ಟ್ರಂಪ್ ಸುಂಕ ಎಫೆಕ್ಟ್ : ಆಂಧ್ರಪ್ರದೇಶಕ್ಕೆ ಸಿಗಡಿ ರಫ್ತಿನಲ್ಲಿ 25,000 ಕೋಟಿ ರೂ. ನಷ್ಟ !

ಸಾಂದರ್ಭಿಕ ಚಿತ್ರ (Image by bearfotos on Freepik)
ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿರುವುದರಿಂದ ಆಂಧ್ರಪ್ರದೇಶಕ್ಕೆ ಸಿಗಡಿ ರಫ್ತಿನಲ್ಲಿ ಸುಮಾರು 25,000 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸರಕಾರಿ ಅಧಿಕಾರಿಗಳ ಪ್ರಕಾರ 50% ಆರ್ಡರ್ಗಳು ರದ್ದುಗೊಂಡಿವೆ ಎಂದು indianexpress.com ವರದಿ ಮಾಡಿದೆ.
2,000 ಕಂಟೇನರ್ಗಳ ಮೇಲೆ ಸುಮಾರು 600 ಕೋಟಿ ರೂ. ಸುಂಕದ ಹೊರೆ ಬೀಳುತ್ತಿರುವುದರಿಂದ ರಫ್ತು ಬಿಕ್ಕಟ್ಟು ನಿವಾರಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
ಟ್ರಂಪ್ ಈ ಹಿಂದಿನ 25 ಪ್ರತಿಶತ ಸುಂಕ, ಹೆಚ್ಚುವರಿಯಾಗಿ ಘೋಷಿಸಿದ 25 ಪ್ರತಿಶತ ಸುಂಕ ಹಾಗೂ 5.76 ಪ್ರತಿಶತ ಕೌಂಟರ್ ವೈಲಿಂಗ್ ಸುಂಕ ಮತ್ತು 3.96 ಪ್ರತಿಶತ ಡಂಪಿಂಗ್ ವಿರೋಧಿ ಸುಂಕ (anti-dumping duty) ಘೋಷಿಸಿದ ನಂತರ ಅಮೆರಿಕದ ಸುಂಕಗಳು 59.72 ಪ್ರತಿಶತವನ್ನು ತಲುಪಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಅವರಿಗೆ ಬರೆದ ಪ್ರತ್ಯೇಕ ಪತ್ರಗಳಲ್ಲಿ ಚಂದ್ರಬಾಬು ನಾಯ್ಡು ಅವರು ಸರಕು ಮತ್ತು ಸೇವಾ ತೆರಿಗೆಯಲ್ಲಿ ಪರಿಹಾರವನ್ನು ಸೂಚಿಸಿದ್ದಾರೆ. ಇದಲ್ಲದೆ ಆಂಧ್ರಪ್ರದೇಶದ ರೈತರಿಗೆ ಕೇಂದ್ರದಿಂದ ಹಣಕಾಸು ಪ್ಯಾಕೇಜ್ಗಳನ್ನು ಬಿಡುಗಡೆ ಮಾಡಬೇಕು ಮತ್ತು ಅಮೆರಿಕವನ್ನು ಹೊರತುಪಡಿಸಿ ಹೊಸ ಮಾರುಕಟ್ಟೆಯನ್ನು ಕಂಡುಕೊಳ್ಳುವಂತೆ ಆಗ್ರಹಿಸಿದ್ದಾರೆ.
ದೇಶದಲ್ಲಿ ಸಿಗಡಿ ರಫ್ತಿನಲ್ಲಿ ಆಂಧ್ರಪ್ರದೇಶ ಶೇ. 80ರಷ್ಟು ಮತ್ತು ಸಮುದ್ರದ ಉತ್ಪನ್ನದ ರಫ್ತಿನಲ್ಲಿ ಶೇ. 34 ರಷ್ಟು ಪಾಲನ್ನು ಹೊಂದಿದೆ. ಇದರ ಮೌಲ್ಯ ವಾರ್ಷಿಕವಾಗಿ ರೂ. 21,246 ಕೋಟಿಗಳಷ್ಟಿದೆ. ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಸಿಗಡಿ ರಫ್ತು ಮತ್ತು ಸಂಬಂಧಿತ ಉದ್ಯೋಗಗಳನ್ನು ಅವಲಂಬಿಸಿದ್ದಾರೆ ಎಂದು ಅಂದಾಜಿಸಲಾಗಿದೆ.