ನೇಪಾಳ ಪ್ರತಿಭಟನೆ ಕುರಿತ ವಿಡಿಯೋ: ಅರ್ಪಿತ್ ಶರ್ಮಾ ವಿರುದ್ಧ ದೇಶದ್ರೋಹ ಪ್ರಕರಣ!

PC : scroll.in
ಲಖನೌ, ಸೆ. 16: ಉತ್ತರ ಪ್ರದೇಶ ಪೊಲೀಸರು ಕಂಟೆಂಟ್ ಕ್ರಿಯೇಟರ್ ಅರ್ಪಿತ್ ಶರ್ಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 152 ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ನಡೆದ ಪ್ರತಿಭಟನೆಗಳ ಕುರಿತು ವಿಡಿಯೋ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬಿಎನ್ಎಸ್ನ ಸೆಕ್ಷನ್ 152 ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯ ಉಂಟುಮಾಡುವಂತಹ ಕೃತ್ಯಗಳಿಗೆ ಸಂಬಂಧಿಸಿದ್ದು, ಇದನ್ನು ವಿಮರ್ಶಕರು ವಸಾಹತುಶಾಹಿ ಕಾಲದ ದೇಶದ್ರೋಹ ಕಾನೂನಿನ ನವೀಕರಿತ ರೂಪ ಎಂದು ಪರಿಗಣಿಸಿದ್ದಾರೆ.
ಪೊಲೀಸರ ಪ್ರಕಾರ, ಗುರುವಾರ ದಾಖಲಾಗಿದ ಎಫ್ಐಆರ್ನಲ್ಲಿ ಶರ್ಮಾ ನೇಪಾಳದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಉದಾಹರಿಸಿ, ಭಾರತದಲ್ಲಿ ಹಿಂಸಾಚಾರ ಪ್ರಚೋದಿಸುವ ಉದ್ದೇಶದಿಂದ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ವಿಡಿಯೋ ಮೂಲಕ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಹಾಳುಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವಾರ ನೇಪಾಳ ಸರ್ಕಾರ 26 ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಹೇರಿದ್ದ ನಿಷೇಧದ ವಿರುದ್ಧ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಆರಂಭವಾದ ಪ್ರತಿಭಟನೆ ಶೀಘ್ರದಲ್ಲೇ ಭ್ರಷ್ಟಾಚಾರ ವಿರೋಧಿ ಬೃಹತ್ ಚಳವಳಿಯಾಗಿ ತಿರುಗಿ ಹಿಂಸಾತ್ಮಕ ಸ್ವರೂಪ ಪಡೆದಿತು. 1990ರಿಂದ 2010ರ ನಡುವೆ ಜನಿಸಿದ ‘ಜೆನ್ ಝೀ’ ಯುವಕರೇ ಈ ಚಳವಳಿಯನ್ನು ಮುನ್ನಡೆಸಿದ್ದರು.
ಪ್ರತಿಭಟನೆಯ ತೀವ್ರತೆಯಿಂದ ನೇಪಾಳ ಸರ್ಕಾರ ಪತನಗೊಂಡು, ಪ್ರಸ್ತುತ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಪ್ರತಿಭಟನೆಗಳು ಪ್ರಾರಂಭವಾದ ಒಂದು ದಿನದ ನಂತರ ಶರ್ಮಾ ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ನೇಪಾಳದ ಯುವಕರ ಧೈರ್ಯವನ್ನು ಶ್ಲಾಘಿಸಿ, “ಭ್ರಷ್ಟಾಚಾರ ಮತ್ತು ದ್ವೇಷ ಭಾಷಣದಂತಹ ವಿಷಯಗಳ ವಿರುದ್ಧ ಭಾರತೀಯರು ಏಕೆ ಸಮಾನ ಹೋರಾಟ ನಡೆಸುತ್ತಿಲ್ಲ?” ಎಂದು ಪ್ರಶ್ನಿಸಿದ್ದರು.
The wire ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಶರ್ಮಾ ಆರೋಪಗಳನ್ನು ತಳ್ಳಿಹಾಕಿ, “ನಾನು ವಿಡಿಯೋ ಮಾಡುವಾಗ ನೇಪಾಳ ಸಂಪೂರ್ಣ ಶಾಂತವಾಗಿತ್ತು. ನಾನು ಯಾರನ್ನೂ ಪ್ರಚೋದಿಸುವ ಉದ್ದೇಶ ಹೊಂದಿರಲಿಲ್ಲ” ಎಂದು ತಿಳಿಸಿದ್ದಾರೆ.