ಬಾನು ಎದೆಯಲ್ಲಿ ಅಕ್ಕನ ಮುಗುಳುನಗೆಯನ್ನು ಧ್ಯಾನಿಸುತ್ತಾ?

‘ನೊಂದವರ ನೋವು ನೋಯಿದವರೇನು ಬಲ್ಲರು?’ 12ನೇ ಶತಮಾನದ ಈ ಉಸಿರಿನ ಮಾತು 21 ನೇ ಶತಮಾನದ ಕನ್ನಡದ ಪ್ರಖ್ಯಾತ ಕಥೆಗಾರ್ತಿ ಬಾನು ಮುಷ್ತಾಕ್ ಅವರ ಎದೆಯಲ್ಲಿ ಮುಗುಳ್ನಗೆಯಾಗುತ್ತಿದೆ, ಉರಿಯುತ್ತಿದೆ, ಜ್ವಲಿಸುತ್ತಿದೆ, ಬೆಳಗುತ್ತಿದೆ. ದುಃಖ ದುಮ್ಮಾನವಾಗಿ ಬಾಧಿಸುತ್ತಿದೆ. ಅಂತರ್‌ರಾಷ್ಟ್ರೀಯ ಮಟ್ಟದ ‘ಬೂಕರ್ ಪ್ರಶಸ್ತಿ’ ಕನ್ನಡಕ್ಕೆ ಬಂದಿದೆ ಎಂದಾಗ ನಾವೆಲ್ಲ ಸಂತೋಷ, ಸಂಭ್ರಮ ಪಟ್ಟಿದ್ದೇವೆ. ಆದರೆ ನಾಡಿನಲ್ಲಿ, ಅಸಹನೆಯ ಬೇಗೆ ನಮ್ಮಂತವರಲ್ಲಿ ನಿತ್ಯ ನಿರಂತರವಾಗಿ ನಮ್ಮನ್ನೆಲ್ಲಾ ಸುಡುತ್ತಲೇ ಇದೆ. ಧರ್ಮ, ಜಾತಿ, ದೇವರ ಹೆಸರಲ್ಲಿ ಹಿಂಸೆ ನಡೆಯುತ್ತಿದೆ. ಒಂದು ಅಂಧ ಹೆಣ್ಣುಮಗಳ ಅತ್ಯಚಾರ ಮತ್ತು ಬರ್ಬರ ಹತ್ಯೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಬ್ದುಲ್ ರಹ್ಮಾನ್ ಹತ್ಯೆ ನಾಗರಿಕ ಬದುಕಿನಲ್ಲಿ ಭಯ ಹುಟ್ಟಿಸಿದೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿನ ಪಕ್ಕದ ಹಳ್ಳಿಯ ಕತ್ತರಘಟ್ಟದಲ್ಲಿ ಹುಲ್ಲಿನ ಮೆದೆಗೆ ಜಯಕುಮಾರ್ ಎಂಬವರನ್ನು ಸುಟ್ಟಿದ್ದು, ಈ ಜಾತಿ ಧರ್ಮದ ಭಯೋತ್ಪಾದನೆ ನಮ್ಮನ್ನೆಲ್ಲಾ ಕಾಲಿನ ಕಡೆಯಿಂದ ನುಂಗುತ್ತಿಲ್ಲ, ತಲೆಯಿಂದಲೇ ನುಂಗುತ್ತಿದೆ. ಪ್ರತಿ ಕ್ಷಣದಲ್ಲಿ ಆತಂಕದಲ್ಲಿದ್ದೇವಲ್ಲ ಎನಿಸುತ್ತದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನದ ಪ್ರಸ್ತಾವನೆಯ ಮೊದಲ ಸಾಲು ‘ಭಾರತೀಯರಾದ ನಾವು’ ನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ನೆನೆಯಬೇಕಾದ ಪ್ರಾರ್ಥನೆಯಂತಿದೆ. ಆದರೆ ನಾಗರಿಕರಾಗಿರುವ ನಾವು ಹಿಂಸೆಯತ್ತ ಜಾರುತ್ತಲೇ ಇದ್ದೇವೆ. ಇದನ್ನು ಮೀರುವ ಪ್ರಯತ್ನ ಶತಮಾನಗಳಿಂದಲೂ ನಡೆಯುತ್ತಲೇ ಇದೆ. ಜಾತಿ-ಧರ್ಮದ ಕಿರೀಟವಿಲ್ಲದೆ ಬದುಕಲು ಸಾಧ್ಯವೇ ಇಲ್ಲವೇ? ಜಾಗತಿಕ ಯುದ್ಧಗಳು ನಡೆಯಲೇಬೇಕಾ? ಹಾಗಾದರೆ ನಮಗಿಂತ ನೂರುಪಟ್ಟು ಹೆಚ್ಚಿರುವ ಪ್ರಾಣಿ-ಪಕ್ಷಿಗಳು, ಪ್ರಕೃತಿ ಜಾತಿ-ಧರ್ಮಗಳ ಗಡಿರೇಖೆಗಳಿಲ್ಲದೆ ಜೀವಿಸುತ್ತಿಲ್ಲವೆ? ಮನುಷ್ಯ ಹಿಂಸೆಯನ್ನೇ ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಿದ್ದಾನಲ್ಲಾ.. ಕೊಲ್ಲಲ್ಪಟ್ಟವನ ಉಸಿರು ಕೊಲ್ಲುವವನಿಗೆ ತಾಕುವುದಿಲ್ಲವೇ? ಈ ಹಿಂಸೆ ಅವನ ನೆರಳಿನಂತೆ ಹಿಂಬಾಲಿಸುವುದಿಲ್ಲವೇ? ಇಂತಹದನ್ನೆಲ್ಲಾ ಕೇಳುತ್ತಲೇ ಇದ್ದೇವೆ. ಮತ್ತೆ ಮತ್ತೆ ಕೇಳುತ್ತಲೇ ಇರಬೇಕು. ಮನುಷ್ಯರಿಬ್ಬರು ಜಗಳವಾಡುತ್ತಿದ್ದರೆ, ಅದನ್ನು ನೋಡಿ ಸಂತೋಷಪಡುವ ಮನಸ್ಥಿತಿ ಮನುಷ್ಯನಲ್ಲಿ ಹೆಚ್ಚುತ್ತಿದೆ. ಆದರೆ ಜಗಳ ಬಿಡಿಸುವ ಪ್ರಕ್ರಿಯೆ ನಿರಂತರವಾಗಿ ಮಾಡುವುದು ಅಗತ್ಯವಾಗಿದೆ. ಮನುಷ್ಯ ಪ್ರಕೃತಿಯನ್ನು ನೋಡಿ ಕಲಿತಿದ್ದು ತುಂಬಾ ಕಡಿಮೆ. ಕೊಡುವಷ್ಟು ಕೊಟ್ಟರೂ ಸಾಲದ ಮನುಷ್ಯ, ತನ್ನನ್ನೇ ತಾನು ನುಂಗುತ್ತಿದ್ದಾನೆ. ನನಗೆ ಆಗಾಗ ನೆನಪಾಗುವ ಬುದ್ಧನ ಒಂದು ಮಾತಿದೆ. ‘‘ಜಗತ್ತಿನ ಅತಿದೊಡ್ಡ ಪ್ರಾರ್ಥನೆಯೆಂದರೆ ತಾಳ್ಮೆ’’. ಇಂತಹ ತಾಳ್ಮೆಯ ರೂಪಕ ಬಾನು ಮುಷ್ತಾಕ್ ಬರೆದ ‘ಎದೆಯ ಹಣತೆ’ ಕಥೆಯ ಪಾತ್ರಗಳು. ಈ ಕಥೆ ಜಗತ್ತಿನ ಎಲ್ಲಾ ಹೆಣ್ಣುಮಕ್ಕಳ ತಾಯ್ತನವನ್ನು, ವಾತ್ಸಲ್ಯವನ್ನು, ಕರುಳುಬಳ್ಳಿಯ ಕಥನವನ್ನು ಹೇಳುತ್ತದೆ. ಈ ಕಥೆ ನೋವು, ಸಂಕಟ, ಆತಂಕ ಒಳಗೊಳ್ಳುತ್ತಲೇ ಲೋಕದ ಬೆಳಕಿಗಾಗಿ ಹಂಬಲಿಸುತ್ತದೆ. ಮತ್ತೆ ಮರುಕಳಿಸುವ ಜೀವೋತ್ಸಾಹಕ್ಕೂ ಕಾರಣವಾಗುತ್ತದೆ. ಜೀವ ಪ್ರೀತಿಯನ್ನು ಮತ್ತೆ ಮತ್ತೆ ಹಂಬಲಿಸುತ್ತದೆ. ಬಾನು ಅವರ ‘ಹಸೀನಾ ಮತ್ತು ಇತರ ಕತೆಗಳು’ ಸಂಕಲನದ ಎಲ್ಲಾ ಕಥೆಗಳು ಲೋಕಾನುಭವವೇ ಆಗಿವೆ. ‘ಬೂಕರ್ ಪ್ರಶಸ್ತಿ’ ಪಡೆದ ಈ ಸಂಕಲನ ಒಂದು ಅಪೂರ್ವ ಕೃತಿಯೇ ಸೈ. ಇಲ್ಲದಿದ್ದರೆ ಲೋಕಮನ್ನಣೆ ಎಲ್ಲಿ ದೊರೆಯುತ್ತಿತ್ತು?
ಈ ಸಾಹಿತ್ಯ ಕೃತಿಗೆ ಪ್ರಶಸ್ತಿ ಬಂದಾಗ ಆಗುವ ರೋಮಾಂಚನ ಅವಿಸ್ಮರಣೀಯ ಘಳಿಗೆಯೆಂದೇ ಅನಿಸುತ್ತದೆ. ಸದಾ ಯುದ್ಧಗಳ ಸುದ್ದಿಯನ್ನೇ ನೋಡುತ್ತಿದ್ದವರಿಗೆ ಎದೆಯ ಹಣತೆಯ ಸುದ್ದಿ ಎಲ್ಲರ ಹೃದಯದ ದೀಪವಾಗಿ ಬೆಳಗುತ್ತದೆ. ಹಿಂಸೆಯ ಶಕ್ತಿ ದುರ್ಬಲ. ಪ್ರೀತಿ ಮತ್ತು ಹೆಣ್ಣಿನ ಶಕ್ತಿ ಯಾವತ್ತಿಗೂ ದೊಡ್ಡದು. ಆ ದೊಡ್ಡದಕ್ಕೆ ಕಾರಣವಾದ ಬಾನು ಮುಷ್ತಾಕ್ ರವರು ಭಾರತಕ್ಕೆ, ಬೆಂಗಳೂರಿಗೆ ಬಂದಿಳಿದಾಗ ಪ್ರೀತಿಯ ಜನರ ಅದ್ದೂರಿ ಸ್ವಾಗತದೊಂದಿಗೆ ನೇರ ಗಾಂಧಿಭವನಕ್ಕೆ ಬಂದರು. ಇಲ್ಲಿ ಗಾಂಧಿ ಪ್ರತಿಮೆಗೆ ಬಾನು ಮುಷ್ತಾಕ್ ರವರು ಹೂಮಳೆಗರೆದದ್ದು ಮುಂಗಾರುಮಳೆಯೇ ನಿಂತು ನೋಡಿ ಸಂತೋಷಪಟ್ಟಿರಬಹುದು ಎಂದೆನಿಸಿತು. ಈ ಮೂಲಕ ಇಡೀ ಭಾರತಕ್ಕೆ ದೊಡ್ಡ ಸಂದೇಶ ರವಾನೆಯಾಯಿತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಹಿಳೆಯರ ಕುರಿತು ಮಾತನಾಡುತ್ತಾ ‘ಒಂದು ದೇಶದ ಪ್ರಗತಿಯನ್ನು, ಆ ದೇಶದ ಮಹಿಳೆಯರ ಮೇಲೆ ಅಳೆಯಬೇಕಾಗುತ್ತದೆ ಎಂದಿದ್ದರು. ಈ ದೇಶದ ನೂರಾರು ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿ ತೋರಿಸಿದ್ದಾರೆ. ಬಾನು ಮುಷ್ತಾಕ್ ರವರು ಕೂಡಾ ತನ್ನ ಸಾಹಿತ್ಯದ ಕೃಷಿಯ ಮೂಲಕ ಮಾಡಿದ ಸಾಧನೆ ಭಾರತಕ್ಕೆ ಮತ್ತು ವಿಶೇಷವಾಗಿ ಕನ್ನಡಕ್ಕೆ ಒಂದು ಜಲ ಚಿಹ್ನೆಯಾಗಿ ಉಳಿಯಲಿದೆ. ಆದರೆ ಮಹಿಳೆಯರು ಮಾಡಿದ ಸಾಧನೆಯನ್ನು ಆ ಕ್ಷಣಕ್ಕೆ ಹೊಗಳಿ ಸುಮ್ಮನಾಗಿ ಬಿಡುವ ಗಂಡಾಳ್ವಿಕೆಯು, ಭಾರತದ ಸಮಾಜ ಇಂದಿಗೂ ಆಕೆಯನ್ನು ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ. ಈ ವಿಷಾದನೀಯ ಘಳಿಗೆಯಲ್ಲೂ ಕೂಡ ಕೆಲವರು ಮಹತ್ವದ್ದನ್ನು ಸಾಧಿಸಿದ್ದಾರೆ. ಈ ‘ಹಸೀನಾ ಮತ್ತು ಇತರೆ ಕಥೆ’ಗಳಲ್ಲಿ ಎಲ್ಲಾ ಕಥೆಗಳು ಕಾಡಿಸುವ ತಲ್ಲಣದ ಕಥೆಗಳೇ. ಆದರೆ ‘ಎದೆಯ ಹಣತೆ’ ಎನ್ನುವ ಕಥೆ ಮಾತ್ರ ಜಾಗತಿಕ ಮಟ್ಟದ ರೂಪಕವಾಗಿ ಎದುರುಗೊಳ್ಳುತ್ತದೆ. ಇಡೀ ಕಥೆಗಳಲ್ಲಿ ಹೆಣ್ಣಿನ ಪ್ರತಿರೋಧದ ಗುಣವಿದ್ದರೂ ಆಕೆಯ ಕರುಳು ಮಿಡಿಯುವ ದೃಶ್ಯಗಳು ಓದುಗರನ್ನು ಸುಸ್ತಾಗಿಸಿ ಬಿಡುತ್ತದೆ.
ನಾನು ಹೇಳಿದ ಇಷ್ಟು ಮಾತುಗಳು ಕಥೆಯ ಸಂಗ್ರಹದ್ದು ಹೌದು, ಎದೆಯ ಹಣತೆಯ ಕಥೆಯೂ ಹೌದು. ಇದು ಬೆಂದು ಬೆಳಕಾಗಿಸುವ ಕಥೆ. ಇದನ್ನು ಓದಿ ಅನುಭವಿಸಿದರೆ ಕಥೆಯ ನಿಜ ಶಕ್ತಿ ತಿಳಿಯುತ್ತದೆ. ಈ ಕಥೆಯ ಕೊನೆಯ ಭಾಗವನ್ನು ಗಮನಿಸುವುದಾದರೆ, ಕೊನೆಯ ದೃಶ್ಯದಲ್ಲಿ ತಾಯಿ ತನ್ನ ಮೂರು ಮಕ್ಕಳನ್ನು ಬಿಟ್ಟು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ತಾನು ಇನ್ನೂ ಓದಬೇಕು ಎನ್ನುವ ಅಪಾರ ಆಸೆಯನ್ನಿಟ್ಟುಕೊಂಡಿದ್ದು, ಇದನ್ನು ಮದುವೆಗೆ ಮುಂಚೆ ತನ್ನ ಪಾಲಕರಿಗೆ ಅರುಹಿದರೂ ಮನೆಯವರೆಲ್ಲರ ಒತ್ತಡದಿಂದ ಮದುವೆಯಾಗಿ ಮೂರು ಮಕ್ಕಳಾದ ಮೇಲೆ ತನ್ನ ಗಂಡ ಇನ್ನೊಬ್ಬಳ ಸಂಪರ್ಕದಲ್ಲಿರುವುದು ಸಹಿಸುವುದು ಕಥಾನಾಯಕಿಗೆ ಕಷ್ಟವಾಗುತ್ತದೆ. ಈಕೆ ತನ್ನ ಪುಟ್ಟ ಮಗುವಿನೊಂದಿಗೆ ತವರುಮನೆಗೆ ಬಂದು ನಡೆದ ವಿಷಯನ್ನೆಲ್ಲಾ ಹೇಳಿದರೂ ಅದಕ್ಕೆ ಅಲ್ಲೂ ಪರಿಹಾರ ಸಿಗದೆ, ವಾಪಸ್ ಬಂದು ತನ್ನ ಸಂಕಟ, ವೇದನೆ, ದುಃಖ ಯಾರಿಗೂ ಅರ್ಥವಾಗದಿದ್ದಾಗ ಬದುಕು ಸಾಕೆನಿಸಿಬಿಡುತ್ತದೆ. ಅಂತಿಮವಾಗಿ ಒಂದು ತೀರ್ಮಾನಕ್ಕೆ ಬಂದು ಆತ್ಮಹತ್ಯೆಗೆ ಸಿದ್ಧಳಾಗುತ್ತಾಳೆ. ‘ಹೆಣ್ಣಿಗೆ ಹೆಣ್ಣು ಶತ್ರು’ವೂ ಹೌದು. ಆಕೆ ಎಲ್ಲರನ್ನು ಸಲಹುವ ತಾಯಿ, ತಂಗಿ, ಅಕ್ಕ, ಅಜ್ಜಿ ಎಲ್ಲವೂ ಹೌದು. ಆದರೂ ಆಕೆಗೆ ಸಂಬಂಧಗಳ ಈ ಬೇಡಿ ಸಾಯುವವರೆಗೆ ನಿರಂತರವಾಗಿ ಇರುತ್ತದೆ. ಜಗತ್ತಿನಲ್ಲಿ ತಾಯಿ ಕರುಳು ಅಂತ ಮಾತ್ರ ಇರುತ್ತೆ. ತಂದೆ ಕರುಳು ಅಂತ ಇರುವುದಿಲ್ಲ. ಬಹುಶಃ ಎಲ್ಲವನ್ನೂ ಮೀರಿದ ಸಹನೆಯ ಶಕ್ತಿ ಸಂಬಂಧಗಳ ಕರುಳುಬಳ್ಳಿ ಆಕೆಗೆ ಮಾತ್ರ ತಿಳಿದಿರುವುದರಿಂದ ಕೊನೆಯ ಸನ್ನಿವೇಶ ಎಂತಹ ಕಲ್ಲುಹೃದಯದವರನ್ನೂ ಕರಗುವಂತೆ ಮಾಡಿದೆ. ಹೀಗೆ ನಿಧಾನವಾಗಿ ಆ ಮೂರು ಮಕ್ಕಳ ಕಣ್ಣು ತಪ್ಪಿಸಿ ಕೈಯಲ್ಲಿ ಬೆಂಕಿಪೆಟ್ಟಿಗೆ ಹಿಡಿದುಕೊಂಡು ಹೊರಡುವಾಗ ಹಿರಿಯ ಮಗಳ ‘ಅಮ್ಮೀ’ ಎನ್ನುವ ಬೇಡಿಕೆಗೆ ನಿದ್ರಾಲೋಕದಿಂದ ಕಣ್ಣು ತೆರದಂತೆ ಹೊರ ಜಗತ್ತಿಗೆ ಬಂದಳು. ಕ್ರಮೇಣ ಅವಳು ಜಾಗೃತಾವಸ್ಥೆಗೆ ಬರುತ್ತಿದ್ದಂತೆ ಅವಳ ಬೆಂಕಿಪೆಟ್ಟಿಗೆ ಕೆಳಗೆ ಬಿತ್ತು. ಸಲ್ಮಾ? ತಾಯಿಯ ಕಾಲುಗಳನ್ನು ಬಿಟ್ಟಿರಲಿಲ್ಲ. ಅಮ್ಮೀ ಅವರೊಬ್ಬರನ್ನು(ತಂದೆ) ಕಳೆದುಕೊಂಡ ರೋಷದಲ್ಲಿ ನಮ್ಮೆಲ್ಲರನ್ನು ಅವಳ ಕಾಲ ಬುಡಕ್ಕೆ ಎಸೆಯುವುದು ಸರಿಯೇ? ಅಬ್ಬಕ್ಕೋಸ್ಕರ ಸಾಯಲು ಸಿದ್ಧರಾಗಿರುವ ನೀನು ನಮಗಾಗಿ ಬದುಕಲು ಸಾಧ್ಯವಿಲ್ಲವೇ? ನಮ್ಮನ್ನೆಲ್ಲಾ ನೀನು ಹೀಗೆ ತಬ್ಬಲಿ ಮಾಡಲು ಹೇಗೆ ಸಾಧ್ಯ ಅಮ್ಮೀ? ನಮಗೆ ನೀನು ಬೇಕು’’ ಸಲ್ಮಾಳ ಮಾತಿಗಿಂತ ಹೆಚ್ಚಾಗಿ ಅವಳ ಸ್ಪರ್ಶದಿಂದ ಮೆಹರೂನ್(ತಾಯಿ) ಆರ್ಧ್ರವಾದಳು. ಹೆಪ್ಪುಗಟ್ಟಿದ ಎಲ್ಲವೂ ಒಮ್ಮೆಯೇ ಕೊಚ್ಚಿಕೊಂಡು ಹೋಗುವಂತಾಗಿ ಅವಳು ನಲುಗಿಹೋದಳು. ಉಸಿರು ಗಟ್ಟಿದಂತೆ ಅಳುತ್ತಿದ್ದ ಹಸುಗೂಸನ್ನು ಎತ್ತಿದ ಮೆಹರೂನ್ ಸಲ್ಮಾಳನ್ನು ಎದೆಗವುಚಿದಾಗ ಎತ್ತರಕ್ಕೆ ಬೆಳೆದಿದ್ದ ಗೆಳತಿಯೊಬ್ಬಳ ಸಾಂತ್ವನ, ಸ್ಪರ್ಶ, ಸಮಾನಭಾವ ಕೂಡಿ ಕಣ್ಣೆರಡು ಭಾರವಾಗಿ ಬೇರೆ ಏನನ್ನೂ ನುಡಿಯದೆ ‘ಕ್ಷಮಿಸು ಕಂದಾ’ ಎಂದಳು. ಕತ್ತಲು ಹರಿಯುತ್ತಿತ್ತು. ಅವಳ ಎದೆಯ ಹಣತೆ ಎಂದೋ ಆರಿಹೋಗಿತ್ತು. ಆದರೆ ಪ್ರಭಾತದ ಬೆಳಕು ಮಂದವಾಗಿ ಪಸರಿಸುತಿತ್ತು. ಇದನ್ನು ಗಮನಿಸಿದವರೆಲ್ಲರೂ ಓದಿದರೆ ಒಂದು ನಿರಾಳ ಭಾವ ಖಂಡಿತ ಮೂಡುತ್ತದೆ.
ಈ ಸಂಕಲನದ ಉಳಿದ ಕಥೆಗಳನ್ನು ಓದುತ್ತಾ ಒಂದು ಮಾನಸಿಕ ಪಕ್ವತೆ ಬರುತ್ತದೆ. ಮಾನವೀಯ ಸಂವೇದನೆವುಳ್ಳ ಈ ಕಥೆಗಳು ಎಚ್ಚರಿಸುತ್ತಲೇ ಹೋಗುತ್ತವೆ. ನಮ್ಮೊಳಗಿನ ಕಲ್ಮಶಗಳನ್ನು ತೊಳೆಯುವ ಜಲರೂಪದ ಜೀವ ಪುಟಿಯುತ್ತದೆ. ಇವು ಕಂಡು ಕೇಳಿದ ಘಟನೆಗಳು ಹೌದು. ಸ್ವತಃ ನಾವೇ ಅನುಭವಿಸಿದ ಹಾಗೆ ಅನೇಕ ಪಾತ್ರಗಳಲ್ಲಿ ನಾವೇ ಆಗಿಬಿಟ್ಟಿರುತ್ತೇವೆ. ಎದೆಯ ಹಣತೆ ಓದಿ ಮುಗಿಸಿದಾಗ ಮನೆಯ ಪುಟ್ಟಕಂದಮ್ಮಗಳು ತಾಯಿಯ ಎದೆಹಾಲು ಕುಡಿದು ಮುಗುಳ್ನಕ್ಕ ದೃಶ್ಯ ನಮ್ಮ ಭಾವದಲ್ಲಿ ಮೂಡುತ್ತದೆ. ಇದು ಲೋಕದ ಮುಗುಳ್ನಗೆ ಕೂಡ ಹೌದು. ಈ ಕ್ಷಣ ನಲುವತ್ತು ವರ್ಷಗಳ ಹಿಂದಿನ ಚಳವಳಿಯ ದಿನಗಳು ನೆನಪಾಗುತ್ತವೆ. ಬಾನು ಮೇಡಂ, ಆಗ ನೀವು ಆ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ಸಭೆಗಳಲ್ಲಿ ಮಾತಾಡಿದ ಭಾಷಣಗಳು ಈಗಲೂ ನನ್ನ ಕಿವಿಯಲ್ಲಿವೆ. ಡಿಸೆಂಬರ್ 6, ಭೀಮಾ ಸಾಹೇಬರ ಮಹಾ ಪರಿನಿಬ್ಬಾಣದ ದಿನ ಸಂತೆ ಮಾರ್ಕೆಟ್ಟಿನ ಟಿ.ಸಿ.ಎಚ್. ಕಾಲೇಜು ಮುಂಭಾಗ ನಿಮ್ಮ ಮೊದಲ ಭಾಷಣ ಕೇಳಿದ ನೆನಪು ಈಗಲೂ ಹಾಗೇ ಇದೆ. ಆಗ ನಾನು ಪಿಯುಸಿ ಯಲ್ಲಿ ಓದುತ್ತಿದ್ದ ದಿನಗಳು. ನಿಮ್ಮ ಭಾಷಣ ಇರುವ ಕಡೆಯಲ್ಲೆಲ್ಲಾ ನಾನು, ಕುಮಾರಣ್ಣ ವಿಶೇಷವಾಗಿ ಈರಪ್ಪ(ಇವರು ವಿರೇಂದ್ರಕುಮಾರ್ ಆಗಿ ದಿಲ್ಲಿಯ ಪಾರ್ಲಿಮೆಂಟ್ ಭವನದಲ್ಲಿ ಉನ್ನತ ಅಧಿಕಾರಿಯಾಗಿ ಈಗ ನಿವೃತ್ತಿ ಹೊಂದಿದ್ದಾರೆ) ಅವರು ನಿಮ್ಮ ಕಾರ್ಯಕ್ರಮಕ್ಕೆ ಒತ್ತಾಯ ಮಾಡಿ ಕರೆದುಕೊಂಡು ಹೋಗುತ್ತಿದ್ದರು. ಆ ಸಭೆಯಲ್ಲಿ ಬಿ. ಕೃಷ್ಣಪ್ಪ, ರುದ್ರಸ್ವಾಮಿ, ನಾರಾಯಣದಾಸ್ ಅನೇಕ ನಾಯಕರಿದ್ದರು. ನೀವು ಮತ್ತು ಪ್ರೊ.ರುದ್ರಸ್ವಾಮಿಯವರು ಅಂಬೇಡ್ಕರ್ ವಿಚಾರಧಾರೆಯನ್ನು ಅದ್ಭುತವಾಗಿ ಮಾತನಾಡಿದಿರಿ. ಆ ಕಾಲಕ್ಕೆ ಬಾಬಾ ಸಾಹೇಬರನ್ನು ನೀವೆಲ್ಲಾ ಓದಿಕೊಂಡವರು. ನಮ್ಮಂತಹವರು ನಿಮ್ಮ ಮಾತನ್ನು ಕೇಳಿಸಿಕೊಂಡು ಬೆಳೆದವರು. ಆಗೆಲ್ಲಾ ನೀವು ಚೆನ್ನಾಗಿ ಮಾತನಾಡಿದ್ದೀರಿ ಮೇಡಂ ಎಂದು ಹೇಳಬೇಕು ಅನಿಸಿದ್ದೆಲ್ಲಾ, ಎದೆಯಲ್ಲಿ ಉಳಿದುಹೋಗಿತ್ತು. ನಿಮಗಿದ್ದ ಆತ್ಮವಿಶ್ವಾಸವೇ ನಿಮ್ಮ ಮಾತುಗಳಲ್ಲಿ ಅಭಿವ್ಯಕ್ತವಾಗುತ್ತಿತ್ತು. ಆ ನಿಮ್ಮ ವಿಶ್ವಾಸದ ಮಾತುಗಳಿಂದ ಈ ಹೊತ್ತು ನಮ್ಮಂತವರಿಗೆಲ್ಲಾ ವಿಶ್ವಾಸದಿಂದಲೇ ಮಾತನಾಡುವ ಶಕ್ತಿ ಬಂದದ್ದು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಯಾವ ಅನುಕೂಲಗಳು, ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ ಎಷ್ಟೆಲ್ಲಾ ಕಷ್ಟಪಟ್ಟು ಸಾಧನೆ ಮಾಡಿದರು. ಈಗ ಎಲ್ಲಾ ಸವಲತ್ತುಗಳು ಸಿಗುತ್ತಿರುವ ಹೊತ್ತಲ್ಲಿ ಓದಬೇಕು ಮತ್ತು ಸ್ವಾಭಿಮಾನದಿಂದ ಬದುಕಬೇಕು, ಘನತೆಯ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಆ ನಿಮ್ಮ ಮಾತುಗಳು ಈ ಹೊತ್ತಿನಲ್ಲಿ ನನ್ನಂತಹವರೆಲ್ಲರ ಎದೆಯ ಹಣತೆಯಾಗಿ ಬೆಳಗುತ್ತಿವೆ. ಅವತ್ತಿನ ಸಭೆ ಮುಗಿಯುವ ಮುನ್ನ ಹಿರಿಯ ಮುಖಂಡರಾದ ಚಂದ್ರಪ್ರಸಾದ್ ತ್ಯಾಗಿಯವರು, ನಾರಾಯಣ್ ದಾಸ್‌ರವರು ಹಾಡಿದ ಹಾಡು ರಿಕ್ಷಾ ತುಳಿಯುವ ರಹೀಮಣ್ಣ, ಕಲ್ಲು ಹೊಡೆಯುವ ಕಾಮಣ್ಣ, ಡ್ರೈವರ್ ಹನುಮಣ್ಣ ಈ ಹಾಡನ್ನು ಧ್ವನಿಯೆತ್ತಿ ಹಾಡಿದ ಆ ಕ್ಷಣ, ನಮ್ಮ ಹಸಿವು ಆರಿಹೋಗಿತ್ತು. ಇಷ್ಟೆಲ್ಲಾ ಅನುಭೂತಿ ಪಡೆದ ಚಳವಳಿಯ ನೆನಪುಗಳು ಇತಿಹಾಸವಾಗಿವೆ. ಈಗ ನೀವು ಕೂಡ ಒಂದು ಐತಿಹಾಸಿಕ ಸಾಧನೆ ಮಾಡಿದ್ದೀರಿ. ಯಾರ ಪರವಾಗಿ ಅವತ್ತು ಧ್ವನಿಯೆತ್ತಿ ಮಾತನಾಡುತ್ತಿದ್ದಿರೋ, ಇವತ್ತಿಗೂ ಕೂಡ ನಿಮ್ಮ ಸಾಮಾಜಿಕ ಕಳಕಳಿ ಹಾಗೇ ಇದೆ. ಅವರೆಲ್ಲರ ಪರವಾಗಿ ನಿಮಗೆ ಅಭಿನಂದನೆಗಳು. ಹಾಗೆಯೇ ಆ ದಿನ ಸಭೆ ಮುಗಿಯುವ ಹೊತ್ತು ಸಮಯ ಮೂರು ಗಂಟೆಯಾಗಿತ್ತು. ಹಾಸ್ಟೆಲ್‌ನಲ್ಲಿ ಊಟ ಖಾಲಿಯಾಗುತ್ತಿದೆ ಎಂದು ಓಡೋಡಿ ಬಂದೆವು. ಸದ್ಯ ಇನ್ನೂ ಕೆಲವರು ಊಟ ಮಾಡುತ್ತಿದ್ದರು. ಆ ಊಟ ಮಾಡುವವರನ್ನು ಕುರಿತು ನಮ್ಮ ಕುಮಾರಣ್ಣ ‘ಹಿಂಗೆ ಗಂಗಳು ತುಂಬಾ ಉಂಡು ಮಲಗುವುದಲ್ಲ ಇವತ್ತು ಅಂಬೇಡ್ಕರ್ ರವರ ಪರಿನಿಬ್ಬಾಣ ದಿನ. ಅವರ ಬಗ್ಗೆ ಒಂದಿಷ್ಟಾದರೂ ತಿಳಿದುಕೊಳ್ಳುವ ಜ್ಞಾನ ಬೇಡವೇ ರುದ್ರಸ್ವಾಮಿ! ಬಾನು ಮುಷ್ತಾಕ್ ರವರ ಭಾಷಣ ಕೇಳಬೇಕಿತ್ತು. ಬೆಂಕಿ ತರ ಮಾತನಾಡಿದರು. ಆ ಮಾತುಗಳನ್ನು ಕೇಳುವ ಭಾಗ್ಯ ನಿಮಗೆಲ್ಲಿದೆ?’ 40 ವರ್ಷದ ಕೆಳಗಿನ ಈ ಮಾತುಗಳನ್ನು ನಿಮ್ಮ ವೈಚಾರಿಕ ಚಿಂತನೆ ಸಾಹಿತ್ಯದ ಸಂವೇದನಾಶೀಲರಾಗಿ ಎಲ್ಲರ ಎದೆಯಲ್ಲಿ ಹಣತೆಯಾಗಿ ಜಾಗತಿಕ ಮಟ್ಟದಲ್ಲಿ ಬೆಳಗುತ್ತಿದ್ದೀರಿ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಜಗತ್ತಿನ ಮೂವತ್ತೈದು ಭಾಷೆಗಳಿಗೆ ಈ ಕಥೆಗಳು ಅನುವಾದಕ್ಕೆ ಸಿದ್ಧಗೊಳ್ಳುತ್ತಿದೆ ಎಂದರೆ ಕನ್ನಡ ಸಾಹಿತ್ಯಕ್ಕೆ, ನಾಡು-ನುಡಿಗೆ, ಭಾರತಕ್ಕೆ ಇದು ಹೆಮ್ಮೆಯ ವಿಷಯ ಮತ್ತು ಸಾಹಿತ್ಯಕ್ಕಿರುವ ಶಕ್ತಿ ಎಂತಹದ್ದು ಎಂದು ತಿಳಿಯಬಹುದು. ಹನ್ನೆರಡನೇ ಶತಮಾನದಲ್ಲಿ ನಮ್ಮ ಬಸವಣ್ಣ ಹೇಳಿದ ‘ದಯವೇ ಧರ್ಮದ ಮೂಲವಯ್ಯ’, ಅಕ್ಕಮಹಾದೇವಿಯವರು ಹೇಳಿದ ‘ನೊಂದವರ ನೋವು ನೋಯದವರೇನು ಬಲ್ಲರು’?. ಕುವೆಂಪು ಹೇಳಿದ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಈ ಹೊತ್ತಿನ ನಾಡಿನ ಸಾಕ್ಷಿ ಪ್ರಜ್ಞೆಯಾದ ದೇವನೂರ ಮಹಾದೇವರ ‘ಸಂಬಂಜ ಅನ್ನೋದು ದೊಡ್ದು ಕಣಾ!’ ಇವೆಲ್ಲಾ ಜಗತ್ತಿನ ಎಲ್ಲಾ ಜೀವರಾಶಿಗಳ ಕರುಳ ಬೆಸೆಯುವ ಜೀವಕಾರುಣ್ಯದ ಬರಹಗಳೇ. ಇಂತಹ ನೆಲದಿಂದ ‘ಎದೆಯ ಹಣತೆ’ ಬೆಳಗುವ ಸಾಹಿತ್ಯ ಮತ್ತೆ ಮತ್ತೆ ಬರಬೇಕು. ಇದು ನಿರಂತರವಾದ ಚಲನಶೀಲವಾಗಬೇಕು. ಜೀವಸಂಕುಲವೆಂಬುದು ಒಂದು ಕುಟುಂಬದಂತೆ ಇರಬೇಕಿದೆ. ಆದರೆ ನಾಗರಿಕ ಸಮಾಜದಲ್ಲಿ ನಮ್ಮ ನಮ್ಮ ಕುಟುಂಬದ ಒಳಗೆ ನಡೆಯುವ ಯುದ್ಧಗಳು, ಸಂಕಟಗಳು, ನೋವು, ಅವಮಾನಗಳು, ದುಃಖ-ದುಮ್ಮಾನಗಳು ಅಸಂಖ್ಯವಾಗಿವೆ. ಮನೆಯ ವಾತಾವರಣ ಹಿತವಾಗಿದ್ದರೆ ಎಲ್ಲವೂ ಸರಿ. ಒಂದು ಸ್ವಲ್ಪ ಹೆಚು ಕಮ್ಮಿಯಾದರು ತಳ ಒಡೆದ ದೋಣಿಯಂತಾಗುತ್ತದೆ. ಇಲ್ಲಿ ವಿಶೇಷವಾಗಿ ಭಾರತದಲ್ಲಿ ಹೆಣ್ಣು ಕೇಂದ್ರ ಸ್ಥಾನದಲ್ಲಿರುವಂತಹವಳು. ಈಕೆಯ ಕರುಣೆ, ಪ್ರೀತಿ, ತ್ಯಾಗ ಈ ಶಬ್ದಗಳು ನಮ್ಮ ನಮ್ಮ ಮನೆಯ ತಾಯಿ, ಹೆಂಡತಿ, ಮಗಳು ಇವರೆಲ್ಲರ ಸೇವೆಯನ್ನು ಗಮನಿಸುತ್ತಿದ್ದರೆ ಪ್ರತಿಯೊಬ್ಬ ಹೆಣ್ಣಿನಲ್ಲಿಯೂ ಬುದ್ಧನಿದ್ದಾನೆ ಎನಿಸುತ್ತದೆ. ಆಕೆಯ ತಪಸ್ಸು, ಮೌನ ಮತ್ತು ಧ್ಯಾನ ಬಹಳ ದೊಡ್ಡದು. ಈ ಜಗತ್ತಿನ ಎಲ್ಲಾ ಧರ್ಮಗಳಿಗಿಂತ ಹೆಣ್ಣಿನ ಸಹನೆ ಧರ್ಮವೇ ದೊಡ್ಡದು. ಇದನ್ನು ಸರಿಗಟ್ಟುವ ಧರ್ಮ ಇನ್ನೊಂದಿಲ್ಲ.
ಹಾಸನ ಜಿಲ್ಲೆ ಕಲೆ, ಸಾಹಿತ್ಯ, ಶಿಲ್ಪಕಲೆಗಳ ತವರೂರು, ನನಗೆ ಯಾವಾಗಲೂ ನಮ್ಮ ಹೆಮ್ಮೆಯ ಎತ್ತರದ ಗೊಮ್ಮಟ ನೆನೆಪಾಗುತ್ತಾನೆ. ಈತನ ಸಂದೇಶಗಳಿಗಿಂತ ತಾನು ಎತ್ತರದಲ್ಲಿ ನಿಂತು ಗಾಳಿ, ಮಳೆ, ಬಿಸಿಲೆನ್ನದೆ ಜಗತ್ತನ್ನೇ ಕಾಯುತ್ತಿರುವಂತೆ ಕಾಣಿಸುತ್ತದೆ. ಯಾವಾಗಲೂ ನಮ್ಮ ಜಿಲ್ಲೆಯವರು, ರಾಜ್ಯದವರು, ದೇಶದವರು ಎಲ್ಲರನ್ನು ಅಷ್ಟೇ ಎತ್ತರದಿಂದ ನೋಡಬೇಕು. ವಿಶಾಲ ದೃಷ್ಟಿಕೋನ ಇರಬೇಕು ಎನ್ನುವುದು ನನ್ನ ಕನಸು. ಆದರೆ ಇವತ್ತು ಆಗುತ್ತಿರುವುದನ್ನು ನೋಡಿದರೆ ತ್ಯಾಗಮೂರ್ತಿಯ ಸಂದೇಶ ಒಂದು ಸಾಸಿವೆ ಕಾಳಿನಷ್ಟೂ ಪಾಲಿಸುತ್ತಿಲ್ಲ. ಆದರೆ ಹೆಮ್ಮೆಯ ವಿಷಯವೇನೆಂದರೆ ನಮ್ಮ ಜಿಲ್ಲೆಯ ಹೆಣ್ಣುಮಗಳೊಬ್ಬರು ಈಗ ಸಾಹಿತ್ಯ ಜಗತ್ತಿನಲ್ಲಿ ಎತ್ತರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಜಿಲ್ಲೆಗೆ ಸಾಂಸ್ಕೃತಿಕ ಕೋಡು ಬಂದಂತಾಗಿದೆ. ಉಳಿದವರು ಕೂಡ ಬಾನು ಮುಷ್ತಾಕ್ ರವರ ತರಹನೇ ಎತ್ತರದಲ್ಲಿ ನೋಡುವಂತಾದರೆ ಇದಕ್ಕಿಂತ ಹೆಮ್ಮೆಯ ವಿಷಯ ಇನ್ನೇನಿದೆ? ನಮ್ಮ ಜಿಲ್ಲೆಯ ಎಲ್ಲರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ಹಾಗೂ ಈ ಎದೆಯ ಬೆಳಕನ್ನು ಬೂಕರ್‌ವರೆಗೆ ದಾಟಿಸಿದ ದೀಪಾ ಭಾಸ್ತಿ ಅವರಿಗೂ ಅಭಿನಂದನೆಗಳು.