ಕಾಗೆ, ಅವ್ವ ,ಕಾಡು, ಭಾಷೆ, ಮಳೆ ಅಂದರೆ ಬಿಳಿಮಲೆ

‘‘ಈ ಒಕ್ಕಲಿಗರಿಂದ ನಮ್ಮ ಸುಬ್ಬುಗೆ ಒಂದು ಪ್ರತಿಮೆ ಮಾಡಿಸಬೇಕಲ್ಲ’’ ಈ ಮಾತನ್ನು ಹೇಳಿದವರು ಈಗ ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು. ಕೆಲವು ದಿನಗಳ ಹಿಂದೆ ನಮ್ಮ ಸಕಲೇಶಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ, ನಮ್ಮ ರಕ್ಷಿದಿ ಪ್ರಸಾದ್ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಬಿಳಿಮಲೆಯವರು ಸಮ್ಮೇಳನ ಉದ್ಘಾಟಿಸಿ ಅದ್ಭುತವಾಗಿ ಮಾತನಾಡಿದರು. ಅವರು ಭಾಷಣ ಮಾಡುತ್ತಿದ್ದರೆ, ನಾನು ತರಗತಿಯಲ್ಲಿ ಕುಳಿತ ವಿದ್ಯಾರ್ಥಿ ಅನ್ನುವಷ್ಟು ಮುಗ್ಧತೆ ಆವರಿಸುತ್ತದೆ. ಅಂತಹ ಪ್ರಬುದ್ಧ ಮಾತುಗಾರಿಕೆಯನ್ನು ಬೆಟ್ಟಕಾಡುಗಳ ಪ್ರಕೃತಿಯ ನಡುವೆ ಸಿದ್ಧಿಸಿಕೊಂಡಿದ್ದಾರೆ. ಯಕ್ಷಗಾನ ಮತ್ತು ತಾಳಮದ್ಧಳೆಯ ನಿಸ್ಸೀಮ ಮಾತುಗಾರಿಕೆ ಅವರ ಅಭಿವ್ಯಕ್ತಿಯನ್ನು ವಿಸ್ತಾರ ಮಾಡಿದೆ. ಅವರೊಬ್ಬ ಜಾನಪದ ತಜ್ಞ. ಅವರು ರಚಿಸಿರುವ ಶಿಷ್ಟ ಮತ್ತು ಪರಿಶಿಷ್ಟ, ಕೂಡು ಕಟ್ಟು, ಜನಸಂಸ್ಕೃತಿ, ಕನ್ನಡ ಕಥನಗಳು, ಕೈಫಿಯತ್ತುಗಳು, ಅಮರ ಸುಳ್ಯದ ರೈತ ಹೋರಾಟ, ವರ್ತಮಾನ ಭಾರತ ಈ ಕೃತಿಗಳು ದೇಸಿ ಚಿಂತನೆ ಮತ್ತು ಅಪಾರ ಅನುಭವ ಜೀವ ಪ್ರೀತಿಯನ್ನು ಹುಟ್ಟುಹಾಕಿವೆೆ. ಮಾತು, ಬರವಣಿಗೆ, ಅಲೆದಾಟ ಅವರ ಪಾದ ಮತ್ತು ಮಿದುಳಿಗೆ ಇನ್ನಷ್ಟು ಕಸುವು ತುಂಬಿದೆ. ಆದ್ದರಿಂದಲೇ ಅವರ ಮಾತಿನ ವಿವೇಕ ತಾಯಿಯ ಅರಿವಿನಂತಿರುತ್ತದೆ. ಕೇಳುಗರು ಮತ್ತು ಓದುಗರಿಗೆ ಮುಗ್ಧತೆಯ ಭಾವ ಆವರಿಸಿ ಎಚ್ಚರದ ಕಣ್ಣು ತೆರೆಯುತ್ತದೆ. ಇದು ಒಬ್ಬ ಸೃಜನಶೀಲ ಸಂಶೋಧಕನಿಗೆ ಇರಬೇಕಾದ ದೊಡ್ದ ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯಾರೆಲ್ಲಾ ಪ್ರಯತ್ನಿಸುತ್ತಾರೋ ಅವರ್ಯಾರೂ ಲೇಖಕರಾಗಿ ಉಳಿಯದೆ ಪುಸ್ತಕದ ಗೆದ್ದಲು ಹುಳವಾಗುತ್ತಾರೆ.
ಇವತ್ತಿಗೂ ಕರ್ನಾಟಕದ ಪ್ರಜ್ಞೆಯನ್ನು ಉಳಿಸಿದವರು ನಮ್ಮ ಗ್ರಾಮೀಣ ಪ್ರದೇಶದ ಶ್ರಮಿಕರು, ಹೋರಾಟಗಾರರು, ಲೇಖಕರು ಮತ್ತು ರಂಗಭೂಮಿ, ಸಿನೆಮಾ ಕಲಾವಿದರು. ಎಲ್ಲಾ ಮುಗಿದೇ ಹೋಯಿತು ಎನ್ನುವ ದುಸ್ಥಿತಿ ನಮಗೆ ಬಂದಿಲ್ಲ. ಆ ಹೊತ್ತಿನ ಪಂಪನಿಂದ ಈ ಹೊತ್ತಿನ ದೇವನೂರ ಮಹಾದೇವ ಅವರವರೆಗೆ ಬಹಳ ದೊಡ್ಡ ಎಚ್ಚರವನ್ನು ನಾವು ಕಾಯ್ದುಕೊಂಡಿದ್ದೇವೆ ಅನ್ನಿಸುತ್ತದೆ. ಇದರಲ್ಲಿ ಅನಕ್ಷರಸ್ಥರ ಕಾಣ್ಕೆ ಅಕ್ಷರಸ್ಥರ ಅರಿವು ಎರಡೂ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆಯುತ್ತಿದೆ. ಇವಿಷ್ಟೂ ಪೀಠಿಕೆಗೆ ಕಾರಣವಾಗಿದ್ದು ಪುರುಷೋತ್ತಮ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಕೃತಿ. ಐದನೇ ಮುದ್ರಣ ಕಂಡಿದೆ ಎನ್ನುವುದೇ ಈ ಕೃತಿಯ ಜನಪ್ರಿಯತೆಯನ್ನು ಹೇಳುತ್ತದೆ. ಇದೊಂದು ಅಪರೂಪದ ಆತ್ಮ ಕಥನ. ನೀರಿನ ಸಹಜ ಗುಣ ಮೇಲಿಂದ ಕೆಳಗೆ ಹರಿಯುವುದು. ಅದು ಚಲಿಸುತ್ತಲೇ ಶುದ್ಧತೆಯನ್ನು ಪಡೆದುಕೊಳ್ಳುತ್ತ ಸಾಗರ ಸೇರಿಬಿಡುತ್ತದೆ. ಈ ಚಲಿಸುವ ಚಿಂತನೆ ಬಿಳಿಮಲೆಯವರದು. ಬಂಟಮಲೆ ಕಾಡಿನ ನಾಲ್ಕಾರು ಮನೆಗಳಿರುವ ಕಾಡಿನ ಬುಡದಲ್ಲಿ ಬೆಳೆದ ಈ ಜೀವ ಕಥನ ಮಳೆಯ ನೀರಲ್ಲಿ ನೆನೆದು ಜೀವೋತ್ಸವಕ್ಕೆ ಕಾರಣವಾಗಿದೆ.
ಈ ಪುಸ್ತಕವನ್ನು ಓದಿ ಮುಗಿಸಿದಾಗ ಹಾಗೇ ಸುಮ್ಮನೆ ಒಂದೆರಡು ವಾಕ್ಯಗಳನ್ನು ಬರೆದೆ. ಈ ಕೃತಿಯನ್ನು ಓದಲು ಪ್ರಾರಂಭಿಸಿದಾಗ ಮಣ್ಣಿನ ಸ್ಪರ್ಶದ ಪರಿಮಳ ನನ್ನ ಅನುಭವಕ್ಕೆ ಬಂತು. ಜೀವಾಮೃತವಾದ ಮಣ್ಣನ್ನು ಕೈಯಲ್ಲಿ ಹಿಡಿದುಕೊಂಡೇ ಅದರ ಸ್ಪರ್ಶವನ್ನು ಅನುವಿಸಬೇಕು. ಆ ಮಣ್ಣಿಗೆ ಬೆಲೆಕಟ್ಟಲಾಗದು. ಗಾಳಿ-ಮಳೆಯಲ್ಲಿ ಹಾರಿ ಬಂದ ಬೀಜ ಮೊಳಕೆಯೊಡೆಯುತ್ತದೆ. ಫಸಲು ಕೊಡುತ್ತದೆ. ಹೀಗೆ ಎಷ್ಟೋ ಶತಮಾನಗಳಿಂದ ಈ ಮಣ್ಣು ನಮ್ಮ ದೇಹಕ್ಕೆ ಚಲನೆಯನ್ನು ಕೊಟ್ಟಿದೆ. ಈ ಪುಸ್ತಕ ಕೈ ಹಿಡಿದುಕೊಂಡಾಗಲೇ ಬರವಣಿಗೆಗೂ ಮತ್ತು ಓದಿಗೂ ಸಿಗುವ ಅನುಭವ ಬಹಳ ದೊಡ್ಡದು ಅನ್ನಿಸುತ್ತದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ನಿರಂತರ ಓದಿಗೆ ಒಂದು ಮಾತು ಹೇಳುತ್ತಾರೆ. ಮನಸ್ಸಿನ ಬೇಸರಕ್ಕೆ ಮತ್ತು ಮನಸ್ಸಿನ ಚೈತನ್ಯಕ್ಕೆ ಓದೇ ಮದ್ದು. ಶಿಕ್ಷಣ ಪಡೆಯುವುದೆಂದರೆ ಹುಲಿಯ ಹಾಲು ಕುಡಿದ ಹಾಗೆ ಎಂದು. ಬಹುಶಃ ಅಕ್ಷರ, ಓದು-ಬರಹ ಈ ಜಗತ್ತಿನಲ್ಲಿ ಇರದೇ ಹೋಗಿದ್ದರೆ ನಾವೆಲ್ಲಾ ಪ್ರಾಣಿ ಪಕ್ಷಿಗಳಿಗೂ ಕಡೆಯಾಗುತ್ತಿದ್ದೆವು.
ನಾನು ಪ್ರಾರಂಭಕ್ಕೆ ಮೊದಲ ಸಾಲಿನಲ್ಲಿ ಒಂದು ಮಾತು ಹೇಳಿದ್ದೆ. ‘‘ಈ ಒಕ್ಕಲಿಗರಿಂದ ಸುಬ್ಬುಗೊಂದು ಪ್ರತಿಮೆ ಮಾಡಿಸಬೇಕೆಂದಿದ್ದು’’. ಈ ಹೊತ್ತಿನ ಸಾಮಾಜಿಕ ಅಸಮಾನತೆ ಇನ್ನು ಹಸಿಹಸಿಯಾಗೇ ಇದೆ. ಜಾತಿ ಪದ್ಧತಿಯ ರೌರವ ನರಕವನ್ನು ಇವತ್ತಿಗೂ ಅನುಭವಿಸುತ್ತಲೇ ಇದ್ದೇವೆ. ತಿಳುವಳಿಕೆ ಇಲ್ಲದೆ ಮಾಡುವುದಕ್ಕೂ ತಿಳುವಳಿಕೆಯಿದ್ದೂ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಪ್ರತಿಮೆಯ ಮಾತು ೮೦ ರ ದಶಕದಲ್ಲಿ ಚಳವಳಿಯ ಕಾಲಕ್ಕೆ ನಮ್ಮೂರಿಗೆ ಡಾ. ಅಂಬೇಡ್ಕರ್ ನಗರ ಎಂದು, ಒಂದು ಮರದ ಹಲಗೆಯಲ್ಲಿ ಬರೆದು ನಮ್ಮ ಕೇರಿಯ ಹೆಬ್ಬಾಗಿಲಿಗೆ ಹಾಕಿಕೊಂಡಿದ್ದೆವು. ಬೆಳಗಾಗುವುದರೊಳಗೆ ಅದನ್ನು ಒಡೆದು ಹೋಟೆಲ್ನಲ್ಲಿ ದೋಸೆಯನ್ನು ಬೇಯಿಸಲು ಒಲೆಗೆ ಹಾಕಿಕೊಂಡಿದ್ದನ್ನು ನಮ್ಮದೇ ಕೇರಿಯ ನಿಂಗಮಾವನ ಹತ್ತಿರ ಒಕ್ಕಲಿಗ ಸಮುದಾಯದ ಜನ ಹೇಳಿದ್ದು ನೆನಪಿದೆ. ಘನ ಭೀಮಾ ಸಾಹೇಬರನ್ನು ಸ್ವೀಕರಿಸುವ ದೊಡ್ಡ ಗುಣ ಬಂದರೆ ಅದರೊಳಗೆ ನನ್ನಂತಹವರ ಪ್ರತಿಮೆಯೂ ಇರಬಹುದು. ಆ ಸಹನೆಯ ದಿನಕ್ಕಾಗಿ ನಾನು ಕಾಯುತ್ತೇನೆ, ಈ ಹೊತ್ತಿಗೂ ಜಾತಿ-ಧರ್ಮ-ದೇವರ ಹೆಸರಿನಲ್ಲಿ ನಿರಂತರವಾಗಿ ಶೋಷಣೆಯಾಗುತ್ತಿದೆ. ನಾನು ಯಾವತ್ತಿಗೂ ಅದನ್ನು ಸಹಿಸಿಕೊಂಡವನಲ್ಲ . ಬಹುಶಃ ಬಿಳಿಮಲೆಯವರು ನನ್ನ ಕುರಿತು ಹೇಳಿದ ಮಾತು ಸುಮ್ಮನೆ ತಮಾಷೆಗೆ ಹೇಳಿದ್ದಲ್ಲ, ಅದು ಒಂದು ಗಂಭೀರವಾದ ಆಲೋಚನೆಯೆಂದು ನಾನು ಭಾವಿಸಿದ್ದೇನೆ. ಅಸ್ಪಶ್ಯರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯ ಎಸಗುವ ಸಮುದಾಯಗಳು ಯಾವ ಸಮುದಾಯಗಳ ವಿರುದ್ಧ ಕತ್ತಿ ಮಸೆಯುತ್ತವೆಯೋ ಅಂತಹ ಸಮುದಾಯದ ರೂಪಕವಾಗಿ ಪ್ರತಿಮೆ ಮಾಡಿಸುವುದಾದರೆ, ಆ ಸಮುದಾಯ ಮಾನವೀಯತೆಯ ಕಡೆ ಮೇಲೇರುತ್ತಿದೆ ಎಂದು ಭಾವಿಸಬಹುದು.
ನಮ್ಮದೇ ನೆಲದ ಹನ್ನೆರಡನೇ ಶತಮಾನದ ಚಳವಳಿ ಅನುಭವಮಂಟಪದ ರೂಪಕವಾಗಿ ಮಾನವ ಬಂಧುತ್ವಕ್ಕಾಗಿ ಹಂಬಲಿಸಿತ್ತು. ಅದೇ ಒಂದು ಧರ್ಮವೋ, ಜಾತಿಯೋ ಆಗಿ ಆ ಸಮುದಾಯ ಈಗ ಅಸ್ಪಶ್ಯರನ್ನು ಹರಿದು ಮುಕ್ಕುತ್ತಿದೆ. ಈ ಎಲ್ಲಾ ಕಾರಣಗಳಿಗೆ ಬಿಳಿಮಲೆ ಯವರು ಹೇಳಿದ ಮಾತು ಬಹಳ ದಿನಗಳವರೆಗೆ ನನ್ನನ್ನು ಕಾಡಿಸಿತು. ಅದೇ ಹೊತ್ತಿನಲ್ಲಿ ‘ಕಾಗೆ ಮುಟ್ಟಿದ ನೀರನ್ನೂ’ ಕೂಡ ನಾನು ಓದುತ್ತಿದ್ದೆ. ಬಿಳಿಮಲೆಯವರನ್ನು ಬಂಟಮಲೆಯ ಕಾಡಿನ ಮಳೆ ತೊಳೆದ ಮನುಷ್ಯನನ್ನಾಗಿ ರೂಪಿಸಿರಬಹುದೇ ಅನ್ನಿಸಿದ್ದುಂಟು. ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ನಾವು ಒಟ್ಟಿಗೆ ಹೊರಟಾಗ ನೆಲಮಂಗಲದಲ್ಲಿ ತಿಂಡಿ ತಿಂದು ಹೋಟೆಲ್ನಲ್ಲಿ ನಾವು ಅಲ್ಲೇ ವಿಶ್ರಮಿಸಿದೆವು. ಗೆಳೆಯರು ನಮ್ಮಿಬ್ಬರ ಭಾವಚಿತ್ರ ತೆಗೆದಾಗ ಇಬ್ಬರೂ ರೂಪದಲ್ಲಿ ಒಂದೇ ರೀತಿ ಕಾಣುವುದನ್ನು ನೋಡಿದ ಅನೇಕರು ಅಣ್ಣ ತಮ್ಮಂದಿರು ಎಂದು ಭಾವಿಸಿದ್ದು ನಮ್ಮಿಬ್ಬರ ಸಂತೋಷವನ್ನು ಹೆಚ್ಚಿಸಿತು.
ನನ್ನ ನೋಡಿದವರೆಲ್ಲಾ ತಿಪ್ಪಕ್ಕನ ಪಡಿಯಚ್ಚು ಅನ್ನುತ್ತಿದ್ದರು. ಬಿಳಿಮಲೆಯವರನ್ನು ನೋಡಿದವರೂ ಕೂಡ ತಾಯಿಯಂತೆ ಕಾಣುತ್ತಾರೆ ಅನ್ನುತ್ತಾರೆ. ಲೋಕದ ಎಲ್ಲಾ ಮಕ್ಕಳು ತಾಯಿಯ ಮಕ್ಕಳೇ ಅದರಲ್ಲಿ ಎರಡು ಮಾತಿಲ್ಲ. ಅದರಲ್ಲಿ ಕೆಲವರು ಮಾತ್ರ, ತಾಯಿಯ ಕಷ್ಟಗಳನ್ನು ಯಥಾವತ್ ಅನುಭವಿಸುತ್ತಾರೆ. ಅದರಲ್ಲಿ ನಾವು ಇಬ್ಬರೂ ಇರಬಹುದೇ ? ಬಿಳಿಮಲೆಯವರು ಪಾಂಡಿತ್ಯ ಹಾಗೂ ವಿದ್ವತ್ತಿನಲ್ಲಿ ಅದ್ವಿತೀಯ ಸಾಧನೆ ಮಾಡಿರುವವರು. ನಾನು ಈಗ ಕಣ್ಣು ಬಿಡುತ್ತಿರುವ ಮಿಣುಗು ದೀಪ ಅಷ್ಟೇ. ಅವರು ಮಳೆಯಲ್ಲಿ ಬೆಳೆದರೋ ಮಳೆಯೇ ಅವರನ್ನು ಬೆಳೆಸಿತೋ ಅವೆಲ್ಲಾ ಅವಿಸ್ಮರಣೀಯ ಘಳಿಗೆಗಳು. ಬಿಳಿಮಲೆಯವರ ಆತ್ಮಕಥನ ಓದುತ್ತಾ ಎಷ್ಟೊಂದು ಮಳೆಯ ನೆನಪುಗಳು. ಕನ್ನಡದ ಉತ್ಕೃಷ್ಟ ಕಾದಂಬರಿ ಮಲೆಗಳಲ್ಲಿ ಮದುಮಗಳು ಓದಿದ ನೆನಪಾಯಿತು. ಬಹುಶಃ ಅವರೊಂದಿಗೆ ನನ್ನ ಮೊದಲ ಭೇಟಿ ನಲವತೈದು ವರ್ಷಗಳಿಗಿಂತ ಹಿಂದಿನದ್ದಿರಬೇಕು. ನಾನು ದಸಂಸ ಕಾರ್ಯಕರ್ತನಾಗಿದ್ದಾಗ ಕರ್ನಾಟಕದ ಉದ್ದಗಲಕ್ಕೂ ಅಲೆದಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ದಸಂಸದಲ್ಲಿ ಸಕ್ರಿಯವಾಗಿದ್ದ ಡೀಕಯ್ಯನವರೊಂದಿಗೆ ಬೆಳ್ತಂಗಡಿಯಲ್ಲಿ ಬಿಳಿಮಲೆ ಅವರನ್ನು ಭೇಟಿಯಾಗಿದ್ದೆ. ಆಗ ಅವರ ಕೈಯಲ್ಲಿ ಸೀಮೆಎಣ್ಣೆಯನ್ನು ತೆಗೆದುಕೊಂಡು ಹೋಗಲು ತಂದಿದ್ದ ಕ್ಯಾನ್ ಇತ್ತು. ಬಿಳಿಮಲೆಯವರು ಮತ್ತು ಡೀಕಯ್ಯ ಮಾತನಾಡಿಕೊಳ್ಳುತ್ತಿದ್ದರು. ಬದುಕು ಹೋರಾಟವಲ್ಲವೇ? ಅಗತ್ಯವಸ್ತುಗಳು ಬೇಕಲ್ಲವೇ ಎಂದು ಹೇಳಿದ್ದು ನನಗೆ ನೆನಪಿದೆ. ನನ್ನ ಕಡೆ ಗಮನಿಸಿದಾಗ ಡೀಕಯ್ಯ ಅವರು ನನ್ನನ್ನು ದಸಂಸ ಕಾರ್ಯಕರ್ತ, ಸಕಲೇಶಪುರದ ಕಡೆಯವರು ಎಂದು ಬಿಳಿಮಲೆಗೆ ಪರಿಚಯ ಮಾಡಿಕೊಟ್ಟರು. ನಾನು ನೋಡಲು ‘ಪಂಜು ಗಂಗೂಲಿ’ ಬರೆದ ವ್ಯಂಗ್ಯ ಚಿತ್ರದಂತಿದ್ದೆ. ‘ಓಹೋ ಎಂತದ್ದು ಹೆಸರೇಳಿದಿರಲ್ಲ’ ನಾನೇ ‘ಸುಬ್ಬು ಹೊಲೆಯಾರ್’ ಎಂದೆ. ಬಿಳಿಮಲೆ ಕಣ್ಣಗಲಿಸಿದರು. ಟೀ ಕುಡಿಯಬಹುದಲ್ಲ ಅಂದರು.. ನಾವು ಟೀ ಕುಡಿದು ಬೇರ್ಪಟ್ಟೆವು. ಮತ್ತೆ ಅವರನ್ನು ಕಂಡದ್ದು ದಿಲ್ಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸಭೆಯಲ್ಲಿ. ಅಲ್ಲಿ ನಾನೂ ಒಂದು ಕವಿತೆ ಓದಿದ್ದೆ. ವೇದಿಕೆ ಇಳಿಯುತ್ತಿದ್ದಂತೆ ಬರಗೂರು ಮತ್ತು ಬಿಳಿಮಲೆ ಒಟ್ಟಿಗೆ ಅಭಿನಂದಿಸಿದರು. ನಾನು ಭೂಮಿಗೆ ಇಳಿದು ಹೋದೆ. ಲಂಕೇಶರು ಹೇಳಿದ ‘‘ಉಳಿದ ಸಮುದಾಯದವರ ಒಂದು ಮುಗುಳುನಗೆ ಸಾವಿರ ಆನೆ ಬಲ ಕೊಡುತ್ತದೆ’’ ಎನ್ನುವುದು ನನ್ನಂಥವನಿಗೆ ಬಿಳಿಮಲೆಯಂಥವರು ಹೇಳಿದಾಗ ಆಗುವ ಖುಷಿಯೇ ಬೇರೆ. ಮತ್ತೆ ಅವರನ್ನು ನೋಡಿದ್ದು ನಾನು ಅರಸು ಭವನದಲ್ಲಿ. ಇದರ ನಡುವೆ ಮಾನವ ಬಂಧುತ್ವ ವೇದಿಕೆ ಸದಾಶಿವನಗರದಲ್ಲಿ ಏರ್ಪಡಿಸಿದ್ದ ‘ಕಾಗೆ ಮುಟ್ಟಿದ ನೀರು’ ಸಂವಾದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಬಿ.ಕೆ. ಹರಿಪ್ರಸಾದ್ರಂತಹ ಅಪ್ಪಟ ರಾಜಕಾರಣಿಯೊಬ್ಬರು ಬಿಳಿಮಲೆ ಬರವಣಿಗೆ ಕುರಿತು ಆಡಿದ ಮಾತುಗಳು ರಾಜಕಾರಣ ಮತ್ತು ರಾಜಕಾರಣಿಗಳು ಸಾಹಿತ್ಯ ಮತ್ತು ಓದಿನಿಂದ ಎಷ್ಟು ಪ್ರಭಾವಿತರಾಗುತ್ತಾರೆ ಎನ್ನುವುದನ್ನು ನಾನು ಅಂದು ತಿಳಿದುಕೊಂಡೆ. ಬಿಳಿಮಲೆ ಪ್ರತಿಮೆಯ ಬಗ್ಗೆ ಮಾತನಾಡಿದ ನಂತರ ಬಿಳಿಮಲೆ ಅವರ ಆತ್ಮಕಥನವನ್ನು ಓದಿದೆ. ಅದು ಒಂದು ರೀತಿಯ ತನ್ಮಯತೆಯಿಂದ ಬರೆದ ಬರವಣಿಗೆ. ಅದರಲ್ಲಿ ಮರೆಯಲಾರದ ಒಂದು ದೃಶ್ಯ, ಬಿಳಿಮಲೆ ಬಾಲ್ಯದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಪಾಠಶಾಲೆಗೆ ಹೋಗಲು ಒಂದು ಹೊಳೆಯನ್ನು ದಾಟಬೇಕಾಗಿರುತ್ತದೆ. ತುಂಬಾ ಮಳೆ ಬಂದಾಗ ಶಾಲೆಗೆ ಹೋಗುವಾಗ ಮತ್ತು ಬರುವಾಗ ಹೊಳೆದಾಟಿಸುವ ಕೆಲಸ ಅಮ್ಮ ಮಾಡುತ್ತಿರುತ್ತಾರೆೆ. ಒಂದು ದಿನ ಶಾಲೆಗೆ ಹೋದ ನಂತರ ಭಾರೀ ಮಳೆ ಬಂದು ಹೊಳೆ ತುಂಬಿ ಹರಿಯುತ್ತಿರುತ್ತದೆ. ಆಗ ಬಿಳಿಮಲೆ ಹೊಳೆಯ ದಡಕ್ಕೆ ಬಂದು ಅಮ್ಮ ಬರುತ್ತ್ತಾರೆಂದು ಕಾಯುತ್ತಿರುತ್ತಾರೆ. ಆದರೆ ಅಮ್ಮ ಬರುವುದಿಲ್ಲ. ಕಾರಣ ಅವರು ತಿಂಗಳ ಸಮಸ್ಯೆಯಿಂದಾಗಿ ಹೊಳೆದಾಟಬಾರದೆಂಬ ನಂಬಿಕೆಯಿಂದ ಮನೆಯಲ್ಲಿಯೇ ಉಳಿಯುತ್ತಾರೆ. ಮಗ ಈ ಜೋರು ಮಳೆಯಲ್ಲಿ ನೆಂಟರ ಮನೆಯಲ್ಲಿ ಉಳಿದುಕೊಂಡಿರಬಹುದು ಎಂದು ಊಹಿಸಿಕೊಳ್ಳುತ್ತಾರೆ. ಬಿಳಿಮಲೆ ಅಮ್ಮನ ದಾರಿ ಕಾಯುತ್ತ ಕಾಯುತ್ತ, ಕತ್ತಲಾದನಂತರ ದಟ್ಟ ಕಾಡಿನ ದೊಡ್ಡ ಮರದ ಬುಡದಲ್ಲಿ ಮಳೆಗೆ ಬಳಸುತ್ತಿದ್ದ ಗೊರಗವನ್ನು ಕವುಚಿಕೊಂಡು ಆ ಬುಡದಲ್ಲೇ ಮಲಗಿ ಬಿಡುತ್ತಾರೆ. ಎಚ್ಚರವಾದಾಗ ಬೆಳಗಾಗಿರುತ್ತದೆ. ಕಾಡೆಂಬ ತಾಯಿ ಅವರನ್ನ್ನು ರಕ್ಷಿಸಿದ್ದಾಳೆ. ತಾಯಿಯ ಮನಸ್ಸು ಕೇಳಬೇಕಲ್ಲ, ಸಂಪರ್ಕಕ್ಕೆ ಯಾವ ವ್ಯವಸ್ಥೆಗಳೂ ಇಲ್ಲದ್ದರಿಂದ ನನ್ನ ಮಗ ಸುರಕ್ಷಿತವಾಗಿರುತ್ತಾನೆಂಬ ನಂಬಿಕೆಯಿದ್ದರೂ ಬೆಳಗ್ಗೆ ಎದ್ದವರೇ ಓಡೋಡಿ ಬಂದು, ಹೊಳೆ ದಾಟಿ ಮಗನ ಹುಡುಕಾಡುತ್ತಾರೆ. ಪಕ್ಕದ ದೊಡ್ಡ ಮರದ ಕೆಳಗೆ ಗೊರಗ ಕಾಣಿಸುತ್ತದೆ. ತಾಯಿ ಮಕ್ಕಳ ಸಂಬಂಧ ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಅದು ನಿಗೂಢ ಮತ್ತು ವಿಸ್ಮಯ. ಈ ಹೊತ್ತಿಗೂ ಪ್ರಕೃತಿ ನಮ್ಮನ್ನು ಕಾಪಾಡುತ್ತಲೇ ಇದೆ. ಕಾಗೆ ಕೂಡಾ ಪ್ರಕೃತಿಯ ಒಂದು ಭಾಗವೇ. ನಾವೆಲ್ಲಾ ಕಾಗೆಯ ಬಳಗದವರೇ. ಆದರೆ ನೀರು ಮುಟ್ಟಿಸಿಕೊಳ್ಳುವ ಕ್ರಿಯೆ ಮತ್ತು ಮುಟ್ಟಿಸಿಕೊಳ್ಳದ ಪ್ರಕ್ರಿಯೆ ಇವತ್ತಿಗೂ ನಡೆಯುತ್ತಿದೆ. ಬಿಳಿಮಲೆ ಹೇಳಿದ ಪ್ರತಿಮೆಯ ಮಾತು ಮನುಷ್ಯ ಜೀವಿಯ ಸಂಬಂಧಗಳನ್ನು ಗಟ್ಟಿಗೊಳಿಸುವಂತಹದ್ದು. ಅದಕ್ಕೆಲ್ಲಾ ನಾವು ಒಬ್ಬರಿಗೊಬ್ಬರು ಕೃತಜ್ಞರಾಗಿರಬೇಕು.
ಈ ಹೊತ್ತಿನ ದೇಶದ ಅಸಹನೆ ಮತ್ತು ಕರಾವಳಿಯ ಮೂಲಭೂತವಾದಿಗಳಿಂದ ನಮ್ಮ ಬೇಗುದಿ ಹೆಚ್ಚುತ್ತಿದೆ. ನೀರು, ಕಾಗೆ, ಅವ್ವ ಎಲ್ಲಾ ಜೀವ ಉಳಿಸುವ ವಾಹಕಗಳು. ಲಂಕೇಶರು ದಕ್ಷಿಣ ಕನ್ನಡವನ್ನು ಕುರಿತು ‘ಸಸ್ಯಶಾಮಲೆಯ ನಾಡು’ ಎಂದು ಹೇಳಿದ ಮಾತು ಈ ಮಳೆಗಾಲದ ಹೊತ್ತಿನಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ. ಸಮುದ್ರದ ಅಲೆಗಳಂತೆ ಎಲ್ಲಾ ರಕ್ತಸಿಕ್ತ ಕಲೆಗಳನ್ನು ಅಳಿಸಿಹಾಕುವ ಜೀವ ಜಲದ ಅಲೆಗಳಂತಿರಬೇಕು ನಾವು. ಆಗ ಮಾತ್ರ ಕಾಗೆಮುಟ್ಟಿದ ನೀರನ್ನು ಎಲ್ಲರೂ ಮುಟ್ಟುವ ಒಂದು ಸಾಂಸ್ಕೃತಿಕ ಪ್ರಜಾಪ್ರಭುತ್ವ ಅರಳಲು ಸಾಧ್ಯವಾಗುತ್ತದೆ.