ಕುದಿಯುವ ಕಣ್ಣೀರು ಹೆಬ್ಬಿರುಳಿನ ನಿಬ್ಬೆರಗು

ಈಎರಡು ಕವನ ಸಂಕಲನಗಳ ಶೀರ್ಷಿಕೆ ಮತ್ತು ಆ ಕಾವ್ಯ ಉಸಿರಾಡುವ ಉಸಿರಿನ ಕುರಿತು ಮಾತನಾಡುವುದಾದರೆ, ಸಂಕಲನಗಳು ಬಿಡುಗಡೆಯಾದ ರಾತ್ರಿ ಬಹಳ ಕುತೂಹಲದಿಂದ ಆ ರಾತ್ರಿಯೇ ಓದುತ್ತಾ ಹೋದೆ. ಒಂದು ರೀತಿಯ ಮನಸ್ಸು ಮರಗಟ್ಟಿದ ಹಾಗೆ ಮತ್ತು ಅದನ್ನು ಹುಡುಕಾಟದಲ್ಲಿ ಯೋಚಿಸಿದಾಗ ಕಳೆದ 50 ವರ್ಷಗಳಲ್ಲಿ ನನ್ನ ಪಾದ ಮೆದುಳಿನ ಅರಿವಿನಲ್ಲಿ ಬಂದ ಒಂದು ವಾಕ್ಯ ‘‘ಕನ್ನಡ ಕಾವ್ಯದ ಜೀವದುಸಿರು ದಲಿತ ಕಾವ್ಯ’’ ಎಂದು ಹೇಳಬೇಕೆನಿಸಿತು. ಈ ಜಗತ್ತಿನಲ್ಲಿ ಉಸಿರಾಡುವ ಎಲ್ಲ ಜೀವಿಗಳ ಉಸಿರನ್ನು ಎಲ್ಲರೂ ಉಸಿರಾಡುತ್ತೇವೆ. ಈ ಉಸಿರು ಸಾರ್ವತ್ರಿಕ. ಹಾಗೆ ನೋಡಿದರೆ ನಮ್ಮ ಜೀವ ಪ್ರಾಣ ಇರುವುದೇ ಗಾಳಿಯಲ್ಲಿ. ಅಂತಿಮವಾಗಿ ಬುದ್ಧ ಹೇಳಿದ ಒಂದು ಮಾತು ಉಸಿರನ್ನು ಕೇಂದ್ರೀಕರಿಸಿದ ಮತ್ತು ಸಾಮಾನ್ಯವಾಗಿ ನಾವೆಲ್ಲ ಹೇಳುವ ಮಾತು ಯಾರಾದರೂ ನಮ್ಮನ್ನು ಅಗಲಿದಾಗ ಉಸಿರು ನಿಂತು ಹೋಗಿದೆ, ಪ್ರಾಣ ಹೋಗಿದೆ.
ದಲಿತ ಕಾವ್ಯ ಎನ್ನುವುದು ಒಂದು ಸೀಮಿತ ಚೌಕಟ್ಟಿನಲ್ಲಿ ಹೇಳುತ್ತಿರುವ ಮಾತಲ್ಲ. ನಮ್ಮ ಹಿರಿಯ ಕವಿ ಡಾ. ಅರವಿಂದ ಮಾಲಗತ್ತಿಯವರು ಒಂದು ಸ್ಪಷ್ಟವಾದ ಅರ್ಥ ಹೇಳಿದ್ದಾರೆ. ದಲಿತ ಎಂದರೆ ಸೀಮಾತೀತ. ಬಹುಶಃ ಈ ಸೀಮಾತೀತ ಶಬ್ದ ಕೂಡ ಗಾಳಿ ಉಸಿರಿಗೆ ಸಂಬಂಧಿಸಿದ್ದು. ಯಾವ ಸಾಹಿತ್ಯ, ಕಲೆ, ನಾಟಕ, ಕಾವ್ಯ ಕಲಾ ಪ್ರಕಾರಗಳು ಜೀವ ಮಿಡಿಯುವ ಸಂವೇದನೆಗಳಿಗೆ ಒಳಪಟ್ಟಿರುತ್ತವೆಯೋ ಅದು ಜೀವ ಸ್ಪಂದನೆಯಾಗಿರುತ್ತದೆ. ಇವತ್ತು ನಮ್ಮ ಯುವ ಸಮುದಾಯ ಬಹು ದೊಡ್ಡ ರೀತಿಯಲ್ಲಿ ಕಾವ್ಯದ ಕಡೆ ಒಲಿದಿದೆ. ಬರೆಯುತ್ತಾ ಬರೆಯುತ್ತಾ ಅವರಿಗೆ ತಿಳಿಯುತ್ತದೆ, ನಾವು ಬರೆಯುತ್ತಿರುವ ವಾಕ್ಯ ಅಥವಾ ಶಬ್ದಗಳಿಗೆ ಎಷ್ಟು ಜೀವಹನಿ ಇದೆ ಎಂದು. ತಮ್ಮ ಮಿತಿ ಅರಿತು ಕೆಲವರು ನಿರ್ಗಮಿಸುತ್ತಾರೆ, ಕೆಲವರು ಚಿಗುರುತ್ತಾರೆ, ಕೆಲವರು ಉಳಿಯುತ್ತಾರೆ, ಕೆಲವರು ಎದ್ದು ಬಿದ್ದು ಹೊರಳಾಡುತ್ತಾರೆ. ಜೀವ ಸಂವೇದನೆ ಇಲ್ಲದವರಿಗೆ ಒಂದು ಗುಲಗಂಜಿನೂ ಎತ್ತಲು ಸಾಧ್ಯವಾಗುವುದಿಲ್ಲ. ಎಲ್ಲದಕ್ಕೂ ಜೀವ ಪ್ರೀತಿ ಬೇಕು. ನನಗೆ ಈ ಕ್ಷಣ
ಜಿಎಸ್‌ಎಸ್ ಬರೆದ ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಎಂಬ ಕವನದ ಸಾಲು ನೆನಪಾಗುತ್ತದೆ. ಮೇಲ್ಕಂಡ ಎರಡು ಕವನ ಸಂಕಲನಗಳನ್ನು ಬೆರಗು ಗಣ್ಣುಗಳಿಂದ ಓದಿದ ಪುಟ್ಟ ಅರಿವಿನಿಂದ ಒಂದೆರಡು ಮಾತುಗಳು ಬರೆಯಲಿಕ್ಕೆ ಹೊರಟಿದ್ದೇನೆ.
ಇದರಲ್ಲಿ ಕವಿ ವಿಕಾಸ್ ಮೌರ್ಯ ಅವರ‘ಕುದಿಯುವ ಕಣ್ಣೀರು’ ಜಾಗತಿಕ ಮಟ್ಟದ ಜೀವ ಸಂಕುಲದ ದುಗುಡ ದುಮ್ಮಾನಗಳನ್ನು ಅಭಿವ್ಯಕ್ತಿಸುವ ಶೀರ್ಷಿಕೆ ಎಂತಹವರಿಗೂ ಆಕರ್ಷಿಸುತ್ತದೆ. ಕವಿ ವಿಕಾಸ್ ಗದ್ಯದಲ್ಲಿ ಪ್ರಬುದ್ಧ ಬರಹಗಾರ. ಅವರ ಬರಹಗಳಲ್ಲಿ ಒಳನೋಟ, ಸೂಕ್ಷ್ಮತೆ, ಅರಿವು, ಎಚ್ಚರವಿದೆ. ಮಡುಗಟ್ಟಿದ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿನ ಅವಸ್ಥೆಗಳ ಬಗ್ಗೆ ಅವರಿಗೆ ಕಡು ಕೋಪವಿದೆ. ಅದನ್ನು ಅವರು ಅವರ ಗದ್ಯ ಬರಹದಲ್ಲಿ ಅಭಿವ್ಯಕ್ತಿಸಿ ದೊಡ್ಡ ಯಶಸ್ಸು ಕಂಡಿದ್ದಾರೆ. ಇವರ ಪೀಳಿಗೆಯ ಅನೇಕರು ಕವಿತೆಗಳನ್ನು ಬರೆದುದು ನೋಡಿ ತಾನು ಏಕೆ ಬರೆಯಬಾರದೆಂದು ಕೈ ಹಾಕಿದ್ದಾರೆ. ಇದಕ್ಕೆ ಬೆನ್ನುಡಿ ಬರೆದ ಮೂಡ್ನಾಕೂಡು ಚಿನ್ನಸ್ವಾಮಿಯವರು ಕೂಡ ಇವರ ಕಾವ್ಯದ ಕುರಿತು ಮಿತಿ ಮತ್ತು ಆಳದ ವಿಸ್ತಾರವನ್ನು ಹೇಳುತ್ತಲೇ ಕಾವ್ಯ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ ಎಂದಿದ್ದಾರೆ. ಅದು ನಿಜ ಕೂಡ.
ನಾನೊಬ್ಬ ಕವಿ ಹೌದೋ ಅಲ್ಲವೋ ನನಗಿನ್ನೂ ಅನುಮಾನವಿದೆ. ಆದರೆ ನಾನೊಬ್ಬ ಕಾವ್ಯದ ಓದುಗ ಮತ್ತು ಕೇಳುಗ. ಒಳ್ಳೆ ಕವಿತೆ ಮನಸ್ಸಿನಲ್ಲಿ ಓದುವಾಗ ಕೂಡ ಕೇಳಿಸುತ್ತದೆ. ಅಂತಹ ಕವಿತೆಗಳು ಓದುವ ಎಲ್ಲರಿಗೂ ತಮ್ಮದೇ ಕವಿತೆಗಳಾಗಿಬಿಡುತ್ತವೆ. ಆಗ ಕವಿ ಗೆದ್ದಂತೆ ಕಾಣಿಸುತ್ತದೆ. ಈ ಸಂಕಲನದ ಸಾಲುಗಳ ಅಭಿವ್ಯಕ್ತಿ ಹೇಗಿದೆ ಎಂದರೆ ಕುದಿಯುವ ಮತ್ತು ಕಣ್ಣೀರು ಎರಡು ಬೇರೆ ಬೇರೆ ರೀತಿಯ ಅಸ್ತ್ರಗಳಂತೆ ಕೇಳಿಸುತ್ತವೆ. ಕುದಿಯುವುದು ಅಂದರೆ ಬೆಂಕಿಯ ಕಾವಿಗೆ ಕುದಿಯುವಂತೆ ಅದು ನಮ್ಮ ಮಾನಸಿಕ ಆಕ್ರೋಶದ ಬಗ್ಗೆ ಕಣ್ಣೀರು ಕುದಿಯುವ ಹಬೆಯಿಂದ ಉಂಟಾದ ಹನಿಗಳು. ಈ ಎರಡು ಶಬ್ದಗಳು ಒಂದು ರೀತಿಯ ಅಸಹನೀಯ ಕಿಚ್ಚನ್ನು ಹೇಳುವ ಶಬ್ದಗಳ ಅಸ್ತ್ರಗಳೇ ಆಗಿವೆ. ಇದನ್ನು ವಿಕಾಸ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಒಂದಿಷ್ಟು ಸಾಲುಗಳು ಪ್ರಾಮಾಣಿಕತೆ, ಮುಜುಗರ, ಸಂಕೋಚ, ಅರಿವು ಮೂಡಿಸಿದರೆ, ಇನ್ನೂ ಕೆಲವು ಸಾಲು ಕಾವ್ಯದ ಹೊರತಾದ ಸಾಲುಗಳು ಅನಿಸಿಬಿಡುತ್ತವೆ. ನಾವು ಏನೇ ಬರೆದರೂ ಓದುಗರ ಎದೆಗಿಳಿಯಬೇಕು, ಅದು ಅಂತಿಮ. ವಿಕಾಸ್ ಅವರ ಕಾವ್ಯದಲ್ಲಿ ಕಾವ್ಯ ಬರೆಯುವ ಉತ್ಸಾಹವಿದೆ. ಆದರೆ ಇನ್ನಷ್ಟು ಮನಸ್ಸಿನ ಬೆರಳು ಪಳಗಬೇಕಿತ್ತು ಅನಿಸುತ್ತದೆ. ಇವರ ಬರವಣಿಗೆ ಕುಲುಮೆಯಲ್ಲಿ ಕಾದ ಮನಸ್ಸಿನ ಭಾವನೆಗಳಿಗೆ ಇನ್ನಷ್ಟು ಉಳಿಯಪೆಟ್ಟು ಬಿದ್ದಿದ್ದರೆ ಕಾವ್ಯದ ತೀಕ್ಷ್ಮತೆ ಇನ್ನಷ್ಟು ಮೊನಚಾಗುತ್ತಿತ್ತು.
ವಿಕಾಸ್ ಗದ್ಯದ ಮೆದುಳಲ್ಲಿ ಪದ್ಯದ ಹೃದಯ ಹುಡುಕುವ ಕವಿಯಾಗಿದ್ದಾರೆ. ಆದರೂ ನನಗಿಷ್ಟವಾದ ಅನೇಕ ಸಾಲುಗಳಿವೆ. ಅದನ್ನು ಈಗಾಗಲೇ ಈ ಸಂಕಲನಕ್ಕೆ ಮುನ್ನುಡಿ ಬರೆದ ಭಾರತಿದೇವಿ ಮತ್ತು ಹಿರಿಯ ಕವಿಗಳಾದ ಚಿನ್ನಸ್ವಾಮಿಯವರು ತುಂಬಾ ಚೆನ್ನಾಗಿ ಗುರುತಿಸಿದ್ದಾರೆ. ಕನ್ನಡ ಎನ್ನುವ ಕವಿತೆ ಜೋರಾಗಿ ಓದಿಕೊಂಡರೂ ಮೆಲುವಾಗಿ ಓದಿಕೊಂಡರೂ ಮನಸ್ಸಿಗೆ ಹಿತವೆನಿಸುತ್ತದೆ.
ಕನ್ನಡ ಎಂದರೆ
ಕೊರಬಾಡು ಇದ್ದಂಗೆ
ಇರೋ ಮೂರುಗೇಣು ದಾಟಿ
ಸ್ವರ್ಗನೇ ಕಂಡಂಗೆ
ಈ ಕವಿತೆಯನ್ನು ಅನುಭವಿಸುತ್ತಾ ಓದಬೇಕು. ಮುಂದುವರಿದಂತೆ ಕೊನೆಯ ಪ್ಯಾರಾ ಕನ್ನಡದ ವೈಭವೀಕರಣವೆಂಬಂತೆ ನಲ್ನುಡಿಯಾಗಿ
ರವಿಯ ಮೈಬಣ್ಣ
ಎಲೆ ಅಡಿಕೆ ಸುಣ್ಣ
ಕನ್ನಡ ಅಂದರೆ ಅನ್ನ
ಕನ್ನಡ ಅಂದರೆ ಜನ
ಕನ್ನಡದ ಅಸ್ಮಿತೆಯೊಳಗೆ ಒಂದು ಸಮುದಾಯವನ್ನು ಅಂಚಿಗೆ ಎಸೆಯಲ್ಪಟ್ಟರೂ ಅವರೊಳಗಿನ ಕನ್ನಡದ ಜೀವ ಮತ್ತು ಗಮಲು ಎಷ್ಟು ಆವರಿಸಿಕೊಂಡಿದೆ ಎನ್ನುವುದನ್ನು ತಿಳಿಸುತ್ತದೆ. ದಲಿತರು ಎನ್ನುವ ಇನ್ನೊಂದು ಕವಿತೆಯಲ್ಲಿ ಒಂದು ಸಮುದಾಯ ಹೇಗೆ ಅರಳುತ್ತದೆ ಅಂದರೆ ಭೂಮಿಯನ್ನು ಉತ್ತಷ್ಟು ಫಲ ಕೊಡುವ ಹಾಗೆ;
ಹೂವಿನ ಪರಿಮಳದಂತಹವರು
ಅಸ್ಪಶ್ಯರೆಂದು ಹೀಗೆಳೆದು
ಧರ್ಮ ಶಾಸ್ತ್ರಗಳ ಒದ್ದು
ಇಲ್ಲೇ ಕೇರಿಯಲ್ಲಿ ನಿಂತವರು
ಮುಂದುವರಿದ ಈ ಕವಿತೆ
ಆದಿಭಾರತದೀ ಹರಡಿ
ಅನ್ಯರ ದಾಳಿಗೆ ಕೆರಳಿ
ಬೆಂಕಿಯಿಟ್ಟರು ಬಾಡದೆ ಚಿಗುರಿದ
ಗಾಯದ ಅರಳಿಮರಗಳು
ಈ ಸಾಲುಗಳನ್ನು ನೆನೆದರೆ ಉಸಿರಿಗೆ ಉಸಿರಾದವರು ಎನ್ನುವ ಪ್ರೀತಿಯ ನುಡಿಗಟ್ಟು ಎಲ್ಲೆಲ್ಲೂ ಕೇಳಿ ಬರುತ್ತದೆ. ಇವು ಇಂತಹ ಸಾಧ್ಯತೆಗಳು ನೊಂದವರ ಎದೆಯಲ್ಲಿ ಅರಳಲು ಮಾತ್ರ ಸಾಧ್ಯ.
ನಮ್ಮ ಚಳವಳಿಯಲ್ಲಿದ್ದ ಸಾಹಿತ್ಯದಲ್ಲಿ ಬೆಳಗಿದ ಕೆ.ಬಿ. ಸಿದ್ದಯ್ಯ, ಸಿದ್ದಲಿಂಗಯ್ಯ, ಎನ್.ಕೆ. ಹನುಮಂತಯ್ಯ ಗಾಂಧಿ ತಾತನ ಬಗ್ಗೆ ಹೀಗೆ ಇನ್ನಿತರ ಅನೇಕ ಶೀರ್ಷಿಕೆಗಳು ಸ್ವಾತಂತ್ರ್ಯ, ಸ್ವಾಭಿಮಾನ, ಜೈ ಭೀಮ್ ಕಾಮ್ರೇಡ್, ಕವಿತೆಗಳು ಕೆಲವು ಮೌನವಾಗಿ ಮಾತನಾಡುತ್ತವೆ. ಇನ್ನು ಕೆಲವು ಕವಿತೆಗಳು ಬಾಯಿಬಿಟ್ಟು ಮಾತನಾಡುತ್ತವೆ. ಇಡೀ ಸಂಕಲನದ ಎಲ್ಲಾ ಕವಿತೆಗಳು ಒಂದು ರೀತಿಯ ಅಸಹನೆಗೊಳಗಾದ ನೊಂದವರೆಲ್ಲರ ಪರವಾಗಿ ಈ ಜೀವತಂತು ಮಿಡಿಯುವ ಹಾಗೇ ಓದಿಸಿಕೊಳ್ಳುತ್ತವೆ. ಒಬ್ಬ ಬರಹಗಾರನಿಗೆ ತನ್ನ ಬರವಣಿಗೆಯ ಮಿತಿ ಮತ್ತು ಅರಿವು ಇದ್ದೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಗದ್ಯದಲ್ಲಿ ಗಂಭೀರವಾಗಿ ಪಳಗಿರುವ ಡಾ. ಬಾಬಾಸಾಹೇಬ್ ಅಂಬೇಂಡ್ಕರ್ ಕುರಿತ ಒಂದು ಪುಸ್ತಕದಲ್ಲಿ ಅನುವಾದದಲ್ಲಿ ತೋರಿರುವ ಪ್ರಬುದ್ಧದ ತಿಳುವಳಿಕೆ ಇರುವ ವಿಕಾಸ್ ಕಾವ್ಯವನ್ನು ಇನ್ನಷ್ಟು ಗಂಭೀರವಾಗಿ ಓದಿಕೊಂಡರೆ ಅವರ ಕಾವ್ಯ ಕುಲುಮೆಯ ಎದೆಯಲ್ಲಿ ಕವಿತೆಗಳು ಪ್ರಖರವಾಗಿ ಹೊರಹೊಮ್ಮುವುದು ಕಷ್ಟವೇನಲ್ಲ.ಈ ಮೊದಲ ಸಂಕಲನಕ್ಕೆ ಅವರಿಗೆ ನಾವೆಲ್ಲರೂ ಶುಭಕೋರೋಣ.
ಇನ್ನೊಂದು ಮಹತ್ವದ ಸಂಕಲನ ಕುರಿತು ಮಾತನಾಡುವುದಾದರೆ ಹೆಬ್ಬಿರುಳಿನ ನಿಬ್ಬೆರಗು ಶೀರ್ಷಿಕೆಯೇ ಈ ಕವನ ಸಂಕಲನದ ಶಕ್ತಿಯನ್ನು ಸೂಚಿಸುವಂತಿದೆ. ಒಬ್ಬ ಹಿರಿಯ ಕವಿಗಳು ಹೇಳಿದ ಮಾತು ನೆನಪಿಗೆ ಬರುತ್ತದೆ. ಕಾವ್ಯ ಬೆಚ್ಚಿ ಬೀಳಿಸದಿದ್ದರೆ ಅದೆಂತಹ ಕಾವ್ಯ. ಈ ಶೀರ್ಷಿಕೆಯಲ್ಲೇ ಒಂದು ವಿಶಿಷ್ಟವಾದ ಸಂವೇದನೆ ಇದೆ. ಕತ್ತಲೆಯನ್ನೇ ಬೆಳಕೆಂದು ಭಾವಿಸುವ ಈ ನಡೆ ಕಾವ್ಯದ ಬೆರಗೇ ಸೈ. ಅಲ್ಲಮನ ಬಗ್ಗೆ ನಮ್ಮ ಹಿರಿಯ ಕಿ.ರಂ. ಮಾತನಾಡುವಾಗ, ಅಲ್ಲಮ ಯಾವ ಪಟ್ಟಿಗೂ ಸಿಗದ ಅವನ ಕಾವ್ಯಕ್ಕೆ ಸಮವೇ ಇಲ್ಲ ಎಂದು ಹೇಳುತ್ತಾರೆ. ಅಂತಹವರ ವಚನಗಳನ್ನು ಓದಿಯೇ ಜೀವನದ ಸಾರ್ಥಕತೆಯನ್ನು ಪಡೆಯಬೇಕು. ಎಸ್. ಮಂಜುನಾಥ್ ಕಾವ್ಯದಲ್ಲಿ ಪಳಗಿದವರು. ಬೀದಿನಾಟಕಗಳನ್ನು ಬರೆದವರು. ಇವರ ಒಡನಾಟದ ದೊಡ್ಡ ದೊಡ್ಡ ಹೆಸರುಗಳು ಅನೇಕ ದೈತ್ಯ ಬರಹಗಾರರು ಅವರೆಲ್ಲರೊಳಗೆ ತನ್ನನ್ನೇ ಸೂಜಿಯಾಗಿ ಪೋಣಿಸಿಕೊಂಡಂತೆ ಜೀವ ಸಂಬಂಧವನ್ನು ಬೆಳೆಸಿಕೊಂಡ ಕವಿ ಸದಾ ಎಲ್ಲರೊಟ್ಟಿಗೆ ಬೆರೆಯುತ್ತಾ ನಗುತ್ತಾ ಹಾಸ್ಯದ ಚಿಟಿಕಿ ಹಾರಿಸುತ್ತಾ ಸದಾ ಮುಗುಳ್ನಗೆಯಲ್ಲಿ ಇರುವ ಈ ಸಹೋದರನ ಸಾನಿಧ್ಯವೇ ಸದಾ ಜೀವೋತ್ಸವದ ಕ್ಷಣಗಳಾಗಿರುತ್ತವೆ. ಬೇರೆಯವರನ್ನು ಕಾಲೆಳೆಯುತ್ತಾ, ತನ್ನನ್ನು ಲೇವಡಿ ಮಾಡಿಕೊಳ್ಳುತ್ತಾ ಸದಾ ಖುಷಿಯಲ್ಲಿರುವ ಮಿತ್ರ. ಇಂತಹ ಉತ್ಸಾಹದ ತರುಣ ಈ ಹಿಂದೆ ಒಂದೆರಡು ಕವನ ಸಂಕಲನಗಳನ್ನು ತಂದಿದ್ದಾರೆ. ಕಾವ್ಯದಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ಆದರೆ ಈ ಸಂಕಲನದ ಗಂಭೀರ ಕಾವ್ಯದ ಬೆರಗು ನಿಜವಾಗಲೂ ನಿಬ್ಬೆರಗೆ. ಬೇಂದ್ರೆ ಮತ್ತು ಮಧುರಚೆನ್ನ ಅನ್ಯೋನ್ಯದ ಗೆಳೆಯರು. ಅದೆಂತಹ ಆಪ್ತರೆಂದರೆ ಇಬ್ಬರ ಜೀವದುಸಿರು ಒಂದೇ ನುಡಿಯಂತಿದ್ದರು. ಬೇಂದ್ರೆ ಕುಶಲಮತಿ. ಜಾಣಕವಿ. ಮಧುರಚೆನ್ನರ ಲೋಕವೇ ಬೇರೆ. ಮಧುರಚೆನ್ನರ ಮಾತು, ಉಸಿರು, ನಡೆ-ನುಡಿ, ಎಲ್ಲವೂ ಜೀವಸಂವೇದನೆಯ ಸಂಜೀವಿನಿ ತರ ಇದ್ದವರು. ಹಗುರ ಗಾಳಿಯಂತಲೂ ಇದ್ದವರು. ಜೀವಜಲದಂತಲೂ ಹರಿಯುತ್ತಿದ್ದರು. ಅವರೆದೆ ಒಂದು ಭೂಮಿಯ ಹಾಗೆ. ಇದೆಲ್ಲವೂ ಅವರು ಧ್ಯಾನಿಸಿದ ಕಾವ್ಯವಾಗಿತ್ತು. ಎಸ್. ಮಂಜುನಾಥ್ ಇವರನ್ನು ನಾವೆಲ್ಲ ಪ್ರೀತಿಯಿಂದ ಮಧುರಚೆನ್ನ ಅಂತಲೇ ಕರೆಯೋದು. ಯಾರನ್ನು ಯಾರಿಗೂ ಹೋಲಿಸಲಾಗದು. ನಮ್ಮ ಹಿರೀಕರಿಗೆ ನಾವೊಂದು ಸಾಸಿವೆಕಾಳು. ಹಾಗೆಯೇ ಅವರ ಕಣ್ಣೋಟದಲ್ಲೇ ನಾವು ಮುನ್ನಡೆಯುವವರು.
ಮಂಜುನಾಥ್ ನಮ್ಮೆಲ್ಲರ ಆತ್ಮೀಯ. ಅವರ ಈ ಸಂಕಲನ ನಮಗೆ ಕುತೂಹಲ ಹುಟ್ಟಿಸುವುದಂತು ನಿಜ. ಬಿಡುಗಡೆಯಾದ ದಿನ ನಾನು ರಾತ್ರಿ ಓದುತ್ತಾ ನಾನೇ ಕಳೆದು ಹೋದೆ ಎನ್ನುವ ಹಾಗೇ ಮೈ ಮರೆತು ಬಿಟ್ಟೆ. ಆ ನಿಶ್ಯಬ್ದದ ಹೊತ್ತಲ್ಲಿ ಈ ಕಾವ್ಯ ಸಂಗೀತದಂತೆ ಕಾವ್ಯದಲ್ಲಿ ಲೀನವಾದೆ. ಓದಿದ ಸಾಲನ್ನೇ ಮತ್ತೆ ಓದಿದೆ. ತಣ್ಣಗೆ ಹರಿಯುತ್ತಾ ಹೋದೆ. ಹಿಂದೊಮ್ಮೆ ಲಕ್ಷ್ಮೀಪತಿ ಕೋಲಾರರವರ ಒಂದು ಸಂಕಲನ ಕುರಿತು ಮಾತನಾಡುವಾಗ ನಾನೊಂದು ಮಾತು ಹೇಳಿದ್ದೆ. ಮಲೆನಾಡ ಪ್ರದೇಶದಲ್ಲಿ ಗದ್ದೆಗಳ ಪಕ್ಕ ಸಣ್ಣ ಹಳ್ಳಕೊಳ್ಳಗಳು ಹರಿಯುತ್ತವೆ. ಆ ನೀರು ಹರಿಯುವುದನ್ನು ನೋಡುತ್ತಾ ನಿಂತರೆ ಆ ನೀರೆ ನಮ್ಮೊಳಗೆ ಹರಿದಂತೆ ಅನ್ನಿಸುತ್ತದೆ. ಇನ್ನು ಮುಂದಕ್ಕೆ ಓಡಿ ಹೋಗಿ ನೋಡಿದರೆ ಆ ನೀರು ಇನ್ನಷ್ಟು ಪರಿಶುದ್ಧವಾಗಿ ಕಾಣುತ್ತದೆ. ಅಲ್ಲಿಂದ ಮುಂದಕ್ಕೆ ಹೋಗಿ ನೋಡಿದರೆ ಮೆಲ್ಲಗೆ ನಾವು ಅಲ್ಲಿ ಸೇರಿ ಹೋದಂತೆ ಅನ್ನಿಸುತ್ತದೆ. ಹೀಗೆ ನೀರೋ ನಾನೋ, ನಾನೋ ನೀರೋ; ಒಂದು ಕಾವ್ಯದ ಹರಿವು ಚಲಿಸುತ್ತಾ ಹೋದಂತೆ ಕಾವ್ಯದಲ್ಲಿ ಲೀನವಾಗಿಬಿಡುತ್ತೇವೆ. ಅಂತಹ ಓದನ್ನು ಈ ಕಾವ್ಯ ಸಂಕಲನದಲ್ಲಿ ನಾನು ಕಂಡುಕೊಂಡೆ. ಅದು ಅಧ್ಯಾತ್ಮವೋ, ಕಾವ್ಯವೋ ನಾವು ಮನಸಿಟ್ಟು ಬರೆದರೆ ಓದಿದರೆ ಯಾವುದೇ ಕೆಲಸವನ್ನು ಮಾಡಿದರೂ ನಾವು ಹೇಳಿಕೊಳ್ಳಲಾರದಂತಹ ಆನಂದ ನಮಗೆ ಸಿಗುತ್ತದೆ. ಅಂತಹದೊಂದು ಅನುಭೂತಿಯನ್ನು ಈ ಸಂಕಲನ ನನಗೆ ಕೊಟ್ಟಿದೆ. ಈ ರೂಪಕವನ್ನು ನಾನು ಏಕೆ ಹೇಳಬೇಕಾಯಿತೆಂದರೆ ಇದಕ್ಕೆ ಮುನ್ನುಡಿ ಬರೆದ ಹಿರಿಯ ಕವಿಗಳಾದ ಪ್ರೋ. ಎಸ್.ಜಿ ಸಿದ್ದರಾಮಯ್ಯ, ಇನ್ನೊಬ್ಬ ಹಿರಿಯ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬರವಣಿಗೆಯಲ್ಲಿ ಈ ಕಾವ್ಯದ ಕುರಿತು ಉತ್ಕೃಷ್ಟ ಮಾತುಗಳನ್ನು ಹೇಳಬೇಕೋ ಅಂತಹ ಮಾತುಗಳನ್ನು ಹೇಳಿದ್ದಾರೆ. ಇಂತಹ ಗುರುಗಳಿಂದ ಪ್ರಭಾವಕ್ಕೊಳಪಟ್ಟವನು, ಅಂತಹವರನ್ನು ಹಿಂಬಾಲಿಸಿದವನು ನಾನು. ಇವರ ಮಾತುಗಾರಿಕೆಯ ಮೇಲೆ ನನ್ನದೇನು ಹೆಚ್ಚುಗಾರಿಕೆ ಇಲ್ಲ. ಪ್ರೊ. ಎಸ್. ಜಿ.ಎಸ್. ರವರು ಈ ಕಾವ್ಯದ ಕುರಿತು ಮಾತನಾಡುವಾಗ ಈ ಸಂಕಲನ ಓದಿ ಸುಸ್ತಾದವರಂತೆ ಕಾಣಿಸುತ್ತಾರೆ. ಅವರ ಮಾತುಗಳಲ್ಲೇ ನೋಡಿ ಪದಕಾವ್ಯದ ಬೆರಗಿಗೆ ಬೆನ್ನು ಹತ್ತಿ ನಡೆದಿರುವ ಮಹಾಯಾನಿಗೆ ಮೌನದೊಳಗಿನ ಮಾತು ಕೂಡ ಧ್ಯಾನಗುಡಿಯ ದೀಪವಾಗಲಿ. ಈ ದೀಪ ತನ್ನ ಸುತ್ತಲಿನ ಸಾವಿರದ ಕಣ್ಣುಗಳಿಗೆ ತಮ್ಮನ್ನು ತಾವು ಕಾಣುವ ಕನ್ನಡಿಯಾಗಲಿ. ಹೆಬ್ಬೆರುಳಿನ ನಿಬ್ಬೆರಗಾಗಲಿ ಶರಣು ಎಂದಿದ್ದಾರೆ. ಇದು ಒಬ್ಬ ಮಾಗಿದ ಕವಿಯ ಹೃದಯಪೂರ್ವಕವಾಗಿ ಶರಣು ಎನ್ನುವ ಶಬ್ದ ಈ ಕಾವ್ಯವವನ್ನು ಎತ್ತರಕ್ಕೇರಿಸಿದೆ. ಇದು ಈ ಕವನ ಸಂಕಲನದ ಗೆಲುವು. ಕಾವ್ಯ ಜನಸಾಮಾನ್ಯರ ಪದವೂ ಹೌದು. ಕವಿಯೊಳಗಿನ ಕವಿತೆಗಳೂ ಹೌದು. ಅದು ಇಡೀ ಪ್ರಕೃತಿಯನ್ನು ಆವರಿಸುತ್ತದೆ. ಅದಕ್ಕೆ ಜಿ.ಎಸ್.ಎಸ್. ಅವರ ಮಾತಿನ ಸಾಕ್ಷಿ ಪ್ರಕೃತಿಯಂತೆ ಕವಿಯ ಮನಸ್ಸು. ಪ್ರೊ.
ಎಸ್.ಜಿ.ಎಸ್. ಅವರ ಮಾತಿನಲ್ಲಿ ಹೇಳುವುದಾದರೆ ಇವರಿಗೆ ಕಾವ್ಯವೆನ್ನುವುದು ಬದುಕ ಭೇದಿಸುವ ಪ್ರಕ್ರಿಯೆ. ಹೀಗಾಗಿಯೇ ಇಲ್ಲಿ ಲೋಕಾಂತವೂ ಏಕಾಂತದ ಮೂಸೆಯಲ್ಲಿ ಕುದಿಗೊಂಡು ಪಾಕವಾಗಿದೆ. ಏಕಾಂತವು ಲೋಕಾಂತದ ವಿಸ್ತರಣೆಯಲ್ಲಿ ಚಿಂತನೆಗೆ ಒಡ್ಡಿಕೊಂಡು ಮುದವಾಗಿದೆ. ಪರಿಣಾಮದಲ್ಲಿ ನಿನಗೆ ಕೇಡಿಲ್ಲವಾಗಿ ಆನುವೊಲಿದಂತೆ ಹಾಡುವ ಪದಪಾಡಿನ ರಚನೆಗಳು ಇವಾಗಿವೆ. ಅವರು ಇದಕ್ಕೆ ಉದಾಹರಣೆಯಾಗಿ ಕೊಟ್ಟಿರುವ ಸಾಲುಗಳು ಹೀಗಿವೆ.
ಕವುಚಿಟ್ಟ ಕೋಳಿಗೆಯ ಕೂಗಿಗೆ ಪಂಜರ ಬೆಚ್ಚಿದ್ದು
ನೋವುಗಳ ನೇಯ್ದ ಲಾಳಿಗಳು ತೊಳಲಾಡಿದ್ದು
ಗೆಬರಲು ಬಂದ ರಣಹದ್ದುಗಳನ್ನೆ
ಬೇಟೆಯಾಡಿದ ಗುಬ್ಬಚ್ಚಿಗಳು ಆಗಸಕ್ಕೆ ರೆಕ್ಕೆ ಬಡಿದದ್ದು
ಎಲ್ಲೆಲ್ಲೂ ಸದ್ದು ಸದ್ದು ಅದೆಂತಹ ಮಹಾಘನ ಸದ್ದೆಂದರೆ
ಹಸಿಮಡಿಕೆಯ ಮಣ್ಣು ಚಿಗುರುವ ಸದ್ದು
ಈ ಮೇಲ್ಕಂಡ ವಾಕ್ಯ ರಚನೆಗಳು ಕಾವ್ಯದ ಬೆರಗನ್ನು ಮೂಡಿಸುವಂತಹದ್ದು, ಸ್ಪಷ್ಟವಾಗಿ ಕಾಣಿಸುವಂತಹದ್ದು, ಕೇಳಿಸುವಂತಹದ್ದು. ಈ ಶಬ್ದಗಳ ನಾದವೇ ಕಾವ್ಯದ ಧೀಶಕ್ತಿ. ಕವಿ ತನ್ನ ಸುತ್ತಮುತ್ತಲಿನ ಇರುವೆ ನಡೆಯುವ ಸದ್ದಿಂದ ವಿಮಾನ ಹಾರುವ ಸದ್ದಿನವರೆಗೆ ಕೇಳಿಸಿಕೊಳ್ಳುವ ಶಕ್ತಿ ಇರುವವರಿಗೆ ಮಾತ್ರ ಇಂತಹ ಘನವಾದ ವಾಸ್ತವಗಳನ್ನ ಕಟ್ಟಿಕೊಡಲು ಸಾಧ್ಯ. ಕವಿಗೆ ಕೇಳಿಸಿಕೊಳ್ಳುವ ಶಕ್ತಿ, ಆ ಶಕ್ತಿ ಒಂದು ರೀತಿಯ ಕೇಳುವ ಧ್ಯಾನ ತಪಸ್ಸೆನ್ನಬಹುದು.
ನಾನು ಇದನ್ನು ಕೊನೆ ಎನ್ನುವುದಿಲ್ಲ. ಕಾವ್ಯಬಿಂದುವೆನ್ನುವುದು ಪ್ರಾರಂಭದ ಜೀವಹನಿಯೇ. ಎಲ್ಲರನ್ನು ಒಳಗೊಳ್ಳುವ ಜೀವಪ್ರೀತಿಯ ಈ ಕವಿಯ ಸಾಲುಗಳು ನಿಮ್ಮೊಟ್ಟಿಗೆ ಬರುತ್ತೇವೆ ಎನ್ನುವ ಜೀವಸರಪಳಿಯ ಕರುಳುಬಳ್ಳಿಯನ್ನು ಕಟ್ಟಿಕೊಂಡು ನಡೆಯುವ ಇವರ ಪಾದದ ಮೆದುಳು ಹೀಗೆನ್ನುತ್ತದೆ.
ಅಯ್ಯಾ... ಜಲಗಾರರು ನಾವು ಬರುತ್ತೇವೆ
ಬಚ್ಚಲು ಬಾಯಿಗಳಿಂದ ಹಿಡಿದು
ನಿಮ್ಮ ಎಚ್ಚರಗಳನ್ನು ತೊಳೆಯುತ್ತೇವೆ
ನಿಮ್ಮ ಪಾಪಗಳನ್ನು ನೀವೆ ಮೆಯ್ಯುವವರೆಗೂ
ಬೆಳೆಯುತ್ತೇವೆ.
ಹೀಗೆ ಬರೆಯುವ ಕವಿ ನಾನು ಗಾಲಿಕುರ್ಚಿಯ ಅಸಲಿಜೀವಿ. ಸತ್ಯವನ್ನೇ ಹೇಳುತ್ತೇನೆ, ನಾನು ಹೇಳುವುದೆಲ್ಲಾ ಸತ್ಯ. ಕಾವ್ಯಕ್ಕೆ ಪ್ರಾಮಾಣಿಕತೆ ಬಹಳ ಮುಖ್ಯ. ಪ್ರಾಮಾಣಿಕತೆ ಎನ್ನುವುದರೊಳಗೆ ಒಂದು ಮುಗ್ಧತೆ ಇರುತ್ತದೆ. ಅದೇ ಕಾವ್ಯ, ಅದೇ ಜೀವ. ಇಬ್ಬರೂ ಕವಿಗಳನ್ನು ಅಭಿನಂದಿಸುತ್ತಾ ಇನ್ನಷ್ಟು ಮಹತ್ವದ ಕಾವ್ಯ ನಿಮ್ಮಿಂದ ಬರಲಿ, ನೊಂದವರ ಪಸೆ ನೊಂದವರ ಕಣ್ಣೀರುಗಳ ಒರೆಸುವಂತಾಗಲಿ. ಇದು ಜೀವಪ್ರೀತಿಯುಳ್ಳವರ ಪ್ರಾರ್ಥನೆ.