ಹುಣಸೂರು | ಜಮೀನಿನಲ್ಲಿ ಅಡಗಿ ಕುಳಿತಿದ್ದ ಹುಲಿ ಸೆರೆ: ನಿಟ್ಟುಸಿರು ಬಿಟ್ಟ ಗೌಡನಕಟ್ಟೆ ಗ್ರಾಮಸ್ಥರು

ಮೈಸೂರು/ಹುಣಸೂರು: ಹುಣಸೂರು ತಾಲೂಕು ಗೌಡನಕಟ್ಟೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಜಮೀನೊಂದರಲ್ಲಿ ಅಡಗಿ ಕುಳಿತಿದ್ದ ಹುಲಿಯನ್ನು ಗುರುವಾರ ತಡರಾತ್ರಿ ಸರೆ ಹಿಡಿಯಲಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಗೌಡನಕಟ್ಟೆ ಸರ್ವೆ ನಂ.25 ರಲ್ಲಿ ಗುರುವಾರ ರಾತ್ರಿ ಹುಲಿ ದಾಳಿಯಿಂದ ಇಬ್ಬರು ರೈತರು ಬಚಾವ್ ಆಗಿದ್ದರು. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿಯಿಡಿ ಹುಲಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಹೆಣ್ಣು ಹುಲಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹುಲಿ ಮರಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.
ಉಪ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮುಹಮ್ಮದ್ ಫಯಾಝ್ ಉದ್ದೀನ್ ಮಾತನಾಡಿ, ನಾಲ್ಕು ಆನೆಗಳೊಂದಿಗೆ ಅರಣ್ಯ ಇಲಾಖೆ ಟಾಸ್ಕ್ ಫೋಸ್೯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಅಡಗಿ ಕುಳಿತಿದ್ದ ಹುಲಿ ಸೆರೆ ಹಿಡಿಯುವಲ್ಲಿ ನಮ್ಮ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಅರವಳಿಕೆ ನೀಡಿ ಹುಲಿ ಸೆರೆ ಹಿಡಿಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಮರಿ ಹುಲಿಗಳು ಇರುವ ಸಾಧ್ಯತೆ ಇದ್ದು, ಮರಿ ಹುಲಿಗಳಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದರು.







