ಯುಎಇಯಲ್ಲಿ ಭಾರತೀಯ ವಲಸಿಗರ ಸಂಖ್ಯೆ ದ್ವಿಗುಣ : ಒಟ್ಟು ವಲಸಿಗರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ದುಬೈಯಲ್ಲಿ ವಾಸ

Photo | Gulf News
ದುಬೈ: ಯುಎಇಯಲ್ಲಿ ಭಾರತೀಯ ವಲಸಿಗರ ಸಂಖ್ಯೆ 43,60,000 ದಾಟಿದೆ. ಇದು ಕೇವಲ ಒಂದು ದಶಕದಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎಂದು ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯೋರ್ವರು ದುಬೈನಲ್ಲಿ ಹೇಳಿದರು.
ದುಬೈನಲ್ಲಿ ಇಂಡಿಯಾ ಟುಡೇ ಗ್ರೂಪ್ ನಡೆಸಿದ ಇಂಡೋ-ಯುಎಇ ಕಾನ್ಕ್ಲೇವ್ನಲ್ಲಿ ಮಾತನಾಡಿದ ಭಾರತದ ಕಾನ್ಸುಲ್ ಜನರಲ್ ಸತೀಶ್ ಶಿವನ್, ದೇಶದಲ್ಲಿ ಭಾರತೀಯ ವಲಸಿಗರ ಸಂಖ್ಯೆಯಲ್ಲಿನ ತ್ವರಿತ ಹೆಚ್ಚಳದ ಬಗ್ಗೆ ಉಲ್ಲೇಖಿಸಿದರು.
ಡಿಸೆಂಬರ್ 2023ರ ವೇಳೆ ಯುಎಇಯಲ್ಲಿ ಭಾರತೀಯ ವಲಸಿಗರ ಸಂಖ್ಯೆ 38,90,000 ಆಗಿತ್ತು. ಆರು ತಿಂಗಳೊಳಗೆ ಡಿಸೆಂಬರ್ 2024ರಲ್ಲಿ ಈ ಸಂಖ್ಯೆ 43,60,000 ಆಗಿದೆ ಎಂದು ಸತೀಶ್ ಶಿವನ್ ಹೇಳಿದರು.
ಒಂದು ದಶಕದ ಹಿಂದೆ ಭಾರತೀಯ ವಲಸೆಗಾರರ ಸಂಖ್ಯೆ 22,00,000 ಆಗಿತ್ತು. ಕೇವಲ ಒಂದು ದಶಕದಲ್ಲಿ ನಾವು ದ್ವಿಗುಣಗೊಂಡಿದ್ದೇವೆ. ಇಂದು ನಮ್ಮಲ್ಲಿ 43,60,000 ಜನರಿದ್ದಾರೆ. ಕೆಲವು ದತ್ತಾಂಶಗಳು 2,000 ದಶಕದ ಆರಂಭದಲ್ಲಿ ಯುಎಇ ಜನಸಂಖ್ಯೆಯನ್ನು 45,00,000 ಎಂದು ಹೇಳುತ್ತವೆ. ಅಂದರೆ ಅಂಕಿ ಅಂಶ 20 ವರ್ಷಗಳ ಹಿಂದೆ ಇದ್ದ ಯುಎಇಯ ಒಟ್ಟು ಜನಸಂಖ್ಯೆಗೆ ಸಮಾನವಾಗಿದೆ.
ಅನಿವಾಸಿ ಭಾರತೀಯರಲ್ಲಿ ಹೆಚ್ಚಿನವರು ದುಬೈಯಲ್ಲಿ ನೆಲೆಸಿದ್ದಾರೆ. ಯುಎಇಯಲ್ಲಿ ನಮ್ಮ ಹೂಡಿಕೆಗಳನ್ನು ನೀವು ನೋಡಿದರೆ ಬಹುಪಾಲು ದುಬೈನಲ್ಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಯುಎಇಯ ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಹೇಳಿದ್ದಾರೆ.