ದಿಲ್ಲಿ ಕೋರ್ಟ್ ಆದೇಶದ ಬೆನ್ನಲ್ಲೇ ಅದಾನಿ ವಿರುದ್ಧದ ಪೋಸ್ಟ್ ತೆಗೆದುಹಾಕುವಂತೆ ರವೀಶ್ ಕುಮಾರ್ ಸಹಿತ ಹಲವು ಪತ್ರಕರ್ತರಿಗೆ ನೋಟಿಸ್

ರವೀಶ್ ಕುಮಾರ್ / ಗೌತಮ್ ಅದಾನಿ (Photo: PTI)
ಹೊಸದಿಲ್ಲಿ: ಖ್ಯಾತ ಪತ್ರಕರ್ತ ರವೀಶ್ ಕುಮಾರ್, ಧ್ರುವ ರಾಠೀ, ನ್ಯೂಸ್ ಲಾಂಡ್ರಿ, ದಿ ವೈರ್, ಎಚ್ಡಬ್ಲ್ಯು ನ್ಯೂಸ್ ಮತ್ತು ಆಕಾಶ್ ಬ್ಯಾನರ್ಜಿಯವರ ʼದೇಶಭಕ್ತ್ʼ ಸೇರಿದಂತೆ ಹಲವು ಮಂದಿ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ನೀಡಿ ಜಾಲತಾಣ ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಸಲ್ಲಿಸಿರುವ ಮಾನಹಾನಿ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ಅದೇಶವನ್ನು ಉಲ್ಲೇಖಿಸಿ ಈ ಸೂಚನೆ ನೀಡಲಾಗಿದೆ ಎಂದು thenewsminute.com ವರದಿ ಮಾಡಿದೆ.
ಒಟ್ಟು 138 ಯೂಟ್ಯೂಬ್ ಲಿಂಕ್ ಗಳು ಮತ್ತು 83 ಇನ್ಸ್ಟ್ರಾಗ್ರಾಂ ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ. ನ್ಯೂಸ್ ಲಾಂಡ್ರಿಯ ಯೂಟ್ಯೂಬ್ ಚಾನಲ್ ನಿಂದ 42 ವಿಡಿಯೊಗಳನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಲಾಗಿದೆ. ಸೆಪ್ಟೆಂಬರ್ 6ರಂದು ನ್ಯಾಯಾಲಯ ನೀಡಿದ ಆದೇಶದ ಅನ್ವಯ ಈ ಪೋಸ್ಟ್ ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ. ನ್ಯಾಯಾಲಯ ಆದೇಶದ ಹೊರತಾಗಿಯೂ ಮಾಧ್ಯಮಸಂಸ್ಥೆಗಳು ಇವುಗಳನ್ನು ತೆಗೆದುಹಾಕಿಲ್ಲ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.
ಪಟ್ಟಿ ಮಾಡಲಾದ ಈ ತುಣುಕುಗಳು ಕೇವಲ ತನಿಖಾ ವರದಿಗಳಿಗೆ ಸೀಮಿತವಾಗಿರದೇ, ವಿಡಂಬನೆ ಮತ್ತು ಸಾಂದರ್ಭೀಕ ಉಲ್ಲೇಖಗಳೂ ಸೇರಿವೆ.
ಉದಾಹರಣೆಗೆ ಅದಾನಿ ಕುರಿತ ವರದಿಯ ಸ್ಕ್ರೀನ್ ಶಾಟ್ ಹೊಂದಿರುವ ಎನ್ಎಲ್ ಸಬ್ಸ್ಕ್ರಿಪ್ಷನ್ ಮನವಿಯ ವಿಡಿಯೊವನ್ನೂ ತೆಗೆದುಹಾಕಲು ಸೂಚಿಸಲಾಗಿದೆ. ಸೆನ್ಸಾರ್ಶಿಪ್ ಬಗ್ಗೆ ವಿಂಡಬನಾತ್ಮಕ ಹೇಳಿಕೆಯನ್ನು ನೀಡಿದ ಕುನಾಲ್ ಕಾಮ್ರಾ ಸಂದರ್ಶನ ವರದಿಯನ್ನೂ ಪಟ್ಟಿ ಮಾಡಲಾಗಿದೆ.