವಂತವಾಗಿಟ್ಟಿದ್ದ ನಮ್ಮೆಲ್ಲರ ಪ್ರೀತಿಯ ಸೋದರ ಚೆನ್ನ ಕೃಷ್ಣಣ್ಣ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ನಮ್ಮನ್ನು ಅಗಲಿದ್ದು ಆಘಾತದ ಸುದ್ದಿಯಾಗಿತ್ತು. ಕಳೆದ ಕೆಲವುದಿನಗಳ ಹಿಂದಷ್ಟೇ ಸಮತಾ ಸೈನಿಕ ದಳದ ನೂರುವರ್ಷದ ಸಂಭ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿತ್ತು. ವಿಶೇಷವಾಗಿ ಬಾಬಾ ಸಾಹೇಬರ ಚಿತಾಭಸ್ಮವನ್ನು ಮೈಸೂರಿಗೆ ತರಿಸಿ ಮೆರವಣಿಗೆ ಮಾಡಿದ್ದನ್ನು ಮರೆಯಲಾಗುತ್ತಿಲ್ಲ. ಇಂತಹ ನಾಯಕರೊಬ್ಬರು ಅಂದಿನ ಸಭೆಯಲ್ಲಿ ಮಾತನಾಡಿದ್ದನ್ನು ನೆನಪಿಸಿಕೊಳ್ಳುವುದಾದರೆ, ‘‘ಇವತ್ತು ದಲಿತ ಸಂಘರ್ಷ ಸಮಿತಿಗೆ 50 ತುಂಬಿದೆ ವಿದಾರ್ಥಿ ದೆಸೆಯಲ್ಲಿ ನಾನೂ ಕೂಡ ದಸಂಸಕ್ಕೆ ಪೂರ್ಣಾವಧಿ ಕಾರ್ಯಕರ್ತನಾಗಿದ್ದೆ. ಇವತ್ತು ನಮ್ಮೆಲ್ಲರ ಕೂದಲು ಬೆಳ್ಳಗಾಗಿದೆ. ಆದರೆ ಹೋರಾಟದ ಕಿಚ್ಚು ಹಾಗೇ ಉಳಿದಿದೆ. ಹೀಗೆ ಮತ್ತೆ ಕಟ್ಟುವ ಕೆಲಸದಲ್ಲಿ ನಾವು ಒಂದಾಗಿ ಹೋಗುವುದಾದರೆ, ನಾನು ಕಸ ಗುಡಿಸುವುದಕ್ಕೂ ತಯಾರಿದ್ದೇನೆ ‘‘ಎಂಬ ಹಂಬಲಿಕೆಯನ್ನು ವ್ಯಕ್ತಪಡಿಸಿದ್ದರು. ಅವರ ಮಾತಿಗೆ ನಮ್ಮ ಎಲ್ಲರ ಮನಸ್ಸು 70ರ ದಶಕಕ್ಕೆ ಜಾರಿತು. ದಲಿತ ಸಂಘರ್ಷಸಮಿತಿ ಕಾರ್ಯಕರ್ತರೆಲ್ಲಾ ಕಡಲೆಪುರಿ-ಬನ್ನು ತಿಂದು, ಟೀ ಕುಡಿದು ಪೇಪರ್ ಹಾಸಿಕೊಂಡು ಮಲಗಿ ಎದ್ದವರು. ಅವೆಲ್ಲಾ ನೆನಪುಗಳು ಎಲ್ಲರಿಗೂ ಕಾಡತೊಡಗಿದವು. ನಮ್ಮ್ಮೊಳಗಿನ ಬಾಬಾ ಸಾಹೇಬರು ಹೇಳಿದ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಮಾತುಗಳು ನೆನಪಾದವು. ಒಂದು ಪುಟ್ಟ ಸಭೆ ದೊಡ್ಡ ಕನಸು. ಈ ಎಲ್ಲಾ ಮನಸ್ಸುಗಳೂ ಜಲವಾಗಿ ಪೊರಕೆಯನ್ನು ಚಿಗುರಿಸುವ ಕಾಲ ದೂರವಿಲ್ಲ ಅನ್ನಿಸಿತು. ರಾಮಣ್ಣ ಹೇಳಿದ ತ್ರಿವರ್ಣ ಧ್ವಜ ಇಳಿಸಿ ಭಗವಾಧ್ವಜ ಏರುವ ಮುನ್ನ ನಮ್ಮ ತ್ರಿವರ್ಣ ಧ್ವಜ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಈ ದೇಶದ ಶೋಷಿತರ ಮೇಲಿದೆ. ಸಂವಿಧಾನ ಮತ್ತು ಬಾಬಾ ಸಾಹೇಬರು ನಮ್ಮ ಉಸಿರು ಮತ್ತು ಚಲನೆ. ನಾವು ನೀಲಿ ಸಾಗರದಲ್ಲಿ ಹಾಯಲೇ ಬೇಕು ಎಂದು ಪಣ ತೊಡುವ ಕಾರ್ಯಕ್ರಮ ಎಲ್ಲರ ಬೆನ್ನುಗಳಲ್ಲಿ ರೆಕ್ಕೆಮೂಡಿಸಿದ್ದು ನಿಜ.