ತನಗೆ ತಾನು ಬೆಳಕಾಗಬೇಕೆಂಬ ಹಂಬಲದ ಅರುಣ್

ಬಿಸಿಲ ಧಗೆ ಸ್ವಲ್ಪ ಕಡಿಮೆಯಾಗಿದೆ. ನಾಡಿನ ಅಲ್ಲಲ್ಲಿ ಕೆಲವು ಕಡೆ ಮಳೆಯಾಗಿದೆ. ಬೇಸಿಗೆ ಧಗೆಯಲ್ಲಿ ಮಳೆಯ ಸಂಭ್ರಮವನ್ನು ಅನುಭವಿಸುವುದೇ ಒಂದು ಅದ್ಭುತ ಕ್ಷಣ. ಈಗ ಬರುತ್ತಿರುವ ಪೂರ್ವ ಮುಂಗಾರು ಮಳೆ, ಮನುಷ್ಯನಿಗಿಂತ ಪ್ರಾಣಿ ಪಕ್ಷಿಗಳಿಗೆ, ಗಿಡ ಮರಗಳಿಗೆ, ಸಕಲ ಜೀವರಾಶಿಗಳಿಗೂ ತಾಯಿ ಹಾಲುಣಿಸಿದಂತಾಗಿದೆ.
ಪ್ರಕೃತಿ ಮಾತ್ರ ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದೆ. ಈ ನಾಗರಿಕ ಅನ್ನುವ ಅನಾಗರಿಕ ಮನುಷ್ಯ ಮಾತ್ರ ಪ್ರಕೃತಿಯನ್ನು ಇಂಚಿಂಚು ನುಂಗುತ್ತಿದ್ದಾನೆ. ಮರದ ಎಲೆಯ ಹಸಿರು ಒಣಗಿ ಉದುರಿ ಬೀಳುವುದು, ಗರಿಕೆಗಳು ಚಿಗುರುವುದು ಸೃಷ್ಟಿಯ ವಿಸ್ಮಯವೇ ಸರಿ. ಪ್ರತೀ ಕ್ಷಣ ವಿಜ್ಞಾನವನ್ನು ಬಳಸಿಕೊಳ್ಳುತ್ತಲೇ ವೈಚಾರಿಕತೆಯನ್ನು ಕಾಲಡಿಯಲ್ಲಿ ತುಳಿದು ದೇವರು, ಧರ್ಮ, ಜಾತಿಯ ಮೌಢ್ಯದಲ್ಲಿ ಮುಳುಗಿಹೋಗಿದ್ದೇವೆ. ಇದನ್ನು ಬರೆಯುವ ಹೊತ್ತಿನಲ್ಲಿ ರಾಮನಗರದ ಹತ್ತಿರ ಒಂದು ಹಳ್ಳಿಯಲ್ಲಿ ದಿವ್ಯಾಂಗ ಅಮಾಯಕ ಹೆಣ್ಣುಮಗಳೊಬ್ಬಳನ್ನು ದುಷ್ಟರು ಅಮಾನವೀಯವಾಗಿ ಕೊಂದುಹಾಕಿ ರೈಲ್ವೆಹಳಿ ಪಕ್ಕ ದೇಹವನ್ನು ಎಸೆದು ಹೋಗಿದ್ದಾರೆ. ಜೀವಗಳ ಬೆಲೆಯೇ ತಿಳಿಯದ ಕ್ಷುದ್ರ ಜಂತುಗಳು ಇಂತಹ ಕೃತ್ಯಗಳನ್ನು ಸಲೀಸಾಗಿ ಮಾಡುತ್ತಿವೆ. ಇಂತಹ ವಿಕಾರ ಮನಸ್ಸುಗಳಿಗೆ ಹಿಂಸೆ ಎನ್ನುವುದು ಅಡಿಯಿಂದ ಮುಡಿವರೆಗೆ ತುಂಬಿ ಹೋಗಿರುತ್ತದೆ. ಇಂತಹ ಸುದ್ದಿಗಳು ಈ ದಿನಮಾನಗಳಲ್ಲಿ ಕೋಳಿ ಕುರಿಗಳ ಹಾಗೆ ಜೀವ ಹರಣ ಮಾಡುತ್ತಿರುವುದು ಮನುಷ್ಯಲೋಕದ ಅಧೋಗತಿಯನ್ನು ತೋರಿಸುತ್ತದೆ. ಎಷ್ಟೇ ಕಟ್ಟುನಿಟ್ಟಾದ ಕಾನೂನು ಕಟ್ಟಲೆಗಳು ಇದ್ದರೂ ಇಂತಹ ಜೀವ ಹರಣಗಳು ನಡೆಯುತ್ತಲೇ ಇವೆ. ಈ ನೆಲದ ಮೇಲೆ ದುಃಖದ ಭಾರ ಹೆಚ್ಚಾಗುತ್ತಲೇಯಿದೆ. ಇದೆಲ್ಲವೂ ಒಪ್ಪಿತ ಘಟನೆಗಳಾಗಿ ಕಾಣುತ್ತಿರುವುದು ಮನುಷ್ಯ ಸಮಾಜದ ದುರಂತವೇ ಸರಿ. ಆದರೂ ಇಂತಹುದಕ್ಕೆಲ್ಲಾ ನ್ಯಾಯ ಸಿಗಬೇಕೆನ್ನುವ ನಮ್ಮ ಒತ್ತಾಯಗಳು ಕ್ಲೀಷೆಯಾಗಿಬಿಟ್ಟವೇನೋ ಎಂದು ಬೇಸರವಾಗುತ್ತದೆ.
ಈಗ ಒಳಮೀಸಲಾತಿ ಜಾತಿಗಣತಿ ನಾಡಿನೆಲ್ಲೆಡೆ ನಡೆಯುತ್ತಿದೆ. ನಾವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಸಾಮಾನ್ಯವಾಗಿ ಉಳಿದವರನ್ನು ಪ್ರಬಲರು, ಬಲಾಢ್ಯರು ಎನ್ನುತ್ತೇವೆ. ಆದರೆ ನಾವೇ ನಮ್ಮ ನೂರಾ ಒಂದು ಜಾತಿಗಳಲ್ಲಿ ಕೇವಲ ನಾಲ್ಕೈದು ಜಾತಿಗಳು ಉಂಡು ತಿಂದು ಮೆರೆಯುತ್ತಿರುವ ಹೊತ್ತಿನಲ್ಲಿ ಉಳಿದ ತೊಂಭತ್ತನಾಲ್ಕು ಸಮುದಾಯ ಯಾವುವು, ಎಷ್ಟು ಇವೆ, ಆ ಜಾತಿಗಳ ಅಂಕಿ ಅಂಶಗಳೇನು? ಅವುಗಳಿಗೂ ಒಂದೊಂದು ಕಾಳು ಕಡ್ಡಿ ಬೆಲ್ಲ ಸಕ್ಕರೆ ಕಣಗಳು ಬೇಕಲ್ಲವೇ ? ಅವುಗಳ ಹೆಸರೂ ಕೂಡ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳುವುದಾದರೆ, ಅವರ ಮುಖದಲ್ಲೂ ಮುಗುಳುನಗೆ ಕಾಣುವುದಾದರೆ ಸರಕಾರ ಮಾಡುತ್ತಿರುವ ಮಹತ್ವದ ಕೆಲಸ ಮತ್ತು ದಲಿತ ಸಂಘಟನೆಗಳ ಕಾಳಜಿ ಕಟ್ಟಕಡೆಯ ಮನುಷ್ಯನಿಗೂ ಒಂದಷ್ಟು ಪಾಲು ಸಿಗುವುದಾದರೆ, ನಿಜಕ್ಕೂ ಭೀಮ ಸಾಹೇಬರ ಕನಸು ನನಸಾಗಬಹುದು ಎನ್ನುವುದು ನನ್ನಂತಹವರೆಲ್ಲರ ಆಶಯ.
ನಾವು ಸಾಮಾನ್ಯವಾಗಿ ಮಾತನಾಡುವಾಗ ರನ್ನಿಂಗ್ ರೇಸ್ ಓಟದಲ್ಲಿ ದೃಢಕಾಯವುಳ್ಳವರನ್ನು ಸದಾ ನೋಡುತ್ತಿರುತ್ತೇವೆ. ದೃಢಕಾಯರಾದವರೊಂದಿಗೆ ಅಂಗಾಂಗ ವೈಕಲ್ಯ ಹೊಂದಿದವರನ್ನು ಓಟಕ್ಕೆ ಬಿಟ್ಟಾಗ ಯಾರು ಧೃಢಕಾಯರೋ ಅವರು ಗೆಲ್ಲುತ್ತಾರೆ ಎನ್ನುವುದು ಸತ್ಯ. ಹಾಗೆಯೇ ನಮ್ಮದೇ ಸಮುದಾಯದೊಳಗೆ ಕುರುಡರು, ಕುಂಟರು ಇದ್ದಾರೆ. ಅವರಲ್ಲಿಯೂ ಶಿಕ್ಷಣ ಪಡೆದವರಿದ್ದಾರೆ. ಅವರಿಗೂ ಆಸೆ ಆಕಾಂಕ್ಷೆಗಳಿವೆ. ಅವರು ಸ್ವಾತಂತ್ರ್ಯ ಮತ್ತು ಸ್ವಾಭಿಮಾನದಿಂದ ಬದುಕಲು ಅವಕಾಶಮಾಡಿಕೊಡಬೇಕು. ಹೀಗೆ ನಮ್ಮದೇ ಸಮುದಾಯದ ಗಂಗ ಮತಸ್ಥರು, ಭೋವಿ ಎಂದು ಹೇಳಿಕೊಳ್ಳುವ ಈ ಸಮುದಾಯದಲ್ಲಿ ಒಬ್ಬ ಪ್ರತಿಭಾವಂತ ವಿಕಲಚೇತನ ಸಹೋದರನಿದ್ದಾನೆ. ಆತನ ಹೆಸರು ‘ಅರುಣ್ ಕುಮಾರ್’. ವಯಸ್ಸು 31, ವಿದ್ಯಾರ್ಹತೆ ಪಿ.ಯು.ಸಿ. ಉತ್ತಮದರ್ಜೆಯಲ್ಲಿ ಪಾಸುಮಾಡಿದ್ದಾನೆ. ಏಳನೇ ತರಗತಿಯಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾನೆ. ಬ್ರೈಲ್ ಲಿಪಿಯಲ್ಲಿ ಶಿಕ್ಷಣ ಮುಂದುವರಿಸಿ ಈಗ ಸದ್ಯ ಮನೆಯಲ್ಲಿಯೇ ಇದ್ದಾನೆ. ಆದರೆ ಈತನ ಜೀವನೋತ್ಸಾಹ, ಬದುಕಿನ ಪ್ರೀತಿ ಅನನ್ಯವಾದದ್ದು. ಈತನ ಅಂಗವೈಕಲ್ಯ ಜೀವನೋತ್ಸಾಹವನ್ನು ಯಾವತ್ತೂ ಕುಂದಿಸಿಲ್ಲ. ಈತನಿಗೆ ಕತೆ, ಕವನ, ಸಾಹಿತ್ಯ, ರೇಡಿಯೊ ಕೇಳುವುದೆಂದರೆ ಪಂಚಪ್ರಾಣ. ಜಗತ್ತಿನ ಎಲ್ಲಾ ವಿಷಯಗಳನ್ನು ರೇಡಿಯೊ ಮೂಲಕ ತಿಳಿದುಕೊಳ್ಳುತ್ತಾನೆ. ಈತನೊಂದಿಗೆ ಫೋನ್‌ನಲ್ಲಿ ಮಾತನಾಡುವಾಗಲೆಲ್ಲಾ ಭೀಮ ಸಾಹೇಬರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾನೆ. ಒಂಭತ್ತನೇ ತರಗತಿಯಲ್ಲಿದ್ದಾಗ ರಾಜ್ಯಮಟ್ಟದ ಅಂಬೇಡ್ಕರ್ ಕುರಿತಾದ ಚರ್ಚಾಸ್ಪರ್ಧೆ ಮೈಸೂರಲ್ಲಿ ನಡೆದಾಗ, ಪ್ರಥಮ ಬಹುಮಾನ ಪಡೆದ ಖುಷಿ ಈಗಲೂ ಅವನ ಎದೆಯೊಳಗಿದೆ. ಆ ಬಹುಮಾನದಲ್ಲಿ ದೊರೆತ ನೆನಪಿನ ಕಾಣಿಕೆಯ ಫಲಕವನ್ನು ಆಗಾಗ ಮುಟ್ಟಿ ನೋಡಿ ಸಂತೋಷ ಪಡುವುದನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿರುತ್ತಾನೆ.
ನನಗೆ ಈತನ ಪರಿಚಯವಾಗಿದ್ದು ನಾನು ಆಕಾಶವಾಣಿಯಲ್ಲಿ ಕೆಲಸಮಾಡುತ್ತಿದ್ದಾಗ 2019 ರಲ್ಲಿ. ಕನ್ನಡದ ಶ್ರೇಷ್ಠ 52 ಕತೆಗಳನ್ನು ಆಯ್ದುಕೊಂಡು 52 ವಾರ ಒಂದು ವರ್ಷ ಪೂರ್ತಿ ‘ಕಥಾ ಕಣಜ’ ಎಂಬ ಕನ್ನಡದ ಕ್ಲಾಸಿಕ್ ಕಥೆಗಳ ಸರಣಿ ಕಾರ್ಯಕ್ರಮವನ್ನು ನಿರ್ಮಾಣ ಮಾಡಿದ್ದೆವು. ಒಂದು ತಿಂಗಳಿಗೆ ನಾಲ್ಕು ಕತೆಗಳಂತೆ ಪ್ರಸಾರ ಮಾಡುತ್ತಿದ್ದೆವು. ತಿಂಗಳ ಕೊನೆಯಲ್ಲಿ ನೇರ ಫೋನ್-ಇನ್ ಕಾರ್ಯಕ್ರಮ ಏರ್ಪಡಿಸಿ, ಆ ತಿಂಗಳಲ್ಲಿ ಬಂದ ಕತೆಗಳ ಹೆಸರೇನು, ಬರೆದ ಕತೆಗಾರರ ಹೆಸರೇನು, ಹೀಗೆ ಇನ್ನಿತರ ಪ್ರಶ್ನೆಗಳನ್ನು ಕೇಳುತ್ತಿದ್ದೆವು. ನಾಡಿನೆಲ್ಲೆಡೆಯಿಂದ ಕೇಳುಗರು ಭಾಗವಹಿಸುತ್ತಿದ್ದರು. ನಾವು ಕೇಳುವ ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುಸ್ತಕಗಳನ್ನು ಬಹುಮಾನದ ರೂಪವಾಗಿ ಅವರ ಮನೆಗಳಿಗೆ ತಲುಪಿಸುತ್ತಿದ್ದೆವು. ಈ ಕಾರ್ಯಕ್ರಮವನ್ನು ಹಿರಿಯ ಅಧಿಕಾರಿಗಳ ಸಹಾಯದಿಂದ, ನನ್ನ ಸಹೋದ್ಯೋಗಿ ಶಿವಪ್ರಕಾಶ್ ಅವರೊಂದಿಗೆ ಕೂಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರೂಪಿಸಿದ್ದೆವು. ಈ ಕಾರ್ಯಕ್ರಮಕ್ಕೆ ನಾಡಿನೆಲ್ಲೆಡೆ ಕೇಳುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಅರುಣ್ ಕಥಾಕಣಜ ಕಾರ್ಯಕ್ರಮದಲ್ಲಿ ಸಕ್ರಿಯವಾದ ಕೇಳುಗರಾಗಿ ಆಲಿಸುತ್ತಿದ್ದ. ಆತನ ಗ್ರಹಣ ಶಕ್ತಿ ಎಷ್ಟಿತ್ತೆಂದರೆ 52 ಕತೆಗಳ ಲೇಖಕರ ಹೆಸರು, ಕತೆಯ ಶೀರ್ಷಿಕೆ, ಕತೆಯನ್ನು ಓದಿದವರು, ಹೀಗೆ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಂಡಿರುತ್ತಿದ್ದ. ಪ್ರತೀ ಕತೆ ಪ್ರಸಾರವಾದಾಗಲೂ ನನ್ನೊಂದಿಗೆ ಮಾತನಾಡುತ್ತಿದ್ದ. ಕೆಲವೊಮ್ಮೆ ಕೆಲವು ಪಾತ್ರಗಳೇ ತಾನಾಗಿ ಬಿಡುತ್ತಿದ್ದ. ಲಂಕೇಶ್ ಅವರ ‘ರೊಟ್ಟಿ’ ಕತೆಯನ್ನು ಕೇಳಿ ಗದ್ಗದಿತನಾಗಿ ಮಾತನಾಡಿದ್ದ. ನಾವೂ ಕೂಡ ಹಾಗೆ ಬೆಳೆದವರು ಸರ್ ಎನ್ನುತ್ತಿದ್ದ . ‘ಕುಂ.ವೀರಭದ್ರಪ್ಪ ನವರ ದೇವರ ಹೆಣ’ ಕತೆಯ ದೃಶ್ಯಗಳನ್ನು ತನ್ನ ಮಾತುಗಳಲ್ಲಿ ಅನುಭವಿಸಿ ವಿವರಿಸುತ್ತಿದ್ದ. ಮನುಷ್ಯನಿಗಿರುವ ಹಸಿವಿನ ಕುರಿತು ತತ್ವಜ್ಞಾನಿಯಂತೆ ಮಾತನಾಡುತ್ತಿದ್ದ. ಅವನ ಮಾತುಗಳು ನನ್ನನ್ನು ಬೆರಗುಗೊಳಿಸುತ್ತಿದ್ದವು. ಈ ಹುಡುಗ ನನ್ನ ಮಾದರಿಯಲ್ಲೇ ಚಿಂತಿಸುತ್ತಿದ್ದಾನಲ್ಲಾ, ಅನ್ನಿಸುತ್ತಿತ್ತು. ಈ ವ್ಯವಸ್ಥೆ ಬಗ್ಗೆ ಅಪಾರವಾದ ಸಿಟ್ಟು ಮಾಡಿಕೊಳ್ಳುತ್ತಿದ್ದ ಆತನಲ್ಲಿ ಸ್ವಾಭಿಮಾನದ ಕಿಚ್ಚಿತ್ತು. ಅಂಗವೈಕಲ್ಯವನ್ನು ಮೀರಿ ಸ್ವಾಭಿಮಾನದಿಂದ ಬದುಕುವ ಹಂಬಲವಿತ್ತು. ಆ ಸ್ವಾಭಿಮಾನದ ಕಾವು ಇಂದಿಗೂ ಬತ್ತಿಲ್ಲ.
ನಾನು 2022 ಕ್ಕೆ ನಿವೃತ್ತಿ ಹೊಂದಿದ ಬಳಿಕವೂ ಅರುಣ್ ಕುಮಾರ್‌ನ ಜೊತೆಗಿನ ಸಂಪರ್ಕ ಮುಂದುವರಿಯಿತು. ಆತ ಒಂದು ದಿನ ‘‘ನಾನು ಪಿ.ಯು.ಸಿ. ವರೆಗೆ ಓದಿದ್ದೇನೆ ಸರ್, ಲಿಫ್ಟ್ ಆಪರೇಟರ್ ಟ್ರೈನಿಂಗ್ ಕೂಡಾ ಆಗಿದೆ. ಹಾಸನದಲ್ಲಿ ಎಲ್ಲಿಯಾದರೂ ನನಗೆ ಲಿಫ್ಟ್ ಆಪರೇಟರ್ ಕೆಲಸಕೊಡಿಸಿ ಸರ್’’ ಎಂದು ಕೇಳಿದ. ‘‘ನನ್ನನ್ನು ನನ್ನ ತಂದೆ ತಾಯಿಗಳು ಕೂಲಿ ನಾಲಿ ಮಾಡಿ ಮಗುವಿನಂತೆ ನೋಡಿಕೊಂಡಿದ್ದಾರೆ. ತೀರಿಸಲಾಗದ ಋಣ ನನ್ನಮೇಲಿದೆ. ನನ್ನ ಕೈಲಾದ ಕೆಲಸ ಮಾಡಿ ಅವರಿಗೆ ಒಂದಿಷ್ಟು ಸಹಾಯ ಮಾಡುವ ಕನಸು ನನ್ನದು. ಮನೆಯಲ್ಲಿ ಕೂತು ತಿನ್ನುವುದಕ್ಕೆ ನನಗೆ ಹಿಂಸೆಯಾಗುತ್ತಿದೆ ಸರ್. ನಾನು ಅಂಧನಿರಬಹುದು, ಕೈಕಾಲು ಕೃಷವಾಗಿರಬಹುದು, ಆದರೆ ದುಡಿದು ಸ್ವತಂತ್ರವಾಗಿ ಬದುಕಬೇಕೆಂಬ ಸ್ವಾಭಿಮಾನದವನು ಸರ್. ನನಗೆ ಬಾಬಾ ಸಾಹೇಬರು ಹೇಳಿದ ವ್ಯಕ್ತಿಗೌರವ ಮತ್ತು ಆತ್ಮದ ಘನತೆ ಅರ್ಥವಾಗಿದೆ ಸರ್. ಆತ್ಮವಿಶ್ವಾಸವಿದ್ದರೆ ಎಂತಹವನೂ ಬದುಕಬಹುದು ಎಂಬುದು ಸ್ಕೂಲಿನಲ್ಲಿ ನಮ್ಮ ಮೇಷ್ಟ್ರು ಹೇಳುತ್ತಿದ್ದಿದ್ದು ನೆನಪಾಗುತ್ತಿದೆ ಸರ್’’ ಎಂದು ಎಂತಹವರಿಗೂ ಪ್ರೇರಣೆಯಾಗುವ ಮಾತುಗಳನ್ನಾಡುತ್ತಿದ್ದ. ಈತನ ಸಲುವಾಗಿ ನಾನು ಹಾಸನದ ಭೀಮ ವಿಜಯ ಪತ್ರಿಕೆ ಸಂಪಾದಕ ನಾಗರಾಜ್ ಹೆತ್ತೂರ್ ಅವರಿಗೆ ಹಾಸನ ಜಿಲ್ಲೆಯ ದಸಂಸ ಮುಖಂಡರಾದ ಕೃಷ್ಣದಾಸ್ ಅವರಿಗೆ ಅನೇಕ ಬಾರಿ ಒತ್ತಾಯ ಮಾಡಿದ್ದೇನೆ. ಹೇಗಾದರೂ ಮಾಡಿ ಈತನಿಗೊಂದು ಪುಟ್ಟ ಕೆಲಸ ಕೊಡಿಸಿ ಎಂದು ನಾನು ವಿನಂತಿಸಿದ್ದೆ. ಇವರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ, ಹಾಗೇ ನಮ್ಮ ಹಾಸನ ಜಿಲ್ಲೆಯ ಅತ್ಯಂತ ಕ್ರಿಯಾಶೀಲ ಜಿಲ್ಲಾಧಿಕಾರಿಗಳು, ನಮ್ಮ ಜಿಲ್ಲೆಯ ಯಾರೇ ಹೋದರೂ ಸ್ಪಂದಿಸುವ ಅಪಾರ ಮಾನವೀಯ ಗುಣವುಳ್ಳ ಸತ್ಯಭಾಮ ಅವರಿಗೂ, ಅರುಣ್ ಕುಮಾರ್ ಕೆಲಸಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಹಕ್ಕಿಯಂತಿರುವ ಈ ಹುಡುಗನನ್ನು ಕಂಡ ಜಿಲ್ಲಾಧಿಕಾರಿಗಳು ಈ ಹುಡುಗನಿಗೆ ಏನು ಕೆಲಸ ಮಾಡಲು ಸಾಧ್ಯ ಎಂದು ಆಶ್ಚರ್ಯಪಟ್ಟಿದ್ದಾರೆ. ಆದರೆ ಖಂಡಿತವಾಗಿ ಒಂದು ಕೆಲಸ ಕೊಡಿಸುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಈಗ ಕೇಂದ್ರ ಸಚಿವರಾಗಿರುವ ಎಚ್.ಡಿ ಕುಮಾರಸ್ವಾಮಿಯವರ ಹತ್ತಿರ ಹೋದರೆ ಖಂಡಿತ ಕೆಲಸ ಕೊಡಿಸುತ್ತಾರೆ ಎಂದು ನಂಬಿ ಅಲ್ಲಿಗೂ ಹೋಗಿ ಬಂದಿದ್ದಾನೆ. ಎಲ್ಲಿಗೇ ಹೋಗಬೇಕಾದರೂ ಅವರ ತಂದೆ ನಂಜುಂಡ ಭೋವಿಯವರು ಪುಟ್ಟ ಮಗುವಿನಂತೆ ಅರುಣ್ ಕುಮಾರ್‌ನನ್ನು ಕಂಕುಳಲ್ಲಿ ಕೂರಿಸಿಕೊಂಡೇ ಹೋಗಬೇಕು. ಬಿಡದಿಗೆ ಹೋಗಿ ವಾಪಸ್ ಬರುವಾಗ ಅರುಣ್ ಕುಮಾರ್ ತಮ್ಮ ಬಳಿಯಿದ್ದ ಹನ್ನೆರಡು ಸಾವಿರ ರೂಪಾಯಿ ಬಸ್ಸಿನಲ್ಲಿ ಕಳೆದುಕೊಂಡಿದ್ದಾರೆ. ಕಂಡೆಕ್ಟರ್ ಟಿಕೆಟ್ ಕೇಳಿದಾಗ ಕಳೆದು ಹೋದದ್ದು ಅರಿವಿಗೆ ಬಂದಿದೆ. ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಆ ಹೊತ್ತಿನ ಪರಿಸ್ಥಿತಿ ಯಾರಿಗೂ ಬೇಡ ಎಂದು ಕಣ್ಣೀರು ಹಾಕಿದ್ದ. ಈ ಸಮಾಜದ ಕ್ರೌರ್ಯ ಅಂಧರ ಬಳಿ ಕದಿಯುವ ವಿಕಾರ ಮನಸ್ಸಿಗೆ ಏನನ್ನಬೇಕೋ ಗೊತ್ತಿಲ್ಲ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅವರಿಗೆ ಸಹಾಯ ಮಾಡಿದ್ದಾರೆ. ಈ ಘಟನೆಯಿಂದ ತತ್ತರಿಸಿ ಹೋಗಿದ್ದ ಅರುಣ್ ಕುಮಾರ್ ‘‘ನಮ್ಮಂತಹವರಿಂದನೂ ಕದಿಯುತ್ತಾರಲ್ಲ ಸರ್, ಇದರಿಂದ ಕದ್ದವರಿಗೆ ಸಹಾಯ ಆಗಿದ್ರೆ ಅದೇ ನನಗೆ ಸಂತೋಷ’’ ಎಂದಿದ್ದ. ಹಣ ಕಳವಾದ ಘಟನೆಯಿಂದ ಎರಡುದಿನ ಊಟ ಬಿಟ್ಟು ಕೊರಗಿದ್ದ. ಈತನಿಗೆ ಸಹಾಯ ಮಾಡಲಿಕ್ಕಾಗಿ ನನ್ನ ಅನೇಕ ಸ್ನೇಹಿತರು ಪ್ರಯತ್ನಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ನಾವು ಪ್ರೀತಿಯಿಂದ ಮಧುರಚೆನ್ನ ಎಂದು ಕರೆಯುವ ಕವಿ ಜೀವಯಾನ ಎಸ್. ಮಂಜುನಾಥ್ ಅನೇಕರಿಗೆ ಸಹಾಯ ಮಾಡಿರುವಂತೆ ಈ ಹುಡುಗನಿಗೂ ಖಂಡಿತ ಸಹಾಯ ಮಾಡಬೇಕೆಂದು ವಿಧಾನ ಸೌಧದ ಉನ್ನತ ಅಧಿಕಾರಿಗಳಿಂದ ಹಾಸನಕ್ಕೆ ಫೋನ್ ಮಾಡಿಸಿ ಒತ್ತಾಯ ಮಾಡಿದ್ದಾರೆ. ನಮ್ಮೊಟ್ಟಿಗೆ ಒಳ್ಳೆಯದನ್ನು ಮಾಡುವ ದೊಡ್ಡ ದಂಡೇಯಿದೆ. ಆದರೆ ಅರುಣ್ ಗೆ ಸಹಾಯ ಮಾಡಲಾಗುತ್ತಿಲ್ಲ. ಅರುಣ್ ಕುಮಾರ್ ಯಾವಾಗಲೂ ಜೀವಪ್ರೀತಿಯಿಟ್ಟುಕೊಂಡಿರುವ ಹುಡುಗ. ಅರುಣ್ ಅವರ ತಮ್ಮ ಕಿರಣ್ ಹಾಸನದ ಒಂದು ಹಳ್ಳಿಯಲ್ಲಿ ಕೆಲವು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು ಇದು ಕಾಂಟ್ರಾಂಕ್ಟ್ ಕೆಲಸ ಆಗಿದೆ. ಆರೋಗ್ಯ ಇಲಾಖೆಯಿಂದ ಕೆಲವರನ್ನು ತೆಗೆಯಲು ಸೂಚಿಸಿದ್ದಾರೆ. ತಂದೆಯ ಕೂಲಿಯ ಹೊರತಾಗಿ ಇವರಿಗೆ ಬೇರೆ ಯಾವ ಆದಾಯವೂ ಇರುವುದಿಲ್ಲ. ತಮ್ಮ ಕಿರಣ್ ಕುಮಾರ್ ನಿಂದ ಬರುತ್ತಿದ್ದ ಪುಟ್ಟ ಸಂಬಳಕ್ಕೂ ಈಗ ಕುಂದುಂಟಾಗಿದೆ. ಅರುಣ್ ಕುಮಾರನಿಗೆ ಅಪಘಾತವಾಗಿ ಕಾಲು ಮತ್ತು ಸೊಂಟದ ಭಾಗ ಮೂಳೆ ಮುರಿದಿದೆ, ಆಪರೇಷನ್ ಮಾಡಿದರೂ ಸಹ ಮೂಳೆ ಮುರಿದ ಜಾಗ ಇನ್ನೂ ಸರಿ ಹೋಗಿಲ್ಲ, ಆಸ್ಪತ್ರೆಯ ವೆಚ್ಚ ಆತನೇ ಭರಿಸಿದ್ದಾನೆ. ಸರಕಾರದ ಯಾವುದೇ ಸಹಾಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮನ ಕೆಲಸ ಹೋದರೆ ನಮ್ಮ ಗತಿ ಏನೆಂದು ತುಂಬಾ ನಿರಾಶನಾದ ಅರುಣ್, ಜೀವ ಕಳೆದು ಕೊಳ್ಳುವ ಹಂತಕ್ಕೆ ತಲುಪಿಬಿಟ್ಟಿದ್ದ. ಆ ಸಂದರ್ಭದಲ್ಲಿ ನಾಗರಾಜ್ ಹೆತ್ತೂರ್ ಮತ್ತು ಕೃಷ್ಣದಾಸ್ ಇಬ್ಬರೂ ಜಿಲ್ಲಾಧಿಕಾರಿಗಳಿಗೆ ಕಿರಣ್ ಕುಮಾರ್‌ನ ಕೆಲಸದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಕೆಲಸದಲ್ಲಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಜಿಲಾಧಿಕಾರಿಗಳ ಮಾನವೀಯ ದೃಷ್ಟಿ ಅರುಣ್ ಕುಟುಂಬಕ್ಕೆ ದೊಡ್ಡ ಸಹಾಯ ಮಾಡಿದೆ. ಇದರ ನಡುವೆ ಅರುಣ್ ಕುಮಾರ್ ಬ್ರೈಲ್‌ಲಿಪಿ ಕಂಪ್ಯೂಟರ್ ತರಬೇತಿ ಪಡೆದು ಎನ್.ಐ.ಟಿ. ಸಂಸ್ಥೆ ಮೂಲಕ ಶೇ. 85 ಅಂಕ ಗಳಿಸಿ ತೇರ್ಗಡೆಯಾಗಿದ್ದಾನೆ. ಅಂತಿಮವಾಗಿ ಅರುಣ್ ಕುಮಾರ್‌ಗೆ ಸ್ವತಂತ್ರವಾಗಿ ಬದುಕಲು ಒಂದು ಪುಟ್ಟ ಕೆಲಸ ಬೇಕಾಗಿದೆ. ಅವನಿಗೆ ಎರಡು ಕೆಲಸ ಬರುತ್ತದೆ 1. ಲಿಫ್ಟ್ ಆಪರೇಟರ್ 2. ಬ್ರೈಲ್ ಕಂಪ್ಯೂಟರ್ ಟೈಪಿಂಗ್. ಈ ಲೇಖನವನ್ನು ಗಮನಿಸಿದವರು ಯಾರಾದರೂ ಸಹಾಯ ಮಾಡಬಹುದು. ಈ ಸಹಾಯ ಅರುಣ್ ಸ್ವಾಭಿಮಾನವನ್ನು ಹೆಚ್ಚಿಸುವ ಕೆಲಸವಾಗಬೇಕೇ ಹೊರತು ಕರುಣೆಯ, ಅನುಕಂಪದ್ದಾಗಿರಬಾರದು. ಏಕೆಂದರೆ ಇಂತಹ ದಿವ್ಯಾಂಗರ ಸ್ವಾಭಿಮಾನವನ್ನು, ಆತ್ಮವಿಶ್ವಾಸವನ್ನು ಹೆಚ್ಚಿಸುವ ಜವಾಬ್ದಾರಿ ಆರೋಗ್ಯವಂತ ಸಮಾಜದ ಕನಸುಕಾಣುವ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದು ನನ್ನ ಅನಿಸಿಕೆ.